ಆಲಿಸುವಿಕೆಯ ಮೊದಲ ಮತ್ತು ಅತ್ಯಂತ ಮೂಲಭೂತ ಅಂಶವೆಂದರೆ ಮಾತಾಡುವವರಿಗೆ ನಿಮ್ಮ ಸಂಪೂರ್ಣ ಗಮನ ನೀಡುವುದು. ಇದಕ್ಕಾಗಿ ಆಚೆ-ಈಚೆ ಅಥವಾ ಮೊಬೈಲ್ ಫೋನನ್ನು ನೋಡದೇ, ಮಾತಾಡುವವರೊಂದಿಗೆ ಕಣ್ಣಿನ ಸಂಪರ್ಕವನ್ನು ಕಾಪಾಡಿಕೊಳ್ಳುವುದು ಸಹ ಅಗತ್ಯವಾಗಿರುತ್ತದೆ. ಇದು ಅವರ ಜೊತೆ ನಿಮ್ಮ ವಿಶ್ವಾಸವನ್ನು ಪ್ರದರ್ಶಿಸುತ್ತದೆ. ಮಾತಾಡುವವರು ಮತ್ತು ಅವರು ಮಾತಾಡುತ್ತಿರುವ ವಿಷಯದ ಕುರಿತು ನಿಮ್ಮ ಆಸಕ್ತಿಯನ್ನು ತೋರಿಸುತ್ತದೆ.
ಸಂವಹನ ಕೌಶಲದ ಕುರಿತು ನಾನು ನಡೆಸಿದ ಒಂದು ಕಾರ್ಯಶಿಬಿರದಲ್ಲಿ ಒಂದು ಚಟುವಟಿಕೆಯನ್ನು ಮಾಡಲಾಯಿತು. ಇಬ್ಬರು (ಎ ಮತ್ತು ಬಿ) ಮುಖಾಮುಖಿ ಕುಳಿತು ಇಬ್ಬರೂ ಒಪ್ಪಿಕೊಂಡಿರುವ ಒಂದು ವಿಷಯದ ಕುರಿತು ಸಂಭಾಷಣೆ ನಡೆಸಬೇಕು. ಒಟ್ಟು ಐದು ನಿಮಿಷ ಸಂಭಾಷಣೆ ಎಂದು ನಿಗದಿಪಡಿಸಲಾಯಿತು. ಹಾಗೆಯೇ, ಐದು ನಿಮಿಷದಲ್ಲಿ ಎ ಎಷ್ಟು ಹೊತ್ತು ಮಾತಾಡುತ್ತಾರೆ ಮತ್ತು ಬಿ ಎಷ್ಟು ಹೊತ್ತು ಮಾತಾಡುತ್ತಾರೆ ಎಂಬುದನ್ನು ಪ್ರತ್ಯೇಕವಾಗಿ ಎರಡು ಸ್ಟಾಪ್ ವಾಚುಗಳ ಮೂಲಕ ಅಳೆಯಲಾಯಿತು.
ಐದು ನಿಮಿಷದ ಸಂಭಾಷಣೆ ಮುಗಿದಾಗ ಸ್ಟಾಪ್ ವಾಚುಗಳು ಹೇಳುತ್ತಿದ್ದವು: ಎ 4 ನಿಮಿಷ ಮಾತಾಡಿದ್ದರು, ಮತ್ತು ಬಿ 3 ನಿಮಿಷ ಮಾತಾಡಿದ್ದರು. 4 + 3 = 7 ನಿಮಿಷ ಎಂದಾಯಿತು. ಎಂದರೆ, 5 ನಿಮಿಷದ ಸಂಭಾಷಣೆಯಲ್ಲಿ ಸುಮಾರು 2 ನಿಮಿಷ ಇಬ್ಬರೂ ಮಾತಾಡುತ್ತಿದ್ದರು, ಯಾರೂ ಕೇಳಿಸಿಕೊಳ್ಳುತ್ತಿರಲಿಲ್ಲ. ಸಾಮಾನ್ಯ ಸಂಭಾಷಣೆ, ಚರ್ಚೆ, ಸಂವಾದದಲ್ಲಿ ಆಗುವುದು ಹೀಗೆಯೇ, ಹೆಚ್ಚಿನ ಸಮಯ ಇಬ್ಬರು-ಮೂವರು ಒಟ್ಟಿಗೇ ಮಾತಾಡುತ್ತಿರುತ್ತಾರೆ, ಯಾರೂ ಕೇಳಿಸಿಕೊಳ್ಳುತ್ತಿರುವುದಿಲ್ಲ.
ನಾವು ಯಾವುದೇ ಒಂದು ಸಾಧಾರಣ ಟಿವಿ ಡಿಬೇಟನ್ನು ನೋಡಿದರೆ ಗೊತ್ತಾಗುತ್ತದೆ. ಮೂರು ನಾಲ್ಕು ಜನ ಭಾಗಿಗಳು, ಒಬ್ಬ ನಿರೂಪಕರು ಇರುತ್ತಾರೆ. ನಿಜವೆಂದರೆ, ಇದರಲ್ಲಿ ನಿರೂಪಕ ಕೇವಲ ಚರ್ಚೆಯನ್ನು ಸಂಚಾಲನೆ ಮಾಡಿ, ಆಹ್ವಾನಿತ ಭಾಗಿಗಳಿಗೆ ಅವರವರ ಅಭಿಪ್ರಾಯಗಳನ್ನು ಹೇಳಲು ಅವಕಾಶ ಮಾಡಿಕೊಡಬೇಕು. ಆಗ, ಅದನ್ನು ನೋಡುತ್ತಿರುವ ವೀಕ್ಷಕರಿಗೆ ಅದರಿಂದ ಏನಾದರೂ ಪ್ರಯೋಜನವಾದೀತು.

ಆದರೆ, ಇಲ್ಲಿ ಆಗುವುದೇ ಬೇರೆ. ಆರಂಭದಲ್ಲಿ ಸ್ವಲ್ಪಹೊತ್ತು ಒಬ್ಬೊಬ್ಬರು ಮಾತಾಡುತ್ತಾರೆ, ಉಳಿದವರು ಕೇಳಿಸಿಕೊಳುತ್ತಾರೆ. ಚರ್ಚೆ ಸ್ವಲ್ಪ ಬಿಸಿ ಏರಿದ ಕೂಡಲೇ ಇಬ್ಬಿಬ್ಬರು, ಮೂವರು ಒಟ್ಟೊಟ್ಟಿಗೇ ಮಾತಾಡತೊಡಗುತ್ತಾರೆ, ಏರು ಧ್ವನಿಯಲ್ಲಿ. ಅವರನ್ನು ಸಮಾಧಾನಿಸಿ ಸಂವಾದವನ್ನು ಸುಗಮಗೊಳಿಸಬೇಕಾದ ಆಂಕರ್ ಕೂಡ ಅವರಿಗಿಂತ ಜೋರಾಗಿ, ಹೆಚ್ಚು ಹೊತ್ತು ಮಾತಾಡಿ ಸನ್ನಿವೇಶವನ್ನು ಹದಗೆಡಿಸುತ್ತಾರೆ. ಎಲ್ಲರೂ ಮಾತಾಡುತ್ತಾರೆ, ಯಾರೂ ಯಾರನ್ನೂ ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ. ಸಂವಹನದ ಸಂಹಾರ, ವೀಕ್ಷಕರ ವೇಳೆ ವ್ಯರ್ಥ. ಹೀಗೇಕೆ ಆಗುತ್ತದೆ?
ಕೇಳಿಸಿಕೊಳ್ಳುವುದಲ್ಲ, ಆಲಿಸುವುದು
ಆಲಿಸುವಿಕೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಇಬ್ಬರು ಮಾತ್ರ ಒಳಗೊಳ್ಳುವ ಒಂದು ಸಂಭಾಷಣೆಯ ಸನ್ನಿವೇಶವನ್ನು ನಿದರ್ಶನವನ್ನಾಗಿ ತೆಗೆದುಕೊಳ್ಳೋಣ. ನೀವು ಅದರಲ್ಲಿ ಆಲಿಸುವವರಾಗಿ ಭಾಗವಹಿಸುತ್ತಿದ್ದೀರಿ ಎಂದು ಭಾವಿಸಿ, ಇಲ್ಲಿ ಚರ್ಚಿಸಲಾಗುವ ಅಂಶಗಳನ್ನು ವೈಯಕ್ತಿಕ ಪ್ರಯೋಜನವನ್ನು ಪಡೆಯುವ ಉದ್ದೇಶವನ್ನು ಇಟ್ಟುಕೊಂಡು ಈ ಲೇಖನವನ್ನು ಓದಿ.
ಸಂಭಾಷಣೆಯಲ್ಲಿ ಯಾವುದೇ ಒಂದು ಕ್ಷಣ/ಕೆಲವು ಕ್ಷಣಗಳಲ್ಲಿ ಒಬ್ಬರು ಮಾತಾಡುತ್ತಾರೆ, ಇನ್ನೊಬ್ಬರು ಆಲಿಸಬೇಕು ಎಂಬ ನಿರೀಕ್ಷೆ ಇರುತ್ತದೆ. ಇದು ಒಂದು ರೀತಿ ಪಿಂಗ್ ಪಾಂಗ್ (ಟೇಬಲ್ ಟೆನ್ನಿಸ್) ಆಟದ ರೀತಿ. ಒಬ್ಬರು ಹೊಡೆದ ಬಾಲ್ ತನಗೆ ತಲುಪುವ ಮುಂಚೆ ಎದುರಾಳಿ ಬಾಲನ್ನು ಮರಳಿಸಲು ಸಾಧ್ಯವಿಲ್ಲ. ಇದನ್ನು ಸಂಭಾಷಣೆಯಲ್ಲಿ ಅನುಸರಿಸಬೇಕು.
ಸಾಮಾನ್ಯವಾಗಿ ಒಬ್ಬರು ಹೇಳುವುದನ್ನು ಇನ್ನೊಬ್ಬರು ಕೇಳಿಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಇಲ್ಲಿ ಮೊದಲು, ಕೇಳಿಸಿಕೊಳ್ಳುವುದು ಮತ್ತು ಆಲಿಸುವುದು ಇವುಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ. ಒಬ್ಬರು ಮಾತಾಡುತ್ತಿರುವುದು ನಮ್ಮ ಕಿವಿ ಮೇಲೆ ಬೀಳುತ್ತಿರುತ್ತದೆ, ಕಿವಿ ತೆರೆದಿರುವುದರಿಂದ ಅದು ನಮಗೆ ಕೇಳಿಸುತ್ತದೆ, ಯಾವುದೇ ಸದ್ದು, ಸಂಗೀತ ಹೇಳಿಸುವ ಹಾಗೆ. ಯಾರಾದರೂ ನಮಗೆ ಸ್ವಲ್ಪವೂ ಅರ್ಥವಾಗದ (ಉದಾ: ಚೈನೀಸ್) ಭಾಷೆಯಲ್ಲಿ ಮಾತಾಡಿದರೂ ಅದು ನಮಗೆ ’ಕೇಳಿಸು’ತ್ತದೆ, ಆದರೆ ಅರ್ಥವಾಗಬೇಕಾಗಿಲ್ಲ.

ಅದರೆ, ಆಲಿಸುವುದು ಎಂದರೆ ಒಬ್ಬರು ಹೇಳುವ ಮಾತನ್ನು ಕಿವಿಗೊಟ್ಟು ಕೇಳಿಸಿಕೊಂಡು, ಅರ್ಥ ಮಾಡಿಕೊಳ್ಳುವುದು. ಸಂವಹನದಲ್ಲಿ ಇದು ಮಾತಾಡುವುದಕ್ಕಿಂತ ಹೆಚ್ಚು ಮಹತ್ವದ, ಆದರೆ ಸಾಮಾನ್ಯವಾಗಿ ಗೌಣವಾಗಿ ಕಾಣುವ ಕೌಶಲ. ಅದಕ್ಕೇ ಹೇಳುವುದು, “A good listener is a good speaker,” ಎಂದು. ತತ್ವಜ್ಞಾನಿ ಎಪಿಕ್ಟೆಟಸ್ ಇದನ್ನು ಮಾರ್ಮಿಕವಾಗಿ ಹೇಳಿದ್ದಾರೆ: ನಮಗೆ ಎರಡು ಕಿವಿ, ಒಂದು ಬಾಯಿ ಇದೆ, ಆದ್ದರಿಂದ ಮಾತಾಡುವುದಕ್ಕಿಂತ ಎರಡು ಪಟ್ಟು ನಾವು ಆಲಿಸಬಹುದು. ಸರಳವೆಂದು ತೋರಿದರೂ, ಆಲಿಸುವಿಕೆಯನ್ನು ಹೆಚ್ಚು ಆಳವಾಗಿ ಕೆದಕುತ್ತಾ ಹೋದಹಾಗೆ ಅದರ ಮಹತ್ವ ಅರ್ಥವಾಗತೊಡಗುತ್ತದೆ. ಅದನ್ನು ಅರಿಯುವದಷ್ಟೆ ಅಲ್ಲ, ಅಭ್ಯಾಸವನ್ನೂ ಮಾಡಬೇಕು.
ಸಕ್ರಿಯ ಆಲಿಸುವಿಕೆ (Active Listening)
ಪರಿಣಾಮಕಾರಿ ಆಲಿಸುವಿಕೆಯಲ್ಲಿ, ಒಬ್ಬರ ಮಾತಿನ ಕಡೆಗೆ ನಮ್ಮ ಸಂಪೂರ್ಣ ಗಮನ, ಪ್ರಜ್ಞಾಪೂರ್ವಕ ತೊಡಗಿಸಿಕೊಳ್ಳುವಿಕೆ ಮತ್ತು ಚಿಂತನಶೀಲ ಪ್ರತಿಕ್ರಿಯೆಯ ಅಗತ್ಯವಿದೆ. ಇದರಲ್ಲಿ ಮಾತನಾಡುವ ಪದಗಳನ್ನು ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲ, ಅವುಗಳಿಗೆ ಆಧಾರವಾಗಿರುವ ಭಾವನೆಗಳು, ಉದ್ದೇಶಗಳನ್ನೂ ಗ್ರಹಿಸಬೇಕಾಗುತ್ತದೆ.
ಹೆಚ್ಚಿನವರು ಒಬ್ಬರ ಮಾತನ್ನು ಕೇಳಿಸಿಕೊಳ್ಳುವಾಗ, ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಮುಕ್ತ ಮನಸ್ಸಿನಿಂದ ಕಿವಿಗೊಡದೇ, ತಮ್ಮ ಕಡೆಯಿಂದ ಏನಾದರೊಂದು ಪ್ರತಿಕ್ರಿಯೆಯನ್ನು ತೋರುವ ಉದ್ದೇಶದಿಂದ ಆಲಿಸುತ್ತಿರುತ್ತಾರೆ. ಬದಲಿಗೆ ಸಕ್ರಿಯ ಆಲಿಸುವಿಕೆಯಲ್ಲಿ ಆಲಿಸುವವರು ಮಾತಾಡುವವರ ಸಂದೇಶದ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು, ಅವರು (ಪೂರ್ತಿ ಅಥವಾ ಒಂದೊಂದು ಹಂತದ) ಮಾತು ಮುಗಿಸುವವರೆಗೆ ಅದರ ಕುರಿತು ನಮ್ಮದೇ ಆದ ತೀರ್ಮಾನ ತೆಗೆದುಕೊಳ್ಳುವುದನ್ನು ಅಥವಾ ವ್ಯಾಖ್ಯಾನ ಮಾಡುವುದನ್ನು ತಡೆಹಿಡಿಯಬೇಕು. ಇಲ್ಲವಾದರೆ, ಸಂಭಾಷಣೆಯು ವಾಗ್ಯುದ್ಧದಲ್ಲಿ ಪರ್ಯವಸಾನಗೊಳ್ಳುತ್ತದೆ.
ಫಲಕಾರಿ ಆಲಿಸುವಿಕೆಯ ಪ್ರಮುಖ ಅಂಶಗಳು
ಫಲಕಾರಿಯಾದ ಆಲಿಸುವಿಕೆಯನ್ನು ರೂಢಿಸಿಕೊಳ್ಳಲು ಸಾಧ್ಯವಾಗಬೇಕು ಎಂದರೆ ನಾವು ಅದನ್ನು ಮೊದಲು ಒಂದು ಪ್ರಕ್ರಿಯೆನ್ನಾಗಿ ಗ್ರಹಿಸಬೇಕು. ಆಗ, ಅದರಲ್ಲಿ ವಿವಿಧ ಘಟಕಗಳಿವೆ, ಹಂತಗಳಿವೆ ಎಂಬುದು ಅರ್ಥವಾಗುತ್ತದೆ. ಕಲಿಯುವವರು ಆ ಎಲ್ಲಾ ಅಂಶಗಳನ್ನು ಸುಧಾರಿಸಿಕೊಳ್ಳುವತ್ತ ಗಮನ ಹರಿಸಬೇಕು:

ಪೂರ್ಣ ಗಮನ ನೀಡುವುದು
ಆಲಿಸುವಿಕೆಯ ಮೊದಲ ಮತ್ತು ಅತ್ಯಂತ ಮೂಲಭೂತ ಅಂಶವೆಂದರೆ ಮಾತಾಡುವವರಿಗೆ ನಿಮ್ಮ ಸಂಪೂರ್ಣ ಗಮನ ನೀಡುವುದು. ಇದಕ್ಕಾಗಿ ಆಚೆಈಚೆ ಅಥವಾ ಮೊಬೈಲ್ ಫೋನನ್ನು ನೋಡದೇ, ಮಾತಾಡುವವರೊಂದಿಗೆ ಕಣ್ಣಿನ ಸಂಪರ್ಕವನ್ನು ಕಾಪಾಡಿಕೊಳ್ಳುವುದು ಸಹ ಅಗತ್ಯವಾಗಿರುತ್ತದೆ. ಇದು ಅವರ ಜೊತೆ ನಿಮ್ಮ ವಿಶ್ವಾಸವನ್ನು ಪ್ರದರ್ಶಿಸುತ್ತದೆ ಮತ್ತು ಮಾತಾಡುವವರು ಮತ್ತು ಅವರು ಮಾತಾಡುತ್ತಿರುವ ವಿಷಯದ ಕುರಿತು ನಿಮ್ಮ ಆಸಕ್ತಿಯನ್ನು ತೋರಿಸುತ್ತದೆ.
ನೀವು ಸಂಭಾಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಷ್ಟೇ ಅಲ್ಲ, ನೀವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೀರಿ ಎಂದು ಮಾತಾಡುವವರಿಗೂ ಅನಿಸಬೇಕು. ನೀವು ಸಾಂದರ್ಭಿಕವಾಗಿ ತಲೆಯಾಡಿಸುವ ಮೂಲಕ, ಮುಖಭಾವದ ಮೂಲಕ, ದೇಹ ಭಂಗಿಯ ಮೂಲಕ ಇದನ್ನು ಸಾಧಿಸಬಹುದು. ಈ ಮೌಖಿಕವಲ್ಲದ ಸೂಕ್ಷ್ಮವಾದ ಸೂಚನೆಗಳು ಮಾತನಾಡುವವರಿಗೆ ನೀವು ಅವರು ಹೇಳುತ್ತಿರುವ ವಿಷಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೀರಿ ಎಂದು ಸೂಚಿಸುತ್ತವೆ.
ಅಡಚಣೆಗಳನ್ನು ನಿವಾರಿಸುವುದು
ಮಾತಾಡುವವರು ಪೂರ್ತಿ ಮಾತನ್ನು, ಅಥವಾ ಒಂದು ಅಂಶವನ್ನು ಪೂರ್ತಿಗೊಳಿಸುವವರೆಗೆ ಮಧ್ಯದಲ್ಲಿ ಮಾತಾಡಬಾರದು. ಇದರಿಂದ ಸಂಭಾಷಣೆಯ ಹರಿವಿಗೆ ಅಡ್ಡಿಯಾಗುತ್ತದೆ. ಅದನ್ನು ಸರಿಯಾಗಿ ಆಲಿಸಿ ಅರ್ಥ ಮಾಡಿಕೊಳ್ಳುವುದಕ್ಕೂ ತೊಂದರೆಯಾಗುತ್ತದೆ. ಸಕ್ರಿಯ ಆಲಿಸುವಿಕೆಯಲ್ಲಿ ಆಲಿಸುವವರು ಪ್ರತಿಕ್ರಿಯಿಸುವ ಮೊದಲು ಭಾಷಣಕಾರರು ತಮ್ಮ ಆಲೋಚನೆಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಅವಕಾಶ ನೀಡಬೇಕು.
ಪ್ರತಿಕ್ರಿಯೆ ನೀಡುವುದು
ಪರಿಣಾಮಕಾರಿ ಸಕ್ರಿಯ ಆಲಿಸುವಿಕೆಯಲ್ಲಿ ಆಲಿಸುವವರು ತಾವು ಅಲ್ಲಿಸಿದ್ದು ಅರ್ಥವಾಗಿದೆ ಎಂಬುದನ್ನು ಸರಿ, ಹೌದು, ಅರ್ಥವಾಯಿತು ಎನ್ನುವ ರೀತಿಯ ಚಿಕ್ಕ ಮೌಖಿಕ ಪ್ರತಿಕ್ರಿಯೆಗಳ ಮೂಲಕ ಅಥವಾ ಆಂಗಿಕ ಭಾಷೆಯ ಮೂಲಕ ಸೂಚಿಸುತ್ತಿರಬೇಕು. ಅಲ್ಲಲ್ಲಿ ಅವರು ಹೇಳಿದ್ದನ್ನು ಸಂಕ್ಷೇಪಿಸಿ ಹೇಳಿ, ಸ್ಪಷ್ಟ ಪಡಿಸಿಕೊಳ್ಳುವುದು, ಪ್ರಶ್ನೆ ಕೇಳುವುದು ನೀವು ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸುತ್ತದೆ. ಇದು ಮಾತಾಡುವವರಿಗೆ ಉತ್ತೇಜನ ನೀಡುತ್ತದೆ. ಅವರು ಇನ್ನೂ ಚೆನ್ನಾಗಿ ಮಾತಾಡುತ್ತಾರೆ. ವಿವಿಧ ಹಂತಗಳಲ್ಲಿ ಅವರು ಮಾತಾಡಿದ್ದು ನಿಮಗೆ ಅರ್ಥವಾಗದಿದ್ದರೂ ನೀವು ಸುಮ್ಮನೇ ಕುಳಿತಿದ್ದರೆ ಸಂಭಾಷಣೆ ವ್ಯರ್ಥವಾಗುತ್ತದೆ.
ಪರಾನುಭೂತಿ ಪ್ರದರ್ಶಿಸುವುದು
ಒಬ್ಬರು ಮಾತಾಡುತ್ತಿರುವಾಗ ಅವರ ಸ್ಥಾನದಲ್ಲಿ ಇರಿಸಿಕೊಂಡು, ಅವರ ಮಾತುಗಳನ್ನು ಆಲಿಸುತ್ತಾ, ಅವುಗಳ ಹಿಂದಿನ ಭಾವನೆಗಳನ್ನು, ಉದ್ದೇಶಗಳನ್ನು ಮತ್ತು ಅವರು ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನವೇ ಪರಾನುಭೂತಿ.
ತೀರ್ಮಾನವನ್ನು ತಡೆಹಿಡಿಯುವುದು
ಸಕ್ರಿಯ ಆಲಿಸುವಿಕೆ ಎಂದರೆ ನಿಮ್ಮ ಜೊತೆ ಮಾತಾಡುತ್ತಿರುವವರ ಹೇಳಿದ್ದನ್ನು ಸಂಪೂರ್ಣಗೊಳಿಸುವವರೆಗೆ ಅವರು ಹೇಳುತ್ತಿರುವುದರ ಕುರಿತು ನಿಮ್ಮದೇ ಆದ ತೀರ್ಮಾನವನ್ನು ತಾಳುವುದನ್ನು ತಡೆಹಿಡಿಯಬೇಕು. ಮಾತಾಡುತ್ತಿರುವವರ ಅಭಿಪ್ರಾಯ, ಭಾವನೆ, ನಿಲುವುಗಳೊಂದಿಗೆ ನೀವು ಬಲವಾದ ಭಿನ್ನಾಭಿಪ್ರಾಯ ಹೊಂದಿದಾಗಲಂತೂ ಇದು ಬಹಳ ಕಷ್ಟ. ಆದರೂ ಇದನ್ನು ಅನುಸರಿಸಲೇ ಬೇಕು. ಇಲ್ಲವಾದರೆ ಅವರು ಹೇಳುವುದನ್ನು ಅವರ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಇದು ಮಾತಾಡುವವರ ಮನಸ್ಥಿತಿಯ ಮೇಲೆ ಪರಿಣಾಮ ಬೀರಿ ಸಂಭಾಷಣೆ ವಿಫಲವಾಗುತ್ತದೆ.
ಸಕ್ರಿಯ ಆಲಿಸುವಿಕೆಯ ಪ್ರಯೋಜನಗಳು
ಆಲಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದರಿಂದ ವೈಯಕ್ತಿಕ ಮತ್ತು ವೃತ್ತಿಪರ ಎರಡೂ ಸಂದರ್ಭಗಳಲ್ಲಿ ಆಳವಾದ ಪ್ರಯೋಜನಗಳನ್ನು ಪಡೆಯಬಹುದು:

ಸುಧಾರಿತ ಸಂವಹನ
ಸಕ್ರಿಯ ಆಲಿಸುವಿಕೆಯು ಸಂವಹನದ ಸ್ಪಷ್ಟತೆ ಮತ್ತು ನಿಖರತೆಯನ್ನು ಹೆಚ್ಚಿಸುತ್ತದೆ. ಇಬ್ಬರೂ ವ್ಯಕ್ತಿಗಳು ಸಂಭಾಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ, ಮಾತನ್ನು ಅದು ಉದ್ದೇಶಿಸಿದ್ದ ರೀತಿಯಲ್ಲಿಯೇ ಅರ್ಥಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ತಪ್ಪು ತಿಳುವಳಿಕೆಗಳು, ತಪ್ಪು ವ್ಯಾಖ್ಯಾನಗಳು ಮತ್ತು ಸಂಘರ್ಷಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಬಲವಾದ ಸಂಬಂಧಗಳು
ಸಕ್ರಿಯ ಆಲಿಸುವಿಕೆಯು ನಂಬಿಕೆ ಮತ್ತು ಸಹಾನುಭೂತಿಯನ್ನು ಬೆಳೆಸುತ್ತದೆ, ಇದು ಬಲವಾದ ಸಂಬಂಧಗಳನ್ನು ನಿರ್ಮಿಸಲು ಅಡಿಪಾಯವಾಗಿದೆ. ವೈಯಕ್ತಿಕ ಸಂಬಂಧಿಗಳು, ಸಹೋದ್ಯೋಗಿಗಳು ಅಥವಾ ಗ್ರಾಹಕರನ್ನು ಪ್ರಾಮಾಣಿಕವಾಗಿ ಆಲಿಸಿದಾಗ, ಅವರಲ್ಲಿ, ನೀವು ಸೌಜನ್ಯವುಳ್ಳವರು ಮತ್ತು ಅರ್ಥಮಾಡಿಕೊಳ್ಳಬಲ್ಲವರು ಎಂಬ ಭಾವನೆ ಹುಟ್ಟುತ್ತದೆ. ಇದು ಉತ್ತಮ ಸಹಯೋಗ, ಹೆಚ್ಚು ಮಹತ್ವದ ಬೆಂಬಲ ಮತ್ತು ಹೆಚ್ಚು ಯಶಸ್ವಿ ಸಂವಹನಗಳಿಗೆ, ಮತ್ತು ಇದರಿಂದಾಗಿ ಹೆಚ್ಚು ಸಕಾರಾತ್ಮಕ ಸಂಪರ್ಕಗಳಿಗೆ ಕಾರಣವಾಗುತ್ತದೆ.
ಹೆಚ್ಚಿದ ಸಮಸ್ಯೆ–ಪರಿಹರಿಸುವ ಸಾಮರ್ಥ್ಯ
ಒಂದು ತಂಡವಾಗಿ ಕೆಲಸ ಮಾಡುವಾಗ ಸಮಸ್ಯೆ ಪರಿಹಾರದಲ್ಲಿ, ವಿಶೇಷವಾಗಿ ಸಂಕೀರ್ಣ ಅಥವಾ ಭಾವನಾತ್ಮಕ ಸಂದರ್ಭಗಳಲ್ಲಿ ಸಕ್ರಿಯ ಆಲಿಸುವಿಕೆ ನಿರ್ಣಾಯಕವಾಗಿದೆ. ವಿವಿಧ ದೃಷ್ಟಿಕೋನಗಳನ್ನು ಎಚ್ಚರಿಕೆಯಿಂದ ಆಲಿಸುವ ಮೂಲಕ, ವ್ಯಕ್ತಿಗಳು ಒಳಗೊಂಡಿರುವ ಎಲ್ಲರನ್ನು ತೃಪ್ತಿಪಡಿಸುವ ಸೃಜನಶೀಲ ಪರಿಹಾರಗಳನ್ನು ಗುರುತಿಸುವ ಸಾಧ್ಯತೆ ಹೆಚ್ಚು. ಇದಲ್ಲದೆ, ಸಕ್ರಿಯ ಆಲಿಸುವಿಕೆಯು ತಂಡದ ಕೆಲಸ ಮತ್ತು ಸಹಯೋಗದ ಪ್ರಜ್ಞೆಯನ್ನು ಉತ್ತೇಜಿಸುತ್ತದೆ, ಇದು ಪರಿಣಾಮಕಾರಿ ಸಮಸ್ಯೆ-ಪರಿಹಾರಕ್ಕೆ ಅವಶ್ಯಕವಾಗಿದೆ.
ವರ್ಧಿತ ನಾಯಕತ್ವ ಕೌಶಲ್ಯಗಳು
ಸಕ್ರಿಯ ಆಲಿಸುವಿಕೆ ನಾಯಕರಿಗೆ ಅತ್ಯಗತ್ಯ ಕೌಶಲವಾಗಿದೆ. ತಮ್ಮ ತಂಡದಲ್ಲಿರುವ ಭಾಗಿಗಳ ಮಾತನ್ನು, ಅಭಿಪ್ರಾಯವನ್ನು ಸಮಾಧಾನದಿಂದ, ಪೂರ್ವಗ್ರಹವಿಲ್ಲದೇ ಮುಕ್ತ ಮನಸ್ಸಿನಿಂದ ಆಲಿಸುವ ವ್ಯಕ್ತಿಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತರಾಗುತ್ತಾರೆ. ಜೊತೆಗೆ, ತಾವು ತೆಗೆದುಕೊಂಡ ನಿರ್ಧಾರಗಳಿಗೆ ಅನುಗುಣವಾಗಿ ತಂಡದ ಸದಸ್ಯರು ಕೆಲಸ ಮಾಡುವ ಹಾಗೆ ಪ್ರಭಾವಿಸಬಲ್ಲವರಾಗಿರುತ್ತಾರೆ. ಸಕ್ರಿಯವಾಗಿ ಆಲಿಸುವಿಕೆ ಪರಸ್ಪರ ಗೌರವ ಮತ್ತು ಒಳಗೊಳ್ಳುವಿಕೆಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಇದು ಉತ್ಪಾದಕ ಕೆಲಸದ ವಾತಾವರಣಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತದೆ.
ಉತ್ತಮ ಭಾವನಾತ್ಮಕ ಬುದ್ಧಿವಂತಿಕೆ
ಭಾವನಾತ್ಮಕ ಬುದ್ಧಿವಂತಿಕೆ (Emotional Intelligence) ನಮ್ಮ ಮತ್ತು ಇತರರ ಭಾವನೆಗಳನ್ನು ಗುರುತಿಸುವ, ಅರ್ಥಮಾಡಿಕೊಳ್ಳುವ ಮತ್ತು ನಿರ್ವಹಿಸುವ ಬೌದ್ಧಿಕ ಸಾಮರ್ಥ್ಯವನ್ನು ಸೂಚಿಸುತ್ತದೆ. ಸಕ್ರಿಯ ಆಲಿಸುವಿಕೆ ಇಐ-ನ ಪ್ರಮುಖ ಅಂಶವಾಗಿದೆ, ಏಕೆಂದರೆ ಇದು ಇತರರ ಭಾವನೆಗಳಿಗೆ ಹೊಂದಿಕೊಳ್ಳುವುದು ಮತ್ತು ಸಹಾನುಭೂತಿಯ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ಒಳಗೊಂಡಿರುತ್ತದೆ. ಸಕ್ರಿಯ ಆಲಿಸುವಿಕೆ ಕೌಶಲ್ಯಗಳನ್ನು ಗೌರವಿಸುವ ಮೂಲಕ, ನಾವು ನಮ್ಮ ಭಾವನಾತ್ಮಕ ಬುದ್ಧಿವಂತಿಕೆಯನ್ನು ಸುಧಾರಿಸಬಹುದು, ಸಾಮಾಜಿಕ ಸಂವಹನಗಳನ್ನು ಮತ್ತು ಆ ಮೂಲಕ ಸಂಬಂಧಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ವೃದ್ಧಿಸಬಹುದು.
ಕೆಲವು ಸಲಹೆಗಳು
ಸಕ್ರಿಯವಾಗಿ ಆಲಿಸುವಿಕೆಯ ಪ್ರಯೋಜನವನ್ನು ಪಡೆಯಲು ಕೆಲವು ಅಂಶಗಳನ್ನು ಗಮನಿಸಬಹುದು. ಮಾತಾಡುವವರು ಮತ್ತು ಆಲಿಸುವವರು ಇಬ್ಬರಿಗೂ ಸಂಭಾಷಣೆಯಲ್ಲಿ ಆಸಕ್ತಿ ಇದ್ದರೂ ಸಂವಹನವನಕ್ಕೆ ಅಡ್ಡಿಯಾಗುವ ಇತರ ಅಂಶಗಳು ಇರಬಹುದು. ಅವುಗಳನ್ನು ನಿವಾರಿಸುವುದು ಸಂಭಾಷಣೆಯಲ್ಲಿ ತೊಡಗಿರುವವರ ಕರ್ತವ್ಯವಾಗುತ್ತದೆ.
ಅಡಚಣೆ: ಸಂಭಾಷಣೆ ನಡೆಸುವಲ್ಲಿ, ಹತ್ತಿರ ಜೋರಾಗಿ ಬಡಿದುಕೊಳ್ಳುತ್ತಿರುವ ಲೌಡ್ ಸ್ಪೀಕರ್, ಟ್ರಾಫಿಕ್, ಬೇರೆಯವರು ಮಾತಾಡುತ್ತಿರುವುದು ಹೀಗೆ ಹೊರಗಿನ ಗದ್ದಲವಿದ್ದರೆ ಸಂಭಾಷಣೆ ಕಷ್ಟವಾಗಬಹುದು. ಅದನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ನೀವೇ ಒಂದು ಪ್ರಶಾಂತವಾದ ಸ್ಥಳವನ್ನು ಆರಿಸಿಕೊಳ್ಳಿ. ಮತ್ತೆ ಮತ್ತೆ ಬರುವ ಫೋನನ್ನು ಆಫ್ ಮಾಡಿ.
ಪೂರ್ವಗ್ರಹ; ನಿಮಗೆ ಮಾತಾಡುತ್ತಿರುವ ವ್ಯಕ್ತಿಯ ಬಗ್ಗೆ, ಮಾತಾಡುತ್ತಿರುವ ವಿಷಯದ ಬಗ್ಗೆ, ಆ ಕುರಿತು ಅವರ ನಿಲುವಿನ ಬಗ್ಗೆ ನಿಮಗೆ ತೀವ್ರವಾದ ಭಿನ್ನಾಭಿಪ್ರಾಯವಿದ್ದರೆ ನೀವು ಸಾಧ್ಯವಾದರೆ ಸಂಭಾಷಣೆಯಲ್ಲಿ ತೊಡಗಲೇ ಬೇಡಿ. ತೊಡಗುವುದು ಅನಿವಾರ್ಯವಾದರೆ ಆದಷ್ಟು ಪರಾನುಭೂತಿಯಿಂದ ಅವರ ಮಾತುಗಳನ್ನು ಆಲಿಸಿ, ಏನಾದರೂ ಪ್ರಯೋಜನವಾದರೂ ಆಗಬಹುದು.
ಮನಸ್ಥಿತಿ: ಕೆಲವೊಮ್ಮೆ ನಿಮ್ಮ ಆರೋಗ್ಯ, ಅಥವಾ ಆ ಹೊತ್ತಿನ ಮನಸ್ಥಿತಿ ಸಕ್ರಿಯವಾದ ಆಲಿಸುವಿಕೆಗೆ ಅಡ್ಡಿಯಾಗಬಹುದು. ಇದನ್ನು ನಿರ್ವಹಿಸುವ ಜವಾಬ್ದಾರಿ ನಿಮ್ಮ ಮೇಲೆಯೇ ಇರುತ್ತದೆ. ಇದು ಸಂಭಾಷಣೆಯನ್ನು ಫಲಕಾರಿಯಾಗಿ ಆಲಿಸುವುದರಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಿ.
ಪ್ರಶ್ನಿಸುವುದು: ಮಾತಾಡುವವರಿಗೆ ಪ್ರಶ್ನೆಯನ್ನು ಕೇಳಬಹುದು. ಆದರೆ ಅದು ಅರ್ಥವಾಗಿರದೇ ಇರುವುದನ್ನು ತಿಳಿಸುಕೊಳ್ಳಲು, ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕಾಗಿ, ಅನುಮಾನವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಕೇಳಬಹುದೇ ವಿನಾ, ಅವರ ಜ್ಞಾನವನ್ನು ಪರೀಕ್ಷಿಸಿ ಅವರಿಗೆ ಮುಜುಗುರ ಉಂಟುಮಾಡಲು ಕೇಳಬಾರದು.
ಇದನ್ನೂ ಓದಿ ನುಡಿಯಂಗಳ | ಕನ್ನಡದಲ್ಲೇ ಲಕ್ಷಕ್ಕೂ ಹೆಚ್ಚು ಮಕ್ಕಳು ಫೇಲು; ಸಮಸ್ಯೆ ಏನು? ಪರಿಹಾರ ಇದೆಯೇ?
ಆಂಗಿಕ ಭಾಷೆಯನ್ನು ಆಲಿಸುವುದು
ಆಲಿಸುವುದು ಎಂದಾಗ ಸಾಮಾನ್ಯವಾಗಿ ಮಾತಾಡಿದ್ದನ್ನು ಕಿವಿಗೊಟ್ಟು ಕೇಳಿಸಿಕೊಳ್ಳುವುದು ಎನ್ನುವ ಅರ್ಥ ಬರುತ್ತದೆ. ಆದರೆ ಸಂವಹನವು ಕೇವಲ ಆಡುವ ಮಾತಿನಷ್ಟೆ ಅಲ್ಲ, ಆಂಗಿಕ ಭಾಷೆಯಲ್ಲಿಯೂ ನಡೆಯುತ್ತಿರುತ್ತದೆ. ಮಾತಾಡುವವರು ತಮ್ಮ ಕೈಗಳನ್ನು, ಮುಖಭಾವಗಳನ್ನು, ದೇಹಭಂಗಿಗಳನ್ನು ಅನಾಯಾಸ ಬಳಸುತ್ತಾರೆ. ನಾವು ಇದನ್ನು ’ಆಲಿಸುವ’ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಏಕೆಂದರೆ, ಆಂಗಿಕ ಭಾಷೆಯು ಆಡಿದ ಮಾತನ್ನು ಹೆಚ್ಚು ಆಳವಾಗಿ ಗ್ರಹಿಸುವುದಕ್ಕೆ ನೆರವಾಗುತ್ತದೆ. ಆಂಗಿಕ ಸನ್ನೆಗಳು ಮಾತಿಗಿಂತ ಹೆಚ್ಚಿನ (ಅಥವಾ ಕೆಲವೊಮ್ಮೆ ಭಿನ್ನವಾದ) ಅರ್ಥವನ್ನು ಕೊಡುತ್ತಿರುತ್ತವೆ. ಆದ್ದರಿಂದ ಸಕ್ರಿಯ ಆಲಿಸುವಿಕೆಯಲ್ಲಿ ನಾವು ಆಂಗಿಕ ಭಾಷೆಯನ್ನೂ ಸರಿಯಾಗಿ ಆಲಿಸುವುದನ್ನು ರೂಢಿಸಿಕೊಳ್ಳಬೇಕು.
ಸಕ್ರಿಯ, ಪ್ರಯೋಜನಕಾರಿ ಆಲಿಸುವಿಕೆಯ ಕುರಿತು ನಾವು ಮೇಲೆ ಚರ್ಚಿಸಿರುವ ಎಲ್ಲಾ ಅಂಶಗಳು, ಸಭೆಯಲ್ಲಿ ಕುಳಿತು ಸಾರ್ವಜನಿಕ ಭಾಷಣ ಆಲಿಸುವಾಗ, ಯಾವುದಾದರೂ ಸಂಧಾನದಲ್ಲಿ, ಕಂಪನಿಯ ಸಭೆಯಲ್ಲಿ, ಯಾವುದಾದರೂ ವ್ಯಾಜ್ಯವನ್ನು ಬಗೆಹರಿಸುವ ಮಧ್ಯವರ್ತಿಯಾಗಿ, ಚರ್ಚೆಯಲ್ಲಿ ಭಾಗವಹಿಸುತ್ತಿರುವಾಗ ಈ ಸಕ್ರಿಯವಾಗಿ ಆಲಿಸುವಿಕೆಯ ತಂತ್ರಗಳ ಅರಿವು, ಮತ್ತು ಅಭ್ಯಾಸ ಬಹಳ ಪ್ರಯೋಜನಕಾರಿಯಾಗಿರುತ್ತದೆ.

ಪ್ರೊ ಎಂ ಅಬ್ದುಲ್ ರೆಹಮಾನ್ ಪಾಷ
ಹಿರಿಯ ಭಾಷಾ ವಿಜ್ಞಾನಿ




