ನುಡಿಯಂಗಳ | ಕನ್ನಡದಲ್ಲೇ ಲಕ್ಷಕ್ಕೂ ಹೆಚ್ಚು ಮಕ್ಕಳು ಫೇಲು; ಸಮಸ್ಯೆ ಏನು? ಪರಿಹಾರ ಇದೆಯೇ?

Date:

ಪ್ರೌಢಶಾಲೆಯ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ವಿಷಯಗಳನ್ನು ಬೋಧಿಸುವ ಶಿಕ್ಷಕರು ಇವರಿಗೆ ಕನ್ನಡ ಭಾಷೆಯನ್ನು ಸರಿಯಾಗಿ ಕಲಿಸದೇ ಇರುವುದಕ್ಕಾಗಿ ಕೆಳ ಹಂತದ ಕನ್ನಡ ಶಿಕ್ಷಕರನ್ನು ದೂಷಿಸುತ್ತಾರೆ. ಹಾಗೆಯೇ ಮೇಲಿನ ಹಂತದಲ್ಲಿ ಕನ್ನಡವನ್ನು ಬೋಧಿಸುವ ಶಿಕ್ಷಕರೂ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕರನ್ನು ದೂಷಿಸುತ್ತಾರೆ.

ಇವತ್ತು ನಾನು, ಶಾಲೆಗಳಲ್ಲಿ ಕನ್ನಡ ಕಲಿಕೆಯ ಸ್ಥಿತಿಗತಿಗಳ ಬಗ್ಗೆ ಕೆಲವು ಆತಂಕಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. 2024-25ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 1 ಲಕ್ಷ 32 ಸಾವಿರ ಮಕ್ಕಳು ಕನ್ನಡ ಭಾಷೆ ಪರೀಕ್ಷೆಯಲ್ಲಿ ಫೇಲಾಗಿದ್ದಾರೆ. ಈ ಬಾರಿ ಕನ್ನಡ ಪರೀಕ್ಷೆ ಬರೆದಿದ್ದ 6.28 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ.21ರಷ್ಟು ಮಕ್ಕಳು ಫೇಲಾಗಿದ್ದಾರೆ. ಇವರಲ್ಲಿ ಕನ್ನಡ ಮಾತೃಭಾಷೆಯವರೂ ಸ್ವಲ್ಪ ಪ್ರಮಾಣದಲ್ಲಿ ಇರುತ್ತಾರೆ. ಆದರೆ ಫೇಲಾದವರಲ್ಲಿ, ಉರ್ದು, ತೆಲುಗು, ತಮಿಳು, ಮರಾಠಿ ಇತ್ಯಾದಿ ಅಲ್ಪಸಂಖ್ಯಾತ ಮಾತೃಭಾಷೆಗಳ ಹಿನ್ನೆಲೆಯಿಂದ ಬಂದ ಮಕ್ಕಳು ಹೆಚ್ಚಾಗಿರುತ್ತಾರೆ. ಅದರಲ್ಲೂ ವಿಶೇಷವಾಗಿ ಫೇಲಾದವರಲ್ಲಿ ಶೇ.70ರಷ್ಟು ಮಕ್ಕಳು ಉರ್ದು ಮಾತೃಭಾಷೀಯ ಮುಸ್ಲಿಮ್ ಮಕ್ಕಳು ಎಂಬ ಒಂದು ಅಂದಾಜೂ ಇದೆ.

WhatsApp Image 2025 09 25 at 6.35.59 PM

ಇವರು ಸಾಮಾನ್ಯವಾಗಿ ಬಡ ಕುಟುಂಬದಿಂದ ಬಂದ ಮಕ್ಕಳಾಗಿರುತ್ತವೆ. ಇವರು ಎಸ್.ಎಸ್.ಎಲ್.ಸಿ.ಯಲ್ಲಿ ಫೇಲಾದರೆ ಅವರ ಭವಿಷ್ಯ ಬರೆದ ಹಾಗೆಯೇ! ಹುಡುಗಿಯರಾದರೆ ಆದಷ್ಟು ಬೇಗ ಮದುವೆ ಮಾಡಲಾಗುತ್ತದೆ. ಹುಡುಗರು? ಗ್ಯಾರೇಜು, ಪಂಕ್ಚರ್ ಅಂಗಡಿ, ಹಣ್ಣು/ತರಕಾರಿ ಗಾಡಿಯಂಗಡಿ, ಆಟೋ ಹೀಗೆ ಯಾವುದಾದರೂ ಒಂದು ವೃತ್ತಿಯನ್ನು ಅವಲಂಬಿಸಿ ಬದುಕಬೇಕಾಗುತ್ತದೆ. ಈ ಮಕ್ಕಳ ಭವಿಷ್ಯ ಹೀಗಾಗಿದ್ದು ಕೇವಲ ಕನ್ನಡ ಪತ್ರಿಕೆಯಲ್ಲಿ ಪಾಸಾಗದಿದ್ದುದಕ್ಕೆ ಎಂದು ಅರಿವಾದಾಗ ನಮ್ಮ ಕನ್ನಡ ಭಾಷಾ ತಜ್ಞರಿಗೆ ನಾಚಿಕೆಯೂ, ಕಳವಳವೂ, ಕೋಪವೂ ಒಟ್ಟಿಗೇ ಆಗಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾಗುಣಿತ ಒತ್ತಕ್ಷರದ ಭೀತಿ

ಮಕ್ಕಳು ಪ್ರೌಢಶಾಲೆಯ ಮಟ್ಟಕ್ಕೆ ಬಂದಿದ್ದರೂ, ಸುಮಾರು ಶೇ.35ರಷ್ಟು ಮಕ್ಕಳಿಗೆ ಕನ್ನಡದಲ್ಲಿ ಕಾಗುಣಿತ ಒತ್ತಕ್ಷರವನ್ನು ಸರಿಯಾಗಿ ಓದಲು ಬರೆಯಲು ಬರುವುದಿಲ್ಲ ಎಂಬ ಮಾತು ಸರ್ವೇಸಾಮಾನ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಕಂಡುಬರುವ ಈ ಸ್ಥಿತಿ ಖಾಸಗಿ, ಇಂಗ್ಲಿಷ್/ಉರ್ದು ಇತ್ಯಾದಿ ಮಾಧ್ಯಮಗಳ ಶಾಲೆಯಲ್ಲಿಯೂ ಕಂಡುಬರುತ್ತದೆ. ಅಂದರೆ, ಇಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳ ಕನ್ನಡ ಭಾಷಾ ಕೌಶಲವು ಇಷ್ಟೊಂದು ದುರ್ಬಲವಾಗಿದ್ದರೆ, ಕನ್ನಡ ಮಾಧ್ಯಮದಲ್ಲಿಯೇ ಇವರು ವಿಜ್ಞಾನ, ಸಮಾಜವಿಜ್ಞಾನ, ಗಣಿತ ಇತ್ಯಾದಿಗಳನ್ನು ಹೇಗೆ ಕಲಿಯುತ್ತಾರೆ ಎಂಬುದೊಂದು ಒಂದು ದೊಡ್ಡ ಪವಾಡವೇ ಸರಿ.

ಸೇತುಬಂಧ ಸಾಕಾಗುವುದಿಲ್ಲ

ಪ್ರೌಢಶಾಲೆಯ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ವಿಷಯಗಳನ್ನು ಬೋಧಿಸುವ ಶಿಕ್ಷಕರು ಶಿಕ್ಷಕರು ಇವರಿಗೆ ಕನ್ನಡ ಭಾಷೆಯನ್ನು ಸರಿಯಾಗಿ ಕಲಿಸದೇ ಇರುವುದಕ್ಕಾಗಿ ಕೆಳ ಹಂತದ ಕನ್ನಡ ಶಿಕ್ಷಕರನ್ನು ದೂಷಿಸುತ್ತಾರೆ. ಹಾಗೆಯೇ ಮೇಲಿನ ಹಂತದಲ್ಲಿ ಕನ್ನಡವನ್ನು ಬೋಧಿಸುವ ಶಿಕ್ಷಕರೂ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕರನ್ನು ದೂಷಿಸುತ್ತಾರೆ.

ಪ್ರತಿ ತರಗತಿಯ ಹಂತದಲ್ಲಿಯೂ ಕನ್ನಡ ಭಾಷಾ ಪಠ್ಯಕ್ರಮದಲ್ಲಿ ವರ್ಷದ ಕಲಿಕೆ ಆರಂಭವಾಗುವ ಮುಂಚೆ ನಿಗದಿತ ಅವಧಿಯಲ್ಲಿ ’ಸೇತುಬಂಧ’ ಎಂಬ ಒಂದು ವಿಭಾಗ ಇರುತ್ತದೆ. ಇದು ಹಿಂದಿನ ತರಗತಿಯಲ್ಲಿ ಕಲಿತ ಕನ್ನಡ ಕೌಶಲಗಳನ್ನು ನೆನಪಿಸಿಕೊಂಡು ಪುನರ್ಮನ ಮಾಡಿಕೊಳ್ಳುವ ಪ್ರಯಾಸವಾಗಿರುತ್ತದೆ. ಹಿಂದಿನ ತರಗತಿಯಲ್ಲಿಯೂ ಕನ್ನಡ ಓದುವ/ಬರೆಯುವ ಕೌಶಲದ ಮೂಲಭೂತ ಅಂಶಗಳೇ ಕಲಿತಿಲ್ಲವಾದ್ದರಿಂದ, ’ಗೊತ್ತಿಲ್ಲದ’ ಅಂತರವನ್ನು ತುಂಬಲು ಈ ’ಸೇತುಬಂಧ’ ಪಠ್ಯದಿಂದ ಸಾಧ್ಯವಾಗುವುದಿಲ್ಲ. ಅದು ಗೊತ್ತಿದ್ದರೂ, ಅವರು ವಿದ್ಯಾರ್ಥಿಗಳಿಗೆ ಆರಂಭದ ಮೂಲಾಕ್ಷರ, ಗುಣಿತಾಕ್ಷರ, ಒತ್ತಕ್ಷರ ಇತ್ಯಾದಿ ಕಲಿಸಲು ಹೊಗುವುದಿಲ್ಲ, ಮತ್ತು ಸೀಮಿತ ಅವಧಿಯಲ್ಲಿ ಅದನ್ನು ಮಾಡುವುದು ಹೇಗೆ ಎಂದು ಅವರಿಗೆ ಗೊತ್ತಿರುವುದೂ ಇಲ್ಲ. ಮೇಲಿನ ಹಂತದ ಕನ್ನಡ ಶಿಕ್ಷಕರು, ಹಳಗನ್ನಡ, ನಡುಗನ್ನಡ, ಪಂಪ, ರನ್ನ, ವಚನ ಸಾಹಿತ್ಯ, ಸಂಧಿ, ಸಮಾಸ, ಛಂದಸ್ಸು ಆದಿಯಾಗಿ ಸಾಹಿತ್ಯಕ ಪಠ್ಯಕ್ರಮವನ್ನು ಬೋಧಿಸತೊಡಗುತ್ತಾರೆ. ಸುಮಾರು ಮಕ್ಕಳಿಗೆ ಇದು ’ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿತಂದಾಗಿ’ ಅವರು ಎಸ್.ಎಸ್.ಎಲ್.ಸಿ. ಆರಾಮಕ್ಕೆ ಫೇಲ್ ಆಗುತ್ತಾರೆ. ಈ ಮಕ್ಕಳಿಗೆ ತಮ್ಮ ಭವಿಷ್ಯವು ಕೊನೆಗೂ ಹೀಗೇ ಆಗುತ್ತದೆ ಎಂಬ ದಟ್ಟ ನಂಬಿಕೆ ಇರುವುದರಿಂದಾಗಿ ಅವರಿಗೆ ಕನ್ನಡದ ಕುರಿತು, ಶಿಕ್ಷಣದ ಕುರಿತು, ಶಿಕ್ಷಕರ ಕುರಿತು, ಕಲಿಯುವುದಕ್ಕೆ ಒತ್ತಾಯಿಸುತ್ತಿರುವ ಪೋಷಕರ ಕುರಿತು, ಒಟ್ಟಾರೆ ಸಮಾಜದ ಕುರಿತು ತೀವ್ರ ಅಸಮಾಧಾನ ಹುಟ್ಟಿಕೊಳ್ಳುತ್ತದೆ.

ವಿದ್ಯಾರ್ಥಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ ಫೇಲಾಗುವುದು ಹೊಸದೇನಲ್ಲ, ಪ್ರತಿ ವರ್ಷವೂ ಸುಮಾರು ಈ ಪ್ರಮಾಣದಲ್ಲಿ ಫೇಲಾಗುತ್ತಾರೆ, ಕೆಲವು ದಿನಗಳವರೆಗೆ ವಿದ್ವಾಂಸರು, ಕನ್ನಡಾಭಿಮಾನಿಗಳು ಇದರ ಕುರಿತು ಚಿಂತೆ, ಕಾಳಜಿ ವ್ಯಕ್ತ ಪಡಿಸುತ್ತಾರೆ. ಆ ಮೇಲೆ, ಮುಂದಿನ ವರ್ಷವೂ ಇನ್ನೊಂದಷ್ಟು ಮಕ್ಕಳು ಕನ್ನಡದಲ್ಲಿ ಫೇಲಾಗಲು ಕಾಯುತ್ತಾ ಕುಳಿತುಕೊಳ್ಳುತ್ತಾರೆ.

ಸಮಸ್ಯೆಯ ಬೇರು ಎಲ್ಲಿದೆ

WhatsApp Image 2025 09 25 at 6.35.59 PM1

ಸಮಸ್ಯೆ ಎಲ್ಲೆಲ್ಲೂ ಇದೆ. ಶಿಕ್ಷಕರನ್ನು ಕೇಳಿದರೆ: “ಮಕ್ಕಳಿಗೆ ಕನ್ನಡವನ್ನು ಕಲಿಯುವ ಆಸಕ್ತಿಯೇ ಇಲ್ಲ, ಅದರಲ್ಲೂ ಕನ್ನಡೇತರ ಭಾಷೆಯ ಹಿನ್ನೆಲೆಯಿಂದ ಬಂದ ಮಕ್ಕಳಂತೂ ಕಲಿಯುವ ಆಸಕ್ತಿಯನ್ನೇ ತೋರುವುದಿಲ್ಲ. ನಮಗೆ ಬೋಧನೆಯ ಜೊತೆಗೆ ಏನೇನೋ ಕೆಲಸ ಹಚ್ಚಿ ಬಿಟ್ಟಿರುತ್ತಾರೆ. ಕೆಲವು ಶಾಲೆಗಳಲ್ಲಿ ಕನ್ನಡ ಬೋಧಕರೇ ಇಲ್ಲ, ಇದ್ದರೂ ಅವರು ಅತಿಥಿ ಶಿಕ್ಷಕರು, ಅವರಿಗೆ ತರಬೇತಿ ಇಲ್ಲ. ”ಇತ್ಯಾದಿ, ಇತ್ಯಾದಿ. ಇದರಲ್ಲಿ ಕೆಲವು ದೂರುಗಳು ಸತ್ಯವೂ ಇವೆ. ಇನ್ನು ಪೋಷಕರಿಗೆ ಕೇಳಿದರೆ: ಕನ್ನಡ ಕಲಿತೇನು ಪ್ರಯೋಜನ? ಇಂಗ್ಲಿಷ್ ಚೆನ್ನಾಗಿ ಕಲಿತರೆ ಜೀವನಕ್ಕೆ ಆಧಾರವಾದರೂ ಆದೀತು” ಇತ್ಯಾದಿ. ಶಿಕ್ಷಣ ಇಲಾಖೆಗೆ ಕೇಳಿದರೆ: “ಹೆಚ್ಚಿನ ಶಿಕ್ಷಕರು ಸೋಮಾರಿಗಳು, ಸರಿಯಾಗಿ ಕಲಿಸುವುದಿಲ್ಲ. ಹೀಗಾಗಿ ಫಲಿತಾಂಶ ಕಡಿಮೆ ಬರುತ್ತದೆ. ಈ ಬಾರಿ ಅವರಿಗೆ ಸರಿಯಾಗಿ ಎಚ್ಚರಿಕೆ ನೀಡಿದ್ದೇವೆ. ’ಹೇಗಾದರೂ ಮಾಡಿʼ ಕನ್ನಡದಲ್ಲಿಯೂ ಪಾಸಾಗುವಂತೆ ಮಾಡಬೇಕು, ಇಲ್ಲವಾದರೆ….” ಎನ್ನುತ್ತದೆ. ಕೆಲವು ಪ್ರಾಮಾಣಿಕ ಶಿಕ್ಷಕರು ಈ “ಹೇಗಾದರೂ..” ಎನ್ನುವುದು ಇದೆಯಲ್ಲ, ಅದು ಯಾವುದು? ಅದು ಯಾವ ಅಂಗಡಿಯಲ್ಲಿ ಸಿಗುತ್ತದೆ ಎಂಬ ಹುಡುಕಾಟದಲ್ಲಿ ತೊಡಗುತ್ತಾರೆ.

ಅಂತೂ ಇನ್ನೊಂದು ಒಂದೂವರೆ ಲಕ್ಷ ಬಡ ವಿದ್ಯಾರ್ಥಿಗಳು 2025-26ರ ಸಾಲಿನಲ್ಲಿಯೂ ಕನ್ನಡದಲ್ಲಿ (ಹೀಗಾಗಿ ಒಟ್ಟಾರೆ ಎಸ್.ಎಸ್.ಎಲ್.ಸಿ.ಯಲ್ಲಿ) ಫೇಲಾಗಲು ಸಿದ್ಧವಾಗುತ್ತಿದ್ದಾರೆ.

ಪ್ರಥಮ ತರಗತಿಯಲ್ಲಿಯೇ ಸೋಲಿನ ನಾಂದಿ

ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದ ಬಿಸಿ ಖಾಸಗೀ ಶಾಲೆಗಳಿಗೂ ತಟ್ಟಿದೆ. ಅದರಲ್ಲೂ ವಿಶಿಷ್ಟವಾಗಿ ಇಂಗ್ಲಿಷ್/ಉರ್ದು ಮಾಧ್ಯಮದ ಶಾಲೆಗಳು, ಅದರಲ್ಲೂ ವಿಶಿಷ್ಟವಾಗಿ ಉರ್ದು ಮಾತೃಭಾಷೀಯ ಮಕ್ಕಳು ಫೇಲಾಗುತ್ತಿರುವ ವಿಚಾರ. ಕೆಲವು ಮುಸ್ಲಿಮ್ ಮ್ಯಾನೇಜ್ಮೆಂಟಿನ ಶಿಕ್ಷಣ ಸಂಸ್ಥೆಗಳು ಸಹಾಯಕ್ಕಾಗಿ ಹುಡುಕಾಡಿದಾಗ ಅದು ಹೇಗೋ ನನ್ನ ಹೆಸರು ಅವರಿಗೆ ಸಿಕ್ಕಿತು. ನಮ್ಮ ಸರ್ವೋಯದ ಕರ್ನಾಟಕ ಸಮೂಹದ ಸಹಸದಸ್ಯರಲ್ಲಿ ಒಬ್ಬರಾದ ಮಹಿಮಾ ಪಟೇಲರ ಮೂಲಕ ದಾವಣಗೆರೆಯ ’ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆʼ ಎಂಬ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಸಯ್ಯದ್ ಸೈಫುಲ್ಲಾಅವರ ಪರಿಚಯವಾಯಿತು. ಇದೆಲ್ಲದರ ಫಲವಾಗಿ ಸೆಪ್ಟೆಂಬರ್ 10 ಮತ್ತು 11ರಂದು ಒಂದು ಕಾರ್ಯಶಿಬಿರವನ್ನು ನಾನು ದಾವಣಗೆರೆಯಲ್ಲಿ ನಡೆಸಿದೆ.

WhatsApp Image 2025 09 25 at 6.35.59 PM2

ಶಿಕ್ಷಣ ಇಲಾಖೆಯ ಪರಿಕಲ್ಪನೆಯ ಪ್ರಕಾರ ಕನ್ನಡದಲ್ಲಿ ಮೂಲ ಸಾಕ್ಷರತೆಯನ್ನು, ಎಂದರೆ, ಕನ್ನಡ ಮೂಲಾಕ್ಷರಗಳು, ಗುಣಿತಾಕ್ಷರಗಳು ಮತ್ತು ಒತ್ತಕ್ಷರಗಳ ಓದು ಮತ್ತು ಬರಹವನ್ನು, ಪ್ರಥಮ ತರಗತಿಯಲ್ಲಿಯೇ ಪರಿಪೂರ್ಣಗೊಳಿಸಬೇಕು ಎಂದಿದೆ. ಮುಂದಿನ ತರಗತಿಗೆ ಬರುವ ಮಕ್ಕಳಿಗೆ ಈಗಾಗಲೇ ಕನ್ನಡದ ಓದು, ಬರಹ ಬರುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಆದ್ದರಿಂದ ಕನ್ನಡ ಪಾಠಗಳು ಅಲ್ಲಿಂದ ಮುಂದುವರೆಯುತ್ತದೆ. ಮೂಲ ಓದು ಬರಹದ ಕಲಿಕೆಯು ಪ್ರಾಥಮಿಕ ತರಗತಿಯಲ್ಲಿ ಗಟ್ಟಿಯಾಗಿದ್ದರೆ, ಕನ್ನಡಲ್ಲಿ ಏನೇ ಕೊಟ್ಟರೂ ಓದಲು, ತಮಗೆ ಗೊತ್ತಿರುವ ಏನನ್ನಾದರೂ ಸರಿ, ಕನ್ನಡದಲ್ಲಿ ಬರೆಯುವುದನ್ನು ಮಕ್ಕಳು ಕಲಿತಿರಬೇಕಾಗುತ್ತದೆ. ಇದು ಆಗಿರದೇ ಇದ್ದರೆ, ಎರಡನೆಯ ತರಗತಿಯಲ್ಲಿನ ಮುಂದುವರೆದ ಕಲಿಕೆಯಲ್ಲಿ ಸಾಕ್ಷರತೆಯಲ್ಲಿನ ಅಂತರ ಉಳಿದು ಬಿಡುತ್ತದೆ.

ಎರಡನೆಯ ತರಗತಿಯಲ್ಲಿ ಪುನರ್ಮನನ ಎಂಬ ಒಂದು ಭಾಗ ಇದ್ದರೂ, ಮೂಲ ಸಾಕ್ಷರತೆಯಲ್ಲಿ ಇರಬಹುದಾದ ಅಂತರವನ್ನು ತುಂಬುವಷ್ಟು ಬೋಧನೆಗೆ ಸಮಯಾವಕಾಶ ಇರುವುದಿಲ್ಲ. ಹೀಗಾಗಿ, ಇಂಥ ಮಕ್ಕಳಲ್ಲಿ ಕನ್ನಡ ಓದು-ಬರಹದಲ್ಲಿ ಉಂಟಾಗಿರುವ ಕಂದಕವು ಉಳಿದು ಬಿಡುತ್ತದೆ, ತರಗತಿಯಿಂದ ತರಗತಿಗೆ ಮುಂದುವರೆದ ಹಾಗೆ ಈ ಕಂದಕವು ಭೀಕರ ರೀತಿಯಲ್ಲಿ ಬೆಳೆಯುತ್ತದೆ. ಹೀಗಾಗಿ: ಹತ್ತನೇ ತರಗತಿಗೆ ಬಂದರೂ ಕೆಲವು ಮಕ್ಕಳಿಗೆ ಕನ್ನಡದಲ್ಲಿ ಕಾಗುಣಿತ ಒತ್ತಕ್ಷರ ಓದಲು/ಬರೆಯಲು ಬರುವುದಿಲ್ಲ ಎಂಬುದು ಹಲವು ಸಲ ಕೇಳಿದ ಹಳೆಯ ಹಾಡು.

ಪಠ್ಯಪುಸ್ತಕಗಳುಶಿಕ್ಷಕರುಅಸಮಂಜಸತೆ

ನಾನು ಕನ್ನಡ ಶಿಕ್ಷಕರಿಗಾಗಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವುದರ ಕುರಿತು ಹಲವಾರು ಕಾರ್ಯಶಿಬಿರಗಳನ್ನು ನಡೆಸಿದ್ದೇನೆ. ಅಲ್ಲೆಲ್ಲಾ ನಾನು. ಆಲಿಸುವುದು, ಮಾತಾಡುವುದು, ಓದುವುದು, ಬರೆಯುವುದು ಎಂಬ ಭಾಷಾ ಕೌಶಲಗಳ ಮಹತ್ವ, ಅವುಗಳನ್ನು ಕಲಿಸುವ ಅನುಕ್ರಮ, ಕನ್ನಡದ ವರ್ಣಮಾಲೆಯ ವಿನ್ಯಾಸದಲ್ಲಿ ಕಂಡುಬರುವ ಅಚ್ಚರಿ ಮೂಡಿಸುವ ತಾರ್ಕಿಕತೆ, ಓದು ಮತ್ತು ಬರಹವನ್ನು ಪರಿಣಾಮಕಾರಿಯಾಗಿ ಕಲಿಸಲು ನಾನು ರೂಪಿಸಿಕೊಂಡಿರುವ ವಿಶಿಷ್ಟ ವಿಧಾನ-ಇತ್ಯಾದಿಗಳ ಪಿಪಿಟಿ, ವೀಡಿಯೋ, ಸಂವಾದ ಇತ್ಯಾದಿಗಳ ಮೂಲಕ ಶಿಬಿರಗಳನ್ನು ನಡೆಸಿದ್ದೇನೆ. ಆದರೆ, ಈ ಬಾರಿ ನನಗೆ ಅದು ಸಾಲದೇನೋ ಎನ್ನುವ ಅನುಮಾನ ಪ್ರಾಮಾಣಿಕವಾಗಿ ಕಾಡಿತು.

WhatsApp Image 2025 09 25 at 6.35.59 PM3

ಪ್ರಾಥಮಿಕ ತರಗತಿಯಲ್ಲಿಯೇ ಕನ್ನಡದಲ್ಲಿ ಮೂಲ ಓದು-ಬರಹದ ಬುನಾದಿ ಬೀಳಬೇಕು ಎಂಬ ನಿರೀಕ್ಷೆ ಇರುತ್ತವೆ. ಅದಕ್ಕೆ ಪೂರಕವಾಗಿ ಒಂದು ಪಠ್ಯಪುಸ್ತಕ ಇರುತ್ತದೆ. ಶಿಕ್ಷಕರು ಅದನ್ನು ಆಧರಿಸಿ ಬೋಧನೆ ಮಾಡಬೇಕು, ಮಕ್ಕಳೂ ಅದೇ ಪಠ್ಯಪುಸಕವನ್ನು ಇಟ್ಟುಕೊಂಡು ಕಲಿಯಬೇಕು ಎಂಬ ವ್ಯವಸ್ಥೆ ಇರುತ್ತದೆ. ನಾನು ಈ ಪಠ್ಯ ಪುಸ್ತಕಗಳನ್ನು ಸರಿಯಾಗಿ ನೋಡಿರಲಿಲ್ಲ. ಇದು ತಪ್ಪು ಎನ್ನಿಸಿ. ಈ ಬಾರಿ, ದಾವಣಗೆರೆಯ ಕಾರ್ಯಶಿಬಿರಕ್ಕೆ ಮುಂಚೆ ಕನ್ನಡದ ಆರಂಭಿಕ ಹಂತದ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘ ವೆಬ್‌ಸೈಟಿನಿಂದ ಡೌನ್ ಲೋಡ್ ಮಾಡಿಕೊಂಡು (ಸರಕಾರದ ಎಲ್ಲಾ ಪಠ್ಯಪುಸ್ತಕಗಳನ್ನು ಇಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು) ಅಧ್ಯಯನ ಮಾಡಿದೆ.

ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತದೆ. ಸಾಮಾನ್ಯವಾಗಿ ಕನ್ನಡ ಮನೆ ಮಾತಿನ ಹಿನ್ನೆಲೆಯಿಂದ ಬರುವ ಮಕ್ಕಳಿಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಬೋಧಿಸಲಾಗುತ್ತದೆ. ಕನ್ನಡೇತರ ಮಾತೃಭಾಷೆಗಳ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತದೆ.

ಪ್ರಥಮ ಭಾಷೆಯಾಗಿ: ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವಾಗ ಮೊದಲ ತರಗತಿಯಲ್ಲಿರುವ ಮಕ್ಕಳು ಹೆಚ್ಚಿನವರು ಕನ್ನಡ ಮನೆ ಮಾತುಗಳಿಂದ ಬಂದವರು ಎಂಬ ಪೂರ್ವಕಲ್ಪನೆ ಇರುತ್ತದೆ. ಹೀಗಿದ್ದಾಗಲೂ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು. ಇಡೀ ರಾಜ್ಯದಲ್ಲಿ ಮಾತಾಡುವುದ ಕನ್ನಡವನ್ನು ’ಕನ್ನಡ’ ಎಂಬ ಒಂದೇ ಹೆಸರಿನಿಂದ ಗುರುತಿಸುವುದಾದರೂ, ಎಲ್ಲರೂ ಮಾತಾಡುವುದು ಒಂದೇ ತರಹದ ಭಾಷೆಯಲ್ಲ. ಮನೆ ಮಾತುಗಳು ಎಷ್ಟೊಂದು ಭಿನ್ನವಾಗಿರುತ್ತವೆ ಎಂದರೆ, ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಮಾತಾಡುವ ಕನ್ನಡವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರಿಗೆ 40% ಕೂಡ ಅರ್ಥವಾಗದೇ ಇರಬಹುದು. ಹಾಗೆಯೇ, ಮಂಡ್ಯ ಜಿಲ್ಲೆಯ ಪಾಂಡವಪುರದವರು ಮಾತಾಡುವ ಕನ್ನಡವು ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರಿಗೆ ಅರ್ಥವಾಗುವುದಿಲ್ಲ. ಈ ರೀತಿಯ ವೈವಿಧ್ಯವೇ ಕನ್ನಡ ಭಾಷೆಯ ಜೀವಂತಿಕೆ, ಶ್ರೀಮಂತಿಕೆಯ ಲಕ್ಷಣ.

ಆದರೆ, ಶಾಲೆಗಳಲ್ಲಿ ಓದು-ಬರಹದಲ್ಲಿ ಕನ್ನಡ ಕಲಿಕೆಯನ್ನು ಮುಂದುವರೆಸಿ, ಅದರ ಮೂಲಕ ವಿವಿಧ ವಿಷಯಗಳನ್ನು ಕಲಿಯಲು ಮಕ್ಕಳನ್ನು ಸಜ್ಜುಗೊಳಿಸುವಾಗ ನಾವು ಇಂಥ ಪ್ರಾದೇಶಿಕ ಮನೆಮಾತುಗಳನ್ನು ಪರಿಗಣಿಸುವುದಿಲ್ಲ. ಮೊದಲ ತರಗತಿಯಿಂದಲ್ಲೇ, ಎಲ್ಲಾ ಬಗೆಯ ಪ್ರಾದೇಶಿಕ ಭಾಷೆಗಳಿಗೆ ಸಮಾನವಾದ, ಸಾರ್ವತ್ರಿಕವಾದ ಒಂದು ಬಗೆಯ ’ಗ್ರಂಥಸ್ಥ’, ’ಶಾಲಾ ಕನ್ನಡ’ವನ್ನು ಅಳವಡಿಸಿಕೊಳ್ಳಲಾಗುತ್ತದೆ.

ಹೀಗಾಗಿ, ಕನ್ನಡ ಮಾತೃಭಾಷೆಯ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕನ್ನಡ ಓದು-ಬರಹವನ್ನು ಕಲಿಸುವ ಮುಂಚೆ ’ಶಾಲಾ ಕನ್ನಡ’ದಲ್ಲಿ ಆಲಿಸುವ ಮತ್ತು ಮಾತಾಡುವ ಕೌಶಲವನ್ನು ರೂಢಿಸಬೇಕಾಗುತ್ತದೆ. ಅದರ ಆಧಾರದ ಮೇಲೆಯಷ್ಟೇ ’ಶಾಲಾ ಕನ್ನಡ’ದಲ್ಲಿ ಓದುವುದು ಮತ್ತು ಬರೆಯುವುದನ್ನು ಕಲಿಸಬೇಕಾಗುತ್ತದೆ. ಆದರೆ, ಈ ಒಂದು ಅಂಶವನ್ನು ಒಂದನೇ ತರಗತಿಯ ಪಠ್ಯಪುಸ್ತಕದಲ್ಲಿ ಸರಿಯಾಗಿ ಪರಿಗಣಿಸಲಾಗಿಲ್ಲ.

WhatsApp Image 2025 09 25 at 6.35.59 PM4

ಪ್ರಾಥಮಿಕ ಶಾಲೆಯ ಮೊದಲ ತರಗತಿಗೆ ’ಸವಿ ಕನ್ನಡ ಭಾಗ-1 ಮತ್ತು ಭಾಗ-” ಎಂಬ ಪಠ್ಯವನ್ನು ಒಂದು ವರ್ಷಕ್ಕಾಗಿ ನಿಗದಿಪಡಿಸಲಾಗಿದೆ. ಇದರಲ್ಲಿ ಮೊದಲ ಏಳು ಪಾಠಗಳನ್ನು ಪುಸ್ತಕದ ಕನ್ನಡದಲ್ಲಿ ಆಲಿಸುವ ಮಾತಾಡುವ ಕೌಶಲವನ್ನು ರೂಢಿಸುವ ಉದ್ದೇಶವಿದೆ. ಇಲ್ಲಿ, ಚಿತ್ರಗಳನ್ನು ತೋರಿಸಿ, ಸಂಭಾಷಣೆ ನಡೆಸುವುದು, ಕಥೆಯನ್ನು ಹೇಳಿ ಮಾತುಕತೆಗೆ ತೊಡಗಿಸುವುದು, ಪದ್ಯವನ್ನು ರಾಗ, ಲಯಬದ್ಧವಾಗಿ ಹೇಳಿ, ಮಕ್ಕಳ ಕೈಯಲ್ಲಿ ಹೇಳಿಸುವುದು-ಇತ್ಯಾದಿ ಅಭ್ಯಾಸಗಳಿವೆ. ಇಲ್ಲಿ ಪಠ್ಯದಿಂದ ಓದು ಎಲ್ಲಾ ಕಾರ್ಯವನ್ನು ಶಿಕ್ಷಕರೇ ಮಾಡುತ್ತಾರೆ; ಮಕ್ಕಳೇನಿದ್ದರೂ ಶಿಕ್ಷಕರು ಹೇಳಿದ್ದನ್ನು ಪುನರುಚ್ಚರಿಸುವುದು, ಕೇಳಿದ ಪ್ರಶ್ನೆಗಳಲ್ಲಿ ಶಾಲಾ ಕನ್ನಡದಲ್ಲಿ ಉತ್ತರಿಸುವುದು ಇತ್ಯಾದಿ ಚಟುವಟಿಕೆ ಇರುತ್ತವೆ.

ಇಷ್ಟು ತಯಾರಿಯ ನಂತರವೇ ಮಕ್ಕಳಿಗೆ ಕನ್ನಡ ಮೂಲಾಕ್ಷರಗಳನ್ನು ಕಲಿಸುವ ಪಾಠಗಳು ಆರಂಭವಾಗುತ್ತವೆ. ಇಲ್ಲಿಯೂ ಮೂಲಾಕ್ಷರಗಳನ್ನು ವರ್ಣಮಾಲಾ ಪದ್ಧತಿಯಲ್ಲಿ ಕಲಿಸದೇ, ಹೆಚ್ಚು ಪರಿಣಾಮಕಾರಿಯಾದ ’ರೂಪಸಾಮ್ಯ ಪದ್ಧತಿ’ಯ ಮೂಲಕ ಕಲಿಸಲಾಗುತ್ತದೆ. ಪಾಠ 8ರಲ್ಲಿ, ಅಕ್ಷರಾಭ್ಯಾಸ 1ರಿಂದ 10ರ ವರೆಗೆ ಕನ್ನಡ ಅಷ್ಟೂ 49 ಮೂಲಾಕ್ಷರಗಳನ್ನು ಕಲಿಸಲಾಗುತ್ತದೆ. ಇದನ್ನು ಅನೇಕ ಬಗೆಯ ಓದುವ ಮತ್ತು ಬರೆಯುವ ಅಭ್ಯಾಸಗಳ ಮೂಲಕ ಕಲಿಸುವ ಪ್ರಯಾಸ ಇಲ್ಲಿದೆ.

ಇನ್ನು, ಎರಡನೆಯ ಅರ್ಧವಾರ್ಷಿಕದಲ್ಲಿ ಆರಂಭವಾಗುವ, ಸವಿ ಕನ್ನಡ 1 (ಭಾಗ 2)ರಲ್ಲಿ, ಹಿಂದಿನ ಭಾಗದಲ್ಲಿ ಕಲಿತ ಅಂಶಗಳನ್ನು ನೆನಪಿಸಿಕೊಳ್ಳಲು ಅನುಕೂಲವಾಗುವಂತೆ ಪಾಠ 9 ಇದೆ. ನಂತರ, ಪಾಠ 10ರಲ್ಲಿ ಗುಣಿತಾಕ್ಷರಗಳು 1ರಿಂದ 4ರಲ್ಲಿ, ಕ,ಕಾ… ಇತ್ಯಾದಿ ಎಲ್ಲಾ ಗುಣಿತಾಕ್ಷರಗಳನ್ನು ಕ-ದಿಂದ ಳ-ವರೆಗಿನ ಎಲ್ಲಾ ವ್ಯಂಜನಗಳೊಂದಿಗೆ ಬಳಸುವುದನ್ನು ಕಲಿಸಲಾಗುತ್ತದೆ.

ಪಾಠ 11ರಲ್ಲಿ ಈ ವರೆಗೆ ಕಲಿತಿರುವ ಅಲ್ಲಾ ಮೂಲಾಕ್ಷರ ಮತ್ತು ಗುಣಿತಾಕ್ಷರಗಳನ್ನು ವಿವಿಧ ಸಂಯೋಜನೆಯಲ್ಲಿ ಮತ್ತೊಮೆ ಓದಿ, ಬರೆದು ಅಭ್ಯಾಸ ಮಾಡಲಾಗುತ್ತದೆ. ಇಲ್ಲಿಂದ ಮುಂದೆ ಪಾಠದಲ್ಲಿರುವ ಮಾಹಿತಿಯನ್ನು ಗ್ರಹಿಸುವುದು ಮತ್ತು ಅದನ್ನು ಆಧರಿಸಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ.

ಪಾಠ 12ರಲ್ಲಿ, ಹಿಂದಿನ ವಿಧಾನವನ್ನೇ ಅನುಸರಿಸಿ, ಒತ್ತಕ್ಷರಗಳನ್ನು ಕಲಿಸಲಾಗುತ್ತದೆ. ಒತ್ತಕ್ಷರ 1ರಿಂದ 5ರವರೆಗೆ ಎಲ್ಲಾ ಒತ್ತಕ್ಷರಗಳನ್ನು ಕಲಿಸಲಾಗುತ್ತದೆ.

ನಂತರ ಪಾಠ 13ರಿಂದ 17ರವರೆಗೆ ಪದ್ಯ, ಗದ್ಯ, ಅದರಲ್ಲೂ ಕಥೆ, ಸಂಭಾಷಣೆ ಇತ್ಯಾದಿ ಪ್ರಕಾರಗಳನ್ನು ಬಳಸಿ ಈ ವರೆಗೆ ಕಲಿತ ಮೂಲಾಕ್ಷರ, ಗುಣಿತಾಕ್ಷರ ಮತ್ತು ಒತ್ತಕ್ಷರಗಳನ್ನು ಹದವಾದ ವಿಶ್ರಣದಲ್ಲಿ ಬೆರೆಸಿ ಬರೆದ ಪಾಠಗಳಿವೆ. ಇಲ್ಲಿ ಮೂಲ ಸಾಕ್ಷರತೆ ಗಟ್ಟಿಯಾಗುತ್ತದೆ. ಹಾಗೆಯೇ, ಪಾಠಗಳನ್ನು ಬಳಸಿ ಕನ್ನಡ ಮಾಧ್ಯದಲ್ಲಿ ಕಲಿಸುವ ’ವಿಷಯ’ಗಳಲ್ಲಿ ಮಾಹಿತಿಯನ್ನೂ ಗ್ರಹಿಸಿ, ಮುಂದೆ ವ್ಯಾಕರಣ, ಛಂದಸ್ಸನ್ನೂ ಕಲಿಯುವಷ್ಟು, ಪರೀಕ್ಷೆಗಳಲ್ಲಿ ಕೊಟ್ಟ ಪ್ರಶ್ನೆಗಳಿಗೆ ಉತ್ತರ ಬರೆಯುವಷ್ಟು ಮೂಲ ಸಾಮರ್ಥ್ಯವನ್ನು ಮಕ್ಕಳು ಪಡೆಯುತ್ತಾರೆ ಎಂಬ ನಿರೀಕ್ಷೆ ಇರುತ್ತದೆ. ಅದಕ್ಕೆ ತಕ್ಕ ಹಾಗೆ ಪಠ್ಯ ಪುಸ್ತಕದ ವಿನ್ಯಾಸ, ರಚನೆ ಇದೆ.

ಇಷ್ಟು ಓದು ಬರಹವನ್ನು ಕಲಿಸಲು, ಒಂದಿಡೀ ವರ್ಷದಲ್ಲಿ, ಒಟ್ಟು 170 ಅವಧಿಗಳ (ಪೀರಿಯಡ್)ಗಳ ಅವಕಾಶವಿರುತ್ತದೆ. ಆದರೂ, ಕನ್ನಡದ ಮೂಲಾಕ್ಷರ, ಗುಣಿತಾಕ್ಷರ ಮತ್ತು ಒತ್ತಕ್ಷರಗಳನ್ನು ಕಲಿಸಿ, ಸರಳವಾದ ಓದುಬರಹವನ್ನು ಕಲಿಸಲು ಸಾಧ್ಯವಾಗುವುದಿಲ್ಲ ಎಂದರೆ ಹೇಗೆ? ಮುಂದಿನ ತರಗತಿಗಳಲ್ಲಿ ಈ ಮಕ್ಕಳಿಗೆ ಕಾಗುಣಿತ, ಒತ್ತಕ್ಷರ ಓದಲು ಬರುವುದಿಲ್ಲ ಎಂದು ಹೇಳುವುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?

ಇಲ್ಲಿ, ಇನ್ನೊಂದು ಆಯಾಮ ಗಮನಕ್ಕೆ ಬರುತ್ತದೆ. ಕನ್ನಡದ ಮನೆಮಾತಿನಿಂದ ಬಂದ ಮಕ್ಕಳು ಒಂದು ವರ್ಷದಲ್ಲಿ ನಿಗದಿತ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಮುಂದೆ ಬಹುಶಃ ಈ ಮಕ್ಕಳು ಕನ್ನಡ ಪಠ್ಯ ಮತ್ತು ಕನ್ನಡ ಮಾಧ್ಯಮದಲ್ಲಿ ಇತರ ವಿಷಯಗಳನ್ನೂ ಕಲಿತು, ಎಸ್.ಎಸ್.ಎಲ್.ಸಿ.ಯಲ್ಲಿ ಪಾಸಾಗುವ ಮಕ್ಕಳ ಗುಂಪಿನಲ್ಲಿರಬಹುದು..

ಆದರೆ, ಪ್ರಥಮ ಭಾಷೆಯಾಗಿ ಕನ್ನಡದ ತರಗತಿಗಳಿಗೆ ಸೇರುವುದು ಆಯ್ಕೆ ಅಥವಾ ಅನಿವಾರ್ಯವಾಗುವ, ಕನ್ನಡೇತರ (ಮುಖ್ಯವಾಗಿ ಉರ್ದು, ಮರಾಠಿ, ಬಂಜಾರ ಇತ್ಯಾದಿ ಮನೆ ಮಾತುಗಳಿಂದ ಬಂದ) ಮಕ್ಕಳಿಗೆ ಈ ಪಠ್ಯಕ್ರಮ ಸಮಂಜಸವಾಗಿರುವುದಿಲ್ಲ. ಪಠ್ಯಪುಸ್ತಕದ ಮೊದಲ 7 ಪಾಠಗಳಲ್ಲಿ ಕನ್ನಡ ಮಾತೃಭಾಷೀಯರನ್ನು ಮನೆಮಾತುಗಳಿಂದ ಶಾಲಾ ಕನ್ನಡಕ್ಕೆ ತರುವುದು ಅಷ್ಟರ ಮಟ್ಟಿಗೆ ಸುಲಭ. ಆದರೆ, ಕನ್ನಡೇತರ ಮಕ್ಕಳು ಕೆಲವೊಮ್ಮೆ ಕನ್ನಡವನ್ನು ಸ್ವಲ್ಪವೂ ಕಲಿತಿರುವುದಿಲ್ಲ. ಹೀಗೆ ಕನ್ನಡವನ್ನು ಆಲಿಸಲು, ಮಾತಾಡಲೂ ಭಾರದ ಮಕ್ಕಳಿಗೆ ಕನ್ನಡವನ್ನು ಮತ್ತು ಮುಂದುವರೆದು ಶಾಲಾ ಕನ್ನಡವನ್ನು ಕಲಿಸಲು ಮೊದಲ ಏಳು ಪಾಠಗಳು ಸೂಕ್ತವಾಗಿಲ್ಲ, ಮತ್ತು ಸಾಕಾಗುವುದೂ ಇಲ್ಲ.

ಕನ್ನಡ ಓದು ಮತ್ತು ಬರಹವನ್ನು ಕಲಿಸಲು ಆಲಿಸುವ/ಮಾತಾಡುವ ಗಟ್ಟಿ ಬುನಾದಿ ಬೇಕಾಗುತ್ತದೆ. ಮೇಲೆ ಹೇಳಿದ ರೀತಿಯ ಕನ್ನಡೇತರ ಮಕ್ಕಳಿಗೆ ಈ ರೀತಿಯ ಬುನಾದಿಯೇ ಇರುವುದಿಲ್ಲ. ಇಂಥ ದುರ್ಬಲ ಬುನಾದಿಯ ಮೇಲೆ ಮುಂದಿನ ಸಾಕ್ಷರತೆಯ ಕಲಿಕೆ ಕಠಿಣವಾಗುತ್ತದೆ. ಅಪೂರ್ಣವಾಗುತ್ತದೆ. ವರ್ಷದ ಕೊನೆಯಲ್ಲಿ ಮೂಲ ಓದು ಬರಹ, ಮುಖ್ಯವಾಗಿ ಕಾಗುಣಿತ, ಒತ್ತಕ್ಷರ ಚೆನ್ನಾಗಿ ಮನನ ಆಗಿರುವುದಿಲ್ಲ. ಇಂಥ ಸ್ಥಿತಿಯಲ್ಲಿ ಅವರು ಮುಂದಿನ ತರಗತಿಗೆ ಹೋಗಿಬಿಟ್ಟರೆ ಅವರ ’ಗೊತ್ತಿಲ್ಲದರ’ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಹೋಗಿ, ಸಾರ್ವತ್ರಿಕ ಪರೀಕ್ಷೆ ಬರೆಯಬೇಕಾದ ಎಸ್.ಎಸ್.ಎಲ್.ಸಿ. ಹೊತ್ತಿಗೆ ಅವರು ಕನ್ನಡದಲ್ಲಿ ಕನಿಷ್ಠ ಅಂಕವನ್ನೂ ತರುವುದರಲ್ಲಿ ವಿಫಲರಾಗುತ್ತಾರೆ.

ಇದಕ್ಕೆ ಎರಡು ಬಗೆಯ ಪರಿಹಾರಗಳಿವೆ. ಕನ್ನಡೇತರ ಮಕ್ಕಳು ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳಬಾರದು. ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳಬೇಕು. ಆಗ ಅವರು ಮೂಲ ಸಾಕ್ಷರತೆಯನ್ನು ಕಲಿತು ಮುಂದೆ ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ.

WhatsApp Image 2025 09 25 at 6.35.59 PM5

ಇನ್ನು ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಕಲಿಯುವ/ಕಲಿಸುವ ಸನ್ನಿವೇಶವನ್ನು ಸಂಕ್ಷಿಪ್ತವಾಗಿ ತಿಳಿಯೋಣ. ಸಾಮಾನ್ಯವಾಗಿ ಕನ್ನಡೇತರ ಮಕ್ಕಳು ಇದರಲ್ಲಿ ಸೇರುತ್ತಾರೆ. ಮೊದಲು ಅವರಿಗೆ ಕನ್ನಡವನ್ನು ಆಲಿಸುವ ಮತ್ತು ಮಾತಾಡುವ ಕೌಶಲವನ್ನು ಸಾಕಷ್ಟು ಚೆನ್ನಾಗಿ, ವಿಸ್ತಾರವಾಗಿ ಕಲಿಸಬೇಕಾಗುತ್ತದೆ. ಏಕೆಂದರೆ, ಕನ್ನಡ ಈ ಸಾಮರ್ಥ್ಯದಿಂದಲೇ ಅವರು ಮುಂದಿನ ತರಗತಿಗಳಲ್ಲಿ ಹೆಚ್ಚಿನ ಪದ್ಯ, ಗದ್ಯಗಳನ್ನು ಕಲಿಯಬೇಕಾಗುತ್ತದೆ.

ಇದನ್ನೂ ಓದಿ ಕಾಲಮಾನ | ದಸರಾ ಉತ್ಸವ; ಭಿನ್ನ ಆಚರಣೆಗಳು, ನೋಟಗಳು

ದ್ವಿತೀಯ ಭಾಷೆಯಾಗಿ ಕನ್ನಡದಲ್ಲಿ ಕನ್ನಡ ಆಲಿಸುವ ಮತ್ತು ಮಾತಾಡುವ ಕೌಶಲಗಳ ಜೊತೆ, ಮೂಲಾಕ್ಷರ, ಗುಣಿತಾಕ್ಷರ ಮತ್ತು ಒತ್ತಕ್ಷರವನ್ನು ಓದುವ ಬರೆಯುವ ಕೌಶಲವನ್ನು ಗಟ್ಟಿಯಾಗಿಸಿಕೊಳ್ಳಲು ಒಟ್ಟು ಮೂರು ವರ್ಷಗಳ ಅವಕಾಶವಿರುತ್ತದೆ. ಕಲಿ ಕನ್ನಡ 1, 2 ಮತ್ತು 3 ಎಂಬ ಪಠ್ಯಪುಸ್ತಕಗಳಿವೆ. ಇವುಗಳನ್ನು ಕಲಿಸಲು ಶಿಕ್ಷಕರಿಗೆ (130+130+160) ಒಟ್ಟು 420 ಪೀರಿಯಡ್ಗಳಷ್ಟು ಸಮಯವಿರುತ್ತದೆ. ಇದು ಉದ್ದೇಶಿತ ಕಲಿಕೆಗೆ ಬೇಕಾದಷ್ಟು ಅವಧಿಯಾಗಿದೆ. ಆದರೆ ಶಿಕ್ಷಕರಿಗೆ ಪಠ್ಯಪುಸ್ತಕಗಳ ವಿನ್ಯಾಸ, ಅವುಗಳ ಉದ್ದೇಶ ಸರಿಯಾಗಿ ಮನನವಾಗದೇ, ಅವರ ಬೋಧನಾ ವಿಧಾನವವು ದುರ್ಬಲವಾಗಿದ್ದು. ಇದರ ಮೂಲಕ ಹಾದುಹೋಗುವ ಮಕ್ಕಳು ಮುಂದಿನ ತರಗತಿಗಳಲ್ಲಿ ಕನ್ನಡದಲ್ಲಿ ಬಹಳ ಕಡಿಮೆ ಅಂಕಗಳನ್ನು ಪಡೆಯುವುದು ಮುಂದುವರೆಯುತ್ತಾ ಹೋಗುತ್ತದೆ. ಕೊನೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫೇಲಾಗುವವರು ಇವರೇ.

ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಘಟ್ಟವಾದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಪತ್ರಿಕೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಫೇಲಾಗುತ್ತಿರುವುದಕ್ಕೆ ಶಿಕ್ಷಕರು, ಇಲಾಖೆ, ಪೋಷಕರು ಎಲ್ಲರೂ ಜವಾಬ್ದಾರರು. ಕೇವಲ ಮಕ್ಕಳಿಗೆ ಆಸಕ್ತಿ ಇಲ್ಲ ಎಂಬ ನೆಪಹೇಳಿ ಕೈತೊಳೆದುಕೊಳ್ಳುವುದು ಬೇಜವಾಬ್ದಾರಿಯಾಗುತ್ತದೆ. ಆದರಿಂದ ಸಂಬಂಧಪಟ್ಟ ಎಲ್ಲರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.

WhatsApp Image 2025 11 17 at 4.13.46 PM
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...