ನುಡಿಯಂಗಳ | ಅತ್ಯಂತ ವೈಜ್ಞಾನಿಕವಾದ ಕನ್ನಡ ಬರಹ ವ್ಯವಸ್ಥೆ

Date:

ಈ ಲೇಖನದಲ್ಲಿ ನಾವು ಕನ್ನಡ ಭಾಷೆಯನ್ನು ಬರಹ ರೂಪದಲ್ಲಿಡಲು ಬಳಸಲಾಗುವ ಲಿಪಿ ವ್ಯವಸ್ಥೆಯ ಕುರಿತು ಕೆಲವು ಸ್ವಾರಸ್ಯಕರ ಅಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಅದೂ ಕನ್ನಡ ಓದು-ಬರಹ ಕಲಿಯುವುದು, ಕಲಿಸುವುದು ಎಷ್ಟು ಸುಲಭ ಎನ್ನುವ ನೆಲೆಗಟ್ಟಿನಲ್ಲಿ, ಈಗಾಗಲೇ ಗೊತ್ತಿರುವ ವಿಷಯಗಳಾದರೂ ಪುನರ್ಮನನ ಮಾಡಿಕೊಳ್ಳೋಣ.

ನಾವೆಲ್ಲಾ ಈಗ ನಮ್ಮ ನಮ್ಮ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತೇವೆ. ಈ ಮಾತನಾಡುವ ಭಾಷೆ ಮನುಷ್ಯರಲ್ಲಿ ವಿಕಾಸ ಹೊಂದಿದ್ದು ಸುಮಾರು 1,00,000 ವರ್ಷಗಳ ಹಿಂದೆ. ಈಗ ಜಗತ್ತಿನ ಸುಮಾರು 293 ಬರಹ ವ್ಯವಸ್ಥೆಗಳಲ್ಲಿ, ಸುಮಾರು 7000ಕ್ಕೂ ಹೆಚ್ಚು ಭಾಷೆಗಳಲ್ಲಿ ಮಿಲಿಯಗಟ್ಟಲೆ ಪುಸ್ತಕಗಳು, ಬಿಲಿಯಗಟ್ಟಲೆ ವಿವಿಧ ಬಗೆಯ ಬರಹಗಳು ಲಭ್ಯವಿರುವಾಗ, ಬರೆಯುವ ವ್ಯವಸ್ಥೆಗಳು ಅಭಿವೃದ್ಧಿ ಹೊಂದಿದ್ದೇ ಸುಮಾರು ಕ್ರಿ.ಪೂ.3,200 ಎಂದರೆ ಅಚ್ಚರಿಯಾಗುತ್ತದೆ, ಅಲ್ಲವೇ?
ಒಟ್ಟಾರೆ ಬರಹ ವ್ಯವಸ್ಥೆ, ಅದರಲ್ಲೂ ವಿಶಿಷ್ಟವಾಗಿ ಕನ್ನಡ ಭಾಷೆಯ ಬರಹ ವ್ಯವಸ್ಥೆಯ ಉಗಮ, ವಿಕಾಸ, ಇತಿಹಾಸದ ಕುರಿತು ಇನ್ನೊಮ್ಮೆ ಚರ್ಚಿಸೋಣವಂತೆ. ಇವತ್ತಿನ ನುಡಿಯಂಗಳದಲ್ಲಿ, ಕನ್ನಡ ಲಿಪಿ ವ್ಯವಸ್ಥೆಯ ಕುರಿತು ಪ್ರಚಲಿತವಾಗಿ ತಿಳಿದುಕೊಂಡರೆ ಪ್ರಯೋಜನಕಾರಿಯಾಗಿರುವ ವಿಚಾರಗಳನ್ನು ಚರ್ಚಿಸೋಣ.

ನಮಗೆ ಅನ್ನಿಸಿದ್ದನ್ನು ಮಾತಿನಲ್ಲಿ ಹೇಳಿದರೆ, ಅದು ಇದೀಗ ನಮ್ಮೆದುರು ಇರುವವರಿಗೆ ತಲುಪುತ್ತದೆ. ಇಲ್ಲಿ ಮತ್ತು ಈಗ ಇಲ್ಲದವರಿಗೆ ಅದನ್ನು ತಲುಪಿಸಬೇಕು ಎಂದರೆ ಮಾತನ್ನು ದಾಖಲಿಸಿಡಲು ಒಂದು ಲಿಪಿ ವ್ಯವಸ್ಥೆ ಬೇಕು. ಹೇಳುವವರು ಅದನ್ನು ಆ ಲಿಪಿಯಲ್ಲಿ ದಾಖಲಿಸಬೇಕು, ಎಂದರೆ, ಬರೆಯಬೇಕು, ಉಳಿದವರು ಅದನ್ನು ‘ಓದಿ’ ಅರ್ಥ ಮಾಡಿಕೊಳ್ಳಬೇಕು. ಎಂದರೆ, ಇಬ್ಬರಿಗೂ (ಅಥವಾ ಒಂದು ಭಾಷಾ ಸಮುದಾಯದ ಎಲ್ಲರಿಗೂ) ಆ ಲಿಪಿ ವ್ಯವಸ್ಥೆ ಸಮ್ಮತವಾಗಿರಬೇಕು.

2001ರ ಜನಗಣತಿಯ ಪ್ರಕಾರ ಭಾರತದಲ್ಲಿ 122 ಮುಖ್ಯ ಮತ್ತು 1599 ಇತರ ಮಾತಾಡುವ ಭಾಷೆಗಳಿವೆ. ಇವುಗಳನ್ನು ಒಟ್ಟು 25 ಲಿಪಿ ವ್ಯವಸ್ಥೆಗಳಲ್ಲಿ ಬರೆಯಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದ 14ರಲ್ಲಿ, 12 ಬರಹ ವ್ಯವಸ್ಥೆಗಳು ಬ್ರಾಹ್ಮಿ ಎಂಬ ಮೂಲದಿಂದ ವಿಕಾಸ ಹೊಂದಿವೆ. ಕನ್ನಡ ಲಿಪಿಯೂ ಇದೇ ಮೂಲದಿಂದ ಹೊಮ್ಮಿ ಬೆಳೆದ ಲಿಪಿ ವ್ಯವಸ್ಥೆಯಾಗಿದೆ.

ಈ ಲೇಖನದಲ್ಲಿ ನಾವು ಕನ್ನಡ ಭಾಷೆಯನ್ನು ಬರಹ ರೂಪದಲ್ಲಿಡಲು ಬಳಸಲಾಗುವ ಲಿಪಿ ವ್ಯವಸ್ಥೆಯ ಕುರಿತು ಕೆಲವು ಸ್ವಾರಸ್ಯಕರ ಅಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಅದೂ, ಕನ್ನಡ ಓದು, ಬರಹ ಕಲಿಯುವುದು, ಕಲಿಸುವುದು ಎಷ್ಟು ಸುಲಭ ಎನ್ನುವ ನೆಲೆಗಟ್ಟಿನಲ್ಲಿ, ಈಗಾಗಲೇ ಗೊತ್ತಿರುವ ವಿಷಯಗಳಾದರೂ ಪುನರ್ಮನನ ಮಾಡಿಕೊಳ್ಳೋಣ. ಜಗತ್ತಿನಲ್ಲಿ ಭಾಷೆಗಳು ಬರಹಕ್ಕಾಗಿ ಬಳಸುವ ವ್ಯವಸ್ಥೆಗಳಲ್ಲಿ ಹಲವು ಬಗೆ ಇವೆ. ಕನ್ನಡದ ಬರವಣಿಗೆಯ ವ್ಯವಸ್ಥೆಯ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಮುಖ್ಯವಾದ ಮೂರನ್ನು ಮಾತ್ರ ಗಮನಿಸೋಣ.

ಮೂರು ಲಿಪಿ ವ್ಯವಸ್ಥೆಗಳು
ಮುಖ್ಯವಾದ ಮೂರು ಬರವಣಿಗೆ ವ್ಯವಸ್ಥೆಗಳು ಎಂದರೆ, ಚಿತ್ರ ಲಿಪಿ (Logographic), ಅಕ್ಷರ ಲಿಪಿ (Alphabetic), ಮತ್ತು ಧ್ವನಿ ಲಿಪಿ (Phonemic). ಚಿತ್ರ ಲಿಪಿಯಲ್ಲಿ ಪ್ರತಿಯೊಂದು ಸಂಕೇತವೂ ಒಂದು ಇಡೀ ಪದವನ್ನು ಅಥವಾ ಅದರ ಒಂದು ಭಾಗವನ್ನು ಪ್ರತಿನಿಧಿಸುತ್ತದೆ. ಚೀನೀ ಭಾಷೆ ಇಂಥ ಬರಹ ವ್ಯವಸ್ಥೆಯನ್ನು ಬಳಸುತ್ತದೆ. ಈ ವ್ಯವಸ್ಥೆಯಲ್ಲಿ ಒಟ್ಟು ಸುಮಾರು 80,000 ಸಂಕೇತಗಳು ಇವೆ ಎಂದು ಹೇಳಲಾಗುತ್ತದೆ. ಅದರಲ್ಲಿ ಕನಿಷ್ಠ 2,000 ಸಂಕೇತಗಳನ್ನು ಕಲಿತರೆ ನೀವು ಚೀನೀ ಭಾಷೆಯಲ್ಲಿ ಸಾಕ್ಷರರು ಎಂದು ಭಾವಿಸಬಹುದು. ಸುಮಾರು 3,500 ಸಂಕೇತಗಳನ್ನು ಕಲಿತುಬಿಟ್ಟರೆ ಚೀನೀ ಬರಹದ ಸುಮಾರು 99.5%ರಷ್ಟನ್ನು ಓದಲು ಸಮರ್ಥರಾಗುತ್ತೀರಿ ಎಂದು ಹೇಳಲಾಗುತ್ತದೆ.

WhatsApp Image 2025 09 01 at 8.48.25 PM

ಎರಡನೆಯ ಬರಹ ವ್ಯವಸ್ಥೆ, ಅಕ್ಷರ ಲಿಪಿ. ಇಂಗ್ಲಿಷ್ ಬರಹ ಇದಕ್ಕೆ ಒಂದು ಮುಖ್ಯವಾದ ಉದಾಹರಣೆ. ಈ ವ್ಯವಸ್ಥೆಯಲ್ಲಿ ಇರುವುದು, Aಯಿಂದ Zವರೆಗೆ ಕೇವಲ 26 ಅಕ್ಷರ. ಹೀಗಾಗಿ ಇದನ್ನು ಕಲಿಯುವುದು ಸುಲಭ ಎಂಬ ಭಾವನೆ ಕೂಡಲೇ ಬರಬಹುದು. ಆದರೆ ಇಲ್ಲೊಂದು ಸಮಸ್ಯೆ ಇದೆ. ಮೊದಲನೆಯದಾಗಿ ಕನ್ನಡದ ವರ್ಣಮಾಲೆಗಿಂತ ಭಿನ್ನವಾಗಿ(ಅದನ್ನು ಕೆಳಗಡೆ ನೋಡೋಣ) ಇದರಲ್ಲಿ ಸ್ವರಗಳು ಮತ್ತು ವ್ಯಂಜನಗಳನ್ನು ಪ್ರತ್ಯೇಕವಾಗಿ ಕೊಡದೇ ಮಿಶ್ರಮಾಡಲಾಗಿದೆ. ಇದರಲ್ಲಿಯೂ ಯಾವುದೇ ಕ್ರಮ ಕಂಡು ಬರುವುದಿಲ್ಲ. A E I O U ಎಂಬ ಐದು ಸ್ವರಗಳು, ಉಳಿದವೆಲ್ಲಾ ವ್ಯಂಜನಗಳು. ಎಲ್ಲ ಅಕ್ಷರಗಳಿಗೂ ಹೆಸರನ್ನು ನೀಡಲಾಗಿದೆ. ಉದಾ: ಎ, ಬಿ, ಸಿ, ಡಿ. ಎಲ್, ಎಮ್, ಆರ್, ಡಬ್ಲ್ಯು, ಜಡ್ ಇತ್ಯಾದಿ ಇಲ್ಲಿಯೂ ಯಾವುದೂ ತರ್ಕ ಇದ್ದ ಹಾಗೆ ತೋರುವುದಿಲ್ಲ. ಸಾಲದು ಎಂದು, ಕೆಲವು ಸ್ವರ ಮತ್ತು ವ್ಯಂಜನಗಳು ಅವು ಪದದಲ್ಲಿ ಬಂದಿರುವ ಸಂದರ್ಭಕ್ಕೆ ಅನುಗುಣವಾಗಿ ಒಂದಕ್ಕಿಂತ ಹೆಚ್ಚು ಧ್ವನಿಯನ್ನು ಹೊರಡಿಸುತ್ತವೆ. ಹೀಗಾಗಿ ಇಂಗ್ಲಿಷ್ ಕಲಿಯುವವರಿಗೆ ಸ್ಪೆಲ್ಲಿಂಗ್ ಎನ್ನುವುದು ಪ್ರಯಾಸದ ಕೆಲಸವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 09 01 at 8.48.25 PM1


ಉದಾ: bag, hate, heat, harbor – ಇಲ್ಲಿ ಚಿ ಎಂಬುದು, ಆ್ಯ, ಏ, ಈ, ಆ ಇತ್ಯಾದಿ ಧ್ವನಿಗಳನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಛಿ ಎಂಬ ವ್ಯಂಜನವು cat, race, reach ಪದಗಳಲ್ಲಿ ಕ್, ಸ್, ಚ್ ಇತ್ಯಾದಿ ಧ್ವನಿಗಳನ್ನು ಪ್ರತಿನಿಧಿಸುತ್ತದೆ. ಅದೇ ರೀತಿ, yes, by, baby ಎಂಬ ಪದಗಳಲ್ಲಿ ಥಿ ಎಂಬ ಅಕ್ಷರ ವಿಭಿನ್ನ ಧ್ವನಿಗಳನ್ನು ಹೊಂದಿದೆ. ಇನ್ನು walk, enough, thought, bought ಇತ್ಯಾದಿ ಪದಗಳಲ್ಲಿ ಕೆಲವು ಅಕ್ಷರಗಳನ್ನು ಉಚ್ಚರಿಸುವುದೇ ಇಲ್ಲ, ಉಚ್ಚರಿಸದೇ ಇದ್ದರೆ ಅವುಗಳನ್ನು ಬರೆಯುವುದಾದರೂ ಏಕೆ? ಹಿಂದೆ ಇದಕ್ಕೇನಾದರೂ ತರ್ಕ ಇತ್ತೇನೋ, ನಮಗೆ ಗೊತ್ತಿಲ್ಲ. ಹೀಗಾಗಿ ಇಂಗ್ಲಿಷನ್ನು ಓದುವಾಗ ಮತ್ತು ಬರೆಯುವಾಗ ಸ್ಪೆಲ್ಲಿಂಗ್ ಎಂಬ ಪರಿಕಲ್ಪನೆ ಎದುರಿಗೆ ಬರುತ್ತದೆ. ಕಲಿಯಲು ಇರುವುದು ಇಪ್ಪತ್ತಾರೇ ಅಕ್ಷರ ಎಂದು ಸಂಭ್ರಮ ಪಟ್ಟುಕೊಳ್ಳುವಷ್ಟರಲ್ಲಿ ನೂರಾರು ಪದಗಳ ಸ್ಪೆಲ್ಲಿಂಗನ್ನು ಕಂಠಪಾಠ ಮಾಡಬೇಕಾಗುತ್ತದೆ ಎಂಬ ಅಂಶವು ನಮ್ಮನ್ನು ನಿರುತ್ತೇಜಿಸುತ್ತದೆ. ಈ ತರಹದ ಸಮಸ್ಯೆಗಳು ಕನ್ನಡದಲ್ಲಿ ಎದುರಾಗುವುದಿಲ್ಲ.

WhatsApp Image 2025 09 01 at 8.48.25 PM2
WhatsApp Image 2025 09 01 at 8.48.26 PM

ಇಲ್ಲಿ, ಇನ್ನೊಂದು ವಿಷಯವನ್ನು ಅರಿತುಕೊಂಡು ಮುಂದಕ್ಕೆ ಹೋಗೋಣ: ಚೀನೀ, ಜಪಾನೀ, ಮತ್ತು ಕೋರಿಯನ್ ಭಾಷೆಯ ಸಾಲನ್ನು ಮೇಲಿಂದ ಕೆಳಗೆ ಬರೆಯಲಾಗುತ್ತದೆ, ಮತ್ತು ಸಾಲುಗಳನ್ನು ವಾಕ್ಯವೃಂದದಲ್ಲಿ ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಅದೇ ಉರ್ದು, ಪರ್ಶಿಯನ್, ಅರೇಬಿಕ್ ಭಾಷೆಯಲ್ಲಿ ಬಲದಿಂದ ಎಡಕ್ಕೆ ಬರೆಯಲಾಗುತ್ತದೆ, ಸಾಲುಗಳು ವಾಕ್ಯವೃಂದದಲ್ಲಿ ಮೇಲಿಂದ ಕೆಳಕ್ಕೆ ಬರೆಯಲಾಗುತ್ತದೆ. ಕನ್ನಡ, ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಪುಟದಲ್ಲಿ ಎರಡದಿಂದ ಬಲಕ್ಕೆ ಬರೆಯುತ್ತೇವೆ, ಸಾಲುಗಳು ಮೇಲಿನಿಂದ ಕೆಳಕ್ಕೆ ಸಾಗುತ್ತವೆ.

ಕನ್ನಡ ಲಿಪಿ ವ್ಯವಸ್ಥೆ
ಕನ್ನಡ ಬರಹದ ಸಂಕೇತಗಳ ಸಮೂಹವನ್ನು ಅಕ್ಷರ ಮಾಲೆ ಎನ್ನುವುದಿಲ್ಲ, ಬದಲಿಗೆ ಇದನ್ನು, ‘ವರ್ಣ ಮಾಲೆ’ ಎನ್ನುತ್ತೇವೆ. ವರ್ಣ ಎಂದರೆ ಒಂದು ಅಥವಾ ಹೆಚ್ಚು ವ್ಯಂಜನಗಳು ಒಂದು ಸ್ವರದ ಜೊತೆ ಸೇರಿ ಉಂಟಾಗುವ ಧ್ವನಿಯ ಘಟಕ. ಉದಾ: ಕ, ಶಾ, ಕ್ಷೀ, ತ್ರ್ಯೋ, ಲ್ಪ, ಗೋ ಇತ್ಯಾದಿ. ಕನ್ನಡದ ಮೂಲ ವರ್ಣಗಳ ಮಾಲೆಯಲ್ಲಿ ಒಂದು ಅದ್ಭುತ ತರ್ಕ ಕಂಡುಬರುತ್ತದೆ (ಇದು ತೆಲುಗು, ದೇವನಾಗರಿ, ಗುಜರಾತಿ ಇತ್ಯಾದಿ ಭಾರತೀಯ ಭಾಷೆಗಳ ವರ್ಣ ಮಾಲೆಯಲ್ಲಿಯೂ ಕಂಡು ಬರುತ್ತದೆ).

WhatsApp Image 2025 09 01 at 8.48.26 PM1

ಕನ್ನಡದಲ್ಲಿ, Iೂ ಎಂಬ ಸ್ವರದಿಂದ ಯಾವುದೇ ಪದ ನಿರ್ಮಾಣವಾಗುವುದಿಲ್ಲ; ಮತ್ತು ಕ್ಷ, ತ್ರ, ಜ್ಞ ಮೂಲವರ್ಣಗಳಲ್ಲ, ಇವು ಎರಡೆರಡು ವ್ಯಂಜನಗಳ ಸಂಯುಕ್ತಗಳು- ಆದ್ದರಿಂದ ಆಧುನಿಕ ವ್ಯವಸ್ಥೆಯಲ್ಲಿ ಇವುಗಳನ್ನು ಕೈಬಿಡಲಾಗಿದೆ. ಹೀಗಾಗಿ, ಕನ್ನಡದಲ್ಲಿ ಅ-ದಿಂದ ಳ-ವರೆಗೆ ಒಟ್ಟು 49 ವರ್ಣಗಳಿವೆ. ಇವುಗಳನ್ನು ವಿಶಾಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 1. ಸ್ವರಗಳು ಮತ್ತು ಯೋಗವಾಹಗಳು; 2. ವ್ಯಂಜನಗಳು. ವ್ಯಂಜನಗಳಲ್ಲಿಯೇ ಮುಂದುವರೆದು, ಮೊದಲ 25 ವರ್ಣಗಳನ್ನು ವ್ಯವಸ್ಥಿತವಾದ ಐದು ಗುಂಪುಗಳಲ್ಲಿ ವರ್ಗೀಕರಿಸಬಹುದು, ಆದ್ದರಿಂದ ಇವು ‘ವರ್ಗೀಯ’ ವ್ಯಂಜನಗಳು. ಉಳಿದವು ಈ ರೀತೀಯ ವರ್ಗೀಕರಣಕ್ಕೆ ಒಳಪಡುವುದಿಲ್ಲ. ಆದ್ದರಿಂದ ಅವು ‘ಅವರ್ಗೀಯ’ ವ್ಯಂಜನಗಳು.

ವರ್ಗೀಯ ವ್ಯಂಜನಗಳನ್ನು ಅವುಗಳನ್ನು ಗುಂಪುಗೂಡಿಸಿರುವ ವಿಧಾನವನ್ನು ಅನುಸರಿಸಿ, ವರ್ಗದ ಮೊದಲ ವರ್ಣವನ್ನು ಬಳಸಿ ವರ್ಗೀಯ ವ್ಯಂಜನಗಳನ್ನು, ಕ-ವರ್ಗ, ಚ-ವರ್ಗ, ಟ-ವರ್ಗ, ತ-ವರ್ಗ ಮತ್ತು ಪ-ವರ್ಗ ಎಂದು ಕರೆಯಲಾಗುತ್ತದೆ. ಮತ್ತು ಇದೇ ಕ್ರಮದಲ್ಲಿ ಅವು ಏಕಿವೆ ಎನ್ನುವುದೂ ಒಂದು ಸ್ವಾರಸ್ಯಕರ ಅಂಶ. ಮುಂದುವರೆದು, ಒಂದೊಂದೇ ವರ್ಗದ ವ್ಯಂಜನಗಳನ್ನು ಒಂದೊಂದಾಗಿ ಉದ್ದೇಶಪೂರ್ವಕವಾಗಿ ಉಚ್ಚರಿಸಿ ನೋಡಿದಾಗ ಇಲ್ಲಿ ಇನ್ನೊಂದು ಅದ್ಭುತ ತರ್ಕ ಬಯಲಾಗುತ್ತದೆ.

WhatsApp Image 2025 09 01 at 8.48.26 PM2

ಮೊದಲನೆಯದಾಗಿ, ಕ ಉಚ್ಚಾರಣೆ ಎಲ್ಲಿಂದ ಹೊರಡುತ್ತದೋ ಅಲ್ಲಿಂದಲೇ ಉಳಿದ, ಖ, ಗ, ಘ ಹೊರಡುತ್ತವೆ. ಙ ಕೂಡ ಅಲ್ಲಿಂದಲೇ ಹೊರಡುತ್ತದೆ, ಆದರೆ ಅದು ಮೂಗಿನಿಂದಲೂ ಹೊರಡುತ್ತದೆಯಾದ್ದರಿಂದ ಅದನ್ನು ‘ಅನುನಾಸಿಕ’ ಎನ್ನುತ್ತಾರೆ. ಇದೇ ವಿಧಾನ ಉಳಿದ ಚ, ಟ, ತ, ಪ ವರ್ಗಗಳಿಗೂ ಅನ್ವಯಿಸುವುದನ್ನು ಕಾಣುಬಹುದು. ಅಷ್ಟೇ ಅಲ್ಲ, ಕ-ವರ್ಗದಿಂದ ಪ-ವರ್ಗದ ವರೆಗೆ ವರ್ಣಗಳ ಉಚ್ಚಾರಣೆಯ ತಾಣ ಹೇಗೆ ತಾಲುವಿನಿಂದ ಹೊರದಿಕ್ಕಿನಲ್ಲಿ ಮುಂದುವರೆದು ತುಟಿಗಳನ್ನು ತಲುಪುತ್ತದೆ ಎನ್ನುವುದರಲಿಯೂ ಒಂದು ಕ್ರಮವನ್ನು ಕಾಣುತ್ತೇವೆ.

WhatsApp Image 2025 09 01 at 8.48.26 PM3

ಯಾವುದಾದರೂ ಒಂದು ವರ್ಗವನ್ನು, ಉದಾಹರಣೆಗೆ ಕ-ವರ್ಗವನ್ನು ತೆಗೆದುಕೊಂಡು ನೋಡುವುದಾದರೆ, ಕ, ಗ-ಗಳು ಅಲ್ಪ ಪ್ರಾಣ ಉಚ್ಚಾರಣೆಯಾದರೆ, ಖ, ಘ-ಗಳು ಅವುಗಳದ್ದೇ ಸಂವಾದಿಯಾದ ಮಹಾ ಪ್ರಾಣ ಉಚ್ಚಾರಣೆಗಳು, ಐದನೆಯದು ಅನುನಾಸಿಕ. ವರ್ಣಗಳ ಇದೇ ಕ್ರಮ ಇತರ ನಾಲ್ಕು ವರ್ಗಗಳಲ್ಲಿಯೂ ಕಂಡುಬರುತ್ತದೆ.

ಕಾಗುಣಿತ
ಆ, ಇ, ಎ ಇತ್ಯಾದಿ ಸ್ವರಗಳನ್ನು ಸ್ವತಂತ್ರವಾಗಿ ಉಚ್ಚರಿಸಬಹುದು. ಅದರೆ, ಕ್, ಮ್, ಸ್, ಳ್ ಇತ್ಯಾದಿ ವ್ಯಂಜನಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಕಷ್ಟ. ಕನ್ನಡದ ಬರಹ ವ್ಯವಸ್ಥೆಯು ಅಕ್ಷರ ಮಾಲೆಯಾಗಿರದೇ, ‘ವರ್ಣ’ ಮಾಲೆಯಾಗಿರುವ ಕಾರಣಕ್ಕೆ ವ್ಯಂಜನಗಳನ್ನು ಸ್ವತಂತ್ರವಾಗಿ ಬರೆಯದೇ ಅವುಗಳೊಂದಿಗೆ ಒಂದು ಸ್ವರವನ್ನೂ ಸೇರಿಸಿ ವರ್ಣವನ್ನಾಗಿ ಮಾಡಿ ಬರೆಯಲಾಗುತ್ತದೆ. ಚಿತ್ರ 03ರಲ್ಲಿ ತೋರಿಸಿರುವಂತೆ ಎಲ್ಲಾ 25+9 ವ್ಯಂಜನಗಳಲ್ಲಿ ಪ್ರತಿಯೊಂದಕ್ಕೂ ಸಮಾನವಾಗಿ ಸ್ವರಗಳ ಸಾಲಿನಲ್ಲಿರುವ ಮೊದಲ ಸ್ವರವಾದ ‘ಅ’ವನ್ನು ಸೇರಿಸಿ, ‘ಕ’, ‘ಟ’, ‘ಮ’, ‘ಹ’ ಇತ್ಯಾದಿಯಾಗಿ ಬರೆಯಲಾಗಿದೆ. ಹೀಗೆ ಪ್ರತಿಯೊಂದು ವ್ಯಂಜನದೊಂದಿಗೆ ಅ-ದಿಂದ ಹಿಡಿದು ಅಃ- ದವರೆಗಿನ ಸ್ವರಗಳನ್ನು ಹಚ್ಚಿ ಬರೆಯುವುದನ್ನೇ ನಾವು ‘ಕಾಗುಣಿತ’ ಎನ್ನುತ್ತೇವೆ.

ಉದಾ: ಕ, ಕಾ, ಕಿ, ಕೀ ಕು, ಕೂ, ಕೃ, ಕೆ, ಕೇ, ಕೈ, ಕೊ, ಕೋ, ಕೌ, ಕಂ, ಕಃ. ಇಲ್ಲಿ ನೋಡಿದರೆ ಒಂದು ಅಂಶ ಗೊತ್ತಾಗುತ್ತದೆ: ಕ್ ವ್ಯಂಜನದೊಂದಿಗೆ 15 ಸ್ವರಗಳನ್ನು ಅಂಟಿಸುವುದು ಎಂದರೆ, ಅ, ಆ ದಂಥ ಪೂರ್ಣ ಸ್ವರಗಳ ಬದಲಿಗೆ ಅವುಗಳ ದ್ವಿತೀಯಕ ಚಿಹ್ನೆಗಳನ್ನು ಅಂಟಿಸಿದ್ದೇವೆ. ಯಾವುದೇ ವ್ಯಂಜನ x-ಗೆ ಸ್ವರಗಳ ಚಿಹ್ನೆಗಳು ಹೇಗೆ ಅಂಟಿಸಲಾಗುತ್ತದೆ ಎನ್ನುವುದನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು.

WhatsApp Image 2025 09 01 at 8.48.26 PM4

ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಇದನ್ನು ಇಲ್ಲಿ ಈ ಮಾದರಿಯಲ್ಲಿ ಚರ್ಚಿಸುತ್ತಿರುವ ಉದ್ದೇಶವೇನು? ಕಾಗುಣಿತವನ್ನು ಮಕ್ಕಳಿಗೆ ಕಲಿಸುವ ಶಿಕ್ಷಕರು, ಕ-ದಿಂದ ಹಿಡಿದು ಳ-ವರೆಗೆ ಎಲ್ಲವೂ ಬೇರೆ ಬೇರೆಯೇನೋ ಎನ್ನುವ ಹಾಗೆ ಎಲ್ಲದಕ್ಕೂ ಚಿಹ್ನೆಗಳನ್ನು ಹಚ್ಚಿಯೇ ಕಲಿಸುತ್ತಾರೆ. ಇದರಿಂದಾಗಿ ಕಲಿಯುವವರಿಗೆ (34 x 15) ಒಟ್ಟು 510 ಪ್ರತ್ಯೇಕ ವರ್ಣಗಳನ್ನು ಕಲಿಯಬೇಕೇನೋ ಎಂಬ ಭಾವನೆ ಮೂಡಬಹುದು, ಇದರಿಂದ ಅವರ ಸೃಜನಶೀಲತೆಯನ್ನು ಗೌಣವಾಗಿಸಿದಂತಾಗುತ್ತದೆ. ಇದರ ಬದಲಿಗೆ, ಯಾವುದಾದರೂ ಒಂದೆರಡು, ಉದಾ: ಗ ಮತ್ತು ಯ ವರ್ಣಗಳಿಗೆ ಕಾಗುಣಿತವನ್ನು ಕಲಿಸಿ, ಉಳಿದವನ್ನು ಅವರೇ ಬರೆಯುವ ಹಾಗೆ ಮಾಡಿದರೆ ಹೆಚ್ಚು ತರ್ಕಬದ್ಧ. ಸ್ವರಗಳ ಚಿಹ್ನೆಗಳನ್ನು ವಿವಿಧ ವರ್ಣಗಳಿಗೆ ಅಂಟಿಸುವಾಗ ಕೆಲವು ವ್ಯತ್ಯಯಗಳು ಆಗಬಹುದು. ಅವುಗಳನ್ನಷ್ಟೆ ತಿದ್ದಿದರೆ ಸಾಕಾಗುತ್ತದೆ. ಕಲಿಯುವವರ ಮನಸ್ಸು ತರ್ಕಕ್ಕೆ ಮನಸೋಲುತ್ತದೆ.

ಒತ್ತಕ್ಷರ

ಇನ್ನು ಓದು ಬರಹದ ಕಲಿಕೆಯ ಮುಂದಿನ ಹಂತ ಒತ್ತಕ್ಷರ. ಒಂದು ವರ್ಣದಲ್ಲಿ ಒಂದಕ್ಕಿಂತ ಹೆಚ್ಚು ವ್ಯಂಜನಗಳಿರುತ್ತವೆ; ಸ್ವರ ಮಾತ್ರ (ಚಿಹ್ನೆಯ ರೂಪದಲ್ಲಿ) ಒಂದೇ ಇರುತ್ತದೆ. ಉದಾ: ಜ್ಜ, ಕ್ಕ, ಪ್ಸ, ತ್ರಿ, ಕ್ಷೀ, ತ್ರ್ಯೋ ಇತ್ಯಾದಿ. ಇಲ್ಲಿ ಮೊದಲು ಉಚ್ಚರಿತವಾಗುವ ವರ್ಣವನ್ನು ಪೂರ್ತಿಯಾಗಿ ಬರೆದು, ಉಳಿದ ವ್ಯಂಜನಗಳ ದ್ವಿತೀಯಕ ಚಿಹ್ನೆಗಳನ್ನು ಬರೆದು ಕೊನೆಯಲ್ಲಿ ಸ್ವರದ ದ್ವಿತೀಯಕ ಚಿಹ್ನೆಯನ್ನು ಸೇರಿಸಲಾಗುತ್ತದೆ (ತ್+ ್ರ+್ಯ+ Éೂೀ= ತ್ರ್ಯೋ). ಒತ್ತಕ್ಷರಗಳನ್ನು ಕಲಿಸುವಾಗಲೂ ಕೆಲವು ತಂತ್ರಗಳನ್ನು ಅನುಸರಿಸಬಹುದು. ನೀವು ಶಿಕ್ಷಕರಲ್ಲದಿದ್ದರೂ ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕನ್ನಡ ಕಲಿಯುವುದನ್ನು ಸುಗಮಗೊಳಿಸುವ ಸಲುವಾಗಿಯಾದರೂ ಈ ಅಂಶಗಳನ್ನು ತಿಳಿದುಕೊಳ್ಳಬಹುದು.

WhatsApp Image 2025 09 01 at 8.48.26 PM5

ಒತ್ತಕ್ಷರಗಳನ್ನು ಮೂರು ವಿಧಗಳನ್ನಾಗಿ ನೋಡಬಹುದು. ಮೊದಲನೆಯ ವರ್ಗವನ್ನು ತತ್ಸಮ ಎನ್ನುತ್ತೇವೆ. ಇದರಲ್ಲಿ ವ್ಯಂಜನವನ್ನೇ ಪೂರ್ತಿಯಾಗಿ ಸ್ವಲ್ಪ ಚಿಕ್ಕದಾಗಿ ಕೆಳಗೆ ಬರೆದರೆ ಅದು ತತ್-ಸಮ ಒತ್ತಕ್ಷರವಾಗುತ್ತದೆ. ಉದಾ: ಖ, ಜ, ಟ, ಣ, ಬ, ವ, ಸಿಖ್ಖ, ಅಜ್ಜ, ಅಟ್ಟ, ಅಣ್ಣ, ಹಬ್ಬ, ಅವ್ವ ಇತ್ಯಾದಿ.

ಎರಡನೆಯ ವರ್ಗವನ್ನು ತದ್ಭವ, ಎಂದರೆ ಅದರಿಂದ ಹುಟ್ಟಿದ್ದು ಎನ್ನಬಹುದು. ಇದರಲ್ಲಿ ಮೂಲ ವರ್ಣದ ತಲೆಕಟ್ಟನ್ನು ಮಾತ್ರ ತೆಗೆದು ಬಿಟ್ಟರೆ ಅದೇ ಅದರ ಒತ್ತಕ್ಷರವಾಗಿಬಿಡುತ್ತದೆ. ಇದೇ ದೊಡ್ಡ ವರ್ಗ, 20 ವ್ಯಂಜನಗಳು ಈ ರೀತಿ ತಮ್ಮ ಒತ್ತಕ್ಷರಗಳನ್ನು ಪಡೆಯುತ್ತದೆ. ಅಕ್ಕ, ಹಗ್ಗ, ಹದ್ದು, ಬಡ್ಡೆ, ಇಚ್ಛೆ, ಕನಿಷ್ಠ, ಅಪ್ಪ, ಕಳ್ಳ ಇತ್ಯಾದಿ.

ಮೂರನೆ ವರ್ಗವನ್ನು ತದ್ಭಿನ್ನ ಎಂದು ಕರೆಯಬಹುದು. ಏಕೆಂದರೆ ಈ ಒತ್ತಕ್ಷರಗಳು ಅವುಗಳ ವ್ಯಂಜನಕ್ಕಿಂತ ಸಂಪೂರ್ಣ ಭಿನ್ನವಾಗಿವೆ. ಈ ವರ್ಗದಲ್ಲಿ 6 ವರ್ಣಗಳಿಗೆ: ತ, ನ, ಮ, ಯ, ರ, ಲ. ಇವುಗಳ ಒತ್ತಕ್ಷರಗಳು ಕ್ರಮವಾಗಿ: ್ತ, ್ನ, ್ಮ, ್ಯ, ್ರ ಮತ್ತು ್ಲ. ಯಾವ ಆರು ವರ್ಣಗಳ ಒತ್ತಕ್ಷರಗಳು ತದ್ಭಿನ್ನ ಎಂಬುದನ್ನು ನೆನಪಿಟ್ಟುಕೊಳ್ಳಲು ಈ ಆರು ವರ್ಣಗಳನ್ನು ಒಳಗೊಂಡ ಒಂದು ಪರಿಚಿತ ಪದವನ್ನು ರೂಪಿಸಬಹುದು: ಮಂತ್ರಾಲಯ, ಅಥವಾ ಮನತರಲಯ. ಇವುಗಳ ಒತ್ತಕ್ಷಗಳು ತದ್ಭಿನ್ನ ಎಂದು ನೆನಪಿಟ್ಟುಕೊಳ್ಳಬಹುದು.

ಕಲಿಸುವ ವಿಧಾನ
ಯಾವ ಭಾಷೆಯು ಅರ್ಥಮಾಡಿಕೊಳ್ಳಲು, ಮಾತಾಡಲು ಬರುತ್ತದೆಯೋ ಆ ಭಾಷೆಯಲ್ಲಿ ಮಾತ್ರ ಓದು-ಬರಹ ಕಲಿಸಲು ಸಾಧ್ಯ. ಅಥವಾ ಯಾವುದಾದರೂ ಒಂದು ಭಾಷೆಯಲ್ಲಿ (ಉದಾ:ಇಂಗ್ಲಿಷ್) ಓದು-ಬರಹ ಕಲಿಸಬೇಕು ಎಂದರೆ, ಮೊದಲು ಇಂಗ್ಲಿಷಿನಲ್ಲಿ ಮಾತಾಡಿದ್ದನ್ನು ಅರ್ಥ ಮಾಡಿಕೊಳ್ಳುವ, ಸಾಮಾನ್ಯ ಸನ್ನಿವೇಶಗಳಲ್ಲಿ ಮಾತಾಡುವ ಕೌಶಲಗಳು ಸಾಕಷ್ಟು ಕುದರಿರಬೇಕು.

ಕನ್ನಡದಲ್ಲಿಯೂ ಕೂಡ ಓದು-ಬರಹ ಕಲಿಸುವ ಮುಂಚೆ ಮಕ್ಕಳಲ್ಲಿ ಕನ್ನಡದ ಮಟ್ಟಿಗೆ ಆಲಿಸುವ ಮತ್ತು ಮಾತಾಡುವ ಕೌಶಲಗಳು ಸಾಕಷ್ಟು ಸಮರ್ಥವಾಗಿ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರವೂ, ಮೊದಲು ಓದನ್ನು ಕಲಿಸಬೇಕು. ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ, ಕನ್ನಡದಲ್ಲಿ ಅಷ್ಟೂ ವರ್ಣಗಳು, ಕಾಗುಣಿತ ಮತ್ತು ಒತ್ತಕ್ಷರಗಳನ್ನು ಬಳಸಿ ಗೊತ್ತಿರುವ ವಸ್ತು, ವಿಷಯದ ಕುರಿತು ಬರೆಯಲಾದ, ಪದ, ಪದಪುಂಜ, ವಾಕ್ಯಗಳನ್ನು ಸರಾಗವಾಗಿ ಓದುವುದು ಅಭ್ಯಾಸವಾದ ನಂತರ ಬರೆಯುವುದನ್ನು ಕಲಿಸುವುದು ಸೂಕ್ತ.

ಇದನ್ನೂ ಓದಿ ನುಡಿಯಂಗಳ | ಅಂತರಂಗ ಬಿಚ್ಚಿಡುವ ‘ಆಂಗಿಕ ಭಾಷೆ’

ನಾನು ಮೊದಲೇ ಹೇಳಿರುವ ಹಾಗೆ ಈ ಲೇಖನದಲ್ಲಿನ ಅನೇಕ ಅಂಶಗಳು ನಿಮಗೆ ಈಗಾಗಲೇ ಅಲ್ಪ ಸ್ವಲ್ಪ ಅಥವಾ ಚೆನ್ನಾಗಿಯೇ ಗೊತ್ತಿರಬಹುದು. ಅಂಥ ಉಪಯುಕ್ತ ಅಂಶಗಳನ್ನು ಒಟ್ಟಿಗೇ ಇಟ್ಟು ಪುನರ್ಮನನ ಮಾಡಿಕೊಳ್ಳುವ ಮೂಲಕ, ಮುಖ್ಯವಾಗಿ ಮಕ್ಕಳಿಗೆ, ಅಥವಾ ಕನ್ನಡೇತರರಿಗೆ ಕನ್ನಡ ಓದು-ಬರಹವನ್ನು ಕಲಿಸುವುದು ಹೆಚ್ಚು ಸುಲಭ ಮತ್ತು ಪರಿಣಾಮಕಾರಿಯಾಗಬಹುದು ಎಂಬ ಆಶಯ. ನಾನು ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕನ್ನಡೇತರರಿಗೆ ಕನ್ನಡ, ಕನ್ನಡ ಬಲ್ಲವರಿಗೆ (ಮಕ್ಕಳು/ವಯಸ್ಕರು) ಕನ್ನಡ ಓದು-ಬರಹ ಕಲಿಸಿದ ತರಬೇತಿಗಳಲ್ಲಿ ಈ ಅರಿವನ್ನು ನಾನು ಪ್ರಯೋಜನಕಾರಿಯಾಗಿ ಬಳಸಿದ್ದೇನೆ, ಮತ್ತು ಆ ಎಲ್ಲಾ ತರಬೇತಿಗಳಲ್ಲಿ ಈ ಕುರಿತು ನಾನು ಕಲಿತಿದ್ದರಿಂದಲೂ ಈ ಅರಿವು ಇನ್ನೂ ಗಟ್ಟಿಗೊಂಡಿದೆ. ಅದನ್ನು ಈ ಲೇಖನದ ಮೂಲಕ ನಿಮ್ಮ ಮುಂದಿಟ್ಟಿದ್ದೇನೆ.

WhatsApp Image 2025 11 17 at 4.13.46 PM
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...