ಉತ್ತಮ ಸಂಬಂಧಗಳೇ ನಮ್ಮ ಸುಖ, ಶಾಂತಿ, ಸಮೃದ್ಧಿ, ಪ್ರಗತಿಗಳಿಗೆ ಬುನಾದಿಯಾಗಿರುತ್ತವೆ. ಹೀಗಾಗಿ ನಾವು ನಮ್ಮ ಈ ಸಂಬಂಧಗಳು ಹದಗೆಡದ ಹಾಗೆ ಎಚ್ಚರ ವಹಿಸುತ್ತೇವೆ. ಆದರೂ ಒಮ್ಮೊಮ್ಮೆ ನಮ್ಮ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತಲ್ಲ! ಇದಕ್ಕೆ ಹಲವು ಕಾರಣಗಳು ಇರಬಹುದು. ಅದರಲ್ಲಿ ಮುಖ್ಯವಾದದ್ದು ಎಂದರೆ ನಮ್ಮ ನಮ್ಮ ನಡುವೆ ನಡೆಯುವ ಮಾತುಕತೆ, ಸಂವಹನ.
ನಾವು ಸಮಾಜದಲ್ಲಿ ಅನೇಕ ರೀತಿಯ ಸಂಬಂಧಗಳನ್ನು ಕಟ್ಟಿಕೊಂಡು ಬದುಕುತ್ತೇವೆ. ಪ್ರೇಮಿಗಳು, ಪತಿಪತ್ನಿ, ತಂದೆತಾಯಿ-ಮಕ್ಕಳು, ನೆರೆಹೊರೆಯವರು, ಸಹೋದ್ಯೋಗಿಗಳು, ವ್ಯಾಪಾರಿ-ಗ್ರಾಹಕರು, ಶಿಕ್ಷಕರು-ವಿದ್ಯಾರ್ಥಿಗಳು ಹೀಗೆ ನಾವು ಹಲವು ಸಂಬಂಧಗಳನ್ನು ಸೌಹಾರ್ದಯುತವಾಗಿ ಉಳಿಸಿಕೊಂಡು ಹೋಗಲು ಹೆಣಗಾಡುತ್ತೇವೆ. ಏಕೆಂದರೆ, ಉತ್ತಮ ಸಂಬಂಧಗಳೇ ನಮ್ಮ ಸುಖ, ಶಾಂತಿ, ಸಮೃದ್ಧಿ, ಪ್ರಗತಿಗಳಿಗೆ ಬುನಾದಿಯಾಗಿರುತ್ತವೆ. ಹೀಗಾಗಿ ನಾವು ನಮ್ಮ ಈ ಸಂಬಂಧಗಳು ಹದಗೆಡದ ಹಾಗೆ ಎಚ್ಚರ ವಹಿಸುತ್ತೇವೆ. ಆದರೂ ಒಮ್ಮೊಮ್ಮೆ ನಮ್ಮ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತಲ್ಲ! ಇದಕ್ಕೆ ಹಲವು ಕಾರಣಗಳು ಇರಬಹುದು. ಅದರಲ್ಲಿ ಮುಖ್ಯವಾದದ್ದು ಎಂದರೆ ನಮ್ಮ ನಮ್ಮ ನಡುವೆ ನಡೆಯುವ ಮಾತುಕತೆ, ಸಂವಹನ.
ನಮ್ಮಲ್ಲಿ ಪ್ರತಿಯೊಬ್ಬರೂ ಇದರಲ್ಲಿ ತೊಡಗಿದ್ದರೂ ಇದರ ಕುರಿತು ಗಮನ ಹರಿಸುವುದು ಅಪರೂಪ. ಇಬ್ಬರ ನಡುವೆ ಜಗಳವಾಗಿ, ಮನಸ್ತಾಪವಾಗಿರುತ್ತದೆ, ಆದರೂ ಅದರಲ್ಲಿ ಒಳಗೊಂಡವರಿಗೆ ಇದು ಹೀಗೇಕೆ ಆಯಿತು ಎಂದು ಹೊಳೆಯುವುದೇ ಇಲ್ಲ. ನನ್ನದೇನೂ ತಪ್ಪಿಲ್ಲ ಎಂದೇ ಇಬ್ಬರ ನಿಲುವು. ಇಬ್ಬರ ನಡುವೆ ಈ ಬಿರುಕು ಉಂಟಾಗಿರುವುದಕ್ಕೆ ಕಾರಣ ಅಪಸಂವಹನ, ಎಂದರೆ ಸಂವಹನದಲ್ಲಾದ ವ್ಯತ್ಯಯ.
ಸಂವಹನ ಎಂದರೇನು?

ಸಂವಹನವನ್ನು ಬಳಸುವ ವಿವಿಧ ಕ್ಷೇತ್ರದವರು ಈ ಪದವನ್ನು ವಿವಿಧ ರೀತಿಯಲ್ಲಿ, ವಿವಿಧ ವಿವರದಲ್ಲಿ ವ್ಯಾಖ್ಯಾನಿಸುತ್ತಾರೆ. ಆದರೆ, ನಮ್ಮ ಪ್ರಯೋಜನಕ್ಕಾಗಿ ಸರಳವಾದ ಒಂದು ವ್ಯಾಖ್ಯಾನವನ್ನು ಕಂಡುಕೊಳ್ಳೋಣ.
ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿ ‘ಮಹಿಳಾ ಸಹಾಯವಾಣಿ’ ಎಂಬ ಒಂದು ಸ್ವಯಂ ಸೇವಾ ಸಂಸ್ಥೆ ಇದೆ. ಆ ಸಂಸ್ಥೆಯಲ್ಲಿ ಸ್ವಯಿಚ್ಛೆಯಿಂದ ಸಮಾಲೋಚಕರಾಗಿ ಕೆಲಸ ಮಾಡುವ ಮಹಿಳೆಯರಿಗಾಗಿ ನಡೆದ ಒಂದು ಕಾರ್ಯಶಿಬಿರದಲ್ಲಿ ನಾನು ‘ಉತ್ತಮ ಸಂವಹನದ ತಂತ್ರಗಳು’ ಎನ್ನುವ ವಿಷಯದ ಕುರಿತು ಎರಡು ಗಂಟೆಯ ಗೋಷ್ಠಿಯನ್ನು ನಡೆಸಬೇಕಾಗಿತ್ತು. ಸಂವಾದವನ್ನು ಆರಂಭಿಸುವ ಒಂದು ವಿಧಾನವಾಗಿ, ‘ಸಂವಹನ’ ಎಂದರೇನು ಹೇಳಿ ಎಂದು ನಾನು ಭಾಗಿ ಮಹಿಳೆಯರಿಗೆ ಕೇಳಿದೆ. ಅದಕ್ಕೆ ಅಷ್ಟೇನೂ ಶಿಕ್ಷಿತರಲ್ಲದ ಒಬ್ಬ ಮಹಿಳೆ ಹೇಳಿದ್ದು ಎಂದರೆ, ‘ಅದೇ ಕಣಪ್ಪ, ಸುಕದುಕ್ಕ ಹಂಚ್ಕೊಳ್ಳೋದು.’ ಆ ಶಿಬಿರದಲ್ಲಿ ಇದನ್ನೇ ವ್ಯಾಖ್ಯಾನವನ್ನಾಗಿ ಬಳಸಿಕೊಂಡು ನಾನು ಗೋಷ್ಠಿ ನಡೆಸಿದೆ. ಇಲ್ಲಿ ನಾವು ಸಂವಹನವನ್ನು ಇನ್ನಷ್ಟು ಪೂರ್ಣವಾಗಿ ವ್ಯಾಖ್ಯಾನಿಸುವ ಪ್ರಯತ್ನ ಮಾಡೋಣ.
ಸಂವಹನ (communication) ಎಂದರೆ, ಇಬ್ಬರು ವ್ಯಕ್ತಿಗಳು ಅಥವಾ ಗುಂಪುಗಳ ನಡುವೆ, ಮಾಹಿತಿ, ದತ್ತಾಂಶಗಳು, ಭಾವನೆಗಳು, ವಿಚಾರಗಳು ಇತ್ಯಾದಿಗಳನ್ನು ವಿನಿಮಯ, ಎಂದರೆ ಹಂಚಿಕೊಳ್ಳುವ ಒಂದು ಪ್ರಕ್ರಿಯೆ. ಈ ವಿನಿಯಮವು ಮೌಖಿಕ ಭಾಷೆಯ ಮೂಲಕ ನಡೆಯಬಹುದು ಅಥವಾ ಆಂಗಿಕ ಭಾಷೆಯಲ್ಲಿ ನಡೆಯಬಹುದು. ಮಾತಿನಲ್ಲಿ ಮುಖಾಮುಖಿ ಅಥವಾ ¥sóÉೂೀನಿನ ಮೂಲಕ ನಡೆಯಬಹುದು; ಅಥವಾ ಬರಹದಲ್ಲಿ ಸಂವಹನ ನಡೆಯಬಹುದು. ನಾವು ಇವತ್ತಿನ ಅಂಗಳದಲ್ಲಿ ಪರಸ್ಪರ ಮುಖಾಮುಖಿಯಾಗಿ ಕುಳಿರುವ ಇಬ್ಬರು ವ್ಯಕ್ತಿಗಳ ನಡುವೆ ಮಾತಿನ ಮೂಲಕ ನಡೆಯುವ ಸಂವಹನವನ್ನು ಗಮನಿಸೋಣ. ಅದರ ಮೂಲಕ ಸಂವಹನದ ವಿವಿಧ ಘಟಕಾಂಶಗಳ ಮಹತ್ವದ ಕುರಿತು ಕಲಿಯೋಣ.
ಮೊದಲನೆಯದಾಗಿ ನಾವಿಲ್ಲಿ ಸಂವಹನವನ್ನು ಒಂದು ಪ್ರಕ್ರಿಯೆಯಾಗಿ ಪರಿಗಣಿಸುತ್ತೇವೆ. ಪ್ರಕ್ರಿಯೆಯು ಒಂದು ಅವಧಿಯಲ್ಲಿ, ವಿವಿಧ ಹಂತಗಳಲ್ಲಿ ನಡೆಯುವ ಕ್ರಿಯೆಯಾಗಿರುತ್ತದೆ. ಅದು ಕೆಲವೇ ಕ್ಷಣಗಳಲ್ಲಿ ನಡೆದರೂ, ಅದರಲ್ಲಿ ನಿರ್ದಿಷ್ಟವಾದ ಘಟಕಗಳು ಅಥವಾ ಹಂತಗಳು ಇರುತ್ತವೆ. ಸಂವಹನವನ್ನು ಈ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ನೋಡುವಾಗ, ಯಾವುದೇ ಸಂವಹನ ಯಶಸ್ವಿಯಾಗದಿದ್ದಲ್ಲಿ, ಅಥವಾ ತಪ್ಪು ಅರ್ಥಕ್ಕೆ ಎಡೆ ಮಾಡಿಕೊಟ್ಟಿದ್ದಲ್ಲಿ, ನಾವು ವಾಸ್ತವವಾಗಿ ಸಂವಹನ ಪ್ರಕ್ರಿಯೆಯ ಯಾವ ಹಂತದಲ್ಲಿ ಸಮಸ್ಯೆಯಾಗಿರಬಹುದು ಎಂಬುದನ್ನು ಕಂಡುಕೊಂಡು, ಅದನ್ನು ಸರಿಪಡಿಸುವ ಕೆಲಸವನ್ನು ಮಾಡಲು ಸಹಾಯಕವಾಗಿರುತ್ತದೆ. ಇದನ್ನು ಒಂದು ಚಿತ್ರದ ಮೂಲಕ ನೋಡೋಣ.
ಇಬ್ಬರ ನಡುವೆ ಮುಖಾಮುಖಿಯಾಗಿ ನಡೆಯುವ ಸಂವಹನದಲ್ಲಿ ಸಂವಹನವು ಮಾತಾಡುವ ಒಬ್ಬ ವ್ಯಕ್ತಿಯಿಂದ ಆರಂಭವಾಗುತ್ತದೆ. ನಾವು ಆ ವ್ಯಕ್ತಿಯನ್ನು ‘ಹೇಳುಗರು’ ಎಂದು ಕರೆಯೋಣ. ಅವರ ಎದುರಿಗಿದ್ದು ಸಂವಹನದಲ್ಲಿ ಭಾಗವಹಿಸುವವರನ್ನು ನಾವು ಕೇಳುಗರು’ ಎಂದು ಕರೆಯೋಣ. ವಾಸ್ತವವಾಗಿ ನಡೆಯುವ ಸಂಭಾಷಣೆಯಲ್ಲಿ ಈ ಹೇಳುಗ-ಕೇಳುವ ಪಾತ್ರಗಳು ಪರಸ್ಪರ ಬದಲಾಗುತ್ತವೇ ಇರುತ್ತವೆ, ಆದರೂ, ಈ ಪ್ರಕ್ರಿಯೆಯನ್ನು ಸರಿಯಾಗಿ ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಂವಹನವನ್ನು ಒಂದು ಸುತ್ತಿಗೆ ಮಾತ್ರ ಸೀಮಿತಗೊಳಿಸಿಕೊಳ್ಳೋಣ.

ಹೇಳುಗರ ತಲೆಯಲ್ಲಿಒಂದು ವಿಚಾರ (ವಿ) ಮೂಡುತ್ತದೆ. ಆ ವಿಚಾರದ ಗ್ರಹಿಕೆ ಕೇಳುಗರ ಮನಸ್ಸಿನಲ್ಲಿ ಉಂಟಾಗುವ ಹಾಗೆ ಮಾಡುವ ಕ್ರಿಯೆಯೇ ಸಂವಹನ. ಈಗ ಇದರಲ್ಲಿ ಇರುವ ಹಂತಗಳನ್ನು ಗಮನಿಸೋಣ.
ಹೇಳುಗರು ತಮ್ಮ ತಲೆಯಲ್ಲಿ ಮೂಡಿದ ಅಮೂರ್ತವಾದ ವಿಚಾರವನ್ನು ಕೇಳುಗರಿಗೆ ತಲುಪಿಸಲು ಮೊದಲು ಅದನ್ನು ಒಂದು ಭಾಷೆಯಲ್ಲಿ ಇಡಬೇಕಾಗುತ್ತದೆ, ಭಾಷೆ ಎಂದರೆ ದ್ವನಿ ಸಂಕೇತಗಳ ಅಥವಾ ಕೋಡ್‍ಗಳ ಸಮೂಹ. ಹೇಳುಗರು ತಮ್ಮ ಮನಸ್ಸಿನಲ್ಲಿ ಮೂಡಿರುವುದನ್ನು ಭಾಷೆಯಂತ ಒಂದು ಕೋಡ್‍ನಲ್ಲಿ ಕಟ್ಟಿಕೊಳ್ಳುವ ಈ ಕ್ರಿಯೆಯನ್ನು ನಾವು ‘ಕೋಡೀಕರಣ’ ಎನ್ನುತ್ತೇವೆ. ಹೀಗೆ ಅದನ್ನು ಒಂದು ಭಾಷೆಯಲ್ಲಿ ಕೋಡೀಕರಿಸಿದಾಗ ಮಾತ್ರ ಅದನ್ನು ಉಚ್ಚರಿಸಲು ಸಾಧ್ಯ. ಇದು ಸಂವಹನ ಮೊದಲ ಹಂತ.
ಎರಡನೆಯ ಹಂತದಲ್ಲಿ, ಹೀಗೆ ಕೋಡಿಕೃತವಾದ ಸಂದೇಶವನ್ನು ಕೇಳುಗರಿಗೆ ಕಳುಹಿಸಲು ಅಥವಾ ತಲುಪಿಸಲು ಒಂದು ಮಾಧ್ಯಮ ಬೇಕು. ಅದು ಟೆಲಿಫೋನ್, ರೇಡಿಯೋ, ಟೆಲಿವಿಷನ್, ಚಲನಚಿತ್ರ, ಇತರ ಧ್ವನಿ-ದೃಶ್ಯ ಸಾಧನ- ಹೀಗೆ ಯಾವುದಾದರೂ ಒಂದು ತಾಂತ್ರಿಕ ಮಾಧ್ಯಮವಾಗಬಹುದು. ಪ್ರಸ್ತುತ ನಾವು ಪರಿಗಣಿಸುತ್ತಿರುವ ಮೌಖಿಕ ಸಂವಹನದಲ್ಲಿ ಹೇಳುಗರು ಮತ್ತು ಕೇಳುಗರ ನಡುವೆ ಇರುವುದು ಗಾಳಿ. ಗಾಳಿಯ ಮಾಧ್ಯಮ ಇಲ್ಲದೇ ಹೋದರೆ, ಎಂದರೆ, ನಿರ್ವಾತದಲ್ಲಿ ಧ್ವನಿ ರೂಪದಲ್ಲಿನ ಮಾತು ಇನ್ನೊಬ್ಬರಿಗೆ ಏಕೆ, ನಮಗೇ ಕೇಳಿಸುವುದಿಲ್ಲ.
ಮೂರನೇ ಹಂತ ‘ಡಿಕೋಡೀಕರಣ’. ಎಂದರೆ, ಹೇಳುಗರು ಕೋಡೀಕರಿಸಿದ ಸಂದೇಶವನ್ನು ಡಿಕೋಡ್ ಮಾಡುವುದು, ಎಂದರೆ, ಆ ಕೋಡ್‍ನ್ನು ಬಿಡಿಸಿ ಅದರಲ್ಲಿ ಅಡಗಿಸಿದ್ದ ಸಂದೇಶವನ್ನು ಗ್ರಹಿಸುವುದು. ಈ ಕ್ರಿಯೆ ಮುಗಿದ ಕೂಡಲೇ ಹೇಳುಗಳು ಕೋಡೀಕರಿಸಿದ್ದ ಸಂದೇಶ ಹೊರಬರುತ್ತದೆ. ಅದನ್ನು ಆಲಿಸಿದ ಕೇಳುಗರಿಗೆ ಅದು ಅರ್ಥವಾಗುತ್ತದೆ, ಅವರ ಮನಸ್ಸಿನಲ್ಲಿಯೂ (ವಿ) ಮೂಡುತ್ತದೆ. ಇಲ್ಲಿ, ಸಂವಹನದ ಒಂದು ಭಾಗ ಮುಗಿಯಿತು ಎನ್ನಬಹುದು.
ಮುಂದೆ ಕೇಳುಗರು ತಾವು ಆಲಿಸಿದ್ದಕ್ಕೆ ಪ್ರತಿಕ್ರಿಯೆಯನ್ನು ತೋರುತ್ತಾರೆ. ಅವರು ಆಲಿಸಿದ್ದು ಅವರಿಗೆ ಅರ್ಥವಾಯಿತೇ, ಆಗಲಿಲ್ಲವೇ, ಅರ್ಧಂಬರ್ಧ ಅರ್ಥವಾಯಿತೇ, ಅನುಮಾನ ಇದೆಯೇ, ಕೇಳಿ ಸಂತೋಷವಾಯಿತೇ, ಕೋಪ ಬಂತೇ ಇತ್ಯಾದಿ ಪ್ರತಿಕ್ರಿಯೆ ಕೇಳುಗರ ಕಡೆಯಿಂದ ಮೂಡುತ್ತದೆ. ಇದು ಮೌಖಿಕ ಭಾಷೆಯಲ್ಲಿ ಇರಬಹುದು, ಅಥವಾ ಮುಖಭಾವ ಇತ್ಯಾದಿ ಆಂಗಿಕಭಾಷೆಯಲ್ಲಿರಬಹುದು. ಅಂತೂ ಕೇಳುಗರಿಂದ ಒಂದಿಲ್ಲ ಒಂದು ಪ್ರತಿಕ್ರಿಯೆ ಇರುತ್ತದೆ. ಅವರು ಏನೂ ಮಾಡದೇ ಸುಮ್ಮನೇ ಇದ್ದರೆ ಅದೂ ಒಂದು ಪ್ರತಿಕ್ರಿಯೆಯೇ. ಹೇಳುಗರು ಇದನ್ನು ಗಮನಿಸದೇ ಇದ್ದರೆ ಇದು ಪ್ರತಿಕ್ರಿಯೆಯಾಗಿ ಮಾತ್ರ ಉಳಿಯುತ್ತದೆ, ಸಂವಹನದ ಪರಿಣಾಮ ಪಟುತ್ವದಲ್ಲಿ ಹೆಚ್ಚಿನ ಪ್ರಯೋಜನವನ್ನು ನೀಡುವುದಿಲ್ಲ.
ಆದರೆ, ಜಾಣ ಹೇಳುಗರು, ತಮ್ಮ ಹೇಳಿಕೆಗಳಿಗೆ ಕೇಳುಗರು ನೀಡಿದ ಸೂಕ್ಷಾತಿ ಸೂಕ್ಷ್ಮ ಪ್ರತಿಕ್ರಿಯೆಯನ್ನೂ ಗ್ರಹಿಸುತ್ತಾರೆ. ಅದಕ್ಕೆ ತಕ್ಕ ಹಾಗೆ ತಮ್ಮ ಸಂವಹನದ ವಿಧಾನ/ತಂತ್ರವನ್ನು ಮಾರ್ಪಡಿಸಿಕೊಳ್ಳುತ್ತಾರೆ. ಅವರಿಗೆ ಅರ್ಥವಾಗಿದೆ ಎಂದರೆ ಇನ್ನಷ್ಟು ಆನಂದದಿಂದ ಮಾತನ್ನು ಮುಂದುವರೆಸುತ್ತಾರೆ; ಅರ್ಥವಾಗಿಲ್ಲ, ಸಂದೇಹವಿದೆ ಎಂದಾದರೆ, ಅರ್ಥ ಮಾಡಿಸುವ ಕ್ರಮವಾಗಿ ಹೇಳಿದ್ದನ್ನು ಇನ್ನೊಮ್ಮೆ, ಸ್ವಲ್ಪ ಬೇರೆ ತರಹ ಹೇಳುತ್ತಾರೆ, ಅಂತೂ ಅರ್ಥ ಆಗುವ ಹಾಗೆ ಮಾಡುತ್ತಾರೆ. ಹೀಗೆ ಕೇಳುಗರಿಂದ ಸಿಗುವ ಪ್ರತಿಕ್ರಿಯೆ ಮಾತಿನ ರೂಪದಲ್ಲಿರಬಹುದು, ಅಥವಾ ಮಾತಲ್ಲದ ಆಂಗಿಕ ರೂಪದಲ್ಲಿರಬಹುದು. ಅದನ್ನು ಗ್ರಹಿಸಿ ತಮ್ಮ ಸಂವಹನವನ್ನು ಹೆಚ್ಚು ಉಪಯುಕ್ತಗೊಳಿಸಿಕೊಂಡಾಗ ಅದು ‘ಫೀಡ್‍ಬ್ಯಾಕ್’ ಆಗುತ್ತದೆ. ಇದನ್ನು ಕೇಳುಗರ ‘ಪ್ರತಿಕ್ರಿಯೆ’(ಡಿeಚಿಛಿಣioಟಿ)ಗಿಂತ ಭಿನ್ನವಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ.
ಕೋಡೀಕರಣ<->ಡಿಕೋಡೀಕರಣ
ನಾವು ಏನಾದರೂ ಆನ್‍ಲೈನ್ ಖರೀದಿಸಿದಾಗ ಆ ಸಂಸ್ಥೆಯು ವಸ್ತುವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ‘ಪ್ಯಾಕ್’ ಮಾಡಿ ಕಳಿಸುತ್ತದೆ. ಒಳಗಿರುವ ವಸ್ತುವಿನ ಸೂಕ್ಷತೆಯನ್ನು ಅನುಸರಿಸಿ ಅದನ್ನು ‘ಅನ್‍ಪ್ಯಾಕ್’ ಮಾಡುವುದು ಹೇಗೆ ಎಂಬ ಕುರಿತು ವಿಶಿಷ್ಟವಾದ ಸೂಚನೆಗಳನ್ನು ನೀಡಿರುತ್ತದೆ. ಈ ಸೂಚನೆಗಳನ್ನು ಅನುಸರಿಸಿ ಅದನ್ನು ಸರಿಯಾಗಿ ಅನ್‍ಪ್ಯಾಕ್ ಮಾಡಿದರಷ್ಟೇ ಒಳಗಿನ ವಸ್ತುವು ನಮಗೆ ಸುರಕ್ಷಿತವಾಗಿ ದಕ್ಕುತ್ತದೆ.

ಹಾಗೆಯೇ, ಸಂವಹನದ ಪ್ರಕ್ರಿಯೆಯಲ್ಲಿ ಹೇಳುವರು ಯಾವ ಭಾಷೆಯಲ್ಲಿ/ ಉಪಭಾಷೆಯಲ್ಲಿ/ಶೈಲಿಯಲ್ಲಿ ತಮ್ಮ ಸಂದೇಶವನ್ನು ಕೋಡೀಕರಿಸಿರುತ್ತಾರೆಯೋ ಅದೇ ಭಾಷೆ/ಉಪಭಾಷೆ/ಶೈಲಿ ಕೇಳುಗರಿಗೂ ತಿಳಿದಿರಬೇಕಾಗುತ್ತದೆ. ಇಲ್ಲದಿದ್ದರೆ ಆ ಸಂದೇಶವನ್ನು ಬಿಡಿಸಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಎಂದಾಗ ಸಂವಹನ ಕೊಂಡಿ ಇಲ್ಲಿಗೆ ಮುರಿದು ಬೀಳುತ್ತದೆ.
ಇಲ್ಲಿ, ಸಂವಹನದ ಕೊಂಡಿಯು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೇಳುಗರದ್ದೇ ಆಗಿರುತ್ತದೆ. ಅವರಿಗೆ ತಮ್ಮ ಕೇಳುಗರಿಗೆ ಯಾವ ಭಾಷೆ/ಉಪಭಾಷೆ/ಶೈಲಿ ಅರ್ಥವಾಗುತ್ತದೆ ಎಂಬುದರ ಸ್ಪಷ್ಟ ಅರಿವು ಇರಬೇಕಾಗುತ್ತದೆ. ಉದಾಹರಣೆ, ಕೇಳುಗರು, ಇಂಗ್ಲಿಷ್ ಬಾರದ ಗ್ರಾಮೀಣ ಮಹಿಳೆಯಾಗಿದ್ದರೆ ನೀವು ಅವರಿಗೆ ತುಂಬಾ ಉಪಯುಕ್ತವಾದ ವಿಚಾರ ಹೇಳಬೇಕು ಎಂಬ ಪ್ರಾಮಾಣಿಕ ಉದ್ದೇಶವಿದ್ದರೂ, ಅದು ಅವರಿಗೆ ತಲುಪುವುದಿಲ್ಲ. ಅಷ್ಟೇ ಏಕೆ, ಕನ್ನಡದಲ್ಲಿಯೇ, ಮಂಡ್ಯದ ಕೇಳುಗರಿಗೆ ನೀವು ಬೀದರ್ ಉಪಭಾಷೆಯಲ್ಲಿ ಮಾತಾಡಿದರೂ ಅವರಿಗೆ ನೀವು ಮಾತಾಡಿದುದರ 30% ಕೂಡ ಅರ್ಥವಾಗದೇ ಹೋಗಬಹುದು. ಸ್ಪಷ್ಟವಾಗಿ, ಉದ್ದೇಶಸಹಿತವಾಗಿ, ಅಗತ್ಯವಿರುವಷ್ಟು ನಿಧಾನವಾಗಿ ಮಾತಾಡಬೇಕು ಎನ್ನುವುದರ ಜೊತೆ, ಸಂದೇಶವನ್ನು ಕಟ್ಟಿಕಳಿಸುವ ‘ಕೋಡ್’ ಕೇಳುಗರಿಗೆ ಚೆನ್ನಾಗಿ ಗೊತ್ತಿದ್ದು, ಅವರು ಅದನ್ನು ಅನಾಯಾಸ ‘ಡಿಕೋಡ್’ ಮಾಡುವಂತಿರಬೇಕು. ಸಂದೇಶವನ್ನು ಅರ್ಥ ಮಾಡಿಕೊಳ್ಳುವುದಲ್ಲಿ ಸ್ವತಃ ‘ಕೋಡ್’ಏ ಒಂದು ತೊಡಕಾಗಬಾರದು.
ಇದು ಒಂದು ಸುತ್ತು. ಕ್ರಿಯೆಯು ಭಾಷಣದ ರೂಪದಲ್ಲಿದ್ದರೆ ಕೇಳುಗರು ಕೇಳುಗರಾಗೇ ಮುಂದುವರೆಯಬಹುದು, ಹೇಳುಗರು ಮಾತಾಡುತ್ತಲೇ ಇರಬಹುದು. ಆದರೆ ಕ್ರಿಯೆಯು ಒಂದು ಸಂಭಾಷಣೆಯಾಗಿದ್ದರೆ ಈಗ ಕೇಳುಗರು ತಾವೇ ಮಾತಾಡತೊಡಬಹುದು. ಆಗ ಅವರು ಹೇಳುಗರಾಗುತ್ತಾರೆ, ಇನ್ನೊಬ್ಬರು ಕೇಳುಗರಾಗುತ್ತಾರೆ. ಈಗ ಇವರು ಕೋಡೀಕರಿಸಿದ್ದನ್ನು ಅವರು ಡಿಕೋಡೀಕರಿಸಬೇಕು. ಉಳಿದಂತೆ ಪ್ರತಿಕ್ರಿಯೆ ಮತ್ತು ಫೀಡ್‍ಬ್ಯಾಕ್ ಇಲ್ಲಿಯೂ ಮುಂದುವರೆಯುತ್ತದೆ. ಸಂಭಾಷಣೆಯಲ್ಲಿ ಭಾಗವಹಿಸುವ ಇಬ್ಬರೂ ಸಂವಹನದ ಈ ವಿವಿಧ ಘಟಕಗಳನ್ನು ಅರಿವಿನಿಂದ ನಿರ್ವಹಿಸುತ್ತಾ ಹೋದರೆ ಇಬ್ಬರ ನಡುವಿನ ಸಂವಹನವು ಫಲಪ್ರದವಾಗುತ್ತದೆ.
ಉತ್ತಮವಾದ ಸಂಭಾಷಣೆಯಲ್ಲಿ ಕೇಳುಗರದೂ ಸಕ್ರಿಯವಾದ ಪಾತ್ರ ಇರಬೇಕಾಗುತ್ತದೆ. ತಾವು ಕೇಳುಗರಾಗಿದಷ್ಟೂ ಹೊತ್ತು ಅವರು ತದೇಕ ಚಿತ್ತದಿಂದ ಹೇಳುಗರ ಮಾತನ್ನು ‘ಆಲಿಸ’ಬೇಕಾಗುತ್ತದೆ. ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಮಾತುಕತೆಯಲ್ಲಿ ತೊಡಗಿರುವವರು ಮೇಲಿನ ಚಿತ್ರದಲ್ಲಿವ ಘಟಕಗಳನ್ನು ಬಿಡಿಬಿಡಿಯಾಗಿ ಗಮನಿಸುತ್ತಾರೆ ಎಂದಲ್ಲ. ಒಳ್ಳೆಯ ಸಂವಹನಕಾರರು ಈ ಹಂತಗಳನ್ನು ಅನಾಯಾಸ ಎಂಬಂತೆ ಗಮನಿಸುತ್ತಾ ಹೋಗುತ್ತಾರೆ. ಈ ಹಂತಗಳ ಅರಿವಿದ್ದರೆ ಮಾತ್ರ ಅದು ಸಾಧ್ಯ.
ಸಂವಹನ ಶತ್ರು ಸದ್ದುಗದ್ದಲ

ಸಂವಹನದಲ್ಲಿ ತೊಡಗಿರುವ ಇಬ್ಬರೂ ಬಹಳ ಉತ್ತಮವಾಗಿಯೇ ತಮ್ಮ ತಮ್ಮ ಪಾತ್ರವನ್ನು ವಹಿಸುತ್ತಿದ್ದರೂ ಕೆಲವೊಮ್ಮೆ ಸಂವಹನವು ಸಫಲವಾಗದೇ ಇರಬಹುದು ಸಂವಹನಕ್ಕೆ ತೊಡಕನ್ನು ಉಂಟುಮಾಡುವ ಅಂಶವನ್ನು ಗದ್ದಲ(noise) ಎಂದು ಕರೆಯುತ್ತೇವೆ. ಇದು ಸಂವಹನದ ಪರಿಣಾಮವನ್ನು ಕುಂಠಿತಗೊಳಿಸುತ್ತದೆ.
ಗದ್ದಲ ಮೂಲಭೂತವಾಗಿ ಸದ್ದುಗದ್ದಲವೇ ಆಗಿರಬಹುದು. ನಾವು ಮಾತಾಡುತ್ತಿರುವಾಗ ಹತ್ತಿರದಲ್ಲಿ ನಮ್ಮ ಮಾತಿಗೂ ಮೀರಿದ ರಸ್ತೆ ಸಾರಿಗೆ, ಸಮಾರಂಭ, ಪಟಾಕಿ ಇತ್ಯಾದಿ ಸದ್ದುಗದ್ದಲ ಇದ್ದರೆ, ಸಂವಹನದಲ್ಲಿ ತೊಡಗಿರುವವರ ಅದಮ್ಯ ಆಸಕ್ತಿಯ ಹೊರತಾಗಿಯೂ ಅರ್ಥಪೂರ್ಣ ಸಂವಹನ ಸಾಧ್ಯವಾಗುವುದಿಲ್ಲ. ಈ ಸದ್ದನ್ನು ಅಡಗಿಸುವುದು, ಅಥವಾ ಸಾಧ್ಯವಾದರೆ ಅಲ್ಲಿಂದ ಹೆಚ್ಚು ಪ್ರಶಾಂತವಾದ ಜಾಗಕ್ಕೆ ಬದಲಾಯಿಸುವುದು ಸಂವಹನಕಾರರ ಕರ್ತವ್ಯ.
ಇದಲ್ಲದೇ, ಭೌತಿಕವಾಗಿ ಕಾಡುವ ಇನ್ನೊಂದು ‘ಗದ್ದಲ’ ಎಂದರೆ, ಕೇಳುಗರ ಆ ಹೊತ್ತಿನ ಅಸ್ವಸ್ಥತೆ. ಕೇಳುವರಿಗೆ ಜ್ವರ ಬಂದಿದೆ, ತಲೆ ನೋಯುತ್ತಿದೆ, ಅಥವಾ ಇನ್ಯಾವುದೋ ದೈಹಿಕ ಬಾಧೆ ಕಾಡುತ್ತಿದೆ. ಇಂಥ ಸನ್ನಿವೇಶದಲ್ಲಿ ಆಸಕ್ತಿಯ ಹೊರತಾಗಿಯೂ ಪರಿಣಾಮಕಾರಿ ಸಂವಹನ ಸಾಧ್ಯವಾಗುವುದಿಲ್ಲ.
ಹಾಗೆಯೇ, ಹೇಳುಗರ ಕುರಿತು ಕೇಳುಗರಿಗೆ ಪೂರ್ವಗ್ರಹವಿದ್ದರೆ, ಅಥವಾ ಹೇಳಲಾಗುತ್ತಿರುವ ವಿಷಯದ ಕುರಿತು ಅವರಿಗೆ ಸಂಪೂರ್ಣವಾದ ಭಿನ್ನಾಭಿಪ್ರಾಯವಿದ್ದರೆ, ಅವರು ಪರಿಣಾಮಕಾರಿಯಾಗಿ ಆಲಿಸುವುದಿಲ್ಲ, ಆದ್ದರಿಂದ ಸಂವಹನ ಫಲಕಾರಿಯಾಗುವುದಿಲ್ಲ. ಇದು ಒಂದು ರೀತಿ ಮಾನಸಿಕ ಗದ್ದಲ.
ಸುಗಮವಾದ ಮತ್ತು ಪರಿಣಾಮಕಾರಿಯಾದ ಸಂವಹನದ ಒಂದು ಕೊಂಡಿಯನ್ನು ಅರ್ಥ ಮಾಡಿಕೊಂಡಿದ್ದೀರಿ. ಇನ್ನು ಮುಂದೆ ನೀವು ಯಾರ ಜೊತೆಯಲ್ಲಾದರೂ ಸಂಭಾಷಣೆಯಲ್ಲಿ ತೊಡಗಿದ್ದರೆ, ಚರ್ಚೆಯಲ್ಲಿ ಭಾಗವಹಿಸುತ್ತಿದ್ದರೆ ಈ ಅಂಶಗಳ ಕುರಿತು ನೀವು ಪ್ರಜ್ಞಾಪೂರ್ವಕವಾಗಿ ಗಮನ ಕೊಡುತ್ತೀರಿ. ಆರಂಭದಲ್ಲಿ ಕೆಲದಿನಗಳ ಕಾಲ ಇದನ್ನು ಪ್ರಜ್ಞಾಪೂರ್ವಕವಾಗಿ ಬರಬರುತ್ತಾ ಇದ್ದು ನಿಮ್ಮ ಅಪ್ರಜ್ಞಾಪೂರ್ವಕ ಅಭ್ಯಾಸದ ಒಂದು ಭಾಗವಾಗಿಬಿಡುತ್ತದೆ.
ಇದೇ ಸೂತ್ರವನ್ನು ಬರವಣಿಗೆಯ ಮತ್ತು ಓದಿನ ಸಂದರ್ಭಕ್ಕೆ ಅನ್ವಯಿಸಿ, ಲೇಖನದಲ್ಲಿ ಪರಿಣಾಮಕಾರಿ ಸಂವಹನವನ್ನು ಸಾಧಿಸುವುದು ಹೇಗೆ? ನುಡಿಯಂಗಳದಲ್ಲಿ ಕುಳಿತು ಇನ್ನೊಂದು ದಿನ ಮಾತಾಡಿಕೊಳ್ಳೋಣ.

ಪ್ರೊ ಎಂ ಅಬ್ದುಲ್ ರೆಹಮಾನ್ ಪಾಷ
ಹಿರಿಯ ಭಾಷಾ ವಿಜ್ಞಾನಿ




