ಕಾಲಮಾನ | ʼಪ್ಯಾರಡೈಸ್ʼ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಆಯಾಮಗಳ ಸಿನಿಮಾ

Date:

ಈ ಸಿನಿಮಾದಲ್ಲಿ ವೈಯಕ್ತಿಕ ಸಂಬಂಧಗಳ ಜೊತೆಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಮತ್ತು ಕೆಲವು ಸಂಸ್ಥೆಗಳ ತಾರತಮ್ಯದ ಧೋರಣೆಗಳಿಂದ ಹೇಗೆ ಜನಸಾಮಾನ್ಯರು ನರಳುತ್ತಾರೆ ಎಂಬುದನ್ನು ಸಮರ್ಥವಾಗಿ ದಾಟಿಸಲಾಗಿದೆ. ಸಿನಿಮಾದಲ್ಲಿ ಅಲ್ಲಲ್ಲಿ ಮೌನವಿದೆ. ಅದು ಅನ್ಯೋನ್ಯತೆ ಮತ್ತು ಪರಕೀಯತೆಯನ್ನು ಪ್ರತಿಫಲಿಸುವಂತಿದೆ!

ಪ್ರಸನ್ನ ವಿತನಾಗೆ ಶ್ರೀಲಂಕಾದ ಮೂರನೇ ತಲೆಮಾರಿನ ಪ್ರಸಿದ್ಧ ಸಿನಿಮಾ ನಿರ್ದೇಶಕರು. ಅವರೊಬ್ಬ ಲೇಖಕ. ಅವರು ವಿಚಾರ ಪ್ರಚೋದಕ ಸಿನಿಮಾಗಳನ್ನು ನೀಡುತ್ತ ಬಂದಿದ್ದಾರೆ. ಅವರ ಸಿನಿಮಾಗಳು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಸ್ತುಗಳನ್ನು ಹೊಂದಿದ್ದು, ಈ ಕ್ಷೇತ್ರಗಳ ವಿವಿಧ ಸಂಘರ್ಷಗಳ ಬಗೆಗೆ ಬೆಳಕನ್ನು ಚೆಲ್ಲುತ್ತವೆ. ಹಿಂಸೆ ಮತ್ತು ಸಂಘರ್ಷಗಳ ನೆನಪುಗಳ ಜೊತೆ ಜೊತೆಗೆ ಮಾನವತೆಯ ಹುಡುಕಾಟ ಕೂಡ ಅವರ ಸಿನಿಮಾಗಳಲ್ಲಿ ಹಾಸುಹೊಕ್ಕಾಗಿರುತ್ತವೆ. ಅವರ ಯುದ್ಧ ವಿರೋಧಿ ತ್ರಿವಳಿ ಸಿನಿಮಾಗಳಾದ ʼಡೆತ್‌ ಆನ್‌ ಎಫುಲ್‌ ಮೂನ್‌ ಡೇʼ(1997), ʼಆಗಸ್ಟ್‌ ಸನ್‌ ʼ(2003) ಮತ್ತು ʼವಿತ್‌ ಯೂವಿತೌಟ್‌ ಯೂ (2013) ಖ್ಯಾತಿಯನ್ನು ಗಳಿಸಿವೆ. ಇವು ಸಿಂಹಳಿ ಮತ್ತು ತಮಿಳು ಭಾಷೆಗಳಲ್ಲಿವೆ. ಇವರು ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಈ ಸಿನಿಮಾದ ಕಥನ 2022ರಲ್ಲಿ ಶ್ರೀಲಂಕಾದಲ್ಲಿ ಜರುಗುತ್ತದೆ. ಆ ಸಂದರ್ಭದಲ್ಲಿ ಅಲ್ಲಿನ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿರುತ್ತದೆ. ಅಧ್ಯಕ್ಷ ಗೊಟಬಯ ರಾಜಪಕ್ಷೆ ದೇಶ ಬಿಟ್ಟು ಗುಟ್ಟಾಗಿ ಪಲಾಯನ ಮಾಡಿರುತ್ತಾರೆ. ಜನರು ಬೀದಿಗಿಳಿದು ನಾನಾ ರೀತಿಯ ಪ್ರತಿಭಟನೆಗಳನ್ನು ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಭಾರತದಿಂದ ಕೇಸವ್ (‌ನಟ ರೋಶನ್‌ ಮ್ಯಾಥ್ಯೂ) ಮತ್ತು ಅಮೃತಾ (ನಟಿ ದರ್ಶನಾ ರಾಜೇಂದ್ರನ್)‌ ತಮ್ಮ ಮದುವೆಯ ಐದನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲು ಶ್ರೀಲಂಕಾಗೆ ಭೇಟಿ ನೀಡುತ್ತಾರೆ. ಅವರಿಗೆ ಮಾರ್ಗದರ್ಶಿಯಾಗಿರುವುದು ಆಂಡ್ರ್ಯೂ (ನಟ ಶ್ಯಾಮ್‌ ಫರ್ನಾಂಡೊ). ಆತ ಕ್ಯಾಬ್‌ ಚಾಲಕನಾಗಿಯೂ ಕಾರ್ಯ ನಿರ್ವಹಿಸುತ್ತಾನೆ. ಅವರು ರಾಮಾಯಣಕ್ಕೆ ಸಂಬಂಧಿಸಿದ ಕೆಲವು ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಶ್ರೀಲಂಕಾದಲ್ಲಿ ಅವರು ಯಾವ ಪರಿಯ ಪಡಿಪಾಟಲುಗಳನ್ನು ಎದುರಿಸುತ್ತಾರೆ; ಕಾನೂನು ಪ್ರಕ್ರಿಯೆಗಳಿಗೆ ಪಕ್ಕಾಗುತ್ತಾರೆ ಎಂಬುದನ್ನು ನಿರ್ದೇಶಕರು ವೀಕ್ಷಕರಿಗೆ ದಾಟಿಸುತ್ತ ಸಾಗುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
PARADISE 2023 FILM PHOTO 3

ಕೇಸವ್‌ ಮತ್ತು ಅಮೃತಾ ಪಾತ್ರಗಳನ್ನು ವೈದೃಶ್ಯ ನೆಲೆಯಲ್ಲಿ ಕಟ್ಟಲಾಗಿದೆ. ಈ ನಿಟ್ಟಿನಲ್ಲಿ ನಿರ್ದೇಶಕರು ಕೆಲವು ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ. ಬೇಟೆಯಾಡುವುದು ಕಾನೂನುಬಾಹಿರ ಎಂಬ ಅರಿವಿದ್ದರೂ, ಒಮ್ಮೆ ಕೇಸವ್‌ ಅಮೃತಾಳನ್ನು ಆ ಕಾರ್ಯ ಮಾಡುವಂತೆ ಪುಸಲಾಯಿಸುತ್ತಾನೆ. ನಂತರ ಒಂದು ಜಿಂಕೆ ಗೋಚರಿಸಿದಾಗ, ಅದರ ಮೋಹಕತೆಗೆ ಮರಳಾಗುತ್ತಾಳೆ. ಇದು ರಾಮಾಯಣದ ಸೀತೆ ಮಾಯಾ ಜಿಂಕೆಗೆ ಮನಸೋತಿದ್ದನ್ನು ನೆನಪಿಗೆ ತರುತ್ತದೆ. ಈ ಜಿಂಕೆಯ ಇಮೇಜ್‌ ಎರಡು-ಮೂರು ಬಾರಿ ತೋರಿಸಲಾಗಿದೆ! ಒಮ್ಮೆ ಕೇಸವ್ ಅದರತ್ತ ಬಂದೂಕಿನ ಗುರಿಯಿಟ್ಟಾಗ ಹಾಗೆ ಮಾಡಬೇಡಿ ಎಂದು ಅಮೃತಾ ಮನವಿ ಮಾಡುತ್ತಾಳೆ. ಆಕೆ ಹಿಂಸೆಯ ವಿರುದ್ಧ ಇರುತ್ತಾಳೆ ಹಾಗೂ ಸಂವೇದನಾಶೀಲತೆಯಿಂದ ನಡೆದುಕೊಳ್ಳುತ್ತಾಳೆ. ತನ್ನ ಸ್ವಂತ ಹಿತದಲ್ಲಿ ಅಧಿಕಾರವನ್ನು ಚಲಾಯಿಸಲು, ಸೂಕ್ತ ಕಾರ್ಯಗಳಲ್ಲಿ ನಿರತನಾಗಲು ಕೇಸವ್‌ ಸದಾ ಮುಂದಿರುತ್ತಾನೆ. ಅಂದರೆ ಪವರ್‌ ಡೈನಮಿಕ್ಸ್‌ನಲ್ಲಿ ಅವನು ಮುಂಚೂಣಿ ಸ್ಥಾನದಲ್ಲಿ ಇರುತ್ತಾನೆ. ಗಂಡ-ಹೆಂಡತಿಯರ ನಡುವಿನ ಭಾವನಾತ್ಮಕ ಅಪಶ್ರುತಿ, ಆ ದೇಶದ ಜನರ ಮತ್ತು ಪ್ರವಾಸಿಗರ ನಡುವಿನ, ಒಂದರ್ಥದಲ್ಲಿ ಅಹಿತಕಾರಿ ಎನ್ನಬಹುದಾದ ಸ್ಪಂದನ, ಉಳ್ಳವರ ಇರುವು ಮತ್ತು ತುಳಿತಕ್ಕೊಳಗಾದವರ ನೈಜ ಬಾಳಿನ ಅಂತರಗಳನ್ನು ಪ್ರತಿಬಿಂಬಿಸುವಂತಿದೆ!

ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಬಿಕ್ಕಟ್ಟುಗಳಿಂದ ಕೂಡಿದ್ದರೂ, ತಮಗೆ ಎಷ್ಟೇ ಕಷ್ಟವಾದರೂ, ಅಲ್ಲಿನ ಮಂದಿ ವಿದೇಶಿಯರಿಗೆ ಅದರಲ್ಲೂ ವಿದೇಶಿ ಪ್ರವಾಸಿಗರಿಗೆ ಹೇಗೆ ಮಣೆಯನ್ನು ಹಾಕುತ್ತಾರೆ ಎಂಬುದನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಸ್ವದೇಶಿಯರು ಅದರಲ್ಲೂ ಸಮಾಜದ ಕೆಳಹಂತದಲ್ಲಿರುವವರನ್ನು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಇಲಾಖೆ ಮತ್ತಿತರ ಅಂಗ ಸಂಸ್ಥೆಗಳು ಕಾಣುವ ಬಗೆಯನ್ನು, ಅವುಗಳ ಇಬ್ಬಂದಿ ನಡವಳಿಕೆಗಳ ಬಗೆಗೆ ಕ್ಷಕಿರಣವನ್ನು ಬೀರಲಾಗಿದೆ.

ರಾಮಾಯಣ ಕುರಿತಂತೆ ಈ ಸಿನಿಮಾದಲ್ಲಿ ಕೆಲವು ಕುತೂಹಲಕಾರಿ ಸಂಭಾಷಣೆಗಳಿವೆ. ಆಂಡ್ರ್ಯೂ ವಾಲ್ಮೀಕಿ ರಾಮಾಯಣದಲ್ಲಿರುವಂತೆ ಕೆಲವು ಸ್ಥಳ ಪುರಾಣಗಳನ್ನು ಹೇಳುತ್ತ ತಾಣಗಳನ್ನು ತೋರಿಸುತ್ತ ಸಾಗುತ್ತಾನೆ. ಒಮ್ಮೆ ಅಮೃತಾ ಆತನ ಬಳಿ ಮಾತನಾಡುತ್ತ ರಾವಣ ಸೀತೆಯಿಂದ ಹತನಾದ, ಆಗ ಆಕೆಯ ಸಾರಥಿಯಾಗಿದ್ದವನು ರಾಮ ಎಂದು ಹೇಳುತ್ತಾಳೆ! ಇದು ಹೇಗಾಗುತ್ತದೆ ಎಂಬ ಪ್ರಶ್ನೆ ಕೇಳಿ ಬಂದಾಗ, ಆಕೆ ಇದು ಜೈನ ರಾಮಾಯಣದಲ್ಲಿ ಉಲ್ಲೇಖಗೊಂಡಿದೆ ಎಂದು ತಿಳಿಸುತ್ತಾಳೆ. ಮುಂದುವರೆದು ಆಕೆ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ ಹಾಗೂ ಸಂದರ್ಭಕ್ಕೆ ತಕ್ಕಂತೆ ರಾಮಾಯಣವನ್ನು ವ್ಯಾಖ್ಯಾನಿಸಲಾಗುತ್ತದೆ ಎಂದು ಅರಹುತ್ತಾಳೆ.

PARADISE2023 FILM PHOTO 2

ಈ ಸಂದರ್ಭದಲ್ಲಿ ನಮ್ಮ ಕನ್ನಡ ಸಾಹಿತ್ಯದ ಹೆಸರುವಾಸಿ ಜಾನಪದ ಶಾಸ್ತ್ರಜ್ಞ, ಭಾಷಾಶಾಸ್ತ್ರಜ್ಞ, ಕವಿ, ಅನುವಾದಕರಾಗಿದ್ದ ಎ ಕೆ ರಾಮನುಜನ್‌ ಅವರ ʼ ಮುನ್ನೂರು ರಾಮಾಯಣಗಳು: ಅನುವಾದ ಕುರಿತ ಮೂರು ವಿಚಾರಗಳು- ಐದು ಉದಾಹರಣೆಗಳೊಂದಿಗೆʼಎಂಬ ಪ್ರಬಂಧದ ನೆನಪಾಯಿತು. 2005ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಮೇಲೆ ಪ್ರಸ್ತಾಪಿಸಿರುವ ಪ್ರಬಂಧವನ್ನು ಪಾಠ ಮಾಡುತ್ತಿರುವುದಕ್ಕೆ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಒಂದು ಗುಂಪು ಇತಿಹಾಸ ವಿಭಾಗದ ಮೇಲೆ ಆಕ್ರಮಣವನ್ನು ಮಾಡಿತು. ನಂತರ ಈ ಪ್ರಬಂಧವನ್ನು ಪಠ್ಯದಿಂದ ಕೈ ಬಿಡಬೇಕೆಂದು ಆಗ್ರಹಿಸಿತು. 2011ರಲ್ಲಿ ದೆಹಲಿ ವಿಶ್ವವಿದ್ಯಾಲಯ ಈ ಪ್ರಬಂಧವನ್ನು ಕೈ ಬಿಟ್ಟಿತು!

ಈ ಸಿನಿಮಾದಲ್ಲಿ ವೈಯಕ್ತಿಕ ಸಂಬಂಧಗಳ ಜೊತೆಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಮತ್ತು ಕೆಲವು ಸಂಸ್ಥೆಗಳ ತಾರತಮ್ಯದ ಧೋರಣೆಗಳಿಂದ ಹೇಗೆ ಜನಸಾಮಾನ್ಯರು ನರಳುತ್ತಾರೆ ಎಂಬುದನ್ನು ಸಮರ್ಥವಾಗಿ ದಾಟಿಸಲಾಗಿದೆ. ಸಿನಿಮಾದಲ್ಲಿ ಅಲ್ಲಲ್ಲಿ ಮೌನವಿದೆ. ಅದು ಅನ್ಯೋನ್ಯತೆ ಮತ್ತು ಪರಕೀಯತೆಯನ್ನು ಪ್ರತಿಫಲಿಸುವಂತಿದೆ! ದೂರದಲ್ಲಿ ಕೇಳಿಬರುವ ಜನರೇಟರ್‌ಗಳ ಶಬ್ದ, ಸಿಕಾಡಗಳ ನಿನಾದ, ಪವರ್‌ಕಟ್‌ಗಳಿಂದ ಉಂಟಾಗುವ ಶಬ್ದತಡೆ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಸೆರೆಹಿಡಿದಿದೆ ಸಿನಿಮಾದ ಸೌಂಡ್‌ಸ್ಕೇಪ್. ದಂಪತಿ ನಡುವೆ ಹಾಗೂ ಸ್ಥಳೀಯರ ಜೊತೆಗಿನ ಸಂಬಂಧಗಳ ವರ್ಗ, ಲಿಂಗ ಮತ್ತು ಶಕ್ತಿಯ ಆಯಾಮಗಳನ್ನು ಸಂಭಾಷಣೆಗಳು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತವೆ.

ರೋಶನ್‌ ಮ್ಯಾಥ್ಯೂ, ದರ್ಶನಾ ರಾಜೇಂದ್ರನ್, ಶ್ಯಾಮ್‌ ಫರ್ನಾಂಡೊ ಮತ್ತು ಸಾರ್ಜೆಂಟ್‌ ಬಂಡಾರ ಪಾತ್ರದಲ್ಲಿ ಮಹೇಂದ್ರ ಪರಿರಾ ಅವರ ನಟನೆ ಗಮನಾರ್ಹವಾಗಿದೆ. ಸಿನಿಮಟೋಗ್ರಫಿ, ಸಂಗೀತ ಮತ್ತು ಸಂಕಲನ ಸಿನಿಮಾದ ಆಶಯಕ್ಕೆ ಪೂರಕವಾಗಿವೆ.

PARADISE 2023 FILM PHOTO 1

ಸ್ವರ್ಗ ಎನ್ನುವುದು ಯಾರಿಗೆ, ಹೇಗೆ ಮತ್ತು ಏಕೆ ಸಂಭವಿಸುತ್ತದೆ, ಸ್ವರ್ಗದಲ್ಲಿ ನರಕವೂ ಇರುತ್ತದೆ ಎಂಬಿತ್ಯಾದಿ ವಿಚಾರಗಳನ್ನು ವೀಕ್ಷಕರು ಹೇಗೆ ಗ್ರಹಿಸಬಹುದು ಎಂಬ ಚಿಂತನೆಯನ್ನು ಬಿತ್ತುವ ಪ್ರಸನ್ನ ವಿತನಾಗೆ, ʼ ಥ್ರಿಲ್ಲರ್‌ ʼ ಜಾನ್ರ್‌ಗೆ ಸೇರಿಸಬಹುದಾದ ಒಂದು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಆಯಾಮಗಳ ಸಿನಿಮಾವನ್ನು ನೀಡಿದ್ದಾರೆ. ಪ್ರಸ್ತುತ ಈ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿದೆ.

ನಿರ್ದೇಶನ: ಪ್ರಸನ್ನ ವಿತನಾಗೆ
ಕಥೆ: ಪ್ರಸನ್ನ ವಿತನಾಗೆ
ಚಿತ್ರಕಥೆ: ಅನುಷ್ಕಾ ಸೇನನಾಯಕೆ
ಸಿನಿಮಟೋಗ್ರಫಿ: ರಾಜೀವ್‌ ರವಿ
ನಿರ್ಮಾಣ: ನ್ಯೂಟನ್‌ ಸಿನಿಮಾ, ಮಣಿರತ್ನಂ, ಶಿವಾ ಅನಂತ್.‌
(ಇದು ಶ್ರೀಲಂಕಾ-ಭಾರತದ ಜಂಟಿ ಪ್ರಯತ್ನ)
ಅವಧಿ: 95 ನಿಮಿಷಗಳು
ಭಾಷೆಗಳು; ಸಿಂಹಳಿ, ಮಲಯಾಳಂ, ತಮಿಳು ಮತ್ತು ಇಂಗ್ಲಿಷ್‌

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...