ಒಳದನಿ | ಕವಯಿತ್ರಿ ಲಕ್ಷ್ಮೀಬಾಯಿ ತಿಲಕರ ‘ಸ್ಮೃತಿ ಚಿತ್ರೆ’

Date:

ಹಿಂದೂಧರ್ಮದನ್ವಯ ಮದುವೆಯಾದ ಹೆಣ್ಣು ಕಾಯಾ ವಾಚಾ ಮನಸಾ ಗಂಡನನ್ನು ಅನುಸರಿಸಬೇಕೆಂಬ ನಿಯಮವಿದೆ. ಹಿಂದೂ ಧರ್ಮನಿಷ್ಠಳಾದ ಹೆಂಡತಿ, ಗಂಡ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಆಗ ಏನು ಮಾಡಬೇಕು? ಈ ವೈರುಧ್ಯವೇ ಲಕ್ಷ್ಮೀಬಾಯಿಯ ಬದುಕಿನ ಮಹಾ ಸಮಸ್ಯೆ. ಈ ಸಮಸ್ಯೆಯನ್ನು ಲಕ್ಷ್ಮೀಬಾಯಿಯು ಪರಿಹರಿಸಿಕೊಂಡ ರೀತಿ ಮತ್ತು ಎಲ್ಲ ಕಷ್ಟ ಪರಂಪರೆಗಳನ್ನು ದಿಟ್ಟವಾಗಿ ಎದುರಿಸಿ ತನ್ನತನವನ್ನು ಸ್ಥಾಪಿಸಿಕೊಳ್ಳುವ ಬಾಳ ಪಯಣವು ಅವಳ ಆತ್ಮಚರಿತ್ರೆ ‘ಸ್ಮೃತಿ ಚಿತ್ರೆ’ಯ ಮುಖ್ಯ ಸತ್ವವಾಗಿದೆ.

“ನನ್ನ ಜೀವನದಲ್ಲಿ ನಾನು ಆತ್ಮಹತ್ಯೆಗೆ ಮೊರೆ ಹೋಗುವ ಹಲವಾರು ಸಂದರ್ಭಗಳು ಬಂದಿವೆ. ಆದರೆ ನಾನೆಂದೂ ಹಾಗೆ ಮಾಡಲಿಲ್ಲ. ಎಂತಹ ನಿರಾಸೆಯ ಕತ್ತಲಿನಲ್ಲಿಯೂ ನಾನು ತಡವರಿಸುತ್ತಾ, ದಾರಿ ಹುಡುಕಲು ಹೋರಾಟವನ್ನೇ ನಡೆಸಿದ್ದೇನೆ. ಈ ಹಾದಿಯಲ್ಲಿ ನಾನೆಂದೂ ಎಡವದೆ, ಬೀಳದೆ, ಜೀವನವನ್ನು ಕಳೆದುಕೊಂಡಿಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ನಾನೊಂದು ರಬ್ಬರ್ ಬಾಲ್” ಹೀಗೆ ಜೀವನ ಪ್ರೀತಿಯನ್ನೂ, ಜೀವನ ಸ್ಥೈರ್ಯವನ್ನು ತನ್ನ ಜೀವನದ ಭಾಗವಾಗಿಸಿಕೊಂಡು ಬದುಕಿದ ಹತ್ತೊಂಭತ್ತನೆಯ ಶತಮಾನದ ಮಹಿಳಾಮಣಿಗಳಲ್ಲಿ ಮಹಾರಾಷ್ಟ್ರದ ನಾಸಿಕದ ಕವಯಿತ್ರಿ ಲಕ್ಷ್ಮೀಬಾಯಿ ತಿಲಕ್ ಒಬ್ಬರು.

ಅವರು ಮರಾಠಿಯಲ್ಲಿ ಬರೆದುಕೊಂಡಿರುವ ಆತ್ಮ ಚರಿತ್ರೆ ಸ್ಮೃತಿ ಚಿತ್ರೆ ಚಾರಿತ್ರಿಕವಾಗಿಯೂ, ಸಾಹಿತ್ಯಿಕವಾಗಿಯೂ, ಸಾಮಾಜಿಕವಾಗಿಯೂ ಒಂದು ಗಮನಾರ್ಹ ದಾಖಲೆ. “ಮಹಾತ್ಮ ಗಾಂಧಿಯವರು ತಮ್ಮ ‘ಸತ್ಯಾನ್ವೇಷಣೆಯ ನನ್ನ ಪ್ರಯೋಗಗಳು’ ಕೃತಿಯಲ್ಲಿ ತೋರಿರುವ ನೇರ ಮತ್ತು ನಿರ್ಭಯತೆಯ ಲಕ್ಷಣಗಳ ರೀತಿಯನ್ನು ಈ ಪುಸ್ತಕದಲ್ಲಿಯೂ ಕಾಣಬಹುದು, ಎಂದರೆ ಅದು ಅತಿಶಯೋಕ್ತಿಯೇನೂ ಅಲ್ಲ” ಎಂದ ಮರಾಠಿ ನಾಟಕಕಾರ ಮತ್ತು ಕವಿ ಆಚಾರ್ಯ ಪಿ. ಕೆ. ಅತ್ರೆಯವರ ಮಾತುಗಳು ಈ ಪುಸ್ತಕದ ಮಹತ್ವವನ್ನು ಸೂಚಿಸುತ್ತವೆ.

ಕ್ರಿಶ್ಚಿಯನ್ ತತ್ವದ ಪ್ರಭಾವ, ಪಾಶ್ಚಾತ್ಯ ಮೌಲ್ಯ ವ್ಯವಸ್ಥೆಯೊಡಗೂಡಿದ ಬ್ರಿಟಿಷ್‌ ವಸಾಹತುಶಾಹಿ ಆಳ್ವಿಕೆಯ ಪ್ರಭಾವದಿಂದ ಭಾರತದಲ್ಲಿ ಹಲವರು ಬದಲಾವಣೆಗಳುಂಟಾದವು. ಈ ಬದಲಾವಣೆಗಳಲ್ಲಿ ಮತಾಂತರವೂ ಒಂದು.

ಮತಾಂತರಗೊಂಡವರಲ್ಲಿ ಕೆಲವು ಬ್ರಾಹ್ಮಣರು ವಿದ್ಯಾಭ್ಯಾಸ ಹೊಂದಿ ಸ್ವಯಂ ಕ್ರೈಸ್ತಮತಕ್ಕೆ ಮತಾಂತರಗೊಂಡರು. ಹೀಗೆ ಮನೆಯ ಪುರುಷರು ಮತಾಂತರಗೊಂಡಾಗ ಆ ಕುಟುಂಬದ ಇತರ ಸದಸ್ಯರು, ಅದರಲ್ಲೂ ಮಹಿಳೆಯರು ಎದುರಿಸಬೇಕಾದ ಸಮಸ್ಯೆಗಳು, ಅದು ಹುಟ್ಟುಹಾಕಿದ ಸಾಮಾಜಿಕ ತಲ್ಲಣಗಳು ಕುತೂಹಲಕರವಾದುದು. ಕುಟುಂಬದಲ್ಲಿ ಗಂಡ-ಹೆಂಡತಿಯಿಬ್ಬರು ವಿಭಿನ್ನ ಧರ್ಮಾಚರಣೆ ಮಾಡುವವರಾದರೆ ಎದುರಿಸಬೇಕಾದ ಸಾಮಾಜಿಕ ಸನ್ನಿವೇಶವನ್ನು ಅತ್ಯಂತ ಹೃದಯಂಗಮವಾಗಿ ಕಟ್ಟಿಕೊಡುವ ಲಕ್ಷ್ಮೀಬಾಯಿಯವರ ಆತ್ಮಚರಿತ್ರೆ ಹೆಣ್ಣಿನ ಮನಸ್ಸಿನ ಒಳತೋಟಿಯನ್ನು ಸಮರ್ಥವಾಗಿ ಸೆರೆಹಿಡಿಯುತ್ತದೆ. ಅಕ್ಷರದ ಹಸಿವಿನಿಂದ ಓದಿ, ಕಲಿತು ಪಂಡಿತನಾಗಿ, ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತನಾಗಿ ಕ್ರೈಸ್ತ ಮತಕ್ಕೆ ಮತಾಂತರ ಹೊಂದಿದ ನಾರಾಯಣ್ ವಾಮನ ತಿಲಕ್ ಅವರ ಪತ್ನಿಯಾದ ಲಕ್ಷ್ಮೀಬಾಯಿಯವರ ಆತ್ಮಚರಿತ್ರೆಯಲ್ಲಿ ಹಿಂದೂಧರ್ಮದ ಪಿತೃಶಾಹಿ ವ್ಯವಸ್ಥೆಯ ಬುಡಕ್ಕೆ ಸಿಲುಕಿ ನಲುಗುವ ಹೆಣ್ಣೊಬ್ಬಳ ಕರುಣಾಜನಕ ಕತೆಯಿದೆ.

images 18
ಪತಿ ನಾರಾಯಣ್ ವಾಮನ ತಿಲಕ್ ಅವರ ಜೊತೆ…

ಹಿಂದೂಧರ್ಮದನ್ವಯ ಮದುವೆಯಾದ ಹೆಣ್ಣು ಕಾಯಾ ವಾಚಾ ಮನಸಾ ಗಂಡನನ್ನು ಅನುಸರಿಸಬೇಕೆಂಬ ನಿಯಮವಿದೆ. ಹಿಂದೂ ಧರ್ಮ ನಿಷ್ಠಳಾದ ಹೆಂಡತಿ ಗಂಡ ಕ್ರೈಸ್ತ ಮತಾಂತರಗೊಂಡರೆ ಆಗ ಏನು ಮಾಡಬೇಕು? ಈ ವೈರುಧ್ಯವೇ ಲಕ್ಷ್ಮೀಬಾಯಿಯ ಬದುಕಿನ ಮಹಾ ಸಮಸ್ಯೆ. ಈ ಸಮಸ್ಯೆಯನ್ನು ಲಕ್ಷ್ಮೀಬಾಯಿಯು ಪರಿಹರಿಸಿಕೊಂಡ ರೀತಿ ಮತ್ತು ಎಲ್ಲ ಕಷ್ಟ ಪರಂಪರೆಗಳನ್ನು ದಿಟ್ಟವಾಗಿ ಎದುರಿಸಿ ತನ್ನತನವನ್ನು ಸ್ಥಾಪಿಸಿಕೊಳ್ಳುವ ಬಾಳ ಪಯಣವು ಅವಳ ಆತ್ಮಚರಿತ್ರೆ ‘ಸ್ಮೃತಿ ಚಿತ್ರೆ’ಯ ಮುಖ್ಯ ಸತ್ವವಾಗಿದೆ.

ಈ ಇಡೀ ಕೃತಿಯ ವಸ್ತುವನ್ನು ಮೂರು ಹಂತದಲ್ಲಿ ವಿವರಿಸಬಹುದು: ತಂದೆಯನ್ನು ಕಳೆದುಕೊಂಡ ಬಾಲಕಿ ಲಕ್ಷ್ಮೀಬಾಯಿಯ ವಿವಾಹವಾಗಿ ಗಂಡನ ಮನೆ ಸೇರಿ ಸಂಸಾರದ ಕಷ್ಟ ಕಾರ್ಪಣ್ಯಗಳಲ್ಲಿ ಮುಳುಗೇಳುವುದು ಮತ್ತು ಗಂಡ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡದ್ದರಿಂದ ಅನುಭವಿಸುವ ಕಷ್ಟ ಪರಂಪರೆಗಳು. ಎರಡನೆಯ ಹಂತ ಗಂಡನನ್ನು ಸೇರಿಕೊಂಡು ತಾವೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವುದು ಮತ್ತು ಕ್ರೈಸ್ತಳಾಗಿ ಮಾಡುವ ಕೆಲಸಗಳು. ಗಂಡನ ಸಾವಿನ ನಂತರ ಮಗಳು ಮತ್ತು ಸೊಸೆಯನ್ನು ಕರೆದುಕೊಂಡು ಉದ್ಯೋಗವರಸಿ ಕರಾಚಿಗೆ ಹೋದ ಸಾಹಸಮಯ ಆತ್ಮವೃತ್ತಾಂತ ಇಲ್ಲಿದೆ.

1868ರಲ್ಲಿ ಲಕ್ಷ್ಮೀಬಾಯಿ ತಿಲಕ ಮಹಾರಾಷ್ಟ್ರದ ನಾಸಿಕದ ಹಳ್ಳಿಯೊಂದರ ಕರ್ಮಠ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದರು. ಅವರಿಗೆ ಹನ್ನೊಂದು ವರ್ಷ ವಯಸ್ಸಾದಾಗ ಹದಿನೇಳು ವರ್ಷ ವಯಸ್ಸಿನ ನಾರಾಯಣ ವಾಮನ ತಿಲಕರನ್ನು ಮದುವೆಯಾದರು. ‘ಸ್ಮೃತಿ ಚಿತ್ರೆ’ಯಲ್ಲಿ ಲಕ್ಷ್ಮೀಬಾಯಿಯವರು ತಮ್ಮ ಗಂಡನೊಂದಿಗಿನ ಸಂಕೀರ್ಣ ಸಂಬಂಧವನ್ನು ವಿವರಿಸುತ್ತಾರೆ. ವಾಮನ ತಿಲಕರಿಗೆ ಅರ್ಥಗಳಿಕೆಯ ವಿಷಯದಲ್ಲಿದ್ದ ತೀವ್ರ ನಿರಾಸಕ್ತಿಯ ಕಾರಣಕ್ಕಾಗಿ ಸದಾ ಅವರೊಡನೆ ಜಗಳವಾಡುತ್ತಲೇ ಇದ್ದರು ಮತ್ತು ಅದರಿಂದಾಗಿ ಅವರು ಸದಾ ಬರಿಗೈಯಲ್ಲೇ ಉಳಿಯಬೇಕಾಗಿ ಬಂದದ್ದು ಮತ್ತು ಇಂತಹ ಸಂದರ್ಭಗಳಲ್ಲಿ ಉಂಟಾಗುವ ಮಾತುಕತೆಯಿಂದಾಗಿ ಮಾನಸಿಕ ಕ್ಷೋಭೆಯಾಗುತ್ತಿತ್ತು ಮತ್ತು ಕೋಪಗೊಳ್ಳುತ್ತಿದ್ದರು. ಅವಳು ಬದುಕಿನಲ್ಲಿ ಮುಖಾಮುಖಿಯಾಗುವ ಪುರುಷರೆಲ್ಲಾ ಈ ರೀತಿ ಒಬ್ಬರಿಗಿಂತ ಒಬ್ಬರು ವಿಕೃತ ಸ್ವಭಾವದ ಅತಿರೇಕಗಳು. ಲಕ್ಷ್ಮೀಬಾಯಿಯವರು ಜನ್ಮದಾರಭ್ಯ ಇಂಥ ವಿಚಿತ್ರ ಸ್ವಭಾವದ ಜನರೊಡನೆ ಬೆಳೆದರು. ಅವಳ ತಂದೆ ಮತ್ತು ಮಾವ ಇಬ್ಬರೂ ಪಿತೃಶಾಹಿಯ ದೌಲತ್ತಿನ ಜೊತೆಗೆ ಬ್ರಾಹ್ಮಣೀಯತೆಯ ಕರ್ಮಠತನವನ್ನು ಮೆರೆದವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ಮದುವೆಯಾದ ನಂತರ ಸಿಕ್ಕ ಗಂಡನೋ ಮನೆಯಲ್ಲಿ ಮಗನಿಗೆ ತಿನ್ನಲು ಏನೂ ಇಲ್ಲ, ಉಪವಾಸವೆಂದು ಅಕ್ಕಿ ತರಲು ಗಂಡನ ಕೈಯಲ್ಲಿ ರೂಪಾಯಿ ಕೊಟ್ಟರೆ ಅಕ್ಕಿಯ ಬದಲು ಮನೆಗೆ ಬಂದದ್ದು ಮಸಿಕುಡಿಕೆ. ಅದರಿಂದ ಕೋಪ ಮಾಡಿಕೊಂಡ ಲಕ್ಷ್ಮೀಬಾಯಿಯ ವರ್ತನೆಗೆ ಗಂಡನೂ ಮುನಿಸಿಕೊಂಡು ಅದನ್ನು ಒಡೆದು ಹಾಕುತ್ತಾನೆ. ಅಂತಹ ಬೇಜವಾಬ್ದಾರಿ ಗಂಡ. ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಿರುತ್ತಾನೆ.

WhatsApp Image 2025 03 19 at 4.34.07 PM

ಮರಾಠಿ ಸಾಹಿತ್ಯ ಚರಿತ್ರೆಯಲ್ಲಿ ಭದ್ರವಾದ ಸ್ಥಾನ ಗಿಟ್ಟಿಸಿಕೊಂಡ ಈಕೆ ನಿರಕ್ಷರಕುಕ್ಷಿಯಾಗಿದ್ದವಳು. ಬಾಲ್ಯದಲ್ಲಿ ಶಾಲೆಗೆ ಹೋಗಿ ಕಲಿತಿದ್ದಿಲ್ಲ. ಅವರಿಗೆ ಪತಿ ತಿಲಕರೇ ಓದು-ಬರಹ ಕಲಿಸಿದ್ದು. ಆದರೆ ಪುಸ್ತಕ ಪ್ರೀತಿ ಅವರಿಗೆ ಹುಟ್ಟು ಗುಣವಾಗಿತ್ತು. ಕವಿ ಪತಿಯ ಸಹವಾಸ, ವಿಕ್ಷಿಪ್ತ ಕವಿಯೊಡನೆ ದಿನ ಕಳೆಯುವಾಗ ಹೃದಯ ಹುರಿಗೊಂಡು ಅವರ ಕವಿತ್ವ ಶಕ್ತಿ ಜಾಗೃತವಾಯಿತು. ಸ್ವಂತ ದುಃಖವನ್ನು ಮನಸ್ಸಿಗೆ ಹೇಳಿಕೊಳ್ಳುವಾಗ ತಂತಾನೆ ಹೊಂದಿಕೆಯಾಗಿ ಬರುವ ಕವಿತೆಯ ಸಾಲುಗಳನ್ನು ಇದ್ದಿಲು, ಖಡುವಿನ ತುಂಡು, ಇಲ್ಲವಾದರೆ ಮಸಿಕುಡಿಕೆ ಮತ್ತು ಬೆಂಕಿಪೆಟ್ಟಿಗೆಯ ಒಂದು ಕಡ್ಡಿಯ ಸಹಾಯದಿಂದ ಗೋಡೆಯ ಮೇಲೆ ಮತ್ತು ನೆಲದ ಮೇಲೆ ಬರೆಯತೊಡಗಿದರು. ದಿನನಿತ್ಯ ಬದಲಿಸುವ ಅವರ ಗುಳೇಕಾರ ಜೀವನದಲ್ಲಿ ಅವರು ಎಷ್ಟು ಓದಿದರೆಂಬುದು ತಿಳಿದುಬರುವುದಿಲ್ಲ. ಮನೆಯ ಕೆಲಸದ ಹೊರೆ ಮತ್ತು ದಾರಿದ್ರ್ಯದಲ್ಲಿ ಅವರು ಬರೆದದ್ದು ಕಡಿಮೆಯೇ ಇರಬೇಕು. ಆದರೆ ಅವರು ಕ್ರೈಸ್ತ ಮತಕ್ಕೆ ಧರ್ಮಾಂತರಗೊಂಡ ಮೇಲೆ ಬರವಣಿಗೆಗೆ ಸ್ವಲ್ಪ ಆರಾಮ ಸಿಕ್ಕಿರಬೇಕು. ಅವರು ಸ್ವಂತದ ಬರವಣಿಗೆ ಬಗ್ಗೆ ಒಂದೆಡೆ ಹೀಗೆ ಹೇಳಿಕೊಳ್ಳುತ್ತಾರೆ:
ಆರು ಶಾಸ್ತ್ರಗಳ ಹೆಸರನು ಅರಿತಿಲ್ಲ|
ಆದರೂ ಈ ಜಗದಿ ಶಾಸ್ತ್ರಜ್ಞಳಾನು|

ತಿಲಕರು ಕ್ರೈಸ್ತ ಧರ್ಮಕ್ಕೆ ಸೇರಿದಂದಿನಿಂದ ಸ್ವತಃ ಲಕ್ಷ್ಮೀಬಾಯಿ ಕ್ರೈಸ್ತ ಧರ್ಮಕ್ಕೆ ಸೇರುವವರೆಗಿನ ಕಥಾಭಾಗ ಬಹಳ ಹೃದಯವಿದ್ರಾವಕವಾಗಿದೆ. ರೆವರೆಂಡ್ ತಿಲಕರು ಯಾರಿಗೂ ತಿಳಿಸದೆ ಕ್ರೈಸ್ತ ಧರ್ಮದ ದೀಕ್ಷೆಯನ್ನು ಕೈಗೊಂಡರು. ಆ ದಿನಗಳಲ್ಲಿ ಧರ್ಮಾಂತರವೆಂದರೆ ಜನಕ್ಕೆ ಮೃತ್ಯುವಿಗಿಂತ ಭಯಂಕರವೆನಿಸಿತ್ತು. ಆಪ್ತೇಷ್ಟರಿಗೆ ಆಘಾತವಾಯಿತು. ಲಕ್ಷ್ಮೀಬಾಯಿಯವರಿಗೆ ತಕ್ಷಣ ಮಾನಸಿಕ ಪರಿಣಾಮವಾಗಿ ಭ್ರಮಿಷ್ಠರಾದರು. ತಿಲಕರು ತಮ್ಮಷ್ಟಕ್ಕೆ ತಾವು ಸುಮ್ಮನೆ ಕೂಡುತ್ತಿರಲೂ ಇಲ್ಲ. ತನ್ನ ಹೆಂಡತಿಯನ್ನು ಮತ್ತು ಮಗನನ್ನು ತನ್ನೆಡೆಗೆ ಕಳುಹಿಸಿ ಎಂದು ಕೇಳುತ್ತಾ ಕಾಡುತ್ತಿದ್ದರು. ಸ್ವಧರ್ಮವನ್ನು ಬಿಟ್ಟ ತಿಲಕರೆಡೆಗೆ ಅವರ ಹೆಂಡತಿ ಮತ್ತು ಮಗನನ್ನು ಕಳುಹಿಸಿಕೊಡುವುದಕ್ಕೆ ಅವರ ಆಪ್ತೇಷ್ಟರು ಸಿದ್ಧರಿರಲಿಲ್ಲ. ಲಕ್ಷ್ಮೀಬಾಯಿಯವರಿಗೆ ಧರ್ಮಾಂತರವಾಗುವುದುದಕ್ಕೆ ಮನಸ್ಸಿರಲಿಲ್ಲ. ಆದರೆ ಧರ್ಮ ಬಿಟ್ಟ ಗಂಡನಿಂದಾಗಿ ಅವಳೂ ಕೂಡ ಪರಿತ್ಯಕ್ತ ಸ್ತ್ರೀಯ ಸ್ಥಾನಮಾನ ಪಡೆಯುತ್ತಾಳೆ. ಕುಟುಂಬದವರಿಗೆ ಅವಳು ಗಂಡನ ಬಳಿ ಹೋಗುವುದೂ ಇಷ್ಟವಿಲ್ಲ. ಆದರೆ ಪತಿ ತಿಲಕರು ಅವರ ಬಳಿ ಹೋಗಬೇಕೆಂದು, ಇಲ್ಲದಿದ್ದರೆ ತಾನು ಕೋರ್ಟಿಗೆ ಹೋಗುತ್ತೇನೆಂದು ಧಮ್ಕಿ ಹಾಕುತ್ತಾರೆ. ಅಣ್ಣಂದಿರು ಕೂಡ ಅವಳು ತಮ್ಮ ಬಳಿಯೇ ಇರಲಿ, ತಮ್ಮ ಒಬ್ಬ ತಮ್ಮನಿಗೆ ಊನತೆ ಇದ್ದರೆ ತಾವು ಸಾಕುತ್ತಿರಲಿಲ್ಲವೇ? ಎಂದು ಅವಳ ಪಕ್ಕಕ್ಕೆ ನಿಲ್ಲುತ್ತಾರೆ. ಹೆಸರಿಗೆ ಮಾತ್ರ ಮುತ್ತೈದೆಯಾಗಿರುವುದಕ್ಕಿಂತ ಡಾಣಾಡಂಗುರವಾದ ವೈಧವ್ಯವೇ ಮೈವೆತ್ತಂತೆ ಅವರು ಬಾಳಬೇಕಾಯಿತು. ಅವರನ್ನು ಸುವಾಸಿನಿ ಎನ್ನಬೇಕೋ ವಿಧವೆಯೆನ್ನಬೇಕೋ ಎಂದು ಚರ್ಚೆ ನಡೆಯಿತು. ಆಪ್ತೇಷ್ಟರು ತನ್ನನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಧರ್ಮದ ಪ್ರಶ್ನೆ ಬಂದಾಗ ಅವರ ವರ್ತನೆ ಬೇರೆಯೇ ಆಗಿರುತ್ತಿತ್ತು. ಕೊನೆಗೆ ತಾವೇ ಒಂದು ನಿರ್ಧಾರ ತೆಗೆದುಕೊಂಡು ತನ್ನ ಮಗನೊಡನೆ ತಿಲಕರಿದ್ದ ಊರಿಗೆ ಬಂದು ಬೇರೆ ವಾಸ್ತವ್ಯ ಹೂಡುತ್ತಾರೆ. ಗಂಡನೊಡನೆ ಹೊರಟ ಲಕ್ಷ್ಮೀಬಾಯಿಯನ್ನು ಜನರು ಮತಾಂತರ ಹೊಂದಿದವಳಂತೆಯೇ ಭಾವಿಸುತ್ತಾರೆ. ಧರ್ಮಾಂತರ ಹೊಂದಿದ ಜನಕ್ಕೆ ಸಿಗುವ ಅಸಡ್ಡೆ ಮತ್ತು ಪ್ರೇಮರಹಿತ ನಡವಳಿಕೆಯೇ ಅವರಿಗೆ ಸಿಕ್ಕಿದ್ದು. ಅವಳು ಗಂಡನಿಂದ ಐದು ವರ್ಷಗಳ ಕಾಲ ದೂರವಿರಬೇಕಾಗಿ ಬಂತು. ನಂತರ ಅವರ ಪುನರ್ಮಿಲನ ಘಟಿಸಿದಾಗ ನಿಧಾನವಾಗಿ ಅವಳಿಗೂ ಹಿಂದೂ ಧರ್ಮದ ಬಗ್ಗೆ ಭ್ರಮ ನಿರಸನವಾಗಿ ಅವಳೂ ಕ್ರಿಸ್ತ ಧರ್ಮಕ್ಕೆ ಮಗನೊಂದಿಗೆ ಮತಾಂತರಗೊಳ್ಳುತ್ತಾಳೆ.

ಇದಕ್ಕೆ ಪ್ರತಿಯಾಗಿ ರೆವರೆಂಡ್ ತಿಲಕರೂ ಮತ್ತು ಅವರ ಕ್ರೈಸ್ತ ಬಾಂಧವರು ಲಕ್ಷ್ಮೀಬಾಯಿಯವರ ನಗರ ವಾಸ್ತವ್ಯ ಸುಖರೂಪವಾಗಬೇಕೆಂದು ಪ್ರಯತ್ನಿಸಿದರು. ಇದೆಲ್ಲದರ ಪರಿಣಾಮದಿಂದ ಅವರ ಮನಸ್ಸು ತಮಗರಿಯದೆಯೇ ಧರ್ಮಾಂತರಕ್ಕೆ ಅನುಕೂಲವಾಗಿ ಮಾರ್ಪಟ್ಟಿರಬೇಕು. ಇಂಥದೊಂದು ದ್ವಿಧರ್ಮದ ಕುಟುಂಬದಲ್ಲಿ ಗಂಡನೊಬ್ಬ ಕ್ರೈಸ್ತನಾಗಿದ್ದು, ಹೆಂಡತಿ ಮತ್ತು ಮಗ ಇವರಷ್ಟೇ ಹಿಂದೂಗಳಾಗಿ ಇರುವಂಥ ಅವಸ್ಥೆ ಕೆಲದಿನ ನಡೆದು ಬಂತು. ತಿಲಕರು ನಿರಾಕಾರ ಪರಮೇಶ್ವರನನ್ನು ಪ್ರಾರ್ಥಿಸುತ್ತಿದ್ದರೆ ಲಕ್ಷ್ಮೀಬಾಯಿ ದೇವಿ, ಗಣಪತಿ ಮುಂತಾದ ಎಲ್ಲ ದೇವರ ಪೂಜೆ ಮಾಡುತ್ತಿದ್ದರು. ಅವರು ತಮ್ಮ ಮಡಿ-ಮೈಲಿಗೆಗಳನ್ನು ತಮ್ಮಷ್ಟಕ್ಕೆ ನಡೆಸಿಕೊಂಡು ಬಂದರು. ಆದರೆ ಪ್ರತಿಯೊಂದು ವಿಷಯಕ್ಕೂ ತಿಲಕರು ಆಗ್ರಹ ಹಿಡಿಯುವ ಸ್ವಭಾವದವರು. ಒಮ್ಮೆ ಮುಸಲ್ಮಾನನೊಬ್ಬ ತಂದ ನೀರನ್ನು ಹೆಂಡತಿ ಕುಡಿಯಬೇಕೆಂದು ಆಗ್ರಹಿಸುತ್ತಾರೆ. ಅದಕ್ಕೆ ಲಕ್ಷ್ಮೀಬಾಯಿ ಮೊದಲು ಪ್ರತಿಭಟಿಸಿದರೂ ನಂತರ ಗಂಡನ ಹಾದಿಗೇ ಸರಿಯುತ್ತರೆ. ನಾನಿನ್ನು ಜಾತಿ ಬೇಧವನ್ನೂ, ಮಡಿಮೈಲಿಗೆಯನ್ನೂ ಆಚರಿಸುವುದಿಲ್ಲವೆಂದೂ, ಸಂಯಮದಿಂದ ಹೇಳುತ್ತಾರೆ. ಧರ್ಮಾಂತರ ಹೊಂದಿದ ಮೇಲೆ ಮಾರ್ಪಟ್ಟ ಲಕ್ಷ್ಮೀಬಾಯಿಯೆಂದರೆ ಕ್ರಿಸ್ತನ ಪರೋಪಕಾರಿ ತತ್ವವನ್ನು ಆತ್ಮಗತ ಮಾಡಿಕೊಂಡ ಕಲ್ಪನೆ ಮತ್ತು ಪತಿಯನ್ನು ಅನುಸರಿಸುವುದೇ ಹಿತಕರ ಮಾರ್ಗವೆಂಬ ಶ್ರದ್ಧೆ, ಎಂಬ ಹಿಂದೂ ಧರ್ಮದ ಯುಗಾನುಯುಗಗಳ ನಂಬಿಕೆ – ಇವುಗಳ ಸಮನ್ವಯದ ಪ್ರತೀಕವಾಗಿ ಕಂಡುಬರುತ್ತಾರೆ.

ಒಮ್ಮೆ ಕ್ರೈಸ್ತ ಮತಕ್ಕೆ ಸೇರಿದ ಮೇಲೆ ಹೆಂಡತಿ ಮುಂದುವರಿಯುವ ರೀತಿ ತಿಲಕರಿಗೆ ದಂಗುಬಡಿಸುತ್ತದೆ. ಒಮ್ಮೆ ಅವರಿಲ್ಲದಾಗ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಂಗಿಯವಳ ಮನೆಗೆ ಲಕ್ಷ್ಮೀಬಾಯಿ ಹೋಗುತ್ತಾರೆ. ಅವಳೊಡನೆ ಸಮಾನವಾಗಿ ವರ್ತಿಸುತ್ತಾರೆ. ಅವಳು ಮಾಡಿ ತಂದ ಅಡುಗೆಯನ್ನು ಮನೆಯ ಆಳುಗಳು ತಿನ್ನದಿದ್ದರೂ ಲಕ್ಷ್ಮೀಬಾಯಿ ಮತ್ತು ಅವಳ ಮಕ್ಕಳು ತೆಗೆದುಕೊಂಡು ತಿನ್ನುತ್ತಾರೆ. ಸಮಾಜಕ್ಕೆ ತನ್ನಿಂದ ಏನಾದರೂ ಸೇವೆ ಸಲ್ಲಿಸಬೇಕು ಎಂಬ ಇಚ್ಛೆಯಿಂದ ಮೀರಜ್‌ನಲ್ಲಿ ನರ್ಸಿಂಗ್ ಕಲಿಯಲು ಸೇರುತ್ತಾರೆ. ಆದರೆ ಆ ತರಬೇತಿ ಯಶಸ್ವಿಯಾಗುವುದಿಲ್ಲ. ಊರಿಗೆ ಎರಡು ಬಾರಿ ಕಾಲರಾ ರೋಗ ಬಡಿದಾಗ ರೋಗಿಗಳನ್ನು ಮನೆಗೆ ಕರೆದುಕೊಂಡು ಬಂದು ಸಂತೈಸಿ, ಆರೈಕೆ ಮಾಡುವುದೇ ಮುಂತಾದ ಜನಹಿತಕಾರ್ಯದಲ್ಲಿ ದೇವರನ್ನು ಕಾಣುವ ಲಕ್ಷ್ಮೀಬಾಯಿಯವರ ಕ್ರಿಯಾ ಚಟುವಟಿಕೆಗಳು ಅವರ ಕ್ರಿಸ್ತಧರ್ಮ ಅಂಗೀಕಾರದ ಸಂಪೂರ್ಣ ಪ್ರಯತ್ನಗಳಾಗಿವೆ. ಇವರು ಪಂಡಿತ ರಮಾಬಾಯಿಯವರ ಸಮಕಾಲೀನರಾಗಿದ್ದು, ಆ ಕುರಿತ ಪ್ರಸ್ತಾಪ ಈ ಆತ್ಮಚರಿತ್ರೆಯಲ್ಲಿ ಬರುತ್ತದೆ. ತಿಲಕರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿದ್ದಾಗ ಅವರನ್ನು ಕಾಣಲು ಪಂಡಿತ ರಮಾಬಾಯಿಯವರ ಮಗಳಾದ ಮನೋರಮಾ ದೇವಿಯು ಹಣ್ಣು ಹಂಪಲುಗಳನ್ನು ತೆಗೆದುಕೊಂಡು ತಿಲಕರನ್ನು ಕಾಣಲು ಬಂದಿರುತ್ತಾಳೆ. 1922ರಲ್ಲಿ ಪಂಡಿತ ರಮಾಬಾಯಿ ತೀರಿಕೊಂಡ ಪ್ರಸ್ತಾಪವು ಈ ಕೃತಿಯಲ್ಲಿ ಬಂದಿದೆ.

ಅವರು ಬರೆದಿರುವ ಕವಿತೆಗಳಲ್ಲಿ ಅತಿ ದೊಡ್ಡದಾದ ಕವಿತೆ ‘ಪತಿ-ಪತ್ನಿ’ ಎಂಬುದು. ಅವರ ಕಾವ್ಯ ರಚನೆಯನ್ನು ಕುರಿತು ಹೀಗೆ ಹೇಳುತ್ತಾರೆ: “ನನಗೆ ಕವಿತೆ ಹೊಳೆಯುವುದು ವಿಶೇಷವಾಗಿ ರಾತ್ರಿಯ ಕತ್ತಲೆಯಲ್ಲಿ. ಒಂದೊಂದೇ ಸಾಲು ತಲೆಯಲ್ಲಿ ಬರುವುದು; ಅದನ್ನು ನಾನು ಖಡುವಿನಿಂದ ನೆಲದ ಮೇಲೆ ಬರೆದಿಡುವುದು. ಒಂದೊಂದು ವೇಳೆ ಲೇಖನಿ ಸಿಗದಿದ್ದಾಗ ಬೆಂಕಿಪೆಟ್ಟಿಗೆಯ ಕಡ್ಡಿಯನ್ನು ಮಸಿಯಲ್ಲದ್ದಿ ಲೇಖನಿಯ ಹಸಿವನ್ನು ಕಡ್ಡಿಯಿಂದ ತೀರಿಸುತ್ತಿದ್ದೆ. ಡೋಂಬರೆ ನನ್ನ ಇರುಳಿನ ಈ ಬರಹವನ್ನು ಕಾಗದದ ಮೇಲೆ ಇಳಿಸುತ್ತಿದ್ದ. ಹೀಗೆ ಬರೆಯುತ್ತಾ ಹೋದಂತೆ ಇನ್ನೂರ ಇಪ್ಪತ್ತೈದು ಸಾಲಿನ ಕವಿತೆ ಸಿದ್ಧವಾಯಿತು”. ಅವರು ಒಂದು ಸಾಮಾಜಿಕ ಕಾದಂಬರಿಯನ್ನು ಬರೆದಿದ್ದಾರೆ.

ಲಕ್ಷ್ಮೀಬಾಯಿಯವರ ಮೊದಲ ಸಾರ್ವಜನಿಕ ಭಾಷಣದ ದೃಶ್ಯ ಇಲ್ಲಿ ಮನೋಹರವಾಗಿ ಚಿತ್ರಿತವಾಗಿದೆ. ಅಹಮದ್ ನಗರದಲ್ಲಿ ದೀಪಾವಳಿಗೆ ‘ಐಕ್ಯ ಸಭಾ’ ಎನ್ನುವ ದೊಡ್ಡ ಸಭೆಯೊಂದು ಏರ್ಪಾಡಾಗಿತ್ತು. ಅದು ಪ್ರತಿ ವರ್ಷ ನಡೆಯುವ ಉತ್ಸವ. ಈ ಕಾರ್ಯಕ್ರಮಕ್ಕೆ ನಗರ, ಸೊಲ್ಲಾಪುರ, ಸಾತಾರೆ ಜಿಲ್ಲೆಗಳಿಂದ ಕ್ರೈಸ್ತ ಬಾಂಧವರು ಬಂದು ಭಾಗವಹಿಸುತ್ತಿದ್ದರು. ಅದೊಂದು ನಗರದ ಹಳೆಯ ದೇವಸ್ಥಾನ. ಕಿಕ್ಕಿರಿದು ತುಂಬಿ ಅದಕ್ಕೊಂದು ಜಾತ್ರೆಯ ಸ್ವರೂಪ ಬರುತ್ತಿತ್ತು. ತಮ್ಮ ಹೆಂಡತಿ ದೊಡ್ಡವಳಾಗಬೇಕೆಂಬ ಆಸೆಯಿದ್ದ ತಿಲಕರು ಅವಳು ಲೇಖಕಿ, ಕವಯಿತ್ರಿ, ಭಾಷಣಕಾರ್ತಿ – ಎಲ್ಲವೂ ಆಗಬೇಕೆಂದು ಆ ದಿಸೆಯಲ್ಲಿ ಪ್ರಯತ್ನಿಸುತ್ತಿದ್ದರು. ಎಂದೂ ಬೇರೆಯವರ ಭಾಷಣವನ್ನು ಕೇಳಲು ಹೋಗದ ಲಕ್ಷ್ಮೀಬಾಯಿಗೆ ಭಾಷಣ ಮಾಡಲು ತಿಲಕರು ಬರೆದುಕೊಟ್ಟಿರುತ್ತಾರೆ. ಅವರ ಪೂರ್ವ ತಯಾರಿಯೂ ಅದ್ಭುತವಾಗಿರುತ್ತದೆ. ಮೊದಲು ಮೂರು ನಾಲ್ಕು ಭಾಷಣಗಳಾದ ಮೇಲೆ ಲಕ್ಷ್ಮೀಬಾಯಿ ವೇದಿಕೆಯ ಮೇಲೆ ಮಾತನಾಡಲು ಹೋಗುತ್ತಾರೆ. ಆಗಷ್ಟೇ ಕ್ರೈಸ್ತ ಮತಕ್ಕೆ ಸೇರಿದ್ದ ಅವರ ವೇಷಭೂಷಣ ನತ್ತು, ಬುಗಡಿ, ಕುಂಕುಮ, ಕಚ್ಚೆಹಾಕಿದ ಸೀರೆ – ಹೀಗಿತ್ತು. ಅಲ್ಲಿ ನೆರೆದಿದ್ದ ಜನರ ಕಣ್ಣಿಗೆ ಇದೊಂದು ಹೊಸ ನೋಟವೇ. ಜನರ ಮುಂದೆ ನಿಂತ ಹತ್ತು ನಿಮಿಷಗಳಲ್ಲಿ ಒಂಭತ್ತು ನಿಮಿಷಗಳವರೆಗೆ ಅವರ ಬಾಯಿಯಿಂದ ಒಂದು ಪದವೂ ಹೊರಡುವುದಿಲ್ಲ. ಜನ ಕಾಯುತ್ತಲೇ ಇದ್ದರು. ಯಾರೋ ನೀರು ತಂದಿಟ್ಟರು. ಮತ್ತಾರೋ ಲವಂಗ ತಂದಿಟ್ಟರು. ನಿಜವೆಂದರೆ, ಅವರಿಗೆ ಗಂಟಲು ಆರಿರಲಿಲ್ಲ. ಕೈಯಲ್ಲಿ ಭಾಷಣದ ಚೀಟಿಯಿತ್ತು. ಆದರೆ ಮಾತೇ ಹೊರಡಲಿಲ್ಲ. ಅವರ ಪರವಾಗಿ ಡಾ. ಹ್ಯೂಮರು ಕ್ಷಮಾಪಣೆ ಕೇಳಲು ಎದ್ದು ನಿಂತರು. ಕೂಡಲೇ ಲಕ್ಷ್ಮೀಬಾಯಿಗೆ ದಡ ದಡ ಎಂದು ಅಸ್ಖಲಿತವಾಗಿ ತಡೆಯಿಲ್ಲದೆ ಮಾತು ಹೊರಟಿತು. ಆನಂತರ ಅವರು ಹಲವಾರು ಸಭೆಗಳಲ್ಲಿ ಭಾಷಣ ಮಾಡಿದರೂ ಎಂದಿಗೂ ತಡವರಿಸಲಿಲ್ಲ. ಬಾಯಿ ಪಾಠ ಮಾಡಿಕೊಂಡು ಒಪ್ಪಿಸಲಿಲ್ಲ. ಆದರೆ ಅವರ ಸಭಾಕಂಪ ಹೋಗಿಸಿದ್ದಕ್ಕೆ ಮುಖ್ಯವಾಗಿ ಕ್ರೈಸ್ತ ಬಾಂಧವರನ್ನು ನೆನೆಯುತ್ತಾರೆ. ಅವರ ಮೊದಲ ಭಾಷಣದ ದಿನ ಒಂಭತ್ತು ನಿಮಿಷಗಳವರೆಗೆ ಸಹನೆಯಿಂದ, ಶಾಂತಿಯಿಂದ ಸಭಿಕರು ಕಾದಿದ್ದರಿಂದ ಲಕ್ಷ್ಮೀಬಾಯಿಯವರ ಸಂಕೋಚ ಹೋಯಿತು. ಕ್ರೈಸ್ತ ಸಮಾಜದವರು ಸಭೆಯ ನಡವಳಿಕೆಯನ್ನು ಪಾಲಿಸುವ ಶಿಸ್ತು ಅದ್ಭುತವಾಗಿದೆ. ಅಲ್ಲಿ ಸಹಾನುಭೂತಿಯಿದೆ; ಶಾಂತಸ್ವಭಾವವೂ ಇದೆ ಎಂದು ಹೇಳುತ್ತಾರೆ.

1919ರಲ್ಲಿ ವಾಮನ ತಿಲಕರ ಸಾವಿನ ನಂತರ “ಈಗ ನನ್ನ ಸೂತ್ರಧಾರ ಹೊರಟುಹೋದ. ನನ್ನ ಸುತ್ತಮುತ್ತ ಹೊಸ ಜಗತ್ತೇ ಹುಟ್ಟಿಕೊಂಡಿದೆ. ಹೊಸ ಬದುಕು ಆರಂಭವಾಗಬೇಕಿದೆ” ಎಂದು ಹೇಳುತ್ತಾ ಅವಳು ಸ್ವತಂತ್ರಳಾಗಿ ಎದ್ದು ನಿಂತು ಮುಂಬೈಯ ಬಾಲಕಿಯರ ಹಾಸ್ಟೆಲ್‌ನಲ್ಲಿ ಮೇಟ್ರನ್ ಆಗಿ ಕೆಲಸಕ್ಕೆ ಸೇರುತ್ತಾಳೆ. ನಂತರ ಅತ್ಯಂತ ಧೈರ್ಯವಹಿಸಿ ಮಗಳು, ಸೊಸೆಯನ್ನು ಮತ್ತು ಅವರ ಪುಟ್ಟ ಮಕ್ಕಳನ್ನೂ ಕರೆದುಕೊಂಡು ಉದ್ಯೋಗವರಸಿ ಕರಾಚಿಗೆ ಹೋಗುತ್ತಾಳೆ. ನಾರಾಯಣ ವಾಮನ ತಿಲಕರು ಕ್ರಿಸ್ತನ ಮಹಿಮೆಯನ್ನು ಗುಣಗಾನ ಮಾಡುವ ಕ್ರಿಸ್ತಾಯನ ಎಂಬ ಮಹಾಕಾವ್ಯವನ್ನು ಮರಾಠಿಯಲ್ಲಿ ರಚಿಸಲು ಆರಂಭಿಸಿದ್ದರು. ಅದರ ಹತ್ತು ಅಧ್ಯಾಯಗಳನ್ನು ಪೂರೈಸುವಲ್ಲಿ 1919ರಲ್ಲಿ ಅವರು ತೀರಿಕೊಂಡರು. ಲಕ್ಷ್ಮೀಬಾಯಿಯವರು ಈ ಮಹಾಕಾವ್ಯಕ್ಕೆ ಇನ್ನುಳಿದ 64 ಅಧ್ಯಾಯಗಳನ್ನು ಬರೆದು ಪೂರ್ಣಗೊಳಿಸಿದರು. ಕವಿಯಾಗಿ, ಲೇಖಕಿಯಾಗಿ ಹಾಗೂ ಭಾಷಣಕಾರ್ತಿಯಾಗಿ ಪ್ರಸಿದ್ಧರಾದ ಲಕ್ಷ್ಮೀಬಾಯಿ 1933ರಲ್ಲಿ ಕವಿಸಮ್ಮೇಳನದ ಅಧ್ಯಕ್ಷತೆಯನ್ನು, 1934ರಲ್ಲಿ ನಾಗಪುರದಲ್ಲಿ ನಡೆದ ಕ್ರೈಸ್ತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುತ್ತಾರೆ.

ಲಕ್ಷ್ಮೀಬಾಯಿ ತಿಲಕ್ ‘ಸ್ಮೃತಿ ಚಿತ್ರೆ’ಯನ್ನು ಬರೆಯಲು ಆರಂಭಿಸಿದ್ದು 1924ರಲ್ಲಿ. ಏಳು ವರ್ಷಗಳ ನಿರಂತರ ಬರವಣಿಗೆಯನ್ನು ಕೈಗೊಂಡರು. ಈ ಬರವಣಿಗೆಯು ಮೊದಲಿಗೆ ‘ನೆನಪುಗಳು’ ಎನ್ನುವ ಶೀರ್ಷಿಕೆಯಲ್ಲಿ ‘ಸಂಜೀವಿನಿ’ ಎನ್ನುವ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಮೊದಲ ಮೂರು ಭಾಗಗಳು 1934ರಲ್ಲೂ, ನಂತರ ನಾಲ್ಕನೆಯ ಭಾಗವು ಮರಣೋತ್ತರವಾಗಿಯೂ ಪ್ರಕಟವಾಯಿತು. ಈ ಪುಸ್ತಕ ಮೊದಲು ಪ್ರಕಟವಾದಾಗ ಇದಕ್ಕೆ ದಿಢೀರನೆ ಕ್ಲಾಸಿಕ್ ಪಟ್ಟ ಸಿಕ್ಕಿತು. ನಾಲ್ಕು ಭಾಗಗಳಲ್ಲಿ 1934ರಿಂದ 1936ರಲ್ಲಿ ಪ್ರಕಟವಾಯಿತು. ಇದರಲ್ಲಿ ಲೇಖಕಿಯ ಪ್ರಾಮಾಣಿಕತೆ ಮತ್ತು ಜೀವನದ ಎಲ್ಲ ಕಷ್ಟಗಳನ್ನು ನೆನಪಿಸಿಕೊಳ್ಳುವಾಗಲೂ ಅದು ಗೋಳುಕರೆಯಾಗದೆ, ಅಪಾರ ಹಾಸ್ಯದ ಲೇಪನದಿಂದ ಮೂಡಿ ಬಂದಿರುವುದರಿಂದ ಓದಿಸಿಕೊಳ್ಳುವ ಗುಣ ಪಡೆದಿದೆ. ಬ್ರಿಟಿಷ್ ಭಾರತದಲ್ಲಿ ಮತಾಂತರ ಪ್ರಕ್ರಿಯೆಯ ಸಂಕೀರ್ಣ ಸ್ವರೂಪವನ್ನು ಹಿಡಿದಿಡುವುದರಲ್ಲಿ ಈ ಕೃತಿ ಯಶಸ್ವಿಯಾಗಿದೆ.

ಇದನ್ನೂ ಓದಿ
ಒಳದನಿ | ಭಾರತದ ಮೊದಲ ಮಹಿಳಾ ಆತ್ಮಚರಿತ್ರೆ ‘ಅಮಾರ್ ಜಿಬನ್’

n gayatri
ಡಾ.ಎನ್. ಗಾಯತ್ರಿ
+ posts

ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. ಮಹಿಳಾ ಪರ ಚಿಂತಕಿಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು, ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ಜೋಲಿಯೂ ಕ್ಯೂರಿ (ಅನುವಾದ), ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು (ವ್ಯಕ್ತಿ ಚಿತ್ರ), ನಾನೇಕ ನಾಸ್ತಿಕ (ಅನುವಾದ), ತ್ರಿವೇಣಿಯವರ ಬಗ್ಗೆ ಬರೆದ ಲೇಖನಗಳ ಸಂಗ್ರಹ (ಸಂಪಾದಿತ).

ಪೋಸ್ಟ್ ಹಂಚಿಕೊಳ್ಳಿ:

ಡಾ.ಎನ್. ಗಾಯತ್ರಿ
ಡಾ.ಎನ್. ಗಾಯತ್ರಿ
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. ಮಹಿಳಾ ಪರ ಚಿಂತಕಿಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು, ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ಜೋಲಿಯೂ ಕ್ಯೂರಿ (ಅನುವಾದ), ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು (ವ್ಯಕ್ತಿ ಚಿತ್ರ), ನಾನೇಕ ನಾಸ್ತಿಕ (ಅನುವಾದ), ತ್ರಿವೇಣಿಯವರ ಬಗ್ಗೆ ಬರೆದ ಲೇಖನಗಳ ಸಂಗ್ರಹ (ಸಂಪಾದಿತ).

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...