ದಿಲ್ಲಿ ಮಾತು | ರಿಮ್ ಝಿಮ್ ಗಿರೇ ಸಾವನ್… ಹಸಿ ಹಸಿ ನೆನಪುಗಳು

Date:

ಆಗ ನಮ್ಮ ಮನೆಯಂತೆ ಅನೇಕರ ಹೆಂಚಿನ ಮನೆಗಳೂ ಸೋರುತ್ತಿದ್ದವು. “ ಸೋರುತಿಹುದು ಮನೆಯ ಮಾಳಿಗೆ “ ಎನ್ನುತ್ತ ಮನೆ ತುಂಬ ಇದ್ದ ಬಿದ್ದ ಪಾತ್ರೆ ಪಗಡೆಗಳನ್ನಿಟ್ಟು ಸೆಗಣಿ ಸಾರಿಸಿದ ನೆಲ ನೆನೆಯದಂತೆ ಬಚಾವು ಮಾಡಿಕೊಳ್ಳಬೇಕಿತ್ತು. ಮೇಲಿನ ಹೆಂಚಿನ ಮಾಳಿಗೆ ಕೆಳಗಡೆ ಟಿನ್ ಶೀಟುಗಳನ್ನು ಹಾಕಿ ಜುಗಾಡು ಮಾಡಿಕೊಂಡ ನಡುಮನೆಯಲ್ಲಿ ಎಲ್ಲರೂ ಒಂದೇ ಡಬಲ್ ಸೈಜಿನ ದೊಡ್ಡ ಗಾದಿ ಹಾಸಿಕೊಂಡು ಮಲಗುತ್ತಿದ್ದೆವು. ಮಕ್ಕಳೆಲ್ಲ ಬೆಚ್ಚಗೆ ಜಗಳಾಡಿಕೊಂಡು ಕತೆ ಹೇಳಿಕೊಂಡು ಮಲಗುತ್ತಿದ್ದ ಬಾಲ್ಯ ಎಷ್ಟು ಚೆನ್ನಾಗಿತ್ತು...!

ಮಳೆಗಾಲ ಬಂತೆಂದರೆ ಭೂಮಿತಾಯಿಯೇ ಹಸಿರುಟ್ಟು ಚೆಲುವಾಗಿ ಕಾಣುತ್ತಾಳೆ. ಭೂಮಿಯಷ್ಟೇ ಅಲ್ಲ ಆಕಾಶವೂ ನೂರೆಂಟು ಬಣ್ಣಗಳನ್ನು ತೊಟ್ಟು ತಾನೇನು ಕಡಿಮೆ ಎಂದು ಬೀಗುತ್ತದೆ. ಮೋಡ ಕವಿದು ಮಬ್ಬುಗತ್ತಲಾದರೆ ಮತ್ತೆ ತಾಸೆರಡು ಹೊತ್ತಿನಲ್ಲಿ ಫಳ್ಳನೇ ಸೂರ್ಯನ ಕಿರಣ ಕೋರೈಸಿ ಬೆಳ್ಳಿಮೋಡಗಳು ನರ್ತಿಸತೊಡಗುತ್ತವೆ. ಸೂರ್ಯ ಚಂದ್ರರೂ ನಾಪತ್ತೆಯಾಗಿರುತ್ತಾರೆ ವಾರಗಟ್ಟಲೆ.

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ / ಸೋss ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ಎನ್ನುವಂತೆ ಇಂದು ಮುಂಜಾವಿನಿಂದಲೇ ಮಳೆ ಹೊಯ್ಯುತಿದೆ. ತಂಪುಗಾಳಿ, ಸೂರ್ಯನೇ ಕಾಣದ ಹಸಿ ಹಸಿ ಹಗಲು, ಹಸಿ ಹಸಿ ರಾತ್ರಿಗಳು, ಹಸಿ ಹಸಿ ನೆನಪುಗಳು, ಒದ್ದೆಗಣ್ಣುಗಳಿಗೂ ಇದೆಂತಹ ಹಪಹಪಿ… ಎನ್ನುವಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
monsoon races ahead to delhi

ದಿಲ್ಲಿಯಲ್ಲಿ ಮೊದಲ ಮಳೆ ಬಂದರೆ ಮಕ್ಕಳು ದೊಡ್ಡವರೆನ್ನದೇ ಮಳೆಯಲ್ಲಿ ನೆನೆಯುತ್ತಾರೆ. ಬೇಸಿಗೆಯ ಧಗೆಗೆ ಬೇಸತ್ತ ಮೈಮನಗಳು ತೋಯಿಸಿಕೊಳ್ಳಲು ಹಾತೊರೆಯುತ್ತವೆ. ಕಾರ್ಖಾನೆ – ಕಚೇರಿಗಳಿಗೆ ಹೋಗುವ ಉದ್ಯೋಗಸ್ಥರಿಗೆ ಟ್ರಾಫಿಕ್ಕಿನ ಭಯ. ಮಳೆಗಾಲದ ಸಂತಸವೇನಿದ್ದರೂ ಮನೆ ಸೇರಿದ ಬಳಿಕ. ಮೊದಲೇ ಹೊಲಸು ತುಂಬಿದ ಗಟಾರುಗಳು ಸ್ವಲ್ಪ ಮಳೆಯಾದರೂ ಸಾಕು ತುಂಬಿ ನೆರೆ ಬಂದಂತೆ ಎಲ್ಲೆಡೆಯೂ ನೀರು ತುಂಬಿಕೊಳ್ಳುತ್ತದೆ. ಯಮುನೆಯೂ ಸೊಕ್ಕುತ್ತಾಳೆ. ಗಲೀಜು ನಾಲಾಗಳೂ ಗಬ್ಬೆದ್ದು ನಾರುತ್ತವೆ. ಮಳೆಯ ನೀರು ಇಂಗಿಹೋಗದೇ ಅತ್ತ ಗಟಾರುಗಳಿಂದಲೂ ಹರಿದುಹೋಗದೇ ಕೆಲವೊಮ್ಮೆ ಆ ಕೊಳಕು ನೀರಿನಲ್ಲಿ ಇಳಿಯುವ ಪ್ರಸಂಗ ಬಾರದಿರಲಿ ದೇವರೇ ಎಂದು ಇಲ್ಲದ ದೇವರನ್ನು ನೆನೆಯುತ್ತಾ ಆಫೀಸು ಕಚೇರಿಗಳಿಗೆ ಓಡುವ ದಿನಗಳಿದ್ದವು.

ಇಷ್ಟೆಲ್ಲಾ ತಾಪತ್ರಯಗಳಿದ್ದರೂ ಮಳೆ ಬಂತೆಂದರೆ ಹೃದಯವೂ ಹಾಡತೊಡಗುತ್ತದೆ. ರೇಡಿಯೋ ಎಫ್ ಎಮ್ ಗಳಲ್ಲಿ ಈ ’ರಿಮ್ ಝಿಮ್ ಗಿರೇ ಸಾವನ್, ಸುಲಗ ಸುಲಗ್ ಜಾಯೇ ಮನ್ ! ಅಥವಾ ಮೇಘಾ ರೇ ಮೇಘಾ ರೇ… ಮತ್ ಪರದೇಶ್ ಜಾರೇ ಆಜ ತೂ ಪ್ರೇಮ್ ಕಾ ಸಂದೇಶ್ ಬರಸಾ ರೇ… ಇವೇ ರೋಮ್ಯಾಂಟಿಕ್ ಹಾಡುಗಳು ರಿಪೀಟ್ ಆಗ್ತಿರುತ್ತವೆ. ಹಾಡಿನ ಸಂಗೀತ ಸಾಹಿತ್ಯ ಮನಸ್ಸಿನಲ್ಲಿ ಗುಂಯ್ ಗುಡುತ್ತಿರುತ್ತದೆ ಇಡೀ ದಿನ. ಮಳೆ ಎಂದರೆ ರೋಮ್ಯಾಂಟಿಕ್ ಋತು, ಕೆಲವರಿಗೆ ಸಮೋಸಾ – ಪಕೋಡಗಳನ್ನು ತಿನ್ನುವ ಋತು. ಮಳೆಯಲ್ಲಿ ನೆನೆಯುವ ಹುರುಪಿನ ಋತು, ಬಟ್ಟೆ ನೆನೆದುಹೋಗಿದ್ದರೂ ಶರೀರದಲ್ಲಿಯ ಕಾವಿಗೆ ಯಾವಾಗ ಒಣಗಿದವು ಎಂದೇ ಗಮನವಿರದ ಪುಳಕದ ಋತು. ಮಾತಿಗೆ ನಲಿವಿಗೆ, ಪ್ರೀತಿಗೂ, ತುಂಟ ನಗುವಿಗೂ, ಜಿಟಿಜಿಟಿ ಹನಿಯುವ ಪುಟ್ಟ ಹನಿಗೂ ಪುಟಿಯುವ ಉತ್ಸಾಹದ ಋತು ಎನಿಸಿದ್ದು ಅವತ್ತು ಅವಳ ಮುಖದಲ್ಲಿ ಕಂಡ ಆ ಮುಗ್ಧ ಬೆರಗಿನ, ತುಸು ಭಯದ ಮಳೆಹನಿಯ ಸಂಜೆಗೆಂಪು ಕಂಡಾಗ… ಬಹುಶಃ ಅವಳ ಹೃದಯವೂ ಹಾಡುತ್ತಿತ್ತೇ… ಹೀಗೇ ಯೋಚಿಸುತ್ತಿತ್ತೇ ನನ್ನಂತೆ, ಗೊತ್ತಿಲ್ಲ.

೫೫
’ರಿಮ್ ಝಿಮ್ ಗಿರೇ ಸಾವನ್, ಸುಲಗ ಸುಲಗ್ ಜಾಯೇ ಮನ್ ! ಹಾಡಿನ ದೃಶ್ಯ

“ಇಕ್ ಲಡಕೀ ಭೀಗಿ ಭಾಗಿ ಸೀ, ಸೋತಿ ರಾತೋಂ ಮೇ ಜಾಗೀ ಸೀ, ಕೋಯೀ ಆಗೇ ನ ಪೀಛೇ “ ಎನ್ನುವಂತಹ ಹುಡುಗಿಯರು ನಾವಾವಾಗ. ನಾವಿಬ್ಬರೂ ಹತ್ತನೇ ತರಗತಿಯಲ್ಲಿದ್ದಾಗಿನ ಮಳೆಗಾಲ ಬಹಳಷ್ಟು ಕಾರಣಕ್ಕೆ ವಿಶೇಷವಾಗಿದ್ದ ಮಳೆಗಾಲ. ಧಾರವಾಡದ ಮಳೆ ಎಂದರೆ ಬೇರೆ ಹೇಳಬೇಕಿಲ್ಲ. ಜಿಟಿ ಜಿಟಿ ಮಳೆ ಯಾವಾಗ ರಪ ರಪ ಸುರಿಯುತ್ತದೆಂದು ಹೇಳುವ ಹಾಗಿಲ್ಲ. ನನ್ನ ಕರ್ನಾಟಕ ಹೈಸ್ಕೂಲಿನ ಬಹುತೇಕ ಹುಡುಗಿಯರೆಲ್ಲ ಗಾಂಧೀ ಚೌಕ್, ಹೊಸ ಯೆಲ್ಲಾಪುರ್ ಕಡೆಯಿಂದಲೇ ಬರುವವರಾಗಿದ್ದರಿಂದ ನಾವೆಲ್ಲ ಗಾಂಧಿ ಚೌಕ್ ಹಾಸಿ ಕೆರೆಯ ಏರಿಯ ಮೇಲಾಸಿ ನಡೆದುಕೊಂಡು ಟಾರ್‌ ರೋಡಿಗೆ ಸೇರಿಕೊಳ್ಳುತ್ತಿದ್ದೆವು. ಒಂದು ಕಾಲಕ್ಕೆ ಅದು ದೊಡ್ಡ ಕೆರೆಯಾಗಿತ್ತಂತೆ. ಆಮೇಲೆ ಅದು ಕಾಯಿಪಲ್ಲೆ ಹಾಗೂ ಅಂಗಡಿ ಮುಗ್ಗಟ್ಟುಗಳ ಮಾರುಕಟ್ಟೆಯಾಯ್ತು. ಏನೇ ಆಗಲಿ ನಮ್ಮ ಕೆರೆದಂಡೆಯ ಮಳೆಗಾಲದ ಕೆಂಪುರಾಡಿಯ ಪಾದಯಾತ್ರೆಗಳ ನೆನಪು ಈಗಲೂ ಮಧುರ.

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಅಂಗೈಗಳ ಮೋಡನಾಡಿ ಭೂಮಿತೂಕದ ಗಾಳಿ ಬೀಸಿ
ಗುಡುಗಿ ಗೂಡಾಗಿ ಚೆಲ್ಲಿದಳೋ ಗಂಗಮ್ಮ ತಾಯಿಕೆರೆ…

ಎಂಬಂತೆ ಮಳೆ ಸುರಿದು ಕೆರೆ ಏರಿಯ ಕೆಂಪುಮಣ್ಣೆಲ್ಲ ಮಳೆಯ ನೀರಲ್ಲಿ ರಾಡಿಯಾಗಿ, ದನ ಕರು ಮತ್ತು ಹೋಗಿಬರುವ ಜನರೆಲ್ಲ ನಡೆದು ನಡೆದು ಮಿದುವಾದ ಮಣ್ಣು ರಾಡಿ ರೊಜ್ಜಾಗಿ ಚಪ್ಪಲಿನಿಂದ ಸಿಡಿದ ಕೆಂಪುಮಣ್ಣಿನ ಚಿತ್ತಾರಗಳನ್ನೆಲ್ಲ ನಮ್ಮ ಯೂನಿಫಾರ್ಮಿಗೆ ಅಂಟಿಸಿಕೊಳ್ಳುತ್ತ ಬರುತ್ತಿದ್ದೆವು. ಒಗೆದು ಹಾಕಿದ ಬಟ್ಟೆಗಳೇ ಒಣಗದ ಮನೆಗಳಲ್ಲಿ ಬಿಸಿ ನೀರಿನ ಹಂಡೆಯ ಮೇಲೋ… ಇದ್ದಿಲು ಒಲೆಯ ಮೇಲೆ ದೊಡ್ಡ ಪರಾತ ಬೋರಲು ಹಾಕಿ ನಮ್ಮ ಒಳಉಡುಪುಗಳನ್ನು ಒಣಗಿಸಿ ಹಾಕಿಕೊಳ್ಳಬೇಕಿತ್ತು. ನೀರೊಲೆಯ ಮುಂದೆ ಕುಳಿತು ಚಹ ಕುಡಿಯುವ ಸುಖವೇ ಬೇರೆ. ನಿಗಿ ನಿಗಿ ಕೆಂಡದುರಿಯ ಮುಂದೆ ಅವ್ವ ರೊಟ್ಟಿ ಬಡಿಯುತ್ತಿದ್ದರೆ ನಾವು ಮಕ್ಕಳೆಲ್ಲ ಮಣೆ ಹಾಕಿಕೊಂಡು ಕುಳಿತು ಉಣ್ಣುತ್ತಿದ್ದ ಅಡುಗೆಮನೆಯ ಸೊಗಸೇ ಬೇರೆ.

ಆಗ ನಮ್ಮ ಮನೆಯಂತೆ ಅನೇಕರ ಹೆಂಚಿನ ಮನೆಗಳೂ ಸೋರುತ್ತಿದ್ದವು. “ ಸೋರುತಿಹುದು ಮನೆಯ ಮಾಳಿಗೆ “ ಎನ್ನುತ್ತ ಮನೆ ತುಂಬ ಇದ್ದ ಬಿದ್ದ ಪಾತ್ರೆ ಪಗಡಗಳನ್ನಿಟ್ಟು ಸೆಗಣಿ ಸಾರಿಸಿದ ನೆಲ ನೆನೆಯದಂತೆ ಬಚಾವು ಮಾಡಿಕೊಳ್ಳಬೇಕಿತ್ತು. ಮೇಲಿನ ಹೆಂಚಿನ ಮಾಳಿಗೆ ಕೆಳಗಡೆ ಟಿನ್ ಶೀಟುಗಳನ್ನು ಹಾಕಿ ಜುಗಾಡು ಮಾಡಿಕೊಂಡ ನಡುಮನೆಯಲ್ಲಿ ಎಲ್ಲರೂ ಒಂದೇ ಡಬಲ್ ಸೈಜಿನ ದೊಡ್ಡ ಗಾದಿ ಹಾಸಿಕೊಂಡು ಮಲಗುತ್ತಿದ್ದೆವು. ಮಕ್ಕಳೆಲ್ಲ ಬೆಚ್ಚಗೆ ಜಗಳಾಡಿಕೊಂಡೋ ಕತೆ ಹೇಳಿಕೊಂಡೋ ಮಲಗುತ್ತಿದ್ದ ಬಾಲ್ಯ ಎಷ್ಟು ಚೆನ್ನಾಗಿತ್ತು. ಅದರಲ್ಲೂ ಕರೆಂಟ್ ಇರದಿದ್ದರೆ ಚಿಮಣಿ ಎಣ್ಣೆಯ ಲಾಟೀನಿಗೆ ಒಲೆಬೂದಿ ಹಚ್ಚಿ ಲಕ ಲಕ ಹೊಳೆವಂತೆ ಉಜ್ಜಿ, ಬೆಳಗಿ ಬತ್ತಿ ಏರಿಸಿ ದೀಪ ಹಚ್ಚಿಕೊಂಡು ಓದುತ್ತಿದ್ದೆವು. ಮಳೆ ಚಳಿಯ ಹೊಡೆತಕ್ಕೆ ಬಾಗಿಲು ಭದ್ರಹಾಕಿಕೊಂಡು ಅವ್ವ ಹುರಿದುಕೊಡುತ್ತಿದ್ದ ಬಿಸಿ ಬಿಸಿ ಕಡಲೆಯನ್ನೋ, ಶೇಂಗಾವನ್ನೋ ತಿನ್ನುವ ಮಜವೆಂದರೆ ಅದೇ ನಮಗೆ ಸ್ವರ್ಗದಂತಿತ್ತು. ಮನೆಯಲ್ಲಿ ಚಪ್ಪಲಿ ಹಾಕಿ ಓಡಾಡುವ ಪದ್ಧತಿಯಿದ್ದಿಲ್ಲ. ತಂಪು ನೆಲದಲ್ಲಿ ಓಡಾಡಿ ಶೀತ ಜ್ವರ ಬರಬಾರದೆಂದು ನಮ್ಮ ಅವ್ವ ಮನೆತುಂಬ ಗೋಣಿ ಚೀಲ ಹಾಸಿರುತ್ತಿದ್ದಳು. ಅದರ ಮೇಲೆಯೇ ಓಡಾಡುತ್ತಿದ್ದೆವು. ಯಾವ ಸೌಕರ್ಯಗಳೂ ಇಲ್ಲದ ಯಾವ ಆಸೆಗಳೂ ಇಲ್ಲದ ಸರಳ ಜೀವನದ ದಿನಗಳು. ಮೃಗಶಿರಾ ಮಳೆಗೆ ಶೀತಜ್ವರ ಬರಬಾರದೆಂದು ಇಂಗು ಮತ್ತು ಒಣಕೊಬ್ಬರಿ ಚೂರು ತಿನ್ನಲು ಕೊಡುತ್ತಿದ್ದರು. ಕಷಾಯ – ಕಾಢೆ, ಮಳೆಗಾಲದಲ್ಲಿ ಮಾತ್ರ ನಾವು ಕಾಫಿ ಕುಡಿಯುತ್ತಿದ್ದೆವು. ಬಾಕಿ ದಿನ ಚಹ.

ಮಳೆ 51

ಆರಾಮವಾಗಿ, “ರಿಮ್ ಜಿಮ್ ಕೇ ಗೀತ ಸಾವನ್ ಗಾಯೇ ಹಾಯೇs… ಭೀಗಿ ಭೀಗಿ ರಾತೋಂ ಮೇ…
ಹೋಂಠೋ ಪೇ ಬಾತ್ ಜೀ ಕಿ ಆಯೆ ಹಾಯೇs…ಭೀಗಿ ಭೀಗಿ ರಾತೋಂ ಮೇ….”
ಹಾಡಿಕೊಂಡು ನಲಿದುಕೊಂಡಿದ್ದ ಕಾಲ.

ಒಂದಿನ ಹೀಗೇ ಜಿಟಿ ಜಿಟಿ ಮಳೆ ಬರುತ್ತಿತ್ತು. ಅವತ್ತು ನಾನು ನನ್ನ ಗೆಳತಿ ಕೆರೆ ದಂಡೆಯ ರಸ್ತೆ ಬಿಟ್ಟು ಶ್ರೀನಿವಾಸ ಟಾಕೀಸಿನ ಕಡೆಯಿಂದ ಬರುತ್ತಿದ್ದೆವು. ಇಬ್ಬರ ಕೈಯಲ್ಲೂ ಛತ್ರಿ ಇತ್ತು. ಹೀಗೇ ಏನೇನೋ ಹರಟುತ್ತ ನಾವು ಹೆಜ್ಜೆ ಹಾಕುತ್ತಿದ್ದೆವು. ಆಗೆಲ್ಲ ಶ್ರೀನಿವಾಸ ಟಾಕೀಸಿನಲ್ಲಿ ಒಳ್ಳೊಳ್ಳೆಯ ಸಿನೆಮಾಗಳು ಬರುತ್ತಿದ್ದವು. ನಾನೂ ನನ್ನ ಜೀವನದ ಮೊಟ್ಟ ಮೊದಲನೇ ಹಿಂದಿ ಸಿನೆಮಾ, ರಾಜಕಪೂರ್ -ವೈಜಯಂತಿಮಾಲಾ ನಟಿಸಿದ ಸಂಗಮ್ ನೋಡಿದ್ದು ಒಂದು ದೊಡ್ದ ಕ್ರಾಂತಿಯ ಕಾಲವಾಗಿತ್ತು. ಯಾಕೆಂದರೆ ನಮ್ಮ ಅವ್ವನ ಪರ್ಮಿಶನ್ನಿಗಾಗಿ ನಾಲ್ಕಾರು ಗೆಳತಿಯರು ಮನೆಗೆ ಬಂದು ಕಳಸ್ರೀ… ಕಳಸ್ರೀ… ಎಂದು ಮನವಿ ಸಲ್ಲಿಸಿದ ಬಳಿಕವೇ ನನಗೆ ಪರ್ಮಿಶನ್ ಸಿಕ್ಕಿತ್ತು.

ಅಂತಹ ಐತಿಹಾಸಿಕ ಹಿನ್ನೆಲೆಯ ಟಾಕೀಜಿನ ಮುಂದೆ ಹಾಯುವಾಗ ಸಹಜವಾಗಿ ನನ್ನ ಕತ್ತು ಆ ಕಡೆ ಹೊರಳಿರಬೇಕು. ಅರೇ… ಇದೇನಿದು, ನಮ್ಮ ಸಮಾನಾಂತರದಲ್ಲಿ ಆ ಯುವಕ ಮಳೆಯಲ್ಲಿ ತೋಯಿಸಿಕೊಳ್ಳುತ್ತ ನಡೆದು ಬರ್ತಿದಾನೆ. ಹೇಯ್ ನೋಡss… ಬಾಜೂ ಯಾರ ಬರಾಕತ್ತಾರಂತ” ಗೆಳತಿಗೆ ತಿವಿದು ಪಿಸುಗುಟ್ಟಿದೆ. ಆಕೆಯೂ ನೋಡಿದಳು. ಆ ಕ್ಷಣಕ್ಕೆ ನಮಗೇನೂ ತೋಚಲಿಲ್ಲ. ಆತ ನಮ್ಮೆಡೆಗೆ ನೋಡಿದ್ದಕ್ಕೆ ನಾವು ಹಲ್ಲು ಕಿರಿದೆವೋ ಇಲ್ಲ ಹೆದರಿಕೊಂಡೆವೋ ಇವತ್ತು ನೆನಪಿಲ್ಲ. ಆದರೆ ತಕ್ಷಣದ ಪ್ರತಿಕ್ರಿಯೆ ನಡೆದದ್ದು, ಕೈಯಲ್ಲಿನ ಒಂದು ಛತ್ರಿಯನ್ನು ಅವರಿಗೆ, ತಗೋರಿ… ಎಂದು ಕೊಟ್ಟು ನಾವಿಬ್ಬರೂ ಒಂದೇ ಛತ್ರಿಯಲ್ಲಿ ಮುಖ ಮರೆಮಾಡಿಕೊಂಡು ಸತ್ತೆವೊ, ಕೆಟ್ಟೆವೋ ಅಂತ ದುಡುದುಡು ದಾಪುಗಾಲು ಹಾಕಿಕೊಂಡು ಡವಗುಟ್ಟುತ್ತಿರುವ ಹೃದಯವನ್ನು ಸಂತೈಸುತ್ತ ಓಡಿಕೊಂಡೇ ಮನೆ ಸೇರಿದ್ದೆವು. ಆದರೆ ಮನೆಯವರಿಗೆ “ಛತ್ರಿ ಎಲ್ಲಿ ಹೋಯಿತು” ಎಂದು ಕೇಳಿದರೆ ಏನು ಹೇಳೋದು ಅಂತ ನಮ್ಮ ತಲೆಗೇ ಬಂದಿರಲಿಲ್ಲ. ಮನೆಯಲ್ಲಿ ಹೆಚ್ಚಿನ ವಿಚಾರಣೆ ನಡೆಯಲು ಆಸ್ಪದ ಸಿಗಲಿಲ್ಲವೆನಿಸುತ್ತದೆ.

ಪುಣ್ಯಕ್ಕೆ ಆ ಪುಣ್ಯಾತ್ಮ ಛತ್ರಿಯನ್ನು ತಂಗಿಯ ಮೂಲಕ ವಾಪಸ್ಸು ಕೊಟ್ಟು ಕಳಿಸಿ ನಮ್ಮ ಇನ್ನೊಂದು ಭಯಂಕರ ಕ್ರಾಂತಿಯಾಗುವ, ಭೂಕಂಪವಾಗುವ ಸಂದರ್ಭವನ್ನು ತಪ್ಪಿಸಿ ನಮ್ಮನ್ನು ರಕ್ಷಿಸಿದ್ದ. ಇದು ನೆನಪಾಗಿ ಒಂದಿಷ್ಟು ದಿನ ಹೆದರಿಕೊಂಡು ಹೆದರಿಕೊಂಡೇ ಶ್ರೀನಿವಾಸ್ ಟಾಕೀಸಿನ ರಸ್ತೆ ಬಿಟ್ಟು ಮತ್ತೆ ಕೆರೆ ದಂಡೆಯೇ ನಮ್ಮ ಸೇಫು ಜಾಗ ಎಂದು ಅಲ್ಲಿಂದಲೇ ಓಡಾಡತೊಡಗಿದೆವು.

ಈಗಲೂ ನೆನಪಾದರೆ ನಗು ಬರುತ್ತದೆ. ನಮ್ಮ ಪೆದ್ದುತನಕ್ಕೆ ವಿಷಾದವೂ ಉಂಟಾಗುತ್ತದೆ. ಆ ಪುಣ್ಯಾತ್ಮನಿಂದಾಗಿಯೇ ಅವಳಿಗೆ ಬೇಗ ಮದುವೆಯಾಯಿತೆಂಬ ಆರೋಪ ಅವಳದು. ಆ ಕುಟುಂಬ ನಮ್ಮ ಓಣಿಗೆ ಬಂದದ್ದೇ ನಮ್ಮ ವಿನಾಶಕ್ಕೆ ಎಂಬುದು ಇಬ್ಬರ ಅಭಿಪ್ರಾಯವಾಗಿತ್ತು. ಅಂತಹ ಕ್ರಾಂತಿಕಾರಿ ಬೆಳವಣಿಗೆಯನ್ನು ನಮ್ಮ ನಮ್ಮ ಮನೆಗಳಲ್ಲಿ ಹುಟ್ಟುಹಾಕಿದ್ದು ಸಾಮಾನ್ಯ ಘಟನೆಯೇನಲ್ಲ! ಮೊನ್ನೆ ಮೊನ್ನೆ ಹೀಗೇ ನೆನಪಾಗಿ ಫೋನ್ ಮಾಡಿದೆ ನನ್ನ ಗೆಳತಿಗೆ, ಬೇರೆಲ್ಲ ವಿಷಯಗಳನ್ನು ಹರಟಿದೆವು. ಈ ವಿಷಯವನ್ನು ನೆನಪಿಸಬೇಕೆಂದುಕೊಂಡವಳು ವಿಷಯ ಬದಲಿಸಿ ಮಾತಾಡಿದೆ. ಯಾಕೆ ಧೈರ್ಯ ಮಾಡಲಿಲ್ಲವೋ ಕಾಣೆ.

Raining 1

ಶ್ರಾವಣ ಮಾಸದಲ್ಲಿ ಬರುವ ಪಂಚಮಿ ಹಬ್ಬಕ್ಕೆ ನಾವೆಲ್ಲ ಹೈಸ್ಕೂಲ್ ವಿದ್ಯಾರ್ಥಿನಿಯರು ತಮ್ಮ ತಮ್ಮ ಮನೆಗಳಿಂದ ಉಂಡೆ ಚಕ್ಕುಲಿ ಇತ್ಯಾದಿಗಳನ್ನು ತಂದು ಹಂಚಿಕೊಂಡು ಪಂಚಮಿ ಆಚರಿಸುತ್ತಿದ್ದೆವು. ಆಗ ಒಮ್ಮೆ ನನ್ನ ಗೆಳತಿಯ ಸೋದರತ್ತೆಯ ಹಿಂಬದಿಯ ಹುಕ್ ಇರುವ ಬ್ಲೌಸ್ ಹಾಕಿಕೊಂಡು ಸೀರೆಯುಟ್ಟುಕೊಂಡು ಹೋಗಿದ್ದೆ. ಲಂಗ -ದಾವಣಿ, ಸ್ಕರ್ಟು, ಸೀರೆ ಹೀಗೆ ಅವರಿವರ ಬಟ್ಟೆ ಹಾಕಿಕೊಂಡು ಏನೇನೋ ಪ್ರಯೋಗಗಳನ್ನು ನಡೆಸುತ್ತಿದ್ದೆವು. ಒಮ್ಮೆ ಅವಳ ತಾಯಿ ಮನೆಯಲ್ಲಿಲ್ಲದ ಸಮಯದಲ್ಲಿ ಕದ್ದು ಮೊಟ್ಟೆ ಬೇಯಿಸುತ್ತಿದ್ದ ಅವಳಣ್ಣನ ರಹಸ್ಯವನ್ನು ಕಂಡುಹಿಡಿದು ಆಯೀಗೆ ಹೇಳುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡಿ ಬಾಯಿಮುಚ್ಚಿಸಿದ್ದೆವು.

ಇದನ್ನೂ ಓದಿ ದಿಲ್ಲಿ ಮಾತು | ಜಾತಿ ತಾರತಮ್ಯ ಹಾಗೂ ದಲಿತ ಹೋರಾಟವನ್ನು ಚಿತ್ರಿಸುವ ಧಡಕ್ 2

ಇನ್ನೊಮ್ಮೆ ಬೇರೆ ಊರಿನಲ್ಲಿರುವ ಇನ್ನೊಬ್ಬ ಅಣ್ಣನಿಗೆ “ರಾಖಿ” ಕಳಿಸೋಣವೆಂದು ಹುರುಪಿನಿಂದ ಹದಿನೈದು ಪೈಸೆಯ ಪೋಸ್ಟ್ ಕಾರ್ಡ್ ತಂದು ಅದರಲ್ಲಿ ನಾಲ್ಕು ಸಾಲು ಉಭಯಕುಶಲೋಪರಿ ಬರೆದು ಉಳಿದ ಹಿಂಭಾಗದ ಖಾಲಿ ಜಾಗದಲ್ಲಿ ರಾಖಿ ಚಿತ್ರ ಬರೆದು ಪೋಸ್ಟ್ ಮಾಡಿದ್ದೆವು. ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿದ್ದ ನೆನಪು. ಒಂದು ರಾಖಿ ತರುವಷ್ಟು ಹಣವಾದರೂ ಎಲ್ಲಿತ್ತು ನಮಗೆ? ರಾಖಿ ತಂದು ಪೋಸ್ಟ್ ಮಾಡಬೇಕು ಎನ್ನುವ ಜ್ಞಾನವೂ ಇದ್ದಿಲ್ಲ. ಆ ಅಣ್ಣ ಎಷ್ಟೋ ವರ್ಷಗಳ ಕಾಲ ಈ ಘಟನೆ ನೆನಪಿಸಿಕೊಂಡು ಎಲ್ಲರ ಮುಂದೆ ಹೇಳಿ ನಮಗೆ ನಾಚಿಕೆಯೂ, ಅಳುವೂ ಒಟ್ಟಿಗೆ ಬರುವಂತೆ ಮಾಡಿದ್ದರು.

ಈ ಸೋsss ಎಂದು ಸುರಿಯುತ್ತಿರುವ ಮಳೆಯಂತೆಯೇ ಬಾಲ್ಯದ ನೆನಪುಗಳು ಲಗ್ಗೆಯಿಡುತ್ತವೆ. ಮಳೆಗಾಲವೆಂದರೆ ಜೀವಂತಿಕೆಯ ಋತು, ಬಿತ್ತಿದ ಬೀಜ ಗಿಡವಾಗಿ ಫಲಕೊಡುವ ಫಲವಂತಿಕೆಯ ಕಾಲ, ಹಬ್ಬ ಹರಿದಿನಗಳ ಕಾಲ.

ಈ ಎಲ್ಲದರ ನಡುವೆಯೂ ಪ್ರಕೃತಿಯ ವಿಕೋಪ ಕೆಲವೆಡೆ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ.
ಸಿಡಿಲ್ಮಿಂಚಲು ಹೊಮ್ಮುತ್ತಿದೆ / ಮಳೆ ಭೈರವ ರೋಷ!
ಮಳೆಯೆಂಬುದು ಬರಿ ಸುಳ್ಳಿದು!
ಮಳೆಯಲ್ಲುದು! ಮಳೆಯಲ್ಲಿ
ದು!

ಪ್ರಳಯದ ಆವೇಶ!
ಎಂದು ಕುವೆಂಪು ಬರೆದಂತೆ ಈ ಸಲ ದಿಲ್ಲಿ ಹಾಗೂ ಸುತ್ತಲಿನ ಉತ್ತಭಾರತದಲ್ಲಿಯೂ ಚೆನ್ನಾಗಿ ಮಳೆಯಾಗುತ್ತಿದೆ. ಪಂಜಾಬ್ ಸೇರಿದಂತೆ ಬೆಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಭೂಸ್ಖಲನ, ಮನೆಮಠಗಳು ಕುಸಿದು ಜನಜೀವನ ದುರ್ಭರವೂ ಆಗಿದೆ, ಜೀವಹಾನಿಗಳು ತಲ್ಲಣ ಹುಟ್ಟಿಸಿವೆ.

ಇದೆಲ್ಲದರ ಜೊತೆಗೂ ಬದುಕು ಸಾಗುತ್ತದೆ. ಎಲ್ಲಿಯೂ ನಿಲ್ಲದ, ಯಾರಿಗಾಗಿಯೂ ನಿಲ್ಲದ ಬದುಕು ಸಾಗುತ್ತಿರುತ್ತದೆ ಹೀಗಿಯೇ…

WhatsApp Image 2025 09 02 at 3.15.53 PM
ಕೊಡಗಿನಲ್ಲಿ ಭತ್ತದ ನಾಟಿಯ ಸಂಭ್ರಮ
WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...