ವಿಜ್ಞಾನ, ವೈಚಾರಿಕತೆ, ಆಧುನೀಕರಣ ಮುಂತಾಗಿ ನಾವೆಷ್ಟೇ ಮಾತನಾಡಿಕೊಂಡರೂ, ಬದಲಾಗಿದ್ದೇವೆ ಎಂದೆಲ್ಲಾ ಗಂಟಲು ಹರಿದುಕೊಂಡರೂ, ಆಳದಲ್ಲಿ ಹೆಣ್ಣೆಂಬ ತರತಮದ ಹಾವು ಇನ್ನೂ ನಮ್ಮೊಳಗೆ ಸಿಂಬಿ ಸುತ್ತಿ ಮಲಗಿಯೇ ಇದೆ. ಅದು ಎದ್ದು ಪೂತ್ಕರಿಸಲು ಸಣ್ಣದೊಂದು ಪ್ರಚೋದನೆ ಸಾಕು. ಅದಕ್ಕೆ ಉದಾಹರಣೆಯಾಗಿ, ಕಳೆದ ಎಪ್ರಿಲ್‌ನಲ್ಲಿ, ಎಂಟನೇ ತರಗತಿಯ ಪುಟ್ಟ ಬಾಲಕಿಯೊಬ್ಬಳನ್ನು ಮುಟ್ಟಾದಳು ಎನ್ನುವ ಕಾರಣಕ್ಕೆ ಪರೀಕ್ಷೆಯ ಕೊಠಡಿಯಿಂದ ಹೊರಗೆ ಕಳುಹಿಸಿ ಮೆಟ್ಟಿಲ ಮೇಲೆ ಕೂರಿಸಿ ಪರೀಕ್ಷೆ ಬರೆಸಿದ್ದಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವಲ್ಲಾ!
ನನ್ನ ಮದುವೆಗೆ ಬರಿ ಒಂದು ತಿಂಗಳಿತ್ತು. ನಾನು ‘ಮುಂದೇನು’ ಅನ್ನುವುದು ಗೊತ್ತಿಲ್ಲದೆ ಆತಂಕದ ಮತ್ತು ಅನಿಶ್ಚಿತತೆಯ ಒಂದು ದೊಡ್ಡ ಮೂಟೆ ಹೊತ್ತು ಕೂತಿದ್ದೆ. ‘ಮದುವೆ’ ನನ್ನ ಕನಸುಗಳನ್ನೆಲ್ಲಾ ಕೊಲ್ಲುತ್ತಾ, ಓದು ಬರವಣಿಗೆ ನಿಂತೇ ಹೋದರೆ ಬದುಕುವುದಾದರೂ ಹೇಗೆ ಎನ್ನುವ ಪ್ರಶ್ನೆ ಕ್ಷಣ ಕ್ಷಣಕ್ಕೂ ಕಾಡುತ್ತಿದ್ದ ಕಾಲ ಅದು. ನನ್ನ ಸುತ್ತಲಿನ ಲೋಕ ಮದುವೆ, ಶಾಪಿಂಗ್, ಓಡಾಟ, ತಯಾರಿ ಅಂತ ಸಂಭ್ರಮದಲ್ಲಿದ್ದರೆ ನಾನು ಒಂದು ಪುಟ್ಟ ಅಭದ್ರತೆಯನ್ನೂ ಅಸಹಾಯಕತೆಯನ್ನೂ ಎದೆಯೊಳಗಿಟ್ಟುಕೊಂಡು ಕಾವು ಕೊಡುತ್ತಿದ್ದೆ. ಮಾನಸಿಕ ಸಾಂಗತ್ಯ, ಆತ್ಮಾನುಬಂಧ ಅಂತೆಲ್ಲಾ ದೊಡ್ಡ ದೊಡ್ಡ ಹೆಸರು ಕೊಟ್ಟುಕೊಂಡು ನನ್ನ ಅಭದ್ರತೆಯನ್ನೂ, ಅಸಹಾಯಕತೆಯನ್ನೂ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದರೂ ತೀರಾ ಏಕಾಂತದಲ್ಲಿರುವಾಗ ಆ ಹೆಸರುಗಳೆಲ್ಲಾ ಚದುರಿ ಚೆಲ್ಲಾಪಿಲ್ಲಿಯಾಗಿ ಮತ್ತೆ ಆತಂಕದ ಭೂತ ಹೆಡೆಯೆತ್ತುತ್ತಿತ್ತು. ಒಟ್ಟಾರೆ ಅದೊಂದು ಒಟ್ಟು ಗಲಿಬಿಲಿಯ, ಗೊಂದಲದ ಸ್ಥಿತಿ.
ಈ ಸಂದರ್ಭದಲ್ಲೇ ನಮ್ಮ ಮನೆಗೆ ಬಂದ ಮಹಿಳೆಯೊಬ್ಬರು ‘ನೀನು ಹೊರಗಾಗೋದು ಯಾವಾಗ?’ ಕೇಳಿದ್ದರು. ‘ನಾನು ಪ್ರತಿದಿನ ಹೊರಗೆ ಹೋಗ್ತಿರ್ತೀನಿ, ಶಾಪಿಂಗ್ ಇರುತ್ತಲ್ಲಾ’ ಎಂದು ಸಹಜವಾಗಿಯೇ ಉತ್ತರಿಸಿದ್ದೆ. ‘ಅದಲ್ಲ ಸ್ನಾನ ಮಾಡೋಕೆ ಆಗೋದು?’ ಅವರ ಪ್ರಶ್ನೆ ಮುಂದುವರಿಯಿತು, ನನಗೀಗ ಅವರೇನು ಕೇಳುತ್ತಿದ್ದಾರೆ ಎನ್ನುವುದು ಅರ್ಥ ಆಯಿತು, ಆದರೂ ಒಂದು ಕೀಟಲೆಯ ಧ್ವನಿಯಲ್ಲಿ ‘ಅಯ್ಯೋ ಪ್ರತಿದಿನ ಸ್ನಾನ ಮಾಡ್ತೀನಪ್ಪ’ ಅಂದೆ. ಮತ್ತೆ ಅವರು ‘ಅದಲ್ಲ, ಹೊಟ್ಟೆ ನೋವು ಯಾವಾಗ ಅಂತ ಕೇಳ್ತಿರೋದು’ ಅಂದ್ರು. ನನಗೀಗ ಆಟ ಆಡಿಸುವ ಹುಕಿ ಬಂದು ಬಿಟ್ಟಿತ್ತು.
‘ನಾನು ಸ್ವೀಟ್ ಹೆಚ್ಚು ತಿನ್ನಲ್ಲ ಅಲ್ವಾ’ ಅಂದೆ. ನನ್ನ ತಲೆಗೊಂದು ಮೊಟಕಿ ಎಂಥಾ ದಡ್ಡಿ ಜೊತೆ ಮಾತಾಡ್ತಿದ್ದೀನಪ್ಪಾ ಅನ್ನೋ ರೀತೀಲಿ ‘ನಿಂಗೆ ಈ ತಿಂಗಳು ಮುಟ್ಟಾಗೋದು ಯಾವಾಗ?’ ಕೇಳಿದರು. ನಾನು ಯಾವುದೋ ದಿನಾಂಕ ಹೇಳಿದೆ. ಬೆರಳುಗಳಿಂದ ಕೂಡಿ, ಕಳೆದು ಎಂತೆಂತದೋ ಲೆಕ್ಕಾಚಾರ ಹಾಕಿ ‘ಒಂದ್ಕೆಲ್ಸ ಮಾಡು, ಮದುವೆಗೆ ಒಂದು ವಾರ ಇರ್ಬೇಕಿದ್ರೆ ಮುಟ್ಟನ್ನು ಮುಂದಕ್ಕೆ ಹಾಕುವ ಮಾತ್ರೆ ತಗೋ’ ಅಂದ್ರು.
ನನಗೆ ಸಣ್ಣ ಅಚ್ಚರಿ, ಜೊತೆಗೆ ನನ್ಮೇಲೆ ಇಷ್ಟು ಕಾಳಜಿ ಇರುವ ಇವ್ರನ್ನು ನಾನಿಷ್ಟೆಲ್ಲಾ ಸತಾಯಿಸಿದೆನಲ್ಲಾ ಅಂತ ಬೇಜಾರೂ ಆಯ್ತು. ಯಾಕೆಂದರೆ ಪ್ರತಿ ತಿಂಗಳ ಮುಟ್ಟಿನ ಸಮಯದಲ್ಲಿ ವಿಪರೀತ ಹೊಟ್ಟೆ ನೋವು, ಸುಸ್ತು, ವಾಂತಿ ಆಗುತ್ತಿದ್ದುದರಿಂದ ಮದುವೆ ಹೆಣ್ಣು, ಮದುವೆ ದಿವಸ ಇವೆಲ್ಲಾ ಅನುಭವಿಸುವುದು ಬೇಡ ಎನ್ನುವ ಕಾಳಜಿಯಿಂದ ಅವರು ಅಷ್ಟನ್ನೂ ಹೇಳುತ್ತಿದ್ದಾರೆ ಅಂತಲೇ ಆ ಕ್ಷಣಕ್ಕೆ ಅನ್ನಿಸಿತ್ತು ನನಗೆ. ಇಂತಹವರನ್ನು ಅಷ್ಟು ಕಾಡಿಸಿದೆನೆಲ್ಲಾ, ಆಗಲೇ ನಾನು ದಿನಾಂಕ ಹೇಳಿ ಬಿಟ್ಟಿದ್ದಿದ್ದರೆ ಗಂಟೇನು ಹೋಗುತ್ತಿತ್ತು ಅಂತೆಲ್ಲಾ ಪಶ್ಚಾತ್ತಾಪವಾಗತೊಡಗಿತು.
‘ಆದ್ರೆ ಮುಟ್ಟು ಮುಂದೂಡುವ ಮಾತ್ರೆಗಳನ್ನು ನುಂಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಅಲ್ವಾ’ ಅಂದೆ. ನನ್ನ ಸ್ವರ ಈಗ ಸಾಕಷ್ಟು ತಗ್ಗಿತ್ತು. ‘ಹಾಗೇನೂ ಆಗಲ್ಲ, ಆಗೋದಿದ್ರೂ ಯಾವತ್ತಿಗಿಂತ ಒಂಚೂರು ಹೆಚ್ಚು ಹೊಟ್ಟೆ ನೋವು ಇರುತ್ತೆ, ಅಷ್ಟೇ. ಅದೇನು ದೊಡ್ಡ ಸಂಗತಿಯಲ್ಲ, ಆದ್ರೆ ಮೊದಲ ರಾತ್ರಿಯೇ ಗಂಡನನ್ನು ದೈಹಿಕವಾಗಿ ಸಂತೃಪ್ತಿ ಪಡೆಸೋದು ನಿನ್ನ ಕರ್ತವ್ಯ. ಮುಟ್ಟಾದ್ರೆ ನೀವಿಬ್ರೂ ಸೇರೋಕೆ ಆಗಲ್ಲ ಅಲ್ವಾ, ಅದಕ್ಕೆ ಮಾತ್ರೆ ತಗೋ ಅಂದಿದ್ದು’ ಎಂದರು. ಪ್ರೀತಿ, ಕಾಳಜಿ ಅಂತೆಲ್ಲಾ ಅಂದುಕೊಂಡಿದ್ದ ನನ್ನ ಭ್ರಮೆಗಳು ಕ್ಷಣಾರ್ಧದಲ್ಲಿ
ದಿಕ್ಕಾಪಾಲಾಯಿತು, ಸುಮಾರು ಹೊತ್ತು ನಾನು ಒಂದು ಬಗೆಯ ವಿಭ್ರಾಂತಿಯಿಂದಲೂ ಸಿಟ್ಟಿನಿಂದಲೂ ಅವರತ್ತ ನೋಡುತ್ತಲೇ ಇದ್ದೆ.
ಆ ತಿಂಗಳು ನನಗೆ ನಿಯಮಿತ ದಿನಾಂಕ ತಪ್ಪಿ ಒಂದು ವಾರ ಮೊದಲೇ ಮುಟ್ಟಾಗಿತ್ತು. ಮದುವೆಯ ದಿನ ಹತ್ತಿರ ಬಂದು ನನ್ನ ಕಿವಿಯಲ್ಲಿ ಅವರು ‘ಮಾತ್ರೆ ತಗೊಂಡಿಯಾ?’ ಕೇಳಿದ್ರು. ಇಲ್ಲ ಎಂದು ತಲೆಯಾಡಿಸಿದ ನಾನು ‘ನಂಗಿವತ್ತು ಪೀರಿಯೆಡ್ಸ್’ ಎಂದು ಸುಳ್ಳು ಹೇಳಿದೆ. ಒಂದು ಕ್ಷಣ ಗಲಿಬಿಲಿಗೊಂಡ ಅವರು ಒಂದು ರೀತಿಯ ಮರುಕದಿಂದಲೂ, ನಾನೇನೋ ಪಾಪದ ಕೆಲಸ ಮಾಡಿದ್ದೇನೆ ಅನ್ನುವ ದೃಷ್ಟಿಯಿಂದ ನನ್ನ ನೋಡುತ್ತಿದ್ದರೆ ನನಗೆ ಒಳಗಗೊಳಗೇ ಕುಹುಕದ ನಗೆ.

ಇಷ್ಟೂ ಘಟನೆಗಳು ಹೀಗೆ ಅಚಾನಕ್ಕಾಗಿ ನೆನಪಾಗಲೂ ಒಂದು ಕಾರಣವಿದೆ. ಮೊನ್ನೆ ಏನೂ ಕೆಲಸವಿಲ್ಲದೆ ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಕಳೆದ ವರ್ಷದ ಒಂದು ಪಾಡ್‌ಕಾಸ್ಟ್. ಆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಿದ್ದುದು ಬೆಂಗಳೂರು ಮೂಲದ ಒಬ್ಬ ವಸ್ಕುಲರ್ ಸರ್ಜನ್ (vascular surgeon). ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಇರಬಹುದಾದ ಕಾರಣಗಳ ಬಗ್ಗೆ ಮಾತನಾಡುತ್ತಾ ಇತ್ತೀಚೆಗೆ ಸಾವನ್ನಪ್ಪಿದ್ದ ಹದಿನೆಂಟು ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಪ್ರಸ್ತಾಪಿಸಿದ್ದರು.
ಆ ಹುಡುಗಿ ರಪ್ತ ಹೆಪ್ಪುಗಟ್ಟುವಿಕೆಯ ಒಂದು ಗಂಭೀರ ಸ್ಥಿತಿಯಾಗಿರುವ ಡೀಪ್‌ವೇನ್ ಥ್ರಂಬೋಸಿಸ್ (DVT)ನಿಂದ ಉಂಟಾಗಿರುವ ತೀವ್ರವಾದ ತೊಡೆಯ ಹಾಗೂ ಕಾಲು ನೋವಿಗೆ ಚಿಕಿತ್ಸೆಗಾಗಿ ಡಾಕ್ಟರ್ ಕ್ಲಿನಿಕ್ಕಿಗೆ ಬಂದಿದ್ದಳಂತೆ. ಹೀಗೆ ಹೆಪ್ಪುಗಟ್ಟಿದ ರಕ್ತ ಶ್ವಾಸಕೋಶ ಅಥವಾ ಮೆದುಳಿಗೆ ಪ್ರವೇಶಿಸಿ ಅಲ್ಲಿ ರಕ್ತ ಪರಿಚಲನೆಯನ್ನು ಬ್ಲಾಕ್ ಮಾಡಿದರೆ ಜೀವಕ್ಕೆ ಅಪಾಯ ತಂದೊಡ್ಡುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತಷ್ಟು ವಿಚಾರಣೆ ಮಾಡಿದಾಗ ಆ ಹುಡುಗಿ ಮನೆಯಲ್ಲಿ ಪೂಜೆ ಇತ್ತು ಅನ್ನುವ ಕಾರಣಕ್ಕೆ ಮುಟ್ಟನ್ನು ಮುಂದೂಡುವ ಮಾತ್ರೆಯನ್ನು ಮೂರು ದಿನಗಳ ಕಾಲ ತೆಗೆದುಕೊಂಡದ್ದು ತಿಳಿದು ಬಂತು. ಡಾಕ್ಟರ್ ಪ್ರಕಾರ ಆಕೆ ತೆಗೆದುಕೊಂಡ ಪಿಲ್ಸ್‌ಗಳ ಕಾರಣದಿಂದ ಹೊಕ್ಕುಳಿನವರೆಗೂ ವಿಸ್ತರಿದ ಡೀಪ್‌ವೇನ್ ಥ್ರಂಬೋಸಿಸ್ ಕಾಲಿನ ಊತಕ್ಕೂ ನೋವಿಗೂ ಕಾರಣವಾಗಿತ್ತು.
ಹಾರ್ಮೋನ್ ಔಷಧಿಗಳನ್ನು ವೈದ್ಯರ ಸಲಹೆಗಳಿಲ್ಲದೆ ಬಳಸುವುದು, ಶಸ್ತ್ರಚಿಕಿತ್ಸೆ, ದೀರ್ಘಕಾಲ ಚಲನೆಯಿಲ್ಲದೇ ಇರುವುದು, ಕುಟುಂಬಕ್ಕೆ ರಕ್ತಹೆಪ್ಪುಗಟ್ಟುವಿಕೆ ರೋಗದ ಇತಿಹಾಸ ಇರುವುದು ಮುಂತಾದವು ಡಿವಿಟಿಯ ಮುಖ್ಯ ಕಾರಣಗಳು ಅಂತ ವೈದ್ಯಲೋಕ ಗುರುತಿಸುತ್ತದೆ.
ಸಾಮಾನ್ಯವಾಗಿ, ಮುಟ್ಟಾಗುವುದು ಹೆಣ್ಣಿನ ದೇಹದಲ್ಲಿ ಪ್ರೊಜೆಸ್ಟಿರಾನ್ ಹಾರ್ಮೋನಿನ ಮಟ್ಟ ಕಡಿಮೆಯಾದಾಗ. ಗರ್ಭದಾರಣೆ ಆಗದೇ ಇದ್ದಾಗ ದೇಹಕ್ಕೆ ಗರ್ಭದ ಅಗತ್ಯವಿಲ್ಲ ಎನ್ನುವ ಸಂದೇಶ ಹೋಗುತ್ತದೆ. ಆಗ ಸಹಜವಾಗಿ ಪ್ರೊಜೆಸ್ಟಿರಾನ್ ಹಾರ್ಮೋನಿನ ಮಟ್ಟ ಕಡಿಮೆಯಾಗುತ್ತದೆ. ಈಸ್ಟ್ರೋಜನ್ ಹಾರ್ಮೋನ್ ಗರ್ಭಾಶಯದಲ್ಲಿ ಗರ್ಭದಾರಣೆಗಾಗಿ ಸಿದ್ಧಪಡಿಸಿದ ರಕ್ತಪೂರಿತ ಒಳಪದರ ನಿಧಾನವಾಗಿ ಉದುರಿ ರಕ್ತದೊಂದಿಗೆ ಹೊರಬರುತ್ತದೆ. ಮುಟ್ಟು ಅಥವಾ ಪೀರಿಯಡ್ಸ್ ಅನ್ನುವುದು ಇಷ್ಟು ಸರಳವಾದ ಒಂದು ದೈಹಿಕ ಪ್ರಕ್ರಿಯೆ.
ಮುಟ್ಟು ಮುಂದೂಡುವ ಮಾತ್ರೆಗಳು ದೇಹದಲ್ಲಿ ಇದೇ ಪ್ರೊಜೆಸ್ಟಿರಾನ್ ಹಾರ್ಮೋನಗಳ ಮಟ್ಟ ಕುಸಿಯದಂತೆ ನೋಡಿಕೊಳ್ಳುತ್ತವೆ. ಹಲವು ಸಂದರ್ಭಗಳಲ್ಲಿ ಈ ಮಾತ್ರೆಗಳಲ್ಲಿ ಸಂಶ್ಲೇಷಿತ ಪ್ರೊಜಿಸ್ಟಿರಾನ್ ಅಂಶಗಳಿರುತ್ತವೆ ಮತ್ತು ಕೆಲವು ಮಾತ್ರೆಗಳಲ್ಲಿ ಪ್ರೊಜೆಸ್ಟಿರಾನ್ ಮತ್ತು ಈಸ್ಟ್ರೋಜನ್ ಇವೆರಡೂ ಇರುತ್ತವೆ. ಇವು ರಕ್ತಪೂರಿತ ಒಳಪದರ ಉದುರದಂತೆ ತಡೆಯುತ್ತದೆ. ಅಥವಾ ಗರ್ಭ ಧರಿಸಿರುವಂತೆ ದೇಹಕ್ಕೆ ಕೃತಕ ಸಂದೇಶವನ್ನು ನೀಡುತ್ತದೆ. ಮತ್ತು ರಕ್ತಸ್ರಾವ ನಿಗದಿತ ದಿನಗಳಂದು ಆಗುವುದಿಲ್ಲ, ಮುಟ್ಟು ಮುಂದೂಡಲ್ಪಡುತ್ತದೆ.
ಅಂದರೆ ಈ ಮಾತ್ರೆಗಳು ನೇರವಾಗಿ ಹಾರ್ಮೋನಿನ ಕಾರ್ಯ ಚಟುವಟಿಕೆಗಳಲ್ಲಿ ವಿಪರೀತದ ಹಸ್ತಕ್ಷೇಪ ಮಾಡುತ್ತದೆ, ದೇಹಕ್ಕೆ ತಪ್ಪು ಸಂದೇಶ ನೀಡುತ್ತವೆ.
ಈ ಮಾತ್ರೆಗಳಿಂದ ಎಲ್ಲರಿಗೂ ಹಾನಿಯಾಗುತ್ತದೆ ಅಥವಾ ಎಲ್ಲರಿಗೂ ಒಂದೇ ರೀತಿಯಲ್ಲಿ ಹಾನಿಯಾಗುತ್ತದೆ ಎಂದಲ್ಲ. ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ, ಧೂಮಪಾನ, ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಪಿಸಿಒಸ್ ಸಮಸ್ಯೆ ಇರುವವರಿಗೆ ಬೇರೆಬೇರೆ ರೀತಿಯ ಅಪಾಯಗಳನ್ನು ತಂದೊಡ್ಡಬಹುದು. ಈ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿದರೆ ಅವರು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ತೀರಾ ಅಗತ್ಯವಿದ್ದಾಗ ಮುಟ್ಟು ಮುಂದೂಡುವ ಮಾತ್ರೆಗಳನ್ನು ಅವರವರ ದೇಹ ಪ್ರಕೃತಿಗೆ ಅನುಗುಣವಾಗಿ ಸೂಚಿಸಲೂಬಹುದು.

ತೀರಾ ಅನಿವಾರ್ಯವಾದಾಗ ಹಾರ್ಮೋನ್ ಪಿಲ್ಸ್‌ಗಳನ್ನು ತೆಗೆದುಕೊಂಡರೂ ಕೂಡಾ ಹಠಾತ್ ಊತ, ಕಾಲಿನಲ್ಲಿ ನೋವು , ತೀಕ್ಷ್ಣವಾದ ಎದೆ ನೋವು ಅಥವಾ ಉಸಿರಾಟದ ತೊಂದರೆ (ಸಂಭವನೀಯ ಪಲ್ಮನರಿ ಎಂಬಾಲಿಸಮ್) ಮತ್ತು ತೀವ್ರ ತಲೆನೋವು, ತಲೆತಿರುಗುವಿಕೆ ಅಥವಾ ಮುಸುಕು ದೃಷ್ಟಿ (ಮಿದುಳಿನಲ್ಲಿ ಹೆಪ್ಪುಗಟ್ಟುವಿಕೆ) ಮುಂತಾದ ಅಪಾಯಕಾರಿ ಸಂಕೇತಗಳ ಬಗ್ಗೆ ತಿಳಿದಿರಬೇಕು. ಇವುಗಳಲ್ಲಿ ಯಾವುದಾದರೂ ಸಂಭವಿಸಿದಲ್ಲಿ, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ, ಏಕೆಂದರೆ ಇಂತಹಾ ವಿಚಾರಗಳಲ್ಲಿ ತಡವಾದಷ್ಟೂ ಅಪಾಯದ ಮಟ್ಟ ಹೆಚ್ಚುತ್ತಾ ಹೋಗುತ್ತದೆ.
ಆದರೆ ನಾವು, ಭಾರತೀಯ ಮಹಿಳೆಯರಿಗೆ ಅಷ್ಟೆಲ್ಲಾ ಪುರುಸೊತ್ತು, ದೇಹದ ಮೇಲಿನ ಕಾಳಜಿ ಎಲ್ಲಿರುತ್ತದೆ? ವೈದ್ಯರನ್ನು ಭೇಟಿಯಾಗುವುದು, ದೇಹ ಪ್ರಕೃತಿ, ರೋಗದ ಇತಿಹಾಸ, ನಮ್ಮನ್ನು ಭಾದಿಸುತ್ತಿರುವ ಇತರ ಆರೋಗ್ಯ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಚರ್ಚಿಸಿ, ನಿಜಕ್ಕೂ ಮುಟ್ಟು ಮುಂದೂಡುವ ಮಾತ್ರೆಗಳ ಅಗತ್ಯ ಇದೆಯಾ ಎಂಬುವುದನ್ನೆಲ್ಲಾ ವೈದ್ಯರ ಜೊತೆ ಸಮಾಲೋಚಿಸುವಷ್ಟು ವ್ಯವಧಾನ ಎಲ್ಲಿದೆ? ನಮ್ಮದು ತೀರಾ ಸರಳ ಮತ್ತು ಸುಲಭ ಅಜೆಂಡಾ.
ಮನೆಯಲ್ಲಿ ಧಾರ್ಮಿಕ ಆಚರಣೆಗಳಿರುತ್ತವೆ, ಪೂಜೆ ಪುನಸ್ಕಾರಗಳಿರುತ್ತವೆ, ಮುಟ್ಟಾದರೆ ಮಹಿಳೆ ಮಲಿನವಾಗುತ್ತಾಳೆ, ಅವಳನ್ನು ಮುಟ್ಟುವಂತಿಲ್ಲ, ಮುಟ್ಟಿಸಿಕೊಳ್ಳುವಂತಿಲ್ಲ, ಧಾರ್ಮಿಕ ವಿಧಿವಿಧಾನಗಳಲ್ಲಿ ಆಕೆ ಪಾಲ್ಗೊಳ್ಳುವಂತಿಲ್ಲ. ಅಥವಾ ಅವಳದೇ ಮದುವೆ ಸಮಾರಂಭ. ಧರ್ಮ, ಜಾತಿ, ಅಂತಸ್ತು, ಮನೆತನ, ಜಾತಕ ಅಂತೆಲ್ಲಾ ಆಕಾಶ ಭೂಮಿ ಒಂದು ಮಾಡುವಂತೆ ಸುಮಾರು ವರ್ಷಗಳ ಕಾಲ ವರನನ್ನು ಹುಡುಕಿ, ಒಂದು ಡೇಟ್ ಫಿಕ್ಸ್ ಮಾಡಿ, ವರದಕ್ಷಿಣೆ, ವರೋಪಚಾರ ಮಾಡಿ, ಊರಿಡೀ ಕರೆದು, ಸಾಲಸೋಲ ಮಾಡಿ ವೈಭಯುತವಾಗಿ ಮದುವೆ ಮಾಡುತ್ತಿರುವಾಗ ಕನಿಷ್ಠ ಅವಳು ಮುಟ್ಟಾಗದೆ ಮೊದಲ ರಾತ್ರಿಯಂದು ಗಂಡನ ದೈಹಿಕ ಕಾಮನೆಗಳನ್ನು ಪೂರೈಸಿ ಅವನನ್ನು ಸಂತೃಪ್ತಿಗೊಳಿಸಬೇಡವೇ?
ಅಂತಹ ಯಕಶ್ಚಿತ್ ಹೆಣ್ಣಿಗೆ ಅವತ್ತೇ ಮುಟ್ಟಾದರೆ ಏನು ಮಾಡುವುದು! ಆಕೆ ಮುಟ್ಟಿನಲ್ಲಿದ್ದುಕೊಂಡು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರೆ ಪಾಪ ದೇವರಿಗೆ ಮೈಲಿಗೆ! ಮದುವೆಯಾದರೆ ಗಂಡಿಗೆ ಉಪವಾಸ!
ಈಗುಳಿದಿರುವ ಆಯ್ಕೆ ಯಾವುದು? ತುಂಬಾ ಸರಳ- ಮುಟ್ಟು ಮುಂದೂಡುವ ಮಾತ್ರೆ ತೆಗೆದುಕೊಂಡರಾಯಿತು. ನಮ್ಮ ಮೆಡಿಕಲ್ ಶಾಪ್‌ಗಳಲ್ಲಿ ತರಹೇವಾರಿ ಮುಟ್ಟು ಮುಂದೂಡುವ ಮಾತ್ರೆಗಳು ದಂಡಿಯಾಗಿ ಸಿಗುತ್ತವೆ, ಅದನ್ನು ತಂದು ನುಂಗಿ ನೀರು ಕುಡಿದರಾಯಿತು, ಮುಟ್ಟು ಮುಂದೂಡಲ್ಪಡುತ್ತದೆ, ಸಮಸ್ಯೆ ಸರಳವಾಗಿ ಮುಗಿಯುತ್ತದೆ.
ಇದನ್ನೂ ಓದಿ ಚದುರಿದ ಚಿತ್ರ | ಎಪ್‌ಸ್ಟೀನ್ ಫೈಲ್ ಮತ್ತು ಹೊಸ ಕಾಲದ ಅಮ್ಮಂದಿರ ಆತಂಕಗಳು
ಯಾಕೆಂದರೆ, ವಿಜ್ಞಾನ, ವೈಚಾರಿಕತೆ, ಆಧುನೀಕರಣ ಮುಂತಾಗಿ ನಾವೆಷ್ಟೇ ಮಾತನಾಡಿಕೊಂಡರೂ, ತಿಪ್ಪೆ ಸಾರಿಸಿದರೂ,
ಬದಲಾಗಿದ್ದೇವೆ ಎಂದೆಲ್ಲಾ ಗಂಟಲು ಹರಿದುಕೊಂಡರು, ಆಳದಲ್ಲಿ ಹೆಣ್ಣೆಂಬ ತರತಮದ ಹಾವು ಇನ್ನೂ ನಮ್ಮೊಳಗೆ ಸಿಂಬಿ ಸುತ್ತಿ ಮಲಗಿಯೇ ಇದೆ, ಅದು ಎದ್ದು ಪೂತ್ಕರಿಸಲು ಸಣ್ಣದೊಂದು ಪ್ರಚೋದನೆ ಸಾಕು. ಅದಕ್ಕೆ ಉದಾಹರಣೆಯಾಗಿ, ಕಳೆದ ಎಪ್ರಿಲ್‌ನಲ್ಲಿ, ಎಂಟನೇ ತರಗತಿಯ ಪುಟ್ಟ ಬಾಲಕಿಯೊಬ್ಬಳನ್ನು ಮುಟ್ಟಾದಳು ಎನ್ನುವ ಕಾರಣಕ್ಕೆ ಪರೀಕ್ಷೆಯ ಕೊಠಡಿಯಿಂದ ಹೊರಗೆ ಕಳುಹಿಸಿ ಮೆಟ್ಟಿಲ ಮೇಲೆ ಕೂರಿಸಿ ಪರೀಕ್ಷೆ ಬರೆಸಿದ್ದಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವಲ್ಲಾ! ಈಗಲೂ ಶಾಲೆಗಳಲ್ಲಿ ಅದರಲ್ಲೂ ಆಗಷ್ಟೇ ಪ್ರೌಢಾವಸ್ಥೆ ತಲುಪಿರುವ, ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆಗಳ ಬಗೆಗಿನ ಗೊಂದಲಗಳಿನ್ನೂ ಮುಗಿಯದ ಹೈಸ್ಕೂಲಿನ ಹುಡುಗಿಯರಿಗೆ ಸರಕಾರ ವಿತರಿಸುತ್ತಿರುವ ಪ್ಯಾಡ್‌ಗಳನ್ನು ಕೈಯಿಂದ ಮುಟ್ಟಲೂ ಹಿಂಜರಿಯುವ ಎಷ್ಟು ಶಿಕ್ಷಕರಿದ್ದಾರೆ ನಮ್ಮ ನಡುವೆ!
ಮುಟ್ಟು ಅನ್ನುವುದು ಪ್ರಕೃತಿಯ ಒಂದು ಅತ್ಯಂತ ಸಹಜ ಕ್ರಿಯೆ ಎಂಬುವುದನ್ನು ಇಡೀ ಸಮಾಜ ಒಟ್ಟಾಗಿ ಅರ್ಥ ಮಾಡಿಕೊಳ್ಳದ ಹೊರತು, ಹೆಣ್ಣು ಜೀವಗಳು ಹೀಗೆ ಕಾರಣವಲ್ಲದ ಕಾರಣಗಳಿಗಾಗಿ ಪರಿತಪಿಸುತ್ತಲೇ ಇರಬೇಕಾಗುತ್ತದೇನೋ…

ಫಾತಿಮಾ ರಲಿಯಾ
ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ.
ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.




