ವಾಂಗ್ಚುಕ್ ಹಿಂಸಾಚಾರವನ್ನು ಖಂಡಿಸಿ ತಮ್ಮ ನಿರಶನವನ್ನು ಹಿಂದೆಗೆದುಕೊಂಡರು. ಈ ನಿರ್ಧಾರ ಚೌರಿ ಚೌರದಲ್ಲಿ 1922ರ ಫೆಬ್ರವರಿ 5ರಂದು ಜರುಗಿದ ಹಿಂಸೆಯ ಘಟನೆಗಳಿಂದ ಉಂಟಾದ ಪೊಲೀಸರ ಸಾವುಗಳಿಗೆ ಸ್ಪಂದಿಸಿ ಅಸಹಕಾರ ಚಳವಳಿಯನ್ನು ವಾಪಸ್ಸು ಪಡೆದ ಗಾಂಧೀಜಿಯವರ ಕ್ರಮವನ್ನು ನೆನಪಿಸುತ್ತದೆ!
2019ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಆರ್ಟಿಕಲ್ 370ನ್ನು ರದ್ದುಪಡಿಸಲಾಯಿತು. ಲಡಾಖನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲಾಯಿತು. ಆದರೆ ಅದಕ್ಕೆ ಪ್ರತ್ಯೇಕ ವಿಧಾನ ಸಭೆಯ ಅವಕಾಶವನ್ನು ಕಲ್ಪಿಸಲಾಗಲಿಲ್ಲ (ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶಕ್ಕೆ ಈ ವ್ಯವಸ್ಥೆಯಿದೆ). ಲಡಾಖ್‌ನಲ್ಲಿ ಬೌದ್ಧರು ಬಹುಸಂಖ್ಯಾತರು (ಲಡಾಖಿನ ಒಂದು ಜಿಲ್ಲೆಯಾದ ಕಾರ್ಗಿಲ್‌ನಲ್ಲಿ ಮುಸಲ್ಮಾನರು ಬಹುಸಂಖ್ಯಾತರು). ಮುಸಲ್ಮಾನರು ಬಹುಸಂಖ್ಯಾತರಾಗಿರುವ ಜಮ್ಮು ಮತ್ತ್ ಕಾಶ್ಮೀರದಿಂದ ಬೇರ್ಪಟ್ಟು ಕೇಂದ್ರಾಡಳಿತ ಪ್ರದೇಶ ಪಟ್ಟ ದೊರೆತ ಬೆಳವಣಿಗೆಯನ್ನು ಲಡಾಖ್‌ನ ಬಹುತೇಕ ಜನತೆ ಸ್ವಾಗತಿಸಿದರು. ಏಕೆಂದರೆ ಅನೇಕ ವರ್ಷಗಳಿಂದ ಕಾಶ್ಮೀರ ಕೇಂದ್ರಿತ ನಾಯಕತ್ವದ ಬಗೆಗೆ ಅವರಿಗೆ ಅಸಮಾಧಾನವಿತ್ತು, ಇಂತಹ ಕಾರಣದಿಂದ ಅವರ ಪ್ರದೇಶದ ಅಭ್ಯುದಯಕ್ಕೆ ಧಕ್ಕೆಯಾಗಿದೆ ಎಂಬುದು ಅವರ ಭಾವನೆಯಾಗಿತ್ತು!
ನಂತರ ಲೇಹ್ ಅಪೆಕ್ಸ್ ಬಾಡಿ(ಎಲ್‌ಬಿಎ) ಮತ್ತು ಕಾರ್ಗಿಲ್ ಡೆಮೊಕ್ರಟಿಕ್ ಅಲೆಯನ್ಸ್ (ಕೆಡಿಎ), ಇತರ ಕೆಲವು ಗುಂಪುಗಳು, ಸೋನಮ್ ವಾಂಗ್ಚುಕ್‌ರಂತಹ ಕಾರ್ಯಕರ್ತರು ಲಡಾಖ್‌ಗೆ ರಾಜ್ಯತ್ವ(ಸ್ಟೇಟ್‌ಹುಡ್)ವನ್ನು ನೀಡಬೇಕು ಮತ್ತು ಸಂವಿಧಾನದ ಆರನೇ ಷೆಡ್ಯೂಲ್‌ನ್ನು ಅನ್ವಯಿಸಬೇಕು, ಇತರ ಸಾಂವಿಧಾನಿಕ ರಕ್ಷಣೆಗಳು, ಭೂ ಮತ್ತು ಸಂಸ್ಕೃತಿ ಸಂರಕ್ಷಣೆ, ಉದ್ಯೋಗವಕಾಶಗಳ ಲಭ್ಯತೆ ದೊರಕಬೇಕು ಎಂಬಂತಹ ಬೇಡಿಕೆಗಳನ್ನು ಮುಂದಿಟ್ಟು ಆಂದೋಲನವನ್ನು ಶುರುಮಾಡಿದವು. ಈ ಬೇಡಿಕೆಗಳಿಗೆ ಸಂಬಂಧಿಸಿದಂತೆ, ಜನವರಿ 2023ರಲ್ಲಿ ಕೇಂದ್ರ ಸರ್ಕಾರ, ಗೃಹ ಖಾತೆಯ ರಾಜ್ಯ ಮಂತ್ರಿ ನಿತ್ಯಾನಂದ ರೈ ನೇತೃತ್ವದಲ್ಲಿ ಒಂದು ಉನ್ನತ ಸ್ತರೀಯ ಸಮಿತಿಯನ್ನು ರಚಿಸಿತು. ಇದರಲ್ಲಿದ್ದ ಎಲ್‌ಬಿಎ ಮತ್ತು ಕೆಡಿಎ ಸದಸ್ಯರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಸಮಿತಿಯಲ್ಲಿ ಸರ್ಕಾರದ ಪರವಾದ ಸದಸ್ಯರೇ ಹೆಚ್ಚಾಗಿ ಇರುವರೆಂದು ಆಪಾದಿಸಿದರು. ಈ ಕಾರಣದಿಂದ ನವೆಂಬರ್ 23, 2023ರಂದು ಈ ಸಮಿತಿಯನ್ನು ಪುನರ್ ರಚಿಸಲಾಯಿತು. ಬೇಡಿಕೆಗಳಿಗೆ ಸಂಬಂಧಿಸಿದ ಮಾತುಕತೆಗಳು ಮಾರ್ಚ್ 2024ರಲ್ಲಿ ಮುರಿದುಬಿದ್ದವು.
ಲಡಾಖ್ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ಅಹಿಂಸಾತ್ಮಕ ಮತ್ತು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯಿದೆ(1980)ಯಡಿ ಬಂಧಿತರಾಗಿರುವ ಸೋನಮ್ ವಾಂಗ್ಚುಕ್ ಕೂಡ ಜೊತೆಗೂಡಿದರು. ಸೆಪ್ಟಂಬರ್ 1, 2024ರಂದು ಅವರು ತಮ್ಮ ಸಂಗಾತಿಗಳೊಡನೆ ಲೇಹ್‌ನಿಂದ ಸುಮಾರು 1,000 ಕಿ.ಮೀ. ದೂರದ ದೆಹಲಿಗೆ ಪಾದಯಾತ್ರೆಯನ್ನು ಕೈಗೊಂಡರು. ದೆಹಲಿಯ ಗಡಿಯಲ್ಲಿ ಹೋರಾಟಗಾರರನ್ನು ಬಂಧಿಸಲಾಯಿತು. ಅಕ್ಟೋಬರ್ 5, 2025ರಂದು ವಾಂಗ್ಚುಕ್ ದೆಹಲಿಯ ಲಡಾಖ್ ಭವನದಲ್ಲಿ ಉಪವಾಸ ಸತ್ಯಾಗ್ರಹವನ್ನು ಶುರು ಮಾಡಿದರು. ಕೇಂದ್ರ ಸರ್ಕಾರದ ಗೃಹ ಇಲಾಖೆ ಮಾತುಕತೆಗಳು ಮುಂದವರೆಯುತ್ತವೆ ಎಂಬ ಭರವಸೆಯನ್ನು ನೀಡಿತು. ಇದರ ಆಧಾರದ ಮೇಲೆ ಅವರು ನಿರಶನವನ್ನು ಕೊನೆಗೊಳಿಸಿದರು.

ಮೇ 2025ರಲ್ಲಿ ಕೇಂದ್ರ ಸರ್ಕಾರ ಮತ್ತು ಲಡಾಖ್‌ನ ಸಂಘಟನೆಗಳ ನಡುವೆ ಒಂದು ಒಪ್ಪಂದವಾಯಿತು. ನಂತರ ಪುನಃ ಸ್ಥಗಿತತೆ ಉಂಟಾಯಿತು. ಸೆಪ್ಟಂಬರ್ 10, 2025ರಂದು ವಾಂಗ್ಚುಕ್ ತಮ್ಮ ಕೆಲವು ಸಂಗಾತಿಗಳ ಜೊತೆ ಮೂರು ವಾರಗಳ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಹದಿಮೂರು ದಿನಗಳ ತರುವಾಯ ಇಬ್ಬರು ಹಿರಿಯ ಸತ್ಯಾಗ್ರಹಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಬೆಳವಣಿಗೆಯಿಂದ ಲಡಾಖ್‌ನ ಜನರು, ಅದರಲ್ಲೂ ಮುಖ್ಯವಾಗಿ ಯುವಜನತೆ ಉದ್ವಿಗ್ನಗೊಂಡರು. ಸೆಪ್ಟಂಬರ್ 24, 2025ರಂದು ಲೇಹ್‌ನಲ್ಲಿ ಪ್ರತಿಭಟನಾಕಾರರ ಪ್ರತಿಭಟನೆ ಹಿಂಸೆಯ ರೂಪ ಪಡೆಯಿತು. ಅವರ ಮತ್ತು ಪೊಲೀಸರ ನಡುವೆ ಘರ್ಷಣೆಗಳಾದವು. ಪೊಲೀಸರ ಫೈರಿಂಗ್‌ನಿಂದ ನಾಲ್ಕು ನಾಗರಿಕರು ಹತರಾದರು. ಅನೇಕರು ಗಾಯಗೊಂಡರು. ಲೇಹ್‌ನ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಯಿತು. ನಂತರ ಕರ್ಫ್ಯೂವನ್ನು ಹೇರಲಾಯಿತು. ಇಂಟರ್‌ನೆಟ್‌ನ್ನು ಬಂದ್ ಮಾಡಲಾಯಿತು.
ವಾಂಗ್ಚುಕ್ ಹಿಂಸಾಚಾರವನ್ನು ಖಂಡಿಸಿ ತಮ್ಮ ನಿರಶನವನ್ನು ಹಿಂದೆಗೆದುಕೊಂಡರು. ಈ ನಿರ್ಧಾರ ಚೌರಿ ಚೌರದಲ್ಲಿ 1922ರ ಫೆಬ್ರವರಿ 5ರಂದು ಜರುಗಿದ ಹಿಂಸೆಯ ಘಟನೆಗಳಿಂದ ಉಂಟಾದ ಪೊಲೀಸರ ಸಾವುಗಳಿಗೆ ಸ್ಪಂದಿಸಿ ಅಸಹಕಾರ ಚಳವಳಿಯನ್ನು ವಾಪಸ್ಸು ಪಡೆದ ಗಾಂಧೀಜಿಯವರ ಕ್ರಮವನ್ನು ನೆನಪಿಸುತ್ತದೆ! ಲೇಹ್‌ನಲ್ಲಿ ನಡೆದ ಹಿಂಸಾಚಾರಗಳಿಗೆ ವಾಂಗ್ಚುಕ್ ಕಾರಣ ಎಂಬ ನೆಪವೊಡ್ಡಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಸೆಪ್ಟಂಬರ್ 26ರಂದು ಬಂಧಿಸಲಾಯಿತು. ನಂತರ ಅವರನ್ನು ರಾಜಾಸ್ಥಾನದ ಜೋಧ್‌ಪುರದ ಕಾರಾಗೃಹಕ್ಕೆ ಕಳುಹಿಸಲಾಯಿತು.
ತರುವಾಯ ವಾಂಗ್ಚುಕ್ ವಿರುದ್ಧ ಆಪಾದನೆಗಳ ದಾಳಿಗಳು ಶುರುವಾದವು. ಅವರನ್ನು ದೇಶದ್ರೋಹಿ ಎಂದು ಜರೆಯಲಾಯಿತು. ಅವರು ಪ್ರಧಾನ ಪಾತ್ರ ವಹಿಸಿದ ʼ ದಿ ಸ್ಟೂಡೆಂಟ್ಸ್ ಎಜುಕೇಶನಲ್ ಅಂಡ್ ಕಲ್ಚುರಲ್ ಮೂವ್ಮೆಂಟ್ ಆಫ್ ಲಡಾಖ್ (SECMOL) ಶಿಕ್ಷಣ ಸಂಸ್ಥೆಯ ವಿರುದ್ಧ ತನಿಖೆ ಶುರುವಾಯಿತು. ಪ್ರಸ್ತುತ ಅವರು ಈ ಸಂಸ್ಥೆಯ ಆಡಳಿತ ಮಂಡಲಿಯ ಸದಸ್ಯರಲ್ಲ! ಈ ಸಂಸ್ಥೆಯಲ್ಲಿ ಆರ್ಥಿಕ ಅಪರಾಧಗಳು ಜರುಗಿವೆ ಎಂದು ಆಪಾದಿಸಿ ಕೇಂದ್ರ ಸರ್ಕಾರ ಅದರ FCRA ಲೈಸೆನ್ಸನ್ನು ರದ್ದು ಮಾಡಿದೆ. ವಾಂಗ್ಚುಕ್ ಅವರು ʼಅರಬ್ ಸ್ಪ್ರಿಂಗ್ʼ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಜರುಗಿದ Gen Z ಪ್ರತಿಭಟನೆಗಳನ್ನು ಪ್ರಸ್ತಾಪಿಸಿ, ಲಡಾಖ್‌ನ ಯುವಜನತೆಯನ್ನು ಪ್ರಚೋದಿಸಿದ ಕಾರಣದಿಂದ ಲೇಹ್‌ನಲ್ಲಿ ಹಿಂಸೆಯ ಪ್ರಕರಣಗಳು ಜರುಗಿದವು ಎಂಬುದು ಸರ್ಕಾರದ ಆಪಾದನೆ. ಬಿಜೆಪಿಯ ಐಟಿ ಸೆಲ್‌ನ ಟ್ರೋಲ್ ಆರ್ಮಿ ಕಣಕ್ಕೆ ಇಳಿದು ಅಪಪ್ರಚಾರಗಳನ್ನು ಮಾಡಿತು. ಎಂದಿನಂತೆ ಮಿದುಳಿಗೆ ಮುಸುಕನ್ನು ಹಾಕಿಕೊಂಡ ಅನೇಕರು ಇಂತಹ ಅಪಪ್ರಚಾರದ ಪೋಸ್ಟ್‌ಗಳನ್ನು ಹಂಚಿಕೊಂಡರು!
ವಾಂಗ್ಚುಕ್ ಇದೇ ವರ್ಷದ ಫೆಬ್ರವರಿಯಲ್ಲಿ ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಶ್ವಸಂಸ್ಥೆ ಮತ್ತು ʼದಿ ಡಾನ್ (Dawn) ಮೀಡಿಯಾ ಆಯೋಜಿಸಿದ್ದ ದಕ್ಷಿಣ ಏಷ್ಯಾದ ಹವಾಮಾನ ಬದಲಾವಣೆಗಳು ಮತ್ತು ಹಿಮಾಲಯ ಪ್ರದೇಶದ ಹಿಮನದಿ (ಗ್ಲೇಸಿಯರ್) ಕರಗುವಿಕೆ ಕುರಿತಂತೆ ಜರುಗಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ನಂತರ ಬಾಂಗ್ಲಾದೇಶಕ್ಕೂ ಭೇಟಿ ನೀಡಿದರು. ಇವೆಲ್ಲವನ್ನೂ ಅಸ್ತ್ರವನ್ನಾಗಿಸಿಕೊಂಡು ವಾಂಗ್ಚುಕ್ ಮೇಲೆ ಪ್ರಹಾರವನ್ನು ಮಾಡಲಾಯಿತು. ಸ್ವತಃ ಲಡಾಖ್‌ನ ಡಿಜಿಪಿ, ವಾಂಗ್ಚುಕ್ ಒಬ್ಬ ಪಾಕಿಸ್ತಾನಿ ಏಜೆಂಟ್ ಎಂದು ಅರ್ಥ ಬರುವಂತೆ ಮಾತನಾಡಿದರು. ಅಲ್ಲದೆ, ಅವರನ್ನು ಚೀನಾದ ಏಜೆಂಟ್ ಎಂದು ಸಹ ಬಣ್ಣಿಸಲಾಯಿತು! ಆದರೆ ಇದೇ ವಾಂಗ್ಚುಕ್ ಕೆಲವು ಸಂದರ್ಭಗಳಲ್ಲಿ ಮೋದಿಯವರನ್ನು ಹೊಗಳಿದ್ದೂ ಇದೆ. ಯಾವಾಗ ವಾಂಗ್ಚುಕ್ ಲಡಾಖ್ ಜನತೆಯ ಪ್ರಜಾಸತ್ತಾತ್ಮಕ ಆಶೋತ್ತರಗಳ ಗಟ್ಟಿ ದನಿಯಾದರೋ, ಅಂದಿನಿಂದ ಅವರು ದೆಹಲಿ ಆಳುವರಸರ ಕೆಂಗಣ್ಣಿಗೆ ಗುರಿಯಾದರು!

ಆದರೆ ಕೇಂದ್ರ ಸರ್ಕಾರದ ಈ ಪರಿಯ ನಡವಳಿಕೆ ಹೊಸದೇನಲ್ಲ! ಅದು ಕಳೆದ ಹನ್ನೊಂದು ವರ್ಷಗಳಿಂದ ಸಾಮಾಜಿಕ ಕಳಕಳಿಯುಳ್ಳ, ಜನಪರ ಹೋರಾಟಗಾರರ ಮೇಲೆ ವಿವಿಧ ರೀತಿಗಳಲ್ಲಿ ಆಕ್ರಮಣಗಳನ್ನು ಮಾಡುತ್ತ ಬಂದಿದೆ. ಭೀಮಾ-ಕೊರೆಗಾಂವ್ (ಎಲ್ಗರ್ ಪರಿಷತ್) ಕೇಸ್‌ನಲ್ಲಿ ಆನಂದ್ ತೇಲ್ತುಂಬ್ಡೆ, ಸ್ಟ್ಯಾನ್ ಸ್ವಾಮಿ, ಸುಧಾ ಭಾರದ್ವಾಜ್. ಸುಧೀರ್ ಧಾವಲೆ, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ವರಾವರ ರಾವ್, ಶೋಮಾ ಸೆನ್, ಗೌತಮ್ ನವ್ಲಾಖ, ಅರುಣ್ ಫೆರೀರಾ ಮುಂತಾದ ಮಾನವ ಹಕ್ಕು ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರಧಾನಿ ಮೋದಿಯವರನ್ನು ಮುಗಿಸಲು ಸ್ಕೆಚ್ ಹಾಕಿದರೆಂದು, ಅವರ ಮೇಲೆ UAPA ಕಾಯಿದೆಯಡಿ ಕಾನೂನು ಕ್ರಮವನ್ನು ಜರುಗಿಸಿ ಜೈಲಿಗೆ ಅಟ್ಟಲಾಯಿತು! ಅವರಲ್ಲಿ ಕೆಲವರಿಗೆ ದೀರ್ಘಾವಧಿಯ ವಿಚಾರಣಾಧೀನ ಕಾರಾಗೃಹವಾಸದ ತರುವಾಯ ಜಾಮೀನು ಸಿಕ್ಕಿತು. ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ಜರುಗಿದ ಕೋಮು ಗಲಭೆಗಳಲ್ಲಿ ಉಮರ್ ಖಾಲಿದ್ ಮತ್ತು ಇತರ ಯುವ ಕಾರ್ಯಕರ್ತರ ಕೈವಾಡವಿತ್ತು ಎಂದು ಆಪಾದಿಸಿ, ಅವರ ವಿರುದ್ಧ UAPA ಕಾಯಿದೆಯನ್ನು ಪ್ರಯೋಗಿಸಿ ಬಂದೀಖಾನೆಗೆ ರವಾನಿಸಲಾಯಿತು. ಐದು ವರ್ಷ ಕಳೆದರೂ, ಉಮರ್ ಮತ್ತು ಇತರರಿಗೆ ಬೈಲ್ ಸಿಕ್ಕಿಲ್ಲ. 2020-21ರ ಐತಿಹಾಸಿಕ ರೈತರ ಹೋರಾಟದ ಸಂದರ್ಭದಲ್ಲಿ ರೈತರನ್ನು ಖಾಲೀಸ್ತಾನಿಗಳು ಎಂದು ಆಪಾದಿಸಲಾಯಿತು. ಕಾಶ್ಮೀರದಲ್ಲಿ ಆರ್ಟಿಕಲ್ 370ರ ರದ್ದತಿಯ ನಂತರ ಅಲ್ಲಿನ ಅನೇಕ ರಾಜಕೀಯ ನಾಯಕ-ನಾಯಕಿಯರನ್ನು ಬಂಧನದಲ್ಲಿ ಇರಿಸಿದ್ದನ್ನು ಕೂಡ ಸ್ಮರಿಸಬಹುದು.
ಹೀಗೆ ಅಹಿಂಸಾತ್ಮಕ ಮತ್ತು ಪ್ರಜಾಸತ್ತಾತ್ಮಕ ಜನಪರ ಹೋರಾಟಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಸೋನಮ್ ವಾಂಗ್ಚುಕ್ ಒಬ್ಬ ಶಿಕ್ಷಣ ತಜ್ಞ/ಸುದಾರಕ, ಪರಿಸರವಾದಿ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಮತ್ತು ಪರಿವರ್ತಕ(Innovator). ಲಡಾಖ್ ಮತ್ತು ಹಿಮಾಲಯ ಪ್ರಾಂತ್ಯದಲ್ಲಿ ಹವಮಾನ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಅಮೋಘ ಕೆಲಸಗಳನ್ನು ಮಾಡಿದ್ದಾರೆ. ಅತ್ಯಂತ ಶೀತಲ ಪ್ರದೇಶಗಳಲ್ಲಿ ನಮ್ಮ ದೇಶದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ನಮ್ಮ ಯೋಧರ ಹಿತದಲ್ಲಿ ಕೆಲವು ವ್ಯವಸ್ಥೆಗಳನ್ನು ಆವಿಷ್ಕಾರ ಮಾಡಿದ್ದಾರೆ. ಅವರು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರು ಹೂಡಿರುವ ಹೋರಾಟಗಳೆಲ್ಲವೂ ಅಹಿಂಸಾತ್ಮಕವಾಗಿಯೇ ಇವೆ. ಅವರಿಗೆ ಗಾಂಧೀವಾದದಲ್ಲಿ ನಂಬಿಕೆಯಿದೆ. 2009ರಲ್ಲಿ ತೆರೆಕಂಡ ʼ ಥ್ರೀ ಈಡಿಯಟ್ಸ್ ʼ ಎಂಬ ಜನಪ್ರಿಯ ಹಿಂದಿ ಸಿನಿಮಾದ ಖ್ಯಾತ ಸೂಪರ್‌ಸ್ಟಾರ್ ಅಮೀರ್ ಖಾನ್ ವಹಿಸಿದ ಪಾತ್ರ ವಾಂಗ್ಚುಕ್‌ರಿಂದ ಸ್ಪೂರ್ತಿಗೊಂಡಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮತ್ತೆ ಬಿಹಾರ ಗೆಲ್ಲಲು ಮೋದಿ ತಂತ್ರ- ಹಣದ ಹೊಳೆ, ಆಶ್ವಾಸನೆಗಳ ಮಳೆ!
ಇಂತಹ ಸೋನಮ್ ವಾಂಗ್ಚುಕ್ ಅವರನ್ನು NSA ಅಡಿ ಬಂಧಿಸಲಾಗಿದೆ! ಈ ಕಾಯಿದೆಯ ನಿಬಂಧನೆಗಳ ಅನ್ವಯ ಕ್ರಿಮಿನಲ್ ಕೋರ್ಟಿನಿಂದ ಜಾಮೀನು ಪಡೆಯುವಂತಿಲ್ಲ. ಹಾಗಾಗಿ ವಾಂಗ್ಚುಕ್‌ರನ್ನು ಎಷ್ಟು ಸಮಯ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗುತ್ತದೆ ಎಂಬುದು ಊಹಾತೀತ ಸಂಗತಿ! ಇತ್ತೀಚೆಗೆ ಕರ್ನಾಟಕ ಮೂಲದ ಹೆಸರುವಾಸಿ ನಟ ಪ್ರಕಾಶ್ ರಾಜ್(ರೈ) ವಾಂಗ್ಚುಕ್ ಬಂಧನದ ಬಗೆಗೆ ಪ್ರತಿಕ್ರಿಯಿಸುತ್ತ, “ಹಕ್ಕಿಯನ್ನು ಬಂಧಿಸಬಹುದು, ಆದರೆ ಅದರ ಹಾಡನಲ್ಲ! ವಾಂಗ್ಚುಕ್‌ರನ್ನು ಬಂಧಿಸಬಹುದು. ಆದರೆ ಅವರು ಮಂಡಿಸುತ್ತ ಬಂದಿರುವ ಸತ್ಯಗಳನ್ನು ಮೌನಗೊಳಿಸಲಾಗುವುದಿಲ್ಲ!“ ಎಂದರು. ಇದು ನಿಜ.

ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ




