ಕೆಲ ವರ್ಷ ಹಿಂದೆ, ನಮ್ಮ ಊರಿನ ಹತ್ತಿರದ ಹಳ್ಳಿಯ ಒಬ್ಬ ಹುಡುಗ ಹೊರದೇಶಕ್ಕೆ ವೈದ್ಯ ವಿಜ್ಞಾನ ಕಲಿಯಲು ಹೋದ. ದುರಾದೃಷ್ಟಕ್ಕೆ ಅಲ್ಲಿನ ಯುದ್ಧ ಕಾಲದಲ್ಲಿ ತೀರಿಕೊಂಡ. ಭಾರತದಲ್ಲಿ ಅವನಿಗೆ ಸೀಟು ಸಿಕ್ಕಿರಲಿಲ್ಲ. ಅವನ ದೇಹ ವಾಪಸ್ ಬರೋದು ಸ್ವಲ್ಪ ತಡವಾಯಿತು. ಆಗ ನಮ್ಮ ಕುಲ ಬಾಂಧವರು ಅವರ ಮನೆಗೆ ‘ಬೈಟು’ ಪಡೆಯಲು ಹೋದರು.
“ಭಾರತದಲ್ಲಿ ಇರುವ ಮೂರು ಪ್ರಮುಖ ಸಮಸ್ಯೆಗಳು ಯಾವುವು ಮತ್ತು ಅವುಗಳ ಪರಿಹಾರ ಏನು? ಅಂತ ಓಶೋ ರಜನೀಶ್ ಅವರಿಗೆ ಯಾರೋ ಕೇಳಿದರಂತೆ. ಅದಕ್ಕೆ ಅವರು ಏನು ಉತ್ತರ ಹೇಳಿದರು ಗೊತ್ತಾ?” ಅಂತ ನನ್ನ ಎದುರು ಕುಳಿತ ಸಜ್ಜನರು ನನ್ನನ್ನು ಕೇಳಿದರು.
ಅವರು ಸಹ ಕುಟುಂಬ- ಸಹ ಪರಿವಾರ ನನ್ನನ್ನು ಭೇಟಿ ಆಗಲು ಬಂದಿದ್ದರು. ಹಂಗೇ ಇಲ್ಲೇ ಎಲ್ಲೋ ಉಳ್ಳಾಗಡ್ಡಿ ಖಾನಾಪೂರ್ ದಿಂದ ಅಲ್ಲ, ದೂರದ ಯುರೋಪ್‌ನಿಂದ. ಬರೋಬ್ಬರಿ ಮೂರು ತಾಸು ಕೂತಿದ್ದರು. ಅಷ್ಟ ಇಷ್ಟ ಅಲ್ಲ ಮತ್ತ.
ನನ್ನ ಹೆಂಡತಿ ವೀಣಾ,“ಅಯ್ಯೋ ಅಷ್ಟು ದೂರದಿಂದ ಬರತಾರ ಪಾಪ, ಅವರಿಗೆ ಸೇರೋದು ಮಾಡಿ ಊಟಕ್ಕ ಹಾಕಬೇಕು” ಅಂತ ಹೇಳಿ ವಿದೇಶಗಳಲ್ಲಿ ಸಿಗಲಾರದ ಮಾಲದಿ ಉಂಡಿ, ಗುಳ ಪಾಪಡಿ, ಮೆಂತೆ ಹಿಟ್ಟು, ಚೊಂಗೇ, ಅಂತ ಏನೇನೋ ಭಕ್ಷ ಗಳನ್ನು ಮಾಡಿದ್ದಳು. ಊರ ಮುಂಜಾನೆ ಎದ್ದು ಅಡಿಗೆ ತಯಾರಿ ಮಾಡಿದಳು! ಹಂಗ ಅಲ್ಲ ಮತ್ತ!
ಹಾಗೆ ಉಕ್ಕಿನ ಹಕ್ಕಿಯಲ್ಲಿ ಹಾರಿ ಬಂದು ನಮ್ಮ ಮನೆಗೆ ಅವತರಿಸಿದ ನಮ್ಮ ಸ್ನೇಹಿತರು, ಹೀಗೆ ನನ್ನತ್ತ ಒಂದು ಪ್ರಶ್ನೆ ಒಗೆದು ನನ್ನನ್ನು ನೋಡಿದರು. ಮಣಿಕಟ್ಟು ತಿರುವಿ ನಿಂತ ಮಹಾನ್ ನಾಯಕ ದ್ರಾವಿಡ್‌ನ ಥರ.
ಅವರು ಏನೋ ಗಂಭೀರವಾಗಿ ಕೇಳುತ್ತಾ ಇರಬೇಕು ಅಂದುಕೊಂಡ ನಾ ”ಓಶೋ ಅವರ ಸುಮಾರು ಪುಸ್ತಕ ಓದಿದ್ದೇನೆ, ರೇಡಿಯೋ ದನಿ ಮುದ್ರಣ ಕೇಳಿದ್ದೇನೆ, ಈಗೀಗ ವಿಡಿಯೋ ಕೂಡ ನೋಡುತ್ತಾ ಇರುತ್ತೇನೆ. ಆದರೆ ಈ ಪ್ರಸಂಗ ಗೊತ್ತಿಲ್ಲ. ಇದೇನೋ ಕುತೂಹಲಕರವಾಗಿದೆ, ಅಲ್ಲವೇ ?,” ಅಂತ ಅಂದೆ.
“ಹೌದು ಹೌದು… ತುಂಬ ಇಂಟರೆಸ್ಟಿಂಗ್!, ನೋಡಿ ಓಶೋ ಏನೇಳಿದರೂ ಅಂದರೆ, ಇಂಡಿಯಾದಲ್ಲಿ ತ್ರೀ ಪ್ರಾಬ್ಲಮ್ಸ್ ಇಲ್ಲ. ಒನಲಿ ಒನ್ ಪ್ರಾಬ್ಲಂ. ಅದೇನ ಗೊತ್ತಾ, “ನೋ ರಾನ್ದೇವೂ “ಬಿಟ್ವೀನ್ ಟ್ಯಾಲೆನ್ಟ್ ಅಂಡ್ ಅಪರ್ಚುನಿಟೀ” ಅಂತ ಥೇಟ್ ಚಂದ್ರ ಮೋಹನ್ ಜೈನ ಧಾಟಿಯಲ್ಲೇ ಹೇಳಿದರು. “ರಾನ್ದೇವೂ ಅಂದರೆ ಏನೂಂತ ಗೊತ್ತೇನ್ರೀ ನಿಮಗೆ?”, ಅಂತ ಬೇರೆ ಅಂದ್ರು. ನನಗೆ ಗೊತ್ತಿತ್ತು. ಆದರೆ ಫಾರಿನ ರಿಟರ್ನ್ ಬುದ್ಧಿವಂತರ ಮಾತಿನ ನಡುವೆ ಅಡ್ಡ ಹಾಕಬಾರದು ಅಂತ ನಾನು `ಇಲ್ಲ ಸಾ’ ಅಂದೆ.
“ರಾನ್ದೇವೂ ಅಂದರೆ ಮೀಟಿಂಗ್ ಪಾಯಿಂಟ್ ಅಂತ. ಭೇಟಿಯಾಗೋ ಸ್ಥಳ. ಗೊತ್ತಲ್ಲವಾ!ಚಿಕ್ಕೋರಿದ್ದಾಗ ನಾವು ಎಲ್ಲಾ ಒಂಟಿ ಕೊಪ್ಪಲ್ ಕಟ್ಟೆ ಮೇಲೆ ಕೂತುಕೊಂಡು, ನಮ್ಮ ಅಮ್ಮ ಅಳೆ ಪೇಪರ್‌ನಲ್ಲಿ ಕಟ್‌ಕೊಟ್ಟ ರಾಗಿ ಹುರಿಹಿಟ್ಟು ಬೆಲ್ಲದ ಅಚ್ಚು ಕಚ್ಚಕೊಂಡು ಮಾತಾಡ್ತಾ ಕೂಡತಾ ಇದ್ದವಲ್ಲಾ, ಆ ರೀತಿಯ ಜಾಗ” ಅಂತ ಕೇಳ್‌ದವರಿಗೆ ಕಣ್ಣಲ್ ನೀರ್ ಬರೋ ಥರ ಎಕ್ಸ್‌ಪ್ಲೇನ್ ಮಾಡಿದರು. ರಾಗಿ ಹುರಿ, ಹಿಟ್ಟು, ಅಚ್ಚು ಇತ್ಯಾದಿ ಯಾವುವೂ ಗೊತ್ತಿರದ ನಾನು, ಪೆಕರನಂತೆ ಅವರ ಮುಖ ನೋಡಿದೆ.
“ನೋಡಿ ಸಾ, ಈ ನಮ್ಮ ಆಚಾರ್ಯ ರಜನೀಶ್ ಅವರ ಮಾರ್ಮಿಕ ವಾದ ಮಾತಿನ ಗೂಢಾರ್ಥ ಎನ್ ಗೊತ್ತಾ” ಅಂದ್ರು. ನಾನು ಥಟ್ ಅಂತ, ನೀವು ಯುರೋಪ್ ನಲ್ಲಿ ಸಹಿತ ಕನ್ನಡ ಟಿವಿ ಚಾನೆಲ್ ನೋಡ್ತೀರಾ?”, ಅಂತ ಕೇಳಿದೆ. ಎಸ್ ಡೆಫಿನಿಟ್ಲಿ. 24 ಅವರ್ಸ್ ಅಂತ ಅಚ್ಚ ಕನ್ನಡದಲ್ಲಿ ಹೇಳಿದರು. ಆಗ ನನಗೆ ಅರ್ಥ ಆಯಿತು. ಮಾರ್ಮಿಕವಾಗಿ ‘ಅನ್ನೋ ಪದ ಯಾಕೆ ಉಪಯೋಗಿಸಿದರು ಅಂತ.

ಅವರ ಪ್ರಕಾರ ಓಶೋ ಅವರು ಹೇಳಿದ್ದು ಇಷ್ಟು- ಭಾರತದಲ್ಲಿ ಒಂದು ಕಡೆ ಅಪಾರ ಪ್ರತಿಭೆ ಇದೆ, ಇನ್ನೊಂದು ಕಡೆ ಅವಕಾಶಗಳ ರಾಶಿಯೇ ಇದೆ. ಆದರೆ ಅವು ಎರಡೂ ಭೇಟಿ ಆಗುವ ದಾರಿ ಸುಲಭವಾಗಿಲ್ಲ. ಇದನ್ನು ಓಶೋ ಅವರು ಯಾವ ಅರ್ಥದಲ್ಲಿ ಹೇಳಿದರೋ ಏನೋ ಆದರೆ ನಮ್ಮ ಮಿತ್ರರು ತಿಳಿದುಕೊಂಡಿದ್ದು ಏನು ಅಂದರೆ- `ಓಶೋ ಅವರು ಮೀಸಲಾತಿಯ ಬಗ್ಗೆ ಮಾತಾಡುತ್ತಿದ್ದರು. ಜೈನ ಸಮಾಜದ ಸ್ಥಿತಿವಂತ ಕುಟುಂಬದಲ್ಲಿ ಹುಟ್ಟಿದ, ರಜನೀಶ್ ಅವರಿಗೆ ಮೀಸಲಾತೀಯ ಬಗ್ಗೆ ಸಹಜ ಅಸಡ್ಡೆ ಇತ್ತು, ಬರೀ ಭಾರತವಲ್ಲ, ಇಡೀ ವಿಶ್ವದ ಭವಿಷ್ಯ ಬಲ್ಲ ಆ ತತ್ವಜ್ಞಾನಿಗೆ ಮೀಸಲು ಸೌಲಭ್ಯದಿಂದಾಗಿ ಭಾರತ ಹಿಂದೆ ಉಳಿದಿದೆ, ಬಡತನದಿಂದ ತುಂಬಿದೆ, ಮೂರನೇ ದರ್ಜೆಯ ರಾಷ್ಟ್ರ ಆಗಿದೆ ಅಂತ ಕಂಪ್ಲೀಟ್ ಆಗಿ, ಸಖತ್ ಅರ್ಥ ಆಗಿತ್ತು. ಈ ಕೂಪದಿಂದ ತಪ್ಪಿಸಿಕೊಂಡ ತಮ್ಮಂಥವರು ಮಹಾನ್ ಬುದ್ಧಿವಂತರು’, ಅಂತ ಅವರು ತಿಳಿದುಕೊಂಡಿದ್ದರು. ಅವರು ಅಷ್ಟೇ ಸ್ಪಷ್ಟವಾಗಿ ಅದನ್ನು ಹೇಳಿದರೂ ಕೂಡ.
ಆದರೆ ನಾನು ಸರಳವಾಗಿ ಒಪ್ಪಲಿಲ್ಲ, ಓಶೋ ಅವರು ಮೀಸಲಾತಿಯ ಪರವಾಗಿ ಮಾತಾಡಿದ, ಲೇಖನ ಬರೆದ ದಾಖಲೆ ಇದೆಯಲ್ಲ, ಅವರು ದೇಶದ ವಿವಿಧ ಕಡೆ ಅಸ್ಪೃಶ್ಯತೆಯ ನಿರ್ಮೂಲನೆ ಹಾಗೂ ಜಾತಿ ವಿರೋಧಿ ಆಂದೋಲನಗಳ ಪರವಾಗಿ ಇದ್ದರು. ಈ ರೀತಿಯ ಸಾಮಾಜಿಕ ಪಿಡುಗುಗಳಿಂದಲೇ ಹಿಂದೂ ಧರ್ಮ ಶಿಲಾಯುಗದಲ್ಲಿ ಸಿಲುಕಿರುವುದು ಎಂದು ಅವರು ಹೇಳಿದ್ದಾರೆ ಎಂದು ಹೇಳಿದೆ. ಅದಕ್ಕೆ ಅವರು ಒಪ್ಪಲಿಲ್ಲ. ನಾವು ಬಹುಕಾಲ ಮಾತಾಡಿದ ಮೇಲೆಯೂ ಅವರ ಪೂರ್ವಾಗ್ರಹ ಬದಲಾಗಲಿಲ್ಲ. ನೀವು ಮೆರಿಟ್ ವಿರೋಧಿಯಾಗಿದ್ದೀರಿ ಅಂತ ಹೇಳಿ, ನಾನು ಮುಂದೆ ಯಾವಾಗಲೋ ಚುನಾವಣೆ ರಾಜಕೀಯದ ತಯಾರಿ ನಡೆಸಿರಬೇಕು ಎಂದು ಲೆಕ್ಕ ಹಾಕಿದರು. ಅದೇ ಸರಳವಾದ ಅಭಿಪ್ರಾಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಎದ್ದು ಹೋದರು. ಯಾವುದೇ ವಿಷಯವನ್ನು ಹರಿಯುವ ತನಕ ಜಗ್ಗಬಾರದು’ ಎನ್ನುವ ನನ್ನ ಅಜ್ಜಿಯ ಮಾತು ನೆನಪಾಗಿ ನಾನು ಸುಮ್ಮನೇ ಆದೆ.
ಕೆಲ ವರ್ಷ ಹಿಂದೆ, ನಮ್ಮ ಊರಿನ ಹತ್ತಿರದ ಹಳ್ಳಿಯ ಒಬ್ಬ ಹುಡುಗ ಹೊರ ದೇಶಕ್ಕೆ ವೈದ್ಯ ವಿಜ್ಞಾನ ಕಲಿಯಲು ಹೋದ. ದುರಾದೃಷ್ಟಕ್ಕೆ ಅಲ್ಲಿನ ಯುದ್ಧ ಕಾಲದಲ್ಲಿ ತೀರಿಕೊಂಡ. ಭಾರತದಲ್ಲಿ ಅವನಿಗೆ ಸೀಟು ಸಿಕ್ಕಿರಲಿಲ್ಲ. ಅವನ ದೇಹ ವಾಪಸ್ ಬರೋದು ಸ್ವಲ್ಪ ತಡ ಆಯಿತು. ಆಗ ನಮ್ಮ ಕುಲ ಬಾಂಧವರು ಅವರ ಮನೆಗೆ ‘ಬೈಟು’ ಪಡೆಯಲು ಹೋದರು.
ಅಂತಹ ದುಃಖದ ಸಮಯದಲ್ಲಿಯೂ ಸಹ ಅವರ ಅಪ್ಪ ಸುಳ್ಳು ಹೇಳಿದ. ʼಇಲ್ಲಿನ ಮೀಸಲಾತಿಯಿಂದಾಗಿ ನನ್ನ ಮಗ ವಿದೇಶಕ್ಕೆ ಹೋದ. ಈಗ ನೋಡ್ರಿ, ಅವನ ಹೆಣ ಸಹಿತ ವಾಪಸ್ ಬರಲಿಲ್ಲ’ ಅಂತ ಕಣ್ಣೀರು ಇಟ್ಟ.
ಆದರೆ ವಸ್ತುಸ್ಥಿತಿ ಭಿನ್ನವಾಗಿತ್ತು. ಸ್ಥಳೀಯ ಪತ್ರಕರ್ತರು ಹುಡುಗನ ದಾಖಲೆ ಪರಿಶೀಲಿಸಿದಾಗ ಅವನಿಗೆ ಪಿಯುಸಿಯಲ್ಲಿ ಮೀಸಲು ವಿಭಾಗದ ವಿದ್ಯಾರ್ಥಿಗಳಿಗಿಂತ ಕಮ್ಮಿ ಅಂಕಗಳು ಬಂದಿದ್ದವು. ಆದರೆ ಅಷ್ಟೇ ಅಂಕಗಳಿಗೆ ಹೊರ ದೇಶದಲ್ಲಿ ಅವನ ಬ್ಯಾಚ್ ನ 10-12 ಹುಡುಗ- ಹುಡುಗಿಯರು ಪ್ರವೇಶ ಪಡೆದರು. ಅಲ್ಲಿ ಶುಲ್ಕವೂ ತುಂಬ ಕಮ್ಮಿ. ಹೀಗಾಗಿ ಅವನ ಕುಟುಂಬ ಅವನನ್ನು ಕಳಿಸಿತ್ತು.
ಕೊನೆಗೆ ಊರ ಮಧ್ಯದ ಹುದುಗಿನಲ್ಲಿ ಬಿದ್ದ ಮೀಸಲಾತಿ ಎಂಬ ಕೇರಿಯ ಗೂಳಿಗೆ ಎಲ್ಲರ ಜೊತೆ ತಾನೂ ಒಂದೆರಡು ಕಲ್ಲು ಒಗೆಯಿತು.
ಹುಳಿ ದ್ರಾಕ್ಷಿ ಮತ್ತು ನರಿಗಳು
ಒಬ್ಬ ಮಹಿಳೆ ಮೀಸಲಾತಿ ನನಗೆ ವಿದೇಶಿ ವಿಮಾನದ ಟಿಕೆಟ್ ಖರೀದಿಸಲು ಪ್ರೇರೇಪಿಸಿತು ಅಂತ ಘೋಷಿಸಿಕೊಂಡಳು. ಅದರ ಕೆಳಗೆ ದೆಹಲಿ ಮೂಲದ ಮುಸ್ಲಿಂ ಮಾಸ್ತರ ಒಬ್ಬರು ನನ್ನ ಮಗಳ ಪರಿಸ್ಥಿತಿಯೂ ಇದೇ ಅಂತ ಗೋಳಾಡಿಕೊಂಡರು. ಅವರಿಗೆ ನನ್ನ ಮಿತ್ರರೊಬ್ಬರು ಕಾಮೆಂಟ್ ಮಾಡಿದರು -`ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ ಇದೇ’ ಅಂತ. ಅದಕ್ಕೆ ಅವರು ಅಯ್ಯೋ ನಾವು ಇರುವುದು ದೆಹಲಿಯಲ್ಲಿ. ನಮಗೆ ಇಲ್ಲವಲ್ಲ! ನಮಗೆ ಸಿಕ್ಕರೆ ಮಾತ್ರ ಹಣ್ಣು ಸಿಹಿ, ಇಲ್ಲವೇ ಅದು ಹುಳಿ!” ಅಂತ ನಾಚಿಕೆ ಪಟ್ಟುಕೊಳ್ಳದೇ ಹೇಳಿದರು.
ಇನ್ನೊಮ್ಮೆ ಅನುಭವ ಗುಪ್ತಾ ಅನ್ನುವ ಇಂಜಿನಿಯರ್, “ನಾನು ಭಾರತ ಬಿಟ್ಟು ಹೋಗುತ್ತಿದ್ದೇನೆ. ನನಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು. ಮೀಸಲಾತಿಯಿಂದಾಗಿ ನಾನು ದೇಶ ಬಿಟ್ಟು ಹೊರಟಿದ್ದೇನೆ” ಅಂತ ಎಕ್ಸ್‌ನಲ್ಲಿ ಒಂದು ಪೋಸ್ಟ್ ಹಾಕಿದರು. ಅದನ್ನು ನೋಡಿ ಮುಂಬಯಿ ಮೂಲದ ಮಾಧವ ಪನಗರಕರ ಎನ್ನುವ ತೆರಿಗೆ ಸಲಹಾಗಾರರು, ಇದು ನೋಡಿ ಅವಸ್ಥೆ. ನಮ್ಮ ದೇಶದಿಂದ ಬೌದ್ಧಿಕ ಪಲಾಯನ ಆಗುತ್ತಿದೆ. ಒಂದು ವರ್ಷಕ್ಕೆ 12 ಲಕ್ಷ ವಿದ್ಯಾರ್ಥಿಗಳು, ಅದರಲ್ಲಿಯೂ ಐಐಟಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿದ ಶೇಕಡಾ 70 ಪ್ರತಿಭಾವಂತ ವಿದ್ಯಾರ್ಥಿಗಳು, ಬೇರೆ ದೇಶಗಳಿಗೆ ಉನ್ನತ ಶಿಕ್ಷಣಕ್ಕೆ ಹೋಗುತ್ತಾ ಇದ್ದಾರೆ. 70 ಸಾವಿರ ಇಂಜಿನಿಯರ್‌ಗಳು, ವೈದ್ಯರು, ವಕೀಲರು, ಕೃಷಿ ವಿಜ್ಞಾನಿಗಳು, ದೇಶ ಬಿಟ್ಟ ಹೋಗುತ್ತಿದ್ದಾರೆ. ಇದಕ್ಕೆಲ್ಲ ಮೀಸಲಾತಿಯೇ ಕಾರಣ. ಇದನ್ನು ಮುಂದುವರೆಸಬೇಕೆ ಬೇಡವೇ, ಅಂತ ನಾವು ಆತ್ಮ ನಿರೀಕ್ಷಣೆ ಮಾಡಿಕೊಳ್ಳಬೇಕು,” ಅಂತ ಪೋಸ್ಟ್ ಹಾಕಿದ್ದರು. ಇದಕ್ಕೆ ಎಕ್ಸ್ ನಲ್ಲಿ ಭಾರಿ ಭಯಂಕರ ಚಾಲನೆ ಸಿಕ್ಕಿತು. ಅತಿ ಹೆಚ್ಚು ಟಿ ಆರ್ ಪಿ ಇರುವ, ಶನಿವಾರ ರಾತ್ರಿ ಬರುವ ʼಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವ ಥೀಮ್‌ನ ಟಿವಿ ಸೀರಿಯಲ್‌ಗಳಂತೆ ಇದು ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಯಿತು.
ಇಂತಹ ಅನೇಕ ಉದಾಹರಣೆಗಳನ್ನು ನೀವು ನೋಡಿರಬಹುದು, ಅನುಭವಿಸಿರಬಹುದು. ಎಲ್ಲರೂ ಮೀಸಲು ಸೌಲಭ್ಯದ ಬಗ್ಗೆ ಉಲ್ಟಾ ಮಾತು ಆಡುವಾಗ ಅವರು ಕೇಳಿಸಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ ಅಂತ ನೀವು ಸುಮ್ಮನೇ ಆಗಿರಬಹುದು. ಅಥವಾ ಮಾತಾಡಿ ಮಾತಾಡಿ ನಿಮ್ಮ ದನಿ ಹೋಗಿರಬಹುದು, ನಿಮ್ಮ – ಅವರ ಸಂಬಂಧ ಕೆಟ್ಟು ಹೋಗಿರಬಹುದು.
ನಿಮ್ಮೆಲ್ಲರಿಗೂ ಗೊತ್ತಿರುವ ಪಂಚತಂತ್ರದ ಕತೆಯಲ್ಲಿ ದೇವಸ್ಥಾನದ ಆನೆ ಮುಟ್ಟಿ ಬಂದ ಐವರು ಕುರುಡರು ಆನೆ ಇತರರಿಗೆ ಯನ್ನು ಕುರಿತು ಹೇಳುವಾಗ ತಮ್ಮ ಅರಿವಿಗೆ ದಕ್ಕಿದ ಹಾಗೆ ವರ್ಣಿಸುತ್ತಾರೆ. ಈ ಮೀಸಲು ಸೌಲಭ್ಯ ಕೂಡ ಹಾಗೆಯೇ ಅಂತ ನನಗೆ ಅನ್ನಿಸುತ್ತದೆ. ಇದರ ಬಗ್ಗೆ ನಮ್ಮ ಸಮಾಜಕ್ಕೆ ಒಂದು ಸಮಗ್ರ ದೃಷ್ಟಿ ಇನ್ನೂ ಸಿದ್ಧಿಸಿಲ್ಲ ಅಂತ ಅನ್ನಿಸುತ್ತದೆ.
ಕೇವಲ ನಮ್ಮಲ್ಲಿ ಮಾತ್ರ ಅಲ್ಲ!
ಮೀಸಲಾತಿ ಕೇವಲ ಭಾರತದಲ್ಲಿ ಸದ್ದು ಮಾಡುತ್ತಿಲ್ಲ. ಅಮೆರಿಕದಲ್ಲಿ ಈಗ ಸೈತ ಅದು ತುಂಬ ಟ್ರೆಂಡಿಂಗ್ ಆಗಿರುವ ಟಾಪಿಕ್. ಅಮೆರಿಕದ ಅಧ್ಯಕ್ಷರು ಹಾಗೂ ನನ್ನ ಚಡ್ಡಿ ದೋಸ್ತರು ಆದ ಡೊನಾಲ್ಡ್ ಟ್ರಂಪ ಅವರು ತಮ್ಮದೇ ದೇಶದ ನೀತಿ- ನಿಯಮಗಳ ಮೇಲೆ ಒಂದು ದೊಡ್ಡ ಅಂತರ್ ಯುದ್ಧವನ್ನೇ ಸಾರಿದ್ದಾರೆ. ಅದನ್ನು ಅಬ್ರಹಾಂ ಲಿಂಕನ್ ಅವರ ಕಾಲದಲ್ಲಿ ಗುಲಾಮಗಿರಿ ಪರ ಹಾಗೂ ವಿರೋಧಿ ರಾಜ್ಯಗಳ ನಡುವೆ ನಡೆದ ಅಂತರ್ ಯುದ್ಧದ ನಂತರ ನಡೆದ ಅತಿ ದೊಡ್ಡ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆ ಅಂತ ಬಣ್ಣಿಸಲಾಗುತ್ತಿದೆ. ಅದು ಏನಪ್ಪಾ ಅಂದರೆ (DEI – diversity, equality and inclusiveness) ನೀತಿಗಳನ್ನು ರದ್ದು ಮಾಡುವುದು. (ಲ್ಯಾಟಿನ್ ಭಾಷೆಯಲ್ಲಿ ಡೈ ಅಂದರೆ ದೇವರು ಅಂತ ಅರ್ಥ. ಹೀಗಾಗಿ ಟ್ರಂಪ ಅವರ ದೇವರ ದೇವ ವಿರೋಧಿ', ಎನ್ನುವ ಜೋಕು. ಇಲ್ಲ, ಅವರು ಅಮೆರಿಕನ್ ಡೈ ವಿರೋಧಿ, ದೇವ ವಿರೋಧಿ ಅಲ್ಲ’ ಎನ್ನುವ ಅವರ ಹಿಂಬಾಲಕರ ಚೀರಾಟ ನಡೆದೇ ಇರುತ್ತದೆ!).

ಇದಕ್ಕೆ ಸ್ವಲ್ಪ ಹಿನ್ನಲೆ ಸಿಕ್ಕರೆ ಸರಳವಾಗಿ ಚರ್ಚೆ ಮಾಡಬಹುದು. ಅಮೆರಿಕ ಒಂದು ದೇಶ ಅಂತ ಆರಂಭ ಆಗಿ ಸುಮಾರು 500 ವರ್ಷ ಆಯ್ತು. ಪ್ರಜಾಸತ್ತಾತ್ಮಕ ಗಣರಾಜ್ಯ ಆಗಿ ಸುಮಾರು 300 ವರ್ಷ ಆಯಿತು. ಗುಲಾಮಗಿರಿ ಹೋಗಿ, ಮಹಿಳೆಯರಿಗೆ ಸಮಾನ ಹಕ್ಕುಗಳು ಬಂದು ಸುಮಾರು ಒಂದು ನೂರು ವರ್ಷ ಆಯಿತು. ಕಳೆದ ಒಂದು ಶತಮಾನ ದಲ್ಲಿ ಅಲ್ಲಿನ ಸರಕಾರಗಳು ಡಿ ಈ ಐ ತತ್ವದ ಆಧಾರದ ಮೇಲೆ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳನ್ನು ಸೃಜಿಸುತ್ತಾ ಬಂದಿವೆ. ಅದಕ್ಕೆ ಒಂದೊಂದು ರಾಜ್ಯಗಳಲ್ಲಿ ಒಂದೊಂದು ಹೆಸರು. ಕೆಲವು ರಾಜ್ಯಗಳಲ್ಲಿ ಅದಕ್ಕೆ ರೇನಬೋ ಅಲಯನ್ಸ್, ಸಕಾರಾತ್ಮಕ ಕ್ರಮ, ವಿಭಿನ್ನತಾ ಮಾನದಂಡ, ಇನ್ನು ಕೆಲವು ಕಡೆ ಅದನ್ನು ಸಂರಕ್ಷಣಾತ್ಮಕ ಭೇದಭಾವ, ಅಂತಲೋ ಕರೆಯುತ್ತಾರೆ (Rainbow alliance, affirmative action, protective discrimination) ಆದರೆ ಅವರು ಅದನ್ನು ಮೀಸಲಾತಿ ಅಂತ ಕರೆಯುವುದಿಲ್ಲ. ಅದನ್ನು ನೋಡಿದ ನಮ್ಮ ಎನ್‌ಆರ್‌ಐಗಳು ಪಾಶ್ಚಿಮಾತ್ಯ ರಾಜ್ಯಗಳಲ್ಲಿ ಮೀಸಲಾತಿ ಇಲ್ಲ. ಅಲ್ಲಿ ಎಲ್ಲವೂ ಮೆರಿಟ್ ಮೇಲೆ ಆಧಾರಿತವಾಗಿದೆ, ಅಂತ ವಾದ ಮಾಡುತ್ತಾರೆ.
ಈ ಎನ್‌ಆರ್‌ಐಗಳನ್ನು ನಾನು, ನಾನ್ ರಿಸ್ಪಾನ್ಸಿಬಲ್ ಇಂಡಿಯನ್ಸ್, ‘ಬೇಜವಾಬುದಾರಿ ಭಾರತೀಯರು’ ಅಂತ ಕರೆಯೋದು. ಅವರಿಗೆ ಮಾಹಿತಿ ಕೊರತೆ ಇದೆ, ಸರಿಯಾದ ಮಾಹಿತಿ ತಿಳಿದುಕೊಳ್ಳುವ ಪ್ರಯತ್ನ ಇಲ್ಲ. ದೇಶದ ಬಗ್ಗೆ ಕಾಳಜಿ ಇದೆ ಆದರೆ ಜವಾಬುದಾರಿ ಇಲ್ಲ. ಭಾವ ಇದೆ, ತರ್ಕ ಇಲ್ಲ. ಅವರು ತಮ್ಮ ಮೂಢನಂಬಿಕೆಗಳನ್ನ ಪ್ರಶ್ನಾತೀತ ಸತ್ಯಗಳು ಅಂತ ತಿಳಿದುಕೊಂಡು ಬಿಟ್ಟಿರುತ್ತಾರೆ.
ಕಳೆದ ಶತಮಾನದಲ್ಲಿ ಭಾರತಿಯರೂ ಸೇರಿದಂತೆ, ಅನೇಕ ಏಷಿಯನ್, ಅಶ್ವೇತ ವಿದ್ಯಾರ್ಥಿಗಳಿಗೆ ಅಮೆರಿಕ ಹಾಗೂ ಯುರೋಪಿನ ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶ ಸಿಕ್ಕಿರುವುದೇ EDEI ನೀತಿಗಳಿಂದಾಗಿ. ಈ ರೀತಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಹೆಮ್ಮೆಯ NRI ಪಾಲಕರು ಇಬ್ಬರಿಗೂ ಈ ಮಾಹಿತಿ ಇರೋದಿಲ್ಲ. ಇದ್ದರೂ, ಅದನ್ನು ಹೇಳಿಕೊಳ್ಳಲು ಅವರಿಗೆ ನಾಚಿಕೆ ಆಗುವುದಕ್ಕೋ ಏನೋ ಅವರು ಇತರರಿಗೆ ಹೇಳೋದಿಲ್ಲ. ”ನನ್ನ ಮಗನಿಗೆ ಆಕ್ಸ್ ಫೋರ್ಡ್ ನಲ್ಲಿ, ಸೀಟು ಸಿಕ್ಕಿದೆ. ನನ್ನ ಮಗಳ ದಿಕ್ಷಾಂತ ಸಮಾರೋಹಕ್ಕೆ ನಾನು, ನಮ್ಮ ಮಿಸಸ್ ಹಾರ್ವರ್ಡ್ ವಿವಿಗೆ ಹೋಗುತ್ತಿದ್ದೇವೆ,” ಅಂತ ಊರೆಲ್ಲ ಹೇಳಿಕೊಂಡು ತಿರುಗುವ ಪಾಲಕರಿಗೆ ಈ ತಥ್ಯ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಅವರು ಹೇಳೋದಿಲ್ಲ.
ಜಾರ್ಜ್ ಬರ್ನಾರ್ಡ್ ಷಾ ಅವರ ಒಂದು ಮಾತು ಇದೆ- ”ನಮ್ಮ ಪೂರ್ವಗ್ರಹಗಳು ನಮ್ಮೆಲ್ಲರ ಮನಸ್ಸಿನಲ್ಲಿ ಎಷ್ಟು ಬೇರೂರಿ ಬಿಟ್ಟಿವೆ ಎಂದರೆ ಅವನ್ನು ನಾವು ಸಾಮಾನ್ಯ ಜ್ಞಾನ ಅಂತ ಕರೆಯುತ್ತಿದ್ದೇವೆ”. ಈ ಮಾತು ನನಗೆ ನಿಜ ಅನ್ನಿಸುತ್ತದೆ. ನಾವು ಜೀವನ ಪರ್ಯಂತ ಯುದ್ಧ ಮಾಡಬೇಕಾಗಿರುವುದು ನಮ್ಮ ಪೂರ್ವಗ್ರಹಗಳ ವಿರುದ್ಧವೇ ಹೊರತು, ನಮ್ಮ ಬಾಹ್ಯ ವಿರೋಧಿಗಳ ವಿರುದ್ಧ ಅಲ್ಲ.
ಇಡೀ ಜಗತ್ತಿನಲ್ಲಿ ಎಲ್ಲೆಲ್ಲಿ ಪ್ರಜಾತಂತ್ರ ಇದೆಯೋ ಅಲ್ಲೆಲ್ಲ ಮೀಸಲು ಸೌಲಭ್ಯ ಇದೆ. ”ನಮ್ಮ ದೇಶದಲ್ಲಿ ಮಾತ್ರ ಕೆಟ್ಟ ರಾಜಕಾರಣಿಗಳು ಪುಗಸಟ್ಟೆ ವೋಟ್ ತೊಗೊಳ್ಳೋದಿಕ್ಕೆ ಈ ಮೆರಿಟ್ ವಿರೋಧಿ ನೀತಿಯನ್ನು ಜಾರಿ ಮಾಡಿದ್ದಾರೆ” ಅಂತ ಆದರೆ, ಬೇರೆ ದೇಶಗಳಲ್ಲಿ ಇರೋ ಬುದ್ಧಿವಂತರು – ಸಜ್ಜನರು ಯಾಕೆ ಹೀಗೆ ಮಾಡುತ್ತಿದ್ದಾರೆ?
ಹಾಗಾದರೆ ಮೀಸಲು ಸೌಲಭ್ಯ ಅಥವಾ ಸಕಾರಾತ್ಮಕ ಕ್ರಮ ಅನ್ನುವುದು ಈ ಜಗತ್ತಿನಲ್ಲಿ ಯಾಕೆ ಇದೆ? ಅಷ್ಟಾಗಿಯೂ ಮಿಸಲಾತಿಯ ಹಿಂದಿನ ಹಕೀಕತ್ತು ಏನು? ಅದು ಯಾಕೆ ಬೇಕು? ಅದು ಎಲ್ಲಾ ರೀತಿಯ ಸರಕಾರಗಳಲ್ಲಿ ಇರಬೇಕೋ ಅಥವಾ ಪ್ರಜಾತಾಂತ್ರಿಕ ದೇಶಗಳಲ್ಲಿ ಮಾತ್ರ ಇರಬೇಕೋ? ಪೊಲೀಸ್ ರಾಜ್ಯಗಳಲ್ಲಿ ಇರುತ್ತದೋ ಅಥವಾ ಕಲ್ಯಾಣ ರಾಜ್ಯಗಳಲ್ಲಿ ಮಾತ್ರ ಕಾಣ ಸಿಗುತ್ತದೋ? ಅದು ಪ್ರಜೆಗಳ ಅವಶ್ಯಕತೆಯೇ ಅಥವಾ ಆಳುವ ನಾಯಕರ ಹಾಗೂ ಆಳುವ ಪಕ್ಷಗಳ ವೋಟು ಬಾಚುವ ಯಂತ್ರವೋ? ಅದರ ಸ್ವಭಾವ ಹೇಗಿರಬೇಕು? ಮೀಸಲು ಸೌಲಭ್ಯ ಸಮಾನ ಸಮಾಜ ಸಾಧಿಸಲಿಕ್ಕೆ ಇರುವ ಸಾಧನವೋ ಅಥವಾ ತೋರಿಕೆಯ ತಂತ್ರವೋ? ಮೀಸಲಾತಿ ಎನ್ನುವುದು ಕಲ್ಯಾಣ ರಾಜ್ಯದ ಕಾರ್ಯಸೂಚಿಯೋ, ಬಡತನ ನಿವಾರಣಾ ಕಾರ್ಯಕ್ರಮವೋ?”, ಇತ್ಯಾದಿ. ಇವಕ್ಕೆಲ್ಲ ಅನೇಕ ವಿಭಿನ್ನ, ವಿಚಿತ್ರ, ವರ್ಣರಂಜಿತ, ಉತ್ತರಗಳು ಇವೆ. ಆದರೆ ನೀವು ಯಾರಿಗೆ ಯಾವ ಪ್ರಶ್ನೆ ಕೇಳುತ್ತೀರೊ ಅದರ ಮೇಲೆ ಆ ಉತ್ತರಗಳು ಅವಲಂಬಿತವಾಗಿರುತ್ತವೆ. ಇವೆಲ್ಲವನ್ನು ಸಂಕೀರ್ಣವಾಗಿಸದೆ ತುಂಬ ಸರಳವಾಗಿ ಉತ್ತರ ಕೊಡಲಿಕ್ಕೆ ಪ್ರಯತ್ನ ಮಾಡುತ್ತೇನೆ.
ಮೀಸಲಾತಿಯ ಮೂಲ ಅರ್ಥ
ಇಲ್ಲಿ ಕೆಲವು ಪ್ರಶ್ನೆ ಕೇಳಿಕೊಳ್ಳೋಣ. ಮೊದಲನೆಯದಾಗಿ ಯಾವ ರೀತಿಯ ಸರಕಾರ ಒಳ್ಳೆಯದು? ಎಲ್ಲ ರೀತಿಯ ಸರಕಾರ ಗಳಿಗಿಂತ, ಜನರಿಂದ ಚುನಾಯಿತರಾದ ಪ್ರಜಾಪ್ರಭುತ್ವ ವಾದಿ ಸರಕಾರಗಳು ಒಳ್ಳೆಯದು ಅಂತ ನನಗೆ ಅನ್ನಿಸುತ್ತದೆ. ಅದೇ ರೀತಿ ನಿಮಗೂ ಅನ್ನಿಸಬಹುದು.`ನಮ್ಮನ್ನು ನಾವು ಅಳಿಕೊಳ್ಳುವುದು’ ಅಂತ ತಾನೇ ಇದರ ಅರ್ಥ. ಹೀಗೆಂದರೆ ಏನು? ನಮ್ಮ ಸರಕಾರ ನಮ್ಮನ್ನು ಪ್ರತಿನಿಧಿಸಬೇಕು. ಅದು ನಮ್ಮದೇ ರೂಪದಲ್ಲಿ ಇರಬೇಕು. ನಮ್ಮ ಕನ್ನಡಿಯ ಬಿಂಬವಾಗಿ ಅದು ನಮಗೆ ಕಾಣಬೇಕು, ಅಲ್ಲವೇ? ಹಾಗಾದರೆ ಸಮಾಜದಲ್ಲಿ ಯಾವ ಯಾವ ಲಿಂಗ, ವರ್ಗ, ಜಾತಿ, ಧರ್ಮದ, ಜನ ಇದ್ದಾರೋ, ಅವರ ಎಲ್ಲರ ಪ್ರತಿನಿಧಿಗಳು ಸರಕಾರದಲ್ಲಿ ಇರಬೇಕು.

ಸರಕಾರದ ಮೂರು ಅಂಗಗಳಲ್ಲಿ – ಕಾರ್ಯಾಂಗ, ಶಾಸಕಾಂಗ, ಹಾಗೂ ನ್ಯಾಯಾಂಗಗಳಲ್ಲಿ ಮೀಸಲಾತಿ ಇರಬೇಕು. ಅದು ಸಂವಿಧಾನದ ಒತ್ತಾಸೆ. ಅದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಕೈಲಾದಷ್ಟು ಮಟ್ಟಿಗೆ ಮಾಡುತ್ತಿವೆ. ಅದರಲ್ಲಿ ಇನ್ನು ಅನೇಕ ಬದಲಾವಣೆಗಳು ಮತ್ತು course correction (ಮಾರ್ಗ ಸರಿಪಡಿಸಿಕೊಳ್ಳುವ) ಕ್ರಮಗಳ ಅಗತ್ಯ ಇದೆ.
ಉದಾಹರಣೆಗೆ ಅಮೆರಿಕ ಹಾಗೂ ಕೆಲವು ಯುರೋಪ್ ದೇಶಗಳಲ್ಲಿ ಪಾಯಿಂಟ್ ಆಧಾರಿತ ಮೀಸಲಾತಿ ಇದೆ. ಉದಾಹರಣೆಗೆ ಒಬ್ಬ ಅಶ್ವೇತನಿಗೆ ಒಂದು ಪಾಯಿಂಟ್, ಬಡವನಾಗಿದ್ದರೆ ಇನ್ನೊಂದು, ಮಹಿಳೆ ಆಗಿದ್ದರೆ, ಒನ್ನೊಂದು, ವಿಧವೆ ಆಗಿದ್ದರೆ ಮತ್ತೊಂದು, ಅಂಗವಿಕಲ ಇದ್ದರೆ ಒಂದು, ಮಾಜಿ ಸೈನಿಕ ಇದ್ದರೆ ಇನ್ನೊಂದು. ಒಬ್ಬ ಅಭ್ಯರ್ಥಿ ಇವೆಲ್ಲವೂ ಆಗಿದ್ದರೆ ಇವೆಲ್ಲ ಪಾಯಿಂಟ್‌ಗಳ ಒಟ್ಟು ಮೊತ್ತ, ಅಂದರೆ ಆರು ಪಾಯಿಂಟ್‌ಗಳು ಆ ʼಬಡ, ಅಂಗವಿಕಲ, ಮಾಜಿ ಸೈನಿಕ, ಅಶ್ವೇತ, ವಿಧವೆ’ ಗೆ ದೊರಕುತ್ತವೆ. ಇತರರಿಗಿಂತ ಹೆಚ್ಚು ಸೌಲಭ್ಯಗಳು ಅವಳಿಗೆ ಸಿಗುತ್ತವೆ. ಭಾರತದಲ್ಲಿಯೂ ಹೀಗೆ ಇರಬೇಕು ಅನ್ನುವ ವಾದ ಇದೆ.
ಇನ್ನು ಎಲ್ಲ ವರ್ಗಗಳಲ್ಲಿ ಕಡ್ಡಾಯ ಒಳ ಮೀಸಲಾತಿ, ಸಮತಲ (ಹೊರಿಜೊಂಟಲ್) ಮೀಸಲಾತಿ, ಕೆನೆ ಪದರಕ್ಕೆ ವಿನಾಯಿತಿ, ಫಲಾನುಭವಿ ಪಾಲಕರ ಮಕ್ಕಳಿಗೆ ವಿನಾಯಿತಿ, ಎಲ್ಲ ವರ್ಗಗಳಲ್ಲಿ ಅರ್ಧ ಮಹಿಳೆಯರಿಗೆ ಮೀಸಲಾತಿ, ಇರಲೇಬೇಕು. ಇಲ್ಲದಿದ್ದರೆ ಈಗ ಇರುವ ಮೀಸಲಾತಿ ಅರ್ಥಹೀನ, ಅಂತ ಹೇಳುವವರೂ ಇದ್ದಾರೆ. ಇರಲಿ, ಈಗ ಇರುವ ವ್ಯವಸ್ಥೆಯನ್ನು ರದ್ದು ಮಾಡದೆ, ಈಗ ಇದ್ದದ್ದನ್ನು ಸುಧಾರಿಸುವ ಬಗ್ಗೆ ವಿಚಾರ ಮಾಡೋಣ. ಬಡವರಿಗೆ ಮೀಸಲು ಬೇಕು ಅಂತ ಹೇಳುವ ಜನ ಬಹಳ ಇದ್ದರು. ಅದು ಈಗ ಸಿಕ್ಕಿದೆ. ಅದು ಬೇರೆ ವಿಷಯ.
ಇನ್ನು ಎಲ್ಲ ಪಕ್ಷದ ಸರಕಾರಗಳು ಕಣ್ಣುಮುಚ್ಚಿ, ಯಾದೃಚ್ಛಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ, ಅತಿ ವೇಗದಲ್ಲಿ ಖಾಸಗೀಕರಣ ನಡೆಸುತ್ತಿರುವಾಗ, ಮೀಸಲಾತಿಯ ಅಗತ್ಯ ಇದೆಯೇ? ಅಂತ ಹೇಳುವವರೂ ಇದ್ದರೆ. ಅದು ಆರ್ಥಿಕ ನೀತಿ ನಿರೂಪಣೆಯ ವಿಷಯ, ಅದು ಬೇರೆಯೇ ದಿವಸದ ಚರ್ಚೆ.
ನಿಮಗೆ ಸರಿ, ನಮಗೆ ಯಾಕೆ!
ಸರಕಾರ ಸಮಾಜದಂತೆ ಕಾಣಬೇಕು, ಸರಿ. ಆದರೆ ಖಾಸಗಿ ಕ್ಷೇತ್ರಕ್ಕೆ ಈ ಮೀಸಲಾತಿ ಏಕೆ ಬೇಕು? ಇದಕ್ಕೆ ಎರಡು ಕಾರಣಗಳು ಇವೆ. ಒಂದು ಲೌಕಿಕವಾದದ್ದು, ಇನ್ನೊಂದು ಆಧ್ಯಾತ್ಮಿಕವಾದದ್ದು.
ಸರಳವಾದ, ಪ್ರಾಯೋಗಿಕ ವಾದ ವಿಚಾರ ಏನು ಎಂದರೆ, ಬಹುಶಃ ಸರಕಾರದ ಪ್ರತಿ ಇಲಾಖೆಯ ಪ್ರತಿಯೊಂದು ಕೆಲಸವನ್ನು ಈಗ ಖಾಸಗಿ ಕಂಪನಿಗಳು ಮಾಡುತ್ತಿವೆ. ಅದು ಗುತ್ತಿಗೆ, ಔಟ್ ಸೋರ್ಸ್, ಪ್ರಾಜೆಕ್ಟ್ ಮೇನೇಜ್ಮೆಂಟ್, ಕನ್ಸಲ್ಟೆನ್ಸೀ ಇತ್ಯಾದಿ ರೂಪದಲ್ಲಿ ಇರಬಹುದು, ಪಿ ಪಿ ಪಿ ಅಥವಾ ಬಿ ಒ ಒ ಟಿ, ಅಥವಾ ಇನ್ಯಾವುದೋ ರೂಪದಲ್ಲಿ ಇರಬಹುದು.
ಅನೇಕ ಸರ್ಕಾರಿ ಕಚೇರಿ, ಇಲಾಖೆಗಳಲ್ಲಿ, ಕಾಯಂ ಸಿಬ್ಬಂದಿ ಕಮ್ಮಿ ಆಗಿದ್ದಾರೆ, ಗುತ್ತಿಗೆ ಆಧಾರದ ಮೇಲಿನ ಖಾಸಗಿ ಸಿಬ್ಬಂದಿಗಳೇ ಹೆಚ್ಚಾಗಿದ್ದಾರೆ. ಈ ರೀತಿಯ ಖಾಸಗಿ ನೇಮಕ, ಯೋಜನೆ ಮತ್ತು ಕೆಲಸಗಳಲ್ಲಿ ಮೀಸಲಾತಿ ಇಲ್ಲ. ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ಕೆಲವೇ ರಾಜ್ಯಗಳಲ್ಲಿ ಈ ಬಗ್ಗೆ ಕೆಲ ನಿಯಮಗಳು ಇವೆ. ಅವು ಪರಿಪೂರ್ಣವಾಗಿಲ್ಲ ಅನ್ನುವ ಟೀಕೆ ಇದೆ.
ಸರಕಾರ ತನ್ನ ಕರ್ತವ್ಯಗಳನ್ನು ಖಾಸಗಿ ಕಂಪನಿಗಳ ಕೈಯಿಂದ ಮಾಡಿಸಲು ಆರಂಭಿಸಿದರೆ, ಅದು ತನ್ನ ಸಾಮಾಜಿಕ ಜವಾಬುದಾರಿಗಳಿಂದ ತಪ್ಪಿಸಿಕೊಳ್ಳಬಹುದೇ? ಇಲ್ಲವೆಂದಲ್ಲಿ, ಈ ಕೆಲಸ, ನೇಮಕ, ಯೋಜನೆಗಳಲ್ಲಿ ಮೀಸಲಾತಿ ನೀಡದೇ ಇರಲು ಸಾಧ್ಯವೇ?
ಇದನ್ನೂ ಓದಿ ಭೂಮ್ತಾಯಿ | ಪ್ಯಾರಿಸ್ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು
ಇನ್ನು ತಾತ್ವಿಕವಾಗಿ ನೋಡಿದರೆ, ಸಂಸ್ಥೆಯೊಂದು ಸರ್ಕಾರಿಯಾಗಿರಲಿ ಅಥವಾ ಖಾಸಗಿಯಾಗಿರಲಿ ಅದು ಈ ಸಮಾಜದ ಅಂಗ. ಅಂತಹ ಅನೇಕ ಸಂಸ್ಥೆಗಳು ಸೇರಿ ಸಮಾಜ ಸೃಷ್ಟಿಯಾಗುತ್ತದೆ. ಬೇಧಭಾವರಹಿತ ಸಮಸಮಾಜದ ನಿರ್ಮಾಣದಲ್ಲಿ ಎಲ್ಲರ ಸಮಪಾಲು, ಜವಾಬುದಾರಿ, ಇದೆ. ಅದರಲ್ಲಿಯೂ ಸರ್ವತಂತ್ರ ಸ್ವತಂತ್ರ ಗಣರಾಜ್ಯವಾಗಿರುವ ಒಂದು ಕಲ್ಯಾಣ ರಾಜ್ಯದಲ್ಲಿ ಇದು ಎಲ್ಲರ ನೈತಿಕ ಹೊಣೆ ಮತ್ತು ಕರ್ತವ್ಯ. ಆದ್ದರಿಂದ ಎಲ್ಲ ಸಂಸ್ಥೆಗಳು ಈ ನಿಯಮಗಳನ್ನು ಪಾಲಿಸಬೇಕು.
ಅಂದ ಹಾಗೆ, ನಮ್ಮ ಮನೆಗೆ ಬಂದ `ಬೇಭಾ’ ಮಹಾಶಯರಿಗೆ ಹೋಗುವಾಗ ಒಂದು ಜೋಕು ಹೇಳಿದೆ. ನಾವು ಇಷ್ಟೆಲ್ಲಾ ಸಮಸ್ಯೆಗಳು, ಪಡಿಪಾಟಲುಗಳ ಮಧ್ಯೆ ಹೇಗೋ ಒಂದು ರೀತಿ ಡೆಮೊಕ್ರಸೀ ನಡೆಸಿಕೊಂಡು ಹೋಗುತ್ತಿದ್ದೇವೆ. ಕತ್ತಲಾದರೂ ನಮಗೇ, ಬೆಳಕಾದರೂ ನಮಗೇ. ಅದು ಹೋಗಲಿ ಬಿಡ್ರಿ. ನಿಮಗೆ ಯಾಕೆ ಇದೆಲ್ಲದರ ಬಗ್ಗೆ ಚಿಂತೆ? ನೀವು ಪರಿತ್ಯಕ್ತ ಪರದೇಶಿಗಳಲ್ಲವೇ ಅಂತ ಅಂದೆ. ನಾನು ನಕ್ಕೆ. ಅವರು ನಗಲಿಲ್ಲ.

ಹೃಷಿಕೇಶ ಬಹದ್ದೂರ ದೇಸಾಯಿ
ಪತ್ರಕರ್ತರು




