ಚದುರಿದ ಚಿತ್ರ | ಎಪ್‌ಸ್ಟೀನ್‌ ಫೈಲ್‌ ಮತ್ತು ಹೊಸ ಕಾಲದ ಅಮ್ಮಂದಿರ ಆತಂಕಗಳು

Date:

ಜಗತ್ತು ಅಫ್ಘಾನಿನ ಕ್ರೌರ್ಯದ ಬಗ್ಗೆ ಕುರುಡಾಗುತ್ತಿರುವ ಈ ಸಂದರ್ಭದಲ್ಲಿ ಇತ್ತ ಪಶ್ಚಿಮದಲ್ಲಿ ಎಪ್‌ಸ್ಟೀನ್ ಫೈಲ್ಸ್ ಹೊರ ಬಿದ್ದಿದೆ. ಬಹುಶಃ ಎರಡನೆಯ ಮಹಾಯುದ್ಧದ ಹಿಂದು ಮುಂದಿನ ಕಾಲದಲ್ಲೂ ಕಂಡು ಕೇಳರಿಯದ ಲೈಂಗಿಕ ಅಪರಾಧದ, ಕ್ರೌರ್ಯದ ಚಿತ್ರಣಗಳು ಖುಲಾಸೆ ಆಗುತ್ತಿವೆ. ಅದೆಷ್ಟೋ ವರ್ಷಗಳಿಂದ ಪ್ರೀತಿಸುತ್ತಿದ್ದ, ಅಭಿಮಾನ ಪಡುತ್ತಿದ್ದ ನಾಯಕರ ಭಯಾನಕ ನಿಜ ರೂಪಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿವೆ!

2021ರಲ್ಲಿ ತಾಲಿಬಾನಿಗರು ಅಫ್ಘಾನಿಸ್ತಾನದ ಅಧಿಕಾರವನ್ನು ಮತ್ತೆ ಕೈಗೆ ತೆಗೆದುಕೊಂಡಾಗ ಮೊದಲು ಮಾಡಿದ ಕೆಲಸವೆಂದರೆ ಅಲ್ಲಿನ ಬ್ಯೂಟಿಪಾರ್ಲರ್‌ಗಳ, ಅಂಗಡಿಗಳ ಗೋಡೆ ಮೇಲಿದ್ದ ಹೆಣ್ಣುಮಕ್ಕಳ ಚಿತ್ರಗಳನ್ನು ಅಳಿಸಿದ್ದಂತೆ. ಈ ಸುದ್ದಿಯನ್ನು ಮೊದಲ ಬಾರಿ ಓದಿದಾಗ ನನಗೆ, ಇವರೆಲ್ಲಾ ಯಕಶ್ಚಿತ್ ಒಂದು ಹೆಣ್ಣಿನ ಭಾವಚಿತ್ರಕ್ಕೆ ಹೆದರುವ ಪುಕ್ಕಲರು, ಇನ್ನು ಒಂದು ದೇಶವನ್ನು ಹೇಗೆ ನಡೆಸಿಯಾರು ಅಂತ ಅನ್ನಿಸಿ ನಗು ಬಂದಿತ್ತು. ಆನಂತರ, ಭಾವಚಿತ್ರವನ್ನು‌ ಅಳಿಸುವುದೆಂದರೆ ನಿಧಾನವಾಗಿ ಮತ್ತು ವ್ಯವಸ್ಥಿತವಾಗಿ ಸಾರ್ವಜನಿಕ ಬದುಕಿನಿಂದಲೇ ಹೆಣ್ಣನ್ನು ಅಳಿಸಿ ಬಿಡುವುದು ಎನ್ನುವುದು ಅರ್ಥವಾಯಿತು.

ಈಗಲ್ಲಿ ಆರನೇ ಗ್ರೇಡಿನ ನಂತರ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶವಿಲ್ಲ, ಆರೋಗ್ಯ ಸೇವಾ ಕ್ಷೇತ್ರ ಹೊರತುಪಡಿಸಿ ಮನೆಯಿಂದ ಹೊರ ಬಂದು ಕೆಲಸ ಮಾಡುವ ಅವಕಾಶ ಇಲ್ಲ, ಸರಿಯಾದ ವೈದ್ಯಕೀಯ ಸೇವೆ ಪಡೆದುಕೊಳ್ಳಲೂ ನೂರಾರು ತಡೆಗಳು. ಸದ್ಯಕ್ಕೆ ಮಹಿಳಾ ವೈದ್ಯೆಯರು, ಶುಷ್ರೂಷಕಿಯರು ಲಭ್ಯವಿದ್ದರೂ ಉನ್ನತ ಶಿಕ್ಷಣ ಪಡೆಯುವ ಅವಕಾಶ ಇಲ್ಲದೇ ಇರುವುದರಿಂದ ಇನ್ನು ಕೆಲ ಕಾಲದಲ್ಲಿ ಮಹಿಳಾ ವೈದ್ಯೆಯರೂ ಕಾಣೆಯಾಗುತ್ತಾರೆ. ಪುರುಷ ವೈದ್ಯಕೀಯ ಸಿಬ್ಬಂದಿ, ತಮ್ಮ ಕುಟುಂಬದ ಪುರುಷ ಸದಸ್ಯರ ಜೊತೆಯಲ್ಲಿಲ್ಲದ ಮಹಿಳೆಯರಿಗೆ ಚಿಕಿತ್ಸೆ ನೀಡುವುದನ್ನು ನಿಷೇಧಿಸಲಾಗಿರುವುದರಿಂದ, ಕಾಲ ಸರಿದಂತೆ ಮಹಿಳೆಯರಿಗೆ ವೈದ್ಯಕೀಯ ಆರೈಕೆಯ ಲಭ್ಯವಾಗುವುದು ಬಹುತೇಕ ದುರ್ಲಭ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಫ್ಘಾನಿಸ್ತಾನದ ಆಡಳಿತ ತಾಲಿಬಾನಿಗರ ಕೈಗೆ ಮತ್ತೆ ಹೋಗುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಪ್ರಪಂಚ ಮೊದಲು ಮಾತಾಡಿಕೊಂಡದ್ದು ಅಲ್ಲಿನ ಹೆಣ್ಣುಮಕ್ಕಳ ಬಗ್ಗೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಶಾಲಾ ಶಿಕ್ಷಣ ಪಡೆಯಲು ಪ್ರಾರಂಭಿಸಿದ್ದ, ತಮ್ಮ ಕೈಕಾಲಿಗೆ ಸುತ್ತಿಕೊಂಡಿದ್ದ ಶೃಂಖಲೆಗಳನ್ನು ಭೇದಿಸಿ ಹೊರಬಂದಿದ್ದ ಅಲ್ಲಿನ‌ ಮಹಿಳೆಯರು ಮತ್ತೆ ದಾಸ್ಯಕ್ಕೆ, ಗಂಡಸು ಪ್ರಪಂಚದ ಅಮಾನವೀಯ ನಡವಳಿಕೆಗೆ ತುತ್ತಾಗುತ್ತಾರಾ ಎಂದು ಜಗತ್ತು ಆತಂಕ ಪಟ್ಟಿತ್ತು. ಮತ್ತೀಗ ಅದೇ ಆಯ್ತು ಕೂಡ. ತಕ್ಕಮಟ್ಟಿಗಾದರೂ ತಾಲಿಬಾನ್ ಕ್ರೌರ್ಯಗಳನ್ನು ತಮ್ಮದೇ ರೀತಿಯಲ್ಲಿ ಅಲ್ಲಿನ ಹೆಣ್ಣುಮಕ್ಕಳು ವಿರೋಧಿಸುತ್ತಿದ್ದರು, ಈಗ 2024ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ‘ಹೆಣ್ಣು ಧ್ವನಿ’ ಕೇಳುವುದನ್ನೂ ನಿಷೇಧಿಸಲಾಯಿತು, ಆ ನಂತರ ಎಲ್ಲಾ ಪ್ರತಿಭಟನೆಗಳು ಬಹುತೇಕ ನಿಂತೇ ಹೋಗಿವೆ.

ತಾಲಿಬಾನ್ ಮತ್ತೆ ಆಡಳಿತ ಕೈಗೆತ್ತಿಕೊಂಡಂತೆ ಅಲ್ಲಿನ ಹೆಣ್ಣುಮಕ್ಕಳ ಬಗ್ಗೆ ಯೋಚಿಸಿಯೇ ಸಂಕಟಪಟ್ಟಿದ್ದ, ಕಳವಳಗೊಂಡಿದ್ದ ಜಗತ್ತು ಈಗ ನಿಧಾನವಾಗಿ ಅಫ್ಘಾನ್ ಹೆಣ್ಣುಮಕ್ಕಳನ್ನು ಮರೆಯುತ್ತಿದೆ. ಸದಾಕಾಲ ತಾಲಿಬಾನನ್ನೂ, ಅವರ ಕ್ರೌರ್ಯವನ್ನೂ ಮೊದಲಿನಿಂದಲೂ ಟೀಕಿಸುತ್ತಲೂ, ಖಂಡಿಸುತ್ತಲೂ ಬಂದಿರುವ ಭಾರತದಂತಹ ದೇಶಗಳೂ ಸಹ ಸರ್ಕಾರ ಎಂಬ ನೆಲೆಯಲ್ಲಿ ತಾಲಿಬಾನ್ ಅನ್ನು ಒಪ್ಪಿಕೊಳ್ಳುತ್ತಿರುವ ಪ್ರಕ್ರಿಯೆ ನಡೆಯುತ್ತಿದೆ.

epstine files

ಜಗತ್ತು ಅಫ್ಘಾನಿನ ಕ್ರೌರ್ಯದ ಬಗ್ಗೆ ಕುರುಡಾಗುತ್ತಿರುವ ಈ ಸಂದರ್ಭದಲ್ಲಿ ಇತ್ತ ಪಶ್ಚಿಮದಲ್ಲಿ ಎಪ್‌ಸ್ಟೀನ್ ಫೈಲ್ಸ್ ಹೊರ ಬಿದ್ದಿದೆ. ಬಹುಶಃ ಎರಡನೆಯ ಮಹಾಯುದ್ಧದ ಹಿಂದು ಮುಂದಿನ ಕಾಲದಲ್ಲೂ ಕಂಡು ಕೇಳರಿಯದ ಲೈಂಗಿಕ ಅಪರಾಧದ, ಕ್ರೌರ್ಯದ ಚಿತ್ರಣಗಳು ಖುಲಾಸೆ ಆಗುತ್ತಿವೆ. ಅದೆಷ್ಟೋ ವರ್ಷಗಳಿಂದ ಪ್ರೀತಿಸುತ್ತಿದ್ದ, ಅಭಿಮಾನ ಪಡುತ್ತಿದ್ದ ನಾಯಕರ ಭಯಾನಕ ನಿಜ ರೂಪಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ. ಶಿಶುಕಾಮದ ಖಚಿತ ಮಾಹಿತಿಗಳು, ನರಭಕ್ಷಣೆಯ ಸುದ್ದಿಗಳು, ಜೊತೆಗೆ ಫೇಸ್‌ಬುಕ್ ಸ್ಕ್ರೋಲ್ ಮಾಡುವಾಗೆಲ್ಲಾ ಯಾರು ಯಾರೋ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಕೇಳುವ ‘I like kids than elders’ ಅನ್ನುವ ಮಾತು, ಅದರ ಬೆನ್ನ ಹಿಂದಿನ ವಿಕೃತ ಪೈಶಾಚಿಕತೆ, ಚಿತ್ರ ವಿಚಿತ್ರ ಭಂಗಿಯ ಫೊಟೋಗಳು, ಟೇಬಲ್ಲಿನ ಮೇಲೆ ರಾರಾಜಿಸುವ ಮುದುಡಿ ಮಲಗಿರುವ ಹೆಣ್ಣಿನ ಭಾವಚಿತ್ರದಂತೆ ಕಾಣಿಸುವ ಹುರಿದ ಮಾಂಸ, ಲೋಲುಪತೆ ಮತ್ತು ಕ್ರೌರ್ಯ ಮೇಳೈಸಿರುವ ಜಗತ್ತಿನ ವಿವಿಧ ರಾಜಕೀಯ ನಾಯಕರ, ಸಾಂಸ್ಕೃತಿಕ ನಾಯಕರ, ವಿಜ್ಞಾನಿಗಳ ಚಿತ್ರಗಳು… ಮನುಷ್ಯನ ಅಂತಃಸತ್ವ ಕದಡಲು ಇನ್ನೇನು ಬೇಕು?

ಅಪರಿಮಿತ ಸಂಪತ್ತು, ಅಧಿಕಾರದ ಅಹಂಕಾರ, ಬಂಡವಾಳಶಾಹಿ ಸಾಮ್ರಾಜ್ಯದ ದಾರ್ಷ್ಟ್ಯ ಎಷ್ಟು ನಿರ್ದಯವಾಗಿ ಹಿಂಸೆಯನ್ನು ಮಾಡಿ, ಅದನ್ನು ದಕ್ಕಿಸಿಕೊಳ್ಳಬಲ್ಲುದು ಎನ್ನುವುದಕ್ಕೆ ಎಪ್‌ಸ್ಟೀನ್ ಫೈಲ್ಸ್ ಒಂದು ಚಾರಿತ್ರಿಕ ಮತ್ತು ಅತಿ ಕೆಟ್ಟ ಸಾಕ್ಷಿ. ಸಮಾನತೆಯ ಬಗ್ಗೆ, ಸಮಾನ ಅವಕಾಶಗಳ ಬಗ್ಗೆ, ಕಪ್ಪು ಜಗತ್ತಿನ ಬಗ್ಗೆ, ಮಹಿಳಾ ಹಕ್ಕುಗಳ ಬಗ್ಗೆ, ಯುದ್ಧ ವಿರೋಧಿ ನೀತಿಗಳ ಬಗ್ಗೆ, ಮಕ್ಕಳ ಹಕ್ಕುಗಳ ಬಗ್ಗೆ, ನಿರಪರಾಧಿಗಳ ಶಿಕ್ಷೆಯ ಬಗ್ಗೆ, ಪರಿಸರದ ಬಗ್ಗೆ, ಪ್ರಾಣಿಗಳ ಬಗ್ಗೆ, ಭೂಮಿಯನ್ನು ಬಗೆದು ಖಾಲಿ ಮಾಡುತ್ತಿರುವವರ ಬಗ್ಗೆ ಮಾತಾನಾಡುತ್ತಿದ್ದವರು, ಧ್ವನಿ ಎತ್ತುತ್ತಿದ್ದವರು, ಪ್ರಪಂಚದ ಕಣ್ಣಿಗೆ ಸೊಬಗತನದ ಬಟ್ಟೆ ಕಟ್ಟಿ ಸಭ್ಯರಂತೆ, ಹೋರಾಟಗಾರರಂತೆ, ಧಾರ್ಮಿಕರಂತೆ, ಮೃದು ಹೃದಯಿಗಳಂತೆ ಪ್ರಸ್ತುತಪಡಿಸಿಕೊಳ್ಳುತ್ತಿದ್ದವರು ಗುಟ್ಟಾಗಿ ಮನುಷ್ಯನ ರಾಕ್ಷಸೀತನದ ಪರಾಕಾಷ್ಠೆಯನ್ನು ಪ್ರದರ್ಶಿಸುತ್ತಿದ್ದರು. ಬಹುಶಃ ಈ ಜಗತ್ತಿನಲ್ಲಿ ಮನುಷ್ಯ ಕುಲ ಹುಟ್ಟಿದ ನಂತರ ಮನುಷ್ಯರು ಎಸಗಿದ ಅತ್ಯಂತ ಹೀನ, ಅಸಹ್ಯಕರ, ಭಯಾನಕ, ಕಲ್ಪನಾತೀತ ಕ್ರೌರ್ಯ ಇದೇ ಇರಬಹುದು. ಇನ್ನು‌ ಸಾವಿರ ಸಾವಿರ ವರ್ಷ ಕಳೆದರೂ, ಎಷ್ಟು ತೊಳೆದರೂ ಮನುಷ್ಯನ ಕೈಗೆ, ಮಿದುಳಿಗೆ ಅಂಟಿಕೊಂಡಿರುವ ಈ ನಿರ್ದಯತೆಯ, ರಕ್ತಪಿಪಾಸುತನದ, ದುಷ್ಟತೆಯ ಕಲೆಯನ್ನು ಅಳಿಸಲು ಸಾಧ್ಯವೇ ಇಲ್ಲವೇನೋ? ಮನುಷ್ಯ ಮಾತ್ರರಾದವರು ಈ ಪರಿ ದುಷ್ಟರಾಗೋಕೆ ಹೇಗೆ ಸಾಧ್ಯ ಆಯಿತು? ಪ್ರತಿಭೆ, ಇಡೀ ಆಯುಷ್ಯ ವ್ಯಯಿಸಿಕೊಂಡು ಗಳಿಸಿದ ಬದುಕು, ಅಷ್ಟೂ ವರ್ಷಗಳಲ್ಲಿ ಹಾಕಿದ ಶ್ರಮ ಹೀಗೆ ಇಂತಹಾ ವಿಕ್ಷಿಪ್ತತೆಗೆ ಮಾತ್ರ ತಿರುಗುವುದಾದರೆ ಮನುಷ್ಯ ಏಕಾದರೂ ನಾಗರಿಕನಾಗಬೇಕಿತ್ತು? ವಿಚಾರವಂತನಾಗಬೇಕಿತ್ತು? ವಿಜ್ಞಾನಬುದ್ಧಿಯನ್ನು ಗಳಿಸಿಕೊಳ್ಳಬೇಕಾಗಿತ್ತು? ಮಾನವೀಯತೆಯನ್ನು ಉಳಿಸಿಕೊಂಡು ಕಾಡು ಮನುಷ್ಯನಾಗಿ ಈ ಯಾವ ಆಧುನಿಕ ಸವಲತ್ತುಗಳಿಲ್ಲದೆ ಬದುಕಬಹುದಿತ್ತಲ್ಲಾ? ಅಥವಾ ಕಾಡು ಮನುಷ್ಯರಲ್ಲಿದ್ದ ‘ಗಂಡಸೂ’ ಕೂಡಾ ಹೆಣ್ಣಿನ, ಮಕ್ಕಳ ವಿಚಾರದಲ್ಲಿ ವಿಕ್ಷಿಪ್ತನೇ ಆಗಿದ್ದನೇ? ಯಾರಿಗೆ ಗೊತ್ತು?

ಪ್ರಪಂಚದ ಯಾವ ಯಾವುದೋ ಮೂಲೆಯಿಂದ ಕಾಣೆಯಾದ, ನಾಪತ್ತೆಯಾದ ಹೆಣ್ಣುಮಕ್ಕಳು, ಕಂದಮ್ಮಗಳು ಲೋಲುಪತೆಗಳಿಗಾಗಿ, ಅಧಿಕಾರದ ಹಪಹಪಿತನಕ್ಕಾಗಿ ಸೃಷ್ಟಿಯಾದ ಯಾವುದೋ ಖಾಸಗಿ ದ್ವೀಪವೊಂದರ ಕತ್ತಲ ಪಾರ್ಟಿಗಳಲ್ಲಿ, ಮನೋವಿಕಾರ ಹೊಂದಿದ ದೊಡ್ಡ ಮನುಷ್ಯರ, ಅಧಿಕಾರಸ್ಥರ, ಬುದ್ಧಿವಂತರ ವಿಕೃತತೆಗೆ ಬಲಿಯಾಗುವುದೆಂದರೆ ಎಂಥಾ ಅಮಾನುಷತೆಯದು! ಎಪ್‌ಸ್ಟೀನ್ ಫೈಲ್ ಬಗ್ಗೆ ಮೊದಲ ಬಾರಿ ಕೇಳಿದಾಗಲೇ ಹೃದಯ ಒಮ್ಮೆ ಸ್ತಂಭಿಸಿತ್ತು. ಆ ದ್ವೀಪದಲ್ಲಿ ಪೀಡಿಸಲ್ಪಟ್ಟ ಮಕ್ಕಳೆಲ್ಲಾ ಒಂದು ಕಾಲದಲ್ಲಿ ಅಮ್ಮಂದಿರ ಕೈ ಹಿಡಿದು ತಮಗಿರಬಹುದಾದ ಪುಟ್ಟ ಅಂಗಳದಲ್ಲೋ, ಮನೆ ಮುಂದಿನ ರಸ್ತೆಯಲ್ಲೋ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದವರೇ ಇರಬಹುದು. ನಡೆಯುವಾಗ, ಓಡುವಾಗ ಕಾಲು ಜಾರಿ, ಕಲ್ಲು ಎಡವಿ, ಕೈ ಕಾಲು ಮಂಡಿ ತರಚಿಸಿಕೊಂಡ ಮಕ್ಕಳೆಲ್ಲಾ ಅಮ್ಮನ ಬಿಸಿ ಅಂಗೈಯ ಬಿಸುಪಿನಲ್ಲಿ ‘ಈ ಪ್ರಪಂಚ ಬದುಕಲು ಸಾಕಷ್ಟು ಸುರಕ್ಷಿತ’ ಎನ್ನುವ ಭಾವವನ್ನು ಕಂಡುಕೊಂಡವರೇ ಇರಬಹುದು. ಆದರೆ ಅವರಿಗೆ ದೊರೆತದ್ದು….? ಕತ್ತಲೆಯ ದಾರಿ, ಕರಾಳತೆಯ ದಾರಿ, ದುಸ್ವಪ್ನಗಳ ದಾರಿ… ಮುಚ್ಚಿದ ಬಾಗಿಲುಗಳ ಹಿಂದೆ ಇದ್ದುದು ಕ್ರೌರ್ಯ ಮತ್ತು ಎಳೆ ಜೀವಗಳ ವಿಪರೀತದ ಸಂಕಟ… ಇವೆಲ್ಲವೂ ಗೊತ್ತಿದ್ದವರ, ಅದರ ಭಾಗವಾಗಿದ್ದವರ ವಿನಾಶಕಾರಿ ಮೌನ.

ನಾವು ಸಣ್ಣವರಾಗಿದ್ದಾಗ ಅಜ್ಜಿ ಕಥೆಗಳಲ್ಲಿ ಬರುತ್ತಿದ್ದ ಭೂತ, ಪ್ರೇತ, ಪಿಶಾಚಿಗಳು ದೊಡ್ಡ ಕೋರೆಹಲ್ಲುಗಳನ್ನೂ, ಒಂದು ಅಡಿ ಉದ್ದದ ಉಗುರುಗಳನ್ನೂ, ಕೆಂಪಾದ ನಾಲಗೆಯನ್ನೂ, ರಣಭಯಂಕರ ಧ್ವನಿಯನ್ನೂ, ಕೆಂಪು ಕೆಂಪು ಕಣ್ಣುಗಳನ್ನೂ ಹೊಂದಿರುತ್ತಿದ್ದವು. ಆದರೆ ಪೈಶಾಚಿಕತೆ ಅನ್ನುವುದು ಸೂಟು ಬೂಟಿನೊಳಗೂ, ವಿಜ್ಞಾನದ ಕಣ್ಣುಗಳೊಳಗೂ, ಅಧಿಕಾರದ ಖುರ್ಚಿಯ ಕಾಲುಗಳಲ್ಲೂ ಇರುತ್ತದೆ. ಮತ್ತದು ಇಷ್ಟು ಭಯಾನಕವಾಗಿರುತ್ತದೆ ಎನ್ನುವುದನ್ನು ಬಯಲು ಮಾಡಲು ಎಪ್‌ಸ್ಟೀನ್ ಫೈಲ್ ಬರಬೇಕಾಯ್ತು. ನಾವು ಓದಿದ, ಕೇಳಿದ ಅಜ್ಜಿ ಕಥೆಗಳಲ್ಲಿ ಬರುವ ಪಿಶಾಚಿಗಳಿಗೆ ಒಮ್ಮೆ ಸಂತೃಪ್ತಿಯಾದರೆ ಅದು ಸುಮ್ಮನಾಗುತ್ತಿತ್ತು, ಆದರೆ ಇಲ್ಲಿ ಪದೇ ಪದೇ ಕೇಳಿದ, ಪ್ರಸ್ತಾಪವಾದ ಹೆಸರುಗಳಲ್ಲಿರುವುದು ಅಸೀಮ ಕ್ರೌರ್ಯ ಮತ್ತು ಅದನ್ನು ಮುಚ್ಚಿಡುವ ವಿಪರೀತದ ಬುದ್ಧಿವಂತಿಕೆ.

ಮತ್ತು ಒಂದು ಪುಟ್ಟ ಮಗುವಿನ ತಾಯಿಯಾಗಿರುವ ನನಗೆ ಭಯ ಇರುವುದೂ ಕೂಡ ಎಲ್ಲವನ್ನೂ ಮುಚ್ಚಿ ಹಾಕಿ ಸಭ್ಯತೆಯ ಸೋಗು ಹಾಕುವ ಮನುಷ್ಯನ ಸೋಗಲಾಡಿತನ ಮತ್ತು‌ ಅದರ ಹಿಂದಿರುವ ಕ್ರೌರ್ಯದ  ಬಗ್ಗೆ. ಯಾರನ್ನು ನಂಬುವುದು? ಎಷ್ಟು ನಂಬಬಹುದು? ಯಾರೊಳಗೆ ಶಿಶುಕಾಮಿ ಇದ್ದಾನೆ? ಒಳಗಿನ ಕ್ರೌರ್ಯವನ್ನು, ರಕ್ತ ಪಿಪಾಸುತನವನ್ನು, ವಿಕೃತತೆಯನ್ನು ಯಾವ ಮುಗಳ್ನಗು ಮುಚ್ಚಿ ಹಾಕಿದೆ ಅನ್ನುವುದನ್ನೆಲ್ಲಾ ಹೇಗೆ ಕಂಡುಹಿಡಿಯುವುದು? ಯಾವ ಧೈರ್ಯದ ಮೇಲೆ ‘ಈ ಪ್ರಪಂಚದಲ್ಲಿ ನೀನು ಸೇಫ್ ಆಗಿ ಬದುಕಬಹುದು ಮಗಳೇ’ ಎನ್ನುವ ಭರವಸೆ ಕೊಡಬಲ್ಲೆ?

ನಾವು ಶಾಲೆ, ಮದ್ರಸಕ್ಕೆ ಹೋಗಿ ಮನೆಗೆ ಮರಳಿ ಬರುವವರೆಗೂ ನನ್ನ ಅಮ್ಮನಿಗೂ, ಮನೆಯವರಿಗೂ ಆತಂಕ ಇರಲೇ ಇಲ್ಲ ಅಂತಲ್ಲ, ಆಗಲೂ ಇತ್ತು. ಆದರೆ ಆ ಆತಂಕಗಳಾವುವೂ ಇಷ್ಟು ಭಯಾನಕವಾಗಿರಲಿಲ್ಲ. ಕಣ್ಣ ಮುಂದೆ ಇರುವ ಈ ಮನುಷ್ಯನನ್ನು ನಂಬಬಹುದೇ ಇಲ್ಲವೇ ಅನ್ನುವಷ್ಟು ಅಭದ್ರತೆ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಆ ಹೊತ್ತಲ್ಲಿ ಒಬ್ಬ ಮನುಷ್ಯ ಸಹಮನುಷ್ಯನ ನಂಬಿಕೆ ಕಳೆದುಕೊಳ್ಳುವಷ್ಟು ಅಮಾನವೀಯನಾಗಿರಲಿಲ್ಲ. ಹೌದು, ಪ್ರತಿ ಕಾಲವೂ ಒಂದಿಷ್ಟು ಆತಂಕಗಳನ್ನು, ಭಯಗಳನ್ನು ತನ್ನೊಂದಿಗೆ ಹೊತ್ತುಕೊಂಡೇ ಬರುತ್ತದೆ. ಯಾವ ಕಾಲವೂ ಪರಿಪೂರ್ಣವಲ್ಲ. ಪ್ರತಿ ಕಾಲಕ್ಕೂ ತನ್ನದೇ ಸವಾಲುಗಳು, ಗೊಂದಲಗಳು ಮತ್ತು ಸಂಕಷ್ಟ ಇದ್ದೇ ಇದ್ದವು, ಇನ್ನು ಮುಂದೆಯೂ ಇರುತ್ತದೆ ಕೂಡಾ. ಕೆಲವೊಮ್ಮೆ ಅವು ಸಾಮಾಜಿಕ ಬದಲಾವಣೆಗಳ ರೂಪದಲ್ಲಿ ಬರುತ್ತವೆ, ಕೆಲವೊಮ್ಮೆ ವೈಯಕ್ತಿಕ ಬದುಕಿನ ಸಂಕಟಗಳಾಗಿ ಎದುರಾಗುತ್ತವೆ. ವಿಜ್ಞಾನ-ತಂತ್ರಜ್ಞಾನ, ರಾಜಕೀಯ, ಆರ್ಥಿಕ ಪರಿಸ್ಥಿತಿಗಳು, ಪರಿಸರದ ಬದಲಾವಣೆಗಳು… ಹೀಗೆ ಪ್ರತಿಯೊಂದೂ ಕೂಡ ಮನುಷ್ಯನ ಬದುಕಿನ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ. ಇಷ್ಟಕ್ಕೂ ಕಾಲದ ಸ್ವಭಾವವೇ ಅದು. ಅದು ನಮ್ಮನ್ನು ಪರೀಕ್ಷಿಸುತ್ತದೆ, ಕಾಯಿಸುತ್ತದೆ ಮತ್ತು ಅದರ ಜೊತೆ ಜೊತೆಗೆ ಬದುಕುವ ಧೈರ್ಯವನ್ನೂ ಮೊಗೆಮೊಗೆದು ಕೊಡುತ್ತದೆ, ಕಾಲ ನಮ್ಮ ಮುಂದೆ ಒಡ್ಡಿದ ಪ್ರತಿ ಗೊಂದಲಗಳೂ ಅರಿವಿನ ದಾರಿಯನ್ನು ತೆರೆಯುತ್ತದೆ.

ಇದನ್ನೂ ಓದಿ ʼಈ ದಿನʼ ವಿಶೇಷ | ಆಂಧ್ರ ಚುನಾವಣೆಯಲ್ಲಿ ಮಹಾಮೋಸದ ಸಾಧ್ಯತೆ!- ಪರಕಾಲ ಪ್ರಭಾಕರ್ ಆಸ್ಫೋಟಕ ವಿಶ್ಲೇಷಣೆ

ಆದರೆ ಈಗ ಎಪ್‌ಸ್ಟೀನ್ ಫೈಲ್ಸ್ ನಮ್ಮ ಮುಂದೆ ಒಡ್ಡಿರುವ ಸವಾಲು ಇದೆಯಲ್ವಾ ಅದು ಬರಿ ಆತಂಕವಲ್ಲ, ಮನುಷ್ಯನ ಅಸ್ತಿತ್ವದ ಪ್ರಶ್ನೆ.  ಅವನೊಳಗಿನ ಮಾನವೀಯತೆ ಕ್ಷಣ ಕ್ಷಣಕ್ಕೂ ಸತ್ತು ವಿಕೃತತೆ ಮೇಲುಗೈ ಸಾಧಿಸುತ್ತಿರುವುದರ ಹಿಂದಿನ ಮನೋವಿಕಾರತೆಯ ಪ್ರಶ್ನೆ. ಹಣ, ಸಂಪತ್ತು, ಅಧಿಕಾರ, ಪ್ರಭಾವ ಇದ್ದರೆ  ಉಳಿದೆಲ್ಲವನ್ನೂ ಹಿನ್ನಲೆಗೆ ಸರಿದುಬಿಡುವ ದಾರ್ಷ್ಟ್ಯದ ಬಗೆಗಿನ ಪ್ರಶ್ನೆ. ಆ ಫೈಲಿನಲ್ಲಿ ಪ್ರಸ್ತಾಪವಾಗಿರುವವರಷ್ಟೇ‌ ಅಲ್ಲದೆ ಇಡೀ ಮನುಷ್ಯ ಕುಲದ ಮೇಲೆ ಬಿದ್ದ ಪ್ರಶ್ನಾರ್ಥಕ ಚಿಹ್ನೆ ಇದು. ತನ್ನನ್ನು ತಾನೇ ಸುಸಂಸ್ಕೃತ ಎಂದು ಕರೆದುಕೊಳ್ಳುವ, ಬುದ್ಧಿವಂತ ಅಂದುಕೊಂಡಿರುವ ಮನುಷ್ಯ ಒಳಗಿಂದ ನಿಜಕ್ಕೂ ಇಷ್ಟೊಂದು ಕೊಳಕನೇ? ಒಟ್ಟಾರೆಯಾಗಿ ಏನಿದು ಎಪ್‌ಸ್ಟೀನ್ ಫೈಲ್ಸ್? ಅದು ಕೇವಲ ಒಂದು ಗುಂಪಿನ ವಿಕೃತತೆಯೇ ಅಥವಾ ಸಂಘರ್ಷಗಳನ್ನು, ನೋವುಗಳನ್ನು, ಗಲಾಟೆಗಳನ್ನು ಸಂಭ್ರಮಿಸಿ ದುಡ್ಡು ತೆತ್ತು ಟಿವಿಗಳಲ್ಲಿ ನೋಡಿ ದಿನ ಪೂರ್ತಿ ಚರ್ಚೆ ಮಾಡುವ ಸಮಾಜದ ಒಟ್ಟಾರೆ ವಿಕೃತತೆಯ ಸಂಕೇತವೇ?

ಯಾಕೆಂದರೆ ಈ ಮಟ್ಟಿಗಿನ‌ ಕ್ರೌರ್ಯ, ಅಮಾನುಷತೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹುಟ್ಟಲು ಸಾಧ್ಯವೇ ಇಲ್ಲ. ಇವೆಲ್ಲಾ ತಪ್ಪುಗಳೇ ಅಲ್ಲ ಅನ್ನುವುದು, ಅಥವಾ ತಪ್ಪೇ ಆಗಿದ್ದರೂ ದಕ್ಕಿಸಿಕೊಂಡೇನು ಅಂತ ಭಾವಿಸಲು ಸಾಧ್ಯವಾಗುವುದು ಮನುಷ್ಯನ ಅಂತರಂಗಕ್ಕೆ ಇದು ‘ಸಹಜ’ ಅನ್ನುವುದು ವೇದ್ಯವಾದಾಗ ಮಾತ್ರ. ಹಾಗಾಗಬೇಕಾದರೆ ಪ್ರತಿದಿನದ ತಪ್ಪುಗಳನ್ನು ತನಗೆ ತಾನೇ ಮನ್ನಿಸಿಕೊಳ್ಳುವುದನ್ನು, ತಪ್ಪೇ ಅಲ್ಲ ಅಂತ ಸಮಜಾಯಿಷಿ ಕೊಟ್ಟುಕೊಳ್ಳುವುದನ್ನು ಆತ ಅಭ್ಯಾಸ ಮಾಡಬೇಕಾಗುತ್ತದೆ. ಪ್ರತಿ ತಪ್ಪೂ ಮೊದಲ ಬಾರಿ ಮಾಡಿದಾಗ ತಪ್ಪು ಅನ್ನಿಸುತ್ತದೆ, ಪ್ರತಿದಿನ ಮಾಡುತ್ತಿದ್ದಂತೆ ಅದು ತಪ್ಪೇ ಅಲ್ಲ, ಅಥವಾ ಅದು ನನ್ನ ಬದುಕಿನ ಆಯ್ಕೆ ಅನ್ನಿಸತೊಡಗುತ್ತದೆ. ಅನುದಿನದ ಸಣ್ಣ ಸಣ್ಣ ಸಮಜಾಯಿಷಿಗಳು, ಕ್ಷಮೆಗಳು ಎಲ್ಲವೂ ಒಟ್ಟಾಗಿ ಕೊನೆಗೊಂದು ದಿನ ಒಂದು ದೊಡ್ಡ ನೈತಿಕ ಕುಸಿತಕ್ಕೆ ಕಾರಣವಾಗುತ್ತದೆ. ಆ ನಂತರ ಕ್ರೌರ್ಯವೂ ಅಮಾನುಷತೆಯೂ ಸಹಜವೆನಿಸತೊಡಗುತ್ತದೆ. ಅಥವಾ ‘ಮನುಷ್ಯ ಸಹಜವಾಗಿ ಹಿಂಸಾ ವಿನೋದಿ. ಕರುಣೆ, ಪ್ರೀತಿ, ಅಹಿಂಸೆ ಇವೆಲ್ಲಾ ಅವನು ಆನಂತರ ಬದುಕುವುದಕ್ಕಾಗಿ ರೂಢಿಸಿಕೊಂಡದ್ದು’ ಎನ್ನುವ ಪ್ರಸಿದ್ಧ ಮಾತಿದೆಯಲ್ಲಾ, ಆ ರೀತಿ ಅವನು ಹಿಂಸಾವಿನೋದಿಯೂ, ಹೃದಯ ಹೀನನೂ ಆಗಿರಬೇಕಾಗುತ್ತದೆ.

ಎಪ್‌ಸ್ಟೀನ್ ಕಡತಗಳಲ್ಲಿರುವ ಅಷ್ಟೂ ‘ಮನುಷ್ಯರ’ ಅಂತರಂಗ ಆ ಮಟ್ಟಿಗೆ ಕಲುಷಿತಗೊಂಡದ್ದು ಹೀಗೇನಾ? ಅಮಾನುಷವಾದದ್ದು ಹೀಗೇನಾ? ಗೊತ್ತಿಲ್ಲ. ಆದರೆ ಯಾವ ಕರುಣೆಯನ್ನು, ಯಾವ ಮಾನವೀಯತೆಯನ್ನು ನಾವು ಆ ಪುಟ್ಟ ಪುಟ್ಟ ಮಕ್ಕಳ ಮೇಲೆ, ಕತ್ತಲೆಯ ಕೂಪಕ್ಕೆ ಬಲಿಯಾದ ಹೆಣ್ಣುಮಕ್ಕಳ ಮೇಲೆ ತೋರಿಲ್ಲವೋ ಅದೇ ಕರುಣೆಯನ್ನು ನಮ್ಮ ಮೇಲೆ, ನಮ್ಮ ಕಾಲದ ಮೇಲೆ ಚರಿತ್ರೆ ತೋರದು, ನಾವು ಚರಿತ್ರೆಯ ಪುಟಗಳಲ್ಲಿ ಕ್ಷಮಾಯೋಗ್ಯರಲ್ಲದವರಾಗಿಯೇ ದಾಖಲಾಗಿಬಿಡುತ್ತೇವೆ ಅನ್ನುವುದು ಮಾತ್ರ ಸತ್ಯ.

WhatsApp Image 2026 02 15 at 10.09.03 AM
ಫಾತಿಮಾ ರಲಿಯಾ
+ posts

ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ.

ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು‌ ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.

ಪೋಸ್ಟ್ ಹಂಚಿಕೊಳ್ಳಿ:

ಫಾತಿಮಾ ರಲಿಯಾ
ಫಾತಿಮಾ ರಲಿಯಾ
ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ. ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು‌ ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...