ಕಾವಿ, ಕಾಷಾಂಬರ, ಶಂಖ, ಗಿಳಿಲು, ದಂಡಾಗ್ರ ಇವೆಲ್ಲವೂ ಧಾರ್ಮಿಕ ವ್ಯಕ್ತಿಗಳು ಬಳಸುವ ಪೂಜಾ ಹಾಗೂ ಪವಿತ್ರತೆಯ ನಂಬಿಕೆಯುಳ್ಳ ಪರಿಕರಗಳು. ಸನ್ಯಾಸಿಗಳು, ವಿರಕ್ತರು ಮುಂತಾದ ಅಲೌಕಿಕ ವ್ಯಕ್ತಿಗಳು ಇವೆಲ್ಲವನ್ನು ಭೌತಿಕವಾಗಿ ಬಳಸುತ್ತಾರೆ, ಆದರೆ ಅದರಂತೆ ಬದುಕುವುದಿಲ್ಲ. ಧಾರ್ಮಿಕ ಉದ್ದೇಶಗಳ ಈಡೇರಿಕೆಗಳಿಗಿಂತ ಇಂತಹ ಧಾರ್ಮಿಕ ಲಾಂಛನಗಳು ಪ್ರಾಮುಖ್ಯತೆ ಪಡೆಯುವುದರ ಕುರಿತು ಬಸವಾದಿ ಶರಣರ ತಕರಾರಿದೆ.
ಕಾವಿ ಬಟ್ಟೆ ಯಾವ ಧರ್ಮಕ್ಕೆ ಸೇರಿದ್ದು ಎನ್ನುವ ಕುರಿತು ಇವತ್ತಿಗೂ ಸ್ಪಷ್ಟವಾಗಿಲ್ಲ. ಭಾರತದಲ್ಲಿ ಇರುವುದೆಲ್ಲವೂ ಸನಾತನ ಧರ್ಮಕ್ಕೆ ಸೇರಿದೆ ಎನ್ನುವುದು ವೈದಿಕರ ಮಿದುಳು ರೋಗದಿಂದ ಹುಟ್ಟಿಕೊಂಡ ಒಂದು ಹುಸಿ ನಿರೂಪಣೆ. ಭಾರತದ ಮೊದಲ ಧರ್ಮ ಶಿವ-ದ್ರಾವಿಡ ಧರ್ಮ. ಆ ಧರ್ಮವನ್ನು ಕಾಲಾನಂತರದಲ್ಲಿ ಸನಾತನ ವೈದಿಕ ಧರ್ಮ ಒಳಸೇರಿಸಿಕೊಂಡು ಅದರ ಆಚರಣೆ, ಲಾಂಛನಗಳು ತನ್ನದೆಂದು ಘೋಷಿಸಿಕೊಂಡಿದೆ. ಬೌದ್ಧ ಧರ್ಮದಲ್ಲಿ ಮೊಟ್ಟ ಮೊದಲು ಪ್ರಸ್ತಾಪವಾದ ‘ಸನಾತನ’ ಶಬ್ದವನ್ನು ಬ್ರಾಹ್ಮಣರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಬಳಸಿದ್ದಾರೆ. ಆನಂತರ ಪರ್ಷಿಯನ್ನರು ಸಿಂಧೂ ನದಿಯ ನಾಗರಿಕರನ್ನು (ಹಿಂದೂ) ಸಿಂಧೂ ಎಂದು ಕರೆದುದ್ದನ್ನು ಮುಂದೆ ಹಿಂದೂ ಧರ್ಮ ಎಂದು ವೈದಿಕರು ಕರೆದುಕೊಂಡಿದ್ದಾರೆ. ಬೌದ್ಧ ಬಿಕ್ಕುಗಳು ಹಾಕಿದ ಕಾವಿ ನಿಲುವಂಗಿ ಮುಂದೆ ವೈದಿಕರು ಅದು ತಮ್ಮದು ಎನ್ನಲಾರಂಭಿಸಿದರು. ಕಾವಿ ಎಂದರೆ ಸಾಮಾನ್ಯವಾಗಿ ಕೇಸರಿ ಬಣ್ಣದ ಬಟ್ಟೆ. ಇದು ಅಧ್ಯಾತ್ಮ, ತ್ಯಾಗ ಮತ್ತು ಶಾಂತಿಯ ಸಂಕೇತವೆಂದು ವ್ಯಾಖ್ಯಾನಿಸಲಾಗುತ್ತದೆ. ಆದ್ದರಿಂದ ಋಷಿ, ಮುನಿಗಳು, ಸಾಧು-ಸಂತರು ಕಾವಿಯನ್ನು ಧರಿಸುತ್ತಾರೆ. ಕಾವಿ ಬಟ್ಟೆ ಮಾನಸಿಕ ಸ್ಥಿಮಿತ ಹುರಿಗೊಳಿಸುತ್ತದೆ ಮತ್ತು ಅದರಿಂದ ನಕಾರಾತ್ಮಕ ಆಲೋಚನೆಗಳು ದೂರ ಸರಿಯುತ್ತವೆ, ಆತಂಕ ಕಡಿಮೆಯಾಗಿ ಶಾಂತಿ ನೆಲೆಗೊಳ್ಳುತ್ತದೆ ಎನ್ನಲಾಗುತ್ತದೆ. ಆದರೆ, ಈಗ ಕಾವಿ ಹಾಕಿಕೊಳ್ಳುವ ಬಹುತೇಕರಲ್ಲಿ ಈ ಗುಣಗಳು ಹುಡುಕಿದರೂ ಸಿಕ್ಕುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ.
ಸನ್ಯಾಸಿಗಳೆಂದರೆ, ಅಧ್ಯಾತ್ಮ ಮಾರ್ಗ ತುಳಿದು ಆತ್ಮೋನ್ನತಿ, ಮೋಕ್ಷ ಅಥವಾ ದೇವರ ಸಾಕ್ಷಾತ್ಕಾರಕ್ಕೆ ಹಂಬಲಿಸುವವರು. ಲೌಕಿಕರಿಗಿಂತ ಸನ್ಯಾಸಿಗಳು ಭಿನ್ನವಾಗಿ ಕಾಣಿಸಬೇಕು ಎನ್ನುವುದಕ್ಕಾಗಿ ಕೇಸರಿ ಬಣ್ಣದ ಬಟ್ಟೆಯನ್ನು ತೊಡುತ್ತಾರೆ. ಹಿಂದಿನ ಕಾಲದಲ್ಲಿ ಬಿಳಿ ಹೊರತುಪಡಿಸಿ ಬೇರೆ ಬಣ್ಣಗಳು ಸುಲಭವಾಗಿ ಲಭ್ಯವಿರಲಿಲ್ಲ. ಆ ಕಾರಣ ಅಡವಿಯಲ್ಲಿ ಸಿಗುವ ಗಿಡಮೂಲಿಕೆಗಳನ್ನು ಬಳಸಿ ಬಟ್ಟೆಗಳನ್ನು ಸುಲಭವಾಗಿ ಕೇಸರಿ ಬಣ್ಣಕ್ಕೆ ತಿರುಗಿಸುತ್ತಿದ್ದರು. ಬಿಳಿ ಬಟ್ಟೆಯನ್ನು ಹಲಸಿನ ಮರದ ತುಂಡುಗಳ ಜೊತೆ ನೀರಿನಲ್ಲಿ ಕುದಿಸಿದರೆ ಕಾವಿ ಬಣ್ಣಕ್ಕೆ ತಿರುಗುತ್ತದೆ. ಸನ್ಯಾಸಿಗಳು ಕಾವಿ ಬಟ್ಟೆಯನ್ನು ಆಧ್ಯಾತ್ಮಿಕ, ಸಾಮಾಜಿಕ ಹಾಗೂ ವೈಜ್ಞಾನಿಕ ಕಾರಣಗಳಿಗಾಗಿ ಧರಿಸುತ್ತಾರೆ ಎನ್ನಲಾಗುತ್ತದೆ. ಕಾವಿ ಬಣ್ಣವು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಂದರ್ಭದಲ್ಲಿ ಕಾಣುವ ಕಿತ್ತಳೆ, ಕೇಸರಿ, ಕೆಂಪು ಮಿಶ್ರಿತ ಹಳದಿ ಬಣ್ಣವನ್ನು ಹೋಲುತ್ತದೆ. ಬೆಂಕಿ ಕೂಡ ಹಳದಿ ಮಿಶ್ರಿತ ಕೆಂಪು ಬಣ್ಣ ಹೊಂದಿರುತ್ತದೆ. ನಿಸರ್ಗ ಶಕ್ತಿಯ ಸಂಕೇತವಾಗಿ ಕಾವಿ ಬಟ್ಟೆ ಎಂದು ವ್ಯಾಖ್ಯಾನಿಸುತ್ತಾರೆ. ಸನ್ಯಾಸಿಗಳ ಬದುಕು ಸಾಮಾನ್ಯವಾಗಿ ಅಘೋರವಾಗಿರುತ್ತದೆ. ದೃಕ್ ಶಾಸ್ತ್ರಕ್ಕೂ ಕಾವಿ ಬಣ್ಣಕ್ಕೂ ಸಂಬಂಧವುಂಟು ಎನ್ನುತ್ತಾರೆ. ನಿಸರ್ಗದ ಅನೇಕ ಬಣ್ಣಗಳಲ್ಲಿ ಕಿತ್ತಳೆ ಬಣ್ಣವು ಮನುಷ್ಯನ ಕಣ್ಣುಗಳಿಂದ ಹೆಚ್ಚು ಆಕರ್ಷಿತವಾಗುತ್ತವೆ. ಆ ಕಾರಣದಿಂದ ಮಂಜು ಬೀಳುವ ಪ್ರವಾಸಿ ತಾಣಗಳಾದ ಊಟಿ, ಕೊಡೈಕೆನಾಲ್ ಮುಂತಾದ ಪ್ರದೇಶಗಳಲ್ಲಿ ಸೋಡಿಯಂ ವೇಪರ್ ಲ್ಯಾಂಪ್‌ಗಳನ್ನು ಬಳಸುತ್ತಾರೆ.
ರಾತ್ರಿ ಹೊತ್ತಿನಲ್ಲಿ ಟ್ರಾಫಿಕ್ ಬ್ಲಿಂಕರ್ಸ್ ರೂಪದಲ್ಲಿ ಕಿತ್ತಳೆ ಬಣ್ಣದ ದೀಪವನ್ನು ಉಪಯೋಗಿಸಲಾಗುತ್ತದೆ. ರಕ್ಷಣಾ ಸಂಕೇತ ಚಿನ್ಹೆ (ರೆಸ್ಕ್ಯೂ ಸಿಗ್ನಲ್) ಆಗಿ ಕೂಡಾ ಕಿತ್ತಳೆ ಬಣ್ಣದ ಹೊಗೆಯನ್ನು ಬಳಸಲಾಗುತ್ತದೆ. ಲೈಫ್ ಜಾಕೆಟ್ ಬಣ್ಣವೂ ಸಹ ಕಿತ್ತಳೆ ಇಲ್ಲವೇ ಫ್ಲೂರಸೆಂಟ್ ಆಗಿರುತ್ತದೆ. ಹಾಗೆಯೇ ಕಾವಿ ಬಣ್ಣದ ಬಟ್ಟೆಯನ್ನು ಅತ್ಯಂತ ಹೆಚ್ಚು ಜನಸಂಧಣಿಯಲ್ಲಿ ಸುಲಭವಾಗಿ ಗುರುತಿಸಬಹುದು. ಇನ್ನು ಸನ್ಯಾಸಿಗಳಿಗೆ ವಿರಕ್ತರು ಎಂದು ಕರೆಯಲಾಗುತ್ತದೆ. ಕನ್ನಡದ ಶಬ್ದಕೋಶದಲ್ಲಿ ‘ವಿರಕ್ತ’ ಪದದ ಅರ್ಥ ಸನ್ಯಾಸಿ, ಭಿಕ್ಷು, ವೈರಾಗ್ಯ ಹೊಂದಿದವನು, ಯತಿ, ಅಥವಾ ಸಾಧು ಎಂದಿದೆ. ತನ್ನ ನೈಸರ್ಗಿಕ ಇಂದ್ರಿಯಗಳನ್ನು ನಿಗ್ರಹಿಸಿಕೊಂಡು, ಎಲ್ಲಾ ಬಗೆಯ ಲೌಕಿಕ ಆಸೆ-ಆಕಾಂಕ್ಷೆಗಳಿಂದ ವಿಮುಕ್ತಿ ಹೊಂದಿದ ವ್ಯಕ್ತಿಯನ್ನು ವಿರಕ್ತ ಎಂದು ಕರೆಯಲಾಗುತ್ತದೆ. ಇನ್ನು ದೇವಸ್ಥಾನ ಹಾಗೂ ಸಾಂಪ್ರದಾಯಸ್ಥರ ಮನೆಯಲ್ಲಿ ಪೂಜೆಯ ಸಮಯದಲ್ಲಿ ಶಂಖವಾದ್ಯ ಮೊಳಗುವುದು ವಾಡಿಕೆ. ಶಂಖವು ಬೌದ್ಧಧರ್ಮದ ಎಂಟು ಮಂಗಳಕರ ಸಂಕೇತಗಳಲ್ಲಿ ಒಂದಾದ ಅಷ್ಟಮಂಗಲವಾಗಿದ್ದು, ಬೌದ್ಧಧರ್ಮದ ಪವಿತ್ರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಿಂದೂ ಬ್ರಾಹ್ಮಣ ಧರ್ಮದಲ್ಲಿ ಪಾಂಚಜನ್ಯ ಎಂದೇ ಕರೆಯಲ್ಪಡುವ ಶಂಖವು ಬ್ರಾಹ್ಮಣರ ಆರಾಧ್ಯ ದೇವತೆ ವಿಷ್ಣುವಿನ ಕೈಯಲ್ಲಿರುತ್ತದೆ. ಇದನ್ನು ಬ್ರಾಹ್ಮಣರ ಆಚರಣೆಗಳಲ್ಲಿ ಹಾಗೂ ಯುದ್ಧದ ಸಮಯದಲ್ಲಿ ತುತ್ತೂರಿಯಾಗಿ ಬಳಸಲಾಗುತ್ತಿತ್ತು. ಶಂಖವು ನೀರಿನ ಮತ್ತು ಸ್ತ್ರೀ ಫಲವತ್ತತೆಯ ಸಂಕೇತವಾಗಿ ನೋಡಲಾಗುತ್ತದೆ.

ಹಿಂದಿನ ಕಾಲದಲ್ಲಿ ಸಮುದ್ರದ ನೆರೆಯಲ್ಲಿ ವಾಸಿಸುವ ಜನರಿಗೆ ಎಚ್ಚರಿಸಲು ಮತ್ತು ಸಮುದ್ರದ ಅಪಾಯಗಳನ್ನು ದೂರವಿಡಲು ಶಂಖವು ಒಂದು ಕರೆಗಂಟೆಯಾಗಿ ಬಳಸಲಾಗುತ್ತಿತ್ತು. ಇದು ಮೊಟ್ಟ ಮೊದಲ ಶಬ್ದದ ಅಭಿವ್ಯಕ್ತಿಯಾಗಿ ಧ್ವನಿ-ಉತ್ಪಾದಿಸುವ ಸಾಧನವಾಗಿ ಗುರುತಿಸಲಾಗಿರುವ ಸಾಧನ. ಶಂಖಕ್ಕೆ ಧಾರ್ಮಿಕ ಸಂಬಂಧದ ನಂಟು ಬಂದಿದ್ದು ಆಮೇಲೆ. ಕಾವಿ, ಕಾಷಾಂಬರ, ಶಂಖ, ಗಿಳಿಲು, ದಂಡಾಗ್ರ ಇವೆಲ್ಲವೂ ಧಾರ್ಮಿಕ ವ್ಯಕ್ತಿಗಳು ಬಳಸುವ ಪೂಜಾ ಹಾಗೂ ಪವಿತ್ರತೆಯ ನಂಬಿಕೆಯುಳ್ಳ ಪರಿಕರಗಳು. ಸನ್ಯಾಸಿಗಳು, ವಿರಕ್ತರು ಮುಂತಾದ ಅಲೌಕಿಕ ವ್ಯಕ್ತಿಗಳು ಇವೆಲ್ಲವನ್ನು ಭೌತಿಕವಾಗಿ ಬಳಸುತ್ತಾರೆ, ಆದರೆ ಅದರಂತೆ ಬದುಕುವುದಿಲ್ಲ. ಧಾರ್ಮಿಕ ಉದ್ದೇಶಗಳ ಈಡೇರಿಕೆಗಳಿಗಿಂತ ಇಂತಹ ಧಾರ್ಮಿಕ ಲಾಂಛನಗಳು ಪ್ರಾಮುಖ್ಯತೆ ಪಡೆಯುವುದರ ಕುರಿತು ಬಸವಾದಿ ಶರಣರ ತಕರಾರಿದೆ. ಶರಣರ ಹಲವು ವಚನಗಳನ್ನು ಗಮನಿಸಿದರೆ ಡೋಂಗಿ ಸನ್ಯಾಸಿಗಳು ಹಾಗೂ ನಕಲಿ ಬಾಬಾಗಳ ಹಾವಳಿಯ ಈ ಕಾಲಘಟ್ಟದಂತೆ ಅಂದೂ ಸಹ ಖೊಟ್ಟಿ ಸನ್ಯಾಸಿಗಳು ಇದ್ದರು ಎನ್ನುವುದು ಖಾತ್ರಿಯಾಗುತ್ತದೆ. ಶರಣರು ತೋರಿಕೆಯ ಅಧ್ಯಾತ್ಮ ಹಾಗೂ ಭಕ್ತಿಯನ್ನು ‘ಭಕ್ತಿ ಎಂಬುದು ತೋರುಂಬ ಲಾಭ’ ಎಂದು ವಿಡಂಬಿಸುತ್ತಾರೆ. ಕಾವಿ ಕಾಮುಕರು, ಕಾವಿ ಕಾರ್ಪೋರೇಟ್ ಖದೀಮರು, ಕಾವಿ ವೇಷದ ರಾಜಕಾರಣಿಗಳು, ಪೂಜಾ, ಪ್ರಸಾದ, ಪಲ್ಲಕ್ಕಿ ಮತ್ತು ಪಲ್ಲಂಗದ ಪ್ರವೀಣರಾಗಿರುವುದನ್ನು ನಾವು ನೋಡುತ್ತಿದ್ದೇವೆ. ಶರಣ ಮಡಿವಾಳ ಮಾಚಿತಂದೆ ಇಂತಹ ನಕಲಿ ಸನ್ಯಾಸಿಗಳ ಕುರಿತು ಹೀಗೆ ಹೇಳುತ್ತಾರೆ:
“ಅಯ್ಯಾ, ತನ್ನ ತಾನರಿಯದೆ
ತನ್ನ ಇಷ್ಟಲಿಂಗದ ಹೊಲಬು ತಿಳಿಯದೆ
ಕಾಮವ ತೊರೆಯದೆ, ಹೇಮವ ಜರೆಯದೆ
ನಾವು ಹರ ಗುರು ಚರ ಷಟ್‍ಸ್ಥಲದ ವಿರಕ್ತರೆಂದು
ಚೆನ್ನಾಗಿ ನುಡಿದುಕೊಂಡು
ಕಾವಿ ಕಾಷಾಯಾಂಬರವ ಹೊದ್ದು
ಶಂಖ ಗಿಳಿಲು ದಂಡಾಗ್ರವ ಹೊತ್ತು
ಕೂಳಿಗಾಗಿ ನಾನಾ ದೇಶವ ತಿರುಗಿ
ಕಾಂಚನಕ್ಕೆ ಕೈಯೊಡ್ಡುವ ಪಂಚಮಹಾಪಾತಕರನು
ಕಾಗೆಯ ಗರ್ಭದಲ್ಲಿ ಹುಟ್ಟಿಸಿ ಕಾಕಾ ಎಂದು
ಕೂಗಿಸುತಿರ್ಪ[ನು] ಕಾಣಾ ಕಲಿದೇವರದೇವ”
ಭಾವಾರ್ಥ
ತನ್ನನ್ನು ತಾನು ಯಾರು ಎಂದು ತಿಳಿಯದವರು ಹಾಗೂ ಗುರು ಕರುಣಿಸಿದ ಅರಿವಿನ ಕುರುಹಾಗಿರುವ ಇಷ್ಟಲಿಂಗ ಅನುಸಂಧಾನದ ಮಾರ್ಗ ಅರಿಯದವರು, ತಮ್ಮನ್ನು ತಾವು ಹರಗುರು ಚರಮೂರ್ತಿಗಳೆಂದು, ಷಟಸ್ಥಲಬ್ರಹ್ಮರೆಂದು ಕರೆದುಕೊಳ್ಳುತ್ತಾರೆ. ಈ ನಕಲಿ ಸನ್ಯಾಸಿಗಳು ಅರಿಷಡ್ವರ್ಗಗಳಲ್ಲಿ ಒಂದಾದ ಹಾಗೂ ಸನ್ಯಾಸಕ್ಕೆ ನಿಷಿದ್ಧವಾಗಿರುವ ಕಾಮವನ್ನು ಸಂಪೂರ್ಣವಾಗಿ ತೊರೆಯದೆ, ಚಿನ್ನ, ಹಣ, ಭೂಮಿಯ ಆಶೆಯನ್ನು ಬಿಡದೆ ಅವುಗಳನ್ನು ತಮ್ಮದಾಗಿಸಿಕೊಳ್ಳಲು ಹಾತೊರೆಯುತ್ತಾರೆ. ಇಂತಹ ಡಾಂಭಿಕ ಸನ್ಯಾಸಿಗಳು ಕಾವಿ ಬಟ್ಟೆಯನ್ನು ತೊಟ್ಟು, ಕೈಯಲ್ಲಿ ಧಾರ್ಮಿಕ ಲಾಂಛನಗಳಾದ ಶಂಖ, ಗಿಳಿಲು, ದಂಡ, ನೆಗಿಲು, ಬಣ್ಣಬಣ್ಣದ ಧ್ವಜಗಳನ್ನು ಹಿಡಿದಿರುತ್ತಾರೆ. ಹೀಗೆ ಕಪಟ ವೇಷ ಧರಿಸಿದ ಸನ್ಯಾಸಿಗಳು ಎರಡು ಹೊತ್ತಿನ ಕೂಳಿಗಾಗಿ, ಹೊಟ್ಟೆ ಪಾಡಿಗಾಗಿ ಕಂಡ ಕಂಡಲ್ಲಿ ಸುತ್ತುತ್ತಾರೆ. ಹೀಗೆ ಲೌಕಿಕದ ಆಸೆ, ಆಕಾಂಕ್ಷೆ ಆಮಿಷ, ಕಾಮ, ಕ್ರೋಧ, ಮೋಹ, ಮತ್ಸರ, ಮದ, ಮುಂತಾದ ಅರಿಷಡ್ವರ್ಗಗಳನ್ನು ಸಂಪೂರ್ಣ ನೀಗಿಕೊಳ್ಳದೇ ಕಾವಿ ತೊಟ್ಟು ಕೂಳಿಗಾಗಿ ಸುತ್ತುವ ಡಾಂಭಿಕ ಸನ್ಯಾಸಿಗಳನ್ನು ಕನಿಷ್ಠವಾಗಿ ಹುಟ್ಟಿಸು ಎಂದು ವೀರ ಗಣಾಚಾರಿ ಶರಣ ಮಡಿವಾಳ ಮಾಚಿತಂದೆ ಆಗ್ರಹಿಸುತ್ತಾರೆ. ಇಡೀ ವಚನವು ಸನ್ಯಾಸದ ಮಹತ್ವವನ್ನು ಅರಿಯದ, ಅಧ್ಯಾತ್ಮವನ್ನು ಉಪಜೀವನದ ಊರುಗೋಲು ಮಾಡಿಕೊಂಡಿರುವ ಡಾಂಭಿಕ ಸನ್ಯಾಸಿಗಳು ಹಾಗೂ ಮಠಾಧೀಶರ ಕುರಿತು ತೀಕ್ಷ್ಣವಾಗಿ ಮಾತನಾಡುತ್ತದೆ ಹಾಗೂ ಕಟುವಾಗಿ ಟೀಕಿಸುತ್ತದೆ.
ಟಿಪ್ಪಣಿ
ಶರಣ ಸಿದ್ಧಾಂತ ಹಾಗು ಲಿಂಗಾಯತ ಧರ್ಮ ನಿಸರ್ಗ ನಿಯಮಗಳನ್ನು ಗೌರವಿಸುತ್ತದೆ. ನಿಸರ್ಗಕ್ಕೆ ವಿರುದ್ಧವಾಗಿರುವ ಸನ್ಯಾಸವನ್ನು ಬೆಂಬಲಿಸುವುದಿಲ್ಲ. ಇಂದ್ರೀಯ ನಿಗ್ರಹ ಸಲ್ಲದು ಎನ್ನುತ್ತಾರೆ ಬಸವಣ್ಣನವರು. ಕಲ್ಯಾಣದಲ್ಲಿ ನಡೆದ ವಚನ ಚಳುವಳಿಯಲ್ಲಿ ಭಾಗವಹಿಸಿದ ಶೇ. 99ರಷ್ಟು ಶರಣರು ಸಂಸಾರಿಗಳು, ಲೌಕಿಕದಲ್ಲಿದ್ದೇ ಪಾರಮಾರ್ಥವನ್ನು ಗೆದ್ದ ಪರಮ ಸಾಧಕರು. ವಚನ ಚಳವಳಿಯ ಕಾಲಕ್ಕೆ ಶೈವ ಸ್ಥಾಪನಾಚಾರ್ಯರ ಮಠಗಳು ಅಸ್ಥಿತ್ವದಲ್ಲಿದ್ದವು, ಆದರೆ ಬಸವಣ್ಣನವರು ಮಠಗಳನ್ನು ಸ್ಥಾಪಿಸಲಿಲ್ಲ. ಶರಣರು ಮಠ ವ್ಯವಸ್ಥೆಯನ್ನು ಅನುಮೋದಿಸಲಿಲ್ಲ. 16ನೇ ಶತಮಾನದಲ್ಲಿ ಯಡಿಯೂರ ಸಿದ್ಧಲಿಂಗ ಶಿವಯೋಗಿಗಳು ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿನ ಶೂನ್ಯ ಸಂಪಾದನಕಾರರು ವಿರಕ್ತ ಮಠ ಪರಂಪರೆಯನ್ನು ಹುಟ್ಟುಹಾಕಿದರು. ವಿರಕ್ತ ಮಠಗಳ ಸ್ಥಾಪನೆಯಿಂದ ಆತಂಕಗೊಂಡ ವೀರಶೈವ ಆರಾಧ್ಯರು ಚತುರಾಚಾರ್ಯರ ಪೀಠಗಳನ್ನು ಸ್ಥಾಪಿಸಿಕೊಂಡು ಮುಂದೆ ಪಂಚಾಚಾರ್ಯರಾದರು. ಹೀಗೆ ಲಿಂಗಾಯತ ಧರ್ಮದಲ್ಲಿ ಗುರು ವಿರಕ್ತ ಪರಂಪರೆಯ ಮಠಗಳು ಪೈಪೋಟಿಯಂತೆ ಹದಿನಾರನೇ ಶತಮಾನದಿಂದ ಬೆಳೆದುಬಂದವು. ಲಿಂಗಾಯತ ಧರ್ಮದಲ್ಲಿ ಇರದ ಮಠ ವ್ಯವಸ್ಥೆ ಯಾವ ಯಾವುದೋ ಕಾರಣದಿಂದ ಲಿಂಗಾಯತ ಧರ್ಮದ ಒಳ ಹೊಕ್ಕಿರುವುದು ಸತ್ಯವಾಗಿದೆ.
ಇದನ್ನೂ ಓದಿ ಅಫ್ಘಾನ್ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಾಕಿ ಪತ್ರಿಕಾಗೋಷ್ಠಿಗೆ ಮಹಿಳೆಯರಿಗೆ ನಿಷೇಧ: ವ್ಯಾಪಕ ವಿರೋಧ
ಇಂದಿನ ಅಧುನಿಕ ದಿನಗಳಲ್ಲಿ ನಕಲಿ ಸನ್ಯಾಸಿಗಳು, ಕಾರ್ಪೋರೇಟ್ ಬಾಬಾಗಳು ವಿಜ್ರಂಭಿಸುತ್ತಾ ರಾಜಕೀಯ ಮಾಡುತ್ತಿದ್ದಾರೆ. ಯೋಗವನ್ನು ಹಾಗು ಆಯುರ್ವೇದವನ್ನು ಒಂದು ಧಂದೆಯಾಗಿಸಿಕೊಂಡು ಜನರ ಸುಲಿಗೆ ಮಾಡುತ್ತಿದ್ದಾರೆ. ಜನರಿಗೆ ಭಾರವಾದ ಈ ನಕಲಿ ಸನ್ಯಾಸಿಗಳು ಶರಣರು ಕಾಲದಲ್ಲೂ ಇದ್ದಿರಬೇಕು. ಆದ್ದರಿಂದ, ಕಪಟ ಸನ್ಯಾಸಿಗಳು ಹಾಗೂ ಡಾಂಭಿಕ ಮಠಾಧೀಶರ ಕುರಿತು ಶರಣರು ತೀಕ್ಷ್ಣವಾದ ಆಕ್ರೋಶವನ್ನು ಹೊರಹಾಕಿದ್ದಾರೆ. ತನ್ನ ತಾನು ಅರಿಯದೆ, ಹೊನ್ನು, ಹೆಣ್ಣು, ಮಣ್ಣಿನ ಮೋಹ ಬಿಡದೆ, ಪೂರ್ವಾಶ್ರಮದ ಜಾತಿ, ರಕ್ತ ಸಂಬಂಧಿಗಳ ನಂಟು ತ್ಯಜಿಸದೆ, ಕೂಳಿಗಾಗಿ ಕಾವಿ, ಕಾಷಾಂಬರ ಹೊದ್ದವರನ್ನು ಶರಣ ಮಡಿವಾಳ ಮಾಚಿದೇವ ತಮ್ಮ ಮೇಲಿನ ವಚನದಲ್ಲಿ ಮಾರ್ಮಿಕವಾಗಿ ಹಾಗೂ ಅರ್ಥಪೂರ್ಣವಾಗಿ ತಿವಿದಿದ್ದಾರೆ. ಇಂದಿನ ದಿನಗಳಲ್ಲಿ ಪಂಚೇಂದ್ರಿಯಗಳ ಮೇಲೆ ನಿಯಂತ್ರಣವಿಲ್ಲದ ಸನ್ಯಾಸಿಗಳ ಲೈಂಗಿಕ ಹಗರಣಗಳು ಹೊರಬೀಳುತ್ತಿವೆ. ಕೆಲವು ಸನ್ಯಾಸಿಗಳು ರಾಮಕಥಾ ನೆಪದಲ್ಲಿ ಒಪ್ಪಿತ ಕಾಮಕೇಳಿ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಅಂತವರಿಗೆ ಕೆಲವು ಪತ್ರಕರ್ತರ ವೇಷದ ತಲೆಹಿಡುಕರು ಸಹಾಯ ಮಾಡುತ್ತಿದ್ದಾರೆ. ಸನ್ಯಾಸಿ ಆದವನು ಹೇಗಿರಬೇಕು ಎನ್ನುವ ಕುರಿತು ಸಂಸಾರಿಗಳಾದ ಶರಣರು ತಮ್ಮ ವಚನಗಳ ಮೂಲಕ ಎಚ್ಚರಿಸಿದ್ದಾರೆ. ವೈದಿಕ ಪುರಾಣಗಳಲ್ಲಿನ ಋಷಿ ಮುನಿಗಳ ಕಾಮಕೇಳಿ ಪ್ರಸಂಗಗಳು ಹೇಸಿಗೆ ಹುಟ್ಟಿಸುತ್ತವೆ. ಅಂದಿನ, ಇಂದಿನ ಹಾಗೂ ಎಂದೆಂದಿಗಿನ ಸನ್ಯಾಸಿಗಳಿಗೆ ಹನ್ನೆರಡನೇ ಶತಮಾನದ ಶರಣರ ಬದುಕು ಮಾದರಿಯಾಗಬೇಕಿದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




