ದಿಲ್ಲಿ ಮಾತು | ಕಾಡು ರೋದಿಸುತ್ತದೆ, ಮರಗಳೂ ರೋದಿಸುತ್ತವೆ

Date:

ಜೂನ್ 2025ರ ಹೊತ್ತಿಗೆ, ಮತ್ತೊಂದು ಅದಾನಿ-ಸಂಬಂಧಿತ ಕಲ್ಲಿದ್ದಲು ಯೋಜನೆಗಾಗಿ ರಾಯ್‌ಗಢ್ ಜಿಲ್ಲೆಯಲ್ಲಿ ಬೃಹತ್ ಅರಣ್ಯ ನಾಶ ಸಂಭವಿಸಿತು. ಕನಿಷ್ಠ 5,000 ಮರಗಳನ್ನು ಕಡಿದಿದ್ದಾರೆ ಮತ್ತು ಪ್ರತಿಭಟನೆಗಳ ಸಮಯದಲ್ಲಿ ಏಳು ಜನರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಛತ್ತೀಸ್‌ಗಢದ ಖೈರಾಗಢದಲ್ಲಿ ನಡೆದ ಒಂದು ಮನಕಲಕುವ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 85 ವರ್ಷದ ದಿಯೋಲಾ ಬಾಯಿ ಎಂಬ ವೃದ್ಧ ಮಹಿಳೆ ತಮ್ಮ ಮನೆಯ ಆವರಣದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನೆಟ್ಟು ನೀರುಣಿಸಿ ಬೆಳೆಸಿದ ಆಲದ ಮರವನ್ನು ಆಕೆಯ ಕಣ್ಮುಂದೆಯೇ ಕತ್ತರಿಸಲ್ಪಟ್ಟದ್ದನ್ನು ನೋಡಿ ಕಣ್ಣೀರಿಟ್ಟರು. ಭಾವುಕರಾಗಿ ಮರದ ಬುಡವನ್ನು ಹಿಡಿದುಕೊಂಡು ದುಃಖಿಸುತ್ತಿರುವ ಚಿತ್ರ ಚಿತ್ತದಿಂದ ಮಾಸುತ್ತಿಲ್ಲ.

ಪ್ರೀತಿಯಿಂದ ಸಾಕಿದ ಪ್ರಾಣಿ ಪಕ್ಷಿಗಳಿರಲಿ, ನೆಟ್ಟ ಮರವೇ ಇರಲಿ ಅವು ಮಕ್ಕಳಂತೆ ಭಾವನಾತ್ಮಕವಾಗಿ ನಮ್ಮ ಹೃದಯಕ್ಕೆ ಹತ್ತಿರವಾಗಿರುತ್ತವೆ. ಅವುಗಳಿಗೆ ಹಾನಿಯಾದಾಗ ಮಗುವಿಗೆ ಪೆಟ್ಟಾದಷ್ಟೇ ಸಂಕಟವನ್ನು ಅನುಭವಿಸಿದ್ದು ಸ್ವಾಭಾವಿಕ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ ಕೆಲವರು ಆರ್ಥಿಕ ಲಾಭಕ್ಕಾಗಿ ಆ ಮರವನ್ನು ಕಡಿದರು ಎಂದು ಆರೋಪಿಸಲಾಗಿದೆ. ಈ ಘಟನೆ ಮಾನವ ಮತ್ತು ಪ್ರಕೃತಿಯ ನಡುವಿನ ಭಾವನಾತ್ಮಕ ಬಾಂಧವ್ಯದ ಉದಾಹರಣೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಯಾಯಿತು. ಪೊಲೀಸರವರು ಆ ಮರವನ್ನು ಕಡಿಯಲು ಕಾರಣರಾದ ಇಬ್ಬರನ್ನು ಈಗಾಗಲೇ ಬಂಧಿಸಿದ್ದಾರೆ. ಆ ಅಶ್ವತ್ಥ ಮರ ಸರ್ಕಾರದ ಭೂಮಿಯಲ್ಲಿದ್ದು, ಸಾರಾ ಗೊಂಡಿ ಗ್ರಾಮಸ್ಥರು ಸುಮಾರು 20 ವರ್ಷಗಳಿಂದ ಅದನ್ನು ಪೂಜಿಸುತ್ತಿದ್ದರಂತೆ. ಸಾಮಾನ್ಯವಾಗಿ ಅರಳಿಮರ ಹಾಗೂ ಆಲದ ಮರಗಳನ್ನು ಕಡಿಯುವುದಿಲ್ಲ. ಕಡಿಯುವುದಕ್ಕೂ ಕೆಲವು ಧಾರ್ಮಿಕ ನಿಯಮಗಳಿವೆಯಂತೆ. ಅಶ್ವತ್ಥ ವೃಕ್ಷದಲ್ಲಿ ಬ್ರಹ್ಮ ದೇವರ ವಾಸವಿರುತ್ತದೆ ಎಂದು ಜನರ ನಂಬಿಕೆಯಿದೆ. ಗಿಡದಿಂದ ಒಂದು ಹೂವು ಕಿತ್ತುಕೊಳ್ಳುವುದಕ್ಕೂ ಮುನ್ನ ಗಿಡದ ಕ್ಷಮೆ ಯಾಚಿಸಿ ಕೈಮುಗಿದು ಹೂವು ಪತ್ರೆಗಳನ್ನು ಕಿತ್ತುಕೊಳ್ಳುವ ನಿಯಮವನ್ನು ಪಾಲಿಸುವವರೂ ಇದ್ದಾರೆ. ಅದೇನೇ ಇರಲಿ ಈ ಸಂದರ್ಭದಲ್ಲಿ ಮರಗಳನ್ನು ಕಡಿದ, ಅರಣ್ಯಗಳನ್ನು ನಾಶಗೊಳಿಸಿದ ಗಂಭೀರ ವಿಷಯದತ್ತ ಗಮನ ಹರಿಸುವ ಆಗತ್ಯವಿದೆ. 

ಕಳೆದ ವರ್ಷ ಇದೇ ಉತ್ತರ ಪ್ರದೇಶದಲ್ಲಿ ಕಾವಡ್ ಮಾರ್ಗಕ್ಕಾಗಿ 17,600 ಮರಗಳನ್ನು ಕಡಿಯಲಾಗಿದ್ದ ವರದಿ ಸುದ್ದಿಯಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ರಚಿಸಿದ ನಾಲ್ಕು ಸದಸ್ಯರ ಸಮಿತಿಯ ಅಂತರಿಕ ವರದಿಯ ಪ್ರಕಾರ, 2024ರ ಆಗಸ್ಟ್ 9ರ ತನಕ ನೀರಾವರಿ ಇಲಾಖೆಯಿಂದ ದೊರೆತ ಮಾಹಿತಿಯಂತೆ ಘಾಜಿಯಾಬಾದ್, ಮೀರತ್ ಮತ್ತು ಮುಜಫರ್‌ನಗರ ಜಿಲ್ಲೆಗಳಲ್ಲಿ ಒಟ್ಟು 17,607 ಮರಗಳನ್ನು ಕಡಿದು ಹಾಕಲಾಗಿದೆ.

ಈ ಯೋಜನೆಯಡಿ ರಾಜ್ಯ ಸರ್ಕಾರ ಒಟ್ಟಾರೆ 33,776 ಮರಗಳನ್ನು ಕಡಿದು ಹಾಕುವ ಯೋಜನೆಯನ್ನು ರೂಪಿಸಿದೆ ಎಂದು ಸಮಿತಿ ತಿಳಿಸಿತ್ತು. ಈ ವರ್ಷ ಮೊದಲ ಭಾಗದಲ್ಲೇ, ಉತ್ತರ ಪ್ರದೇಶ ಸರ್ಕಾರ ಮುರಾದ್‌ನಗರ (ಘಾಜಿಯಾಬಾದ್)ದಿಂದ ಪುರಕಾಜಿ (ಮುಜಫರ್‌ನಗರ)ವರೆಗೆ ಹೊಸ ಕಾವಡ್ ಮಾರ್ಗಕ್ಕಾಗಿ ಒಟ್ಟು 1,12,722 ಮರಗಳನ್ನು ಕಡಿತಗೊಳಿಸಲು ಉದ್ದೇಶಿಸಿದೆ ಎಂಬ ವರದಿಯ ಬಗ್ಗೆ NGT ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ, ಆಗಸ್ಟ್‌ನಲ್ಲಿ ಟ್ರಿಬ್ಯುನಲ್ ಒಂದು ಸಂಯುಕ್ತ ಸಮಿತಿಯನ್ನು ರಚಿಸಿ ವಿಚಾರಣೆ ನಡೆಸುವಂತೆ ಆದೇಶಿಸಿತು.

ಇನ್ನು ಅದಾನಿ ಗ್ರೂಪ್, ಗೌತಮ್ ಅದಾನಿ ನೇತೃತ್ವದಲ್ಲಿ, ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳೊಂದಿಗೆ ಸಂಬಂಧಿಸಿದ ಅರಣ್ಯ ನಾಶದ ವಿವಾದಗಳ ಬಗ್ಗೆ ಕೇಳುತ್ತಲೇ ಇದ್ದೇವೆ.  ಅದಕ್ಕಾಗಿ ಮೂಲನಿವಾಸಿಗಳು, ಬುಡಕಟ್ಟು ಸಮುದಾಯಗಳು ಸಾಮಾಜಿಕ ಹೋರಾಟಗಾರರು  ಪ್ರತಿಭಟನೆಯನ್ನು ನಡೆಸಿದ್ದರೂ ಅದು ಅರಣ್ಯರೋಧನಾವಾಗಿದೆಯೇ ಹೊರತು ಯಾವ ಪ್ರಯೋಜನವೂ ಆಗಿಲ್ಲ. ಆ ಕಂಪನಿಗಾಗಿ ದೊಡ್ಡ ಪ್ರಮಾಣದ ಮರ ಕಡಿಯುವಿಕೆಗೆ  ಅನುಮೋದನೆ ನೀಡುತ್ತಿರುವುದು ಅರಣ್ಯ ಕಾನೂನುಗಳ ಉಲ್ಲಂಘನೆಯಾಗಿದೆ ಹಾಗೂ ಸ್ಥಳೀಯ ಜನರನ್ನು ಸ್ಥಳಾಂತರಿಸುವ ಸಮಸ್ಯೆಗಳ ಬಗ್ಗೆ ಮುಖ್ಯ ವಾಹಿಸಿಗಳಲ್ಲಿ ಚರ್ಚೆಯಾಗಿದ್ದು ವಿರಳ.

astiyoe arend
ಕಲ್ಲಿದ್ದಲು ಗಣಿಗಾರಿಕೆ

ಇದೇ ಛತ್ತೀಸಗಡದ ಹಸ್ದಿಯೋ ಅರಂಡ್ ಅರಣ್ಯ ವಿವಾದ – ಅತ್ಯಂತ ಪ್ರಮುಖ ಪ್ರಕರಣಗಳಲ್ಲಿ ಒಂದು. ಆನೆ ಹುಲಿಗಳಂಥ ಪ್ರಾಣಿಗಳು ಮತ್ತು ಆದಿವಾಸಿ (ಬುಡಕಟ್ಟು) ಸಮುದಾಯಗಳಿಗೆ ನೆಲೆಯಾಗಿರುವ ದಟ್ಟ ಅರಣ್ಯ ಪ್ರದೇಶ. ಅದಾನಿ ಎಂಟರ್‌ಪ್ರೈಸಸ್ ಇಲ್ಲಿ ಪಾರ್ಸಾ ಈಸ್ಟ್ ಮತ್ತು ಕಾಂಟಾ ಬಸನ್ (ಪಿಇಕೆಬಿ) ಕಲ್ಲಿದ್ದಲು ಗಣಿಯನ್ನು ನಿರ್ವಹಿಸುತ್ತದೆ, ಈಗಾಗಲೇ ಇದು ನೂರಾರು ಹೆಕ್ಟೇರ್‌ಗಳ ಮೇಲೆ ಸಾವಿರಾರು ಮರಗಳ ಕಡಿಯುವಿಕೆಗೆ ಕಾರಣವಾಗಿದೆ.

2022ರಲ್ಲಿ, ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳು ಮತ್ತು ಅದಾನಿ ಪ್ರತಿನಿಧಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಮುದಾಯಗಳನ್ನು ಭಾರತದ ಅರಣ್ಯ ಹಕ್ಕುಗಳ ಕಾನೂನುಗಳ ಅಡಿಯಲ್ಲಿ ಅಗತ್ಯವಿರುವ ಗ್ರಾಮ ಸಭಾ (ಗ್ರಾಮ ಸಭೆ) ಸಮ್ಮತಿಗಳ ಬಗ್ಗೆ ತಪ್ಪುದಾರಿಗೆಳೆದರು ಎಂದು ಆರೋಪಿಸಿದರು. ಇದರಿಂದ ಕೇಟೆಯಂತಹ ಗ್ರಾಮಗಳಿಂದ ಸ್ಥಳಾಂತರ ಸಂಭವಿಸಿತು.

ಮರ ಕಡಿಯುವಿಕೆಗೆ 2023ರ ಕೊನೆಯಲ್ಲಿ ಮತ್ತು 2024ರಲ್ಲಿ ಛತ್ತೀಸ್‌ಗಢದ ಬಿಜೆಪಿ ಸರ್ಕಾರ ವಿಸ್ತರಣೆಗಳನ್ನು ಅನುಮೋದಿಸಿದ ನಂತರ ಪ್ರತಿರೋಧ ತೀವ್ರಗೊಂಡಿತು, ನಡೆಯುತ್ತಿರುವ ಪ್ರತಿಭಟನೆಗಳ ಹೊರತಾಗಿಯೂ. ಉದಾಹರಣೆಗೆ, ಅಧಿಕಾರಿಗಳು ಡಿಸೆಂಬರ್ 2023ರಲ್ಲಿ ಪಿಇಕೆಬಿ ಫೇಸ್-2 ವಿಸ್ತರಣೆಗಾಗಿ ಮರಗಳನ್ನು ಕಡಿಯಲು ಪ್ರಾರಂಭಿಸಿದರು.

ಜೂನ್ 2025ರ ಹೊತ್ತಿಗೆ, ಮತ್ತೊಂದು ಅದಾನಿ-ಸಂಬಂಧಿತ ಕಲ್ಲಿದ್ದಲು ಯೋಜನೆಗಾಗಿ ರಾಯ್‌ಗಢ್ ಜಿಲ್ಲೆಯಲ್ಲಿ ಬೃಹತ್ ಅರಣ್ಯ ನಾಶ ಸಂಭವಿಸಿತು. ಕನಿಷ್ಠ 5,000 ಮರಗಳನ್ನು ಕಡಿದಿದ್ದಾರೆ ಮತ್ತು ಪ್ರತಿಭಟನೆಗಳ ಸಮಯದಲ್ಲಿ ಏಳು ಜನರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಯೋಜನೆಯು ಪ್ರದೇಶದಲ್ಲಿ ಬುಡಕಟ್ಟು ಜೀವನೋಪಾಯ, ಸಂಸ್ಕೃತಿ ಮತ್ತು ಮಹಿಳೆಯರ ಹಕ್ಕುಗಳನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಈ ರೀತಿಯಾಗಿ ಸರಕಾರವೇ ಮುಂದೆ ನಿಂತು ತಮಗೆ ಬೇಕಾದಂತಹ ನಿಯಮಗಳನ್ನು ತಿದ್ದುಪಡಿ ಮಾಡಿ ಪರಿಸರ ಹಾಳು ಮಾಡುವಿಕೆಯನ್ನು ಈ ದೇಶದ ಜನರಷ್ಟೇ ಅಲ್ಲ, ಇತಿಹಾಸವೆಂದೂ ಕ್ಷಮಿಸದು.

ಛತ್ತೀಸಗಡ ಒಂದೇ ಅಲ್ಲ. ಆಸ್ಸಾಮಿನ ಕೊಕ್ರಜಾರ್ ಎಂಬಲ್ಲಿಯೂ ಸಹ ಇದೇ 2025ರ ಅದಾನಿ ಪವರ್ ಯೋಜನೆಯು ಅರಣ್ಯ ಭೂಮಿಯ ಹಸ್ತಾಂತರದ ಮೇಲೆ ವಿರೋಧವನ್ನು ಎದುರಿಸಿದೆ. ಪ್ರತಿಭಟನಾಕಾರರು ಅರಣ್ಯ (ಸಂರಕ್ಷಣೆ) ಕಾಯಿದೆ ಮತ್ತು ಅರಣ್ಯ ಹಕ್ಕುಗಳ ಕಾಯಿದೆಯ ಉಲ್ಲಂಘನೆಗಳನ್ನು ಆರೋಪಿಸಿದ್ದಾರೆ. ಸ್ಥಳೀಯ ಸಮ್ಮತಿಗಳನ್ನು ತಪ್ಪಿಸಿ ಅದಾನಿಗೆ ಭೂಮಿಯನ್ನು ಹಂಚಿಕೆಮಾಡಲಾಗಿದೆ. ಆದರೆ ಸಮರ್ಥಕರ ಗುಂಪು ಬಾಯಿಬಡುಕರ ಟೋಳಿ ಪರಿಸರ ಹಾನಿಯನ್ನು ನಿರಾಕರಿಸುತ್ತಿದೆ. ಭೂಮಿಯನ್ನು ಅರಣ್ಯವೆಂದು ವರ್ಗೀಕರಿಸಲಾಗಿಲ್ಲ ಎಂದು ಹೇಳಿದೆ.

“ಹಕ್ಕಿಗಳು ಸುಮ್ಮನೇ ಗದ್ದಲವೆಬ್ಬಿಸಲಾರವು, ಯಾರಾದರೂ ಕಾಡಿನತ್ತ ನಗರದಿಂದ ಬಂದಿರಬಹುದು. ತಮ್ಮ ಕಾಡಿನಿಂದ ಭಯಗೊಂಡು ಹಾರಿದ ಬಾಯಾರಿದ ಹಕ್ಕಿಗಳು, ಪ್ರತಿ ಮೃಗತೃಷ್ಣೆಯಲ್ಲೂ ಸಮುದ್ರವನ್ನು ಕಂಡಿರಬಹುದು” ಎಂದು ಬರೆಯುತ್ತಾರೆ ಕೈಫಿ ಆಜ್ಮಿ. 

ಮನುಷ್ಯನಂತೆ ಹಕ್ಕಿಗಳು, ಕೀಟಗಳು ಕಾಡುಪ್ರಾಣಿಗಳು ಕಾಡು ಮತ್ತು ಮರಗಳ ನಿಕಟವರ್ತಿಗಳು, ಅದರ ಆಶ್ರಯಿಗಳು. ಕಾಡೇ ಇಲ್ಲವಾದರೆ, ಮರಗಳೇ ನಾಶವಾದರೆ ಎಲ್ಲ ಅಸ್ತವ್ಯಸ್ತ. ಯಾವುದೂ ಸಮತೋಲನದಲ್ಲಿರುವುದಿಲ್ಲ. ಕಾಡಿನಿಂದ ಮಳೆ ಬೆಳೆ ಸಮೃದ್ಧಿ. ಪ್ರಕೃತಿಯ ಸಮತೋಲನವನ್ನು ಹಾಳುಮಾಡುತ್ತಿರುವವರೂ ಮನುಷ್ಯರೇ! ಹಣ ಬಾಚಿಕೊಳ್ಳುತ್ತಿರುವವರಿಗೆ ಕಾಡೇನು ನಾಡೇನು? ಅವರ ಬೊಕ್ಕಸ ತುಂಬುತ್ತಿರಬೇಕು ಅಷ್ಟೇ! ಪರಿಸರ ನಾಶವಾದರೂ ಅಡ್ದಿಯಿಲ್ಲ. 

down to earth import library large 2022 04 27 0.43175800 1651073984 hasdeo
ಛತ್ತೀಸ್‌ಗಡ ಮಹಿಳೆಯರಿಂದ ʼಅಪ್ಪಿಕೋʼ ಚಳವಳಿ

ಹಸ್ದಿಯೋ ಅರಣ್ಯದ ಮಹಿಳೆಯರಿಗೆ ಈ ಕಾಡುಗಳು ಆರ್ಥಿಕ ಆಸ್ತಿಗಿಂತ ಹೆಚ್ಚಿನವು. ಅವರ ಉಸಿರಾಗಿರುವ ಕಾಡಿನ ಸಂಪನ್ಮೂಲಗಳು ಅವರಿಗೆ ಮಕ್ಕಳಂತೆ. ಅವು ಅವರ ಜೀವನೋಪಾಯ, ಸಂಸ್ಕೃತಿ ಮತ್ತು ಪ್ರತಿರೋಧದ ಸಂಕೇತಗಳಾಗಿವೆ. ಈ ಭೂಮಿಯನ್ನು ರಕ್ಷಿಸುವ ಅವರ ಹೋರಾಟ ಇಂದು ಮೊನ್ನಿನದಲ್ಲ. ಅದು 2011 ರಿಂದಲೂ ನಡೆಯುತ್ತಿರುವ ಹಸ್ದಿಯೋ ಬಚಾವೋ ಚಳವಳಿಯ ಪ್ರಮುಖ ಭಾಗವಾಗಿದೆ. ʼದಿ ವೈರ್ʼ ನ ಒಂದು ವರದಿಯ ಪ್ರಕಾರ ಎಲ್ಲಾ ವೈರುಧ್ಯಗಳ ನಡುವೆಯೂ ಹೋರಾಡಿ ಈ ಮಹಿಳೆಯರು ಪ್ರಸ್ತಾವಿತ 21 ಕಲ್ಲಿದ್ದಲು ಗಣಿಗಳಿಂದ 44,5000 ಎಕರೆಗಳಿಗೂ ಹೆಚ್ಚು ಅರಣ್ಯವನ್ನು ಉಳಿಸಿದ್ದಾರೆ. ಈ ಪ್ರತಿರೋಧದ ಮುಂಚೂಣಿಯಲ್ಲಿರುವವರು ಮಹಿಳೆಯರು. ಇಷ್ಟೆಲ್ಲಾ ಪ್ರತಿಭಟನೆಗಳ ಹೊರತಾಗಿಯೂ ಕಲ್ಲಿದ್ದಲು ಬ್ಲಾಕ್‍ಗಳನ್ನು ಹರಾಜು ಮಾಡಲಾಗುತ್ತಿದೆ.

2014ರಲ್ಲಿ ಸುಪ್ರಿಂ ಕೋರ್ಟ್ ದೇಶಾದ್ಯಂತ 204 ಕಲ್ಲಿದ್ದಲು ನಿಕ್ಷೇಪಗಳನ್ನು ರದ್ದುಗೊಳಿಸಿತ್ತು. ಅದರಲ್ಲಿ ಹಸ್ದಿಯೋದಲ್ಲಿನ 20 ನಿಕ್ಷೇಪಗಳೂ ಸೇರಿವೆ. ಆದರೂ ಇದು ಈ ಪ್ರದೇಶವನ್ನು ಬಳಿಸಿಕೊಳ್ಳುವ ಪ್ರಯತ್ನಗಳನ್ನು ನಿಲ್ಲಿಸಿಲ್ಲ. ಅದಾನಿ ಎಂಟರ್‍‍ಪ್ರೈಸ್ಸ್ ಲಿಮಿಟೆಡ್ ಈಗಾಗಲೇ ಒಂದು ನಿಕ್ಷೇಪದಲ್ಲಿ ಸಕ್ರಿಯವಾಗಿ ಗಣಿಗಾರಿಕೆಯನ್ನು ಮಾಡುತ್ತಿದೆ ಮತ್ತು ಇನ್ನೂ ಎರಡು ನಿಕ್ಷೇಪಗಳನ್ನು ತೆರೆಯಲು ಪ್ರಯತ್ನಗಳು ನಡೆಯುತ್ತಿವೆ. 1876 ಚದರ ಕಿಲೋಮೀಟರ್ ವಿಸ್ತೀರ್ಣದ ಹಸ್ದಿಯೋ ಪ್ರದೇಶವನ್ನು ಉಳಿಸುವ ಹೋರಾಟ ಇನ್ನೂ ನಿಂತಿಲ್ಲ. ಇನ್ನು ಅಲ್ಲಿನ ದಟ್ಟ ಜೈವಿಕ ವೈವಿಧ್ಯತೆಯಿಂದಾಗಿ ಅಲ್ಲಿ ವಾಸಿಸುವ ಆನೆಗಳು, ಹುಲಿಗಳು ಮತ್ತು ಅಪರೂಪದ ಸಸ್ಯ ಪ್ರಭೇದಗಳೂ ಸೇರಿದಂತೆ ಅರಣ್ಯ ವಿನಾಶವನ್ನು ಮಾಡುತ್ತಿರುವ ಈ ಕಾರ್ಪೋರೇಟ್ ಶಕ್ತಿಗಳಿಗೆ ಸರಕಾರವೇ ಎಲ್ಲ ಸೌಕರ್ಯಗಳನ್ನು ಒದಗಿಸುತ್ತಿರುವಾಗ ಪ್ರತಿರೋಧದ ದನಿಗಳು ಎಷ್ಟು ದೂರದವರೆಗೆ ಕೇಳಿಸಿಯಾವು?

ಇತ್ತೀಚಿನ ವಿಸ್ತರಣೆಗಳ ಪ್ರಕಾರ ಅಂದರೆ ಜುಲೈ 2025ರ ವಿದ್ಯಮಾನಗಳ ಪ್ರಕಾರ, ಭಾರತೀಯ ಸರ್ಕಾರವು 841 ಹೆಕ್ಟೇರ್‌ಗಳಿಗಿಂತ ಹೆಚ್ಚಿನ ಕಾಡು ಭೂಮಿಯ ಹೆಚ್ಚುವರಿ ವಿಚಲನವನ್ನು ಅನುಮೋದಿಸಿತು. 3.68 ಲಕ್ಷಕ್ಕಿಂತ ಹೆಚ್ಚು (368,000) ಮರಗಳ ಮೇಲೆ ಪರಿಣಾಮ ಬೀರುತ್ತದೆಯಂತೆ. ವಾಸ್ತವ ಸ್ಥಿತಿ ಹೀಗಿರಬೇಕಾದರೆ ಈಗಾಗಲೇ ನಡೆಯುತ್ತಿರುವ ಸಂಘರ್ಷಗಳ ಭವಿಷ್ಯವೇನು? ಆದರೆ ಅರಣ್ಯ ನಾಶ ಮಾನವ ಹಾಗೂ ಪ್ರಾಣಿಗಳ ಆವಾಸಸ್ಥಾನ ನಾಶದ ಬಗ್ಗೆ ಮಾತನಾಡದ ಬೆಂಬಲಿಗರು ಅದಾಣಿಯ ಈ ಯೋಜನೆಯು ಸಾವಿರಾರು ಸ್ಥಳೀಯರಿಗೆ ಉದ್ಯೋಗಗಳನ್ನು ಸೃಷ್ಟಿಸಿದೆ ಹಾಗೂ ರಾಜ್ಯ ಆದಾಯಕ್ಕೆ ಕೊಡುಗೆ ನೀಡಿದೆ ಎಂದು ಬೆನ್ನುತಟ್ಟಿಕೊಳ್ಳುತ್ತಾರೆ.   

ಯೋಜನೆಯು ಉಂಟುಮಾಡಿದ ಪರಿಸರ ನಾಶಕ್ಕೆ ಯಾರು ಹೊಣೆಗಾರರು? 2024ರ ಒಂದು ಸಮೀಕ್ಷಾ ವರದಿಯ ಪ್ರಕಾರ ಹತ್ತುಸಾವಿರ ಬುಡಕಟ್ಟು ಜನಾಂಗಗಳು, 170 ಜಾತಿಯ ಮರಗಳು, 82 ಜಾತಿಯ ಪಕ್ಷಿಗಳು ಮತ್ತು ಲೆಕ್ಕವಿಲ್ಲದಷ್ಟು ಚಿಟ್ಟೆಗಳು ಅಪಾಯದಲ್ಲಿವೆ. ಹಸ್ದಿಯೋ ಕಾಡಿನಿಂದ ಆನೆಗಳು ಮತ್ತು ಹುಲಿಗಳು ಎಲ್ಲಿಗೆ ಹೋಗಬೇಕು? ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಿಲಿಗಾಗಿ ಇಲ್ಲಿನ ಮರಗಳನ್ನು ಕಡಿಯಬೇಡಿ ಇದು ಯಾವ ಕಾರಣಕ್ಕೂ ಸರಿಯಲ್ಲ. ಇದು ಹಸ್ದಿಯೋ ಚಳವಳಿಯ ಬುಡಕಟ್ಟು ಜನಾಂಗದವರ ಕೂಗು. ಆದರೆ  ಕಿವುಡು ಸರ್ಕಾರಕ್ಕೆ ಅವರ ದನಿ ಕೇಳುವುದಾದರೂ ಹೇಗೆ?

ಆ ಅಜ್ಜಿ ತಾನು ನೆಟ್ಟ ಅಶ್ವತ್ಥ ಮರ ಕತ್ತರಿಸಿದ್ದನ್ನು ನೋಡಿ ಸಂಕಟಪಟ್ಟುಕೊಂಡು ಮರವನ್ನು ತಬ್ಬಿಕೊಂಡು ಕಣ್ಣೀರಿಟ್ಟಳು. ಹಸ್ದಿಯೋದ ಬುಡಕಟ್ಟು ಜನರು ಅದರಲ್ಲೂ ಅಲ್ಲಿನ ಮಹಿಳೆಯರು ಸಾವಿರಾರು ಮರಗಳು ಉರುಳಿ ಬೀಳುವುದನ್ನು ನೋಡಿ ಅದೆಷ್ಟು ಸಂಕಟಪಟ್ಟಿರಬಹುದು? ಅವರ ಇಡೀ ಜೀವನವನ್ನೇ ಪಣಕ್ಕೊಡ್ಡಿ ಕಾಡು ಉಳಿಸಿ, ಹಸ್ದಿಯೋ ಬಚಾವೋ ಎಂದು ಕಣ್ಣೀರಿಡುತ್ತಿದ್ದಾರೆ ಅವರ ಅಳಲನ್ನು ಕೇಳುವವರು ಇದ್ದಾರೆಯೇ ಈ ದೇಶದಲ್ಲಿ? ಪ್ರತಿರೋಧ ಅಲ್ಲಿನ ನಿವಾಸಿಗಳಷ್ಟೇ ಅಲ್ಲ, ಇಡೀ ದೇಶದ ಮೂಲೆ ಮೂಲೆಗಳಿಂದ ಬರಬೇಕು. ಮುಖ್ಯ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಚರ್ಚೆಯಾಗಬೇಕು. ಹೆಚ್ಚು ಹೆಚ್ಚು ಬೆಳಕಿಗೆ ಬರಬೇಕು. ಆಗಲೇ ಕಾಡು ನಾಡಾಗುವುದನ್ನು, ಕಾಡಿನ ಚರಾಚರ ಪ್ರಾಣಿಗಳು ನಾಶವಾಗುವುದನ್ನು ತಡೆಯಬಹುದು. 

IMG 20220430 WA0003
ಹಸ್ದಿಯೋ ಬಚಾವೋ ಆಂದೋಲನ (೨೦೨೧)

ವಿಕಾಸದ ಮಂಕುಬೂದಿಯನ್ನು ಒರೆಸಿಕೊಂಡು ಕಣ್ಣು ತೆರೆದು ನೋಡಬೇಕಿದೆ. ಈ ಸಂದರ್ಭದಲ್ಲಿ  ಜಾರ್ಖಂಡಿನ ದುಮಕಾ ಜಿಲ್ಲೆಯ ನಿವಾಸಿ ಆದಿವಾಸಿ ಕವಿಯತ್ರಿ ನಿರ್ಮಲಾ ಪುತುಲ್‍ರ ಎಲ್ಲ ಕಾಲಕ್ಕೂ ಸಲ್ಲುವ ಈ ಕವಿತೆಯನ್ನು ಓದಿದರೆ ಅರ್ಥವಾಗುತ್ತದೆ ಆದಿವಾಸಿಗಳ ಅಳಲು ಮತ್ತು ಕಾಳಜಿ.

ನಮ್ಮ ವಿಕಾಸದ ಅರ್ಥವೆಂದರೆ
ನಮ್ಮ ಕೇರಿಗಳನು ನಿರ್ನಾಮಮಾಡಿ ನಾಳೆ ಕಾರ್ಖಾನೆಗಳನು ಸ್ಥಾಪಿಸುವುದಾಗಿದೆ
ಕೆರೆಗಳನ್ನು ಮುಚ್ಚಿ ರಾಜಮಾರ್ಗಗಳನು
ಅರಣ್ಯಗಳನ್ನು ನೆಲಸಮ ಮಾಡಿ ಅಧಿಕಾರಿಗಳಿಗಾಗಿ ಕಾಲೊನಿ ನಿರ್ಮಿಸುವುದಾಗಿದೆ
ಹಾಗೇ ಪುನರ್ವಾಸದ ನೆಪದಲ್ಲಿ ನಮ್ಮನು
ನಮ್ಮದೇ ಊರ ಹೊರಗಟ್ಟಿ ಗಡಿಪಾರಾಗಿಸಿ
ತುತ್ತತುದಿಯಂಚಿಗೆ ತಳ್ಳುವುದಾಗಿದ್ದರೆ….
ನಿನ್ನ ಈ ವಿಕಾಸದ ಮುಖ್ಯವಾಹಿನಿಗೆ
ಸೇರಿಕೊಳ್ಳಲು ನಾವು
ನೂರುಬಾರಿ ಯೋಚಿಸಬೇಕಾಗಿದೆ !

ಯೋಚಿಸಬೇಕಿದೆ, ನಮ್ಮ ಗುಡಿಸಲುಗಳ ಬದಲು
ನೀವಿತ್ತ ಆವಾಸಗಳನ್ನು ಸ್ವೀಕರಿಸುವ ಮೊದಲು
ನಿಮ್ಮ ಒಂದೊಂದು ಪ್ರಸ್ತಾವಗಳನ್ನು ಸೂಕ್ಷ್ಮವಾಗಿ ನೋಡಬೇಕಿದೆ
ತಿಳಿಯಲಾರದ ವಿಷಯಗಳನ್ನು ತಿಳಿದುಕೊಳ್ಳಬೇಕಿದೆ

ನನ್ನ ಹಳ್ಳಿಯನ್ನು ಹೆದ್ದಾರಿಗೆ ಜೋಡಿಸಲು
ರಸ್ತೆ ಮಾಡಬೇಕೆನ್ನುವಿರಿ
ನನ್ನ ಹಳ್ಳಿಯನು ತಲುಪಲು
ನಮಗೆ ಮಾರುಕಟ್ಟೆಯನ್ನು ಒದಗಿಸಬೇಕಿದೆ
ಮಾರುಕಟ್ಟೆಯೇ ನಮ್ಮತ್ತ ನಡೆದು ಬರುವಂತೆ ದಾರಿ ಮಾಡಿಕೊಡಬೇಕಿದೆ
ನಮ್ಮಿಂದಲೇ ನಮ್ಮ ಕಲ್ಲುಗಳನ್ನು ಒಡೆಸಿ
ನಗರಕ್ಕೊಯ್ಯುವ ಇರಾದೆ ನಿಮ್ಮದು
ಯಾವುದಾದರೂ ಹೊಸ ಗಣಿ ಕಂಡಿರಬೇಕು
ನಮ್ಮ ಕಾಡಿನ ಸೌದೆ
ನಮ್ಮ ಹಳ್ಳಿಯ ಹುಡುಗಿಯರ ಮೇಲೆ ಬಿದ್ದಿರಬೇಕು
ನಿಮ್ಮ ನೆದರು
ಖಚಿತವಾಗಿ ಅರಿಯಬೇಕಿದೆ ನಾವು…

ಶಂಕೆಯಾಗುತ್ತಿದೆ ನಿಜಕೂ ನಮ್ಮ ವಿಕಾಸ ಬಯಸುವಿರಾ ನೀವು?
ಇಲ್ಲಾ ನಿಮ್ಮನ್ನು ಸಾಕಿದ ದಣಿಗಳೇ
ವಿಕಾಸದ ಹೊಸ ಹೊಸ ವಿಧಾನಗಳನು
ಕಲಿಸುತ್ತಿರುವರೆಂಬುದ ಬಲ್ಲೆ ನಾ
ವಿರೋಧದ ದನಿ ಬಹಳ ಕಹಿ!
ನಿಮ್ಮ ಶತ್ರುಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗುವುದು
ಆಗ ನೀವು ತರ್ಕಬದ್ಧವಾಗಿ
ನಮ್ಮದೇ ಜನರೆದುರು ನಮ್ಮ ಬಗ್ಗೆಯೇ ಕಿವಿಯೂದುವಿರಿ
ನಾವು ವಿಕಾಸಕ್ಕೆ ಅಡ್ಡಿ ಮಾಡುತ್ತಿದ್ದೇವೆಂದು
ನಮ್ಮ ಆಲೋಚನೆಗಳು ವಿಕಾಸ ವಿರೋಧಿಯಾಗಿವೆಯೆಂದು
ಅದೇ ಕಾಡುಮನುಷ್ಯರು, ಅಸಭ್ಯರು, ಹಿಂದುಳಿದವರಾಗಿರಲು ಬಯಸುತ್ತೇವೆಂದು!!

ಗೊತ್ತಿದೆ ನಿನ್ನ ಪ್ರತಿ ಮೂರನೇ ವಾಕ್ಯದಲಿ
ವಿಕಸಿತ ಜನರ, ವಿಕಾಸಗೊಂಡ ದೇಶಗಳ ಬಗೆಗೆ ಉಲ್ಲೇಖವಿರುವುದು
ಅವರನ್ನು ಮುಂದಿಟ್ಟುಕೊಂಡು ಹೇಳುತ್ತೀರಿ ನೀವು’
ನಾವೆಷ್ಟು ಹಿಂದುಳಿದವರೆಂದು

ಖೇದವೆಂದರೆ
ಯಾವ ಶರತ್ತುಗಳ ಮೇಲೆ ನಮ್ಮ ವಿಕಾಸವನ್ನು ಬಯಸುವಿರೆಂದು
ಎಂದೂ ಬಾಯಿಬಿಡುವುದಿಲ್ಲ ನೀವು
ವಿಕಾಸದ ಮಾದರಿಯನ್ನು
ಚಂದ್ರನನ್ನು ಬಣ್ಣಿಸುವಂತೆ ಬಣ್ಣಿಸುವಿರಿ
ಮೇಲ್ಮೈ ಕಂದಕ, ಪರಜೀವಿಗಳ ಕುರಿತು
ಚಕಾರವನ್ನೂ ಎತ್ತುವುದಿಲ್ಲ ನೀವು
ನಾ ಬಲ್ಲೆ ನಿಮ್ಮ ಈ ವಿಕಾಸದ ಮಾದರಿಯ ಹಿಂದೆ
ಎಂಥ ಜಾಣರ ಮೆದುಳು ಕೆಲಸ ಮಾಡಿದೆಯೆಂದು

ನೀವು ಮುಚ್ಚಿಡುತ್ತೀರಿ
ಬಚ್ಚಿಡುತ್ತೀರಿ ವಿಕಾಸಗೊಂಡ ಎಲ್ಲಾ ದೇಶಗಳ ವಿಕಾಸದ ರಹಸ್ಯವನು
ಹೇಗೆ ನಿಮ್ಮಿಂದಲೇ
ನಮ್ಮ ಸಂಪನ್ಮೂಲಗಳನ್ನು ನಮ್ಮಿಂದ ಕಸಿದುಕೊಂಡು
ವಿಕಾಸದ ಶಿಖರವನ್ನು ತಲುಪಿದ್ದಾರೆ ಅವರು
ಬಲ್ಲೆ, ನಾನೆಲ್ಲ ಬಲ್ಲೆ
ಕ್ಷಮಿಸಿ
ಪಟ್ನಾ, ರಾಂಚಿ, ದಿಲ್ಲಿಯಿಂದ ನಮಗಾಗಿ ಸಿದ್ಧಪಡಿಸಿ ತಂದ
ನಿಮ್ಮ ಈ ವಿಕಾಸದ ಪ್ರಸ್ತಾವವನ್ನು ತಿರಸ್ಕರಿಸುತ್ತೇನೆ!

ಮತಗಳವು: ರಾಹುಲ್ ಗಾಂಧಿ ಆರೋಪದ ಬಗ್ಗೆ ಎಸ್ಐಟಿ ತನಿಖೆ ಕೋರಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...