ಇದೀಗ ಹೆಬ್ಬಾಳ ಕೃಷಿ ಕ್ಷೇತ್ರದ ವಿಸ್ತೀರ್ಣವು ಸುಮಾರು 293 ಎಕರೆಗಳಿಗೆ ಕುಸಿದಿದೆ. ಬೆಂಗಳೂರು ಕೃಷಿ ವಿವಿಯಿಂದ ಪಶು ವಿವಿಗೆ ಹೆಬ್ಬಾಳ ಕೃಷಿ ಕ್ಷೇತ್ರವನ್ನು 2005 ಮತ್ತು 2020ರಲ್ಲಿ ಪಡೆದುಕೊಂಡ ಮೇಲೆ ಸಾಕಷ್ಟು ಪ್ರಮಾಣದ ಭೂಮಿಯ ಉಳುಮೆಯಾಗಿಲ್ಲ. ಅಲ್ಲಿ ಕೃಷಿ ಶಾಲೆಗಾಗಿ ಬಳಸಿಕೊಂಡಿದ್ದ, ಡಾ. ಲೆಸ್ಲಿ ಕೋಲ್ಮನ್ ಅವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಪಾರಂಪರಿಕ ಕಟ್ಟಡಗಳನ್ನು ಕಾಪಾಡಿಕೊಂಡಿಲ್ಲ. ತೆಂಗು ಮತ್ತು ಸಪೋಟಾ ತೋಟಗಳ ನಿರ್ವಹಣೆಯಾಗಿಲ್ಲ, ಕೃಷಿ ಕಾರ್ಮಿಕರಿಲ್ಲ, ಫಾರ್ಮ್ ಸೂಪರಿಂಟೆಂಡೆಂಟ್ ಇಲ್ಲ, ಕೃಷಿ ವಿಜ್ಞಾನಿಗಳಿಲ್ಲ. ಇಂತಹ ಎಲ್ಲಾ ಇಲ್ಲವುಗಳ ಮಧ್ಯೆ ಫಲವತ್ತಾದ ಭೂಮಿ ಸೊರಗುತ್ತಿದೆ.
ಹೆಬ್ಬಾಳ ಕೃಷಿ ಕ್ಷೇತ್ರಕ್ಕೆ ನೂರಾರು ವರ್ಷಗಳ ಸಾಧನೆಗಳ ಪರಂಪರೆಯಿದೆ. ಬಿತ್ತನೆ ಬೀಜಕ್ಕೆ, ಬೆಳೆಗಳ ರೋಗಗಳ ಹತೋಟಿಗೆ, ರೈತರಿಗೆ ಜಾನುವಾರುಗಳ ಪೂರೈಕೆಗೆ, ಕೃಷಿ ಉಪಕರಣಗಳ ತಯಾರಿಕೆಗೆ, ಕೃಷಿ ಶಾಲೆಗೆ, ರೈತರ ತರಬೇತಿಗೆ ಹೆಬ್ಬಾಳ ಕೃಷಿ ಕ್ಷೇತ್ರವು ಮನೆಮಾತಾಗಿತ್ತು. ಪರಂಪರೆಯ ಕೊಂಡಿ ಕಳಚಿಬಿದ್ದಿರುವ ಪ್ರಸ್ತುತ ಸನ್ನಿವೇಶದಲ್ಲಿ ಸಾಧನೆಗಳನ್ನು ಪುರುಜ್ಜೀವನಗೊಳಿಸಬೇಕಿದೆ. ಪುನರುಜ್ಜೀವನಕ್ಕಾಗಿ ಪ್ರಾಂಜಲ ಮನಸ್ಸುಗಳು ಹುಟ್ಟಿಕೊಳ್ಳಬೇಕಿದೆ. ಹಲವು ಶತಮಾನಗಳ ಕಾಲ ಹೆಬ್ಬಾಳ ಕೃಷಿ ಕ್ಷೇತ್ರ ಮುಂದುವರೆಯಬೇಕಿದೆ.
ಕೃಷಿ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು 31 ಎಕರೆ 6 ಗುಂಟೆ ವಿಸ್ತೀರ್ಣದ ಬೆಂಗಳೂರಿನ ಹೆಬ್ಬಾಳ ಕೃಷಿ ಫಾರ್ಮ್ ಅನ್ನು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಕಾಲದಲ್ಲಿ 1905ರಲ್ಲಿ ಸ್ಥಾಪಿಸಲಾಯಿತು. ಡಾ. ಅಡಾಲ್ಫ್ ಲೆಹ್ಮನ್‍ರವರು ಹೆಬ್ಬಾಳದ ಫಲವತ್ತಾದ ಭೂಮಿಯನ್ನು ಕೃಷಿ ಸಂಶೋಧನಾ ಕ್ಷೇತ್ರ ಸ್ಥಾಪಿಸಲು ಆಯ್ಕೆ ಮಾಡಿದರು. ತದನಂತರ, ಹಂತ ಹಂತವಾಗಿ ಹೆಬ್ಬಾಳ ಕೃಷಿ ಕ್ಷೇತ್ರವನ್ನು ವಿಸ್ತರಿಸಲಾಗಿದೆ. 1933 ರ ಹೊತ್ತಿಗೆ ಫಾರ್ಮಿನ ಒಟ್ಟು ವಿಸ್ತೀರ್ಣವು 500 ಎಕರೆಗಳಾಗಿತ್ತು. ಹೊಸದಾಗಿ ಸೇರಿಸಿಕೊಂಡ 400 ಎಕರೆಗಳ ಪೈಕಿ 100 ಎಕರೆ ಪ್ರದೇಶವನ್ನು ತಕ್ಷಣವೇ 1933ರಲ್ಲಿ ಕೃಷಿಗೆ ಬಳಸಿಕೊಳ್ಳಲಾಯಿತು. ಹೆಬ್ಬಾಳ ರೈಫಲ್ ರೇಂಜ್ ಕೂಡ ಇದರಲ್ಲಿ ಸೇರಿತ್ತು. ಕೆಲಕಾಲದ ನಂತರ, ಹೆಬ್ಬಾಳ ರೈಫಲ್ ರೇಂಜ್ ಅನ್ನು ಬೆಂಗಳೂರು ದಕ್ಷಿಣ ಭಾಗಕ್ಕೆ, ಅಗರಂಗೆ ಸ್ಥಳಾಂತರಿಸಲಾಯಿತು.

ಸ್ವಾತಂತ್ರ್ಯದ ನಂತರದಲ್ಲಿ ಹೆಬ್ಬಾಳ ಕೃಷಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯು ರಾಜ್ಯ ಸರ್ಕಾರದ್ದಾಯಿತು. ಹೆಬ್ಬಾಳ ಫಾರ್ಮ್ ಮೇಖ್ರಿ ವೃತ್ತದಿಂದ ಅಂದಾಜು ಎರಡು ಕಿಲೋಮೀಟರ್ ದೂರದಲ್ಲಿದೆ.
ಹೆಬ್ಬಾಳ ಫಾರ್ಮಿನಲ್ಲಿ ಉತ್ತಮ ಗುಣಮಟ್ಟದ ಬೆಲ್ಲ ಮತ್ತು ಸಕ್ಕರೆಯನ್ನು 1909ರಲ್ಲಿ ತಯಾರಿಸಲಾಗುತ್ತಿತ್ತು. ರಾಮಚಂದ್ರರಾವ್ ಎಂಬ ಫಾರ್ಮ್ ಮ್ಯಾನೇಜರ್ ಅವರು ಮಿ. ನೈಟ್ ಎಂಬ ವಿದೇಶಿ ತಜ್ಞರ ಬಳಿ ಬಾಂಬೆ ಸರ್ಕಾರದಲ್ಲಿ ಸಕ್ಕರೆ ತಯಾರಿಕೆಯ ವಿಧಾನವನ್ನು ಕಲಿತು ಬಂದಿದ್ದರು. ಸಕ್ಕರೆ ತಯಾರಿಕೆಯ ತರಬೇತಿಯನ್ನು ಹೆಬ್ಬಾಳದ ಫಾರ್ಮಿನಲ್ಲಿ ಪಡೆದು ಅದರ ಅನುಭವವನ್ನು 1933ರಲ್ಲಿ ಆರಂಭವಾದ ಮಂಡ್ಯದ ಸಕ್ಕರೆ ಕಾರ್ಖಾನೆಯಲ್ಲಿ ಅಳವಡಿಸಿಕೊಂಡಿರಬಹುದು.
ಕಡಿಮೆ ಸಿಬ್ಬಂದಿ – ಉತ್ತಮ ಕೊಡುಗೆ
ಕೃಷಿ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಲೆಸ್ಲಿ ಸಿ. ಕೋಲ್ಮನ್ ಅವರು ಮಾರ್ಚ್ 10, 1930ರಂದು ಸರ್ಕಾರದ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ಹೆಬ್ಬಾಳ ಕೃಷಿ ಕ್ಷೇತ್ರದಲ್ಲಿರುವ ಇಬ್ಬರೇ ಅಧಿಕಾರಿಗಳು ಉತ್ತಮ ದರ್ಜೆಯ ರಾಗಿ, ಕಬ್ಬು, ನೆಲಗಡಲೆ ಮತ್ತು ಹತ್ತಿಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದರು. ಆ ಇಬ್ಬರು ಅಧಿಕಾರಿಗಳು ವಿ. ಎನ್. ರಂಗನಾಥರಾವ್ ಮತ್ತು ಡಾ. ಬಾದಾಮಿಯವರು. ಡಾ. ಬಾದಾಮಿಯವರು ಸಂಶೋಧನೆಯ ಜೊತೆಗೆ ಕೃಷಿ ಶಾಲೆಯಲ್ಲಿ ಪಾಠವನ್ನೂ ಮಾಡುತ್ತಿದ್ದರು. ಭಾರತದ ಬೇರಾವುದೇ ಕೃಷಿ ಫಾರಮ್ಮಿನಲ್ಲಿ ಇಷ್ಟು ಕಡಿಮೆ ಸಿಬ್ಬಂದಿಯನ್ನು ಇಟ್ಟುಕೊಂಡು ಇಷ್ಟು ಉತ್ತಮ ಫಲಿತಾಂಶ ಕೊಟ್ಟ ಉದಾಹರಣೆಗಳಿಲ್ಲ ಎಂದರು ಕೋಲ್ಮನ್. ಆದರೆ ಬೇಸಾಯದಲ್ಲಿ ನಿರತರಾದ ಕೃಷಿ ಕಾರ್ಮಿಕರ ಮತ್ತು ಕಚೇರಿಯ ಒಟ್ಟು ಸಿಬ್ಬಂದಿ ಸಂಖ್ಯೆಯು 90.
ಬೆಂಗಳೂರಿನ ಹೆಬ್ಬಾಳ ಕೃಷಿ ಕ್ಷೇತ್ರ (ಈಗ ಮುಖ್ಯ ಸಂಶೋಧನಾ ಕೇಂದ್ರ, ಮೈನ್ ರೀಸರ್ಚ್ ಸ್ಟೇಷನ್, ಎಂಆರ್‌ಎಸ್ ಎಂದು ಕರೆಯಲಾಗುತ್ತಿದೆ) ಮತ್ತು ಮಂಡ್ಯದ ಇರ್ವಿನ್ ಕೆನಾಲ್ ಫಾರ್ಮ್ (ಈಗ ವಿಶ್ವೇಶ್ವರಯ್ಯ ಕೆನಾಲ್ ಫಾರ್ಮ್) ಹಲವು ಬೆಳೆಗಳ ಸಂಶೋಧನೆಗೆ ಪ್ರಮುಖ ತಾಣಗಳಾಗಿದ್ದವು. ಅಲ್ಲಿ ಸಂಶೋಧನೆಗಳ ಮೂಲಕ ಯಶಸ್ವಿಯಾದ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳು ರಾಜ್ಯದ ರೈತರಿಗೆ ಪೂರೈಕೆಯಾಗುತ್ತಿದ್ದವು.
ಹೆಬ್ಬಾಳ ಫಾರ್ಮಿನಲ್ಲಿ 1933ರಲ್ಲಿ ಒಟ್ಟು 77 ದಿನಗಳಲ್ಲಿ 44.41 ಇಂಚು ಮಳೆಯಾಗಿತ್ತು. ಅದರ ಹಿಂದಿನ ವರ್ಷ ಒಟ್ಟು 62 ದಿನಗಳಲ್ಲಿ 29.95 ಇಂಚು ಮಳೆಯಾಗಿತ್ತು.
ಆಗಿನ ಬ್ರಿಟಿಷ್ ಭಾರತದಲ್ಲಿ ದೆಹಲಿಯಲ್ಲಿದ್ದ ಇಂಪಿರೀಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ (ಐಸಿಎಆರ್) ಎಂಬ ಸಂಸ್ಥೆಯ ನಿರ್ದೇಶನದ ಮೂಲಕ ಕೃಷಿ ಸಂಶೋಧನೆಗಳು ನಡೆಯುತ್ತಿದ್ದವು. ಹಲವು ಬೆಳೆ ತಳಿಗಳ ಸಂಶೋಧನೆಗಳು ಹೆಬ್ಬಾಳ ಫಾರ್ಮಿನಲ್ಲಿ ನಡೆದವು.
ಕೃಷಿ ಶಿಕ್ಷಣ
ಮೈಸೂರು ರಾಜ್ಯದ ಪ್ರಪಥಮ ಕೃಷಿ ಶಾಲೆಯು 1913ರಲ್ಲಿ ಆರಂಭವಾದಾಗ ಡಾ. ಲೆಸ್ಲೀ ಕೋಲ್‍ಮನ್ ಎಂಬ ಕೆನಡಾ ದೇಶದ ತಜ್ಞರು ಕೃಷಿ ಶಾಲೆಯ ಮೊದಲ ಪ್ರಾಂಶುಪಾಲರಾದರು. ಎರಡು ವರ್ಷಗಳ ಅವಧಿಯ ಲೈಸೆನ್ಷಿಯೇಟ್ ಇನ್ ಅಗ್ರಿಕಲ್ಚರ್ ಎಂಬ ಡಿಪ್ಲೊಮಾ ಶಿಕ್ಷಣವನ್ನು ನೀಡಲಾಗುತ್ತಿತ್ತು. ಮೆಟ್ರಿಕ್ಯುಲೇಷನ್ ಉತ್ತೀರ್ಣರಾದವರು ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಹರಾಗಿದ್ದರು. ರೈತರ ಮಕ್ಕಳೇ ವಿದ್ಯಾರ್ಥಿಗಳಾಗುತ್ತಿದ್ದುದರಿಂದ, ಅವರಿಗೆ ಇಂಗ್ಲಿಷ್ ಸರಿಯಾಗಿ ಬಾರದಿದ್ದುದರಿಂದ, ಕನ್ನಡ ಮಾಧ್ಯಮದಲ್ಲಿ ಕೃಷಿ ಶಿಕ್ಷಣವು ಜನವರಿ 1918ರಲ್ಲಿ ಆರಂಭವಾಯಿತು. ಮಹಿಳಾ ಅಭ್ಯರ್ಥಿಗಳು ಸಾಮಾನ್ಯವಾಗಿ ಯಾರೂ ಇರುತ್ತಿರಲಿಲ್ಲ. ಮೂರು ವರ್ಷದ ಡಿಪ್ಲೊಮಾ ಕೂಡ 1918ರಲ್ಲಿ ಆರಂಭಿಸಲಾಯಿತು. ಆ ತಂಡದ ವಿದ್ಯಾರ್ಥಿಗಳಿಗೆ 1923ರಲ್ಲಿ ಅಂತಿಮ ಪರೀಕ್ಷೆಗಳು ನಡೆದು ಎಲ್ಲಾ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಮೂವರು ಪ್ರಥಮ ದರ್ಜೆ ಪಡೆದರು.
ಕೃಷಿ ಇಲಾಖೆಯ ವಾರ್ಷಿಕ ವರದಿ 1932-33ರಲ್ಲಿ ತಿಳಿಸಿರುವಂತೆ, ಹೆಬ್ಬಾಳದ ಕೃಷಿ ಶಾಲೆಯ ಮೂರು ತರಗತಿಗಳಲ್ಲಿ ಒಟ್ಟು 84 ವಿದ್ಯಾರ್ಥಿಗಳಿದ್ದರು. ಅಂತಿಮ ವರ್ಷದ ಪರೀಕ್ಷೆಗೆ ಕುಳಿತ 29 ವಿದ್ಯಾರ್ಥಿಗಳ ಪೈಕಿ 21 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿದರು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆಯು 100ಕ್ಕೇರಿತು.

ಬೆಳೆ ಸಂಶೋಧನೆ
ಹಲವು ಬೆಳೆಗಳ ತಳಿ ಸಂಶೋಧನೆಗಳು ನಿರಂತರವಾಗಿ ನಡೆದವು. ವಿವಿಧ ಗೊಬ್ಬರಗಳನ್ನು ಬಳಸಿ ರಾಗಿ, ನೆಲಗಡಲೆ, ಆಲೂಗಡ್ಡೆ, ಭತ್ತ ಮತ್ತು ಕಬ್ಬಿನ ಅಧಿಕ ಇಳುವರಿ ಪಡೆಯಲು ಹಲವು ಸಂಶೋಧನೆಗಳಾದವು. ಒಟ್ಟು 29 ಬಗೆಯ ನೆಲಗಡಲೆ ತಳಿಗಳ ಇಳುವರಿ ಕುರಿತು ಸಂಶೋಧನೆ ನಡೆಯಿತು. ಸೆನಗಲ್, ಮಾರಿಷಿಯಸ್, ಬಾರ್ಬಡೋಸ್, ರೆಫಿಸ್ಕ್ಯೂ ಮತ್ತು ಬಸ್ಸಿ ನೆಲಗಡಲೆ ತಳಿಗಳಿಂದ ಶೇ. 30ರಿಂದ 40ರಷ್ಟು ಅಧಿಕ ಇಳುವರಿ ಬಂತು. ಹೆಬ್ಬಾಳ ಅವರೆಯೂ ಜನಪ್ರಿಯವಾಯಿತು.
ರಂಗೂನ್, ಅಮೆರಿಕನ್ ಮತ್ತು ಪಂಜಾಬ್ ಹಲಸಂದೆಗಳ ಇಳುವರಿ ಪ್ರಯೋಗ, ಮಳವಳ್ಳಿ, ನಗರ ಮತ್ತು ದೊಡ್ಡಬಳ್ಳಾಪುರದ ಮಾವು ತಳಿಗಳ ಇಳುವರಿ ಪ್ರಯೋಗ ನಡೆಯಿತು. ಬುಕ್ಕಾಪಟ್ಟಣ, ಚಿತ್ತ ಹರಳು, ಸೆಟ್ಟಿಹಳ್ಳಿ, ಚನ್ನಪಟ್ಟಣ ಮತ್ತು ಬೊಮ್ಮನಹಳ್ಳಿ ಹರಳು ತಳಿಗಳನ್ನು ಪರೀಕ್ಷಿಸಿ, ಎಚ್ -1 ಎಂಬ ಹರಳು ತಳಿಯನ್ನು ಅಭಿವೃದ್ಧಿಪಡಿಸಲಾಯಿತು. ಹತ್ತಿಯಲ್ಲಿ ಕೆಂಪು ಎಲೆರೋಗದ ಹತೋಟಿ ಪ್ರಯೋಗ ನಡೆಯಿತು.
ಗೊಬ್ಬರ ಸಂಶೋಧನೆ
ನೈಟ್ರೋಜನ್‍ಯುಕ್ತ ಗೊಬ್ಬರ, ಸೈನಾಮೈಡ್, ಅಮೋನಿಯಮ್ ಸಲ್ಪೇಟ್ ಮತ್ತು ಕಡಲೇಕಾಯಿ ಹಿಂಡಿಯನ್ನು ಗೊಬ್ಬರವಾಗಿ ಬಳಸಿ, ಉತ್ಪಾದನೆಯ ಪರಿಣಾಮಗಳನ್ನು ದಾಖಲಿಸಿದರು. ಅಮೋನಿಯಮ್ ಸಲ್ಪೇಟ್ ಗೊಬ್ಬರವು ಕ್ಯಾಲ್ಸಿಯಂ ಸೈನಾಮೈಡ್, ಸೋಡಿಯಂ ನೈಟ್ರೇಟ್ ಮತ್ತು ಕಡಲೇಕಾಯಿ ಹಿಂಡಿಗಿಂತ ಉತ್ತಮ ಎಂಬುದನ್ನು ಕಂಡುಕೊಳ್ಳಲಾಯಿತು. ಹಸಿರೆಲೆ ಗೊಬ್ಬರದ ಬಳಕೆಯನ್ನು ಉತ್ತೇಜಿಸಲಾಯಿತು.
ಕಬ್ಬಿನ ಸಂಶೋಧನೆ
ಹೆಬ್ಬಾಳ ಕೆರೆಯ ಗದ್ದೆ ಪ್ರದೇಶ ಅಥವಾ ಖಾನೆಯ ನೀರಾವರಿಯಲ್ಲಿ ಎಚ್. ಎಂ. 001, ಎಚ್. ಎಂ. 004 ಮತ್ತು ಎಚ್. ಎಂ. 320 ಎಂಬ ಅಧಿಕ ಉತ್ಪಾದನೆಯ ಕಬ್ಬಿನ ತಳಿಗಳನ್ನು ಅಭಿವೃದ್ಧಿಪಡಿಸಲಾಯಿತು. ವಿದೇಶಿ ಕಬ್ಬು, ಹೆಬ್ಬಾಳದ ಕಬ್ಬು ಮತ್ತು ಕೊಯಮತ್ತೂರಿನ ಕಬ್ಬಿನ ತಳಿಗಳನ್ನು ಬೆಳೆದು ಇಳುವರಿಯ ಪ್ರಮಾಣವನ್ನು ದಾಖಲು ಮಾಡಿದರು. ದಪ್ಪ ಕಬ್ಬನ್ನು ಹೆಬ್ಬಾಳ ಮತ್ತು ಮಂಡ್ಯದ ಇರ್ವಿನ್ ಕೆನಾಲ್ ಕ್ಷೇತ್ರದಲ್ಲಿ ಬೆಳೆದರು.

ಭತ್ತದ ಸಂಶೋಧನೆ
ಹೆಬ್ಬಾಳ ಫಾರ್ಮಿನ ಭತ್ತದ ಮಡುಗಳಲ್ಲಿ ಭತ್ತದ ಕಾಂಡ ಕೊರೆಯುವ ಹುಳುಗಳ ಬಾಧೆಯನ್ನು ಋತುಮಾನಕ್ಕೆ ತಕ್ಕಂತೆ ತಡೆಯುವ ಕ್ರಮಗಳನ್ನು ಅನುಸರಿಸಿ ಸಂಶೋಧನೆ ನಡೆಸಿದರು. ಈಗ ಹೆಬ್ಬಾಳ ಮೇಲ್ಸೇತುವೆ, ರಿಂಗ್ ರೋಡ್ ಮತ್ತು ಬೆಂಗಳೂರು ಮಹಾನಗರ ಸಾರಿಗೆಯ ಡಿಪೋ ಇರುವ ಕಡೆಯಲ್ಲಿ ಹಲವಾರು ಭತ್ತ ಮತ್ತು ಕಬ್ಬಿನ ಗದ್ದೆಗಳಿದ್ದವು. ಹೆಬ್ಬಾಳ ಕೆರೆಯ ನೀರು ಮತ್ತು ರೂ. 1500 ಖರ್ಚಿನಲ್ಲಿ ತೋಡಿಸಿದ್ದ ಒಂದು ಚಕ್ರಬಾವಿಯೂ ಇತ್ತು. ಹೆಬ್ಬಾಳ ಕೆರೆಯ ನೀರು ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಮೂಲಗಳಲ್ಲೊಂದಾಗಿತ್ತು. ಪಕ್ಕದ ಗಂಗೇನಹಳ್ಳಿಯು ಬ್ರಿಟಿಷರ ನಾಮಕರಣದಲ್ಲಿ ‘ವಾಟರ್ ವರ್ಕ್ಸ್ ವಿಲೇಜ್’ ಆಗಿತ್ತು!
ಜಾನುವಾರು ಕ್ಷೇತ್ರ
ಕೃಷಿ ಡಿಪ್ಲೊಮೊ ವಿದ್ಯಾರ್ಥಿಗಳಿಗೆ ಪಶುಸಂಗೋಪನೆ ಮತ್ತು ಪಶುವೈದ್ಯಕೀಯದ ತರಬೇತಿ ದೊರೆಯುವಂತಾಗಲು 1916ರಲ್ಲಿ ಒಂದು ಪಶುವೈದ್ಯಕೀಯ ಆಸ್ಪತ್ರೆಯನ್ನು ಹೆಬ್ಬಾಳ ಫಾರ್ಮಿನಲ್ಲಿ ಹಂಗಾಮಿಯಾಗಿ ತೆರೆದು 1920ರಲ್ಲಿ ಖಾಯಂಗೊಳಿಸಲಾಯಿತು. ಡೇರಿ ಫಾರ್ಮ್, ಕುರಿ ಫಾರ್ಮ್ ಮತ್ತು ಕೋಳಿ ಫಾರ್ಮ್‍ಗಳು ಆರಂಭವಾದವು. ಕುರಿ ಫಾರ್ಮಿನಲ್ಲಿ ಆಫ್ರಿಕಾ ದೇಶದಿಂದ ಆಮದು ಮಾಡಿಕೊಂಡ ಮೆರಿನೋ ಕುರಿಯಿಂದ ಪಡೆದ ಮಿಶ್ರತಳಿ ಕುರಿಗಳನ್ನು ರೈತರಿಗೆ ಹಂಚಲಾಯಿತು. ದನಕರುಗಳನ್ನು ರೈತರಿಗೆ ಪೂರೈಸಲಾಗುತ್ತಿತ್ತು. ಸ್ಥಳೀಯ ಹುಲ್ಲು ಮತ್ತು ಮೇವು ಬೆಳೆಗಳ ಸಂಶೋಧನೆಯೂ ನಡೆಯಿತು. ಕೆಲ ಬ್ರಾಯ್ಲರ್ ಕೋಳಿಗಳು, ಗಿರಿರಾಜ ಮತ್ತು ಗಿರಿರಾಣಿ ಕೋಳಿಗಳನ್ನು 1980-90ರ ದಶಕದಲ್ಲಿ ಬಿಡುಗಡೆ ಮಾಡಲಾಯಿತು.

ಸಸ್ಯ ಉದ್ಯಾನದ ನಿರ್ಮಾಣ
ಕೃಷಿ ಡಿಪ್ಲೊಮೊ ವಿದ್ಯಾರ್ಥಿಗಳ ಕಲಿಕೆಗಾಗಿ ಸಸ್ಯೋದ್ಯಾನವನ್ನು ನಿರ್ಮಿಸಲಾಯಿತು. ಈಗ ಅಂತಹುದೇ ಒಂದು ಸಸ್ಯೋದ್ಯಾನವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿದೆ. ಜಿಕೆವಿಕೆಯ ಸಸ್ಯ ಉದ್ಯಾನದಲ್ಲಿ ವಿವಿಧ ರೀತಿಯ ಸಸ್ಯ ಪ್ರಬೇಧಗಳಿರುವುದರಿಂದ ರಾಜ್ಯ ಸರ್ಕಾರವು 2010ರಲ್ಲಿ ‘ಜೀವವೈವಿಧ್ಯ ಪಾರಂಪರಿಕ ತಾಣ (Biodiversity Heritage Site)’ ಎಂದು ಘೋಷಿಸಿದೆ. ಅಂತಹ ಘೋಷಣೆಯಿಂದ ಅದೊಂದು ಸಂರಕ್ಷಿತ ತಾಣವಾಗಿದೆ. ಅದಕ್ಕೆ ‘ಮಹಾತ್ಮ ಗಾಂಧಿ ಸಸ್ಯ ಉದ್ಯಾನ’ ಎಂಬ ಹೆಸರನ್ನಿಡಲಾಗಿದೆ.
ರಾಗಿ ಇಳುವರಿಯ ಸಂಶೋಧನೆ
ವಿವಿಧ ರೀತಿಯ ಗೊಬ್ಬರಗಳನ್ನು ಬಳಸಿ, ರಾಗಿಯಲ್ಲಿ ಅಧಿಕ ಇಳುವರಿ ಪಡೆಯುವ ಕುರಿತು ಸಂಶೋಧನೆ ನಡೆದಿದೆ. ಕರಿರಾಗಿಯಲ್ಲಿ ಪಿರಿಕ್ಯುಲೇರಿಯಾ ಎಂಬ ಶಿಲೀಂಧ್ರ ಸೋಂಕನ್ನು ಹತೋಟಿಗೆ ತಂದರು. ಹೈನು ರಾಗಿ ಉತ್ತಮ ಇಳುವರಿಯನ್ನು ಕೊಟ್ಟಿದ್ದರಿಂದ ಇತರೆ ಫಾರ್ಮುಗಳಲ್ಲಿ ಅದರ ಇಳುವರಿ ಪರೀಕ್ಷೆ ಮಾಡಿದರು. ಹುಲ್ಲುಬೆಳೆ ರಾಗಿಯೂ ಪ್ರಯೋಗಕ್ಕೊಳಗಾಯಿತು.

ಡಾ. ಲೆಸ್ಲಿ ಕೋಲ್ಮನ್ ಅವರು 1918ರಲ್ಲಿ ಎಚ್-22 ಎಂಬ ರಾಗಿಯನ್ನು ಬಿಡುಗಡೆ ಮಾಡಿದರು. ಅದು ಎಕರೆಗೆ 5.26ರಿಂದ 7.29 ಕ್ವಿಂಟಾಲ್ ಇಳುವರಿ ಕೊಡುತ್ತಿತ್ತು. ಆದರೆ, ಕೋಲ್ಮನ್ ಅವರು ರಾಗಿ ತಳಿಗಳ ಮಧ್ಯೆ ಸಂಕರಣ ಮಾಡಲಿಲ್ಲ ಎಂಬ ತಿಳಿವಳಿಕೆಯಿದೆ. ಯಾಕೆಂದರೆ, ರಾಗಿಯೊಂದು ಸ್ವಕೀಯ ಪರಾಗಸ್ಪರ್ಶದ ಬೆಳೆ. ಇಡೀ ಪ್ರಪಂಚದಲ್ಲೇ ಯಾವ ವಿಜ್ಞಾನಿಯೂ ರಾಗಿಯನ್ನು ಸಂಕರಣಕ್ಕೆ ಒಳಪಡಿಸಿ ಯಶಸ್ವಿಯಾಗಲಿಲ್ಲ. ಯಶಸ್ವಿಯಾದವರು ರಾಗಿ ಲಕ್ಷ್ಮಣಯ್ಯನವರು ಮಾತ್ರ. ಅವರೇ ಕಂಡುಕೊಂಡ ವಿಶೇಷ ಸಂಪರ್ಕ ಪದ್ದತಿ (ಸ್ಪೆಷಲ್ ಕಾಂಟ್ಯಾಕ್ಟ್ ಮೆಥಡ್) ಮೂಲಕ ಅದನ್ನವರು ಮಂಡ್ಯದ ಇರ್ವಿನ್ ಕೆನಾಲ್ ಫಾರಮ್ಮಿನಲ್ಲಿ ಸಾಧಿಸಿದರು. ಮೊದಲ ಪಾದದ ಸಂಶೋಧನೆಯಲ್ಲಿ 1951ರಿಂದ 1964ರವರೆಗೆ ಅರುಣ, ಉದಯ, ಅನ್ನಪೂರ್ಣ, ಪೂರ್ಣ, ಕಾವೇರಿ ಮತ್ತು ಶಕ್ತಿ ರಾಗಿ ತಳಿಗಳು ಹಾಗೂ ಎರಡನೇ ಪಾದದಲ್ಲಿ 1964ರಿಂದ 1984ರವರೆಗೆ ಇಂಡಾಫ್ 1 ರಿಂದ ಇಂಡಾಫ್ 15ರವರೆಗಿನ ಅಧಿಕ ಇಳುವರಿಯ ರಾಗಿ ತಳಿಗಳನ್ನು ಲಕ್ಷ್ಮಣಯ್ಯನವರು ಬಿಡುಗಡೆ ಮಾಡಿದರು. ರಾಗಿ ಲಕ್ಷ್ಮಣಯ್ಯನವರು ಕೊಟ್ಟ ರಾಗಿ ತಳಿಗಳು ಎಕರೆಗೆ 15ರಿಂದ 30 ಕ್ವಿಂಟಾಲ್ ಇಳುವರಿ ಕೊಟ್ಟವು.
ಕೃಷಿ ಇಂಜಿನಿಯರಿಂಗ್ ಕೆಲಸ
ಆಲೆಮನೆಗಳಲ್ಲಿ ಬೆಲ್ಲ ತಯಾರಿಕೆಗಾಗಿ ಸುಧಾರಿತ ಒಲೆಗಳನ್ನು ಹೆಬ್ಬಾಳದ ಫಾರ್ಮಿನ ವರ್ಕ್‍ಶಾಪಿನಲ್ಲಿ ಉತ್ಪಾದಿಸಿ ರೈತರಿಗೆ ಪೂರೈಸಿದರು. ಆಲೆಮನೆಗೆ ಬೇಕಾಗುವ ಪರಿಕರಗಳನ್ನು ಹೆಬ್ಬಾಳ ಫಾರ್ಮಿನಲ್ಲಿ ಉತ್ಪಾದಿಸಿದರು. ಜೇನು ಗೂಡಿನಿಂದ ಜೇನು ತುಪ್ಪ ಹಿಂಡಿಕೊಳ್ಳುವ ಆರು ರೂಪಾಯಿಗೆ ಸಿಗುವ ಅಗ್ಗದ ಪರಿಕರವನ್ನು ವಿನ್ಯಾಸಗೊಳಿಸಿ ಮಾರಾಟ ಮಾಡಿದರು. ಕೃಷಿ ಭೂಮಿಯಲ್ಲಿ ಬದುಗಳನ್ನು ನಿರ್ಮಿಸಲು ಎತ್ತುಗಳು ಎಳೆಯಬಹುದಾದ ಪರಿಕರವೂ ತಯಾರಾಯಿತು. ಕೃಷಿ ಇಲಾಖೆಯು ವಿನ್ಯಾಸಗೊಳಿಸಿದ ಕೂರಿಗೆಯನ್ನು ಹೆಬ್ಬಾಳ ಫಾರ್ಮಿನಲ್ಲಿ ಪ್ರಾತ್ಯಕ್ಷಿಕೆಯಾಗಿ ಬಳಸಿದರು. ಹೆಬ್ಬಾಳದ ಮೈಸೂರು ಸೀರಮ್ ಸಂಸ್ಥೆಗೆ ಬೇಕಾದ ಪ್ರಾಣಿಗಳ ಮೇವುಣಿಕೆ ಪರಿಕರಗಳನ್ನು ಇದೇ ವರ್ಕ್‍ಶಾಪಿನಲ್ಲಿ ತಯಾರಿಸಿ ಕೊಡಲಾಗುತ್ತಿತ್ತು. ಹೆಬ್ಬಾಳ ಫಾರ್ಮಿನ ವಿವಿಧ ವಿಭಾಗಗಳಿಗೆ ಬೇಕಾದ ವಸ್ತುಗಳನ್ನು ವರ್ಕ್‍ಶಾಪಿನಲ್ಲಿ ವಿನ್ಯಾಸಗೊಳಿಸಿ ಉತ್ಪಾದಿಸಲಾಗುತ್ತಿತ್ತು. ಕೋಲಾರದ ಕಬ್ಬಿಣ ನೇಗಿಲಿಗಿಂತ ಹೆಬ್ಬಾಳ ನೇಗಿಲು ರೈತರ ಮನೆಮಾತಾಯಿತು. ಕೊಳೆರೋಗಕ್ಕೆ ಔಷಧಿ ಸಿಂಪಡಣೆಗೆ ಸ್ಪ್ರೇಯರ್‍ಗಳನ್ನು ತಯಾರಿಸಿದರು.
ರಾಯಗಡದ ನವಾಬರಿಗೆ ತರಬೇತಿ
ಹಿಂದೂಸ್ತಾನ್ ನೇಗಿಲು, ಯೂರೇಕಾ ನೇಗಿಲು, ಕೂಪರ್ ಸಂಖ್ಯೆ 26 ಮತ್ತು ಕೆಲವು ದೇಸಿ ನಿರ್ಮಿತ ನೇಗಿಲುಗಳ ಕಾರ್ಯಕ್ಷಮತೆಯನ್ನು ಹೆಬ್ಬಾಳ ಫಾರ್ಮಿನಲ್ಲಿ ಪರೀಕ್ಷಿಸಲಾಯಿತು. ಹುಲ್ಲು ಕತ್ತರಿಸುವ (ಚಾಫ್ ಕಟ್ಟರ್) ಯಂತ್ರವನ್ನು ಹೆಬ್ಬಾಳ ಫಾರ್ಮಿನ ಜಾನುವಾರು ಸಂತಾನೋತ್ಪತ್ತಿ ಕೇಂದ್ರದಲ್ಲಿ ಬಳಸಿದರು. ವರ್ಕ್‍ಶಾಪಿನಲ್ಲಿ ವಿದ್ಯುತ್ ಚಾಲಿತ ಯಂತ್ರಗಳನ್ನು ಅಳವಡಿಸಿದರು. ದೇಶಿ ಕೃಷಿ ಪರಿಕರಗಳ ತಯಾರಿಕೆಯಾಯಿತು. ಕೃಷಿಗೆ ಸಂಬಂಧಿಸಿದ ಬಡಗಿ ಮತ್ತು ಕಮ್ಮಾರಿಕೆ ಕೌಶಲ್ಯಗಳ ತರಬೇತಿಗಾಗಿ ವಾರಕ್ಕೊಮ್ಮೆ ಪ್ರಾಯೋಗಿಕ ತರಗತಿಗಳನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗುತ್ತಿತ್ತು. ಮಹಾರಾಷ್ಟ್ರದ ರಾಯಗಡದ ಬಳಿಯ ಜಂಜಿರಾದ ನವಾಬ್‍ರವರು ಎರಡು ದಿನಗಳ ಕಾಲ 1933ರಲ್ಲಿ ಹೆಬ್ಬಾಳದ ವರ್ಕ್‍ಶಾಪಿನಲ್ಲಿ ತರಬೇತಿ ಪಡೆದುಹೋದರು.

****
ಇದೀಗ ಹೆಬ್ಬಾಳ ಕೃಷಿ ಕ್ಷೇತ್ರದ ವಿಸ್ತೀರ್ಣವು ಸುಮಾರು 293 ಎಕರೆಗಳಿಗೆ ಕುಸಿದಿದೆ. ಬೆಂಗಳೂರು ಕೃಷಿ ವಿವಿಯಿಂದ ಪಶು ವಿವಿಗೆ ಹೆಬ್ಬಾಳ ಕೃಷಿ ಕ್ಷೇತ್ರವನ್ನು 2005 ಮತ್ತು 2020ರಲ್ಲಿ ಪಡೆದುಕೊಂಡ ಮೇಲೆ ಸಾಕಷ್ಟು ಪ್ರಮಾಣದ ಭೂಮಿಯ ಉಳುಮೆಯಾಗಿಲ್ಲ. ಅಲ್ಲಿ ಕೃಷಿ ಶಾಲೆಗಾಗಿ ಬಳಸಿಕೊಂಡಿದ್ದ, ಡಾ. ಲೆಸ್ಲಿ ಕೋಲ್ಮನ್ ಅವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಪಾರಂಪರಿಕ ಕಟ್ಟಡಗಳನ್ನು ಕಾಪಾಡಿಕೊಂಡಿಲ್ಲ. ತೆಂಗು ಮತ್ತು ಸಪೋಟಾ ತೋಟಗಳ ನಿರ್ವಹಣೆಯಾಗಿಲ್ಲ, ಕೃಷಿ ಕಾರ್ಮಿಕರಿಲ್ಲ, ಫಾರ್ಮ್ ಸೂಪರಿಂಟೆಂಡೆಂಟ್ ಇಲ್ಲ, ಕೃಷಿ ವಿಜ್ಞಾನಿಗಳಿಲ್ಲ. ಇಂತಹ ಎಲ್ಲಾ ಇಲ್ಲವುಗಳ ಮಧ್ಯೆ ಫಲವತ್ತಾದ ಭೂಮಿ ಸೊರಗುತ್ತಿದೆ. ಮೈಸೂರು ರಾಜ್ಯದ ಬೆಳೆಗಳ ‘ಮುಖ್ಯ ಸಂಶೋಧನಾ ಕೇಂದ್ರ’ವನ್ನು ಇನ್ನಷ್ಟು ಶತಮಾನಗಳ ಕಾಲ ಕಾಪಾಡಿಕೊಳ್ಳಬೇಕಿದೆ. ಅದಕ್ಕಾಗಿ ಪ್ರಾಂಜಲ ಮನಸ್ಸುಗಳು ಹುಟ್ಟಬೇಕಿದೆ. ಸಮಗ್ರ ಕೃಷಿ ವಿಶ್ವವಿದ್ಯಾಲಯಗಳನ್ನು ರಚಿಸಲು ಸರ್ಕಾರವು ಇದೀಗ 2025ರಲ್ಲಿ ಮುಂದಟಿಯಿಟ್ಟಿದೆ. ಅದು ತುರ್ತಾಗಿ ಆಗಬೇಕಿದೆ. ಹೆಬ್ಬಾಳ ಕೃಷಿ ಕ್ಷೇತ್ರವು ಮತ್ತೆ ವೈಭವದಿಂದ ಕಂಗೊಳಿಸಬೇಕಿದೆ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ




