ಇತ್ತೀಚಿನ ವರ್ಷಗಳಲ್ಲಿ ಅಕಾಡೆಮಿಗಳು, ವಿಶ್ವವಿದ್ಯಾಲಯಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ನಡೆದ ನೇಮಕಾತಿಗಳನ್ನು ನೋಡಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ – ಇಲ್ಲಿ ವಿದ್ವತ್ತಿಗಿಂತ ವಿಚಾರಧಾರೆಯ ನಿಷ್ಠೆ ಮುಖ್ಯವಾಗಿದೆ. ದಲಿತ–ಬಹುಜನ, ಅಲ್ಪಸಂಖ್ಯಾತ, ಸ್ತ್ರೀವಾದಿ ಮತ್ತು ಪ್ರಗತಿಪರ ಚಿಂತನೆಗಳನ್ನು ಪ್ರತಿನಿಧಿಸುವ ವಿದ್ವಾಂಸರನ್ನು ಕ್ರಮಬದ್ಧವಾಗಿ ಅಂಚಿಗೆ ತಳ್ಳಲಾಗಿದೆ.
ಪ್ರತಿಷ್ಠಿತ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಗೋಷ್ಠಿ ನಡೆಯಬೇಕು. ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಕುಲಪತಿಗಳು ಮಾತನಾಡುತ್ತಿದ್ದಾರೆ. ವಿಷಯಕ್ಕೆ ಸಂಬಂಧವಿರದ ಕ್ಷುಲ್ಲಕ ಅಸಭ್ಯ ಹರಟೆ. ಆತ ಮಾತಿನ ನಡುವೆ ಸಭಿಕರನ್ನು ಕೇಳುತ್ತಾರೆ, “ನಿಮಗೆ ಬೋರ್ ಹೊಡೆಸುತ್ತಿಲ್ಲವಷ್ಟೇ, ಮುಜುಗರವಾಗುತ್ತಿದೆಯೇ ?” ಮುಂದಿನ ಪಂಕ್ತಿಯಲ್ಲಿ ಆಸೀನರಾಗಿದ್ದ ಖ್ಯಾತ ಕತೆಗಾರರೊಬ್ಬರು ಪ್ರತಿಕ್ರಿಯಿಸುತ್ತಾರೆ- “ವಿಷಯದ ಬಗ್ಗೆ ಮಾತನಾಡಿ ಸರ್”. ಅಷ್ಟಕ್ಕೇ ಕುಲಪತಿಗಳಿಗೆ ಸಿಟ್ಟು ನೆತ್ತಿಗೇರುತ್ತದೆ. ಆ ಕತೆಗಾರರ ಹೆಸರು ಏನೆಂದು ಕೇಳಿ, “ನಿಮಗೆ ಒಬ್ಬ ಕುಲಪತಿಯೊಂದಿಗೆ ಹೇಗೆ ಮಾತನಾಡಬೇಕೆಂಬ ವಿವೇಕವೂ ಇಲ್ಲವೇ?” ಎನ್ನುತ್ತ ಆ ವೀಸಿ ಅಲ್ಲಿ ಉಪಸ್ಥಿತರಿದ್ದ ಆಯೋಜಕರನ್ನು ಉದ್ದೇಶಿಸಿ, ’ಇವರನ್ನು ಆಮಂತ್ರಿಸಿದವರ್ಯಾರು?’ ಎಂದು ಅಬ್ಬರಿಸುತ್ತಲೇ ಆ ಕತೆಗಾರರಿಗೆ- “ನೀವು ಇಲ್ಲಿಂದ ಹೊರಡಿ” ಎಂದು ಒರಟಾಗಿ ಎಲ್ಲ ಸಭಿಕರ ಮುಂದೆಯೇ ಅವರನ್ನು ಸಭೆಯಿಂದ ಆಚೆಗೆ ಹೋಗುವಂತೆ ಮಾಡಿದ್ದಲ್ಲದೇ, ಇನ್ನು ಮುಂದೆ ಯಾವ ಕಾರ್ಯಕ್ರಮಗಳಿಗೂ ಇವರನ್ನು ಕರೆಯಕೂಡದು” ಎಂದು ಫತ್ವಾ ಹೊರಡಿಸುತ್ತಾರೆ. ಉಳಿದವರಿಗೆ –“ಯಾರಿಗೆ ಇದು ಸಮ್ಮತವಲ್ಲವೋ ಅಸಹಜವೆನಿಸುತ್ತದೋ ಅವರೂ ಸಭೆಯಿಂದ ಹೊರಹೋಗಬಹುದು” ಎನ್ನುತ್ತಾರೆ. ಸಭೆಯಲ್ಲಿದ್ದ ಉಳಿದ ಜನ ಮೌನವಾಗಿ ಕಲ್ಲಿನಂತೆ ಕುಳಿತು ನೋಡುತ್ತಾರೆ.
ಓದಿ ಏನೇನಿಸುತ್ತದೆ?
ಛತ್ತೀಸ್‌ಗಢದ ಗುರು ಘಾಸಿದಾಸ್ ವಿಶ್ವವಿದ್ಯಾಲಯದಲ್ಲಿ ನಡೆದ ಈ ಘಟನೆ ಇಡೀ ಹಿಂದಿ ಸಾಹಿತ್ಯವಲಯವನ್ನು ಬೆಚ್ಚಿಬೀಳಿಸಿದೆ. ಬಹಳಷ್ಟು ಪರ-ವಿರೋಧದ ಚರ್ಚೆ ನಡೆದಿದೆ. ಇದು ನಮ್ಮ ಕಾಲದ ಉನ್ನತ ಶಿಕ್ಷಣ ಸಂಸ್ಥೆಗಳ ನೈತಿಕ ಅಧೋಗತಿಗೆ ಹಿಡಿದ ಕನ್ನಡಿ. ಜನವರಿ ಏಳರಂದು ಸಾಹಿತ್ಯ ಅಕಾಡೆಮಿ ಮತ್ತು ಗುರು ಘಾಸಿದಾಸ್ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಹಿತ್ಯಿಕ ಸಮ್ಮೇಳನದಲ್ಲಿ, ಖ್ಯಾತ ಹಾಗೂ ಪ್ರತಿಷ್ಠಿತ ಹಿಂದಿ ಕತೆಗಾರ, ಸಾಹಿತಿ ಮನೋಜ್ ರೂಪಡಾರನ್ನು ಸಾರ್ವಜನಿಕವಾಗಿ ಅವಮಾನಿಸಲಾಯಿತು. ಅಹಂಕಾರ ಹಾಗೂ ಉದ್ಧಟತನದಿಂದ ಲೇಖಕರನ್ನು ಅವಮಾನಿಸಿದವರು ವಿಶ್ವವಿದ್ಯಾಲಯದ ಕುಲಪತಿ ಅಲೋಕ್ ಕುಮಾರ್ ಚಕ್ರವಾಲ್.

ಸಾಹಿತ್ಯದಂತಹ ಗಂಭೀರ, ಸಂವೇದನಾಶೀಲ ಸಂವಾದ ನಡೆಯಬೇಕಾಗಿದ್ದ ವೇದಿಕೆಯಲ್ಲಿ ಕುಲಪತಿಗಳು ಅಶಿಷ್ಟ ಅಸಂಬದ್ಧ ಚಟಾಕಿ ಮಾತುಗಳನ್ನು ಆಡತೊಡಗುತ್ತಾರೆ. ಗೋಷ್ಠಿಯ ವಿಷಯದ ಬಗ್ಗೆ ಗೊತ್ತಿರದಿದ್ದಲ್ಲಿ, ತಕ್ಕ ಸಿದ್ಧತೆ ಮಾಡಿಕೊಂಡಿರದಿದ್ದಲ್ಲಿ ಅವರು ಕೊನೆಯಲ್ಲಿ ಮಾತನಾಡಬಹುದಿತ್ತು. “ಪ್ಲೀಸ್ ಸರ್, ವಿಷಯದ ಕುರಿತು ಮಾತನಾಡಿ” ಎಂದು ಆ ಲೇಖಕರು ಸಂಯಮದಿಂದ ತಡೆದದ್ದರಿಂದ ಅವರ ಅಹಂಕಾರಕ್ಕೆ ಪೆಟ್ಟುಬೀಳುತ್ತದೆ. ದುರಹಂಕಾರಿಗಳಿಗೆ ನ್ಯಾಯ ಸಮ್ಮತವಾದ ಮಾತು ರುಚಿಸುವುದಿಲ್ಲ. ಆದರೆ ಒಬ್ಬ ಗೌರವಯುತ, ಆಮಂತ್ರಿತ ಲೇಖಕರನ್ನು ಸಭೆಯಿಂದ ಹೊರಹಾಕಿದ್ದು ಅಸಭ್ಯ, ನಿಂದನೀಯ ವರ್ತನೆ ಅಲ್ಲವೇ?
ಸಾಹಿತ್ಯದ ಒಂದು ಕಾಲವೂ ಇತ್ತು- ಒಂದು ಕವಿತೆ ಆಡಳಿತಾರೂಢ ಸಿಂಹಾಸನವನ್ನು ನಡುಗಿಸಬಹುದಾಗಿದ್ದ ಕಾಲ. “ನನ್ನ ಕಾಲರ್ ಹಿಡಿದು ಪ್ರಶ್ನೆ ಕೇಳಿ” ಎನ್ನುವ ಜನನಾಯಕರಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಕ್ರಾಂತಿಗೀತೆಗಳ ಮಹಾಪೂರವೇ ದೇಶದಾದ್ಯಂತ ಹರಿಯಿತು. ಇಂದು ಅಧಿಕಾರದ ಸಭಾಂಗಣದಲ್ಲಿ ಚಪ್ಪಾಳೆ ಹೊಡೆಯುವವರ ಸಂಖ್ಯೆ ಎಷ್ಟು ಬೆಳೆದಿದೆಯೆಂದರೆ ಮೌನವಾಗಿ ಉಳಿದ ಕೈಗಳನ್ನು ಸುಲಭವಾಗಿ ಗುರುತಿಸಬಹುದು. ಇಂದಿನ ಕಾಲದ ಕೆಲವು ಸಾಹಿತಿಗಳು, ಬರೆಹಗಾರರು ಆಡಳಿತಾರೂಢ ಅಧಿಕಾರದ ಸಿಮೆಂಟ್ ಗಾರೆಯಲ್ಲಿ ಎಷ್ಟು ಸಿಕ್ಕಿಕೊಂಡಿದ್ದಾರೆಂದರೆ ಯಾವುದೇ ರೀತಿಯ ದಮನ, ದೌರ್ಜನ್ಯ, ಅನ್ಯಾಯ ಅವರನ್ನು ವಿಚಲಿತಗೊಳಿಸುತ್ತಿಲ್ಲ, ಆಕ್ರೋಶ ಹುಟ್ಟಿಸುತ್ತಿಲ್ಲ. ಬಾಯಿ ತೆಗೆದರೆ ಏನಾಗಿಬಿಡುವುದೋ, ಏನೆಲ್ಲ ಕಳೆದುಕೊಳ್ಳುತ್ತೇವೋ ಎಂಬ ಭಯ ಆಳುತ್ತಿದೆ ಇಲ್ಲಿ.
ವಾಸ್ತವದಲ್ಲಿ ಇಂತಹ ವ್ಯಕ್ತಿಗಳನ್ನು ಸಂಸ್ಥೆಗಳಲ್ಲಿ ಫ್ಯಾಸಿಸಂ ಪೋಷಣೆಗೆಂದೇ ಅಧಿಕಾರವು ಬೆಳೆಸುತ್ತಿದೆ. ಇದೇ ಅಜೆಂಡಾದ ಅಡಿಯಲ್ಲಿ ಇವರು ಓಲೈಕೆಯ ಚಾಪಲೂಸಿ ಕೃತ್ಯಗಳನ್ನು ಮಾಡಿ ಅಧಿಕಾರದಿಂದ ‘ಬಹುಮಾನ’ ಪಡೆಯುತ್ತಾರೆ. ಇಂದು ದೇಶದ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಇಂತಹ ಮಹಾಮೂರ್ಖ ಕುಲಪತಿಗಳ ಭಾರೀ ಪಡೆಯೇ ಇದೆ.
ಬುದ್ಧಿಗೇಡಿ ಹಾಗೂ ಅಹಂಕಾರಿ ಕುಲಪತಿ ಅಲೋಕ ಕುಮಾರ ಚಕ್ರವಾಲ್ ಅಂತಹ ವ್ಯಕ್ತಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತುಂಬುತ್ತಿದ್ದಾರೆ. ಅವರ ಅರ್ಹತೆಯ ಮಾನದಂಡ ವಿದ್ಯೆ, ಬೌದ್ಧಿಕತೆ ಅಥವಾ ನೈತಿಕತೆ ಅಲ್ಲ; ಬದಲಾಗಿ ಅಚಲವಾದ (ಬೂಟುನೆಕ್ಕುವಿಕೆ) ಪಾದಚುಂಬನ, ಬೆನ್ನೆಲುಬಿಲ್ಲದ ವಿಧೇಯತೆ ಮತ್ತು ಅಧಿಕಾರಪರ ನಿಷ್ಠೆಯೇ ಆಗಿದೆ.
ಇತ್ತೀಚೆಗೆ ನಿವೃತ್ತರಾದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‍ಯೂ) ಪ್ರಾಧ್ಯಾಪಕಿ ನಿವೇದಿತಾ ಮೆನನ್ ಸ್ವತಂತ್ರ ಪತ್ರಕರ್ತ ಅಮಿತ್ ಬರುವಾ ನಡೆಸಿದ ಒಂದು ಸಂವಾದದಲ್ಲಿ ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ, ಮುಕ್ತ ಚರ್ಚೆ, ಸ್ವಾತಂತ್ರ್ಯ ಹಾಗೂ ಸಮಾನತೆಯ ಮೇಲೆ ನಿರ್ಮಿತವಾಗಿದ್ದ ಜೆಎನ್‍ಯುವಿನ ವಾತಾವರಣ ಹೇಗೆ ಐಡಿಯೋಲಾಜಿಕಲ್ ಒತ್ತಡದಿಂದ ಕುಗ್ಗುತ್ತಿದೆ, ಅಕಾಡೆಮಿಕ್ ಹುದ್ದೆಗಳು, ಶಿಕ್ಷಕರ ನೇಮಕಗಳು ಹೇಗೆ ಐಡಿಯೋಲಾಜಿಕಲ್ ನಿಯಂತ್ರಣದ ಸಾಧನಗಳಾಗಿ ಮಾರ್ಪಟ್ಟಿವೆ, ರಾಷ್ಟ್ರೀಯ ಶಿಕ್ಷಣ ನೀತಿ (NEP) ಹೇಗೆ ಹಿಂದೂತ್ವದ ಸಾಂಸ್ಕೃತಿಕ ನಿಯಂತ್ರಣವನ್ನು ಸಾಧಿಸುತ್ತದೆ ಎಂಬ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
“ಜ್ಞಾನ ಉತ್ಪಾದನೆ ಮೇಲೆ ಒಂದು ವರ್ಗದ ಅಥವಾ ಒಂದು ಚಿಂತನೆಯ ಏಕಾಧಿಪತ್ಯ ಬಂದರೆ ಪ್ರಜಾ ಪ್ರಭುತ್ವ ಸತ್ತಂತೆ” ಎಂದು ಎಚ್ಚರಿಸಿದ್ದರು ಬಾಬಾ ಸಾಹೇಬ್ ಅಂಬೇಡ್ಕರ್. ಜಮ್ಮು ಕಾಶ್ಮೀರದ ಶ್ರೀ ಮಾತಾ ವೈಷ್ಣೋದೇವಿ ಮೆಡಿಕಲ್ ಕಾಲೇಜಿನ MBBS ಕೋರ್ಸ್‌ಗೆ ನೀಡಿದ್ದ ಅನುಮತಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ರದ್ದುಪಡಿಸಿದ ಘಟನೆಯನ್ನೇ ನೋಡಿ. ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನದೇಗುಲವನ್ನು ಮುಚ್ಚಿಸಿ ಗೆದ್ದೆವು ಎಂಬಂತೆ ಕೆಲ ಹಿಂದುತ್ವವಾದಿ ಗುಂಪುಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಫ್ಯಾಸಿಸಂ ಎನ್ನುವುದು ಸದಾ ಶಿಕ್ಷಣ ವಿರೋಧಿಯಾಗಿದೆ. ಮೊದಲ MBBS ಬ್ಯಾಚಿನಲ್ಲಿ 42 ಮಂದಿ ಮುಸ್ಲಿಂ ವಿದ್ಯಾರ್ಥಿಗಳು, 7 ಹಿಂದೂ, ಮತ್ತು1 ಸಿಖ್ ವಿದ್ಯಾರ್ಥಿ ನೀಟ್ ಮೂಲಕ ಪ್ರವೇಶ ಪಡೆದಿದ್ದರು. ಮುಸ್ಲಿಮರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಕೆಲವು ಗುಂಪುಗಳು ವಿರೋಧ ವ್ಯಕ್ತಪಡಿಸಿ ಕಾಲೇಜನ್ನು ಮುಚ್ಚುವಂತೆ ಒತ್ತಡ ತಂದು ಕಾಲೇಜನ್ನು ಮುಚ್ಚಿಸಿಯೂ ಬಿಟ್ಟರು!! ಯಾವ ಮಟ್ಟಕ್ಕೆ ಹೋಗಿದೆ ಈ ದ್ವೇಷ ರಾಜಕಾರಣ? ವಿದ್ಯಾರ್ಥಿಗಳ ಭವಿಷ್ಯದ ಗತಿಯೇನು? ಇದು ಶಿಕ್ಷಣದ ಹತ್ಯೆಯಲ್ಲದೇ ಮತ್ತೇನು? ಭಾರತ ಪ್ರಜಾಪ್ರಭುತ್ವದ ಜನನಿ ಎಂದು ನಮ್ಮ ಪ್ರಧಾನಿಗಳು ತಮ್ಮ ಭಾಷಣಗಳಲ್ಲಿ ಕೊಚ್ಚಿಕೊಳ್ಳುತ್ತಾರೆ. ಬಹು ಸಂಸ್ಕೃತಿಯ ಬಹು ಧರ್ಮದ ಈ ದೇಶದಲ್ಲಿ ಎಲ್ಲಾ ಜ್ಞಾನ ಕೇಂದ್ರಗಳನ್ನು ಸಂಘೀಕರಣಗೊಳಿಸುತ್ತಿರುವ ಈ ಸರ್ಕಾರದ ನಡೆ ಅತ್ಯಂತ ಖಂಡನೀಯ. ಈ ವಿಷಯದಲ್ಲಿ ದೇಶದ ನಾಗರಿಕರು ಪ್ರತಿಭಟಿಸದೇ ಹೋದರೆ ಮುಂದಿನ ದಿನಗಳು ಇನ್ನೂ ಕರಾಳವಾಗಲಿವೆ. ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿ ವೈದ್ಯಕೀಯ ಕಾಲೇಜನ್ನು ಉಳಿಸಬೇಕಾದ ಅಗತ್ಯವಿದೆ.

ಹೀಗಾಗಿ ಹೋಗಿದೆ ಇಂದಿನ ಭಾರತ. ಅಕಾಡೆಮಿಗಳ ಸಂಘೀಕರಣ ಮತ್ತು ಶಿಕ್ಷಣ ಸಂಸ್ಥೆಗಳ ಕೇಸರಿಕರಣವು ಜ್ಞಾನ, ಇತಿಹಾಸ ಮತ್ತು ಭಿನ್ನಮತದ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಿದೆ. ಸಾಹಿತ್ಯ ಅಕಾಡೆಮಿ, ಇತಿಹಾಸ ಸಂಶೋಧನಾ ಮಂಡಳಿ, ಸಾಮಾಜಿಕ ವಿಜ್ಞಾನ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳು – ಇವೆಲ್ಲವೂ ಒಂದು ಕಾಲದಲ್ಲಿ ಸಮಾಜದ ಪ್ರಶ್ನೆಗಳಿಗೆ ಧ್ವನಿಯಾಗಬೇಕಾದ ಸ್ವಾಯತ್ತ ಸಂಸ್ಥೆಗಳು. ಇಂದು ಅವುಗಳನ್ನು ಸಂಘಪರ ಚಿಂತನೆಯ ಅನುಮೋದನಾ ಕೇಂದ್ರಗಳಾಗಿ ಮಾರ್ಪಡಿಸಲಾಗುತ್ತಿದೆ. ಜ್ಞಾನ ಉತ್ಪಾದನೆಯ ಸ್ಥಳಗಳು ಪ್ರಚಾರದ ಕಚೇರಿಗಳಾಗುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ಅಕಾಡೆಮಿಗಳು, ವಿಶ್ವವಿದ್ಯಾಲಯಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ನಡೆದ ನೇಮಕಾತಿಗಳನ್ನು ನೋಡಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ – ಇಲ್ಲಿ ವಿದ್ವತ್ತಿಗಿಂತ ವಿಚಾರಧಾರೆಯ ನಿಷ್ಠೆ ಮುಖ್ಯವಾಗಿದೆ. ದಲಿತ–ಬಹುಜನ, ಅಲ್ಪಸಂಖ್ಯಾತ, ಸ್ತ್ರೀವಾದಿ ಮತ್ತು ಪ್ರಗತಿಪರ ಚಿಂತನೆಗಳನ್ನು ಪ್ರತಿನಿಧಿಸುವ ವಿದ್ವಾಂಸರನ್ನು ಕ್ರಮಬದ್ಧವಾಗಿ ಅಂಚಿಗೆ ತಳ್ಳಲಾಗಿದೆ. ಅವರ ಸ್ಥಾನವನ್ನು ಸಂಘ–ಹಿಂದೂತ್ವ ಚಿಂತನೆಯೊಂದಿಗೆ ಗುರುತಿಸಲ್ಪಡುವ ಮೂರ್ಖ ವ್ಯಕ್ತಿಗಳಿಂದ ತುಂಬಲಾಗುತ್ತಿದೆ.
ಶಿಕ್ಷಣ ಸಂಸ್ಥೆಗಳ ಕೇಸರಿಕರಣ ಅತ್ಯಂತ ಸ್ಪಷ್ಟವಾಗಿ ಪಠ್ಯಕ್ರಮದಲ್ಲಿ ನಡೆದಿದೆ. NCERT ಈಗಾಗಲೇ ಪಠ್ಯಪುಸ್ತಕಗಳಿಂದ ಡಾರ್ವಿನ್ನನ ವಿಕಾಸ ಸಿದ್ಧಾಂತ ಮೊದಲುಗೊಂಡು ಮೊಗಲ್ ಸಾಮ್ರಾಜ್ಯದ ಬಗ್ಗೆ, ಟಿಪ್ಪು, ನೆಹರೂ, ಅಂಬೇಡ್ಕರ್, ಫುಲೆ, ಪೆರಿಯಾರ್, ದಲಿತ ಚಳವಳಿ, ಸ್ತ್ರೀವಾದ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ, ವರ್ಗಸಂಘರ್ಷ – ಇವೆಲ್ಲವನ್ನೂ ಪಠ್ಯಗಳಿಂದ ತೆಗೆದುಹಾಕಿದೆ. ಬದಲಿಗೆ, ಪುರಾಣ, ಸಾಂಪ್ರದಾಯಿಕ ಆಚರಣೆಗಳು, ಮಹಾಕುಂಭಮೇಳದ ವೈಭವ, ಹಿಂದುತ್ವ ಮತ್ತು ಸಾಂಸ್ಕೃತಿಕ ರಾಷ್ಟ್ರವಾದವನ್ನು “ಜ್ಞಾನ” ಎಂದು ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳನ್ನು ಅಜ್ಞಾನಿಗಳನ್ನಾಗಿಸಿ “ಪ್ರಶ್ನಿಸುವ” ಪ್ರಜ್ಞಾವಂತ ನಾಗರಿಕರನ್ನಾಗಿಸುವ ಬದಲು ತನ್ನ ಸಿದ್ಧಾಂತದ ಅನುಯಾಯಿಯಾಗಿ ರೂಪಿಸುವ ಶಿಕ್ಷಣ ವ್ಯವಸ್ಥೆ ಇದಾಗಿದೆ. ಇತಿಹಾಸ ಸಂಶೋಧನಾ ಸಂಸ್ಥೆಗಳು ಇಂದು ಇತಿಹಾಸ ಬರೆಯುತ್ತಿಲ್ಲ ಬದಲಿಗೆ ಇದ್ದ ಇತಿಹಾಸವನ್ನು ತಿರುಚಿ ತಿದ್ದುತ್ತಿವೆ. ಪುರಾಣವನ್ನು ಇತಿಹಾಸದಂತೆ ಮಂಡಿಸುವುದು, ಜಾತಿ ವ್ಯವಸ್ಥೆಯ ಕ್ರೌರ್ಯವನ್ನು ಮಸುಕುಗೊಳಿಸುವುದು, ಬ್ರಾಹ್ಮಣೀಯ ಶೋಷಣೆಯ ವಿರುದ್ಧದ ಹೋರಾಟಗಳನ್ನು ಅಡಗಿಸುವುದು – ಇವೆಲ್ಲವೂ ಜ್ಞಾನವಲ್ಲ, ರಾಜಕೀಯ ಪ್ರಚಾರ. ಇದು ಭೂತಕಾಲದ ಮೇಲಿನ ದಾಳಿ ಮಾತ್ರವಲ್ಲ; ಭವಿಷ್ಯದ ಚಿಂತನೆ ಮೇಲಿನ ಹಿಡಿತ ಎನ್ನುತ್ತಾರೆ ಚಿಂತಕರು.
ಇನ್ನು ಸಾಹಿತ್ಯ ಅಕಾಡೆಮಿಗಳಂತಹ ಸಂಸ್ಥೆಗಳು ಲೇಖಕರ ಮೇಲೆ ಹಲ್ಲೆ, ಹತ್ಯೆಗಳಾಗುವ ಸಂದರ್ಭದಲ್ಲೂ ಮೌನ ವಹಿಸಿದವು. ಪತ್ರಕರ್ತೆ ಗೌರಿ ಲಂಕೇಶ್, ಚಿಂತಕರಾಗಿದ್ದ ಎಂ.ಎಂ. ಕಲಬುರ್ಗಿ, ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪಾನ್ಸರೆ ಹತ್ಯೆಗಳು ಕೂಡ ಇದೇ ಐಡಿಯೋಲಾಜಿಯ ಫಲಶ್ರುತಿಗಳು. ಸಾಂಸ್ಥಿಕವಾಗಿ ಸ್ಥಾಪಿತಗೊಂಡಿರುವ ಈ ಮೌನ ತಟಸ್ಥತೆಯಲ್ಲ; ಇದು ಭಯದ ಮೌನ. ಅನ್ಯಾಯದ ಮುಂದೆ ಮೌನವಾಗಿರುವ ಸಂಸ್ಥೆ ಸ್ವಾಯತ್ತವಲ್ಲ, ಅದು ಅಪರಾಧದ ಪಾಲುದಾರ. ಈಗ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ವಿಷಯದಲ್ಲಿಯೂ ಸರ್ಕಾರ ಮೂಗು ತೂರಿಸುತ್ತಿದೆ. ಸರ್ಕಾರದ ಅನುಮೋದನೆಯೂ ಅಗತ್ಯವಂತೆ. ಹೀಗೆ ತನ್ನ ಐಡಿಯೊಲಾಜಿಯನ್ನು ಮಾನದಂಡವನ್ನಾಗಿಸುವ, ಸ್ವಾಯತ್ತ ಸಂಸ್ಥೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಹುನ್ನಾರವಲ್ಲದೇ ಮತ್ತೇನಲ್ಲ.

ಇವೆಲ್ಲಾ ಘಟನೆಗಳು ಯಾವುದೋ ವೈಯಕ್ತಿಕ ಮತ್ಸರ, ಅಸಹಿಷ್ಣುತೆಯಿಂದ ಸೃಷ್ಟಿಯಾದವಲ್ಲ. ಒಟ್ಟಾರೆ ಇಂದು ದೇಶವನ್ನಾಳುತ್ತಿರುವ ಫಾಸಿಸ್ಟ್ ಅಧಿಕಾರದ ಮೂಲ ಸ್ವಭಾವದ ಪ್ರತಿಬಿಂಬ. ಶಿಕ್ಷಣ, ಪ್ರಗತಿಶೀಲತೆ, ವೈಜ್ಞಾನಿಕ ಚಿಂತನೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಜನತಾಂತ್ರಿಕ ಸಂವಾದಗಳನ್ನು ಸಹಿಸಲಾರದ ಅಧಿಕಾರ ವ್ಯವಸ್ಥೆ ದೇಶದ ಬಹುಪಾಲು ಜನರ ಮಿದುಳನ್ನು ಕಸಿ ಮಾಡಿ ತನ್ನಂತೆಯೇ ಮರುಸೃಷ್ಟಿಸಿಕೊಂಡಿದೆ. ಹೊಸ ಶಿಕ್ಷಣ ನೀತಿಯ ದಮನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಾಲೆಗಳು ಮುಚ್ಚಿಹೋಗಿ ದೇಶದ ಲಕ್ಷಾಂತರ ಕೆಳವರ್ಗದ ಬಡ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ.
ಇಂದು ಗೋದಿ ಮಾಧ್ಯಮಗಳು ಹೇಗೆ ನಿರ್ಲಜ್ಜವಾಗಿ ಅಧಿಕಾರದ ಪಾದಗಳಲ್ಲಿ ಉರುಳಾಡುತ್ತಿವೆಯೋ ಅದೇ ಮನೋಭಾವ ವಿಶ್ವವಿದ್ಯಾಲಯಗಳಲ್ಲಿಯೂ ಹರಡಿದೆ. ಕುಲಪತಿಗಳೆಂಬ ಹೆಸರಿನಲ್ಲಿರುವ ಈ ಅಧಿಕಾರಪರ ನೌಕರರು ತಮ್ಮ ಕುರ್ಚಿಯ ಭದ್ರತೆಗಾಗಿ ತಮ್ಮ ಸ್ವಾರ್ಥಕ್ಕಾಗಿ ಏನನ್ನಾದರೂ ಗಿಟ್ಟಿಸಿಕೊಳ್ಳುವ ದುರಾಸೆಯಲ್ಲಿ ಫ್ಯಾಸಿಸ್ಟ್ ಅಧಿಕಾರದ ನಿಗದಿತ ಅಜೆಂಡಾವನ್ನು ಹೊತ್ತುಕೊಂಡು ತಿರುಗುತ್ತಿದ್ದಾರೆ. ಆತ್ಮಸಾಕ್ಷಿಯನ್ನೇ ಗಿರವಿ ಇಟ್ಟಿರುವ ಇಂತಹವರು ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಿನ ಕಳಂಕ ಮಾತ್ರವಲ್ಲ, ಪ್ರಜಾಸತ್ತಾತ್ಮಕ ಸಮಾಜದ ಭವಿಷ್ಯಕ್ಕೂ ಅಪಾಯ.
ಇದಕ್ಕಿಂತಲೂ ಆತಂಕಕಾರಿ ಸಂಗತಿ ಎಂದರೆ, ಪ್ರಜ್ಞಾವಂತರ ಮೌನ.
ತನ್ನ ಹಾಡುಗಳಿಂದ ಸಾಮಾಜಿಕ ಅನ್ಯಾಯವನ್ನು, ಸರಕಾರದ ನೀತಿಗಳನ್ನು ಪ್ರಶ್ನಿಸುವ ಭೋಜಪುರಿ ಜನಪದ ಗಾಯಕಿ ನೇಹಾ ಸಿಂಗ್ ರಾಠೋಡ ದೇಶದ್ರೋಹಿಯಾಗುತ್ತಾಳೆ. ಆಕೆಯ ಮೇಲೆ ಎಫ್‌ಐಆರ್ ದಾಖಲಾಗುತ್ತದೆ. ಆಕೆಯನ್ನು ಬಂಧಿಸುವ ಹುನ್ನಾರ ನಡೆಯುತ್ತದೆ. ಇನ್ನೆಲ್ಲೋ ಒಬ್ಬ ಲೇಖಕ, ಪತ್ರಕರ್ತ, ವಕೀಲ, ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಯುತ್ತದೆ, ಮತ್ತೆಲ್ಲೋ ಉಮರ್ ನಂತಹ ಯುವಕರನ್ನು ಬಂಧಿಸಿ ಕಠಿಣ ಯುಎಪಿಎ ಕಾನೂನಿನಡಿ ಜೈಲಿಗಟ್ಟಲಾಗುತ್ತದೆ. ಪುಲ್ವಾಮಾ ದಾಳಿಯಲ್ಲಿ ೪೨ ಸೈನಿಕರು ಜೀವತೆತ್ತದ್ದಕ್ಕೆ ಯಾವ ಕ್ರಾಂತಿಯೂ ಆಗುವುದಿಲ್ಲ. ಅಷ್ಟೊಂದು ಪ್ರಮಾಣದ ಸ್ಪೋಟಕ ವಸ್ತು ಹೇಗೆ ಬಂತು ಎಂಬ ಯಕ್ಷಪ್ರಶ್ನೆಗೆ ಉತ್ತರ ಸಿಕ್ಕರೂ ತನಿಖೆ ಆಗುವುದಿಲ್ಲ. ಪಹಲ್ಗಾಮ್ ಹಂತಕರನ್ನು ಪತ್ತೆಹಚ್ಚಿ ಹಿಡಿಯಲು ಆಗುವುದೇ ಇಲ್ಲ. ಭಯೋತ್ಪಾದಕರು ಆಕಾಶದಿಂದ ಉದುರಿಬಿದ್ದು ಅಮಾಯಕರನ್ನು ಸಾಯಿಸಿ ಹಾಗೇ ಮಾಯವಾಗಿ ಬಿಡುತ್ತಾರೆ. ಇಷ್ಟೆಲ್ಲಾ ಆದರೂ ಗುಪ್ತಚರ ವಿಭಾಗಕ್ಕೆ ಪಾಪ ಯಾವ ಮುನ್ಸೂಚನೆಯೂ ಇರುವುದಿಲ್ಲ.

ಹೀಗೆಯೇ ಪ್ರತಿಷ್ಠಿತ ಜೆಎನ್‌ಯು ತನ್ನ ವಿದ್ಯಾರ್ಥಿಗಳಿಗೆ “ದೇಶದ ಪ್ರಧಾನಿ ಮತ್ತು ಗೃಹಮಂತ್ರಿಗಳ ಬಗ್ಗೆ ಯಾವ ಟೀಕೆ ಟಿಪ್ಪಣಿ ಮಾಡುವಂತಿಲ್ಲ” ಎಂಬ ನೋಟೀಸು ಜಾರಿಗೊಳಿಸಿದೆಯಂತೆ. 2020ರಲ್ಲಿ ಜನವರಿ 5ರಂದು ಜೆಎನ್‌ಯುವಿನ ಮೇಲೆ ದಾಳಿ ಮಾಡಿದ ಪುಂಡರ ಪತ್ತೆ ಇವರೆಗೂ ಆಗಿಲ್ಲ. ಒಬ್ಬನೇ/ಳೇ ಒಬ್ಬ ಆರೋಪಿ ಸಿಕ್ಕಿಲ್ಲ. ಮತ್ತೆಲ್ಲೋ ಅಖ್ಲಾಕ್ ನಂತಹ ವ್ಯಕ್ತಿ ಗೋವಿನ ಹೆಸರಲ್ಲಿ ಕೊಲೆಯಾಗುತ್ತಾನೆ. ಮದುವೆಯ ಸೂಟು ಹಾಕಿದ್ದಕ್ಕೆ, ಕುದುರೆ ಏರಿದ್ದಕ್ಕೆ, ಡಿಜೆ ಹಾಕಿದ್ದಕ್ಕೆ ದಲಿತರನ್ನು ಕೊಲ್ಲುತ್ತಾರೆ. ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮ್ ಯುವಕರನ್ನು ಬೇಟೆಯಾಡುತ್ತಾರೆ. ಮತ್ತೆಲ್ಲೋ ಕ್ರಿಸಮಸ್ ಆಚರಿಸದಂತೆ ಬೆದರಿಕೆ ಒಡ್ದುತ್ತಾರೆ. ಮಾರುಕಟ್ಟೆಯಲ್ಲಿ ’ಸಾಂತಾಕ್ಲಾಸ್’ ವೇಷಹಾಕಿ ಮಕ್ಕಳಿಗೆ ಚಾಕಲೇಟ್ ಹಂಚುತ್ತಿದ್ದವನನ್ನು ಒದ್ದುಓಡಿಸಲಾಗುತ್ತದೆ. ಚರ್ಚುಗಳ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗಿ ಮೆರವಣಿಗೆ ತೆಗೆಯುತ್ತಾರೆ. ಇನ್ನೆಲ್ಲೋ ಕೆಳಜಾತಿಯವರು ಭಾಗವತ ಕತೆಯನ್ನು ವಾಚಿಸಿದರೆಂದು ತಲೆಬೋಳಿಸಿ, ಮೂತ್ರ ಕುಡಿಸಿ ಊರಿನಿಂದ ಹೊಡೆದೋಡಿಸುತ್ತಾರೆ. ದಲಿತ ಮಹಿಳೆಯರನ್ನು ಬಲಾತ್ಕರಿಸಿ ಬೆತ್ತಲೆ ಮೆರವಣಿಗೆ ಮಾಡುತ್ತಾರೆ. ಎಳೆಯ ಕಂದಮ್ಮಗಳನ್ನು ’ಮೋಜಿ’ಗಾಗಿ ರೇಪ್ ಮಾಡಿ ಸಾಯಿಸಲಾಗುತ್ತದೆ.
ಮತ್ತೆಲ್ಲೋ ಗಾಂಧೀಜಿ ಅವರ ಪ್ರಿಯ ಭಜನೆ ’ರಘುಪತಿ ರಾಘವ ರಾಜಾ ರಾಮ್” ಹಾಡಿದ್ದಕ್ಕೆ ಪುಂಡರು ಗಲಾಟೆ ಎಬ್ಬಿಸಿ “ಜೈ ಶ್ರೀ ರಾಮ್” ಘೋಷಣೆ ಕೂಗಿ, ಭಯಗ್ರಸ್ತ ಆಯೋಜಕರು ಗಾಯಕಿಯಿಂದ ಕ್ಷಮಾಪಣೆ ಕೇಳಿಸುತ್ತಾರೆ. ಭಜನೆಯಲ್ಲಿ ಬರುವ “ಈಶ್ವರನ ಜೊತೆ ಅಲ್ಲಾನ” ಹೆಸರು ಈ ಗುಂಪಿಗೆ ಬೇಡ. ಮುಂದೆ “ರಘುಪತಿ ರಾಘವ” ಭಜನೆಯನ್ನು ನಿರಾಕರಿಸಬಹುದು/ ಬಹಿಷ್ಕರಿಸಲೂ ಬಹುದು. ಕೇಸರಿಶಾಲನ್ನು ಹೊದ್ದು ಕೇಸರಿ ಧ್ವಜವನ್ನು ಹಿಡಿದು ಏನು ಬೇಕಾದರೂ ಮಾಡುತ್ತೇವೆ, ನಮಗೇನೂ ಆಗದು” ಎಂಬ ಧೋರಣೆಯ ಪುಂಡರ ಗುಂಪು ಗೂಳಿಯಂತೆ ಓಡಾಡುತ್ತಿದೆ. ಸರಕಾರ ನಮ್ಮನ್ನು ರಕ್ಷಿಸುತ್ತದೆ” ಎಂಬ ಭರವಸೆ ಇವರಿಗಿದೆ, ಇಲ್ಲಿ ಅನ್ಯಾಯದ ವಿರುದ್ಧ ದನಿ ಎತ್ತುವವರನ್ನು, ಪ್ರಶ್ನಿಸುವವರನ್ನು ದೇಶದ್ರೋಹಿಗಳನ್ನಾಗಿಸಿ ಅಪರಾಧಿಗಳನ್ನಾಗಿಸಲಾಗುತ್ತದೆ. ಸಜ್ಜನರು ತಲೆತಗ್ಗಿಸಿ, ದನಿಯಡಗಿಸಿಕೊಂಡು ಬದುಕಬೇಕಾಗುತ್ತದೆ.
ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆಯೇ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ. ಚಿಂತಿಸುವವರು ಚಿಂತಿಸುತ್ತಲೇ ಇರುತ್ತೇವೆ, ಬರೆಯುವವರು ಬರೆಯುತ್ತಲೇ ಇರುತ್ತೇವೆ, ಹೋರಾಡುವವರು ಹೋರಾಡುತ್ತಲೇ ಇರುತ್ತೇವೆ.
ಯಾಕೆಂದರೆ…
“ವೊಹ್ ಸುಬಹ್ ಕಭಿ ತೋ ಆಯೇಗಿ….
ಆ ಬೆಳಗು ಬಂದೇ ಬರುವುದು…
ಈ ಕಪ್ಪು ಶತಮಾನಗಳ ಶಿರದ ಮೇಲಿಂದ ಇರುಳ ಸೆರಗು ಸರಿಯುವಾಗ
ದುಃಖದ ಮೋಡಗಳು ಕರಗುವಾಗ
ಸುಖದ ಸಾಗರ ಉಕ್ಕುವಾಗ
ಆಕಾಶ ಕುಣಿದು ನರ್ತಿಸುವಾಗ
ಈ ಭೂತಾಯಿ ಪದವೊಂದ ಹಾಡುವಾಗ … ಆ ಬೆಳಗು ಬಂದೇ ಬರುವುದು…

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




