ವಚನಯಾನ | ಲಂಚ ವಂಚನೆಗೆ ಕೈಯಾನದ ಭಾಷೆ-ಶರಣೆ ಸತ್ಯಕ್ಕ

Date:

ನನ್ನದು ಲಂಚ ಹಾಗೂ ವಂಚನೆಗೆ ಎಳೆಸದ ವ್ಯಕ್ತಿತ್ವ ಹಾಗೂ ಮನಸ್ಸು ಅಷ್ಟೆಯಲ್ಲದೆ ಅದೊಂದು ಪ್ರತಿಜ್ಞೆಯಾಗಿದೆ. ನಾನು ದಿನಾಲೂ ಕಸಗುಡಿಸುವ ಬೀದಿಯಲ್ಲಿ ಚಿನ್ನ ಅಥವಾ ಬೆಲೆ ಬಾಳುವ ಬಟ್ಟೆ ಮುಂತಾದ ಯಾವುದೇ ವಸ್ತು ಬಿದ್ದಿದ್ದರೆ ಅದನ್ನು ಮುಟ್ಟಿ ಎತ್ತಿ ತಗೊಂಡೆನಾದರೆ ದೇವರ ಮೇಲೆ ಆಣೆ ಎನ್ನುತ್ತಾಳೆ ಶರಣೆ ಸತ್ಯಕ್ಕ.

ಭ್ರಷ್ಟಾಚಾರ ಮತ್ತು ಲಂಚಗುಳಿತನ ಮನುಷ್ಯ ಈ ಭೂಮಿಯ ಮೇಲೆ ಬಂದು ನಾಗರಿಕ ಜಗತ್ತು ಸೃಷ್ಟಿಯಾದಾಗಿನಿಂದ ಅಸ್ತಿತ್ವದಲ್ಲಿವೆ. ಮನುಷ್ಯ ಅನಾಗರಿಕನಾಗಿದ್ದಾಗ ಮುಗ್ದನು, ಅಮಾಯಕನು ಆಗಿದ್ದ. ನಾಗರಿಕತೆಯ ಜೊತೆ ಜೊತೆಗೆ ಸ್ವಾರ್ಥ, ಮೋಸ, ವಂಚನೆ ಆತನ ಬದುಕಿನೊಂದಿಗೆ ಬೆಸೆದುಕೊಂಡವು. ಈಗಿನ ನವ ನಾಗರಿಕತೆಯ ಕಾಲವು ಭ್ರಷ್ಟಾಚಾರ, ಸ್ವಾರ್ಥ, ವಂಚನೆ, ಮೋಸ, ನಂಬಿಕೆದ್ರೋಹ ಇತ್ಯಾದಿ ಅವಗುಣಗಳ ಉಚ್ಛ್ರಾಯ ಕಾಲ ಮಾತ್ರವಲ್ಲ ಸುವರ್ಣಯುಗ ಕೂಡ. ಭಾರತದಲ್ಲಿ ಭ್ರಷ್ಟಾಚಾರದ ಬೆಳವಣಿಗೆಗೆ ಅನೇಕ ಕಾರಣಗಳಿವೆ. ಭಾರತೀಯ ಮೇಲ್ವರ್ಗದ ಸನಾತನಿಗಳು ಮೂಲತಃ ಸ್ವಾರ್ಥ ಸಂಸ್ಕೃತಿಯುಳ್ಳವರು (Hobbesian-culture of self interest). ಭ್ರಷ್ಟಾಚಾರವು ಸನಾತನ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪರಿಗಣಿತವಾಗಿದೆ. ಅದು ಇಲ್ಲಿನ ವೈದಿಕ ಸಂಸ್ಕೃತಿಯಲ್ಲಿ ಸರ್ವವ್ಯಾಪಿಯಾಗಿದ್ದು ಭಾರತೀಯರಿಗೆ ವಿಚಿತ್ರ ಅಥವಾ ಅನ್ಯಾಯವಾಗಿ ಕಾಣುವುದಿಲ್ಲ. ಭಾರತೀಯರು ವ್ಯಕ್ತಿಗತವಾಗಿ ಭ್ರಷ್ಟರನ್ನು ಸಹಿಸುತ್ತಾರೆ. ಆದರೆ ಅವರನ್ನು ಸರಿಪಡಿಸಲು ಪ್ರಯತ್ನಿಸುವುದಿಲ್ಲ. ಯಾವುದೇ ಜನಾಂಗವು ಜನ್ಮಜಾತವಾಗಿ ಭ್ರಷ್ಟವಾಗಿರುವುದಿಲ್ಲ. ಆದರೆ ಒಂದು ಜನಾಂಗವು ತನ್ನ ಸಂಸ್ಕೃತಿಯಲ್ಲಿ ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ಕೊಟ್ಟಾಗ ಆ ಇಡೀ ಜನಾಂಗದ ಮುಂದಿನ ಸಂತತಿ ಭ್ರಷ್ಟಾಚಾರವನ್ನು ಸಂಸ್ಕೃತಿ, ಆಚಾರ ಹಾಗೂ ಧರ್ಮವೆಂದು ಪರಿಗಣಿಸುತ್ತದೆ.

ಭಾರತೀಯರ ಭ್ರಷ್ಟಾಚಾರವು ಈ ಕೆಳಗಿನ ಮಾದರಿ ಮತ್ತು ಆಚರಣೆಗಳನ್ನು ಅವಲಂಬಿಸಿದೆ- ಭಾರತದಲ್ಲಿ ಸನಾತನಿಗಳು ಸೃಷ್ಟಿಸಿದ ಧರ್ಮದ ಪರಿಕಲ್ಪನೆಯು ಅತ್ಯಂತ ವ್ಯಾವಹಾರಿಕವಾಗಿದೆ. ಭಾರತೀಯರು ಕಾಣಿಕೆ ಅಥವಾ ಹರಕೆಯ ರೂಪದಲ್ಲಿ ದೇವರಿಗೆ ಹಣ/ಒಡವೆ, ವಸ್ತ್ರ ಮುಂತಾದವನ್ನು ಅರ್ಪಿಸುತ್ತಾರೆ ಮತ್ತು ಅದಕ್ಕೆ ಪ್ರತಿಯಾಗಿ ದೇವರಿಂದ ಒಳಿತನ್ನು ಅಥವಾ ಸಹಾಯವನ್ನು ನಿರೀಕ್ಷಿಸುತ್ತಾರೆ. ದೇವರಿಗೆ ಅರ್ಪಿಸಲಾಗುವ ಮನವಿಗಳನ್ನು ಗಮನಿಸಿದಾಗ ದೇವರು ಅತ್ಯಂತ ಅಪಾತ್ರರು ಹಾಗೂ ಅಪ್ರಮಾಣಿಕರಿಗೆ ಸಹಾಯ ಮಾಡುತ್ತಾನೆಯೆ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಮಾದರಿಯ ಕಾಣಿಕೆ ಕೊಟ್ಟು ಸಹಾಯ ಪಡೆಯುವ ವ್ಯವಹಾರಗಳನ್ನು ದೇವಸ್ಥಾನಗಳ ಹೊರಗೆ ಲಂಚದ ವ್ಯವಹಾರವೆಂದು ಕರೆಯಲ್ಪಡುತ್ತದೆ. ಭಾರತದ ಆಗರ್ಭ ಶ್ರೀಮಂತರು ದೇವರಿಗೆ ನಗದು ಹಣˌ ವಜ್ರಖಚಿತ ಆಭರಣಗಳು/ಪಲ್ಲಕ್ಕಿ/ರಥ/ವಿಗ್ರಹ ಮತ್ತು ಕಿರೀಟಗಳನ್ನು ಅರ್ಪಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ತಿರುಪತಿ 2

ಅವರ ಈ ಹರಕೆಯ ಕಾಣಿಕೆ ಬಡತನದಿಂದ ಬಳಲುವ ಜನರು ವಾಸಿಸುವ ಭಾರತದ ದೇಗುಲಗಳಲ್ಲಿ ನಿರುಪಯುಕ್ತವಾಗಿ ಕೊಳೆಯುತ್ತದೆಯೆ ಹೊರತು ಹೊಟ್ಟೆಗಿಲ್ಲದವರ ಉಪಯೋಗಕ್ಕೆ ಬರಲಾರದು. 2009ರ ಜೂನ್ ತಿಂಗಳ ದಿ ಹಿಂದೂ ಪತ್ರಿಕೆ ವರದಿಯೊಂದು, ಅಂದು ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗಿದ್ದ ಗಾಲಿ ಜನಾರ್ದನ ರೆಡ್ಡಿ 45 ಕೋಟಿ ಮೌಲ್ಯದ ವಜ್ರ ಖಚಿತ ಚಿನ್ನದ ಕಿರೀಟವನ್ನು ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿದ ಕುರಿತು ಬಹಿರಂಗಪಡಿಸಿತ್ತು.

ಭಾರತದ ದೇಗುಲಗಳು ಬಡವರ ಶ್ರಮದ ಹಣ ಹಾಗೂ ಶ್ರೀಮಂತ ಭ್ರಷ್ಟರಿಂದ ಪಡೆದ ಕೋಟ್ಯಂತರ ಮೌಲ್ಯದ ಹಣ/ಚಿನ್ನ/ಬೆಳ್ಳಿಯ ಆಭರಣಗಳಿಂದ ತುಂಬಿಹೋಗಿವೆ. ಈ ಧಾರ್ಮಿಕ ನಂಬಿಕೆಯು ಭಾರತೀಯರ ಹಣವನ್ನು ನಿರುಪಯುಕ್ತ ಹಾಗೂ ಅಪಮೌಲ್ಯಗೊಳಿಸುವ ಸನಾತನಿಗಳ ವ್ಯವಸ್ಥಿತ ಯೋಜನೆಯ ಭಾಗವಾಗಿದೆ. ಭಾರತದಲ್ಲಿನ ಯುರೋಪಿಯನ್ನರ ಆಡಳಿತದಲ್ಲಿ ರಸ್ತೆ ˌ ಶಾಲೆ, ಗ್ರಂಥಾಲಯ ಮುಂತಾದ ಜನೋಪಯೋಗಿ ಸಂಸ್ಥೆಗಳು ಸ್ಥಾಪನೆಯಾದರೆ, ಅನಿವಾಸಿ ಭಾರತೀಯರು ಯುರೋಪ್ ಮತ್ತು ಅಮೆರಿಕಗಳಲ್ಲಿ ಬೃಹತ್ ಮಂದಿರಗಳನ್ನು ಕಟ್ಟಿಸುತ್ತಿದ್ದಾರೆ. ಪ್ರಾಚೀನ ಕಾಲದಿಂದಲೂ ಭಾರತದ ಹಳ್ಳಿಗಳಲ್ಲಿ ನಾಲ್ಕರಿಂದ ಆರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಗುಡಿಗಳಿವೆಯೇ ಹೊರತು ಶಾಲೆ, ಆಸ್ಪತ್ರೆ ಅಥವಾ ಗ್ರಂಥಾಲಯಗಳು ಇರಲಿಲ್ಲ. ಭಕ್ತರ ಕೋರಿಕೆಯನ್ನು ನೆರವೇರಿಸಲು ದೇವರು ಕಾಣಿಕೆ ಸ್ವೀಕರಿಸುವುದು ಧರ್ಮದ ಮಾರ್ಗವೆಂದಾದಲ್ಲಿ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡುವುದೂ ಸಹ ಧರ್ಮದ ಮಾರ್ಗವೇ ಅಂತಾಗುತ್ತದೆ. ಭ್ರಷ್ಟಾಚಾರದ ಕುರಿತು ಭಾರತೀಯರಲ್ಲಿರುವ ಐತಿಹಾಸಿಕ ನೈತಿಕ ದ್ವಂದ್ವಗಳ ಕಾರಣದಿಂದ ಅದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಾವು ತುಲನಾತ್ಮಕವಾಗಿ ಅವಲೋಕಿಸಿದಾಗ, ಪಶ್ಚಿಮದ ದೇಶಗಳಲ್ಲಿ ಅತ್ಯಂತ ಕಡು ಭ್ರಷ್ಟ ರಾಜಕಾರಣಿಯೊಬ್ಬ ಅಧಿಕಾರದ ಗದ್ದುಗೆ ಏರುವುದು ಅತ್ಯಂತ ವಿರಳ. ಇತ್ತೀಚಿಗೆ ಅಲ್ಲಿಯೂ ಕಾರ್ಪೋರೇಟ್ ಕಳ್ಳೋದ್ಯಮಿಗಳು ರಾಜಕೀಯವನ್ನು ನಿಯಂತ್ರಿಸುವುದು ಸಾಮಾನ್ಯವಾಗುತ್ತಿದೆ.

ಭಾರತದ ಮೇಲೆ ವಿದೇಶಿಯರು ಪ್ರಭುತ್ವ ಸಾಧಿಸಿ ಇಲ್ಲಿ ದೀರ್ಘಕಾಲೀನ ಆಡಳಿತ ನಡೆಸಲು ಕಾರಣ ಇಲ್ಲಿನ ರಕ್ಷಣಾದಳ ಮತ್ತು ಸೇನಾಧಿಪತಿಗಳನ್ನು ಲಂಚದ ಮೂಲಕ ಸರಿಪಡಿಸಿಕೊಂಡಿರುವುದು. ಇದಕ್ಕೆ ಭಾರತದ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ. ಭ್ರಷ್ಟಾಚಾರವು ಭಾರತೀಯರಲ್ಲಿ ತೀರಾ ಸಾಮಾನ್ಯ. ಭಾರತೀಯರ ಲಂಚಗುಳಿತನ ಈ ಉಪಖಂಡದಲ್ಲಿ ಯುದ್ಧದ ಪಾವಿತ್ರ್ಯವನ್ನೇ ನಾಶಗೊಳಿಸಿದೆ.

ಪುರಾತನ ಕಾಲದ ಗ್ರೀಕ್ ಮತ್ತು ಆಧುನಿಕ ಯುರೋಪಿನಲ್ಲಿ ಘಟಿಸಿದ ಯುದ್ಧಗಳನ್ನು ಹೋಲಿಸಿದರೆ ಭಾರತೀಯರಲ್ಲಿ ಬೆರಳೆಣೆಕೆಯ ಧೀರರು ಹಾಗು ಶೂರ ರಾಜರಿಗೆ ಈ ಭ್ರಷ್ಟತೆಯು ಶಾಪವಾಗಿ ಕಾಡಿದೆ. ನಾದಿರ್ ಷಾ ತುರ್ಕರೊಂದಿಗೆ ಮಾಡಿದ ಯುದ್ಧವು ಸಂಪೂರ್ಣ ಅನೈತಿಕತೆಯಿಂದಲೇ ಕೂಡಿತ್ತು. ಭಾರತದಲ್ಲಿ ಹೋರಾಡಿ ಗೆಲ್ಲುವುದಕ್ಕಿಂತ ಸೈನ್ಯವನ್ನು ಲಂಚದ ಆಮಿಷಗಳಿಂದ ನಿಷ್ಕ್ರಿಯಗೊಳಿಸುವುದು ಸುಲಭವಾಗಿತ್ತು. ಭಾರತದಲ್ಲಿ ಅತ್ಯಂತ ಬಲಶಾಲಿ ಸಾಮ್ರಾಜ್ಯಗಳಿದ್ದಾಗ್ಯೂ ವಿದೇಶಿ ಆಕ್ರಮಣಕಾರರಿಗೆ ಭಾರತೀಯರ ಭ್ರಷ್ಟತನವು ಒಂದು ವರವಾಗಿತ್ತು. ಇದಕ್ಕೆ ಅಪವಾದಕ್ಕೆಂಬಂತೆ ಭಾರತೀಯರು ಪ್ಲಾಸಿ ಕದನ ಮುಂತಾದವುಗಳಲ್ಲಿ ಕನಿಷ್ಠ ಪ್ರತಿರೋಧ ತೋರಿದ ಉದಾಹರಣೆಗಳಿವೆ. ಮೀರ್ ಜಾಫರನನ್ನು ಖರೀದಿಸುವ ಮೂಲಕ ಕ್ಲೈವ್ ಇಡೀ ಬಂಗಾಳವನ್ನೇ ವಶಪಡಿಸಿಕೊಂಡ. ಇಲ್ಲಿನ ಸಾಮ್ರಾಜ್ಯಗಳನ್ನು ಸೋಲಿಸಲು ಅಂದಿನ ಕಾಲದಲ್ಲಿ ಹಣದ ವಿನಿಮಯವು ಒಂದು ಸಾಮಾನ್ಯ ಸಂಗತಿಯಾಗಿತ್ತು.

Sangolli Rayanna
ಸಂಗೊಳ್ಳಿ ರಾಯಣ್ಣ

1687ರಲ್ಲಿ ಹೈದರಾಬಾದ್‌ನ ಗೋಲ್ಕೊಂಡ ಕೋಟೆಯನ್ನು ಹಿಂಬದಿಯ ಗುಪ್ತ ಮಾರ್ಗ ತೆರೆದಿಡಿಸುವ ಮೂಲಕ ವಶಪಡಿಸಿಕೊಳ್ಳಲಾಯಿತು. ಮರಾಠ ಮತ್ತು ರಜಪೂತರನ್ನು ಮೊಘಲರು ಸೋಲಿಸಿದ್ದು ಲಂಚದ ಮೂಲಕವೆ. ದಾರಾಶಿಖೋನನ ಮಗ ಸುಲೇಮಾನನನ್ನು ಶ್ರೀನಗರದ ದೊರೆಯು ಔರಂಗಜೇಬನಿಗೆ ಹಿಡಿದುಕೊಟ್ಟಿದ್ದು ಲಂಚಪಡೆಯುವ ಮೂಲಕ. ಕಿತ್ತೂರ ಸಂಸ್ಥಾನವನ್ನು ಹಾಗೂ ಸಂಗೊಳ್ಳಿ ರಾಯಣ್ಣನನ್ನು ಮತ್ತು ಟಿಪ್ಪು ಸುಲ್ತಾನನನ್ನು ಆಂಗ್ಲರು ಸ್ವಾರ್ಥಿ ಭಾರತೀಯರಿಗೆ ಆಮಿಷ ಒಡ್ಡುವ ಮೂಲಕವೇ ಸೋಲಿಸಿದ್ದು. ಲಂಚದ ಆಮಿಷಕ್ಕೆ ಬಲಿಯಾಗಿ ದೇಶದ್ರೋಹ ಎಸಗಿದ ಇಂತಹ ಅನೇಕ ದೃಷ್ಟಾಂತಗಳು ಇತಿಹಾಸದಲ್ಲಿವೆ. ಭಾರತೀಯರಿಗೆ ನೈತಿಕತೆಯ ಸಿದ್ಧಾಂತದಲ್ಲಿ ನಂಬಿಕೆ ಕಡಿಮೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಭಾರತೀಯರನ್ನು ಎಲ್ಲಾ ಬಗೆಯಲ್ಲಿ ಒಡೆದಿದೆ. ಅಸಮಾನತೆಯು ಇಲ್ಲಿನ ಶೋಷಿತ ಜನಾಂಗ ಅನ್ಯ ಧರ್ಮಗಳಿಗೆ ವಲಸೆ ಹೋಗುವಂತೆ ಮಾಡಿದೆ. ಈ ನೆಲದಲ್ಲಿನ ಸನಾತನಿಗಳ ಭ್ರಷ್ಟ ವ್ಯವಸ್ಥೆಯ ವಿರುದ್ಧ ಬೌದ್ಧ, ಜೈನ, ಸಿಖ್ ಮತ್ತು ಲಿಂಗಾಯತ ಧರ್ಮಗಳು ಹುಟ್ಟಿವೆ. ಸನಾತನಿಗಳ ಉಪಟಳ ತಾಳದೆ ಆ ಮೂಲಕ ಭಾರತೀಯ ಸಮಾಜ ವಿಘಟನೆಯಾಗಿದೆ. ಮುಂದೆ ಅಸಂಖ್ಯಾತ ಭಾರತೀಯರು ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೂ ವಲಸೆ ಹೋಗಿದ್ದಾರೆ. ಇದರ ಒಳಾರ್ಥವಿಷ್ಟೇ, ಭಾರತೀಯರಲ್ಲಿ ಪರಸ್ಪರ ನಂಬಿಕೆ ಕ್ಷೀಣಿಸಿದೆ. ಈಗ ಭಾರತದಲ್ಲಿ ಪರಿಶುದ್ಧ ಭಾರತೀಯರೆಂದು ಗುರುತಿಸಿಕೊಳ್ಳುವವರಿಗಿಂತ ತಾವು ಹಿಂದೂ, ಮುಸ್ಲಿಂ, ಬೌದ್ಧ, ಜೈನ ಎಂದು ಗುರುತಿಸಿಕೊಳ್ಳುವವರೆ ಹೆಚ್ಚು.

ಇದನ್ನೂ ಓದಿ ವಚನಯಾನ | ಯಾರು ಪರಿಪೂರ್ಣರು?

ನಾಲ್ಕೈದು ಸಾವಿರ ವರ್ಷಗಳ ಹಿಂದೆ ಭಾರತೀಯರು ತಾವೆಲ್ಲ ಒಂದೇ ನಂಬಿಕೆ ಹಾಗೂ ಸಿದ್ಧಾಂತ ಹೊಂದಿದ್ದನ್ನು ಮರೆತುಬಿಟ್ಟಿದ್ದಾರೆ. ಸನಾತನ ಪ್ರಣೀತ ಜಾತಿ ವ್ಯವಸ್ಥೆಯು ಜನರನ್ನು ವಿಭಜಿಸಿದ್ದಲ್ಲದೆ ಅನಾರೋಗ್ಯಕರ ಸಂಸ್ಕೃತಿಯೊಂದರ ಉದಯ ಹಾಗೂ ಒಂದು ಭ್ರಷ್ಟ ವ್ಯವಸ್ಥೆಯನ್ನು ಹುಟ್ಟುಹಾಕಿದೆ. ಆದ್ದರಿಂದ ಈಗ ಇಡೀ ಭಾರತೀಯ ಜನಾಂಗವು ದೇವರನ್ನು ಹೊರತುಪಡಿಸಿ ಪರಸ್ಪರ ಒಬ್ಬರಿಗೊಬ್ಬರು ವೈರಿಗಳು, ತಮ್ಮ ತಮ್ಮ ನಡುವಿನ ಆಂತರಿಕ ಸಂಘರ್ಷದ ನಡುವೆಯೂ ಸಹ ಅವರೆಲ್ಲರು ದೇವರಿಗೆ ಲಂಚದ ಆಮಿಷವೊಡ್ಡುತ್ತ ಬದುಕು ಸಾಗಿಸುತ್ತಿದ್ದಾರೆ. ಭಾರತದಲ್ಲಿ ಬ್ರಿಟಿಷ್ ಆಡಳಿತ ಕಾಲದಿಂದಲೂ ಬಕ್ಷೀಸ್, ಚಾಯ್-ಪಾನಿ, ನಾಷ್ಟಾ-ಪಾನಿ ಸಿದ್ಧಾಂತ ಪ್ರಸಿದ್ಧವಾಗಿದೆ. ತಮ್ಮ ಸ್ವಾರ್ಥಕ್ಕೆ ಪರಸ್ಪರ ಆಮಿಷಕ್ಕೆ ಒಳಗಾಗುತ್ತಾರೆ ಮತ್ತು ದೇವರಗೂ ಕೂಡ ಹರಕೆಯ ನೆಪದಲ್ಲಿ ಲಂಚ ನೀಡುವುದನ್ನು ತಮ್ಮ ಸಂಸ್ಕೃತಿಯ ಭಾಗವಾಗಿಸಿಕೊಂಡಿದ್ದಾರೆ. ಇದು ಭಾರತೀಯರಲ್ಲಿನ ಭ್ರಷ್ಟಾಚಾರಕ್ಕೆ ಮೂಲ ಕಾರಣವಾಗಿದೆ. ಇಂದು ನಮ್ಮ ಇಡೀ ಜನತಂತ್ರ ವ್ಯವಸ್ಥೆಯು ಭ್ರಷ್ಟಾಚಾರದಿಂದ ತುಂಬಿಹೋಗಿದೆ. ಅದನ್ನು ತಡೆಯಲು ಅನೇಕ ಬಗೆಯ ಕಾನೂನಾತ್ಮಕ ಕ್ರಮಗಳ ಕೈಕೊಂಡಾಗ್ಯೂ ಅದು ದಿನದಿಂದ ದಿನಕ್ಕೆ ಹೆಚ್ಚುತ್ತಲೆಯಿದೆ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶರಣರು ಭಾರತೀಯರ ಭ್ರಷ್ಟಾಚಾರದ ಮೂಲ ದ್ರವ್ಯವನ್ನೆ ಬತ್ತಿಸಲು ಪ್ರಯತ್ನಿಸಿದರು. ಶರಣರು ಅಂತರಂಗ ಹಾಗೂ ಬಹಿರಂಗ ಎರಡರ ಪರಿಶುದ್ಧತೆಗೆ ಒತ್ತುಕೊಟ್ಟಿದ್ದರು ಎನ್ನುವುದಕ್ಕೆ ಕೆಳಗಿನ ಎರಡು ವಚನಗಳು ಸಾಕ್ಷಿಯಾಗಿವೆ:

“ಲಂಚವಂಚನಕ್ಕೆ ಕೈಯಾನದ ಭಾಷೆˌ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿˌ
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.”
-ಶರಣೆ ಸತ್ಯಕ್ಕ

ಭಾವಾರ್ಥ

ನನ್ನದು ಲಂಚ ಹಾಗೂ ವಂಚನೆಗೆ ಎಳೆಸದ ವ್ಯಕ್ತಿತ್ವ ಹಾಗೂ ಮನಸ್ಸು ಅಷ್ಟೆಯಲ್ಲದೆ ಅದೊಂದು ಪ್ರತಿಜ್ಞೆಯಾಗಿದೆ. ನಾನು ದಿನಾಲೂ ಕಸಗುಡಿಸುವ ಬೀದಿಯಲ್ಲಿ ಚಿನ್ನ ಅಥವಾ ಬೆಲೆ ಬಾಳುವ ಬಟ್ಟೆ ಮುಂತಾದ ಯಾವುದೇ ವಸ್ತು ಬಿದ್ದಿದ್ದರೆ ಅದನ್ನು ಮುಟ್ಟಿ ಎತ್ತಿ ತಗೊಂಡೆನಾದರೆ ದೇವರ ಮೇಲೆ ಆಣೆ ಎನ್ನುತ್ತಾಳೆ ಶರಣೆ ಸತ್ಯಕ್ಕ. ನನಗೆ ನಿನ್ನ ಕರುಣದಿಂದ ದಕ್ಕಿದ ಸತ್ಯಶುದ್ಧ ಕಾಯಕದ ಭಿಕ್ಷೆಯಲ್ಲಿ ಇರುವಾಗ ಅದಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವ ಸಣ್ಣ ಮನಸ್ಸಿನವಳು ನಾನಲ್ಲ. ನನ್ನದಲ್ಲದ ಹಾಗೂ ನನ್ನ ಕಾಯಕದಿಂದ ಬಂದುದ್ದಲ್ಲದ ಪರರ ಹಣ ಅಥವಾ ವಸ್ತುಗಳಿಗೆ ಆಸೆಪಟ್ಟೆನಾದರೆ ನಾನು ಕ್ಷಮೆಗೆ ಅರ್ಹಳಲ್ಲ. ಮೇಲಿನ ವಚನದಲ್ಲಿ ಶರಣೆ ಸತ್ಯಕ್ಕಳ ಪಾರದರ್ಶಕ ಬದುಕಿನ ಅನಾವರಣವಾಗಿದೆ. ಪ್ರತಿಯೊಬ್ಬರು ದೇಹವನ್ನು ದಂಡಿಸಿ, ಸತ್ಯಶುದ್ಧ ಕಾಯಕದಿಂದ ಬದುಕಬೇಕು ಎನ್ನುವ ದಿವ್ಯ ಸಂದೇಶವನ್ನು ಸತ್ಯಕ್ಕನ ವಚನ ಸಾರುವುದಲ್ಲದೆ ಶರಣರು ಸನಾತನ ವ್ಯವಸ್ಥೆಯ ಲಂಚ ಹಾಗೂ ವಂಚನೆಯ ಸ್ಥಾಪಿತ ಆದರ್ಶವನ್ನು ಅಲ್ಲಗಳೆದು ಒಂದು ಮಾದರಿಯ ಬದುಕನ್ನು ತಮ್ಮದಾಗಿಸಿಕೊಂಡಿರುವುದು ತಿಳಿಸುತ್ತದೆ. ಬಸವಣ್ಣನವರು ಬಿಜ್ಜಳದ ಭಂಡಾರದ ಮುಖ್ಯಸ್ಥರಾಗಿದ್ದಾಗ ಹಣ ದುರುಪಯೋಗದ ಆರೋಪ ಬಂದಾಗ ಈ ರೀತಿ ಪ್ರತಿಕ್ರೀಯಿಸುತ್ತಾರೆ:

“ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು,
ಒರೆಯಾವಿನ ಬೆನ್ನ ಹರಿಯಲದೇಕಯ್ಯಾ.
ಲಜ್ಜೆಗೆಡಲೇಕೆ ನಾಣುಗೆಡಲೇಕೆ
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ”

ಭಾವಾರ್ಥ

ಊರ ಮುಂದೆ ಹಾಲಿನ ಹಳ್ಳವೆ ಹರಿಯುತ್ತಿರುವಾಗ ಅಂದರೆ ಅಪಾರ ಸಂಖ್ಯೆಯ ಶರಣರ ಸಾಂಗತ್ಯದಲ್ಲಿ ಕಾಯಕ ಮಾಡುತ್ತ ಬದುಕುವ ಅವಕಾಶವಿರುವಾಗ ನಾನೇಕೆ ನಾಚಿಕೆ ಬಿಟ್ಟು, ಧೃತಿಗೆಟ್ಟು ಭವಿ ಬಿಜ್ಜಳನ ಭಂಡಾರವನ್ನು ಇಚ್ಚಿಸಲಿ. ಹಾಗೆ ಅಕ್ರಮವಾಗಿ ಸಂಪಾದಿಸುವ ಆಶೆ ನನಗಿಲ್ಲ ಎಂದು ತಮ್ಮ ಮೇಲೆ ಹೊರಿಸಲಾದ ಆರೋಪಕ್ಕೆ ದಿಟ್ಟವಾಗಿ ಉತ್ತರಿಸುತ್ತಾರೆ.

ಟಿಪ್ಪಣಿ

ಸನಾತನ ಪ್ರಣೀತ ಲಂಚ-ವಂಚನೆಯ ವ್ಯವಸ್ಥೆಯನ್ನು ಶರಣ ಸಂಸ್ಕೃತಿ ನೇರವಾಗಿ ವಿರೋಧಿಸಿದೆ. ದೇವರಿಗೆ ಕಾಣಿಕೆ ನೀಡಿ ಬಯಸಿದ್ದು ಪಡೆಯಬೇಕೆಂಬ ಪರಿಕಲ್ಪನೆಯೆ ಭಾರತದಲ್ಲಿ ಭ್ರಷ್ಟಾಚಾರದ ತಾಯಿಬೇರು ಎನ್ನುವುದು ಸರ್ವವಿಧಿತ. ಭ್ರಷ್ಟಾಚಾರವನ್ನು ಧರ್ಮಸಮ್ಮತಗೊಳಿಸಿ ಭಾರತೀಯ ಪರಂಪರೆಯ ಭಾಗವಾಗಿಸಿದ್ದ ಸನಾತನಿಗಳ ನಡೆ ವಿದ್ವಂಸಕವಾದದ್ದು. ಅದನ್ನು ಬೇರು ಸಮೇತ ಕಿತ್ತೆಸೆಯಲು ಭಾರತದಲ್ಲಿ ಅನೇಕ ಚಳವಳಿಗಳು ಘಟಿಸಿವೆ. ವಚನ ಚಳವಳಿಯು ಸನಾತನ ಸಂಸ್ಕೃತಿಯ ಮೂಲೋತ್ಪಾಟನೆಗೆ ಅಪಾರವಾಗಿ ಶ್ರಮಿಸಿದೆ. ದೇವರು ಹಾಗೂ ಧರ್ಮವನ್ನು ವ್ಯಾಪಾರವಾಗಿಸಿಕೊಂಡ ಸನಾತನ ಸಂಸ್ಕೃತಿಯೇ ಭಾರತ ಉಪಖಂಡಕ್ಕೆ ಅತ್ಯಂತ ಮಾರಕ ಎನ್ನುವುದನ್ನು ಶರಣರು ತಮ್ಮ ವಚನಗಳ ಮೂಲಕ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ.

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...