ಆಧುನಿಕ ಕೃಷಿ ಪದ್ದತಿಗಳ ಮೂಲಕ ಯಾಂತ್ರಿಕೃತ ಬೇಸಾಯವು ಗ್ರಾಮೀಣ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದರೂ ಅಲ್ಲೊಬ್ಬ ಇಲ್ಲೊಬ್ಬ ರೈತರು ನೇಗಿಲುಗಳನ್ನು ಬಳಸಿ ಹೆಮ್ಮೆಯಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕನಕಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ತುಮಕೂರು ಮುಂತಾದೆಡೆ ಮರದ ನೇಗಿಲು ಮತ್ತು ಕಬ್ಬಿಣದ ನೇಗಿಲುಗಳ ಬಳಕೆಯಿದೆ.
‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು.’ ವ್ಯವಸಾಯದ ಪ್ರಾಥಮಿಕ ಹಂತಗಳಲ್ಲೊಂದು ನೇಗಿಲಿನ ಬಳಕೆ. ಮನುಷ್ಯ ನೇಗಿಲು ತಯಾರಿಸುವುದನ್ನು ಕಲಿತ. ದನಗಳನ್ನು ವ್ಯವಸಾಯಕ್ಕೆ ಬಳಸಿಕೊಂಡ. ಮೈಸೂರು ಸಂಸ್ಥಾನದಲ್ಲಿ ಹತ್ತೊಂಬತ್ತನೇ ಶತಮಾನದ ಕೊನೆಗೆ ಹಾಗೂ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಸುಧಾರಿತ ನೇಗಿಲುಗಳನ್ನು ವಿದೇಶಗಳಿಂದ ತರಿಸಿಕೊಂಡು ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಯಿತು. ಇಲ್ಲಿಯೇ ಅಭಿವೃದ್ಧಿಪಡಿಸಿದ ನೇಗಿಲುಗಳಿಗೆ ಪೇಟೆಂಟ್ ಕೂಡ ಪಡೆಯಲಾಯಿತು.
ಮೈಸೂರು ಸಂಸ್ಥಾನದಲ್ಲಿ ಹತ್ತೊಂಬತ್ತನೇ ಶತಮಾನದ ಅಂತ್ಯದವರೆಗೂ ಮತ್ತು ಇಪ್ಪತ್ತನೇ ಶತಮಾನದ ಆರಂಭದ ಬಹುಪಾಲು ದಶಕಗಳಲ್ಲಿ ರೈತರು ತಾವೇ ಬಡಗಿಗಳಾಗಿ ಮರಮುಟ್ಟುಗಳನ್ನು ಹೊಂದಿಸಿಕೊಂಡು ಮರದ ನೇಗಿಲುಗಳನ್ನು ತಯಾರು ಮಾಡಿಕೊಂಡು ಉಳುಮೆಗೆ ಬಳಸುತ್ತಿದ್ದರು. ಗ್ರಾಮೀಣ ಪ್ರದೇಶದ ಪ್ರತಿ ರೈತನ ಮನೆಯಲ್ಲೊಂದು ಮರದ ನೇಗಿಲು ಇರುತ್ತಿತ್ತು.

ಮರದ ನೇಗಿಲು ಬಳಸಿ ಉಳುಮೆ ಮಾಡಿದಾಗ ಉಳುಮೆಯ ಕೆಲಸ ವೇಗವಾಗಿ ಸಾಗುತ್ತಿರಲಿಲ್ಲ. ಮರದ ನೇಗಿಲು ಇಂಗ್ಲಿಷಿನ ‘V’ ಆಕಾರದಲ್ಲಿ ನೆಲವನ್ನು ಸೀಳುತ್ತಾ ಹೋಗುತ್ತದೆ. ಆದರೆ, ಹೆಚ್ಚು ನೆಲವನ್ನು ಅದು ಕೆದಕುವುದಿಲ್ಲ, ಮಣ್ಣನ್ನು ತಿರುವಿ ಹಾಕುವುದಿಲ್ಲ. ಉಳುಮೆಯ ಒಂದು ಸುತ್ತಿನ ಗೆರೆಯ ಪಕ್ಕ ಅತಿ ಸನಿಹದಲ್ಲಿಯೇ ಮತ್ತೊಂದು ಸುತ್ತಿನ ಗೆರೆಯು ಬರಬೇಕು. ಅದರಿಂದ ಉಳುಮೆಯ ಕೆಲಸ ಶೀಘ್ರವಾಗಿ ಸಾಗುತ್ತಿರಲಿಲ್ಲ. ಉಳುಮೆಯ ಆಳವೂ ಕಡಿಮೆ. ಆಗ ಅಗತ್ಯಕ್ಕೆ ತಕ್ಕಂತೆ ಆವಿಷ್ಕರಿಸಿದ್ದು ಕೋಲಾರದ ಮಿಷನ್ ನೇಗಿಲು ಅಥವಾ ಕೋಲಾರದ ಕಬ್ಬಿಣದ ನೇಗಿಲು. ಕೋಲಾರದ ಕಬ್ಬಿಣದ ನೇಗಿಲನ್ನು ಕೋಲಾರ ಮೌಲ್ಡ್ ಬೋರ್ಡ್ ನೇಗಿಲು (ಕೆಎಂಬಿ ನೇಗಿಲು) ಎಂಬ ಹೆಸರಿನಿಂದಲೂ ಕರೆಯಲಾಯಿತು. ಕೋಲಾರದ ನೇಗಿಲಿನ ಜೊತೆಗೆ ಮೈಸೂರು ನೇಗಿಲು ಮತ್ತು ಹೆಬ್ಬಾಳ ನೇಗಿಲು ಕೂಡ ಜನಪ್ರಿಯವಾಯಿತು. ಇಂತಹ ಸುಧಾರಿತ ನೇಗಿಲುಗಳ ಕುರಿತು ಮೈಸೂರು ಸಂಸ್ಥಾನದ ಕೃಷಿ ಇತಿಹಾಸದಲ್ಲಿ ಕೊಂಚ ಮಾಹಿತಿಯಿದೆ.
ಕೋಲಾರದ ಕಬ್ಬಿಣದ ನೇಗಿಲು
ಸದಾ ಬರಗಾಲದಿಂದ ತತ್ತರಿಸುತ್ತಿದ್ದ ಕೋಲಾರದ ರೈತರಿಗೆ ಸೇವಾಮನೋಭಾವದಿಂದ ಒಳಿತು ಮಾಡಲು 1897ರ ಹೊತ್ತಿಗೆ ಒಂದು ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿತ್ತು. ರೆವೆರೆಂಡ್ ಹೋಲಿಸ್ಟರ್ ಎಂಬ ಅಮೆರಿಕನ್ ಮಿಷನರಿಯು ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಆ ಸಂಸ್ಥೆಯು ‘ಇಂಡಸ್ಟ್ರಿಯಲ್ ಮಿಷನ್’ ಅನ್ನೂ ಕೂಡ ಸ್ಥಾಪಿಸಿತ್ತು. ರೈತರಿಗೆ ತಾಂತ್ರಿಕವಾಗಿ ತರಬೇತಿಯನ್ನೂ ಕೊಡುತ್ತಿತ್ತು. ಅಮೆರಿಕಾದಿಂದ ಕಬ್ಬಿಣದ ನೇಗಿಲುಗಳನ್ನು ತರಿಸಿಕೊಂಡ ಹೋಲಿಸ್ಟರ್ ಅವರು ಕೋಲಾರ ಜಿಲ್ಲೆಯಲ್ಲಿ ಯಶಸ್ವೀ ಕೃಷಿ ಪ್ರಯೋಗಗಳನ್ನು ಮಾಡಿದರು. ಇನ್ನಷ್ಟು ನೇಗಿಲುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಹೋಲಿಸ್ಟರ್ ಅವರು ಕೋಲಾರದ ಜಿಲ್ಲಾಧಿಕಾರಿಗಳನ್ನು ಕೋರಿದರು. ಇಂದಿಗೂ ಕೋಲಾರದಲ್ಲಿ ಹೋಲಿಸ್ಟರ್ ಚರ್ಚ್ ಇದೆ.
ಕೋಲಾರ ಜಿಲ್ಲೆಯಲ್ಲಿ ಬೀಳುವ ಅಲ್ಪಸ್ವಲ್ಪ ಮಳೆಗೆ ಉತ್ತು ಬಿತ್ತು ಬೆಳೆ ಬೆಳೆಯಲು ಮರದ ನೇಗಿಲಿನ ಕಾರ್ಯಕ್ಷಮತೆ ಸಾಕಾಗುವುದಿಲ್ಲವೆಂದು ಭಾವಿಸಲಾಯಿತು. ಅದಕ್ಕಾಗಿ, ಕೋಲಾರದ ಜಿಲ್ಲಾಧಿಕಾರಿಯವರು ರೆವೆರೆಂಡ್ ಹೋಲಿಸ್ಟರ್ ಅವರ ಕೋರಿಕೆಯಂತೆ ಸೆಪ್ಟೆಂಬರ್ 13, 1897ರಲ್ಲಿ ಮೈಸೂರು ಸಂಸ್ಥಾನದ ಜನರಲ್ ಮತ್ತು ರೆವೆನ್ಯೂ ಸೆಕ್ರೆಟರಿಯವರಿಗೆ ಪತ್ರ ಬರೆದು ಅಮೆರಿಕದಿಂದ 30ರಿಂದ 40 ಕಬ್ಬಿಣದ ನೇಗಿಲುಗಳನ್ನು ಆಮದು ಮಾಡಿಕೊಳ್ಳಲು ರೂ. 1000 ಅನ್ನು ಒದಗಿಸುವಂತೆ ಕೋರಿದರು. ಪ್ರತಿ ನೇಗಿಲಿನ ಬೆಲೆ ರೂ. 25ರಿಂದ 35 ಆಗಬಹುದು. ಆಯ್ದ ರೈತರಿಗೆ ಅಂತಹ ನೇಗಿಲುಗಳನ್ನು ಪೂರೈಸಿ ಅದಕ್ಕೆ ತಗುಲಿದ ವೆಚ್ಚವನ್ನು ಮೂರರಿಂದ ನಾಲ್ಕು ಕಂತುಗಳಲ್ಲಿ ರೈತರಿಂದ ವಸೂಲಿ ಮಾಡಿಕೊಳ್ಳಬಹುದು ಎಂಬ ಸಲಹೆಯನ್ನಿತ್ತರು. ಅಮೆರಿಕನ್ ನೇಗಿಲುಗಳು ಕೋಲಾರಕ್ಕೆ ಬಂದವು.
ಮಿಷನರಿ ಸಂಸ್ಥೆಯ ಉಪಸಂಸ್ಥೆಯಾದ ‘ಇಂಡಸ್ಟ್ರಿಯಲ್ ಮಿಷನ್’ ಸಂಸ್ಥೆಯು ಅಮೆರಿಕನ್ ನೇಗಿಲನ್ನು ಮತ್ತಷ್ಟು ಮಾರ್ಪಡಿಸಿ ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಕೋಲಾರದ ಮೌಲ್ಡ್ ಬೋರ್ಡ್ ನೇಗಿಲು ಎಂಬ ಹೆಸರಿನಿಂದ ಜನಪ್ರಿಯಗೊಳಿಸಿತು. ಅದು ಕೋಲಾರದ ಕಬ್ಬಿಣದ ನೇಗಿಲು ಅಥವಾ ಕೋಲಾರದ ಮಿಷನ್ ನೇಗಿಲು ಎಂಬ ಹೆಸರಿನಲ್ಲಿ ಪ್ರತಿ ಹಳ್ಳಿಯನ್ನೂ ತಲುಪಿತು. ಭೂಮಿಯನ್ನು ಕೃಷಿಗೆ ಒಗ್ಗುವಂತೆ ಪರಿಣಾಮಕಾರಿಯಾಗಿ ಉಳುಮೆ ಮಾಡಿಕೊಳ್ಳಲಾಯಿತು. ಕೋಲಾರದ ಭೂಮಿಯಲ್ಲಿ ಗರಿಕೆ ಹುಲ್ಲು ಹೆಚ್ಚಾಗಿ ಕಂಡುಬರುತ್ತದೆ. ಉಳುವಾಗ ಬೇರುಸಮೇತ ಬುಡಮೇಲಾಗುವ ಗರಿಕೆ ಹುಲ್ಲನ್ನು ಆಯ್ದು ತೊಳೆದು ದನಗಳಿಗೆ ಮೇವಾಗಿಯೂ ಬಳಸಿದರು.

ಉಳುಮೆಗೆ ಹಳ್ಳಿಕಾರ್ ಎತ್ತುಗಳು, ಹಸುಗಳು, ದೇಸಿ ದನಗಳನ್ನು ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದವು. ಕೋಲಾರದ ರೈತರು ಶ್ರಮಜೀವಿಗಳು, ಎಲ್ಲ ಕಾಲಕ್ಕೂ ಕಷ್ಟಸಹಿಷ್ಣುಗಳು. ಭೂಮ್ತಾಯಿಯನ್ನು ನಂಬಿ ಬದುಕು ಕಟ್ಟಿಕೊಂಡವರು. ರಾಗಿ, ರೇಷ್ಮೆ, ಹಾಲು, ಚಿನ್ನ, ಟೊಮ್ಯಾಟೋ, ತರಕಾರಿ, ಮಾವು, ಹಣ್ಣು ಹಂಪಲುಗಳಿಗೆ ಹೆಸರಾದ ಜಿಲ್ಲೆ ಕೋಲಾರ ಜಿಲ್ಲೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳಿರುವ ಜಿಲ್ಲೆಯೂ ಹೌದು. ಆಧುನಿಕ ಕೃಷಿಗೆ ಒಗ್ಗಿಕೊಂಡಂತೆ ಉಳುಮೆಯ ದನಗಳು, ನೇಗಿಲುಗಳು ಕಣ್ಮರೆಯಾಗುತ್ತಾ ಟ್ರ್ಯಾಕ್ಟರ್ ಮತ್ತು ಟಿಲ್ಲರ್‌ಗಳಿಗೆ, ಯಾಂತ್ರಿಕ ಕೃಷಿಗೆ ರೈತರು ಮಾರುಹೋಗಿದ್ದರಿಂದ ಕೃಷಿಗೆ ತೊಡಗಿಸುವ ಬಂಡವಾಳ ಕೊಂಚ ಹೆಚ್ಚಾಗಿದೆ. ಕೊಟ್ಟಿಗೆ ಗೊಬ್ಬರದ ಬಳಕೆ ಅತ್ಯಂತ ಕಡಿಮೆಯಾಗಿದೆ. ಆದ್ದರಿಂದ, ಅಲ್ಲಲ್ಲಿ ಸಾಂಪ್ರದಾಯಿಕ ಕೃಷಿಯ ವಿಧಾನಗಳನ್ನು ಕೊಂಚ ಮಟ್ಟಿಗಾದರೂ ಕಾಪಾಡಿಕೊಳ್ಳಬೇಕಿದೆ.
ಹೆಬ್ಬಾಳದ ನೇಗಿಲು
ಹೆಬ್ಬಾಳದ ಕೃಷಿ ಕ್ಷೇತ್ರದಲ್ಲಿ ಮಾರ್ಪಡಿಸಿ ತಯಾರಾದ ಜನಪ್ರಿಯವಾದ ಹೆಬ್ಬಾಳ ನೇಗಿಲು ಅದಾಗಲೇ ಇತ್ತು. ಯಲಹಂಕದ ಬಳಿಯ ಮುಂಚಿನಹಳ್ಳಿ ಎಸ್ಟೇಟ್‍ನಲ್ಲಿ ವಿನ್ಯಾಸಗೊಳಿಸಿದ ಕಬ್ಬಿಣದ ನೇಗಿಲಿಗೆ ‘ಇನ್ವೆಂಷನ್ಸ್ ಅಂಡ್ ಡಿಸೈನ್ ಆಕ್ಟ್ 1888’ ರ ಪ್ರಕಾರ ಪೇಟೆಂಟ್ ಪಡೆಯಲು ಎಸ್ಟೇಟಿನ ಮಾಲಿಕರಾದ ಫ್ರೆಡೆರಿಕ್ ಡೆವೆರೂ (Frederick Devereux)ಅವರು ಜುಲೈ 1915ರಲ್ಲಿ ಅರ್ಜಿ ಸಲ್ಲಿಸಿಕೊಂಡರು. ಅಷ್ಟೇನೂ ಶಕ್ತಿಶಾಲಿಯಲ್ಲದ ಸಣ್ಣ ಗಾತ್ರದ ಎತ್ತುಗಳೂ ಕೂಡ ಈ ನೇಗಿಲನ್ನು ಸಲೀಸಾಗಿ ಎಳೆಯುತ್ತವೆ ಎಂದರು ಡೆವೆರೂ.

ಮೈಸೂರು ನೇಗಿಲಿಗೆ ಸ್ವಾಮ್ಯ ಸನ್ನದು
ಕೃಷಿ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಲೆಸ್ಲೀ ಸಿ. ಕೋಲ್ಮನ್‍ರವರು ಜನವರಿ 10, 1924ರಂದು ಕಂದಾಯ ಇಲಾಖೆಯಲ್ಲಿದ್ದ ಕೃಷಿ ಕಾರ್ಯದರ್ಶಿಯವರಿಗೆ ಒಂದು ಪತ್ರ ಬರೆದು ಮೈಸೂರು ನೇಗಿಲಿಗೆ ಸ್ವಾಮ್ಯ ಸನ್ನದು (ಪೇಟೆಂಟ್) ಪಡೆಯಲು ವಿನಂತಿಸಿಕೊಂಡರು. ಕೋಲ್ಮನ್ ಕೋರಿಕೆಯ ನುಡಿಗಳು ಹೀಗಿದ್ದವು : ‘ಕೃಷಿ ಇಲಾಖೆಯಲ್ಲಿ ಮೈಸೂರು ನೇಗಿಲನ್ನು ವಿನ್ಯಾಸಗೊಳಿಸಲಾಗಿದೆ. ನಮಗಾಗಿ ಅದನ್ನು ಬ್ರಿಟನ್ನಿನ Messrs Ransomes Sims Jeffries, of I pswich ಅವರು ತಯಾರಿಸಿ ಕೊಡುತ್ತಿದ್ದಾರೆ. ಮೈಸೂರು ನೇಗಿಲು ಮೈಸೂರು ಸಂಸ್ಥಾನದಲ್ಲಷ್ಟೇ ಅಲ್ಲದೆ ಭಾರತದ ಇತರ ಕಡೆಗಳಲ್ಲಿಯೂ ಜನಪ್ರಿಯವಾಗುವ ಸಾಧ್ಯತೆಗಳಿವೆ.’
‘ನಾನು ಇಲ್ಲಿಯವರೆಗೂ ಈ ನೇಗಿಲಿಗೆ ಸ್ವಾಮ್ಯ ಸನ್ನದು ಪಡೆಯುವ ಯಾವ ಪ್ರಯತ್ನವನ್ನೂ ಮಾಡಿರುವುದಿಲ್ಲ. ಭಾರತದಲ್ಲಿ ಬೇರೆ ಯಾರಾದರೂ ಇದೇ ನೇಗಿಲಿಗೆ ಪೇಟೆಂಟ್ ಪಡೆಯುವ ಸಾಧ್ಯತೆಯಿದೆ. ಆದ್ದರಿಂದ, ಅದಕ್ಕೆ ಪೇಟೆಂಟ್ ಪಡೆಯಬೇಕಿದೆ. ನೇಗಿಲಿಗೂ ಕೂಡ ಪೇಟೆಂಟ್ ಪಡೆಯುವ ಅವಕಾಶವಿದೆಯೇ? ನನಗೆ ತಿಳಿಯದು.’ ಎಂದರು ಕೋಲ್ಮನ್.

‘ನೇಗಿಲಿಗೆ ಪೇಟೆಂಟ್ ಪಡೆಯುವ ಅವಕಾಶವಿದ್ದಲ್ಲಿ ಮೈಸೂರು ಕೃಷಿ ಇಲಾಖೆಯ ಪರವಾಗಿ ಅಥವಾ ಮೈಸೂರು ಸರ್ಕಾರದ ಪರವಾಗಿ ಪೇಟೆಂಟ್ ಪಡೆದರೆ ಮೈಸೂರು ಸಂಸ್ಥಾನಕ್ಕೆ ಅದರಿಂದ ಲಾಭವಾಗುವುದು. ಸರ್ಕಾರದ ಅನುಮತಿ ಪಡೆದು ನನಗೆ ತಿಳಿಸಿದಲ್ಲಿ, ನಾನು ಪೇಟೆಂಟ್‍ಗಾಗಿ ಅರ್ಜಿ ಸಲ್ಲಿಸುವೆನು. ಪೇಟೆಂಟ್ ಪಡೆಯಲು ತಗಲುವ ವೆಚ್ಚ ನನಗೆ ತಿಳಿಯದು. ವೆಚ್ಚದ ಮಾಹಿತಿಯು ತಮ್ಮ ಕಚೇರಿಯಲ್ಲಿ ಸಿಗಬಹುದು. ಹೆಚ್ಚೆಂದರೆ, ರೂ. 200 ಆಗಬಹುದು. ಅದನ್ನು ಕೃಷಿ ಇಲಾಖೆಯಿಂದ ಕೊಡಲಾಗುವುದು’ ಎಂದು ಎಲ್ಲಾ ಸಾಧ್ಯತೆಗಳ ಕುರಿತು ವಿವರವಾಗಿ ಬರೆದರು ಕೋಲ್ಮನ್.
ಮೈಸೂರು ಉಪಕರಣ ಕಾರ್ಖಾನೆ
ಹಾಸನದ ಬಳಿಯ ಆಡುವಳ್ಳಿ ಮತ್ತ ಕಾಟಿಹಳ್ಳಿಯಲ್ಲಿ 1939ರಲ್ಲಿ ಮೈಸೂರು ಇಂಪ್ಲಿಮೆಂಟ್ಸ್ ಕಾರ್ಖಾನೆಯನ್ನು ಆರಂಭಿಸಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಬಳಸುವ ಉಪಕರಣಗಳನ್ನು ಉತ್ಪಾದಿಸಿ ರೈತರಿಗೆ, ಎಸ್ಟೇಟ್ ಮಾಲೀಕರಿಗೆ ಪೂರೈಸಲಾಯಿತು. ಅಲ್ಲಿ ನೇಗಿಲು, ನೊಗ, ಹಾರೆ, ಗುದ್ದಲಿ, ಸನಿಕೆ ಮುಂತಾದ ಕೃಷಿ ಉಪಕರಣಗಳನ್ನು ತಯಾರಿಸುವುದರ ಜೊತೆಗೆ ಯುದ್ಧ ಸಾಮಗ್ರಿಗಳನ್ನು ಕೂಡ ಉತ್ಪಾದಿಸಲಾಗುತ್ತಿತ್ತು. ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಕಾಲದಲ್ಲಾದ ಮಹತ್ತರವಾದ ನೂರಾರು ಅಭಿವೃದ್ಧಿ ಕೆಲಸಗಳಲ್ಲಿ ಹಾಸನದ ಮೈಸೂರು ಇಂಪ್ಲಿಮೆಂಟ್ಸ್ ಕಾರ್ಖಾನೆಯ ಆರಂಭವೂ ಒಂದು.
ಆಧುನಿಕ ಕೃಷಿ ಪದ್ದತಿಗಳ ಮೂಲಕ ಯಾಂತ್ರಿಕೃತ ಬೇಸಾಯವು ಗ್ರಾಮೀಣ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದರೂ ಅಲ್ಲೊಬ್ಬ ಇಲ್ಲೊಬ್ಬ ರೈತರು ನೇಗಿಲುಗಳನ್ನು ಬಳಸಿ ಹೆಮ್ಮೆಯಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕನಕಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ತುಮಕೂರು ಮುಂತಾದೆಡೆ ಮರದ ನೇಗಿಲು ಮತ್ತು ಕಬ್ಬಿಣದ ನೇಗಿಲುಗಳ ಬಳಕೆಯಿದೆ.
ರೈತರಿಗೆ ನೆರವಾಗಲು ಹಲವು ಯೋಜನೆಗಳು ಬೇಕು
ಕನ್ನಡದ ಹೆಸರಾಂತ ಲೇಖಕರಾದ ಪೂರ್ಣಚಂದ್ರ ತೇಜಸ್ವಿಯವರು ಸೇರಿದಂತೆ ಹಲವು ಚಿಂತಕರು ‘Farmers are an endangered species’ ಅರ್ಥಾತ್ ‘ರೈತರು ಅಳಿವಿನಂಚಿನಲ್ಲಿರುವ ಪ್ರಭೇದಗಳು’ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಯುವಜನರನ್ನು ಕೃಷಿಯತ್ತ ಆಕರ್ಷಿಸಬೇಕಿದೆ. ಹಳ್ಳಿಕಾರ್, ಅಮೃತ್ ಮಹಲ್, ಖಿಲ್ಲಾರ್, ದೇವಣಿ, ಕೃಷ್ಣಾ ತೀರದಂತಹ ದುಡಿಮೆಯ ದನಗಳನ್ನು ಕೃಷಿಗೆ ಬಳಸಬೇಕಿದೆ. ಈ ಎಲ್ಲಾ ತಳಿಗಳನ್ನು ಸಂರಕ್ಷಿಸಿ ಕಾಪಾಡಿಕೊಳ್ಳುವ ಕ್ರಮಗಳಲ್ಲಿ ಕೃಷಿ ಕೆಲಸಗಳಲ್ಲಿ ಅವುಗಳನ್ನು ತೊಡಗಿಸುವ ಉದ್ದೇಶವೂ ಕೂಡ ಒಂದು.
ಕೆಲವು ಹಳ್ಳಿಗಳಲ್ಲಿ ಹಳ್ಳಿಕಾರ್ ಮತ್ತು ಅಮೃತ್ ಮಹಲ್ ತಳಿಗಳನ್ನು ಸಿರಿವಂತಿಕೆಗಾಗಿ ಮಾತ್ರ ಎಂಬಂತೆ ಸಾಕಲಾಗುತ್ತಿದೆ. ಜಾನುವಾರುಗಳ ಹಿಂಡುಗಳು ಸಿರಿವಂತಿಕೆಯ ಸಂಕೇತ ಎಂಬುದು ತಲತಲಾಂತರದಿಂದ ನಡೆದುಬಂದಿರುವ ಹೆಗ್ಗಳಿಕೆಯಾಗಿದೆ. ಅಂತಹ ಹೆಗ್ಗಳಿಕೆ ಇಂದಿನ ದಿನಗಳಲ್ಲಿ ಮತ್ತಷ್ಟು ಹಿಗ್ಗಬೇಕಿದೆ.

ಮೈಸೂರು ಮಹಾರಾಜರು ತಮ್ಮ ಸಂಸ್ಥಾನದಲ್ಲಿ ಜಾನುವಾರುಗಳ ಜಾತ್ರೆಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಸಿ ಉತ್ತಮ ಪೋಷಣೆಯ ಜೋಡೆತ್ತುಗಳಿಗೆ ಬಹುಮಾನ ನೀಡುವ ಪದ್ದತಿಗಳನ್ನು ಅನೂಚಾನವಾಗಿ ಪಾಲಿಸುತ್ತಾ ಬಂದರು. ಎ. ಕೃಷ್ಣಸ್ವಾಮಿ ಅಯ್ಯಂಗಾರ್ ಮತ್ತು ಕರ್ನಲ್ ಎಚ್. ಟಿ. ಪೀಸೆ ಅವರು ‘ನೋಟ್ ಆನ್ ದಿ ಕ್ಯಾಟಲ್ ಆಫ್ ಮೈಸೂರ್ ಸ್ಟೇಟ್’ ಎಂಬ ಕೃತಿಯನ್ನು 1895ರಲ್ಲಿಯೇ ಪ್ರಕಟಿಸಿದರು. ಅದೇ ಕೃತಿಯು 1912ರಲ್ಲಿ ಮರುಪ್ರಕಟವಾಯಿತು. ಅದನ್ನು ಡಾ. ಬಂಜಗೆರೆ ಜಯಪ್ರಕಾಶ್ ಅವರು 2021ರಲ್ಲಿ ‘ಮೈಸೂರು ಸಂಸ್ಥಾನದ ದನದ ತಳಿಗಳು’ ಎಂಬುದಾಗಿ ಅನುವಾದಿಸಿದರು. ಆ ಕೃತಿಯಲ್ಲಿ ನಮೂದಿಸಿರುವಂತೆ ದನಗಳ ಜಾತ್ರೆಯು ಕೋಲಾರ ಜಿಲ್ಲೆಯ ವಕ್ಕಲೇರಿ, ವಾನರಾಸಿ, ಶಿಡ್ಲಘಟ್ಟ ಬಳಿಯ ಮಾಲೂರು, ತಲಕಾಯಲ ಬೆಟ್ಟ, ಬಂಗಾರಪೇಟೆ, ತೊರನಹಳ್ಳಿ, ಮುಳಬಾಗಿಲು ಬಳಿಯ ಚಿಕ್ಕತಿರುಪತಿ, ಭೂತೆಮ್ಮನ ಬೆಟ್ಟ, ಆವಣಿ, ಯಲ್ದೂರು, ನಂದಿ, ತುಮಕೂರು ಜಿಲ್ಲೆಯ ಶ್ರೀಕ್ಯಾಮರ ಹಳ್ಳಿ, ನಾಗಲಮಡಿಕೆ, ಶಿವಮೊಗ್ಗ ಜಿಲ್ಲೆಯ ರಾಮಪುರ, ಮೈಸೂರು ಜಿಲ್ಲೆಯ ಎಡತೊರೆಯ ಚುನ್ನೇಹನಕಟ್ಟೆ, ಬೆಂಗಳೂರು ಜಿಲ್ಲೆಯ ಶಿವಗಂಗೆ, ಗೊಲ್ಲಹಳ್ಳಿ, ಜಡಿಗೇನಹಳ್ಳಿ, ಸುಬ್ಬರಾಯನ ಕಣಿವೆ, ಹುಸ್ಕೂರು, ಮತ್ತು ಮಾಗಡಿಯಲ್ಲಿ ನಡೆಯುತ್ತಿತ್ತು.
‘ಅರ್ತೆ ಬೇಸಾಯ’ ಎಂದು ಕರೆಯಲಾಗುವ, ರಾಗಿ ಬೆಳೆಯಲ್ಲಿ ಕುಂಟೆ ಅಥವಾ ಎಡಕುಂಟೆ ಹೊಡೆದು ಒತ್ತಾಗಿರುವ ರಾಗಿ ಪೈರುಗಳನ್ನು ತೆಳುಗೊಳಿಸಲು ಜಾನುವಾರುಗಳ ಬಳಕೆ ಮಾಡುತ್ತಿರುವುದು ಮೆಚ್ಚತಕ್ಕ ವಿಷಯ.
ದೇಸಿ ಜಾನುವಾರುಗಳು ಸಂರಕ್ಷಣೆಗೊಳ್ಳುವುದು ರೈತರ ಹಟ್ಟಿಗಳಲ್ಲಿ. ಅವುಗಳನ್ನು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ರೈತರನ್ನು ಗುರುತಿಸಿ ಉತ್ತೇಜಿಸುವ ವಿಶೇಷ ಯೋಜನೆಯೊಂದನ್ನು ರೂಪಿಸುವುದು ಒಳಿತು. ಸದ್ಯಕ್ಕೆ, ಪ್ರತಿ ರೈತನಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ ರೂ. 6000 ರೂಪಾಯಿಗಳ ಸಹಾಯಧನವಿದೆ.
ಇದನ್ನೂ ಓದಿ ಕೃಷಿ ರಂಗ | ಕರ್ನಾಟಕದ ಪ್ರಸಿದ್ಧ ಕೃಷಿ ವಿಜ್ಞಾನಿಗಳು
ಜಾನುವಾರುಗಳನ್ನು ಸಾಕಿ ಕೃಷಿ ಕೆಲಸಗಳಲ್ಲಿ ಬಳಸಿಕೊಳ್ಳುತ್ತಿರುವ ರೈತರಿಗಾಗಿ ಅನುದಾನದ ಯೋಜನೆ ರೂಪಿಸಿದರೆ ಏಕಕಾಲಕ್ಕೆ ದೇಸಿ ಜಾನುವಾರುಗಳ ಸಂರಕ್ಷಣೆ, ಕೊಟ್ಟಿಗೆ ಗೊಬ್ಬರದ ಉತ್ಪಾದನೆ, ನೇಗಿಲುಗಳ ತಯಾರಿಕೆ ಮತ್ತು ಬಳಕೆ, ಮರದ ನೇಗಿಲು ತಯಾರಿಕೆಯ ಬಡಗಿ ಕೆಲಸದ ನೈಪುಣ್ಯತೆ, ಸಾವಯವ ಕೃಷಿ, ಭೂಮಿಯ ಫಲವತ್ತತೆ, ಕೃಷಿಯಲ್ಲಿ ಯುವಜನತೆಯ ಭಾಗಿಯಾಗುವಿಕೆ, ಯುವ ಶಕ್ತಿಯ ಜೊತೆ ಪ್ರಾಣಿ ಶಕ್ತಿಯ ಬಳಕೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉತ್ತೇಜನ, ಕೃಷಿ ಭೂಮಿಯ ಪರಿಣಾಮಕಾರಿ ಬಳಕೆಯಂತಹ ಹಲವು ಉಪಯೋಗಗಳು ತಂತಾನೆ ರೂಪುಗೊಳ್ಳುತ್ತವೆ. ಅಂದಹಾಗೆ, ಅನುಕೂಲಸ್ಥ ರೈತರು ಯಾಂತ್ರೀಕೃತ ಕೃಷಿ(Mechanised Agriculture)ಯನ್ನು ನಡೆಸಬಹುದು.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ




