ಈ ವರದಿ ಈಗಾಗಲೇ ತಾಪಮಾನ ಏರಿಕೆ ಅಪಾಯದ ಗಡಿಯನ್ನು ದಾಟಿದೆ ಎಂಬುದಕ್ಕೆ ಸಾಕ್ಷಿಯಾಗಿ ಜೀವ ವೈವಿಧ್ಯತೆಯ ಭಾಗವಾಗಿರುವ ಹವಳದ ದಿಬ್ಬಗಳ ವಿನಾಶದತ್ತ ಬೊಟ್ಟು ಮಾಡುತ್ತಿದೆ. ಜಗತ್ತಿನಾದ್ಯಂತ 80 ಶೇಕಡಾ ಹವಳದ ದಿಬ್ಬಗಳು ಸತತವಾಗಿ ಬ್ಲೀಚಿಂಗ್‌ಗೆ ಒಳಗಾಗುತ್ತಿದ್ದು, ದುರ್ಬಲಗೊಳ್ಳುತ್ತಿವೆ ಎಂದು ವರದಿಯು ಹೇಳುತ್ತದೆ.
ಇದೀಗಷ್ಟೆ ಬಿಡುಗಡೆಗೊಂಡಿರುವ ಹವಾಮಾನ ಬದಲಾವಣೆ ಕುರಿತ ʻಗ್ಲೋಬಲ್ ಟಿಪ್ಪಿಂಗ್ ಪಾಯಿಂಟ್ಸ್ ರಿಪೋರ್ಟ್ 2025ʼ (Global tipping points reports 2025), ವಿಶ್ವದ ದೇಶಗಳೆಲ್ಲವೂ ತಲೆ ತಗ್ಗಿಸುವಂತೆ ಮಾಡಿದೆ. ಹವಾಮಾನ ಬದಲಾವಣೆಯನ್ನು ತಗ್ಗಿಸುವ ಪ್ರಯತ್ನಗಳಲ್ಲಿ ನಮ್ಮ ಕಳಪೆ ಸಾಧನೆ ಈ ರಿಪೋರ್ಟ್ ಕಾರ್ಡ್‌ನಲ್ಲಿ ಬಯಲಾಗಿದೆ. ಸಿಒಪಿ30 (COP30) ಗಾಗಿ ವಿಶ್ವದ ನಾನಾ ದೇಶಗಳು ಬ್ರೆಜಿಲ್‌ನ ಬೆಲೆಮ್‌ನಲ್ಲಿ ಒಟ್ಟುಗೂಡಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಕ್ರಮಗಳ ಚರ್ಚಿಸುವ ಹಾಗೂ ಕ್ರಿಯಾ ಯೋಜನೆ ರೂಪಿಸುವ ಮೊದಲೇ, ಪರಿಸರ ವ್ಯವಸ್ಥೆಗಳು ಈಗಾಗಲೇ ಅಪಾಯಕಾರಿ ಮಿತಿಗಳನ್ನು ದಾಟಿವೆ ಎಂಬ ಆಘಾತಕಾರಿ ಅಂಶಗಳು ಈ ವರದಿಯಲ್ಲಿ ಬಹಿರಂಗಗೊಂಡಿವೆ.
ಈ ವರದಿಯು ಜಾಗತಿಕ ತಾಪಮಾನ ಶೀಘ್ರದಲ್ಲೇ 1.5 ಡಿಗ್ರಿ ಮೀರಲಿದೆ ಎಂಬುದರೊಂದಿಗೆ ಮಹಾದುರಂತದ ಮುನ್ಸೂಚನೆಯನ್ನೂ ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಅನಿವಾರ್ಯವಾಗಿ ಒಪ್ಪಿಕೊಂಡಿದ್ದ ಹಲವಾರು ಹೊಸ ವಾಸ್ತವ ಅಥವಾ ನ್ಯೂ ರಿಯಾಲಿಟಿಗಳನ್ನು ಮನುಕುಲದ ಮುಂದಿಡುತ್ತ ಮತ್ತೊಮ್ಮೆ ಅದೇ ರೀತಿಯ ವಿಪ್ಲವವನ್ನು ಎದುರಿಸಲು ಸಜ್ಜಾಗಿರಿ ಎಂಬ ಎಚ್ಚರಿಕೆಯನ್ನು ನೀಡುತ್ತಿದೆ.
ತಾಪಮಾನ ಏರಿಕೆಯಲ್ಲಿ ಉಂಟಾಗುವ ಸಣ್ಣ ಏರಿಕೆಯೂ, ಈಗಾಗಲೇ ಹವಾಮಾನ ಬದಲಾವಣೆಯಿಂದಾಗಿ ಅಪಾಯದ ಅಂಚಿನಲ್ಲಿರುವ ಭೂಗೋಳದ ಪ್ರಾಕೃತಿಕ ಸಮಸ್ಯೆಗಳನ್ನು ಇನ್ನಷ್ಟು ತೀವ್ರವಾಗಿಸಿ ಊಹಿಸಲಸಾಧ್ಯ ಸಮಸ್ಯೆಗಳನ್ನು ತಂದೊಡ್ಡಬಲ್ಲುದು ಎಂದು ವರದಿಯು ಎಚ್ಚರಿಸುತ್ತದೆ.
23 ದೇಶಗಳ 160 ವಿಜ್ಞಾನಿಗಳು ಸೇರಿ ಅಧ್ಯಯನ ಕೈಗೊಂಡು ಪ್ರಸ್ತುತ ಪಡಿಸಿರುವ ಈ ಸಂಶೋಧನೆ, ಹವಾಮಾನ ಬದಲಾವಣೆಯ ಪರಿಣಾಮಗಳ ಅಪಾಯಗಳಿಗೆ ಒಳಗಾಗಬಲ್ಲ ಭೂಮಂಡಲದ ವಿವಿಧ ಭಾಗಗಳನ್ನು ಗುರುತಿಸಿದೆ. ಅದನ್ನು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಒಳಗಾಗುತ್ತಿರುವ ಹಿಮ ಸಂಬಂಧಿತ ಭಾಗಗಳು (ಕ್ರಯೋಸ್ಫಿಯರ್) ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಭಾಗಗಳು (ಬಯೋಸ್ಫಿಯರ್) ಎಂಬುದಾಗಿ ವಿಂಗಡಿಸಿ ಅವುಗಳ ಪ್ರಸ್ತುತ ಪರಿಸ್ಥಿತಿ, ತಾಪಮಾನ ಏರಿಕೆಯಿಂದಾಗಿ ಅವುಗಳು ಎದುರಿಸಬಹುದಾದ ಅಪಾಯಗಳು, ಅವುಗಳು ತಂದೊಡ್ಡುವ ನಷ್ಟ ಇತ್ಯಾದಿಗಳನ್ನುಈ ವರದಿಯಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ನಶಿಸುತ್ತಿರುವ ಹವಳದ ದಂಡೆಗಳು
ಈ ವರದಿ ಈಗಾಗಲೇ ತಾಪಮಾನ ಏರಿಕೆ ಅಪಾಯದ ಗಡಿಯನ್ನು ದಾಟಿದೆ ಎಂಬುದಕ್ಕೆ ಸಾಕ್ಷಿಯಾಗಿ ಜೀವ ವೈವಿಧ್ಯತೆಯ ಭಾಗವಾಗಿರುವ ಹವಳದ ದಿಬ್ಬಗಳ ವಿನಾಶದತ್ತ ಬೊಟ್ಟು ಮಾಡುತ್ತಿದೆ. ಜಗತ್ತಿನಾದ್ಯಂತ 80 ಶೇಕಡಾ ಹವಳದ ದಿಬ್ಬಗಳು ಸತತವಾಗಿ ಬ್ಲೀಚಿಂಗ್‌ಗೆ ಒಳಗಾಗುತ್ತಿದ್ದು(ಬಿಳುಚಿಕೊಳ್ಳುತ್ತಿದ್ದು), ದುರ್ಬಲಗೊಳ್ಳುತ್ತಿವೆ ಎಂದು ವರದಿಯು ಹೇಳುತ್ತದೆ. ಈಗಾಗಲೇ ಲಕ್ಷದ್ವೀಪ ಸೇರಿದಂತೆ, ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್, ಕೆರಿಬಿಯನ್ ಸಮುದ್ರದ ಬೆಚ್ಚಗಿನ ನೀರಿನ ಹವಳದ ದಿಬ್ಬಗಳು ಸಾಗರದ ತಾಪಮಾನದ ಹೆಚ್ಚಳದಿಂದಾಗಿ ಹಾನಿಗೊಂಡಿವೆ.
ಉಷ್ಣವಲಯದ ಸಮುದ್ರದಲ್ಲಿ ಕಂಡುಬರುವ ಈ ಹವಳದದಂಡೆಗಳಿಗೆ 20 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಸಾಕಾಗುತ್ತದೆ. ಆದರೆ ದೀರ್ಘಾವಧಿಯಲ್ಲಿ ಸಾಮಾನ್ಯಕ್ಕಿಂತ ಕೇವಲ ಒಂದು ಅಥವಾ ಎರಡು ಡಿಗ್ರಿ ತಾಪಮಾನ ಹೆಚ್ಚಳ ಕೂಡ ಈ ಹವಳಗಳಿಗೆ ಬಣ್ಣ ಮತ್ತು ಆಹಾರವನ್ನು ಒದಗಿಸುವ ಆಲ್ಗೀ ಎನ್ನುವ ಸಹಜೀವಿಗಳನ್ನು ಹೊರಹಾಕಿ ʻಕೋರಲ್ ಬ್ಲೀಚಿಂಗ್ʼ ಅಥವಾ ಹವಳಗಳು ಬಿಳಿಯಾಗಿ ಸಾಯಲು ಕಾರಣವಾಗುತ್ತದೆ. ಇದನ್ನೇ ಜೀವನಾಧಾರವಾಗಿ ಅವಲಂಬಿಸಿರುವ ಲಕ್ಷಗಟ್ಟಲೆ ಜನರ ಬದುಕನ್ನು ಆತಂಕಕ್ಕೆ ದೂಡುತ್ತದೆ. ಪ್ಯಾರಿಸ್ ಒಪ್ಪಂದದ ಪ್ರಕಾರ ತಾಪಮಾನ ಇಳಿಕೆಯ ಯಾವ ಷರತ್ತುಗಳೂ, ಯಾವ ಕ್ರಮಗಳೂ ಇದನ್ನು ರಕ್ಷಿಸಲು ಸಾಧ್ಯವಿಲ್ಲ. ತಾಪಮಾನ ಏರಿಕೆಯ ಕುರಿತಾಗಿ ಜಗತ್ತಿನ ದಿವ್ಯ ನಿರ್ಲಕ್ಷಕ್ಕೆ ಮೊದಲ ಬಲಿ ಈ ಹವಳದ ದಿಬ್ಬಗಳು.
ಧ್ರುವ ಪ್ರದೇಶದಲ್ಲಿ ಕರಗುತ್ತಿರುವ ಹಿಮದ ಹಾಳೆಗಳು
ಹವಳದ ದಿಬ್ಬಗಳ ನಂತರದಲ್ಲಿ ಈ ವರದಿ ಧ್ರುವ ಪ್ರದೇಶದ ಮಂಜುಗಡ್ಡೆಗಳು ಅಪಾಯದ ಅಂಚನ್ನು ತಲುಪಿಯಾಗಿವೆ ಎನ್ನುತ್ತದೆ. ಇದು ಜಗತ್ತಿನಾದ್ಯಂತ ಹಲವು ಮೀಟರ್‌ಗಳಷ್ಟು ಸಮುದ್ರಮಟ್ಟ ಏರಿಕೆಗೆ ಕಾರಣವಾಗುವುದರೊಂದಿಗೆ ಲಕ್ಷಾಂತರ ಜನರಿಗೆ ಅಪಾಯ ತಂದೊಡ್ಡುತ್ತಿದೆ. ಗ್ರೀನ್ ಲ್ಯಾಂಡ್ ಮತ್ತು ಅಂಟಾರ್ಟಿಕಾದ ಪಶ್ಚಿಮ ಭಾಗಗಳಲ್ಲಿ ಹಿಮದ ಹಾಳೆಗಳು ಅತ್ಯಂತ ವೇಗದಲ್ಲಿ ಕರಗುತ್ತಿದ್ದು, ಬಹುತೇಕ ಅಪಾಯದ ಬಿಂದುವನ್ನು ದಾಟಿದೆ ಎಂದು ವರದಿಯು ಆತಂಕ ವ್ಯಕ್ತಪಡಿಸುತ್ತದೆ. ಇದರ ಹೊರತಾಗಿಯೂ ಪರ್ವತದ ಎತ್ತರದ ಭಾಗಗಳಲ್ಲಿರುವ ಹಿಮಗಡ್ಡೆಗಳು ಪರ್ವತದ ಕೆಳಭಾಗಕ್ಕೆ ಸರಿಯುವಾಗ ಹೀಗೆ ಕರಗುವುದು ಬಹುತೇಕ ಸಾಮಾನ್ಯವಾದರೂ, ಅದು ಹವಾಮಾನ ಬದಲಾವಣೆಯ ಪರಿಣಾಮಗಳಿಂದಾಗಿ ಇನ್ನಷ್ಟು ವೇಗಪಡೆಯುತ್ತಿದೆ ಎಂದು ವರದಿಯು ಕಳವಳ ವ್ಯಕ್ತಪಡಿಸುತ್ತದೆ.
ಅಟ್ಲಾಂಟಿಕ್ ಮೆರಿಡಿಯನಲ್ ಓವರ್‌ಟರ್ನಿಂಗ್ ಸರ್ಕ್ಯುಲೇಷನ್
ಈ ವರದಿಯಲ್ಲಿ ಗುರುತಿಸಲಾದ ರೆಡ್‌ಫ್ಲಾಗ್‌ಗಳಲ್ಲಿ ಅಟ್ಲಾಂಟಿಕ್ ಮೆರಿಡಿಯನಲ್ ಓವರ್‌ಟರ್ನಿಂಗ್ ಸರ್ಕ್ಯುಲೇಷನ್ (ಎಎಮ್‌ಒಸಿ/AMOC) ಕುಸಿತವು ಸೇರಿದೆ.
ಸಾಗರದಲ್ಲಿ ನೀರಿನ ಪ್ರವಾಹಗಳ ಹರಿವು ಎರಡು ಪ್ರಮುಖ ವಿಧಗಳಲ್ಲಿರುತ್ತದೆ. ಒಂದು ಲಂಬವಾಗಿ ಎಂದರೆ ಸಮುದ್ರದ ನೀರಿನ ಮೇಲ್ಭಾಗ ಮತ್ತು ಒಳಭಾಗಕ್ಕೆ ಸಂಚರಿಸುವ ಮೇಲ್ಮೈ ಹರಿವು ಮತ್ತು ಎರಡನೆಯದು ಇಡೀ ಸಾಗರವನ್ನು ವ್ಯಾಪಿಸಬಹುದಾದ ಅಡ್ಡಡ್ಡಲಾಗಿ ಚಲಿಸುವ ಹರಿವು. ಲಂಬವಾಗಿ ಚಲಿಸುವ ಹರಿವು ಸಮುದ್ರದ ಒಳಭಾಗದಲ್ಲಿರುವ ಪೋಷಕಾಂಶಗಳನ್ನು ಸಾಗಿಸಿ ಸಾಗರದ ಜೀವವೈವಿಧ್ಯತೆಗೆ ಕಾರಣವಾದರೆ, ಅಡ್ಡವಾಗಿ ಚಲಿಸುವ ಹರಿವು ಶಾಖವನ್ನು ಅಲೆಗಳ ಮೂಲಕ ಸಾಗರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಿತರಿಸುತ್ತ ಹವಾಮಾನವನ್ನು ನಿಯಂತ್ರಿಸುತ್ತದೆ.

ಅಟ್ಲಾಂಟಿಕ್ ಮೆರಿಡಿಯನಲ್ ಓವರ್‌ಟರ್ನಿಂಗ್ ಸರ್ಕ್ಯುಲೇಷನ್ – ಅಟ್ಲಾಂಟಿಕ್ ಮಹಾಸಾಗರದೊಳಗೆ ಶಾಖವನ್ನು ಅಲೆಗಳ ಮೂಲಕ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತಲುಪಿಸುವ ಸಮುದ್ರ ಪ್ರವಾಹಗಳ ಹರಿವಿನ ವ್ಯವಸ್ಥೆಯಾಗಿದೆ. ಆದರೆ ಹವಾಮಾನ ಬದಲಾವಣೆಯಿಂದಾಗಿ ಈ ವ್ಯವಸ್ಥೆ ಕುಸಿಯುತ್ತಿದೆ ಎಂದು ವೈಜ್ಞಾನಿಕ ಸಮುದಾಯದಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಹೆಚ್ಚಿನ ಹವಾಮಾನ ವಿಜ್ಞಾನಿಗಳು ಎಎಮ್‌ಒಸಿ/AMOC ಯ ಗಮನಾರ್ಹ ದುರ್ಬಲಗೊಳ್ಳುವಿಕೆಯು ಗಂಭೀರ, ಬಹುತೇಕ ವಿನಾಶಕಾರಿ ಹವಾಮಾನ ಬದಲಾವಣೆಗೆ ಕಾರಣವಾಗಬಹುದು ಎಂಬುದಾಗಿ ಅಭಿಪ್ರಾಯಪಡುತ್ತಾರೆ.ಈ ಬದಲಾವಣೆ ಬೆಚ್ಚಗಿರುವ ಭಾಗಕ್ಕೆ ತಂಪಾದ ನೀರನ್ನುಮತ್ತು ತಂಪಾಗಿರುವ ಭಾಗಕ್ಕೆ ಬೆಚ್ಚಗಿನ ನೀರನ್ನು ತರುವ ಬದಲು, ಅದು ಅದಲು ಬದಲಾಗಿಸಿ, ಉಷ್ಣವಲಯದ ಪ್ರದೇಶಗಳನ್ನು ಇನ್ನಷ್ಟು ಬಿಸಿಯಾಗಿಸಿ ಮತ್ತು ಧ್ರುವೀಯ ಪ್ರದೇಶವನ್ನು ಇನ್ನಷ್ಟು ತಂಪಾಗಿಸಬಹುದು.
ಇದರೊಂದಿಗೆ ಎಎಂಒಸಿ/AMOC ಯ ಕುಸಿತವು ಮಳೆಯ ಮೇಲೆ ಪರಿಣಾಮ ಬೀರಬಹುದು, ಬಿರುಗಾಳಿಗಳನ್ನು ತೀವ್ರಗೊಳಿಸಬಹುದು ಮತ್ತು ಉತ್ತರ ಅಮೆರಿಕಾದ ಅಟ್ಲಾಂಟಿಕ್ ಕರಾವಳಿಯಲ್ಲಿ ಸಮುದ್ರ ಮಟ್ಟವನ್ನು ಏರಿಸಬಹುದು ಎಂದು ಅಧ್ಯಯನವು ಎಚ್ಚರಿಸಿದೆ.
ಅಪಾಯದಂಚಿಗೆ ಸಿಲುಕಿರುವ ಅಮೆಜಾನ್ ಮಳೆಕಾಡುಗಳು
ಹವಾಮಾನ ನಿಯಂತ್ರಣ ವ್ಯವಸ್ಥೆಯಾಗಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಅಮೆಜಾನ್ ಕಾಡುಗಳು ಅಪಾಯದ ಅಂಚನ್ನು ಊಹಿಸಿದ್ದಕ್ಕಿಂತಲೂ ಮೊದಲೇ ತಲುಪಿಬಿಟ್ಟಿವೆ.
ಅಮೆಜಾನ್ ಮಳೆಕಾಡುಗಳು ದಕ್ಷಿಣ ಅಮೆರಿಕದಾದ್ಯಂತ ಹವಾಮಾನವನ್ನು ನಿಯಂತ್ರಿಸುವಲ್ಲಿ ಮತ್ತು ಮಳೆ ಬೀಳುವಿಕೆಯನ್ನ ಪ್ರಭಾವಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಬರವು ಅಮೆಜಾನ್ ಪ್ರದೇಶವು ಹೆಚ್ಚಿನ ಪ್ರಮಾಣದ ಇಂಗಾಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡುವಂತೆ ಮಾಡುತ್ತದೆ, ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ.
ಅಮೆಜಾನ್ ಕಾಡುಗಳು ತೇವಾಂಶ ಮರುಬಳಕೆಯ ಮೂಲಕ ತನ್ನದೇ ಆದ ಜಲಚಕ್ರ ವ್ಯವಸ್ಥೆಯನ್ನು ಹೊಂದಿದೆ. ಈ ವ್ಯವಸ್ಥೆಗೆ ಸಮಸ್ಯೆ ಉಂಟಾದರೆ ಅದು ವಾತಾವರಣದಲ್ಲಿ ಬದಲಾವಣೆಗಳನ್ನು ಉಂಟು ಮಾಡಬಹುದು. ಇದರಲ್ಲಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಮಳೆಯ ಋತುವಿನಲ್ಲಿ ಉಂಟಾಗುವ ಬದಲಾವಣೆಗಳು ಸೇರಿವೆ. ಒಟ್ಟು ಜೀವವೈವಿಧ್ಯತೆಯಲ್ಲಿ ಸುಮಾರು ಶೇಕಡಾ 10ರಷ್ಟು ಪಾಲು ಹೊಂದಿರುವ ಅಮೆಜಾನ್‌ನ ಅಪೂರ್ವ ಜೀವವೈವಿಧ್ಯವು ಇದರಿಂದಾಗಿ ನಷ್ಟಹೊಂದುತ್ತದೆ.
ಹವಾಮಾನ ಬದಲಾವಣೆ ಮತ್ತು ಅರಣ್ಯನಾಶವು ಒಟ್ಟಾಗಿ ಅಮೆಜಾನ್ ಅರಣ್ಯವನ್ನು ಗಂಭೀರ ಅಪಾಯಕ್ಕೆ ಸಿಲುಕಿಸಿದೆ. ಇದರೊಂದಿಗೆ ಅಮೆಜಾನ್ ಮಳೆಕಾಡುಗಳು ಎರಡು ವರ್ಷಗಳ ಕಾಲ ತೀವ್ರ ಎಲ್ ನಿನೋ-ಪ್ರೇರಿತ ಬರಗಾಲವನ್ನು ಎದುರಿಸಿದೆ. ಇವೆಲ್ಲವೂ ಸೇರಿ ಭೂಗೋಳದ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ದಾಟುವ ಮೊದಲೇ ಈ ಮಳೆಕಾಡುಗಳನ್ನು ಅಪಾಯಕ್ಕೆ ಸಿಲುಕಿಸಿವೆ. ಇದು ಜೀವವೈವಿಧ್ಯತೆಗೆ ಲೆಕ್ಕಿವಿಡಲಾಗದಷ್ಟು ಹಾನಿಯನ್ನುಂಟುಮಾಡಿದೆ ಮತ್ತು ಅರಣ್ಯವನ್ನು ಅವಲಂಬಿಸಿರುವ ಹತ್ತುಕೋಟಿಗಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಇಲ್ಲಿರುವ ಸಮುದಾಯಗಳು ನಿರಾಶ್ರಿತವಾಗುತ್ತಿರುವುದರೊಂದಿಗೆ, ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ.

ಹವಾಮಾನ ಬದಲಾವಣೆ ತಗ್ಗಿಸಲು ಸಮುದಾಯ ಪ್ರೇರಿತ ಪ್ರಯತ್ನ ʻಗ್ಲೋಬಲ್ ಮುಟಿರಾವೊʼ
ಇಂಟರ್-ಅಮೆರಿಕನ್ ಕೋರ್ಟ್ ಫಾರ್ ಹ್ಯೂಮನ್ ರೈಟ್ಸ್, ಸುರಕ್ಷಿತ ಹವಾಮಾನ ವ್ಯವಸ್ಥೆಯಲ್ಲಿರುವುದು ಮಾನವರ ಹಕ್ಕು ಎನ್ನುತ್ತದೆ. ಹೀಗಾಗಿ ಹವಾಮಾನ ವ್ಯವಸ್ಥೆಗೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುವುದು ಕಾನೂನುಬದ್ಧವಾಗಿ ಅಪರಾಧವಾಗುತ್ತದೆ.
ಆದರೆ ನಾವು ಭೂಮಿಯ ತಾಪಮಾನವನ್ನು ಮಿತಿಮೀರಿ ಏರಿಕೆಯಾಗಲು ಬಿಡುತ್ತಿದ್ದೇವೆ. ಹವಾಮಾನ ಬದಲಾವಣೆಗಳನ್ನು ತಡೆಯುವ ನಿಟ್ಟಿನಲ್ಲಿ ಭೂಮಿಯ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿಗೆ ಏರುವುದನ್ನು ತಡೆಯಬೇಕು. ಅದನ್ನು ಸಾಧಿಸಲು, ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣವನ್ನು 2030ರ ವೇಳೆಗೆ (2010ರ ಮಟ್ಟಕ್ಕೆ ಹೋಲಿಸಿದರೆ) ಅರ್ಧದಷ್ಟು ಕಡಿಮೆಗೊಳಿಸಲೇಬೇಕು ಮತ್ತು 2050ರ ವೇಳೆಗೆ ನೆಟ್ ಝೀರೋ ತಲುಪಲೇಬೇಕು. ನಾವು ಕಾರ್ಯತತ್ಪರರಾಗುವ ಮೊದಲೇ ಹವಾಮಾನ ಬದಲಾವಣೆಯ ಹಿನ್ನಲೆಯಲ್ಲಿ ಗುರುತಿಸಲಾದ ಭೂಮಂಡಲದ ಭಾಗಗಳು ಟಿಪ್ಪಿಂಗ್ ಪಾಯಿಂಟ್‌ಗಳನ್ನು ದಾಟಿಬಿಟ್ಟರೆ ನಂತರ ನಮ್ಮ ಎಲ್ಲಾ ಪ್ರಯತ್ನಗಳು ನೀರಲ್ಲಿ ಹೋಮವೇ.
ಈ ಟಿಪ್ಪಿಂಗ್ ಪಾಯಿಂಟ್‌ಗಳತ್ತ ಕೈತಪ್ಪಿ ಹೋಗುತ್ತಿರುವ ನಮ್ಮ ಪ್ರಾಕೃತಿಕ ವೈವಿಧ್ಯತೆಗಳನ್ನು ತಡೆಗಟ್ಟುವ ಅವಕಾಶಗಳು ತ್ವರಿತಗತಿಯಲ್ಲಿ ಅಂತ್ಯಗೊಳ್ಳುತ್ತಿವೆ. ಈ ವರದಿ ಪ್ರಸ್ತುತ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳು (NDC ಗಳು) ಮತ್ತು ನಿವ್ವಳ ಶೂನ್ಯ ಗುರಿ ಈ ಎರಡೇ ಸಾಕಾಗುವುದಿಲ್ಲ ಎಂದು ಎಚ್ಚರಿಸುತ್ತದೆ. ಹೀಗಾಗಿ ಮುಂಬರಲಿರುವ ಸಿಒಪಿ30/COP30 ನಲ್ಲಿ ವಿಶ್ವದ ವಿವಿಧ ದೇಶಗಳ ನಾಯಕರು ಮತ್ತು ನೀತಿ ನಿರೂಪಕರಿಂದ ಇದಕ್ಕೆ ತಕ್ಷಣದ, ತುರ್ತಾದ ಕ್ರಮವಾಗಬೇಕಿದೆ.
ಈ ಕ್ರಮವನ್ನು ಅತ್ಯಂತ ಜರೂರಾಗಿ ಸಾಧಿಸಲು, ತಂತ್ರಜ್ಞಾನಗಳ ಜೊತೆಗೆ ಮತ್ತು ನಮ್ಮ ನಡವಳಿಕೆಗಳಲ್ಲಿಯೂ ಶೂನ್ಯ ಹೊರಸೂಸುವಿಕೆಯ ಕಡೆಗೆ ಸ್ವಯಂ ಪ್ರೇರಿತ ಬದಲಾವಣೆಗಳಾಗಬೇಕು.
ಮೊದಲ ಜಾಗತಿಕ ಟಿಪ್ಪಿಂಗ್ ಪಾಯಿಂಟ್‌ಗಳ ವರದಿ ಪ್ರಕಟವಾದ ಎರಡು ವರ್ಷಗಳಲ್ಲಿ, ವಿಶ್ವಾದ್ಯಂತ ಸೌರಶಕ್ತಿ ಮತ್ತು ವಿದ್ಯುತ್ ವಾಹನಗಳ ಬಳಕೆಯಲ್ಲಿ ಆಮೂಲಾಗ್ರ ವೇಗವರ್ಧನೆ ಕಂಡುಬಂದಿತ್ತು. 2024 ರಲ್ಲಿ ಇವಿ-ಎಲೆಕ್ಟ್ರಿಕ್ ವೆಹಿಕಲ್ ಮಾರಾಟಗಳು ಜಾಗತಿಕವಾಗಿ ಶೇ 25 ರಷ್ಟು ಹೆಚ್ಚಾಗಿತ್ತು. ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನಾದ್ಯಂತ, ಸಮುದಾಯಗಳು ಕೃಷಿಗೆ ಪ್ರಾಮುಖ್ಯತೆ ನೀಡಲಾರಂಭಿಸಿದವು. ಮ್ಯಾಂಗ್ರೋವ್‌ಗಳು ಮತ್ತು ಕಾಡುಗಳನ್ನು ಪುನಃಸ್ಥಾಪಿಸಲಾರಂಭಿಸಿದವು, ಮತ್ತು ಹೊಸ ಆರ್ಥಿಕ ಸರಪಳಿಗಳನ್ನು ಅಭಿವೃದ್ಧಿಪಡಿಸಲಾಯಿತು. ಜಾಗತಿಕ ಮಟ್ಟದಲ್ಲಿ ದೇಶಗಳ ನಡುವೆ ಒಗ್ಗಟ್ಟು ಮತ್ತು ಅಗತ್ಯವಿರುವ ಸಂಪನ್ಮೂಲದ ಕ್ರೋಢೀಕರಣದ ಮೂಲಕ ಈ ಎಲ್ಲಾ ಉಪಕ್ರಮಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುವಂತೆ ಮಾಡಬಹುದು.
ಇದನ್ನೂ ಓದಿ ಭೂಮ್ತಾಯಿ | ಹವಾಮಾನ ಬದಲಾವಣೆ ತರುವ ಮಾನಸಿಕ ಅಸ್ವಸ್ಥತೆ
ಕಾನೂನು ಚೌಕಟ್ಟುಗಳು ಮತ್ತು ದಕ್ಷ ಆಡಳಿತ, ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಸುಸ್ಥಿರ ಉತ್ಪಾದನೆಗೆ ಹಣಕಾಸು ಬೆಂಬಲಿತ ಪ್ರೋತ್ಸಾಹ, ಬಳಕೆಯಲ್ಲಿ ಬದಲಾವಣೆಗಳು ಮತ್ತು ಸುಸ್ಥಿರ ಅಂತರರಾಷ್ಟ್ರೀಯ ವಾಣಿಜ್ಯ ನೀತಿಗಳು ಪ್ರಕೃತಿಯಲ್ಲಿ ಹಾನಿಕಾರಕ ಟಿಪ್ಪಿಂಗ್ ಪಾಯಿಂಟ್‌ಗಳನ್ನು ತಪ್ಪಿಸಲು ನಿರ್ಣಾಯಕವಾಗಿವೆ.
ಈ ವರದಿಯು ಹವಾಮಾನ ಬದಲಾವಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಿಒಪಿ 30 ಕೈಗೊಳ್ಳುತ್ತಿರುವ ಉಪಕ್ರಮ ʻಗ್ಲೋಬಲ್ ಮುಟಿರಾವೊʼವನ್ನು ಅನುಮೋದಿಸುತ್ತದೆ. ಬ್ರೆಜಿಲಿಯನ್ ಸಂಸ್ಕೃತಿ ಪ್ರಕಾರ “ಮುಟಿರಾವೊ” ಎಂದರೆ ಅಗತ್ಯದ ಸಮಯದಲ್ಲಿ ಒಬ್ಬರೊನ್ನೊಬ್ಬರು ಪರಸ್ಪರ ಬೆಂಬಲಿಸುವಂತಹ, ಸವಾಲುಗಳನ್ನು ನಿಭಾಯಿಸಲು ಜನರು ಒಟ್ಟಾಗಿ ಸೇರುವ, ಸಮುದಾಯ-ಪ್ರೇರಿತ ಪ್ರಯತ್ನ. ಈ ಪರಿಕಲ್ಪನೆಯನ್ನು ವಿಶ್ವಾದ್ಯಂತ ವಿಸ್ತರಿಸುವ, ಜಾಗತಿಕ ಮಹತ್ವಾಕಾಂಕ್ಷೆಗಳೊಂದಿಗೆ ಇದನ್ನು ಗ್ಲೋಬಲ್ ಮುಟಿರಾವೋ ಎಂದು ಹೆಸರಿಸಲಾಗಿದೆ. ಗ್ಲೋಬಲ್ ಮುಟಿರಾವೊ ಕೇವಲ ಮಾತುಕತೆಗಳನ್ನು ಮೀರಿ, ಜನರನ್ನು ಒಳಗೊಳ್ಳುವ ಸ್ಪಷ್ಟವಾದ ಅನುಷ್ಠಾನದ ಕಡೆಗೆ ಸಾಗುವ ಗುರಿಯನ್ನು ಹೊಂದಿದೆ. ಇದು ಭವಿಷ್ಯವನ್ನು ಪರಸ್ಪರ ಸಹಕಾರದ ಮೂಲಕ ರೂಪಿಸಲು ಬಯಸುತ್ತದೆ.
ಗ್ಲೋಬಲ್ ಟಿಪ್ಪಿಂಗ್ ಪಾಯಿಂಟ್ಸ್ ರಿಪೋರ್ಟ್ 2025 ಬಿಡುಗಡೆ ಮಾಡಿರುವ ಆಘಾತಕಾರಿ ಅಂಶಗಳ ಹಿನ್ನಲೆಯಲ್ಲಿ ಸಿಪಿಒ 30 ಪ್ರಾಮುಖ್ಯತೆಯನ್ನ ಪಡೆದುಕೊಳ್ಳುತ್ತಿದೆ. ಜೊತೆಗೆ ಗ್ಲೋಬಲ್ ಮುಟಿರಾವೋ ಉಪಕ್ರಮದತ್ತ ಎಲ್ಲರಲ್ಲೂ ನಿರೀಕ್ಷೆ ಮತ್ತು ಆಶಾವಾದವನ್ನು ಹುಟ್ಟುಹಾಕುತ್ತಿದೆ.

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ




