ಕಾಲಮಾನ | ಉಮರ್‌ ಖಾಲಿದ್‌ ಬಂಧನ- ಸುರಂಗಯಾನ ಕೊನೆಗೊಳ್ಳಲಿ, ಬೆಳಕು ಕಾಣಲಿ

Date:

ಕಳೆದ ಐದು ವರ್ಷಗಳಿಂದ ಉಮರ್‌ ವಿಚಾರಣಾಧೀನ ಕೈದಿಯಾಗಿ ದೆಹಲಿಯ ತಿಹಾರ್‌ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಗುಲ್‌ಫಿಶಾ ಫಾತಿಮಾ ಎಂಬ ಯುವ ಕಾರ್ಯಕರ್ತೆಯ ಜೊತೆ ಇನ್ನು ಒಂಬತ್ತು ಪುರುಷ ಕಾರ್ಯಕರ್ತರು ಜೈಲುವಾಸಿಗಳಾಗಿದ್ದಾರೆ. ಗಲಭೆಗೆ ಪ್ರಚೋದಿಸಿದ ಕಪಿಲ್‌ ಮಿಶ್ರಾ ದೆಹಲಿ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿ ಮತ್ತು ಅನುರಾಗ್‌ ಠಾಕೂರ್‌ ಕೇಂದ್ರದಲ್ಲಿ ಸಚಿವರಾಗಿ ಮೆರೆಯುತ್ತಿದ್ದಾರೆ!

ದೆಹಲಿಯ ಪ್ರತಿಷ್ಠಿತ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‌ಯು)ದ ಮಾಜಿ ನವ-ಇತಿಹಾಸದ ವಿದ್ಯಾರ್ಥಿ ಉಮರ್‌ ಖಾಲಿದ್.‌ ಅಲ್ಲಿ ಅವರು ವ್ಯಾಸಂಗವನ್ನು ಮಾಡುತ್ತಿದ್ದಾಗ, ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಡೆಮೊಕ್ರಟಿಕ್‌ ಸ್ಟುಡೆಂಟ್ಸ್‌ ಯೂನಿಯನ್‌ನ ಸದಸ್ಯರಾಗಿದ್ದರು. ಆ ಸಮಯದಲ್ಲಿ ಅವರು ʼ ಕಡ್ಡಾಯವಾಗಿ ಮತೀಯ ಆಚರಣೆಗಳನ್ನು ಪಾಲಿಸದ ಮುಸಲ್ಮಾನ ʼ ಎಂದು ತಮ್ಮನ್ನು ತಾವು ಬಣ್ಣಿಸಿಕೊಂಡಿದ್ದರು! 2016ರ ಫೆಬ್ರವರಿ 9ರಂದು ಜೆಎನ್‌ಯುನಲ್ಲಿ ಸುಮಾರು ಹತ್ತು ವಿದ್ಯಾರ್ಥಿಗಳು ಅಫ್ಜಲ್‌ ಗುರು (2001ರ ಸಂಸತ್‌ ಭವನದ ಆಕ್ರಮಣದ ರೂವಾರಿ) ಮತ್ತು ಮಕ್ಬೂಲ್‌ ಭಟ್‌ ಮರಣದಂಡನೆಯನ್ನು ಪ್ರತಿಭಟಿಸುವ ಮತ್ತು ಕಾಶ್ಮೀರಿ ಜನತೆ ತಮ್ಮ ಸ್ವಯಂ ನಿರ್ಣಯದ ಪ್ರಜಾಸತ್ತಾತ್ಮಕ ಹೋರಾಟದ ಹಕ್ಕಿಗಾಗಿ ಬೆಂಬಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದನ್ನು ವಿರೋಧಿಸಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಪ್ರತಿಭಟಿಸಿತ್ತು. ಇದಕ್ಕೆ ಸ್ಪಂದಿಸಿ ಕೊನೆಯ ಗಳಿಗೆಯಲ್ಲಿ ವಿಶ್ವವಿದ್ಯಾನಿಲಯದ ಆಡಳಿತ ವರ್ಗ ಕಾರ್ಯಕ್ರಮಕ್ಕೆ ನೀಡಿದ್ದ ಪರವಾನಗಿಯನ್ನು ವಾಪಸ್ಸು ಪಡೆಯಿತು. ಆದರೂ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಭಾರತ-ವಿರೋಧಿ ಘೋಷಣೆಗಳನ್ನು ಕೂಗಲಾಯಿತು ಎಂಬ ಸುದ್ದಿ ಹರಡಿತು (ತರುವಾಯ ದೆಹಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಆಡಳಿತ ವರ್ಗ ನಡೆಸಿದ ವಿಚಾರಣೆಯಿಂದ ಕೆಲವು ಹೊರಗಡೆಯ ವಿದ್ಯಾರ್ಥಿಗಳು ಈ ಘೋಷಣೆಗಳನ್ನು ಕೂಗಿದರು ಎಂಬ ಸಂಗತಿ ಬೆಳಕಿಗೆ ಬಂದಿತು). ಇದು ಕೆಲವು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಈ ಸಂಬಂಧದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿದ್ದ ಕನ್ಹಯ್ಯ ಕುಮಾರರನ್ನು ರಾಜ್ಯದ್ರೋಹದ ಆಪಾದನೆಯಡಿ ಬಂಧಿಸಲಾಯಿತು. ಕೆಲವು ದಿನಗಳ ತರುವಾಯ ಉಮರ್‌ ಖಾಲಿದ್‌, ಅನಿರ್ಬಾನ್‌ ಭಟ್ಟಾಚಾರ್ಯ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳ ಮೇಲೆ ರಾಜ್ಯದ್ರೋಹದ ಆಪಾದನೆಯನ್ನು ಹೇರಿ ದೆಹಲಿ ಪೊಲೀಸ್‌ ಬಂಧಿಸಿತು.‌

ಅಕ್ಟೋಬರ್‌ 16, 2016ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಿಂದ ನಜೀಬ್‌ ಅಹಮ್ಮದ್‌ ಎಂಬ ವಿದ್ಯಾರ್ಥಿ ಸಂಶಯಾಸ್ಪದ ರೀತಿಯಲ್ಲಿ ಕಣ್ಮರೆಯಾದ. ಈ ಘಟನೆ ಜರುಗಿದ ಹಿಂದಿನ ರಾತ್ರಿ ಆತನಿಗೂ ಎಬಿವಿಪಿಯ ಕೆಲವು ಸದಸ್ಯರ ನಡುವೆ ಜಟಾಪಟಿ ನಡೆಯಿತು. ಎಬಿವಿಪಿ ತನಗೂ ನಜೀಬ್‌ನ ಕಣ್ಮರೆಗೂ ಸಂಬಂಧಿಸಿಲ್ಲ ಎಂಬ ಹೇಳಿಕೆಯನ್ನು ನೀಡಿತು. ಆ ಸಮಯದಲ್ಲಿ ನಜೀಬ್‌ ಬೆಂಬಲದಲ್ಲಿ ಜರುಗಿದ ಪ್ರತಿಭಟನೆಗಳಲ್ಲಿ ಉಮರ್‌ ಭಾಗವಹಿಸಿದರು. ಇತ್ತೀಚೆಗೆ ದೆಹಲಿಯ ಒಂದು ಕೋರ್ಟ್‌ ಅ ವಿಚಾರಣೆಯಿಂದ ನಜೀಬ್‌ ಕುರಿತಂತೆ ಯಾವ ಸುಳಿವೂ ಸಿಗದೆ ಇರುವ ಕಾರಣವನ್ನು ನೀಡಿ ಕೇಸನ್ನು ಮುಕ್ತಾಯಗೊಳಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Najeeb Ahmed PTI
ಕಾಣೆಯಾದ ನಜೀಬ್‌ ಅಹಮ್ಮದ್‌ ಕುಟುಂಬದವರ ಪ್ರತಿಭಟನೆ

ರಾಜ್ಯದ್ರೋಹದ ನೆಪದಡಿ ಜುಲೈ 2018ರಲ್ಲಿ ಜೆಎನ್‌ಯುವಿನ ಉನ್ನತ ಸ್ತರೀಯ ವಿಚಾರಣಾ ಸಮಿತಿ ಅವರ ಪಿಎಚ್‌ಡಿ ಮಹಾಪ್ರಬಂಧವನ್ನು ಸಲ್ಲಿಸುವ ಪ್ರಕ್ರಿಯೆಗೆ ಅಡ್ಡಿಪಡಿಸಿತು. ಇದರ ವಿರುದ್ಧ ಉಮರ್‌ ದೆಹಲಿ ಹೈ ಕೋರ್ಟ್‌ನ ಮೆಟ್ಟಿಲನ್ನು ಏರಿದರು. ಅಲ್ಲಿ ಅವರ ಪರವಾದ ತೀರ್ಪು ಬಂದಿತು. ನಂತರ ಅವರು ʼಕಂಟೆಸ್ಟಿಂಗ್‌ ಕ್ಲೈಮ್ಸ್‌ ಅಂಡ್‌ ಕಂಟಿಜೆನ್ಜೀಸ್‌ ಆಫ್‌ ದಿ ರೂಲ್‌ ಆನ್‌ ಆದಿವಾಸೀಸ್‌ ಆಫ್‌ ಜಾರ್ಖಂಡ್‌ʼ ಎಂಬ ಮಹಾಪ್ರಬಂಧವನ್ನು ಸಲ್ಲಿಸಿದರು. 2019ರಲ್ಲಿ ಅವರಿಗೆ ಪಿಎಚ್‌ಡಿ ಪದವಿಯನ್ನು ನೀಡಲಾಯಿತು. ಇದೇ ಸಮಯದಲ್ಲಿ ಅವರನ್ನು ಹತ್ಯೆ ಮಾಡುವ ಪ್ರಯತ್ನವೂ ನಡೆಯಿತು.

ದೆಹಲಿಯ ಜಾಮಿಯಾ ನಗರದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಉಮರ್‌ ಜನಿಸಿದರು. ಅವರ ತಂದೆ ಸಯ್ಯದ್‌ ಖಾಸಿಮ್‌ ರಸೂಲ್‌ ಇಲ್ಯಾಸ್‌ ಉರ್ದು ಪತ್ರಕರ್ತರಾಗಿದ್ದರು. ನಂತರ ವೆಲ್‌ಫೇರ್ ಪಾರ್ಟಿ ಆಫ್‌ ಇಂಡಿಯಾಗೆ ಸೇರಿ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಉಮರ್‌ ಅವರ ತಾಯಿ ಒಬ್ಬ ಯುನಾನಿ ಪದ್ಧತಿಯ ವೈದ್ಯರಾಗಿದ್ದರು. ಈ ದಂಪತಿಗೆ ಆರು ಮಕ್ಕಳಿದ್ದಾರೆ. ಅವರಲ್ಲಿ ಉಮರ್ ಹಿರಿಯರು. ಕಿಶೋರಾವಸ್ಥೆಯಿಂದಲೇ ಅವರಿಗೆ ಮತೀಯ ತಾರತಮ್ಯದ ಅರಿವಾಗತೊಡಗಿತು. ಜೆಎನ್‌ಯು ಸೇರಿದ ಮೇಲೆ ತಾನು ಬಾಳುತ್ತಿರುವ ರೀತಿಯಲ್ಲೇ ಆದಿವಾಸಿಗಳು, ಸಮಾಜದ ಅಂಚಿನಲ್ಲಿರುವ ಅನೇಕ ಜನರು ಜೀವನವನ್ನು ನಡೆಸುತ್ತಿದ್ದಾರೆ ಎಂಬುದು ಮನದಟ್ಟಾಯಿತು.

ನಮ್ಮ ಸಂಸತ್‌ ಡಿಸೆಂಬರ್‌ 11, 2019ರಂದು ಪೌರತ್ವ ತಿದ್ದುಪಡಿ ಕಾಯಿದೆ(Citizen Amendment Act- CAA- ಸಿಎಎ)ಯನ್ನು ಪಾಸ್‌ ಮಾಡಿತು. ಜೊತೆಗೆ ಪೌರತ್ವ ನೋಂದಣಿ (National Register of Citizens- NRC) ಕುರಿತಂತೆ ಆತಂಕವೂ ತಲೆದೋರಿತು. ಏಕೆಂದರೆ ಅಸ್ಸಾಂನಲ್ಲಿ NRC ಅಂತಿಮ ಪಟ್ಟಿಯಲ್ಲಿ ಆಧಿಕ ಮಂದಿ ಪೌರತ್ವವನ್ನು ಕಳೆದುಕೊಳ್ಳುವ ಅಪಾಯವಿತ್ತು. ಹೀಗಾಗಿ ದೇಶಾದ್ಯಂತ ಇವುಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಜರುಗಿದವು. ಅವು ಅನೇಕ ಸಂದರ್ಭಗಳಲ್ಲಿ ಶಾಂತಿಯುತವಾಗಿಯೇ ಜರಗುತ್ತಿದ್ದವು. ಉಮರ್‌ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ CAA/NRC ವಿರುದ್ಧ ಅನೇಕ ಸಭೆಗಳಲ್ಲಿ ಭಾಷಣವನ್ನು ಮಾಡಿದರು. ಅವರು ಮಹಾತ್ಮ ಗಾಂಧಿ, ಅಂಬೇಡ್ಕರ್‌ ಮತ್ತು ಭಗತ್‌ ಸಿಂಗ್‌ ಮತ್ತು ಇತರರ ವಿಚಾರಧಾರೆಯನ್ನು ಉಲ್ಲೇಖಿಸುತ್ತಿದ್ದರು. ಕೆಲವು ಸಭೆಗಳಲ್ಲಿ ಅವರು “ಹಮ್‌ ಕ್ಯಾ ಮಾಂಗೇಂ ಆಝಾದಿ…CAA ಸೆ ಆಝಾದಿ… ಭೂಕ್‌ ಸೆ ಆಝಾದಿ… ಅಂಬೇಡ್ಕರ್ವಾಲಿ ಆಝಾದಿ…” ಎಂದು ಕೂಗುತ್ತ, ಸಭಿಕರನ್ನು ಉತ್ತೇಜಿಸುತ್ತ, ಅವರೂ ಇಂತಹ ಘೋಷಣೆಗಳಿಗೆ ಸಾಥ್‌ ನೀಡುವಂತೆ ಪ್ರೇರೇಪಿಸುತ್ತಿದ್ದರು.

ಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿ 23ರಿಂದ 29ರವರೆಗೆ ಕೋಮು ದಂಗೆ(ಗಲಭೆ)ಗಳು ಸಂಭವಿಸಿದವು. 53 ಮಂದಿ ಹತರಾದರು. ಅವರಲ್ಲಿ ಮೂರರಲ್ಲಿ ಎರಡರಷ್ಟು ಮಂದಿ ಮುಸಲ್ಮಾನರಾಗಿದ್ದರು. ಅನೇಕರು ಗಾಯಗೊಂಡರು. ಕಟ್ಟಡಗಳಿಗೆ ಬೆಂಕಿ ಹಚ್ಚಲಾಯಿತು. ಅಪಾರ ಆಸ್ತಿ ಹಾನಿ ಜರುಗಿತು. ನಂತರ ದೆಹಲಿ ಪೊಲೀಸ್‌ 18 ಯುವ ಕಾರ್ಯಕರ್ತರು ಮತ್ತು ನಾಯಕ-ನಾಯಕಿಯರ ಮೇಲೆ UAPA ಮತ್ತು ಅಂದಿದ್ದ IPCಯ ಕೆಲವು ಸೆಕ್ಷನ್‌ಗಳನ್ನು ಹಾಕಿತು. ಅವರು ದೆಹಲಿಯಲ್ಲಿ ಕೋಮು ದಂಗೆಗಳನ್ನು ಪ್ರಚೋದಿಸಿ, ಪ್ರಭುತ್ವವನ್ನು ಅಸ್ಥಿರಗೊಳಿಸುವ ಉದ್ದೇಶವನ್ನು ಹೊಂದಿದ್ದರು ಎಂದು ಆಪಾದಿಸಲಾಗಿತ್ತು. ಅವರಲ್ಲಿ ಉಮರ್‌ ಕೂಡ ಒಬ್ಬರಾಗಿದ್ದರು. ಆದರೆ ದೆಹಲಿಯಲ್ಲಿ ಕೋಮು ಗಲಭೆಗಳು ಜರುಗಿದಾಗ ಉಮರ್‌ ದೆಹಲಿಯಲ್ಲೇ ಇರಲಿಲ್ಲ! ಉಮರ್‌ ಮತ್ತು ಇತರ ಸಂಗಾತಿಗಳು ಬಾಂಬುಗಳನ್ನು ಎಸೆಯಲಿಲ್ಲ; ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಲಿಲ್ಲ; ಹಿಂಸಾಚರಣೆಗಳಲ್ಲಿ ತೊಡಗಲಿಲ್ಲ; ದೇಶದ್ರೋಹದ ಕೆಲಸವನ್ನು ಮಾಡಲಿಲ್ಲ ಎಂಬುದು ಗಮನಾರ್ಹವಾದ ವಿಷಯ.

shaheen bagh
ಶಾಹೀನ್‌ ಬಾಗ್‌ ನಲ್ಲಿ ನಡೆದ ಸಿಎಎ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆ

ಆದರೆ ದೆಹಲಿ ಕೋಮು ಗಲಭೆಗಳ ಸ್ವಲ್ಪ ಮುನ್ನ ಶಾಹೀನ್‌ ಬಾಗ್‌ ನಲ್ಲಿ ರಸ್ತೆಗೆ ತಡೆಹಾಕಿ ಮಹಿಳೆಯರೇ ನೇತೃತ್ವವಹಿಸಿ, ಭಾಗವಹಿಸಿದ ಪ್ರತಿಭಟನೆಗಳು ದೊಡ್ಡಮಟ್ಟದಲ್ಲಿ ಜರುಗಿದವು. ಅವುಗಳಲ್ಲಿ ಮುಸಲ್ಮಾನ ಮಹಿಳೆಯರ ಸಂಖ್ಯೆ ಜಾಸ್ತಿಯಿದ್ದರೂ, ಸಮಾಜದ ಇತರ ವಿಭಾಗಗಳ ಮಹಿಳೆಯರೂ ಇದ್ದರು. ಈ ಸಂದರ್ಭದಲ್ಲಿ ದೆಹಲಿಯ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಒಂದು ಸಭೆಯಲ್ಲಿ ಮಾತನಾಡುತ್ತ ದೆಹಲಿ ಪೊಲೀಸ್‌ಗೆ ಧಮಕಿಯನ್ನು ಹಾಕಿದರು! ಮೂರು ದಿನಗಳಲ್ಲಿ ಶಾಹೀನ್‌ ಬಾಗ್ ರಸ್ತೆಯನ್ನು ತೆರವುಗೊಳಿಸಿ, ಇಲ್ಲದಿದ್ದರೇ ನಾವೇ ಆ ಕಾರ್ಯವನ್ನು ಮಾಡಲು ಮುಂದಾಗುತ್ತೇವೆ ಎಂದು ಗರ್ಜಿಸಿದರು. ಅದರ ಅರ್ಥ: ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತೇವೆ ಎಂಬುದಾಗಿತ್ತು. ಅನುರಾಗ್‌ ಠಾಕೂರ್‌ ಎಂಬ ಕೇಂದ್ರ ಸರ್ಕಾರದ ರಾಜ್ಯ ಮಂತ್ರಿ ಮತ್ತು ಬಿಜೆಪಿ ನಾಯಕ ಒಂದು ಸಭೆಯಲ್ಲಿ “ದೇಶ್‌ ಕೇ ಗದ್ದಾರೋಂಕೊ “ ಎಂದು ಘೋಷಿಸಿ, ಸಭೆಯಲ್ಲಿದ್ದವರು “ಗೋಲಿ ಮಾರೋ ಸಾಲೋಂ ಕೊ” ಎಂದು ಪ್ರತ್ಯುತ್ತರ ನೀಡುವಂತೆ ಪ್ರಚೋದಿಸಿದರು! ಅಂದರೆ CAA ವಿರುದ್ಥ ಇರುವವರೆಲ್ಲ ದೇಶದ್ರೋಹಿಗಳು ಎಂಬುದು ಅವರ ಬಣ್ಣನೆಯಾಗಿತ್ತು! ಆದರೆ ದೆಹಲಿ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಇವರೀರ್ವರ ಮೇಲೆ ಯಾವ ಕಾನೂನು ಕ್ರಮವನ್ನು ದೆಹಲಿ ಪೊಲೀಸರು ಕೈಗೊಳ್ಳಲಿಲ್ಲ!

ಇದನ್ನೂ ಓದಿ ಧರ್ಮಸ್ಥಳಕ್ಕೆ ಈ ಪರಿಯ ದೌಡು ಏಕೆ?

ಕಳೆದ ಐದು ವರ್ಷಗಳಿಂದ ಉಮರ್‌ ವಿಚಾರಣಾಧೀನ (Undertrial)ಕೈದಿಯಾಗಿ ದೆಹಲಿಯ ತಿಹಾರ್‌ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಗುಲ್‌ಫಿಶಾ ಫಾತಿಮಾ ಎಂಬ ಯುವ ಕಾರ್ಯಕರ್ತೆಯ ಜೊತೆ ಇನ್ನು ಒಂಬತ್ತು ಯುವ ಪುರುಷ ಕಾರ್ಯಕರ್ತರು ಜೈಲುವಾಸಿಗಳಾಗಿದ್ದಾರೆ. ಕಪಿಲ್‌ ಮಿಶ್ರಾ ದೆಹಲಿ ರಾಜ್ಯ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿ ಮತ್ತು ಅನುರಾಗ್‌ ಠಾಕೂರ್‌ ಕೇಂದ್ರದಲ್ಲಿ ಸಚಿವರಾಗಿ ಮೆರೆಯುತ್ತಿದ್ದಾರೆ! ಉಮರ್ ಬೇಲನ್ನು ಪಡೆಯಲು ಅನೇಕ ಕೋರ್ಟುಗಳ ಮೆಟ್ಟಿಲುಗಳನ್ನು ಏರಿದ್ದಾರೆ. ಇತ್ತೀಚೆಗೆ ಅಂದರೆ ಸೆಪ್ಟೆಂಬರ್‌ 2 ರಂದು ದೆಹಲಿಯ ಹೈಕೋರ್ಟ್‌ ಪುನಃ ಉಮರ್‌ಗೆ ಬೇಲನ್ನು ನಿರಾಕರಿಸಿದೆ. (ಇದು ಆರನೇ ಬಾರಿ- ಸೆಷನ್‌ ಕೋರ್ಟಿನಲ್ಲಿ -3, ಹೈ ಕೋರ್ಟಿನಲ್ಲಿ-2, ಸುಪ್ರೀಂ ಕೋರ್ಟಿನಲ್ಲಿ ಒಮ್ಮೆ ಬೇಲ್‌ ಅರ್ಜಿಯನ್ನು ವಾಪಸ್ಸು ಪಡೆಯಲಾಗಿತ್ತು). ಸುಮಾರು ಐವತ್ತು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ “ಬೇಲ್‌ ನಿಯಮ, ಜೈಲು ಅಪವಾದ” ಎಂದು ಹೇಳಿತ್ತು! ಅನೇಕ ಕೇಸುಗಳಲ್ಲಿ ಮಧ್ಯ/ತಡರಾತ್ರಿ ಕೂಡ ಬೇಲನ್ನು ನೀಡಲಾಗಿದೆ!

ಇದನ್ನೂ ಓದಿ POCSO | ಶಿಕ್ಷೆ ನೀಡಲು ಸಂತ್ರಸ್ತೆಯ ಹೇಳಿಕೆಯಷ್ಟೇ ಸಾಕು- ಹೈಕೋರ್ಟ್‌ ತೀರ್ಪು ಸಂತ್ರಸ್ತರ ಪಾಲಿನ ಬೆಳಕಿಂಡಿ

ಉಮರ್‌ನ ವಿಚಾರದಲ್ಲಿ ಅವರ ಐದು ವರ್ಷಗಳ ವಿಚಾರಣಾಧೀನ ಅವಧಿಯೇ ಶಿಕ್ಷೆಯಾಗಿ ಪರಿಣಮಿಸಿದೆ! ನಮ್ಮ ನ್ಯಾಯಾಂಗ ಮತ್ತು ಒಟ್ಟಿನಲ್ಲಿ ನ್ಯಾಯ ವ್ಯವಸ್ಥೆ ಎತ್ತ ಸಾಗುತ್ತಿದೆ? ಹಲವು ಪ್ರಭಾವಿ ವ್ಯಕ್ತಿಗಳಿಗೆ ಕಡಲೆಪುರಿ ತಿನ್ನುವಷ್ಟೇ ಸುಲಭವಾಗಿ ಬೈಲ್‌ ಹೇಗೆ ದೊರಕುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕದ ವಲಯದಲ್ಲಿ ಕೇಳಿಬರುತ್ತಿರುತ್ತವೆ. ಅಲ್ಲದೆ ಉಮರ್‌ ಮತ್ತು ಇತರ ಒಂಬತ್ತು ಯುವ ಕಾರ್ಯಕರ್ತರಿಗೆ ನ್ಯಾಯ ಎನ್ನುವುದು ಏಕೆ ಮರೀಚಿಕೆಯಾಗಿದೆ ಎಂಬ ಸಂಗತಿಯ ಬಗೆಗೆ ಏಕೆ ಹೆಚ್ಚಿನ ರಾಜಕೀಯ ಪಕ್ಷಗಳು, ಮಧ್ಯಮ ವರ್ಗ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ದಿವ್ಯ ಮೌನವನ್ನು ವಹಿಸಿವೆ ಎಂಬುದು ಕೂಡ ಕಾಡುವ ಪ್ರಶ್ನೆಗಳಾಗಿವೆ!

ಏನೇ ಇರಲಿ, ಉಮರ್‌ ಖಾಲಿದ್‌ಗೆ ನ್ಯಾಯ ದೊರಕಬೇಕು. ಸುರಂಗಯಾನ ಕೊನೆಗೊಳ್ಳಬೇಕು ; ಬೆಳಕು ಕಾಣಿಸಬೇಕು! ಇತರ ಒಂಬತ್ತು ಸಂಗಾತಿಗಳಿಗೂ ನ್ಯಾಯ ಸಿಗಬೇಕು.

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...