ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಹುಟ್ಟುಹಾಕಿದ ವಚನ ಚಳವಳಿಯು ಭಾರತದಲ್ಲಿನ ಬ್ರಾಹ್ಮಣ್ಯದ ವಿರುದ್ಧದ ಮಹತ್ವದ ಚಳವಳಿ ಎನ್ನಿಸಿದೆ. ವಚನ ಚಳವಳಿಯ ನಾಯಕ ಬಸವಣ್ಣ ಒಬ್ಬ ಬ್ರಾಹ್ಮಣನಾಗಿದ್ದು ಆ ಬ್ರಾಹ್ಮಣ್ಯವನ್ನು ಎಡಗಾಲಲ್ಲಿ ಒದ್ದು ಹೊರಬಂದರು.
ಬ್ರಾಹ್ಮಣ್ಯ ಹಾಗೂ ಮಡಿವಂತಿಕೆ ಎರಡರ ಆತ್ಮ ಒಂದೇಯಾಗಿದೆ. ಬ್ರಾಹ್ಮಣ್ಯ ಬಿಟ್ಟು ಮಡಿವಂತಿಕೆ ಇಲ್ಲ, ಮಡಿವಂತಿಕೆ ಬಿಟ್ಟು ಬ್ರಾಹ್ಮಣ್ಯವಿಲ್ಲ. ಕೆಲವರು ಬ್ರಾಹ್ಮಣ್ಯವನ್ನು ವೈದಿಕ ಸಾಹಿತ್ಯದ ಮುಖೇನ ತಾತ್ವಿಕವಾಗಿ ವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತಾರೆ. ಭಾರತದಲ್ಲಿ ಮೂರೂವರೆ ಸಾವಿರ ವರ್ಷಗಳಿಂದ ಅವ್ಯಾಹತವಾಗಿ ಸಾಗಿಬಂದಿರುವ ಕ್ರೂರ ಜಾತಿವ್ಯವಸ್ಥೆಯ ನೆಲೆಯಲ್ಲಿ ಬ್ರಾಹ್ಮಣ್ಯವನ್ನು ವಿಶ್ಲೇಷಿಸಬೇಕೆ ಹೊರತು ವೈದಿಕ ಸಾಹಿತ್ಯದ ತಾತ್ವಿಕ ನೆಲೆಯಿಂದಲ್ಲ. ಭಾರತದಲ್ಲಿ ಜಾತಿವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಆಯುಧವೇ ಬ್ರಾಹ್ಮಣ್ಯ. ಮಡಿವಂತಿಕೆ ಬ್ರಾಹ್ಮಣ್ಯದ ಹೃದಯ ಮತ್ತು ಆತ್ಮ. ಬ್ರಾಹ್ಮಣ ಎನ್ನುವ ಪದ ಜಾತಿವಾಚಕವಲ್ಲ, ತಮ್ಮ ಪುಣ್ಯ ಕಾರ್ಯ, ಹಾಗೂ ಸಾಧನೆಯಿಂದ ಯಾರು ಬೇಕಾದವರು ಬ್ರಾಹ್ಮಣರಾಗಬಹುದು, ಪುರಾಣ ಕಾಲದಲ್ಲಿ ಕೆಲವರು ಬ್ರಾಹ್ಮಣರಾಗಿ ಗೌರವ ಸಂಪಾದಿಸಿದ್ದಾರೆ ಎನ್ನುವ ವಾದ ಪುರಾಣಗಳಷ್ಟೆ ಕಾಲ್ಪನಿಕ ಹಾಗು ಖೊಟ್ಪಿ. ಬ್ರಾಹ್ಮಣ್ಯದ ವಿಕೃತಿಗಳು, ಮಡಿವಂತಿಕೆ ಹಾಗೂ ಜೀವವಿರೋಧಿ ಸಿದ್ಧಾಂತ ಮತ್ತು ಆಚರಣೆಗಳನ್ನು ತಿರಸ್ಕರಿಸಿ ಹೊರಗೆ ಬಂದವರ ದೊಡ್ಡ ಪಟ್ಟಿಯೇ ಇತಿಹಾಸದಲ್ಲಿ ದಾಖಲಾಗಿದೆ. ರಾಜಕೀಯ ಕಾರಣಗಳಿಗಾಗಿ ಇತಿಹಾಸದಲ್ಲಿ ಬ್ರಾಹ್ಮಣರಾದವರು ಅಲ್ಲಲ್ಲಿ ಕೆಲವರು ಸಿಗಬಹುದು ಹೊರತು ತಮ್ಮ ಸಾಧನೆ ಮತ್ತು ಕಾರ್ಯಗಳಿಂದ ಬ್ರಾಹ್ಮಣರಾಗಿದ್ದರು ಎನ್ನುವುದು ಸಂಪೂರ್ಣ ಕಪೋಲಕಲ್ಪಿತ ಪುರಾಣ. ಪುರಾಣಗಳನ್ನು ಇತಿಹಾಸವೆಂಬಂತೆ ಬಿಂಬಿಸಿಕೊಂಡು ಬಂದ ಬ್ರಾಹ್ಮಣ್ಯದ ಜನರು ಇತಿಹಾಸವನ್ನು ಪುರಾಣಗಳೆಂದು ಬಿಂಬಿಸುತ್ತಾರೆ.
ಮಡಿವಂತಿಕೆ ಎನ್ನುವುದು ಒಂದು ಶ್ರೇಷ್ಠತೆಯ ವ್ಯಸನ. ತಮ್ಮ ರಕ್ತ ಶುದ್ಧತೆಯ ಕುರಿತು ಹೆಮ್ಮೆಪಡುವ ಒಂದು ಉನ್ಮಾದಿತ ವ್ಯಸನಿಗಳ ವಂಶವಾಹಿನಿ ಜಗತ್ತಿನಲ್ಲಿ ಅಸ್ತಿತ್ವದಲ್ಲಿದೆ. ಈ ವಂಶವಾಹಿನಿಯ ಆರ್ಯನ್ ಜನರು ಹುಟ್ಟುಹಾಕಿರುವ ಜನಾಂಗೀಯ ಕಲಹದಿಂದ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಲಕ್ಷಾಂತರ ಜನರ ನರಮೇಧ ನಡೆದುಹೋಗಿದೆ. ಈ ಶ್ರೇಷ್ಠತೆಯ ವ್ಯಸನಧಾರಿಗಳ ರಕ್ತದಾಹ ಇಂದಿಗೂ ಕುಗ್ಗಿಲ್ಲ. ಭಾರತಕ್ಕೆ ವಲಸೆ ಬಂದಿರುವ ಈ ಆರ್ಯನ್ನರು ಶತ ಶತಮಾನಗಳಿಂದ ಮಾಡಿದ ಅನಾಚಾರಗಳು ಅಪಾರ. ಆರ್ಯನ್ನರ ಅನಾಚಾರಗಳಿಗೆ ಮೂಲ ಕಾರಣ ಅವರಲ್ಲಿರುವ ಶ್ರೇಷ್ಠತೆಯ ವ್ಯಸನ ಮತ್ತು ಅತಿಯಾದ ಮಡಿವಂತಿಕೆ. ಆರ್ಯನ್ನರು ತಮ್ಮ ಮನೆಯ ಹೆಣ್ಣುಮಕ್ಕಳನ್ನೆ ಕೀಳಾಗಿ ಕಾಣುತ್ತಾರೆ. ಆರ್ಯನ್ನರಲ್ಲಿ ಹೆಣ್ಣಿಗೆ ಧಾರ್ಮಿಕ ಸಂಸ್ಕಾರವಾಗಲಿ, ಸ್ವಾತಂತ್ರವಾಗಲಿ ಇಲ್ಲ. ಮಡಿ-ಮೈಲಿಗೆ, ಜಾತಕ, ಸೂತಕ ಈ ಬ್ರಾಹ್ಮಣ್ಯದ ಜನರ ಮೂಲಭೂತ ಆಚರಣೆ. ನೈಸರ್ಗಿಕವಾಗಿ ಬರುವ ಋತುಚಕ್ರದ ಕಾಲದಲ್ಲಿ ಹೆಣ್ಣನ್ನು ಅಮಾನುಷವಾಗಿ ಕಾಣುವ ಹಾಗೂ ಆ ಐದು ದಿನ ಅವಳನ್ನು ಮನೆಯವರಿಂದ ಪ್ರತ್ಯೇಕಿಸುವ ಪದ್ದತಿ ಈಗಲೂ ಬ್ರಾಹ್ಮಣ್ಯದ ಜನರಲ್ಲಿದೆ. ಪುರುಷ ಆರ್ಯನ್ನರು ಮಾತ್ರ ಭಾರತಕ್ಕೆ ವಲಸೆ ಬಂದಿದ್ದು, ಇಲ್ಲಿನ ಬುಡಕಟ್ಟು ಸ್ತ್ರೀಯರೊಂದಿಗೆ ಸೇರಿ ಸಂತಾನಾಭಿವೃದ್ಧಿ ಮಾಡಿದ್ದಾರೆ ಆದ್ದರಿಂದ ಅವರಿಗೆ ಸ್ತ್ರೀ ಅಂದರೆ ತಾತ್ಸಾರ. ಆರ್ಯನ್ನರು ಭಾರತವನ್ನು “ಮಾತೃಭೂಮಿ” ಎನ್ನುವುದರ ಹಿಂದಿನ ಕಾರಣವೂ ಇದೇ ಆಗಿರಬೇಕು. ಭಾರತಕ್ಕೆ ವಲಸೆ ಬಂದ ಆರ್ಯನ್ನರ ಅಚಲ ನಿಷ್ಠೆ ಏನಿದ್ದರೂ ಅದು ಅವರ “ಪಿತೃ ಭೂಮಿ” ಆರ್ಕ್ಟಿಕ್ ಪ್ರದೇಶದ ಬಗ್ಗೆ ಮಾತ್ರ.
ಮೊದಲು ನಾವು ಮಡಿ, ಮೈಲಿಗೆ ಅಂದರೇನು ಎನ್ನುವುದು ತಿಳಿದುಕೊಳ್ಳಬೇಕು. ಮಡಿ ಎಂದರೆ ಸನಾತನ ಬ್ರಾಹ್ಮಣ ಧರ್ಮದ ಒಂದು ಸಂಪ್ರದಾಯವಾಗಿದ್ದು, ಅದು ವಿಶೇಷವಾಗಿ ಪೂಜೆ, ಯಜ್ಞ, ಯಾಗ, ಹೋಮ, ಹವನ ಮುಂತಾದ ಧಾರ್ಮಿಕ ಕ್ರಿಯೆಗಳು ಮಾಡುವಾಗ ಪಾಲಿಸಲಾಗುತ್ತದೆ. ದೇಹ ಮತ್ತು ಮನಸ್ಸಿನ ನಿರ್ಮಲತೆಯನ್ನು ಕಾಪಾಡಿಕೊಂಡು, ದೇವರನ್ನು ಪೂಜಿಸುವುದು. ಧಾರ್ಮಿಕ ಕ್ರಿಯೆಗಳು ಮಾಡುವವರು ಸ್ನಾನ ಮಾಡಿ ಶುದ್ಧ ವಸ್ತ್ರಗಳನ್ನು ಧರಿಸಿ, ಶುದ್ಧವಾದ ಮನಸ್ಸಿನಿಂದ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುವುದು ಒಂದು ನಿಯಮ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮಡಿಯು ದೇಹ ಅಥವಾ ಮನಸ್ಸಿನ ಶುದ್ಧತೆ ಅಥವಾ ಪವಿತ್ರತೆಯನ್ನು ಸೂಚಿಸುತ್ತದೆ, ಆದರೆ ಮೈಲಿಗೆಯು ಅಶುದ್ಧತೆಯನ್ನು ಸಾಂಕೇತಿಸುತ್ತದೆ. ಮೈಲಿಗೆಯು ಸಾಮಾನ್ಯವಾಗಿ ಅಶುಭಕರ ಘಟನೆಗಳು ಘಟಿಸುವ ಅಥವಾ ಅಂತಹ ಘಟನೆಗಳ ಸುದ್ದಿ ಕೇಳುವ ಅಥವಾ ಅಶುದ್ಧವಾದ ವಸ್ತುವನ್ನು ಮುಟ್ಟುವುದರಿಂದ ಉಂಟಾಗುತ್ತದೆ ಎನ್ನಲಾಗುತ್ತದೆ. ಒಬ್ಬರ ಮನೆಯಲ್ಲಿ ಮಗು ಹುಟ್ಟಿದರೆ, ಅದು ಹೆಣ್ಣುಮಗು ಆಗಿದ್ದಲ್ಲಿ ಮೂರು ದಿನ ಮತ್ತು ಗಂಡುಮಗು ಆಗಿದ್ದಲ್ಲಿ ಹತ್ತು ದಿನಗಳ ಮೈಲಿಗೆ ಎನ್ನುವುದು ಸನಾತನಿಗಳ ಧರ್ಮಶಾಸ್ತ್ರ. ಇದೇ ರೀತಿ ವ್ಯಕ್ತಿ ಸತ್ತಾಗ ಕೂಡ ಮೈಲಿಗೆ ಆಚರಿಸಲಾಗುತ್ತದೆ. ಈ ಮೈಲಿಗೆಗಳನ್ನು ಸ್ನಾನ ಮಾಡುವ ಮೂಲಕ ನಿವಾರಿಸಿಕೊಳ್ಳುವುದು ಅಥವಾ ಶುದ್ಧೀಕರಿಸಿಕೊಳ್ಳಲಾಗುತ್ತದೆ.
ಅನ್ಯ ಜಾತಿಯ, ಅಂದರೆ ವಿಶೇಷವಾಗಿ ಕೆಳವರ್ಗದ, ಅಸ್ಪೃಶ್ಯ ವರ್ಗದ ಜನರು ಬ್ರಾಹ್ಮಣರನ್ನು ಮುಟ್ಟಿದಾಗ ಆಗುವ ಮೈಲಿಗೆಯ ತೀವ್ರತೆಯು ಸ್ವಂತ ಮನೆಯವರು ಅಥವಾ ಸ್ವಜಾತಿಯಯವರು ಮುಟ್ಟಿದಾಗ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಂದರೆ ಇಲ್ಲಿ ಜಾತಿ ಶ್ರೇಷ್ಠತೆಯ ಭಾವನೆ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡುತ್ತದೆ. ಆ ಕಾರಣದಿಂದ, ಕೆಳವರ್ಗದ ಜನರನ್ನು ದೇವಸ್ಥಾನದ ಒಳಗೆ ಹಾಗು ಪುರೋಹಿತರ ಮನೆಗಳಿಗೆ ಪ್ರವೇಶ ಮಾಡುವುದನ್ನು ನಿರಾಕರಿಸಲಾಗುತ್ತದೆ. ಮಡಿ ಆಚರಣೆಯ ಕುರಿತು ಸನಾತನ ಧರ್ಮಶಾಸ್ತ್ರಗಳಲ್ಲಿ ವಿಶೇಷ ವಿವರಣೆಗಳಿವೆ, ಅದೇ ರೀತಿ ಮೈಲಿಗೆಯ ನಿವಾರಣೆ ಅಥವಾ ಶುದ್ಧೀಕರಣದ ಕುರಿತು ಕೂಡ ವಿವರಣೆಗಳು ಇವೆ. ಆಶ್ಚರ್ಯವೆಂದರೆ, ಕೆಳವರ್ಗದ ಜನರು ಮುಟ್ಟುವ ಆಹಾರ, ನೀರು ಸಹ ಮೈಲಿಗೆಯಾಗುತ್ತವೆ. ಇನ್ನೂ ಆಶ್ಚರ್ಯವೆಂದರೆ, ಶೂದ್ರರು, ಪಂಚಮರು, ಚಾಂಡಾಲರು, ಅಸ್ಪೃಶ್ಯರು ಬೆಳೆದ ಆಹಾರ ಧಾನ್ಯಗಳು ಅಥವಾ ಅವರು ದೇವಸ್ಥಾನದ ಹುಂಡಿಯಲ್ಲಿ, ಆರತಿ ತಟ್ಟೆಯಲ್ಲಿ ಹಾಕುವ ಹಣಕ್ಕೆ ಮಾತ್ರ ಯಾವುದೆ ಮೈಲಿಗೆಯಿಲ್ಲದಿರುವುದು. ಮಡಿ ಹಾಗು ಮೈಲಿಗೆಗಳ ಕುರಿತು ಸನಾತನ ಧರ್ಮಶಾಸ್ತ್ರಗಳು selective ಆಗಿ ವ್ಯಾಖ್ಯಾನಿಸುತ್ತವೆ ಅಥವಾ ಲಾಭಕಾರಕ ಅಂಶಗಳಿಂದಾಗುವ ಮಡಿ, ಮೈಲಿಗೆಗಳ ಕುರಿತು ಜಾಣಮೌನ ತಾಳುತ್ತವೆ ಅಥವಾ ಅನುಕೂಲಸಿಂಧು ವಿವರಣೆಗಳನ್ನು ಕೊಡುತ್ತವೆ. ಒಟ್ಟಾರೆ, ಸನಾತನ ಧರ್ಮಶಾಸ್ತ್ರಗಳನ್ನು ಸನಾತನಿಗಳ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ವ್ಯವಸ್ಥಿತವಾಗಿ ರೂಪಿಸಲಾಗಿದೆ.
ಮಡಿ, ಮೈಲಿಗೆಗಳನ್ನು ಸನಾತನಿಗಳು ಅತ್ಯಂತ ಭಯ ಹಾಗೂ ಭಕ್ತಿ, ಶ್ರದ್ಧೆಯಿಂದ ಪಾಲಿಸುತ್ತಾರೆ. ಅದರಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುತ್ತದೆ ಎಂದು ಅವರು ಯಾವತ್ತು ಚಿಂತಿಸುವುದಿಲ್ಲ. ಸನಾತನಿಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿ, ಶೂದ್ರರು, ದಲಿತರು, ಅಸ್ಪೃಶ್ಯರು ಇವರಾರಿಗೂ ತಮ್ಮ ಧರ್ಮದ ಆಚರಣೆಗಳಿಗಿಂತ ಹೆಚ್ಚಿನ ಮಹತ್ವ ನೀಡುವುದಿಲ್ಲ. ಸನಾತನಿಗಳ ಪಾಲಿಗೆ ಧರ್ಮದಿಂದ ಬದುಕುವುದು ಎಂದರೆ ಬ್ರಾಹ್ಮಣ ಶ್ರೇಷ್ಠತೆ, ಮಡಿವಂತಿಕೆ ಮತ್ತು ಜಾತಿ ವ್ಯವಸ್ಥೆಯನ್ನು ಜೀವಂತವಾಗಿಡುವುದು. ತಮ್ಮ ಧರ್ಮದ ಆಚರಣೆಗೆ, ಬ್ರಾಹ್ಮಣ ಶ್ರೇಷ್ಠತೆಗೆ ಮತ್ತು ಮಡಿವಂತಿಕೆಗೆ ಒಂದಿನಿತು ಚ್ಯುತಿ ಬಂದರು ಸಹಿಸಿಕೊಳ್ಳುವುದಿಲ್ಲ. ಅದಕ್ಕಾಗಿ ಅವರು ಯಾವ ಮಟ್ಟಕ್ಕಾದರೂ ಹೋಗಬಲ್ಲರು. ಇತಿಹಾಸದಲ್ಲಿ ಅವಕ್ಕೆ ಚ್ಯುತಿ ಬಂದಾಗಲೆಲ್ಲ ದೊಡ್ಡ ಕ್ರಾಂತಿಗಳು ಘಟಿಸಿವೆ. ಬ್ರಾಹ್ಮಣ್ಯದ ಮಡಿ, ಮೈಲಿಗೆಯ ಉಪಟಳದ ವಿರುದ್ಧ ಬುದ್ದ ಮತ್ತು ಬಸವಣ್ಣ ಕಟ್ಟಿದ ಚಳುವಳಿಗಳನ್ನು ಸನಾತನಿಗಳು ರಕ್ತಪಾತದ ಮೂಲಕ ಹತ್ತಿಕ್ಕಿದ್ದಾರೆ. ಬಸವಣ್ಣನವರು ಬ್ರಾಹ್ಮಣ್ಯ ಒಂದು ಶಾಪ ಎನ್ನುವ ಅರ್ಥದಲ್ಲಿ “ವಿಪ್ರ ಕರ್ಮವ ಬಿಡಿಸಿ ಅಶುದ್ಧನ ಶುದ್ಧನಾಗಿಸೆದೆಯಯ್ಯ ಕೂಡಲಸಂಗಮದೇವಾ” ಎಂದಿದ್ದಾರೆ. ಮುಂದುವರೆದು ಅವರು “ಹಾರುವ ಕುಲವ ನೀಗಿದೆನಯ್ಯಾ” ಎನ್ನುತ್ತಾರೆ. ಶರಣರು, ಸಂತರು, ತತ್ವಪದಕಾರರು, ಮುಂತಾದ ದಾರ್ಶನಿಕರು ಬ್ರಾಹ್ಮಣ್ಯದ ಮಡಿ, ಮೈಲಿಗೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ನಿತ್ಯ ನೀರೋಳು ಮೀವ ವಿಪ್ರ ತಾ ಸ್ವರ್ಗ ಸೇರುವಡೆ, ನಿತ್ಯ ನೀರೊಳಿರುವ ಕಪ್ಪೆ ತಾನೇಕೆ ಸ್ವರ್ಗ ಸೇರದು ಸರ್ವಜ್ಞ!? ಎಂದು ಬ್ರಾಹ್ಮಣ್ಯದ ಮುಡಿಯನ್ನು ಸರ್ವಜ್ಞ ವಿಡಂಬಿಸಿದ್ದಾನೆ.
ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಹುಟ್ಟುಹಾಕಿದ ವಚನ ಚಳವಳಿಯು ಭಾರತದಲ್ಲಿನ ಬ್ರಾಹ್ಮಣ್ಯದ ವಿರುದ್ಧದ ಮಹತ್ವದ ಚಳವಳಿ ಎನ್ನಿಸಿದೆ. ವಚನ ಚಳವಳಿಯ ನಾಯಕ ಬಸವಣ್ಣ ಒಬ್ಬ ಬ್ರಾಹ್ಮಣನಾಗಿದ್ದು ಆ ಬ್ರಾಹ್ಮಣ್ಯವನ್ನು ಎಡಗಾಲಲ್ಲಿ ಒದ್ದು ಹೊರಬಂದರು. ಬ್ರಾಹ್ಮಣ್ಯದ ಎಲ್ಲಾ ವಿಕೃತಿ, ಮೌಢ್ಯಾಚರಣೆಗಳನ್ನು ತೀವ್ರವಾಗಿ ಖಂಡಿಸಿ ಅದಕ್ಕೆ ಪರ್ಯಾಯವಾದ ಹೊಸ ವಿಚಾರಧಾರೆಯನ್ನು ಬಸವಣ್ಣನವರು ಪ್ರತಿಪಾದಿಸಿದರು. ಅಂದು ಬ್ರಾಹ್ಮಣ್ಯದ ಮಡಿ, ಮೈಲಿಗೆಯ ಆಚರಣೆಗಳಿಂದ ಬೇಸತ್ತಿದ್ದ ಅನೇಕ ಜನ ದಾರ್ಶನಿಕರು ಸಿದ್ಧ, ನಾಥ, ಅವಧೂತ ಪಂತಗಳನ್ನು ತೊರೆದು ಬಸವಣ್ಣನವರು ವಚನ ಚಳವಳಿಯಲ್ಲಿ ವಿರಾಟ ಐಕ್ಯತೆ ಮೆರೆದರು. ಚಾಲುಕ್ಯ ಸಿಂಹಾಸನ ಅಪಹರಿಸಿ ಸಾಮ್ರಾಟನಾಗಿದ್ದ ಬಿಜ್ಜಳಭೂಪನ ಆಸ್ಥಾನದಲ್ಲಿದ್ದ ಪ್ರಧಾನಮಂತ್ರಿ ಹಾಗೂ ಭಂಡಾರದ ಮುಖ್ಯಸ್ಥನಾಗಿದ್ದ ಬಸವಣ್ಣ ರಾಜಸತ್ತೆಯನ್ನು ಅವಗಣಿಸಿ ಕಟ್ಟಿದ ವಚನ ಚಳವಳಿಯು ಅತ್ಯಲ್ಪ ಅವಧಿಯಲ್ಲಿ ಅಪಾರ ಜನಮನ್ನಣೆ ಪಡೆಯಿತು. ಬಸವಣ್ಣನವರು ನೇರಾನೇರವಾಗಿ ಬ್ರಾಹ್ಮಣ್ಯದ ವಿರುದ್ಧ ಮಹಾ ಸಮರವನ್ನೆ ಸಾರಿದ್ದರು. ಬ್ರಾಹ್ಮಣ್ಯದ ಮಡಿ, ಮೈಲಿಗೆಯಂತಹ ಹೇಯ ಆಚರಣೆಗಳ ಕುರಿತು ಅವರು ಸಾಂಘಿಕ ಮತ್ತು ಸಾಮೂಹಿಕ ಯುದ್ಧ ರೂಪಿಸಿದರು. ಸನಾತನಿಗಳ ಮಡಿ, ಮೈಲಿಗೆ ಹಾಗು ಶ್ರೇಷ್ಠತೆಯ ಅಹಂಭಾವದ ವಿರುದ್ಧ ಕಟುವಾಗಿ ಟೀಕಿಸುವ ಒಂದು ವಚನ ಹೀಗಿದೆ:
“ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು!
ನಿಮಗೆರಗದ ಕಾರಣ ಕೊರಳಲ್ಲಿ ನೇಣು!
ಹಿಂಡಲೇಕೋ ತೊಳೆಯಲೇಕೋ!
ಮುಳುಗಿ ಮುಳುಗಿ ಮೂಗ ಹಿಡಿಯಲೇಕೋ!
ಕೂಡಲಸಂಗನ ಶರಣರಲ್ಲಿ
ಡೋಹರ ಕಕ್ಕಯ್ಯನಾವ ತೊರೆಯಲಿ ಮಿಂದ.”
ಭಾವಾರ್ಥ
ನಿರಾಕಾರ, ನಿರ್ಗುಣ ಸೃಷ್ಟಿ ಚೈತನ್ಯಾತ್ಮಕ ಶಕ್ತಿಯಾಗಿರುವ ನಿನ್ನನ್ನು ಅರಿತುಕೊಳ್ಳಲಾಗದ ಅಜ್ಞಾನಿಗಳ ಕೈಯಲ್ಲಿ ಧಾರ್ಮಿಕ ಕ್ರಿಯೆಗಳು ಮಾಡುವ ದರ್ಬೆಯ ಹುಲ್ಲಿದೆ (ಯಜ್ಞ, ಹೋಮ ಮುಂತಾದ ಪೂಜೆಯ ಸಂದರ್ಭದಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸಲಾಗುತ್ತದೆ). ಸೃಷ್ಟಿಕರ್ತನಾದ ದೇವರ ಪಾದಕ್ಕೆ ಎರಗುವ ಯೋಗ್ಯತೆ ಇಲ್ಲದವರು ಶ್ರೇಷ್ಠತೆಯ ಸಂಕೇತವಾದ ಯಜ್ಞೋಪವೀತವನ್ನು (ದಾರ=ನೇಣು) ಧರಿಸಿರುತ್ತಾರೆ. ಮಡಿ, ಮೈಲಿಗೆಯ ಹೆಸರಿನಲ್ಲಿ ಒದ್ದೆ ಬಟ್ಟೆಗಳನ್ನು ನಿರಂತರವಾಗಿ ಹಿಂಡುವುದು, ತೊಳೆಯುವುದು ಮಾಡುತ್ತಾರೆ. ಅಷ್ಟಕ್ಕೆ ಸಾಗಾಗಲಿಲ್ಲ ಎನ್ನುವಂತೆ ನೀರು ಕಂಡಲ್ಲಿ ಮಳುಗಿ ಮುಳುಗಿ ಏಳುತ್ತಾರೆ. ನೀರಿನಲ್ಲಿ ಮುಳುಗುವಾಗ ತಮ್ಮ ಮೂಗನ್ನು ಗಟ್ಟಿಯಾಗಿ ಹಿಡಿದಿರುತ್ತಾರೆ. ನೀರಲ್ಲಿ ಮುಳುಗಿ ಪರಿಶುದ್ಧವಾದೆವು ಎಂದು ಪರಿಭಾವಿಸುವ ವಿಪ್ರರು ಬಾಹ್ಯ ಶುದ್ಧರಲ್ಲದೆ ಅಂತರಂಗ ಶುದ್ಧರಲ್ಲ. ಇಡೀ ಶರಣ ಸಂಕುಲದ ಗೌರವಕ್ಕೆ ಪಾತ್ರರಾದ ಶರಣ ಡೋಹರ ಕಕ್ಕಯ್ಯ ಯಾವತ್ತೂ ಯಾವ ಕೆರೆಯಲ್ಲಿಯೂ ಮಿಂದು ಮಡಿಯುಟ್ಟು ಡಾಂಬಿಕ ಭಕ್ತಿ ಪ್ರದರ್ಶಿಸಲಿಲ್ಲ. ಇಡೀ ವಚನದಲ್ಲಿ ಬ್ರಾಹ್ಮಣ್ಯದ ಮಡಿ ಹಾಗು ಮೈಲಿಗೆಯ ಆಚರಣೆಗಳನ್ನು ಬಸವಣ್ಣನವರು ಮಾರ್ಮಿಕವಾಗಿ ವಿಡಂಬಿಸಿದ್ದಾರೆ. ಎಂದಾದರೊಮ್ಮೆ ಸ್ನಾನ ಮಾಡುವ ಅಂತರಂಗಶುದ್ಧವುಳ್ಳ ಒಬ್ಬ ಚರ್ಮ ಹದ ಮಾಡುವ ಕಾಯಕದ ಡೋಹರ ಕಕ್ಕಯ್ಯ ಶರಣ ದಿನನಿತ್ಯ ಸ್ನಾನ ಮಾಡುವ ಯಾವ ವಿಪ್ರನಿಗಿಂತಲೂ ಕಡಿಮೆಯಿಲ್ಲ ಎನ್ನುವ ಮೂಲಕ ವಿಪ್ರರ ಮಡಿ, ಮೈಲಿಗೆಯ ಆಚರಣೆಯನ್ನು ಬಸವಣ್ಣನವರು ಖಂಡಿಸುತ್ತಾರೆ.
ಇದನ್ನೂ ಓದಿ ವಚನಯಾನ | ಶರಣ ಧರ್ಮದ ನೈತಿಕ ಮೌಲ್ಯಗಳು
ಟಿಪ್ಪಣಿ
ಬಸವ ಸಂಸ್ಕೃತಿ ಮಡಿ, ಮೈಲಿಗೆಯ ಸಂಸ್ಕೃತಿಯಲ್ಲ, ಅದು ಬ್ರಾಹ್ಮಣ್ಯದ ಶ್ರೇಷ್ಠತೆಯ ವಿರಿದ್ಧ ಹುಟ್ಟಿದ ಪ್ರತಿರೋಧದ ಆಂದೋಲನ. ಮಡಿ, ಮೈಲಿಗೆ, ಜಾತಕ, ಸೂತಕಗಳಂತಹ ಬ್ರಾಹ್ಮಣ್ಯದ ಶುಷ್ಕ ಆಚರಣೆಗಳನ್ನು ಶರಣ ಧರ್ಮ ಮಾನ್ಯ ಮಾಡುವುದಿಲ್ಲ. ವಚನ ಚಳವಳಿಯ ನಾಯಕ ಬಸವಣ್ಣನವರು ಹೋತಿನ ಕೊರಳಿಗೆ ಕಟ್ಟಿದ ಹಗ್ಗದಂತೆ ಹಾಗು ಕರ್ಮಲತೆಯಂತಿರುವ ಜನಿವಾರವನ್ನು ಕಿತ್ತು ಬಿಸಾಕಿ ಬ್ರಾಹ್ಮಣ್ಯದಿಂದ ಮುಕ್ತರಾದವರು. ವಚನ ಚಳವಳಿಯಲ್ಲಿ ಅಸಂಖ್ಯಾತ ವೈದಿಕೇತರ ವರ್ಗದ ಶರಣರು ವೈದಿಕ ಧರ್ಮದ ಮಡಿವಂತಿಕೆಯ ಆಚರಣೆಗಳ ವಿರುದ್ಧ ಬಸವಣ್ಣನವರ ನಾಯಕತ್ವದಲ್ಲಿ ಹೋರಾಡಿದ್ದಾರೆ. ಸದಾಚಾರದ ನಡೆ, ನುಡಿಗಳು ಕಲಿಯದ ಧಾರ್ಮಿಕ ಕರ್ಮಟರು ಆಚರಿಸುವ ಕ್ರಿಯೆಗಳನ್ನು ಶರಣರು ನಿರಾಕರಿಸಿದ್ದಾರೆ. ವೈದಿಕ ಆಚರಣೆಯ ಸಂದರ್ಭದಲ್ಲಿ ಉಂಗುರ ರೂಪದಲ್ಲಿ ಧರಿಸುವ ದರ್ಬೆ ಹುಲ್ಲು ಮತ್ತು ಶ್ರೇಷ್ಠತೆಯ ಸಂಕೇತವಾಗಿರುವ ಜನಿವಾರವನ್ನು ಸತ್ಯದ ಮಾರ್ಗ ತಿಳಿಯದ ಅಜ್ಞಾನಿಗಳ ಧಾರ್ಮಿಕ ಪರಿಕರಗಳು ಎನ್ನುತ್ತಾರೆ ಬಸವಣ್ಣನವರು. ದೇಹ ಸ್ವಚ್ಛತೆಯ ಸ್ನಾನದಿಂದ ಮಡಿಯುಂಟಾಗುತ್ತದೆ ಎನ್ನುವ ನಂಬಿಕೆಯನ್ನು ಬಸವಣ್ಣನವರು ನಿರಾಕರಿಸುತ್ತಾರೆ. ಶರಣರು ವೈದಿಕರ ಧಾರ್ಮಿಕ ಕ್ರಿಯೆಗಳು ಮತ್ತು ಅದಕ್ಕಾಗಿ ಆಚರಿಸುವ ಮಡಿಯನ್ನು ವಿಡಂಬಿಸುತ್ತಾ ಅಂತರಂಗಶುದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಬಸವಣ್ಣನವರಂತೂ ಇಡೀ ಬ್ರಾಹ್ಮಣ್ಯದ ಡಾಂಭಿಕ ಭಕ್ತಿಯನ್ನು ತಿರಸ್ಕರಿಸಿ ಅದಕ್ಕೆ ಪರ್ಯಾಯವಾದ ಸರಳ ಅನುಭವ ಮಾರ್ಗವನ್ನು ಶೋಧಿಸಿ ಕೊಟ್ಟಿದ್ದಾರೆ

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




