ವಚನ ಚಳವಳಿ ವೈದಿಕ ವಿರೋಧಿ ಚಳವಳಿ ಆಗಿರದೆ ಅದೊಂದು ಹಿಂದೂ ಧರ್ಮದ ಸುಧಾರಣಾವಾದಿ ಚಳವಳಿ ಆಗಿದ್ದರೆ ಹನ್ನೆರಡನೆ ಶತಮಾನದಲ್ಲಿ ವೈದಿಕರು ನಿದ್ದೆಗೆಟ್ಟು, ಪ್ರತಿಕ್ರಾಂತಿ ಹೂಡಿ ಅದನ್ನು ರಕ್ತಪಾತದ ಮುಖೇನ ಹಣಿಯುವ ಸನ್ನಿವೇಶ ಉದ್ಭವವಾಗುತ್ತಿರಲಿಲ್ಲ.
“ಕೇವಲ ಕೆಲವು ವಚನಗಳನ್ನು ಮುಂದಿಟ್ಟುಕೊಂಡು ಒಂದು ಸ್ವತಂತ್ರ ಸಿದ್ಧಾಂತವನ್ನು ಕಟ್ಟಲಾಗದು” ಇದು ಲಿಂಗಾಯತ ದರ್ಶನದ ಕುರಿತು ಯಾವೊಂದು ಸಿದ್ಧಾಂತವನ್ನು ಸರಿಯಾಗಿ ತಿಳಿದುಕೊಳ್ಳದ, ಏನನ್ನೂ ಓದಿಕೊಳ್ಳದ ಕಣೇರಿ ಕಾಡಸಿದ್ಧ ಎನ್ನುವ ಕಾವಿ ಪುಢಾರಿಯ ಬಾಲಿಶ ಹೇಳಿಕೆ. ಈ ಹೇಳಿಕೆ ಕೇವಲ ಕಾಡಸಿದ್ಧನೊಬ್ಬನದೇ ಅಲ್ಲದೆ ಈತನ ಗುಂಪಿನಲ್ಲಿರುವ ವಿಭೂತಿಯ ಬದಲಿಗೆ ರಕ್ತ ತಿಲಕ ಧರಿಸುವ ವೇದಾಂತ ಮುಖವಾಡದ ಹಿಂದುತ್ವ ಮೂಲಭೂತವಾದಿ ಕಾವಿಗಳೆಲ್ಲರದ್ದು. ಅದಾಗ್ಯೂ ಇದು ಈ ಗುಂಪಿನ ಸ್ವಂತ ಹೇಳಿಕೆಯೂ ಅಲ್ಲ, ಏಕೆಂದರೆ, ಇವರಾರೂ ವಿದ್ವಾಂಸರಲ್ಲ, ಅಥವಾ ಕನಿಷ್ಠ ಗಂಭೀರ ಓದುಗರೂ ಅಲ್ಲ. ಈ ಇಡೀ ಗುಂಪು ತಾನು ನಂಬಿರುವ ಆರೂಢ ಸಿದ್ಧಾಂತವನ್ನು ಹಿಂದುತ್ವ ರಾಜಕಾರಣಕ್ಕೆ ಅಡವಿಟ್ಟ ಅಧಮರ, ಲಿಂಗಾಯತ ಧರ್ಮ ಚಳವಳಿಯನ್ನು ವಿರೋಧಿಸುವ ಹಿಂದುತ್ವವಾದಿ ಸಂಘಟನೆಯ ಕಾಲಾಳುಗಳ ಗುಂಪು. ವಚನ ಸಾಹಿತ್ಯವನ್ನು ಭಾರತದ ಒಂದು ಮುಖ್ಯ ದರ್ಶನವೆಂದು ಈ ಹಿಂದುತ್ವವಾದಿ ಗಾಂಪರ ಗುಂಪು ಯಾವತ್ತೂ ಪರಿಗಣಿಸಿಲ್ಲ ಹಾಗು ಈ ಗುಂಪು ಹಿಂದುತ್ವವಾದಿ ರಾಜಕೀಯ ಸಂಘಟನೆಯ ಭಾಗವಾಗಿದ್ದು ಅದು ಲಿಂಗಾಯತ ದರ್ಶನವು ಹಿಂದೂ ದರ್ಶನದ ಭಾಗವೆನ್ನುವ ಭ್ರಮೆಯನ್ನು ಜನರಲ್ಲಿ ಬಿತ್ತಲು ಸುಪಾರಿ ಪಡೆದಿದೆ. ವಚನ ಚಳವಳಿ ವೈದಿಕ ವಿರೋಧಿ ಚಳವಳಿ ಆಗಿರದೆ ಅದೊಂದು ಹಿಂದೂ ಧರ್ಮದ ಸುಧಾರಣಾವಾದಿ ಚಳವಳಿ ಆಗಿದ್ದರೆ ಹನ್ನೆರಡನೆ ಶತಮಾನದಲ್ಲಿ ವೈದಿಕರು ನಿದ್ದೆಗೆಟ್ಟು, ಪ್ರತಿಕ್ರಾಂತಿ ಹೂಡಿ ಅದನ್ನು ರಕ್ತಪಾತದ ಮುಖೇನ ಹಣಿಯುವ ಸನ್ನಿವೇಶ ಉದ್ಭವವಾಗುತ್ತಿರಲಿಲ್ಲ.
ವಚನ ಚಳವಳಿಯು ಸನಾತನ ಹಿಂದೂ ಬ್ರಾಹ್ಮಣ ಧರ್ಮದ ಸುಧಾರಣಾವಾದಿ ಚಳವಳಿಯಾಗಿದ್ದರೆ ಬ್ರಾಹ್ಮಣರು ಬಸವಣ್ಣನವರನ್ನು ಗಡಿಪಾರು ಮಾಡಿಸಿ, ಶರಣರನ್ನು ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿ, ವಚನ ಕಟ್ಟುಗಳಿಗೆ ಬೆಂಕಿಹಾಕುತ್ತಿರಲಿಲ್ಲ. ಬಸವಣ್ಣನವರು ಹಿಂದೂ ಬ್ರಾಹ್ಮಣ ಧರ್ಮದ ಸುಧಾರಣೆ ಮಾಡುವ ಉದ್ದೇಶ ಹೊಂದಿದ್ದರೆ ಜನಿವಾರ ಕಿತ್ತಿ ಬಿಸಾಕಿ ಮನೆ ಬಿಟ್ಟು ಹೊರಬರುತ್ತಿರಲಿಲ್ಲ. ಇದೆಲ್ಲವೂ ಗೊತ್ತಿದ್ದೂ ಹಿಂದೂ ಬ್ರಾಹ್ಮಣವಾದಿಗಳು ಮತ್ತು ಅವರ ಕಾಲಾಳುಗಳಾದ ಮೂಢ ಆರೂಢಾನಂದರು ಲಿಂಗಾಯತರು ಹಿಂದೂಗಳು ಎಂದು ಪ್ರಲಾಪಿಸುತ್ತಿರುವುದು ಅವರ ಮಿದುಳು ರಹಿತ ಖಾಲಿ ತಲೆಯ ಕಾರಣದಿಂದ. ಇವರೆಲ್ಲ ರಾಜಕೀಯ ಪ್ರೇರಿತ ಮತ್ತು ಸಂಘ ಪ್ರಾಯೋಜಿತ “ಬಸವಾದಿ ಶರಣರ ಹಿಂದೂ ಸಮಾವೇಶ” ಮಾಡುವುದರಿಂದ ಲಿಂಗಾಯತರು ಯಾವತ್ತೂ ಹಿಂದೂಗಳಾಗುವುದಿಲ್ಲ ಮತ್ತು ಲಿಂಗಾಯತ ಚಳವಳಿ ಎಂದಿಗೂ ನಿಲ್ಲುವುದಿಲ್ಲ. ಯಾರನ್ನು ಸನಾತನ ಹಿಂದೂಗಳೆಂದು ಕರೆಯಬೇಕು ಎನ್ನಲು ಹಿಂದೂ ಬ್ರಾಹ್ಮಣ ಧರ್ಮದಲ್ಲಿ ಅಗಾಧವಾದ ಸಾಹಿತ್ಯ ಭಂಡಾರವಿದೆ. ಆ ಇಡೀ ವೈದಿಕ ಸಾಹಿತ್ಯವನ್ನು ಬಸವಾದಿ ಶರಣರು ನೇರವಾಗಿ ದಿಕ್ಕರಿಸಿದ್ದಾರೆ. ಹಿಂದೂ ಬ್ರಾಹ್ಮಣರ ಧಾರ್ಮಿಕ ಸಾಹಿತ್ಯಗಳಾದ ವೇದ, ಶಾಸ್ತ್ರ, ಉಪನಿಷತ್ತು, ಶೃತಿ, ಸ್ಮೃತಿ, ಆಗಮ, ಪುರಾಣ ಮುಂತಾದವುಗಳನ್ನು ಶರಣರು ಸಾರಾಸಗಟಾಗಿ ವಿರೋಧಿಸಿದ್ದಾರೆ. ಬ್ರಾಹ್ಮಣರು ಬೆಂಕಿ ಇಟ್ಟು ನಾಶ ಮಾಡಿದ ನಂತರವೂ ಆ ಕುರಿತ ಶರಣರ ಅನೇಕ ವಚನಗಳು ಸಿಕ್ಕಿವೆ.
ಒಟ್ಟಾರೆ ಇಡೀ ವಚನ ಚಳವಳಿ ಸನಾತನ ಆರ್ಯ ಹಿಂದೂ ಬ್ರಾಹ್ಮಣ ಧರ್ಮವನ್ನು ಖಂಡತುಂಡವಾಗಿ ಅಲ್ಲಗಳೆದಿದೆ, ತೀವ್ರವಾಗಿ ವಿಮರ್ಶಿಸಿದೆ ಮತ್ತು ತೀಕ್ಷ್ಣವಾಗಿ ವಿಡಂಬಿಸಿದೆ. ಅನುಭವ ಮಂಟಪದ ಮೂರನೇ ಅಧ್ಯಕ್ಷರು, ಅನನ್ಯ ವಿಚಾರವಂತರು, ಪ್ರಖರ ವೇದ ವಿರೋಧಿಗಳು ಆಗಿದ್ದ ಬಸವಯೋಗಿ ಸಿದ್ಧರಾಮರು ತಮ್ಮ ವಚನ ಚಿಂತನೆಯ ಮೂಲಕ ಸನಾತನ ಬ್ರಾಹ್ಮಣ ಧರ್ಮದ ಪ್ರತಿಯೊಂದು ಸಿದ್ಧಾಂತಗಳು ಹಾಗು ಆಚರಣೆಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದ್ದಾರೆ. ಸಿದ್ಧರಾಮರ ಆ ಕುರಿತ ಒಂದು ವಚನ ಹೀಗಿದೆ:
ವಚನ
“ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ. ಸ್ಮೃತಿಗಳು ಸಮುದ್ರದ ಪಾಲಾಗಲಿ; ಶ್ರುತಿಗಳು ವೈಕುಂಠವ ಸೇರಲಿ; ಪುರಾಣಗಳು ಅಗ್ನಿಯ ಸೇರಲಿ; ಆಗಮಗಳು ವಾಯುವ ಹೊಂದಲಿ. ಎಮ್ಮ ನುಡಿ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಲಿಂಗದ ಹೃದಯದೊಳು ಗ್ರಂಥಿಯಾಗಿರಲಿ.”
ಭಾವಾರ್ಥ
ನಮ್ಮ (ಲಿಂಗಾಯತರು) ನಡೆ, ನುಡಿ, ಆಚರಣೆಗಳಿಗೆ ಅನುಭವ ಮಂಟಪದ ಅಮರಗಣಂಗಳೆಂಬ ಪುರಾತನರ ಭೋದನೆಗಳೆ ಸ್ಪೂರ್ತಿ. ನಮಗೆ ನಮ್ಮ ಪುರಾತನರ ಸೂಳ್ನುಡಿಗಳೆ ಇಷ್ಟ. ಬ್ರಾಹ್ಮಣ ಧರ್ಮದ ಧರ್ಮ ಗ್ರಂಥಗಳಾದ ಸ್ಮೃತಿಗಳೆಲ್ಲವೂ ಸಮುದ್ರದ ಅಪಾರ ಜಲರಾಶಿಯಲ್ಲಿ ಮುಳುಗಿ ನಾಶವಾಗಲಿ. ಬ್ರಾಹ್ಮಣ ಧರ್ಮದ ಶೃತಿಗಳು ಸತ್ತು ಶ್ರೀಹರಿ ವಾಸಸ್ಥಾನ ವೈಕುಂಠ ಸೇರಲಿ. ಯಾವ ಪ್ರಾಯೋಗಿಕ ಮೌಲ್ಯಗಳೂ ಹೊಂದಿರದ ವೈದಿಕರ ಕಾಲ್ಪನಿಕ ಪುರಾಣಗಳು ಬೆಂಕಿಗೆ ಬಿದ್ದು ನಷ್ಟವಾಗಲಿ. ಯಾಂತ್ರಿಕವಾಗಿ ದೇವರ ವಿಗ್ರಹ ಪೂಜೆಯ ವಿದಿಗಳನ್ನು ಹೇಳುವ ಆಗಮಗಳು ಬಿರುಗಾಳಿಗೆ ಸಿಲುಕಿ ಚದುರಿ ಹೋಗಲಿ. ನಮ್ಮ ಶರಣರ ಸೂಳ್ನುಡಿಗಳು (ವಚನಗಳು) ಈ ಸೃಷ್ಟಿಯ ಚೈತನ್ಯ ಶಕ್ತಿಯಾಗಿರುವ ಮಹಾಲಿಂಗ (ಪರವಸ್ತು, ಬಯಲು)ದಲ್ಲಿ ಗ್ರಂಥಿಯಾಗಲಿ(Gland= ರಸಧೂತಗಳನ್ನು ಸ್ರವಿಸುವ ಗ್ರಂಥಿ). ಬಸವಯೋಗಿ ಸಿದ್ಧರಾಮರು ವೈದಿಕ ಧರ್ಮದ ಧರ್ಮ ಗ್ರಂಥಗಳ ಕುರಿತು ಶರಣ ಧರ್ಮ ಹೊಂದಿರುವ ಕರಾರುವಕ್ಕಾದ ನಿಲುವನ್ನು ಈ ವಚನದಲ್ಲಿ ಬಹಳ ಸ್ಪಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ಲಿಂಗಾಯತ ಧರ್ಮಿಯರಿಗೆ ವೈದಿಕ ಧರ್ಮದ ಯಾವೊಂದು ಗ್ರಂಥಗಳೂ ಆದರ್ಶವಲ್ಲ, ಭಾರತದ ಈ ನೆಲ ಅಭಿವೃದ್ಧಿ ಹೊಂದಬೇಕಾದರೆ ಅವೆಲ್ಲವು ಸಾರಾಸಗಟಾಗಿ ನಾಶವಾಗಬೇಕು ಎನ್ನುವುದೆ ಮೇಲಿನ ವಚನದ ಭಾವಾರ್ಥವಾಗಿದೆ. ಇಲ್ಲಿ ಶರಣರ ವಚನಗಳು ಮನುಷ್ಯನ ದೈನಂದಿನ ಬೆಳವಣಿಗೆಗೆ ಬೇಕಾಗುವ ರಸಧೂತಗಳನ್ನು (harmones) ಸ್ರವಿಸುವ ಗ್ರಂಥಿಗಳಂತೆ ಎನ್ನುವ ಗಟ್ಟಿ ಧ್ವನಿ ಮಾರ್ಧನಿಸಿದೆ.
ಟಿಪ್ಪಣಿ
ವಚನಕಾರರು ವೈದಿಕರ ಧರ್ಮ ಸಿದ್ಧಾಂತಗಳನ್ನು ಅತ್ಯುಗ್ರವಾಗಿ ಖಂಡಿಸಲು ಅವುಗಳಲ್ಲಿರುವ ಜೀವವಿರೋಧಿ ಹಾಗು ತಾರತಮ್ಯ ಪೂರಿತ ನಿಲುವುಗಳೇ ಕಾರಣ. ಈ ಶೃತಿ, ಸ್ಮೃತಿ, ಪುರಾಣ ಮತ್ತು ಆಗಮಗಳ ನಾಶವನ್ನು ಮೇಲಿನ ವಚನ ಬಯಸುತ್ತದೆ. ಹಾಗಾದರೆ ಈ ವೈದಿಕ ಸಿದ್ಧಾಂತಗಳು ನಿಜವಾಗಿಯೂ ಏನನ್ನು ಪ್ರತಿಪಾದಿಸುತ್ತವೆ ಎನ್ನುವ ಕುತೂಹಲ ಮೂಡುವುದು ಸಹಜ. ಶೃತಿಗಳು ಎಂದರೆ ಕೇಳಿದ್ದು ಅಥವಾ ಕೇಳಿಸಿಕೊಂಡಿದ್ದು ಎಂದರ್ಥ. ಹಿಂದೂ ಬ್ರಾಹ್ಮಣ ಧರ್ಮದ ಅತ್ಯಂತ ಪ್ರಾಚೀನ ಎಂದು ಬಿಂಬಿಸಲಾಗಿರುವ ಧಾರ್ಮಿಕ ಸಿದ್ಧಾಂತಗಳೇ ಶೃತಿಗಳು. ಇವು ವೇದಗಳು, ಉಪನಿಷತ್ತುಗಳು, ಸಂಹಿತೆಗಳು, ಬ್ರಾಹ್ಮಣಗಳು ಮತ್ತು ಆರಣ್ಯಕಗಳನ್ನು ಒಳಗೊಂಡಿದ್ದು, ಅಪೌರುಷೇಯ (ಮನುಷ್ಯರಿಂದ ರಚನೆಯಾಗದ) ಮತ್ತು ಸಾಕ್ಷಾತ್ ದೇವರಿಂದ ರಚಿಸಲ್ಪಟ್ಟ ಜ್ಞಾನವೆಂದು ಹೇಳಲಾಗುತ್ತದೆ. ಶೃತಿಗಳ ಪ್ರಮುಖ ಅಂಶಗಳೆಂದರೆ ಅವುಗಳ ಅಪೌರುಷೇಯತೆ. ನಾಲ್ಕು ವೇದಗಳಾದ ಋಗ್, ಯಜುರ್, ಸಾಮ, ಮತ್ತು ಅಥರ್ವ ವೇದಗಳು ಶೃತಿಗಳ ಮುಖ್ಯ ಭಾಗಗಳಾಗಿವೆ. ಪ್ರತಿಯೊಂದು ವೇದದಲ್ಲಿ ಸಂಹಿತೆಗಳು (ಮಂತ್ರಗಳು), ಬ್ರಾಹ್ಮಣಗಳು (ಕ್ರಿಯಾವಿಧಿಗಳು), ಆರಣ್ಯಕಗಳು (ಅರಣ್ಯಗಳಲ್ಲಿನ ಜ್ಞಾನ) ಮತ್ತು ಉಪನಿಷತ್ತುಗಳು (ತಾತ್ವಿಕ ಜ್ಞಾನ) ಸೇರಿಕೊಂಡಿವೆಯಂತೆ. ಸಂಕ್ಷಿಪ್ತ ರೂಪದಲ್ಲಿ, ಶೃತಿಗಳು ಸನಾತನ ಬ್ರಾಹ್ಮಣ ಧರ್ಮದ ಮೂಲ ಧಾರ್ಮಿಕ ಆಧಾರಗಳಾಗಿದ್ದು ಇವು ಉಳಿದ ಸಮಸ್ತ ಭಾರತೀಯ ಹಿಂದೂಗಳಿಗೆ ಸಂಬಂಧಿಸಿದವುಗಳಲ್ಲ ಎನ್ನುವುದು ನಾವು ಗಮನಿಸಲೇಬೇಕಾದ ಸಂಗತಿ.
ಈ ವೇದ, ಶೃತಿ, ಸ್ಮೃತಿ ಮತ್ತು ಪುರಾಣಗಳು ಸಾವಿರಾರು ವರ್ಷಗಳ ಕಾಲ ಮೌಖಿಕವಾಗಿಯೇ ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದು ಬಂದಿವೆ ಎನ್ನುವ ಒಂದು ಅಸಮಾನ್ಯ ನಂಬಿಕೆ ಇದೆ. ಇವು ಅಕ್ಷರ ರೂಪಕ್ಕೆ ಇಳಿಸುವಷ್ಟರಲ್ಲಿ ಸಾಕಷ್ಟು distortion ಗೆ ಒಳಗಾಗಿವೆ. ಆಮೇಲೆ ಮತ್ತೊಂದಿಷ್ಟು ಸಂಗತಿಗಳನ್ನು ಅವುಗಳಲ್ಲಿ ಸೇರಿಸಿರಬಹುದು ಎಂದು ಹೇಳಲಾಗುತ್ತದೆ. ಭಗವಂತನ ಶ್ಲೋಕಗಳು ಗುಚ್ಛವಾಗಿ ವೇದಗಳಾಗಿಯಂತೆ. ಇವುಗಳ ನಂತರದಲ್ಲಿ ಬರುವವು ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತುಗಳು. ವೇದಗಳು ಬ್ರಾಹ್ಮಣ ಧರ್ಮದ ಧಾರ್ಮಿಕ ಕ್ರಿಯಾವಿಧಿಗಳಿಗೆ ಪ್ರಾಧಾನ್ಯ ನೀಡಿದರೆ, ಉಪನಿಷತ್ತುಗಳು ವೇದಗಳಿಗೆ ಹೊರತಾದ ಅಧ್ಯಾತ್ಮಿಕತೆಯನ್ನು ಪ್ರತಿಪಾದಿಸುತ್ತವೆ. ಒಟ್ಟಾರೆ ಈ ವೇದಗಳು ಮನುಷ್ಯ ನಿರ್ಮಿತ ಅಲ್ಲ (ಅಪೌರುಷೇಯ) ಎನ್ನುವ ಮಾತು ಅತ್ಯಂತ ಬಾಲಿಶ, ಕೃತಕ, ಹಾಗು ಅಸಹಜವಾಗಿದೆ. ವೇದಗಳು ಬಹುಷಃ ಭಾರತೀಯ ಮೂಲದ ಸಾಹಿತ್ಯ ಅಲ್ಲ ಎನ್ನಲು ಸಾಕಷ್ಟು ದಾಖಲೆಗಳು ಸಿಗುತ್ತವೆ. ಮಧ್ಯಪ್ರಾಚ್ಯದ ಪರ್ಸಿಯಾದ ನಿವಾಸಿಗಳಾದ ಪಾರ್ಸಿಗಳ ಧರ್ಮ ಗ್ರಂಥ ‘ಝೆಂಡ್ ಅವೆಸ್ತಾ’ದಲ್ಲಿನ ಅನೇಕ ಸಂಗತಿಗಳು ವೇದದ ಆಚರಣೆಗಳನ್ನು ಹೋಲುತ್ತವೆ. ಅದೇ ರೀತಿ, ರಷ್ಯಾದ ಸ್ಲಾವ್ ಆರ್ಯನ್ನರ ವೇದಗಳಿಗೂ ಹೋಲಿಕೆಯಾಗುತ್ತವೆ. ಸಂಸ್ಕೃತ ಭಾಷೆಯ ಅನೇಕ ಪದಗಳು, ದೇವತೆಗಳ ಹೆಸರುಗಳು ಮಧ್ಯಪ್ರಾಚ್ಯದ ಅಲ್ಲಿನ ಸ್ಥಳೀಯ ಭಾಷೆಯೊಂದಿಗೆ ಹೋಲಿಕೆಯಾಗುತ್ತವೆ. ಆದ್ದರಿಂದ ವೇದಗಳ ಆರಾಧಕರು ಭಾರತೀಯ ಮೂಲದರಲ್ಲ ಎನ್ನುವ ವಾದ ಪ್ರಚಲಿತದಲ್ಲಿದೆ.
ಸ್ಮೃತಿಗಳು ಎಂದರೆ ಹಿಂದೂ ಬ್ರಾಹ್ಮಣ ಧರ್ಮಗ್ರಂಥಗಳಲ್ಲಿ ‘ನೆನಪಿನಲ್ಲಿಟ್ಟುಕೊಂಡದ್ದು’ ಅಥವಾ ‘ಸ್ಮರಿಸಿದ್ದು’ ಎಂದರ್ಥ, ಇದು ವೇದಗಳ ನಂತರ ರಚನೆಯಾದ ಗ್ರಂಥಗಳ ಸಮೂಹವಾಗಿದ್ದು, ಇವುಗಳಲ್ಲಿ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ, ಪುರಾಣಗಳು, ಧರ್ಮಶಾಸ್ತ್ರಗಳು ಮತ್ತು ನೀತಿ ಸಂಹಿತೆಗಳು ಸೇರಿವೆ. ಈ ಸ್ಮೃತಿಗಳು ಬ್ರಾಹ್ಮಣರ ದೈನಂದಿನ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ ಮತ್ತು ಭಾರತೀಯರಲ್ಲಿ ತಾರತಮ್ಯಪೂರಿತ ಸಾಮಾಜಿಕ ನಿಯಮಗಳು, ಶಿಕ್ಷಣ ಮೇಲೆ ಬ್ರಾಹ್ಮಣರ ಬಿಗಿ ಹಿಡಿತ ಮತ್ತು ಚಾತುರ್ವರ್ಣಿಯರ ಕರ್ತವ್ಯಗಳನ್ನು ವಿವರಿಸುತ್ತವೆ. ಸ್ಮೃತಿಗಳು ಶೃತಿಗಳಿಗಿಂತ ಭಿನ್ನವಾಗಿವೆ. ವೇದಗಳಂತೆ ಇವು ದೇವ ನಿರ್ಮಿತವಲ್ಲ, ಬದಲಾಗಿ ಮನುಷ್ಯರಿಂದ ರಚಿಸಲ್ಪಟ್ಟಿವೆ. ಇವುಗಳೆಂದರೆ ಧರ್ಮಶಾಸ್ತ್ರಗಳು, ರಾಮಾಯಣ, ಮಹಾಭಾರತ ಮಹಾಕಾವ್ಯಗಳು, ಪುರಾಣಗಳು, ಆಗಮಗಳು, ಮತ್ತು ನೀತಿ ಸಂಹಿತೆಗಳು. ಇವು ವ್ಯಕ್ತಿಗಳ ಸಾಮಾಜಿಕ ಜೀವನ ಮತ್ತು ಕಾನೂನುಗಳನ್ನು ವಿವರಿಸುತ್ತವೆ. ಉದಾ: ಮನುಸ್ಮೃತಿ, ಯಮಸ್ಮೃತಿ, ಪರಾಶರಸ್ಮೃತಿ ಮುಂತಾದವು.
ಇನ್ನೂ ಸರಳವಾಗಿ ಹೇಳಬೇಕೆಂದರೆ, ಶೃತಿಗಳು ದೈವಿಕ ಪ್ರಕಟಣೆಗಳಾದರೆ, ಸ್ಮೃತಿಗಳು ಮಾನವನ ಅನುಭವ ಮತ್ತು ಜ್ಞಾನದಿಂದ ಹುಟ್ಟಿದ ಧಾರ್ಮಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳು. ಈ ಸಾಮಾಜಿಕ ಮತ್ತು ಧಾರ್ಮಿಕ ಕಟ್ಟುಪಾಡುಗಳೇ ಭಾರತೀಯರನ್ನು ಎಲ್ಲಾ ರೀತಿಯಲ್ಲಿ ಶೋಷಿಸಿಕೊಂಡು ಬಂದಿವೆ. ಸ್ಮೃತಿಗಳು ಹಿಂದೂ ಬ್ರಾಹ್ಮಣರ ಧಾರ್ಮಿಕ ಗ್ರಂಥಗಳ ಒಂದು ನಿರ್ದಿಷ್ಟ ಮಂಡಲವಾಗಿವೆ.
ಇದನ್ನೂ ಓದಿ ಗಾಜಾ ಶಾಂತಿ ಮಂಡಳಿ | ಭಕ್ಷಕನೇ ರಕ್ಷಕನ ರೂಪದಲ್ಲಿರುವುದು ಎಷ್ಟು ಸರಿ?
ಇವು ಹಿಂದೂ ಸಾಂಪ್ರದಾಯಿಕ ಕಾನೂನಿನ ಒಂದು ಕ್ರೋಢೀಕರಿಸಲಾದ ಘಟಕವಾಗಿದ್ದು ಸ್ಮೃತಿಯನ್ನು ರೂಪಿಸುವ ಸಾಹಿತ್ಯವನ್ನು ವೇದಗಳ ನಂತರ ಸುಮಾರು ಕ್ರಿ.ಪೂ. ೫೦೦ರ ಹೊತ್ತಿಗೆ ರಚಿಸಲಾಗಿದೆ ಎನ್ನಲಾಗುತ್ತದೆ. ಭಗವದ್ಗೀತೆಯು ಭಗವಂತನಿಂದ ಹೇಳಲ್ಪಟ್ಟಿದೆ ಎನ್ನುವ ನಂಬಿಕೆಯಿಂದ ‘ಶೃತಿ’ಯಾಗಿಯೂ, ಮಹಾಭಾರತ ವ್ಯಾಸರು ಬರೆದಿರುವುದರಿಂದ ‘ಸ್ಮೃತಿ’ಯಾಗಿಯೂ ಪರಿಗಣಿಸಲ್ಪಡುತ್ತದೆ. ಇನ್ನು ಪುರಾಣಗಳು ಹಿಂದೂ ಬ್ರಾಹ್ಮಣ ಧರ್ಮದ ಸಾಹಿತ್ಯ ಗ್ರಂಥಗಳಾಗಿದ್ದು, ಇವು ವೇದಗಳ ತತ್ವಗಳನ್ನು ಜನರಿಗೆ ಅರ್ಥವಾಗುವಂತೆ ಸರಳ ಕಥೆ, ದಂತಕಥೆ ಮತ್ತು ವಿವರಣೆಗಳ ಮೂಲಕ ತಿಳಿಸುತ್ತವೆ, ಇವು ಸ್ಥಾಪಿತ ವೈದಿಕ ಮೌಲ್ಯಗಳು, ಯುದ್ಧಗಳಲ್ಲಿನ ಕುಟಿಲ ತಂತ್ರಗಳು, ಮತ್ತು ರಾಜಕೀಯದ ಬಗ್ಗೆ ಮಾಹಿತಿಯನ್ನು ಒಳಗೊಂಡಿವೆ. ಪುರಾಣಗಳು ಪ್ರಮುಖವಾಗಿ ೧೮ ಇದ್ದು ಮತ್ತೆ ಅನೇಕ ಉಪಪುರಾಣಗಳಿವೆ. ಪುರಾಣಗಳು ಅನೇಕ ನೀತಿ ಕಥೆಗಳು, ಅನೈತಿಕ ಸಂಬಂಧಗಳು, ರಾಜರ ವಂಶಾವಳಿಗಳು, ದೇವತೆಗಳ ಅಸಂಬದ್ಧ ಕಥೆಗಳು, ವೈದಿಕ ಪ್ರಾಬಲ್ಯದ ಧರ್ಮ, ನೀತಿ, ಮತ್ತು ವೈದಿಕ ತತ್ವಗಳ ವಿವರಣೆಗಳನ್ನು ನೀಡುತ್ತವೆ. ಪುರಾಣಗಳನ್ನು “ಐದನೇ ವೇದ”ವೆಂದೂ ಕರೆಯುತ್ತಾರೆ. ಪುರಾಣಗಳು ‘ಕೊಟ್ಟಣವ ಕುಟ್ಟುವ ತೌಡು’, ‘ಪುಂಡರ ಗೋಷ್ಟಿ’ ಎಂದು ಶರಣರು ಟೀಕಿಸುತ್ತಾರೆ. ಏಕೆಂದರೆ, ಪುರಾಣಗಳು ಕಾಲ್ಪನಿಕ, ಕೃತಕ, ಅಸಹಜ, ಅವೈಜ್ಞಾನಿಕ, ಅತಾರ್ಕಿಕವಾಗಿವೆ, ಅಷ್ಟೆ ಅಲ್ಲದೆ ಅಶ್ಲೀಲವೂ ಆಗಿವೆ ಎಂದು ಡಾ. ಅಂಬೇಡ್ಕರ್ ಅಂತಹ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಆಗಮಗಳೆಂದರೆ ವೇದಗಳ ಆಧ್ಯಾತ್ಮಿಕ ತತ್ವಗಳ ಆಧಾರದ ಮೇಲೆ, ದೇವತಾ ಪೂಜೆ, ದೇವಾಲಯ ನಿರ್ಮಾಣ, ಮೂರ್ತಿ ಪ್ರತಿಷ್ಠಾಪನೆ, ಉತ್ಸವಗಳು ಮತ್ತು ಸಾಮಾಜಿಕ ನೀತಿ-ನಿಯಮಗಳ ಬಗ್ಗೆ ವಿವರಿಸುವ ಶಾಸ್ತ್ರ ಗ್ರಂಥಗಳು; ಇವು ಹಿಂದೂ ಬ್ರಾಹ್ಮಣ ಧರ್ಮದ ಶೈವ, ವೈಷ್ಣವ, ಶಾಕ್ತ ಪಂಥಗಳ ಪ್ರಮುಖ ಗ್ರಂಥಗಳಾಗಿದ್ದು, ಉಪಾಸನಾ ವಿಧಾನಗಳನ್ನು ವಿವರಿಸುತ್ತವೆ. ‘ಆಗಮ’ ಎಂದರೆ ಪರಂಪರೆಯಿಂದ ಬಂದ ಶಾಸ್ತ್ರ, ಅಥವಾ ಭಗವಂತನಿಂದಲೇ ನಿರ್ಮಿತವಾದ ವಿಶಿಷ್ಟ ಗ್ರಂಥ ಎಂದು ಅರ್ಥ. ಆಗಮಗಳು ಮಂದಿರಗಳ ವಿನ್ಯಾಸ, ದೇವತಾ ವಿಗ್ರಹಗಳ ಸ್ವರೂಪ ಮತ್ತು ಪ್ರತಿಷ್ಠಾಪನೆ, ಪೂಜಾ ವಿಧಿಗಳು, ಉತ್ಸವಗಳು, ಮತ್ತು ಧಾರ್ಮಿಕ ಆಚಾರ-ವಿಚಾರಗಳನ್ನು ತಿಳಿಸುತ್ತವೆ. ಆಗಮಗಳಲ್ಲಿ ಶೈವಾಗಮಗಳು, ವೈಷ್ಣವಾಗಮಗಳು, ಮತ್ತು ಶಾಕ್ತಾಗಮಗಳು ಇತ್ಯಾದಿ ಪ್ರಮುಖವಾಗಿವೆ. ಶೃತಿ, ಸ್ಮೃತಿ, ಪುರಾಣ ಮತ್ತು ಆಗಮಗಳು ಒಟ್ಟು ಸೇರಿ ಇವೆಲ್ಲವು ಹಿಂದೂ ಬ್ರಾಹ್ಮಣ ಧರ್ಮದ ಧರ್ಮ ಸಂಹಿತೆಗಳು. ಇವು ಬ್ರಾಹ್ಮಣೇತರ ಹಿಂದೂಗಳನ್ನು ಹೇಗೆ ನಿಯಂತ್ರಿಸಬೇಕು, ಅವರನ್ನು ಧರ್ಮದಿಂದ ಹೊರಗಿಟ್ಟು, ಧಾರ್ಮಿಕ ಕಟ್ಟಳೆಗಳಿಂದ ಹೇಗೆ ಕಟ್ಟಿಹಾಕಬೇಕು ಎನ್ನುವುದನ್ನು ಪ್ರಧಾನವಾಗಿ ಚರ್ಚಿಸುತ್ತವೆ. ಆದ್ದರಿಂದ ಬಸವಯೋಗಿ ಸಿದ್ಧರಾಮರು ಇವೆಲ್ಲವುಗಳ ನಾಶವೇ ಭಾರತೀಯ ಬಹುಜನರ ನೈಜ ಸ್ವಾತಂತ್ರ್ಯವೆಂದು ತಮ್ಮ ವಚನದಲ್ಲಿ ಪ್ರತಿಪಾದಿಸಿದ್ದಾರೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




