ವಚನಯಾನ | ಯಾರು ಪರಿಪೂರ್ಣರು?

Date:

ಪರಿಪೂರ್ಣತೆ ಎನ್ನುವುದು ಲೌಕಿಕ ಬದುಕಿನಲ್ಲಿ ಒಂದು ಸಾಪೇಕ್ಷ ಸಿದ್ಧಾಂತವೆ ಹೊರತು ಅದು ಪೂರ್ಣತೆಯಲ್ಲ. ಆದರೆ ಕಣ್ಣಿಗೆ ಕಾಣದ ವಸ್ತುವಿನಲ್ಲಿ ಪರಿಪೂರ್ಣತೆ ಹುಡುಕುವುದು ಅತ್ಯಂತ ಮೂರ್ಖತನ. ಕಣ್ಣಿಗೆ ಕಾಣದ ದೇವರನ್ನು ಪರಿಪೂರ್ಣ ಎನ್ನುವ ಮನುಷ್ಯ ತನ್ನಂತೆ ಆ ದೇವರನ್ನು ಲೌಕಿಕದ ಜಂಜಡದಲ್ಲಿಟ್ಟು ನೋಡುವುದು ಮನುಷ್ಯನ ಅರ್ಥಹೀನವಾದ ನಡೆ. ಹಾಗೆ ದೇವರ ಅವತಾರ ಎಂದು ಬಿಂಬಿಸಿಕೊಂಡು ಬರಲಾಗಿರುವ ಪುರಾಣದ ಕಲ್ಪಿತ ಪಾತ್ರಗಳಾದ ರಾಮ, ಕೃಷ್ಣ, ಪರಶುರಾಮ ಮುಂತಾದವರ ಜೀವನ, ಬದುಕು ಅತ್ಯಂತ ಲೌಕಿಕವಾದದ್ದು.

ಪರಿಪೂರ್ಣತೆ ಅಂದರೆ ವ್ಯಕ್ತಿಯ ಅತ್ಯುನ್ನತ ವಿಕಸನ ಅಥವಾ ಉನ್ನತಿ. ಮನುಷ್ಯ ತನ್ನನ್ನು ತಾನು ಅಪೂರ್ಣನೆಂತಲು ಹಾಗೂ ತಾನು ನಂಬಿಕೊಂಡಿರುವ ದೈವೀ ಶಕ್ತಿಯನ್ನು ಪರಿಪೂರ್ಣವೆಂತಲು ಭಾವಿಸಿದ್ದಾನೆ. ತಾನೇ ಅಪೂರ್ಣವಾದ ಸ್ಥಿತಿಯಲ್ಲಿರುವಾಗ ಪರಿಪೂರ್ಣತೆಯನ್ನು ಹುಡುಕುವುದಾದರು ಹೇಗೆ? ಮನಸ್ಸಿನ ಚಂಚಲತೆ ಮತ್ತು ಗ್ರಹಿಕೆಯ ಮಿತಿಯು ನಮಗೆ ಪರಿಪೂರ್ಣತೆಯನ್ನು ಒದಗಿಸಲಾರದು. ಮನಸ್ಸನ್ನು ಹೊಂದಿರುವ ಮನುಷ್ಯ ಒಂದು ಅಪೂರ್ಣ ಜೀವಿ, ಏಕೆಂದರೆ ಮನಸ್ಸು ಮನುಷ್ಯನ ಪ್ರಜ್ಞೆಯ ಮೊದಲ ಮತ್ತು ಅತ್ಯುನ್ನತ ಶಕ್ತಿಯಲ್ಲ. ಮನುಷ್ಯನಿಗೆ ಇನ್ನೂ ಅರಿತುಕೊಳ್ಳಬೇಕಾದ, ಹಾಗೂ ಇನ್ನೂ ಪ್ರಕಟವಾಗದ ಏನಾದರೂ ಇದ್ದೇ ಇರುತ್ತದೆ. ಹಾಗಾಗಿ ಮನುಷ್ಯನನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಪರಿಪೂರ್ಣತೆಯು ಒಂದು ಅವಾಸ್ತವಿಕ ಆದರ್ಶವಾಗಿದೆ. ಹಾಗಾಗಿ ಮನುಷ್ಯ ತನಗಿಂತಲೂ ಪರಿಪೂರ್ಣವಾದ ಒಂದು ನಿಗೂಢ ಶಕ್ತಿಯ ಅಸ್ತಿತ್ವವನ್ನು ನಂಬಿದ್ದಾನೆ. ಅದನ್ನು ಆತ ದೇವರು ಎಂದು ಹೆಸರಿಟ್ಟು ಕರೆಯುತ್ತಾನೆ. ದೇವರನ್ನು ಮನುಷ್ಯ “ನಿತ್ಯ ನಿರಂಜನ ಸತ್ಯ ಪರಿಪೂರ್ಣ” ಎನ್ನುತ್ತಾನೆ. ದೇವರ ಇರುವಿಕೆ ಅದೊಂದು ಕೇವಲ ನಂಬಿಕೆಯೆ ಹೊರತು ವಾಸ್ತವವಲ್ಲ. ಏಕೆಂದರೆ ದೇವರನ್ನು ನೋಡಿದವರು, ಮಾತನಾಡಿಸಿದವರು ಇದುವರೆಗೂ ಯಾರೊಬ್ಬರೂ ಇಲ್ಲ. ಅದೊಂದು ಅನುಭೂತಿಸಬಹುದಾದ ಅನನ್ಯ ನಂಬಿಕೆ. ಇದುವೆ ನಾವು ನಂಬಿರುವ ದೇವರು ಮತ್ತು ನಮ್ಮ ನಡುವಿನ ಮೂಲಭೂತವಾದ ವ್ಯತ್ಯಾಸ.

ಹಾಗಾದರೆ, ನಾವು ಪರಿಪೂರ್ಣನೆಂದು ನಂಬಿರುವ ದೇವರೆಂದರೆ ನಿಜವಾಗಿಯೂ ಆತ ಯಾರು? ಹೇಗಿದ್ದಾನೆ, ಎಲ್ಲಿದ್ದಾನೆ? ದೇವರು ಹೆಣ್ಣೊ ಅಥವಾ ಗಂಡೊ? ಹೀಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವುಗಳಿಗೆ ನಮ್ಮ ನಂಬಿಕೆಯ ಆಧಾರದಲ್ಲಿ ನಾವೇ ಉತ್ತರಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇವೆ. ಪ್ರಶ್ನೆಗಳು ಆಳವಾದಂತೆಲ್ಲ ಉತ್ತರಗಳು ಹಾರಿಕೊಳ್ಳುತ್ತ ಕೊನೆಗೆ ದೇವರ ಕುರಿತು ಪ್ರಶ್ನಿಸುವುದೇ ಅಪರಾಧ ಎನ್ನುವಲ್ಲಿಗೆ ಬಂದು ನಿಲ್ಲುತ್ತೇವೆ. ಇದುವೆ ಮನುಷ್ಯನ ಅಪೂರ್ಣತೆಯನ್ನು ಬೆತ್ತಲೆಗೊಳಿಸುವ ಘಟ್ಟ. ತನ್ನ ಗ್ರಹಿಕೆಗೆ ಮೀರಿದ ಕಲ್ಪಿತ ನಂಬಿಕೆಗಳನ್ನು ಪ್ರತಿಪಾದಿಸುವುದು ಹಾಗೂ ಅವುಗಳನ್ನು ದಾಖಲೆ ಸಮೇತ ನಿರೂಪಿಸಲು ವಿಫಲನಾದಾಗ ಚರ್ಚೆಯ ದಿಕ್ಕನ್ನು ಬದಲಾಯಿಸಿ ಪಲಾಯನ ಮಾಡುವುದು ಮನುಷ್ಯನ ಸಹಜ ಗುಣಧರ್ಮ. ದುರಂತದ ಸಂಗತಿ ಏನೆಂದರೆ ಮನುಷ್ಯ ತಾನು ನಂಬಿರುವ ಅಗಮ್ಯ ˌ ಅಗೋಚರ ಶಕ್ತಿಯುಳ್ಳ ದೇವರನ್ನು ತನ್ನಂತೆ ನಾಮ, ರೂಪ, ಗುಣಗಳ ಮೂಲಕ ಗುರುತಿಸುತ್ತಿರುವುದು ಹಾಗೂ ಆತ/ಆಕೆಗೂ ಹೆಂಡರು, ಗಂಡರು, ಮಕ್ಕಳನ್ನು ಸೃಷ್ಟಿಸಿರುವುದು. ಮನುಷ್ಯ ಮಾಡಿರುವ, ಮಾಡುತ್ತಿರುವ ಹಾಗೂ ಮಾಡಬಹುದಾದ ಯಡವಟ್ಟುಗಳು ಒಂದೆರಡಲ್ಲ. ಈ ಸೃಷ್ಠಿಯನ್ನು ನಿಯಂತ್ರಿಸುವ ಅಗಮ್ಯ ಶಕ್ತಿಯನ್ನು ದೇವರೆನ್ನುವ ಮನುಷ್ಯ ಆ ದೇವರನ್ನು ಪರಿಪೂರ್ಣ ಎಂದು ನಂಬುತ್ತಾನೆ. ತನ್ನ ನಂಬಿಕೆಯನ್ನು ಪ್ರಶ್ನಿಸುವವರ ಮೇಲೆ ನಖನಿಖಾಂತ ಉರಿದು ಬೀಳುತ್ತಾನೆ. ದೇವರ ಕುರಿತು ಮನುಷ್ಯ ಸೃಷ್ಠಿಸಿಕೊಂಡ ಕಲ್ಪನೆಗಳಿಗೆ ಆತನ ಓತಪ್ರೋತ ಸಮರ್ಥನೆಗಳೂ ಇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪರಿಪೂರ್ಣತೆ ಎನ್ನುವುದು ಲೌಕಿಕ ಬದುಕಿನಲ್ಲಿ ಒಂದು ಸಾಪೇಕ್ಷ ಸಿದ್ಧಾಂತವೇ ಹೊರತು ಅದು ಪೂರ್ಣತೆಯಲ್ಲ. ಆದರೆ ಕಣ್ಣಿಗೆ ಕಾಣದ ವಸ್ತುವಿನಲ್ಲಿ ಪರಿಪೂರ್ಣತೆ ಹುಡುಕುವುದು ಅತ್ಯಂತ ಮೂರ್ಖತನ. ಕಣ್ಣಿಗೆ ಕಾಣದ ದೇವರನ್ನು ಪರಿಪೂರ್ಣ ಎನ್ನುವ ಮನುಷ್ಯ ತನ್ನಂತೆ ಆ ದೇವರನ್ನು ಲೌಕಿಕದ ಜಂಜಡದಲ್ಲಿಟ್ಟು ನೋಡುವುದು ಮನುಷ್ಯನ ಅರ್ಥಹೀನವಾದ ನಡೆ. ಹಾಗೆ ದೇವರ ಅವತಾರ ಎಂದು ಬಿಂಬಿಸಿಕೊಂಡು ಬರಲಾಗಿರುವ ಪುರಾಣದ ಕಲ್ಪಿತ ಪಾತ್ರಗಳಾದ ರಾಮ, ಕೃಷ್ಣ, ಪರಶುರಾಮ ಮುಂತಾದವರ ಜೀವನ, ಬದುಕು ಅತ್ಯಂತ ಲೌಕಿಕವಾದದ್ದು. ಇವರೆಲ್ಲರೂ ನಮ್ಮ ನಿಮ್ಮಂತೆ ಈ ಬದುಕಿನ ಬವಣೆಗಳನ್ನು ಅನುಭವಿಸಿದ ಸಾಮಾನ್ಯರು. ಆದರೂ ಅವರನ್ನು ನಾವು ಅಸಾಮಾನ್ಯರೆಂತಲು,ಈ ಭೂಮಿಯ ಮೇಲೆ ಧರ್ಮ ರಕ್ಷಿಸಲು ಅವತಾರ ತಾಳಿದ ಸಾಕ್ಷಾತ್‌ ಭಗವಂತರೆಂತಲೂ ಪರಿಭಾವಿಸಿದ್ದೇವೆ. ಮನುಷ್ಯನ ಈ ನಡೆಯು ಅತ್ಯಂತ ಅರ್ಥಹೀನ ಹಾಗೂ ಅತಾರ್ಕಿಕವಾದದ್ದು. ಇದನ್ನು ವಚನಕಾರ ಶರಣರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ, ವಿಡಂಬಿಸಿದ್ದಾರೆ. ಟೀಕಿಸಿದ್ದಾರೆ ಹಾಗೂ ವಿಮರ್ಶಿಸಿದ್ದಾರೆ. ಅಂದಿನ ವೈದಿಕ ನಿಯಂತ್ರಿತ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಶರಣರು ಇಂತಹ ಅತಾರ್ಕಿಕ ಸಿದ್ಧಾಂತಗಳನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದು ಸಾಮಾನ್ಯ ಸಂಗತಿಯಲ್ಲ. ಶರಣ ಸೊಡ್ಡಳ ಬಾಚರಸರು ತಮ್ಮ ಒಂದು ವಚನದಲ್ಲಿ ವಿಷ್ಣು ಪರಿಪೂರ್ಣನೆಂಬ ವೈದಿಕರ ವಾದವನ್ನು ತರ್ಕಬದ್ಧವಾಗಿ ಪ್ರಶ್ನಿಸುತ್ತಾರೆ. ಸೊಡ್ಡಳ ಬಾಚರಸರ ಈ ಮಹತ್ವದ ವಚನವು ಇಡೀ ವೈದಿಕರ ನಂಬಿಕೆಯ ಬುಡವನ್ನೆ ಅಲುಗಾಡಿಸುತ್ತದೆ:

“ವಿಷ್ಣು ಪರಿಪೂರ್ಣನಾದಡೆ
ಸೀತೆ ಕೆಟ್ಟಳೆಂದು ಅರಸಲೇಕೊ?
ವಿಷ್ಣು ಪರಿಪೂರ್ಣನಾದಡೆ
ವಟಪತ್ರದ ಮೇಲೆ ಕುಳಿತು
ಜಲಪ್ರಳಯದಲ್ಲಿ ಅಡಗಿದನೆಂಬ ಮಾತೇಕೊ?
ವಿಷ್ಣುವಿನ ಬಾಣ ಸಮುದ್ರಕಡ್ಡಕಟ್ಟಿಯಾದಡೆ
ಕಪಿ ಕೋಡಗವ ಹಿಡಿತಂದುˌ
ಬೆಟ್ಟಗಟ್ಟಂಗಳ ಹಿಡಿತಂದು
ಸೇತುವೆಯ ಕಟ್ಟಲೇಕೊ?
ವಿಷ್ಣು ಪರಿಪೂರ್ಣನಾದಡೆ
ರಾವಣನ ವಧೆಗಂಜಿ ಧರೆಯ
ಮೇಲೆ ಲಿಂಗಪ್ರತಿಷ್ಠೆಗಳ
ಮಾಡಿ ಪೂಜಿಸಲೇಕೊ?
ಇಂತು ಬ್ರಹ್ಮಾಂಡದೊಳಗೆ
ಸಿಕ್ಕಿ ಸತ್ತು ಹುಟ್ಟುತ್ತಿಹ ದೇವತೆಗಳು
ಒಬ್ಬರೂ ಪರಿಪೂರ್ಣರಲ್ಲ
ಮಹಾದಾನಿ ಸೊಡ್ಡಳನೊಬ್ಬನೆ ಪರಿಪೂರ್ಣನು.”

ವಿಷ್ಣು

ಭಾವಾರ್ಥ

ಈ ಸೃಷ್ಠಿಯ ಸ್ಥಿತಿಕರ್ತನಾದ ವಿಷ್ಣು ಒಬ್ಬನೇ ಪರಿಪೂರ್ಣ ದೇವರೆಂಬ ಅಸತ್ಯವನ್ನು ಅಂದು ವೈದಿಕರು ಜನಮನದಲ್ಲಿ ಬಿತ್ತಿದ್ದರು. ವಿಷ್ಣು ಅನೇಕ ಅವತಾರಗಳು ಎತ್ತಿದನೆಂದು ಕಾಲ್ಪನಿಕ ಕಥೆಗಳನ್ನು ಕಟ್ಟಿದ್ದರು. ವಿಷ್ಣುವನ್ನು ಮಹಾ ಪರಿಪೂರ್ಣನೆಂತಲು, ಸರ್ವಶಕ್ತನೆಂತಲೂ ಕರೆಯಲಾಗುತ್ತಿತ್ತು. ಅಂತಹ ವಿಷ್ಣು ತ್ರೇತಾಯುಗದಲ್ಲಿ ರಾಮನ ಅವತಾರದಲ್ಲಿ ಹುಟ್ಟುತ್ತಾನೆ. ಮಹಾ ಶಿವಭಕ್ತ ರಾವಣನ ಸಹೋದರಿ ಶೂರ್ಪನಖಿಯೊಡನೆ ಅನುಚಿತವಾಗಿ ನಡೆದುಕೊಂಡ ಸಹೋದರ ಲಕ್ಷ್ಮಣನ ತಪ್ಪಿಗಾಗಿ ರಾವಣ ರಾಮನ ಹೆಂಡತಿ ಸೀತೆಯನ್ನು ಅಪಹರಿಸಿ ಲಂಕೆಗೆ ಕೊಂಡೊಯ್ಯುತ್ತಾನೆ. ಆಗ ಅಮಾಯಕ ಸೀತೆ ಮರಳಿ ಬಂದ ಮೇಲೆ ಆಕೆ ಕೆಟ್ಟವಳೆಂದು ಅನುಮಾನಿಸಿ ರಾಮ ಆಕೆಯನ್ನು ಅಗ್ನಿ ಪರೀಕ್ಷೆಗೆ ದೂಡುತ್ತಾನೆ. ಸೊಡ್ಡಳ ಬಾಚರಸ ಶರಣ ವಿಷ್ಣುವಿನ ಈ ಸಂಶಯದ ನಡೆಯನ್ನು ಮಾರ್ಮಿಕವಾಗಿ ಪ್ರಶ್ನಿಸಿದ್ದಾನೆ. ಆತ ಪರಿಪೂರ್ಣನಾದರೆ ಸಾಮಾನ್ಯ ಮನುಷ್ಯರಂತೆ ಸೀತೆಯ ಶೀಲವನ್ನು ಶಂಕಿಸಿದನೇಕೆ ಎನ್ನುವುದು ಇಲ್ಲಿನ ಮುಖ್ಯ ಪ್ರಶ್ನೆ. ವಿಷ್ಣು ದ್ವಾಪರಯುಗದಲ್ಲಿ ಕೃಷ್ಣನ ಅವತಾರ ತಾಳುತ್ತಾನೆ. ತನ್ನ ಕುಟಿಲ ಹುನ್ನಾರಗಳ ಮೂಲಕ ವಿರೋಧಿಗಳನ್ನು ಮಣಿಸುತ್ತಿದ್ದ ಕೃಷ್ಣನು ವೈರಿಗಳಿಂದ ತಪ್ಪಿಸಿಕೊಳ್ಳಲು ಆಲದ ಮರದ ಎಲೆಯ ಮೇಲೆ ಮಲಗಿಕೊಂಡು ಜಲಪ್ರಳಯದಿಂದ ತಪ್ಪಿಸಿಕೊಳ್ಳುತ್ತಾನೆ ಎನ್ನುವುದು ಒಂದು ಕಾಲ್ಪನಿಕ ಕಥೆ. ಅಂದರೆ ಪರಿಪೂರ್ಣನಾಗಿರುವ ವಿಷ್ಣುವು ಈ ರೀತಿ ಅಡಗಿ ಕುಳಿತಿದ್ದೇಕೆ ಎಂದು ಶರಣ ಸೊಡ್ಡಳರ ಪ್ರಶ್ನೆ.

ತ್ರೇತಾಯುಗದಲ್ಲಿ ರಾಮನಾಗಿ ಅವತರಿಸಿದ್ದ ವಿಷ್ಣು ತನ್ನ ಮಡದಿ ಸೀತೆ ರಾವಣನಿಂದ ಅಪಹರಣಕ್ಕೊಳಗಾದಾಗ ಲಂಕೆಗೆ ಹೋಗಲು ಕೋತಿ, ಕೋಡಗಗಳನ್ನು ಕಟ್ಟಿಕೊಂಡು ಬೆಟ್ಟ ಗುಡ್ಡಗಳಿಂದ ಕಲ್ಲುಗಳನ್ನು ತಂದು ಸಮುದ್ರದೊಳಗೆ ಸೇತುವೆ ಕಟ್ಟುತ್ತಾನೆನ್ನುವುದು ಒಂದು ಕಾಲ್ಪನಿಕ ಪ್ರಸಂಗ. ರಾಮ ತನ್ನ ಗುರಿತಪ್ಪದ ಬಾಣದಿಂದ ಜಗತ್ತನ್ನೇ ಮುಗಿಸುವ ಶಕ್ತಿ ಹೊಂದಿದ್ದಾನೆಂದು ವಿಪ್ರರು ವರ್ಣಿಸುತ್ತಾರೆ. ಆ ಬಾಣದಿಂದ ರಾಮನು ಸಮುದ್ರಕ್ಕೆ ಅಡ್ಡಗಟ್ಟಿ ಲಂಕೆಗೆ ಹೋಗಬಹುದಾಗಿತ್ತಲ್ಲ ಎಂದು ಶರಣರು ಅರ್ಥಪೂರ್ಣವಾಗಿ ರಾಮನನ್ನು ಅನುಮಾನಿಸುತ್ತಾರೆ. ಕೊನೆಗೆ ವಾನರ ರಾಜ ವಾಲಿಯ ಸಹೋದರ ಸುಗ್ರೀವ ಹಾಗೂ ಹನುಮಂತನ ಸಹಾಯದಿಂದ ಮತ್ತು ರಾವಣನ ಸಹೋದರ ವಿಭೀಷಣನ ಮೂಲಕ ಲಂಕೆಯ ಗುಪ್ತ ವಿಷಯಗಳನ್ನು ತಿಳಿದುಕೊಂಡು ರಾವಣನನ್ನು ರಾಮ ಹತ್ಯೆಗೈಯುತ್ತಾನೆ. ಆಗ ಪರಮ ಶಿವಭಕ್ತನಾದ ದ್ರಾವಿಡ ಚಕ್ರವರ್ತಿ ರಾಮಣನ ಹತ್ಯೆಯ ಪಾಪದಿಂದ ತಪ್ಪಿಸಿಕೊಳ್ಳಲು ರಾಮೇಶ್ವರದ ಸಮುದ್ರ ತೀರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ರಾಮ ಪಾಪ ಪರಿಹಾರಕ್ಕಾಗಿ ಆದಿಯೋಗಿ ಶಿವನ ಮೊರೆಹೋಗುತ್ತಾನೆ. ಅಂದರೆˌ ವಿಷ್ಣುವು ಪರಿಪೂರ್ಣನಾಗಿದ್ದರೆ ಹೀಗೆ ಮಾಡಲು ಸಾಧ್ಯವೇ ಎನ್ನುವುದು ಶರಣ ಸೊಡ್ಡಳರ ಪ್ರಶ್ನೆ. ಸಾಮಾನ್ಯ ಮನುಷ್ಯರಂತೆ ಈ ಭವದಲ್ಲಿ ಅನೇಕ ಯೋನಿಗಳಲ್ಲಿ ಸುತ್ತಿ ಸುತ್ತಿ ಹುಟ್ಟಿ ಸಾಯುವ ರಾಮ-ಕೃಷ್ಣ ಮುಂತಾದ ದೇವತೆಗಳಾರೂ ಪರಿಪೂರ್ಣರಲ್ಲ. ಅಯೋನಿಜ, ಅಖಂಡ ಪರಿಪೂರ್ಣ ಸೊಡ್ಡಳದೇವನೊಬ್ಬನೇ ಪರಿಪೂರ್ಣನು ಎಂದು ಸೊಡ್ಡಳ ಬಾಚರಸ ಶರಣರು ಘಂಟಾಘೋಷವಾಗಿ ಹೇಳುತ್ತಾರೆ.

soddala bacharasa

ಟಿಪ್ಪಣಿ

ಪರಿಪೂರ್ಣತೆಯ ಸರಿಯಾದ ಅರ್ಥವೇನುˌ ಅದು ಯಾರಿಗೆ ಅನ್ವಯಿಸುತ್ತದೆˌ ಮನುಷ್ಯ ಪರಿಪೂರ್ಣ ಹೌದೊ ಅಲ್ಲವೊˌ ದೇವರು ಪರಿಪೂರ್ಣನೇˌ ಅದರ ವ್ಯಾಪ್ತಿ ಎಷ್ಟು? ಮುಂತಾದ ಈ ಎಲ್ಲಾ ಪ್ರಶ್ನೆಗಳನ್ನು ಬದಿಗಿಟ್ಟು ಪರಿಪೂರ್ಣತೆ ಅನ್ನುವುದು ಮನುಷ್ಯನ ಬದುಕಿಗೆ ಎಷ್ಟು ಪ್ರಸ್ತುತ ಎನ್ನುವ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕಿದೆ. ಇನ್ನು ಕಲ್ಪಿತ ದೇವರನ್ನು ಪರಿಪೂರ್ಣ ಎನ್ನುವುದು ಒಂದು ಅರ್ಥದಲ್ಲಿ ಒಪ್ಪಬಹುದು. ಅದು ದೇವರು ನಿರ್ಗುಣ, ನಿರಾಕಾರ, ಅಗಮ್ಯ, ಅಗೋಚರ ಚೈತನ್ಯ ಶಕ್ತಿ ಎನ್ನುವುದನ್ನು ಒಪ್ಪಿಕೊಂಡಾಗ ಮಾತ್ರ. ದೇವರಿಗೆ ಮನುಷ್ಯರಂತೆ ಗುಣ, ರೂಪ, ಆಕಾರˌ ಸಂಸಾರ ಮುಂತಾದ ಲೌಕಿಕ ಚೌಕಟ್ಟನ್ನು ಹಾಕಿ ಆತ ಪರಿಪೂರ್ಣ ಎಂದರೆ ನಗೆಗೇಡಲ್ಲದೆ ಮತ್ತೇನೂ ಅಲ್ಲ. ರಾಮˌ ಕೃಷ್ಣ ಮುಂತಾದ ಕಲ್ಪಿತ ಪುರಾಣದ ಪಾತ್ರಗಳನ್ನು ಸೃಷ್ಠಿಸಿದ ಮನುಷ್ಯ ಅವುಗಳನ್ನು ಒಂದುಕಡೆ ದೇವರ ಅವತಾರವೆಂತಲು, ಇನ್ನೊಂದು ಕಡೆ ಅವರೇ ಈ ಸೃಷ್ಠಿಯ ಸ್ಥಿತಿಕರ್ತ, ನಿತ್ಯ ನಿರಂಜನ, ಸತ್ಯ ಪರಿಪೂರ್ಣರೆಂತಲೂ ಬಿಂಬಿಸಿರುವುದು ಸಂಪೂರ್ಣ ಹಾಸಾಸ್ಪದವಾದ ಸಂಗತಿ. ಹಾಗಾಗಿ ಹನ್ನೆರಡನೇ ಶತಮಾನದಲ್ಲಿ ಶರಣರು ವೈಚಾರಿಕ ಆಂದೋಲನವನ್ನು ಆರಂಭಿಸುವ ಮೂಲಕ ವೈದಿಕ ಸಿದ್ಧಾಂತಗಳು ಹರಡಿರುವ ಅಸಂಖ್ಯಾತ ಮಿತ್ಯಗಳನ್ನು ತಮ್ಮ ವಚನಗಳ ಮುಖೇನ ಭಂಜಿಸಿದ್ದಾರೆ. ಮೇಲಿನ ಸೊಡ್ಡಳ ಬಾಚರಸ ಶರಣರ ವಚನವು ಅತ್ಯಂತ ಸಮರ್ಥವಾಗಿ ರಾಮ ಮತ್ತು ಕೃಷ್ಣ ಎನ್ನುವ ಎರಡು ಕಾಲ್ಪನಿಕ ಪುರಾಣದ ವ್ಯಕ್ತಿಗಳ ಸುತ್ತ ಸೃಷ್ಠಿಸಲಾದ ಕತೆಗಳ ಟೊಳ್ಳುತನವನ್ನು ಬಯಲುಗೊಳಿಸುತ್ತದೆ.

ಇದನ್ನೂ ಓದಿ ವಚನದ ಅಪವ್ಯಾಖ್ಯಾನ ಮಾಡುತ್ತಿರುವ ವಿಕೃತ ಮನಸ್ಸಿನ ವೀರಶೈವ ಮತ್ತು ವೈದಿಕ ಪಂಡಿತರು

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...