ಸುತ್ತಾಟ | ಹೂ ಕಣಿವೆಗಳ ನಡುವೆ ಇರುವುದೆಲ್ಲವ ಬಿಟ್ಟು…

Date:

ಆಗಸ್ಟ್ ತಿಂಗಳ ಒಂದು ದಿನ ನಾವು ಒಂದಿಷ್ಟು ಸ್ನೇಹಿತರು ವಿಶ್ವ ಪ್ರಸಿದ್ಧ ಉತ್ತರಾಖಂಡದ ಹೂವುಗಳ ಕಣಿವೆಯತ್ತ ಪ್ರಯಾಣಿಸಿದೆವು. ದೆಹಲಿಯಿಂದ ಬಹು ತ್ರಾಸದ ಪ್ರಯಾಣದ ಬಳಿಕ, ನಾವು ಉತ್ತರಾಖಂಡದ ಜೋಷಿಮಠ ತಲುಪಿದೆವು. ಜೋಷಿಮಠವನ್ನು ಪ್ರವೇಶಿಸುವಾಗಲೇ ಇಲ್ಲಿಯ ವೈಭವ ಸ್ಪಷ್ಟವಾಗಿ ಕಣ್ಣಿಗೆ ಬೀಳುತಿತ್ತು. ಸ್ಥಳೀಯರ ಆತಿಥ್ಯ, ಅವರ ನಗುವಿನ ಸರಳತೆ, ಬಿಸಿಯ ಚಹಾ, ಹಿಮದಿಂದ ತಂಪಾದ ಸಂಜೆಗಳಲ್ಲಿ ನೀಡಿದ ಉಡುಪುಗಳು – ಇವು ಹೃದಯವನ್ನು ಮುಟ್ಟುವಂತಿತ್ತು.

ಪ್ರಕೃತಿಯಲ್ಲಿ ಸೌಂದರ್ಯವನ್ನು ಅರಸಿಕೊಂಡು ಹೋಗುವುದು ಮನುಷ್ಯ ಗುಣ. ಆಹಾರದ ಹುಡುಕಾಟದ ಜೊತೆ ಜೊತೆಗೆ, ಮನುಷ್ಯ ಸಂಚಾರಿ ಜೀವಿಯಾಗಲು ಇದು ಕೂಡ ಒಂದು ಕಾರಣವಿರಬಹುದು. ಪ್ರಕೃತಿಯ ಸೌಂದರ್ಯವನ್ನು ಕಾಣುವುದು ಕೇವಲ ಕಣ್ಣಿನ ಹಸಿವು ತೀರಿಸಿಕೊಳ್ಳುವುದಕ್ಕಲ್ಲ; ಅದು ಮನಸ್ಸನ್ನು ಮುದಗೊಳಿಸುವ ಯಾತ್ರೆ ಕೂಡ. ಸದಾ ದೂರದ ಬೆಟ್ಟಗಳನ್ನು, ಅಜ್ಞಾತ ಹಾದಿಗಳನ್ನು, ಮೌನದ ಕಣಿವೆಗಳನ್ನು ಅರಸುವ ಹಂಬಲ ಮನುಷ್ಯನಿಗೆ. ಆ ಹಂಬಲವೇ ಅವನನ್ನು ತನ್ನ ನೆರೆಹೊರೆಯಿಂದ, ತನ್ನ ಹಳ್ಳಿಯಿಂದ, ತನ್ನ ಊರಿನಿಂದ, ತನ್ನ ಪಟ್ಟಣದಿಂದ, ತನ್ನ ದೇಶದಿಂದ, ಹಾಗೆಯೇ ತನ್ನ ಭೂಮಂಡಲದಿಂದ ಕೂಡ ಹೊರ ವಿಶ್ವ ವಿಸ್ಮಯದತ್ತ, ಅವನನ್ನು ಹೊಸ ಲೋಕದತ್ತ ಕರೆದೊಯ್ಯುತ್ತಲಿದೆ. ಪ್ರಕೃತಿ ಎಷ್ಟು ಬೃಹತ್, ಎಷ್ಟು ವೈಭವಶಾಲಿ ಎಂಬುದನ್ನು ಅರಿಯಲು ಕೆಲವೊಮ್ಮೆ ಮನುಷ್ಯನು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋಗಲೂ ಹಿಂಜರಿಯುವುದಿಲ್ಲ. ಜೀವನ ಇದುವೇ ಅಲ್ಲವೇ? ಆದರೆ ಮನುಷ್ಯನ ವಿಪರೀತ ಆಸೆಯಿಂದ ಈ ಪ್ರಕೃತಿಗೆ ಧಕ್ಕೆಯಾದರೆ? ಪ್ರಕೃತಿ ಎಲ್ಲರ ಅಗತ್ಯಗಳನ್ನು ಪೂರೈಸುತ್ತದೆ, ಆದರೆ ಎಲ್ಲರ ದುರಾಸೆಗಳನ್ನಲ್ಲ ಎನ್ನುವುದು ಎಷ್ಟು ಸತ್ಯವಲ್ಲವೇ?

ಚಾರಣಿಗನ ತನು ಮನ -ಜೀವನವನ್ನು ಮುದಗೊಳಿಸಬಲ್ಲ ಅಂತಹ ಒಂದು ಪ್ರಾಕೃತಿಕ ಆಕರ್ಷಣೆ – “ವ್ಯಾಲಿ ಆಫ್ ಫ್ಲವರ್ಸ್” (ಹೂವುಗಳ ಕಣಿವೆ). ಹಿಮಾಲಯದ ಎತ್ತರದ ಹೊಳಪು, ಬಂಡೆಗಳ ನಡುವೆ ಮಿಂಚುವ ಹಿಮ, ಹರಿದುಹೋಗುವ ಹಳ್ಳಗಳು, ದೂರ ದೂರಕ್ಕೂ ಹೂವಿನ ಹಾಸಿಗೆಯಂತೆ ಕಾಣುವ ಬಣ್ಣಬಣ್ಣದ ಕಣಿವೆ- ಇವೆಲ್ಲವು ಕಣ್ಣ ಮುಂದೆ ಮೂಡುವಾಗ, ‘ಮನುಷ್ಯನು ಪ್ರಕೃತಿಯ ಒಂದು ಅಂಶ ಮಾತ್ರ’ ಎನ್ನುವ ಮಾತನ್ನು ಮತ್ತೆ ಮತ್ತೆ ಸ್ಪಷ್ಟವಾಗಿಸುವ ಸುಂದರ ಮನೋಹರ ತಾಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಗಸ್ಟ್ ತಿಂಗಳ ಒಂದು ದಿನ ನಾವು ಒಂದಿಷ್ಟು ಸ್ನೇಹಿತರು ವಿಶ್ವ ಪ್ರಸಿದ್ಧ ಉತ್ತರಾಖಂಡದ ಹೂವುಗಳ ಕಣಿವೆಯತ್ತ ಪ್ರಯಾಣಿಸಿದೆವು. ದೆಹಲಿಯಿಂದ ಬಹು ತ್ರಾಸದ ಪ್ರಯಾಣದ ಬಳಿಕ, ನಾವು ಉತ್ತರಾಖಂಡದ ಜೋಷಿಮಠ ತಲುಪಿದೆವು. ಜೋಷಿಮಠವನ್ನು ಪ್ರವೇಶಿಸುವಾಗಲೇ ಇಲ್ಲಿಯ ವೈಭವ ಸ್ಪಷ್ಟವಾಗಿ ಕಣ್ಣಿಗೆ ಬೀಳುತಿತ್ತು. ಸ್ಥಳೀಯರ ಆತಿಥ್ಯ, ಅವರ ನಗುವಿನ ಸರಳತೆ, ಬಿಸಿಯ ಚಹಾ, ಹಿಮದಿಂದ ತಂಪಾದ ಸಂಜೆಗಳಲ್ಲಿ ನೀಡಿದ ಉಡುಪುಗಳು – ಇವು ಹೃದಯವನ್ನು ಮುಟ್ಟುವಂತಿತ್ತು. ಅಲ್ಲಿ ಒಂದು ರಾತ್ರಿ ತಂಗಿದ ಬಳಿಕ, ನಾವು ಬೆಳಿಗ್ಗೆ ಸಜ್ಜಾಗಿ ವ್ಯಾಲಿ ಆಫ್ ಫ್ಲವರ್ಸ್ ಕಡೆಗೆ ಕಾಲಿಟ್ಟೆವು.

WhatsApp Image 2025 09 06 at 4.45.39 AM

ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿರುವ ‘ವ್ಯಾಲಿ ಆಫ್ ಫ್ಲವರ್ಸ್’ ಎಂಬ ಸುಂದರವಾದ ಸ್ಥಳವು ಅಕ್ಟೋಬರ್ 2005 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯೆಂದು ಘೋಷಿಸಲ್ಪಟ್ಟಿದೆ. ಪ್ರಪಂಚದಾದ್ಯಂತ ತನ್ನ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ಈ ಕಣಿವೆ ಸರಿ ಸಾಮಾನ್ಯವಾಗಿ ಜೂನ್ ತಿಂಗಳಿಂದ ಆರಂಭವಾಗಿ ಅಕ್ಟೋಬರ್‌’ ತಿಂಗಳ ತನಕ ಸಾರ್ವಜನಿಕ ಭೇಟಿಗೆ ತೆರೆದಿರುತ್ತದೆ. ಹೂವುಗಳ ಕಣಿವೆ ಭೇಟಿ ಮಾಡಲು, ಇಲ್ಲಿ ಚಾರಣ ಮಾಡಲು ಅತ್ಯುತ್ತಮ ಸಮಯ – ಜುಲೈ ನಿಂದ ಸೆಪ್ಟೆಂಬರ್ ತನಕ. ಈ ಸಮಯಾವದಿಯಲ್ಲಿ ಕಣಿವೆ ಸುಂದರ ಹೂವುಗಳಿಂದ ತುಂಬಿ ಇಲ್ಲಿನ ಇಡೀ ಪ್ರಕೃತಿಯೇ ವರ್ಣ ರಂಜಿತವಾಗಿರುತ್ತದೆ. ಸರಿ ಸುಮಾರು 500 ಕ್ಕೂ ಹೆಚ್ಚು ಜಾತಿಯ ಬೇರೆ ಬೇರೆ ಬಣ್ಣದ, ಬೇರೆ ಬೇರೆ ತೆರನಾದ ಹೂವುಗಳನ್ನು ನೈಸರ್ಗಿಕವಾಗಿ ಅರಳುವ ಅಪೂರ್ವ ಕಣಿವೆಯಿದು. ‘ಹೂವುಗಳ ಕಣಿವೆ’ಯನ್ನು 1931 ರಲ್ಲಿ ಬ್ರಿಟಿಷ್ ಪರ್ವತಾರೋಹಿ ಫ್ರಾಂಕ್ ಸ್ಮಿತ್ ಅವರು ಕಾಮೆಟ್ ಪರ್ವತಾರೋಹಣದ ನಂತರ ಕಂಡುಹಿಡಿದರು. ಸಮುದ್ರ ಮಟ್ಟದಿಂದ 3352 ಮೀಟರ್ ಎತ್ತರದಲ್ಲಿದ್ದು, ಸುಮಾರು 87.50 ಕಿಮೀ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕಣಿವೆಯು – 2 ಕಿಲೋಮೀಟರ್ ಅಗಲ ಮತ್ತು 8 ಕಿಲೋಮೀಟರ್ ಉದ್ದವಿದೆ. ಪ್ರತೀ ವರ್ಷವೂ ಹೂವುಗಳು ಅರಳುವ ಸಮಯದಲ್ಲಿ ಪ್ರಪಂಚದೆಲ್ಲೆಡೆಯಿಂದ ಸಾವಿರಾರು ಜನರ ಕಣ್ಮನ ಸೆಳೆಯುತ್ತದೆ.

ಸಣ್ಣನೆಯ ಮಳೆ, ಕಿರು ಜಲಪಾತಗಳು, ಅಲ್ಲಿ ಇಲ್ಲಿ ತೋರುವ ಆಕರ್ಷಕ ತೊರೆಗಳು ಮತ್ತು ಸಣ್ಣ ಪುಟ್ಟ ಕಾಡುಗಳು ಹೀಗೆ ಪ್ರಕೃತಿ ಸೌಂದರ್ಯ ಸವಿಯುವವರಿಗೆ ಇದು ಸೂಕ್ತ ಸ್ಥಳವಾಗಿದೆ. ಹಾಗೆಯೇ ಜೋಷಿಮಠದಿಂದ ನಮ್ಮ ಪ್ರಯಾಣವನ್ನು ಆರಂಭಿಸಿ, ನಂತರ ಗೋವಿಂದ ಘಾಟ್ ತಲುಪಬೇಕು. ಆ ರಾತ್ರಿ ಅಲ್ಲೇ ತಂಗಿ, ಮರುದಿನ ನಮ್ಮ ಪಯಣವನ್ನು ಮುಂದುವರಿಸುವುದು ನಮ್ಮ ಪ್ಲಾನ್ ಆಗಿತ್ತು. ಮರುದಿನ ಗೋವಿಂದ ಘಾಟ್ ನಿಂದ ಪುಲ್ನಾ ಗ್ರಾಮಕ್ಕೆ ಚಿಕ್ಕ ಡ್ರೈವ್‌ ಮಾಡಿಕೊಂಡು ತಡ ನಂತರ – ವ್ಯಾಲಿ ಆಫ್ ಫ್ಲವರ್ಸ್‌ ಚಾರಣದ ಆರಂಭ ಬಿಂದು – ಘಂಗಾರಿಯ ಸೇರಿದೆವು. ಅಲ್ಲಿಂದ ಘಂಗಾರಿಯವರೆಗೆ ಸುಮಾರು ಎಂಟು ಕಿಲೋಮೀಟರ್‌ನ ಹಾದಿ ಸುಂದರವಾದ ಪರ್ವತಗಿರಿಗಳ ಮಧ್ಯೆ ಹರಿಯುತ್ತದೆ. ಮೊದಲ ನಾಲ್ಕು ಕಿಲೋಮೀಟರ್‌ ಹಾದಿ ಸರಳವಾಗಿ ಹೋಗುತ್ತಾ, ಹಾದಿಯುದ್ದಕ್ಕೂ ಚಹಾ ಅಂಗಡಿಗಳು, ಸಣ್ಣ ತಿನಿಸಿನ ಅಂಗಡಿಗಳು, ತಾಜಾ ಗಾಳಿ, ನದಿ ಅಲಕನಂದೆಯ ಹರಿವು – ಇವೆಲ್ಲವೂ ಕೂಡ ಸೇರಿ ಆ ನಡಿಗೆಯ ಸೊಗಸನ್ನು ಹೆಚ್ಚಿಸುತ್ತವೆ ಹಾಗೆಯೇ ಸಿಖ್ ಧರ್ಮದ ಅತೀ ಶ್ರೇಷ್ಠ, ಅತೀ ಪವಿತ್ರವಾದ ಹೇಮಕುಂಡ ಶಿಖರ ತಲುಪಲು ಕೂಡ ಇದುವೇ ಹಾದಿಯಾಗಿರುವುದರಿಂದ, ನೂರಾರು ಯಾತ್ರಿಕರನ್ನು ಕೂಡ ದಾರಿಯುದ್ದಕ್ಕೂ ನೋಡಬಹುದು. ಈ ಚಾರಣದ ಕೊನೆಯ ನಾಲ್ಕು ಕಿಲೋಮೀಟರ್ ಮಾತ್ರ ಸ್ವಲ್ಪ ದುಸ್ತರವಾದ ಏರುಗಾಡು. ಹೈ ಆಲ್ಟಿಟ್ಯುಡ್ ಟ್ರೆಕ್ ಆಗಿದ್ದರಿಂದ ಉಸಿರಾಟವೂ ಸ್ವಲ್ಪ ಕಠಿಣವಾಗುತ್ತಿತ್ತು. ಪಹಾಡುಗಳ ನಡುವೆ ಸಾಗಿದ ಈ ಪಯಣ ಆರಂಭದಿಂದಲೂ ಹೃದಯದ ಬಡಿತ ಹೆಚ್ಚಿಸುತ್ತಿತ್ತು. ಆದರೆ ಹಗುರವಾದ ಗಾಳಿ, ಹಿಮದಿಂದ ಹೊದಿದ ಶಿಖರಗಳು ಮತ್ತು ಪರ್ವತಗಳ ಮಧ್ಯೆ ಹರಿದ ಹೊಳೆಗಳ ಧ್ವನಿ ಈ ಎಲ್ಲ ಕಷ್ಟಗಳನ್ನು ಮರೆಮಾಡುತ್ತಿತ್ತು. ಆಗಾಗ್ಗೆ ಬಂದ ಮಳೆಹನಿಗಳು ದಾರಿಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದವು. ಇವೆಲ್ಲದರ ಮಧ್ಯೆ ಮಧ್ಯೆ ಹೇಮಕುಂದ ಶಿಖರಕ್ಕೆ ಸಾಗುವ ಯಾತ್ರಿಕರು ಸಾಗುವ ಕುದುರೆ-ಗಾಡಿಗಳ ಆಮಿಷಕ್ಕೆ ಮನಸ್ಸು ಒಂದಿಷ್ಟು ಕದಲಿದರೂ, ಕಾಲ್ನಡಿಗೆಯಲ್ಲಿ ಹಾದಿ ಹಿಡಿದಾಗಲೇ ಪರ್ವತದ ನಿಜವಾದ ಸೌಂದರ್ಯ ಸವಿಯಲು ಸಾಧ್ಯ, ಎಂದು ಮನಸ್ಸನ್ನು ಮತ್ತಷ್ಟು ದೀರ್ಘ ನಡಿಗೆಗೆ ಓಲೈಸಲಾಯಿತು. ಮೊದಲ ದಿನದ ಟ್ರೆಕ್‌ನಲ್ಲಿ ನಾವು ಘಂಗರಿಯಾ ತಲುಪಿದ್ದೆವು. ಅಲ್ಲಿನ ತಂಪಾದ ವಾತಾವರಣ, ಮಂಜು ಮುಸುಕಿದ ಗಿರಿಗಳ ಮಧ್ಯೆ ತಂಗಿರುವ ಚಿಕ್ಕ ಹಳ್ಳಿ- ಇದು ಯಾವುದೋ ಪರಮಶುದ್ಧ ಸ್ಥಳದಂತೆ ನನಗೆ ಅನುಭವವಾಯ್ತು.

WhatsApp Image 2025 09 06 at 4.44.53 AM

ಘಂಗಾರಿಯ – ಚಾರಣಿಗರು, ಹೇಮಕುಂಡ ಯಾತ್ರಿಕರು, ಪ್ರವಾಸಿಗರು ಹೀಗೆ ಜನರಿಂದ ತುಂಬಿದ್ದರೂ, ಅಲ್ಲಿನ ಸ್ಥಳೀಯರ ಔದಾರ್ಯಪೂರ್ಣ ಆತಿಥ್ಯ ಹೃದಯವನ್ನು ಮುಟ್ಟುವಂತದ್ದು. ಅಲ್ಲಿ ಒಂದು ರಾತ್ರಿ ತಂಗಿದ ನಂತರ ಮರುದಿನ ಬೆಳಗ್ಗೆ ಘಂಗಾರಿಯಾದಿಂದ ವ್ಯಾಲಿ ಆಫ್ ಫ್ಲವರ್ಸ್‌ಗೆ ಹೊರಟೆವು. 3,500 ಮೀಟರ್ ಎತ್ತರದ ಈ ಕಣಿವೆಯು ನಿಜಕ್ಕೂ ಪ್ರಕೃತಿಯ ವಿಸ್ಮಯವೇ. ಕೆಲವೊಂದು ಕಡೆ ಬಂಡೆಗಳ ನಡುವೆ ಕಿರಿದಾದ ದಾರಿಗಳು, ತಣ್ಣನೆಯ ಹಿಮನದಿಗಳ ಹತ್ತಿರದ ಸೇತುವೆಗಳು, ಕೆಲವೊಮ್ಮೆ ಜಾರಿ ಬಿದ್ದ ಬಂಡೆಗಳ ಸಮೂಹ – ಇವೆಲ್ಲವನ್ನು ದಾಟುತ್ತ ಸಾಗಬೇಕಾಯಿತು. ಆದರೆ ಪ್ರತಿಯೊಂದು ಹೆಜ್ಜೆಯೂ ನಮ್ಮನ್ನು ಇನ್ನಷ್ಟು ಸುಂದರ ದೃಶ್ಯದತ್ತ ಕರೆದೊಯ್ಯುತ್ತಿತ್ತು. ಹಾದಿಯುದ್ದಕ್ಕೂ ಹರಿಯುವ ಹಳ್ಳದ ಜಲಧಾರೆಗಳು, ಚಿತ್ತಾಕರ್ಷಕ ಹಸಿರು ಮೇವು, ಅಕಸ್ಮಾತ್ ಎದುರಾಗುವ ಕಾಡುಹೂಗಳ ಗುಚ್ಛಗಳು- ಪ್ರಯಾಣ ಒಂದಿಷ್ಟು ಕಷ್ಟಕರವೆನಿಸಿದರೂ, ನಮ್ಮ ಕಣ್ಣೆದುರು ನಿಂತಿದ್ದ ಪ್ರಕೃತಿ ನಮ್ಮೆಲ್ಲರನ್ನೂ ಮಂತ್ರಮುಗ್ಧಕರವಾಗಿಸುತಿತ್ತು. ಕೊನೆಗೂ ಕಣಿವೆ ಪ್ರವೇಶಿಸುವಾಗ, ಕಣ್ಣುಗಳು ನಂಬದಂತಹ ದೃಶ್ಯ ಹರಡಿಕೊಂಡಿತ್ತು. ಎಲ್ಲೆಡೆ ಹೂವಿನ ಹಾಸು, ಹಸಿರು ಮೇವುಗಳ ನಡುವೆ ಕೆಂಪು, ನೀಲಿ, ಹಳದಿ, ನೇರಳೆ ಬಣ್ಣದ ಹೂಗಳು – ಪ್ರಕೃತಿಯೇ ತನ್ನ ಸೌಂದರ್ಯವನ್ನು ಇಷ್ಟರವರೆಗೆ ಬಚ್ಚಿಟ್ಟು, ಇದೀಗ ನಮ್ಮ ಕಣ್ಮುಂದೆ ಎಲ್ಲವನ್ನೂ ಅನಾವರಣಗೊಳಿಸಿದಂತಿತ್ತು.

ಹಿಮಾಲಯದ ಹಸಿರ ಹಾಸುಹತ್ತಿದ ಕಣಿವೆ, ಬಣ್ಣ ಬಣ್ಣದ ಹೂವಿನ ಹಾಸುಹೊತ್ತಿದ ಕಣಿವೆ – ಅಲ್ಲಿ ಬ್ಲೂ ಪಾಪಿ, ಹಿಮಾಲಯನ್‌ ರೋಸ್, ಮೀಡೋ ಜೆರಾನಿಯಮ್‌, ಡಾಗ್ ಫ್ಲವರ್, ರಿವರ್ ಅನಿಮೋನಿ ಹೀಗೆ ಕಣ್ಣು ಹಾಯಿಸಿದಷ್ಟು ಉದ್ದಗಲಕ್ಕೂ ಹಸಿರು, ಹಳದಿ, ಕೆಂಪು, ಕೇಸರ, ನೀಲಿ, ಬಿಳಿ, ಗುಲಾಬಿ ಹೀಗೆ ಎಣಿಸಲು ಆಗದಷ್ಟು ಹೂವುಗಳ ರಾಶಿ. ಅಲ್ಲಿ ನಡೆಯುವ ಪ್ರತಿಯೊಂದು ಹೆಜ್ಜೆಯೂ ಪುಷ್ಪ- ಕವನದ ಸಾಲಿನಂತಿತ್ತು. ಎಡಭಾಗದಲ್ಲಿ ಹಿಮಚ್ಛಾದಿತ ಶಿಖರಗಳು, ಬಲಭಾಗದಲ್ಲಿ ಹೂವಿನ ಕಣಿವೆ, ಮಧ್ಯದಲ್ಲಿ ನಾವು – ಇದೇನು ಕನಸಿನ ಲೋಕವೇ ಎಂದು ನಿಮ್ಮನ್ನು ನೀವೇ ಕೇಳುವಂತಾಗುತ್ತದೆ. ಕೆಲವೊಂದು ಕಡೆ ದಾರಿ ಇಳಿಜಾರಿನಿಂದ ಆರಂಭವಾಗಿ ಎತ್ತರದ ಕಡೆಗೆ ಸಾಗುತ್ತಿತ್ತು. ಎಲ್ಲೆಡೆಯೂ ಹೂವುಗಳ ಪರ್ವ- ನಾನಾ ಬಣ್ಣದ, ಆಕಾರದ ಹೂಗಳು ಪರ್ವತದ ದಾರಿಗಳನ್ನು ಅಲಂಕರಿಸುತ್ತಿದ್ದವು. ಪ್ರಕೃತಿಯ ಈ ಕಲಾತ್ಮಕತೆ ನನಗೆ ದಿವ್ಯ ಸಾನ್ನಿಧ್ಯದಂತೆ ಭಾಸವಾಗುತಿತ್ತು. ಆ ಹೂಗಳ ನಡುವೆ ನಡೆದು ಹೋಗುವಾಗ ಪ್ರಕೃತಿಯೊಂದಿಗಿನ ಸಂಬಂಧ ಮತ್ತಷ್ಟು ಆಳವಾಗುವುದರಲ್ಲಿ ಸಂದೇಹವಿಲ್ಲ. ಅದು ಕೇವಲ ದೃಶ್ಯವಲ್ಲ, ಅದು ಅನುಭವ. ಅದು ಬಾಯಲ್ಲಿ ಹೇಳಲಾಗದ, ಬರಹದಲ್ಲಿ ಸೆರೆಯಾಗದ, ಮನಸ್ಸಿನಲ್ಲಿ ಮಾತ್ರ ಉಳಿಯುವ ಅನುಭವ. ಹಲವು ವರ್ಷಗಳು ಕಳೆದ ಬಳಿಕವೂ, ನಾನೇನು ನೋಡುತ್ತಿದ್ದೆ ಎಂಬುದರ ಜ್ಞಾಪಕ ಇನ್ನೂ ಹೃದಯದಲ್ಲಿ ಜೀವಂತವಾಗಿಯೇ ಇದೆ. ಹೂವಿನ ಸುವಾಸನೆಯ ನಡುವೆ ಕಳೆಯುವ ಆ ಕ್ಷಣಗಳಲ್ಲಿ – ಕಾಲವೇ ನಿಂತಂತಾಗಿದೆ ಎಂದೆನಿಸಿದರೆ ಆಶ್ಚರ್ಯವೇನಿಲ್ಲ. ಈ ದಾರಿಯಲ್ಲಿ ಕಣ್ಣಿಗೆ ಕಾಣುವ, ಮನಕ್ಕೆ ಮುದ ನೀಡುವ ಈ ದೃಶ್ಯಾವಳಿ ಬಿಟ್ಟರೆ ಬೇರೇನೂ ಸಿಗುವುದಿಲ್ಲ, ಆದುದರಿಂದ ಎಲ್ಲವನ್ನೂ ಘಂಗಾರಿಯದಿಂದಲೇ ಕಟ್ಟಿಕೊಂಡು ಬರಬೇಕು. ಆದರೆ ಅಲ್ಲಿನ ನೋಟವೇ ತನು-ಮನವನ್ನು ತಂಪಾಗಿಸಿ, ಊಟ, ನೀರಡಿಕೆ, ಹಸಿವೆಯನ್ನೇ ಮರೆಯುವಂತೆ ಮಾಡುತ್ತದೆ. ಎಲ್ಲವನ್ನೂ ಮತ್ತೆ ಮತ್ತೆ ಸವಿದು ಸಂಜೆ ಮತ್ತೆ ಘಂಗಾರಿಯಗೆ ಹಿಂದಿರುಗಿದಾಗ ದೇಹ ಆಯಾಸಗೊಂಡಿದ್ದರೂ ಮನಸ್ಸು ಹಸನಾಗಿತ್ತು.

WhatsApp Image 2025 09 06 at 4.44.30 AM

ಅಲ್ಲಿ ಕಳೆಯಲಾದ ಪ್ರತಿಯೊಂದು ಕ್ಷಣವೂ ನನ್ನ ಜೀವನದಲ್ಲಿ ಶಾಶ್ವತ ಸ್ಮೃತಿಯಾಗಿ ಉಳಿದಿದೆ. ಅದು ಕೇವಲ ಹೂವಿನ ಕಣಿವೆಯೆಂದು ಅನಿಸಲಿಲ್ಲ, ನನಗೆ ಅದು ಮನಸ್ಸಿಗೆ ಶಾಂತಿ ನೀಡುವ ಕಣಿವೆ, ಪ್ರಕೃತಿಯೊಂದಿಗೆ ಮನುಷ್ಯನ ನಿಜವಾದ ಸಂವಾದವನ್ನು ನೆನಪಿಸುವ ತಾಣವಾಗಿತ್ತು. ಇಂತಹ ಸ್ಥಳಗಳಲ್ಲಿ ನಡೆಯುವ ಪ್ರತಿಯೊಂದು ಹೆಜ್ಜೆಯೂ ನಮ್ಮ ಅಂತರಂಗಕ್ಕೆ ನೆಮ್ಮದಿ ನೀಡುತ್ತದೆ.

ಆದರೆ ಒಂದೊಂದು ಬಾರಿ ನನ್ನಲ್ಲಿ ಮೂಡುವ ಪ್ರಶ್ನೆಯೆಂದರೆ – ಇಂತಹ ನಿಸರ್ಗದ ಕೊಡುಗೆಯೇ ದುರಂತಕ್ಕೀಡಾದರೆ? ಮಿತಿಯಿಲ್ಲದೆ ವಿಸ್ತರಿಸುತ್ತಿರುವ ಮನುಷ್ಯನ ದುರಾಸೆ, ಅತಿರೇಕದ, ಅಸ್ವಾಭಾವಿಕ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಡುಮರಗಳ ಕಡಿತ, ಅರಣ್ಯ ನಾಶ, ಅಸಮರ್ಪಕ ಕಟ್ಟಡ ನಿರ್ಮಾಣಗಳು- ಇವೆಲ್ಲವೂ ಒಟ್ಟು ಸೇರಿ ಉತ್ತರಾಖಂಡ, ಹಿಮಾಚಲದಂತಹ ಸುಂದರ ಪರ್ವತ ಪ್ರದೇಶಗಳನ್ನು ಭೂ ಕುಸಿತ, ಪ್ರವಾಹ, ಅತಿವೃಷ್ಟಿ ಮುಂತಾದ ಅವಘಡಗಳಿಗೆ ತಳ್ಳುತ್ತಿದೆ. ಈ ಎಲ್ಲ ನೈಸರ್ಗಿಕ ವಿಪತ್ತುಗಳು – ಮನುಷ್ಯನ ಭೀಕರ ಲಾಲಸೆಗೆ ಸಾಕ್ಷಿ. ನಿಸರ್ಗ ನಮ್ಮ ಸಹಜ ಬದುಕಿನ ಆಧಾರವಾಗಿರುವುದನ್ನು ಮರೆತು, ಇರುವುದೆಲ್ಲವನ್ನು ಉಳಿಸಿಕೊಳ್ಳುವುದಕ್ಕಿಂತಲೂ ಇರದುದರೆಡೆಗೆ ಸಾಗುವ ಹಂಬಲದ ನಡುವೆ – ಇನ್ನೂ ಹೆಚ್ಚನ್ನು ಸಂಪಾದಿಸುವ ದುರಾಸೆಯಿಂದ – ನಾವು ಇರುವುದನ್ನೂ ಕೂಡ ಕಳೆದುಕೊಳ್ಳುತ್ತಿದ್ದೇವೆ.

ಇದನ್ನೂ ಓದಿ ಹೋರಾಟದ ಸಂಗಾತಿ ಗೌರಿಗೊಂದು ಪ್ರೀತಿಯ ಪತ್ರ

ಆದರೂ, ನಿಸರ್ಗ ನಮ್ಮ ಶತ್ರುವಲ್ಲ; ಅದು ನಮ್ಮ ಅಸ್ತಿತ್ವದ ನೆಲೆ. ನಮಗಿರುವ ಏಕೈಕ ನೆಲೆ. ಆಕೆಯೊಂದಿಗೆ ಸಹಜವಾಗಿ ಬದುಕಿದಾಗ ಮಾತ್ರ ಆಕೆ ತನ್ನ ಸಂಪೂರ್ಣ ಸೌಂದರ್ಯವನ್ನು ಅನಾವರಣಗೊಳಿಸಬಲ್ಲಳು. ಹೂವಿನ ಕಣಿವೆ ನನಗೆ ಕಲಿಸಿದ ಪಾಠವೇ ಇದೇ – ನಾವು ನಿಸರ್ಗವನ್ನು ಸಂರಕ್ಷಿಸಿದಷ್ಟೂ, ನಿಸರ್ಗ ನಮಗೆ ತನ್ನ ಶಾಶ್ವತ ಸೊಬಗು, ಶಾಂತಿ, ಸಮೃದ್ಧಿಯನ್ನು ಹಂಚಿಕೊಳ್ಳುತ್ತಾಳೆ. ಆದ್ದರಿಂದ, ಈ ಹೂವುಗಳ ಕಣಿವೆಯಂತೆ ಪ್ರಕೃತಿಯ ಸೌಂದರ್ಯವನ್ನು ಕಾಪಾಡುವುದು ಕೇವಲ ಹೊಣೆಗಾರಿಕೆ ಮಾತ್ರವಲ್ಲ, ಅದು ನಮ್ಮ ಮುಂದಿನ ಪೀಳಿಗೆಯ ಮೇಲಿನ ಜವಾಬ್ದಾರಿಯೂ ಆಗಿದೆ. ನಿಸರ್ಗದ ನಡುವೆ ಕಳೆದ ಆ ಕ್ಷಣಗಳು ನನಗೆ ತೋರಿಸಿದ ದಾರಿಯೇ ಇದಾಗಿದೆ – ಪ್ರಕೃತಿಯನ್ನು ಕಾಪಾಡೋಣ, ಇರುವುದನ್ನು ಉಳಿಸೋಣ, ಹಾಗಾದರೆ ಮಾತ್ರ ಪ್ರತಿಯೊಂದು ಕಣಿವೆಯೂ ನಮ್ಮ ಜೀವನಕ್ಕೆ, ನಮ್ಮ ಮುಂದಿನ ಪೀಳಿಗೆಯ ಜೀವನಕ್ಕೆ ಶಾಶ್ವತ ಹಸಿರಿನ ನೆನಪುಗಳನ್ನು ನೀಡಬಲ್ಲದು.

WhatsApp Image 2025 11 17 at 5.26.24 PM
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...