ಐದು ವರ್ಷಗಳಿಂದ ಜೈಲಿನಲ್ಲಿ ಆಯುಷ್ಯ ಕಳೆಯುತ್ತಿರುವ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಅಥರ್ ಖಾನ್, ಶಿಫಾ ಉರ್ ರೆಹಮಾನ್ ಇವರಿಗೆ ಜಾಮೀನು ನೀಡದೇ ತಾರೀಖಿನ ಮೇಲೆ ತಾರೀಖು ಕೊಡುತ್ತಾ ವಿಳಂಬಿಸುತ್ತಿರುವುದು ನ್ಯಾಯವೇ? ನ್ಯಾಯಾಂಗದ ಕೆಲವು ತೀರ್ಪುಗಳು ಮತ್ತದರ ಕಾರ್ಯವೈಖರಿಯನ್ನು ನೋಡಿದರೆ, “ನ್ಯಾಯಾಂಗ ಪರೋಕ್ಷವಾಗಿಯೋ ಪ್ರತ್ಯಕ್ಷವಾಗಿಯೋ ಸರಕಾರದ ನಿಲುವಿಗೆ ಬೆಂಬಲವಾಗಿ ವರ್ತಿಸುತ್ತಿದೆ” ಎಂದು ಈ ದೇಶದ ನಾಗರಿಕರಿಗೆ ಅನಿಸತೊಡಗಿದ್ದರೆ ಅತಿಶಯೋಕ್ತಿ ಏನಿದೆ?
When the Executive fails, when the legislature bends, it is the judiciary that must stand tall..
“ಆಡಳಿತ ವಿಫಲವಾದಾಗ, ಶಾಸನ ಮೌನವಾದಾಗ, ನ್ಯಾಯವೇ ಎದ್ದು ನಿಲ್ಲಬೇಕು” ಎನ್ನುವ ಮಾತೊಂದಿದೆ. ನ್ಯಾಯಾಂಗದ ಕೆಲಸ ಸರ್ಕಾರದ ದೋಷವನ್ನು, ತಪ್ಪನ್ನು ತೋರಿಸುವುದು ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು. ಆದರೆ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿ ಆಯುಷ್ಯ ಕಳೆಯುತ್ತಿರುವ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಅಥರ್ ಖಾನ್, ಶಿಫಾ ಉರ್ ರೆಹಮಾನ್ ಇವರಿಗೆ ಜಾಮೀನು ನೀಡದೇ ತಾರೀಖಿನ ಮೇಲೆ ತಾರೀಖು ಕೊಡುತ್ತಾ ವಿಳಂಬಿಸುತ್ತಿರುವುದು ನ್ಯಾಯವೇ? ನ್ಯಾಯಾಂಗದ ಕೆಲವು ತೀರ್ಪುಗಳು ಮತ್ತದರ ಕಾರ್ಯವೈಖರಿಯನ್ನು ನೋಡಿದರೆ, “ನ್ಯಾಯಾಂಗ ಪರೋಕ್ಷವಾಗಿಯೋ ಪ್ರತ್ಯಕ್ಷವಾಗಿಯೋ ಸರಕಾರದ ನಿಲುವಿಗೆ ಬೆಂಬಲವಾಗಿ ವರ್ತಿಸುತ್ತಿದೆ” ಎಂದು ಈ ದೇಶದ ನಾಗರಿಕರಿಗೆ ಅನಿಸತೊಡಗಿದ್ದರೆ ಅತಿಶಯೋಕ್ತಿ ಏನಿದೆ?
ಬಹಳ ಹಿಂದೆಯೇ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಎಚ್ಚರಿಸಿದರು: “ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಳೆದುಕೊಂಡರೆ, ಸಂವಿಧಾನ ಕಾಗದದ ಹಾಳೆಯಾಗುತ್ತದೆ” ಎಂದು. ಈ ಎಚ್ಚರಿಕೆ ಇಂದು ಹೆಚ್ಚು ಪ್ರಸ್ತುತವಾಗುತ್ತಿದೆ.
ಇದರ ಒಳಮರ್ಮವನ್ನು ಬಗೆದು ನೋಡಬೇಕೆಂದರೆ ನಾವು ಐದು ವರ್ಷ ಹಿಂದಕ್ಕೆ ಹೋಗಿ ನೋಡಬೇಕಾಗುತ್ತದೆ. ಅಷ್ಟಕ್ಕೂ ಈ ಎಲ್ಲಾ ವಿದ್ಯಾವಂತ ಮುಸ್ಲಿಮರನ್ನೇ ಆರಿಸಿ ಆರಿಸಿ ಅವರನ್ನು ಯುಎಪಿಎ (Unlawful Activities Prevention Act) ನಂತಹ ಕಠಿಣ ಕಾನೂನಿನ ಅಡಿಯಲ್ಲಿ, ಆಧಾರರಹಿತ ಆರೋಪ ಹೊರಿಸಿ ಜೈಲಿನಲ್ಲಿಟ್ಟದ್ದಾದರೂ ಏಕೆ? ಕೇವಲ ಸಂಘಟಿತ ವಿರೋಧದ ದನಿಯನ್ನು ಹತ್ತಿಕ್ಕುವ, ನಿಗ್ರಹಿಸುವ ಸಾಧನವನ್ನಾಗಿ ಸರಕಾರ ಈ ಕಾನೂನನ್ನು ದುರ್ಬಳಕೆ ಮಾಡುತ್ತಿಲ್ಲವೇ ? ಅದನ್ನು ಪ್ರಶ್ನಿಸುವವರು ಯಾರು ?
ಡಿಸೆಂಬರ್ 15, 2019ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‌ಸಿ ವಿರೋಧದಲ್ಲಿ ಪ್ರತಿಭಟನೆ ಶುರುವಾಗಿತ್ತು. ನಂತರ ಶಾಹೀನ್ ಬಾಗ್‌ನಲ್ಲಿ ಆರಂಭವಾಗಿದ್ದ ಆಂದೋಲನ 24 ಮಾರ್ಚ್ 2020 ವರೆಗೂ ನಡೆದದ್ದು ಚಾರಿತ್ರಿಕ ದಾಖಲೆ. ಪ್ರತಿಭಟನೆಯ ಕಿಡಿ ಆರದಂತೆ ಜೋಪಾನವಾಗಿಟ್ಟವರು ಶಾಹೀನ್ ಬಾಗಿನ ಮಹಿಳೆಯರು, ದಾದಿಯರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಮತ್ತು ಈ ಜಾಗವನ್ನೂ ತೊರೆಯುವುದಿಲ್ಲ ಎನ್ನುವುದು ಪ್ರತಿಭಟನಾಕಾರರ ಸಂಕಲ್ಪವಾಗಿತ್ತು. ಶಾಹೀನ್ ಬಾಗ್ ಅಲ್ಲದೇ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಸೀಲಂಪುರ್ ಅಲ್ಲದೇ ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆದದ್ದು ಗೊತ್ತೇ ಇದೆ. ಕೋವಿಡ್ ಕಾಲದ ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳವನ್ನು ಬಲಪೂರ್ವಕವಾಗಿ ತೆರೆವುಗೊಳಿಸಲಾಗಿತ್ತು.
ಈ ಸಂದರ್ಭದಲ್ಲಿ ದೆಹಲಿಯ ಪೊಲೀಸರು, ಉತ್ತರ ಪ್ರದೇಶದ ಪೊಲೀಸರು ನಡೆದುಕೊಂಡ ರೀತಿ ನಿಜಕ್ಕೂ ನಿಂದನೀಯವಾದುದು. ಜಾಮಿಯಾ ಸ್ಥಳಕ್ಕೆ ಬಂದಿದ್ದ ಹದಿನೇಳು ವರ್ಷದ ಗೋಪಾಲ್ ಶರ್ಮಾ ಎಂಬವ (ರಾಮ್ ಭಕ್ತ ಗೋಪಾಲ) ಕಂಟ್ರಿ ಪಿಸ್ತೂಲಿನಿಂದ ಗುಂಡು ಹಾರಿಸಿ “ನಿಮಗೆ ಆಜಾದಿ ಬೇಕಾ, ಬನ್ನಿ ತಗೊಳ್ಳಿ“ ಎಂದು ಅರಚುತ್ತಿದ್ದ. ಶಾಂತಿಯುತವಾದ ಪ್ರತಿಭಟನೆಯಲ್ಲಿ ನಿರತರಾಗಿದ್ದ ಜಾಮಿಯಾದ ವಿದ್ಯಾರ್ಥಿ ಶಾದಾಬ್ ಫಾರೂಖ್ ಕೈಗೆ ಗುಂಡು ತಗುಲಿದಾಗ ಪೊಲೀಸರು ಮುಂದೆ ಬಂದು ಅವನನ್ನು ತಡೆಯುತ್ತಾರೆ. ಪ್ರತಿಭಟನಾಕಾರರಿಗೆ ಬುದ್ಧಿ ಕಲಿಸಲು ಅಲೀಗಡದಿಂದ ದಿಲ್ಲಿಗೆ ಬಂದಿದ್ದ ಈ ಯುವಕ ಮುಸ್ಲಿಂ ದ್ವೇಷ, ಹಿಂದುತ್ವದ ಅಮಲನ್ನು ತಲೆಗೇರಿಸಿಕೊಂಡಿದ್ದ. ಇಂಥವನನ್ನು “ಅಪ್ರಾಪ್ತ” ಎಂದು ದಾಖಲಿಸಿಕೊಂಡು ಯಾವುದೇ ಶಿಕ್ಷೆಗೆ ಒಳಪಡದಂತೆ ಅವನನ್ನು ಕಾಪಾಡಿ ಇದೇ ಖಾಕಿಧಾರಿ, ಕಾವಿಧಾರಿಗಳು, ಈಶಾನ್ಯ ದೆಹಲಿ ಗಲಭೆಯಲ್ಲಿ ಊರಲ್ಲೇ ಇರದ ಉಮರ್ ಖಾಲಿದನ ಮೇಲೆ ಇದ್ದಬಿದ್ದ ಎಲ್ಲಾ ಆರೋಪಗಳನ್ನು ಹೇರುತ್ತಾರೆ.

ಇದೇ ಪಶ್ಚಿಮ ಉತ್ತರಪ್ರದೇಶದಲ್ಲಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಆರಂಭವಾಗುತ್ತಲೇ ಸಿಕ್ಕ ಅವಕಾಶದಲ್ಲಿ ಪೊಲೀಸರು ಪರಿಸ್ಥಿತಿಯನ್ನು ಹದಗೆಡಿಸಿ ಗುಂಡುಹಾರಿಸಿ ಅಮಾಯಕರ ಪ್ರಾಣ ತೆಗೆದಿದ್ದಾರೆ. ನಮಾಜು ಮುಗಿಸಿ ಮರಳುತ್ತಿದ್ದ ಯುವಕ, ಮಗುವಿಗೆ ಹಾಲು ತರಲು ಹೊರಹೋಗಿದ್ದ ತಂದೆ ಹೀಗೆ ವಿನಾಕಾರಣ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನವನ್ನೂ ಕೊಡಲಾಗದ ಯೋಗಿ ಸಂಪುಟ –“ಸರ್ಕಾರಿ ಸಂಪತ್ತನ್ನು ನಾಶಗೊಳಿಸಿದ್ದು ಈ ಉಪದ್ರವಿಗಳೇ, ನಮ್ಮ ಹತ್ತಿರ ಎಲ್ಲಾ ಸಾಕ್ಷ್ಯಗಳಿವೆ, ಉಪದ್ರವಿಗಳು ಯಾರೆಂದು ನಮಗೆ ಗೊತ್ತು” ಎಂದು ದಂಡ ತೆರುವಂತೆ ಬಡವರ ಮೇಲೆಯೇ ನೋಟಿಸ್ ಕಳಿಸಿದ್ದು ಯಾವ ನ್ಯಾಯ? ಈ ದುಷ್ಟ ರಾಜಕಾರಣವನ್ನು ಮರೆಯಲಾದೀತೇ? ಆದರೆ ಕೇಳುವವರಾರು! ಪ್ರಶ್ನೆ ಕೇಳುವವರು ದೇಶದ್ರೋಹಿಗಳಾಗುವಾಗ –’ಅಂಧೇರ್ ನಗರಿ ಚೌಪಟ್ ರಾಜಾ’ ಎಂದಾಗಿದೆ ಯೋಗಿ ರಾಜ್ಯದ ಆಡಳಿತ ವ್ಯವಸ್ಥೆ.
ದೆಹಲಿ ಗಲಭೆಯಲ್ಲಿ ಅನೇಕ ಮುಸ್ಲಿಂ ಕುಟುಂಬಗಳ ಮನೆಗಳಿಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಒಡೆದು, ಜನರನ್ನು ಥಳಿಸಿ ಭಯೋತ್ಪಾದಕರ ರೀತಿಯಲ್ಲಿ ದೊಂಬಿ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದಿದ್ದರು. ವಾಹನಗಳನ್ನು ಸುಟ್ಟಿದ್ದರು. ಕೇವಲ ಮುಸ್ಲಿಂ ಕುಟುಂಬಗಳಿಗೆ ನುಗ್ಗಿ ಹಲ್ಲೆ ಮಾಡಿದ್ದು ಯಾರ ಆದೇಶದ ಮೇರೆಗೆ? ರಾಜ್ಯದ ಗೂಂಡಾ ರಾಜಕಾರಣಕ್ಕೆ ಕನ್ನಡಿ ಹಿಡಿವ ಅನೇಕ ವಿಡಿಯೋಗಳು ಯುಟ್ಯೂಬಿನಲ್ಲಿವೆ. ಒಂದು ವೇಳೆ ಪ್ರತಿಭಟನಾಕಾರರೇ ದೊಂಬಿ ಹಬ್ಬಿಸಿದಲ್ಲಿ ಅವರ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳಲಿ ಸರ್ಕಾರ. ಆದರೆ, ಅಮಾನವೀಯವಾಗಿ ವರ್ತಿಸಿದ ಪೋಲಿಸರ ಮೇಲೆ ಸೂಕ್ತವಾದ ತನಿಖೆ ನಡೆಯಬೇಕು ಅಲ್ಲವೇ?
ಸಂಘ ಸಂಚಾಲಿತ ಬಿಜೆಪಿಗರ ದುರಾಡಳಿತಕ್ಕೆ ಲೆಕ್ಕವೇ ಇಲ್ಲ. ಯಾರೋ ಒಬ್ಬ “ಮುಸ್ಲಿಮರಿಗೆ ನೂರೈವತ್ತು ದೇಶಗಳಿವೆ ಹಿಂದೂಗಳಿಗೆ ಇರುವುದು ಒಂದೇ ದೇಶ” ಅನ್ನುತ್ತಾನೆ, ಮತ್ತೊಬ್ಬ”ಭಾರತ ಮಾತಾ ಕೀ ಜೈ ಅನ್ನದವರೆಲ್ಲ ದೇಶ ಬಿಟ್ಟು ತೊಲಗಲಿ” ಎನ್ನುತ್ತಾನೆ. ರಾಜ್ಯದ ಮುಖ್ಯಮಂತ್ರಿಯೇ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಮತ್ತು ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮೇಲೆ ಸೇಡು ತೀರಿಸಿಕೊಳ್ಳಲಾಗುವುದು ಎಂದಿದ್ದನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಖಂಡಿಸುತ್ತಾ… “ನೀವು ಭಗವಾ ಧರಿಸಿದ್ದೀರಿ, ಭಗವಾ ನಿಮ್ಮದಲ್ಲ, ಅದು ಹಿಂದೂ ಧರ್ಮದ ಸಂಕೇತ. ಪ್ರೇಮ ಕರುಣೆಯ ಹಿಂದೂ ಧರ್ಮದಲ್ಲಿ ಸೇಡು, ಹಿಂಸೆ, ವಂಚನೆಯಂಥ ಶಬ್ಧಗಳಿಗೆ ಸ್ಥಾನವಿಲ್ಲ” ಎಂದು ಮಾತಿನ ಚಾಟಿಯೇಟು ಕೊಟ್ಟಿದ್ದರು.
ಈಶಾನ್ಯ ದೆಹಲಿಯ ಗಲಭೆಯ ನಿಜವಾದ ಕಾರಣಕರ್ತರು ರಾಜಾರೋಷವಾಗಿ ಬದುಕುತ್ತಿದ್ದಾರೆ. ಅದರಲ್ಲಿ ಯಾವುದೇ ಪಾತ್ರವಿರದ ಹೋರಾಟಗಾರ ವಿದ್ಯಾರ್ಥಿಗಳು ಮುಸ್ಲಿಮರು ಎಂಬ ಏಕೈಕ ಕಾರಣಕ್ಕಾಗಿ ಐದು ವರ್ಷಗಳಿಂದ ಜೈಲು ವಾಸದಲ್ಲಿ ಸತ್ತಂತೆ ಅವರದೇ ಗೋರಿಯಲ್ಲಿ ವಾಸಿಸುತ್ತಿದ್ದಾರೆ.

ಗಲಭೆಯನ್ನು ಪ್ರಚೋದಿಸಿದ ಆರ್‌ಎಸ್‌ಎಸ್ ಮತ್ತು ಬಜರಂಗದಳದೊಂದಿಗೆ ಸಂಬಂಧ ಹೊಂದಿರುವ ಹಿಂದುತ್ವದ ರಾಜಕಾರಣಿ ರಾಯಭಾರಿಗಳ ಹಳೆಯ ಟ್ವಿಟರ್ ಅಕೌಂಟುಗಳ ತುಣುಕುಗಳು ಜಾಲತಾಣದಲ್ಲಿ ಲಭ್ಯವಿವೆ. ಅವರು ತಮ್ಮ ಫೇಸ್‌ಬುಕ್ ಖಾತೆಯನ್ನು ಸಕ್ರಿಯವಾಗಿ ಬಳಸಿಕೊಂಡು ಜನಸಮೂಹವನ್ನು ಹೇಗೆ ಒಟ್ಟುಗೂಡಿಸಿದರು. “ಈಶಾನ್ಯ ದಿಲ್ಲಿಗೆ ಬನ್ನಿ” ಎಂದು ಕರೆಕೊಟ್ಟವರು ಇಂತಹ ನರಹಂತಕರೇ. ಫೆಬ್ರವರಿ 23 ರಂದು, #पूरी_दिल्ली को #शाहीनबाग नहीं बनने देंगे (ಇಡೀ ದೆಹಲಿಯನ್ನು ಶಾಹೀನ್ ಬಾಗ್ ಮಾಡಲು ಬಿಡುವುದಿಲ್ಲ) ಎಂಬ ಹ್ಯಾಶ್‌ಟ್ಯಾಗ್ ಬಳಸಿ, ದೆಹಲಿ ಎನ್‌ಸಿಆರ್‌ನಲ್ಲಿರುವ ಎಲ್ಲಾ ಹಿಂದೂಗಳು ಸ್ಥಳೀಯ ದೆಹಲಿ ಜಿಲ್ಲೆ ಮತ್ತು ಧರ್ಮ ಯುದ್ಧದ (ಧಾರ್ಮಿಕ ಯುದ್ಧ) ಸ್ಥಳವಾದ ಮೌಜ್‌ಪುರ ಚೌಕ್‌ನಲ್ಲಿ ತಮ್ಮೊಂದಿಗೆ ಸೇರಲು ಕರೆ ನೀಡಿದ್ದರು. ಇವರಿಗೆ ಶಿಕ್ಷೆಯಿಲ್ಲವೇ?
“ಸಿಎಎ/ಎನ್‌ಆರ್‌ಸಿಯನ್ನು ವಿರೋಧಿಸುವ ಸಾವಿರಾರು ಜಿಹಾದಿ ಮನಸ್ಥಿತಿಯ ಜನರು ಜಾಫರಾಬಾದ್‌ನಲ್ಲಿ ಎರಡು ರಸ್ತೆಗಳನ್ನು ಆಕ್ರಮಿಸಿದ್ದಾರೆ ಮತ್ತು ಜಿನ್ನಾ ಮಾಡಿದಂತೆ ಸ್ವಾತಂತ್ರ್ಯವನ್ನು ಕೋರುತ್ತಿದ್ದಾರೆ. ನಪುಂಸಕರಂತೆ ಏನೂ ಮಾಡದೆ ನೋಡುವುದಕ್ಕಿಂತ ಪುರುಷರಾಗಿ ಸಾಯುವುದು ಉತ್ತಮ” ಎಂದು ಒಬ್ಬ ನೇತಾರ ( ದೀಪಕ್ ಸಿಂಗ್) 35 ನಿಮಿಷಗಳ ವೀಡಿಯೊದಲ್ಲಿ ಎಚ್ಚರಿಸಿದ್ದನೆನ್ನಲಾಗುವ ಇದನ್ನು ಆನ್‌ಲೈನ್‌ನಲ್ಲಿ 91,000ಕ್ಕೂ ಹೆಚ್ಚು ವೀಕ್ಷಣೆಯಾಗಿದೆ. “ಇಂದು ಭಾನುವಾರ, ನನ್ನ ಎಲ್ಲಾ ಹಿಂದೂ ಸಹೋದರ ಸಹೋದರಿಯರೇ ನಿಮ್ಮ ಕೆಲಸವನ್ನು ಬದಿಗಿಟ್ಟು… ಮೆಟ್ರೋ ತೆಗೆದುಕೊಳ್ಳಿ ಅಥವಾ ನಿಮ್ಮ ಕಾರಿನಲ್ಲಿ ಚಾಲನೆ ಮಾಡಿ ಮತ್ತು ಮೌಜ್‌ಪುರ ಚೌಕ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ್ತು ರಾಷ್ಟ್ರವಿರೋಧಿಗಳ ವಿರುದ್ಧ ರಾಷ್ಟ್ರೀಯವಾದಿಗಳ ಪಕ್ಷವನ್ನು ಬಲಪಡಿಸಿ” ಎಂದು ಕರೆಕೊಟ್ಟು ಗಲಭೆ ಹುಟ್ಟುಹಾಕಿದವರಿಗೆ ಯಾವ ಕಾನೂನಿನ ಕ್ರಮವೂ ಇಲ್ಲವೇ? ನ್ಯಾಯವಾಗಿ ಜೈಲಿನಲ್ಲಿರಬೇಕಾದವರು ಇವರು ಈಗ ಹೇಳಿ ಷಡ್ಯಂತ್ರ ರಚಿಸಿದ್ದು ಪೊಲೀಸರೋ, ಬಿಜೆಪಿ ಸಂಸದರೋ ಅಥವಾ ಪ್ರಭುತ್ವವೋ?
ಅಪರಾಧದ, ಪ್ರಚೋದನೆಯ ಯಾವ ದಾಖಲೆಗಳು, ಪುರಾವೆಗಳೂ ಇಲ್ಲದವರನ್ನು ಜೈಲಿನಲ್ಲಿ ಕೊಳೆತು ಸಾಯಿರಿ ಎಂದು ಅಮಾನವೀಯವಾಗಿ ವರ್ತಿಸುವವರಿಗೆ ಆತ್ಮಸಾಕ್ಷಿ ಎನ್ನುವುದು ಸತ್ತುಹೋಗಿದೆ. ಹಿರಿಯ ವಕೀಲರುಗಳಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ಸಲ್ಮಾನ್ ಖುರೇಶಿ ಅವರು ಈ ಯುವಕರ ಜಾಮೀನಿಗಾಗಿ ವಾದಿಸುತ್ತಿದ್ದರೆ, ಇನ್ನೊಂದು ಕಡೆ ಎಸ್. ವಿ. ರಾಜು – ದೆಹಲಿ ಪೊಲೀಸರ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (Additional Solicitor General) ಆಗಿ ಕೆಲಸ ಮಾಡುತ್ತಿರುವ ಅವರು ಉಮರ್ ಖಾಲಿದ್ ಮತ್ತು ಇತರರ (ಶರ್ಜೀಲ್ ಇಮಾಮ್, ಗುಲ್ಫೀಶಾ ಫಾತಿಮಾ ಮುಂತಾದವರ) ವಿರುದ್ಧದ ಯುಎಪಿಎ (UAPA) ಮತ್ತು 2020ರ ದೆಹಲಿ ಗಲಭೆಗಳ “ವಿಶಾಲ ಸಂಚು” ಪ್ರಕರಣದಲ್ಲಿ ಅವರಿಗೆ ಒಂದು ದಿನದ ಜಾಮೀನು ಕೂಡ ಸಿಗಬಾರದು ಎಂದು ನ್ಯಾಯಾಲಯದಲ್ಲಿ ಜಾಮೀನನ್ನು ವಿರೋಧಿಸುತ್ತಿರುವುದನ್ನು ನೋಡಿದರೆ ಮನುಷ್ಯನ ಕ್ಷುದ್ರತೆಗಳು ಹೇಸಿಗೆ ತರಿಸುತ್ತವೆ.
ಭವಿಷ್ಯದ ನಾಯಕರನ್ನು ಸಿದ್ಧಪಡಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾದುದು. ಪ್ರಜಾಪ್ರಭುತ್ವವಾದಿ ಚರ್ಚೆಗಳನ್ನು ನಡೆಸುವುದು ವಿಶ್ವವಿದ್ಯಾಲಯಗಳ ಕೆಲಸ. ನಡೆಸಲು ಅವಕಾಶ ಮಾಡಿಕೊಡುವುದು ಸರ್ಕಾರದ ಕೆಲಸ. ಆದರೆ ಫ್ಯಾಸಿಸ್ಟ್ ಶಕ್ತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಕಿತ್ತುಕೊಂಡು, ಕಿವಿ ಬಾಯಿಗಳನ್ನು ಹೊಲಿದು ಕೀಲು ಬೊಂಬೆಗಳನ್ನಾಗಿಸ ಹೊರಟಿದ್ದು ದುರದೃಷ್ಟಕರ. ಹಿಂದೆ ದೀಪಿಕಾ ಪಡುಕೋಣೆ ಜೆಎನ್ಯೂವಿಗೆ ತೆರಳಿ ಗಾಯಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯೆಷಾ ಘೋಷ್‌ಳನ್ನು ಮಾತಾಡಿಸಿದ್ದಕ್ಕೆ, ಹೋರಾಟಗಾರರನ್ನು ಬೆಂಬಲಿಸಿದ್ದಾಳೆಂದು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆದರು.

ಇಡೀ ದೇಶದ ರಾಜಕಾರಣದಲ್ಲಿ ಕೋಮುವಾದ, ಜಾತಿವಾದದ ಗ್ರಹಣ ಬಡಿದಿರುವ ಉತ್ತರ ಪ್ರದೇಶಕ್ಕೆ ಚುನಾವಣೆ ಕಾಲಕ್ಕೆ ಎಲ್ಲ ಪಕ್ಷಗಳೂ ಹದ್ದುಗಳಂತೆ ಹೊಂಚುತ್ತವೆ. ರಾಹುಕೇತುಗಳಂತೆ ಸಮಾಜವಾದಿ ಪಾರ್ಟಿ ಮುಸಲ್ಮಾನ ಸಮುದಾಯವನ್ನು ಓಲೈಸತೊಡಗಿದರೆ, ಬಿಜೆಪಿಗೆ ಈ ಸಮುದಾಯವನ್ನು ದ್ವೇಷಿಸುವುದೇ ಬಂಡವಾಳ. 2013ರಲ್ಲಿ ಮುಜಫ್ಫರ್ ನಗರ-ಶಾಮ್ಲಿಯಲ್ಲಿ ಘಟಿಸಿದ ಕೋಮು ದಂಗೆಯಲ್ಲಿ 50ಸಾವಿರ ಜನರು ಮನೆಮಠ ತೊರೆದು ಗುಳೆಹೋದರು, ನಡೆದ ಬಲಾತ್ಕಾರಗಳ ಸಂತ್ರಸ್ತೆಯರಿಗೆ ನ್ಯಾಯವಿನ್ನೂ ಸಿಕ್ಕಿಲ್ಲ. ಆಗಲೂ ಕಗ್ಗೊಲೆಗಳು ಮತ್ತು ಹಿಂಸೆ, ಅತ್ಯಾಚಾರಗಳಿಗೆ ಪೊಲೀಸರು ಪ್ರಭುತ್ವದ ಪರವಾಗಿಯೇ ಉಳಿದಿದ್ದರು. ಈಗಲೂ ಅವರು ಪ್ರಭುತ್ವದ ಪರವೇ.
ಇದನ್ನೂ ಓದಿ ಮೋದಿ, ಶಾ ಬೆಂಬಲದ ಬಲಪಂಥೀಯ ಶಕ್ತಿಗಳು ದೆಹಲಿ ಬಾಂಬ್ ಸ್ಫೋಟ ನಡೆಸಿರುವ ಸಾಧ್ಯತೆ: ಆದರ್ಶ್ ಅಯ್ಯರ್ ಆರೋಪ
ಭಯವೇ ದೇಶವನ್ನಾಳುತ್ತಿರುವ ಹೊತ್ತಲ್ಲಿ ಭಿನ್ನಾಭಿಪ್ರಾಯವಿಲ್ಲದ ದೇಶವು ’ಸಾಮಾನ್ಯ’ ದೇಶವಾಗಿರಲು ಹೇಗೆ ಸಾಧ್ಯ! ಭಿನ್ನಾಭಿಪ್ರಾಯವಿಲ್ಲದ ರಾಜಕೀಯ ವಾತಾವರಣವು ಅದರ ಆಡಳಿತಗಾರರಿಗೆ “ಅಚ್ಚೇ ದಿನ”ಗಳಾಗಿವೆಯೇ ಹೊರತು ಇಲ್ಲಿ ವಾಸಿಸುವ ನಾಗರಿಕರಿಗಲ್ಲ. ಭಿನ್ನಾಭಿಪ್ರಾಯ, ಹಗೆತನ ಮತ್ತು ವಿರೋಧದ ಹೊರತಾಗಿಯೂ ಹಲವಾರು ತಲೆಮಾರುಗಳಿಂದ ಬಾಳಿ ಬದುಕುತ್ತಿರುವವರನ್ನು ಇದ್ದಕ್ಕಿದ್ದಂತೆ ’ಅನ್ಯ’ರಾಗಿಸುವ ನೀತಿಯನ್ನು ಗ್ರಹಿಸುವುದಾರೂ ಹೇಗೆ?
ನ್ಯಾಯಾಂಗವು ಪ್ರಜಾಪ್ರಭುತ್ವದ ಕೊನೆಯ ರಕ್ಷಣಾಕೋಟೆ ಅದು ಕುಸಿದರೆ, ನ್ಯಾಯವೂ ಕಳೆದುಹೋಗುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಸ್ವಾಯತ್ತತೆಯೇ ನ್ಯಾಯಾಂಗದ ನೈತಿಕ ಬಲ. ಅದು ಸ್ವಾಯತ್ತವಾಗಿರದಿದ್ದರೆ ನಾಗರಿಕರ ಹಕ್ಕುಗಳೇ ಅಪಾಯಕ್ಕೀಡಾಗುತ್ತವೆ. ಹಾಗಾಗಿ ನ್ಯಾಯಾಂಗವು, “ನ್ಯಾಯ”ವನ್ನು ಬದುಕಿಸಲಿ, ಉಮರ್ ಹಾಗೂ ಗೆಳೆಯರನ್ನು ಗೆಲಿಸುವಂತಾಗಲಿ ಎಂದೇ ಈ ಹೊತ್ತಿನ ಆಶಯ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




