ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲೋನ್ ಮಸ್ಕ್ ಅವರ ಸಂಪತ್ತು ಕಳೆದ ತಿಂಗಳು 64 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ. 2026ರ ಆರಂಭದಲ್ಲಿ ವಿಶ್ವದ ಹತ್ತು ಶ್ರೀಮಂತ ವ್ಯಕ್ತಿಗಳ ಪೈಕಿ ಆರು ಮಂದಿಯ ನಿವ್ವಳ ಆಸ್ತಿ ಮೌಲ್ಯವು ತೀವ್ರವಾಗಿ ಕುಸಿದಿದ್ದರೂ ಸಹ ಮಸ್ಕ್ ಅವರ ಸಂಪತ್ತು ವೃದ್ಧಿಯಾಗಿದೆ ಎಂದುಅ ಅಮೆರಿಕದ ಮಾಧ್ಯಮ ಸಂಸ್ಥೆ ‘ಫೋರ್ಬ್ಸ್’ ವರದಿ ಹೇಳಿದೆ.
ಮಾರ್ಚ್ 1ರಂದು ಫೋರ್ಬ್ಸ್ ಬಿಡುಗಡೆ ಮಾಡಿದ ”ರಿಯಲ್-ಟೈಮ್ ಬಿಲಿಯನೇರ್ಸ್ ಲಿಸ್ಟ್’ ಪ್ರಕಾರ, ಮಸ್ಕ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಗೂಗಲ್ ಸಹ-ಸ್ಥಾಪಕ ಲ್ಯಾರಿ ಪೇಜ್ ಅವರಿಗಿಂತ ಅರ್ಧ ಟ್ರಿಲಿಯನ್ ಡಾಲರ್‌ಗಿಂತಲೂ ಅಧಿಕ ಸಂಪತ್ತು ಹೊಂದಿದ್ದಾರೆ. ಮಸ್ಕ್ ಅವರ ಒಟ್ಟು ಸಂಪತ್ತು 800 ಬಿಲಿಯನ್ ಡಾಲರ್‌ಗಳ ಗಡಿಯನ್ನು ದಾಟಿದೆ. ಆದ್ದರಿಂದ, ಅವರು 1 ಟ್ರಿಲಿಯನ್ ಡಾಲರ್ ಆಸ್ತಿ ಹೊಂದಲಿರುವ ಮೊದಲ ವ್ಯಕ್ತಿಯಾಗಲಿದ್ದಾರೆ ಎಂದು ಅಂದಾಜಿಸಿದೆ.
ಎರಡನೇ ಸ್ಥಾನದಲ್ಲಿರುವ ಲ್ಯಾರಿ ಪೇಜ್ ಅವರ ಅಂದಾಜು ಆಸ್ತಿ 250.5 ಬಿಲಿಯನ್ ಡಾಲರ್ ಆಗಿದೆ. ಅವರು 2025ರ ನವೆಂಬರ್‌ನಲ್ಲಿ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಒರಾಕಲ್ ಸಹ-ಸ್ಥಾಪಕ ಲ್ಯಾರಿ ಎಲಿಸನ್ ಅವರನ್ನು ಹಿಂದಿಕ್ಕಿದ್ದಾರೆ. ಎಲಿಸನ್ ಈಗ 6ನೇ ಸ್ಥಾನದಲ್ಲಿದ್ದಾರೆ.
ಕಳೆದ ತಿಂಗಳು 9ನೇ ಸ್ಥಾನದೊಂದಿಗೆ ಟಾಪ್ 10 ಪಟ್ಟಿಗೆ ಪ್ರವೇಶಿಸಿದ್ದ ಝಾರಾ (Zara) ಸಹ-ಸ್ಥಾಪಕ ಅಮಾನ್ಸಿಯೊ ಒರ್ಟೆಗಾ, ಈಗ 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಾಲ್ಮಾರ್ಟ್ ವಾರಸುದಾರ ರಾಬ್ ವಾಲ್ಟನ್ ಮತ್ತು ಕುಟುಂಬವು ಒರ್ಟೆಗಾ ಅವರನ್ನು ಹಿಂದಿಕ್ಕಿ 145.9 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ 9ನೇ ಸ್ಥಾನವನ್ನು ಪಡೆದುಕೊಂಡಿದೆ.
| ಕ್ರ. ಸಂ. | ಹೆಸರು | ಸಂಪತ್ತು (ಡಾಲರ್) | ಉದ್ದಿಮೆ | ವಯಸ್ಸು | ದೇಶ |
| 1 | ಎಲೋನ್ ಮಸ್ಕ್ | $841.4B | ಟೆಸ್ಲಾ, ಸ್ಪೇಸ್‌ಎಕ್ಸ್ | 54 | ಅಮೆರಿಕ |
| 2 | ಲ್ಯಾರಿ ಪೇಜ್ | $250.5B | ಗೂಗಲ್ | 52 | ಅಮೆರಿಕ |
| 3 | ಸೆರ್ಗೆ ಬ್ರಿನ್ | $231.2B | ಗೂಗಲ್ | 52 | ಅಮೆರಿಕ |
| 4 | ಜೆಫ್ ಬೆಜೋಸ್ | $229.7B | ಅಮೆಜಾನ್ | 62 | ಅಮೆರಿಕ |
| 5 | ಮಾರ್ಕ್ ಜುಕರ್‌ಬರ್ಗ್ | $228.9B | ಫೇಸ್‌ಬುಕ್ (ಮೆಟಾ) | 41 | ಅಮೆರಿಕ |
| 6 | ಲ್ಯಾರಿ ಎಲಿಸನ್ | $197.1B | ಒರಾಕಲ್ | 81 | ಅಮೆರಿಕ |
| 7 | ಜೆನ್ಸನ್ ಹುವಾಂಗ್ | $158.5B | ಸೆಮಿಕಂಡಕ್ಟರ್ | 63 | ಅಮೆರಿಕ |
| 8 | ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ | $157.1B | LVMH | 77 | ಫ್ರಾನ್ಸ್ |
| 9 | ರಾಬ್ ವಾಲ್ಟನ್ ಮತ್ತು ಕುಟುಂಬ | $145.9B | ವಾಲ್ಮಾರ್ಟ್ | 81 | ಅಮೆರಿಕ |
| 10 | ವಾರೆನ್ ಬಫೆಟ್ | $144.1B | ಬರ್ಕ್ಷೈರ್ ಹ್ಯಾಥ್‌ವೇ | 95 | ಅಮೆರಿಕ |
1 ಬಿಲಿಯನ್ ಡಾಲರ್ = 92,120 ಕೋಟಿ ರೂ.





