(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಈ ಬೀಪಿ, ಸುಗರ್ ಈಟ್ ಜಲ್ದಿ ಯಾಕ್ ಬರ್ಲತಾವ್ ಅಲ್ಲತೀರಿ? ಕಿದ್ಕೆ - ಡ್ಯೂಟಿಗಿ ತಡಾ ಆದುರ್ ಆಫಿಸರ್ ಏನಂತರೋ ಅಂತ ಒದ್ದಾಡಾದು. ಸಂಜಿ ಮುಂದ್ ಮನಿಗಿ ಬರ್ಲಾಕ್ ತಡ ಆದರ್, ಮಕ್ಕುಳು ಬಂದಾವೋ ಏನೋ, ಮನ್ಯಾಗ್ ಏನಂತರೋ ಏನೋ ಅಂತ ಚಡಪುಡ್ಸತೇವು...
ಐ… ಮೂರಾನ್ ಮೂರ್ ದಿನಾ ಆಯ್ತು ಮಳಿ ಬಿಡಲೊಂಟುದ. ರಪರಪ ಅಂತ ಬಂದು ಹೋದುರ ನಿವಾಂತ ಇರ್ತದ. ಖಿಂಗ್ ಜಿಂಯಿ… ಅಂತ ಹಿಡ್ಕೊಂಡು ಕುಂತುದ್… ರಾತ್ರಿ ಬೆಳಗನ ಬಂದು ಮುಂಜಾನಿ ಥೋಡೆ ಬಿಸಲ್ ಬಿದ್ದುರ ಏಟ್ ಛಂದ್ ಇರ್ತದ… ಇದು ಏನ್ ಚೇಟ್ ಮಳಿ… ಜೇ… ಅಂತ ಹರಿಬಿದ್ದದ. ಈ ಮಳಿ ಹೆಂಗ್ ಬಂದುರಬಿ ನನಗೇನ್ ಫರಖ್ ಬಿಳ್ತಿದಿಲ್ರಿ. ಏಟ್ಯಾಕ್ ಬಿಳಲದ್ಯಾಕ್. ಬಿಸೀ ಬಿಸಿದು ಸವತಿ ಬೀಜದ್ ಹುಗ್ಗಿ, ಹಪ್ಪುಳ್ ಕರ್ಕೊಂಡು, ಮಸ್ತ ಉಂಡು ಮಕೋತಿದ ಖರೆ. ಅಂಥಾ ಸುಖದ್ ಜಿಂದಗಿ ನಮ್ ಹಣೆಬರ್ದಾಗಿಲ್ಲಲ…
ಎಲ್ಲರಪ್ಲೆ ನಸೀಬ್ ಬರ್ಕೊಂಡು ಬಂದಿಲ್, ಆ ಸೆಟ್ಗಿ ಕೈ ಮ್ಯಾಗ್ ಮಣ್ಣ ಬಿಳ್ಳಿ. ಖಿಂಥಾದು ಬರ್ದ ಇಕ್ಯಾದ್… ಮನ್ಯಾಗ್ ಬಿ ನಾವೇ ಸಾಯ್ಬೇಕು, ಹೊರಗ್ ಬಿ ನಾವೇ ಸಾಯಬೇಕು. ಈ ನೌಕ್ರಿಲಿಂದ ಖಾಂದಾನ್ದಾಗ ಇಜ್ಜತ್ ಸಿಗಾದ್ ಹೆಂಗರ ಇರ್ಲಿ ಜಿವಕೇನ್ ಥೋಡೆ ಹರರತ್ ಐಯ್ತದಾ? ನೌಕ್ರಿ ಮಾಡಾ ಹೆಣ್ಮಕ್ಕುಳಿಗೇ ಗೊತ್ತದ ಅದರ್ ತಕ್ಲೀಫ್ ಏನದಾ ಅಂಬದು.
ಮುಂಜಾನೆದ್ದು ಮನ್ಯಾಗಿಂದೆಲ್ಲಾ ಧಂದ್ಯಾ ಮಾಡಿ ಮುಗ್ಸಿ, ಹೊಟ್ಟಿ ಖಬರಿಲ್ದಪ್ಲೇ ಡ್ಯೂಟಿಗೋಡಬೇಕು…
“ಯವ್ವಾ ಆಟೋ ಬಿಟ್ತೋ ಏನೋ? ದೇವರ್ ಪುಣ್ಯಲಿಂದ್ ಆಟೋ ಬಿಡಬ್ಯಾಡ್ದು…” ಅಂತ ಅನ್ಕೋತ, ಟೆನ್ಶನ್ನಂದುರ ಟೆನ್ಶಶ್ ಮಾಡ್ಕೋತಾ ಹೋಯ್ತೇವು. ನಮಗ್ ಅರ್ಜೆಂಟ್ ಇದ್ದಾಗ ಒಂದೊಂದ್ ಆಟೋ ಸಿಗಲ್ರಿ… ನಮಗ್ ಎಲ್ಲಗ್ಬಿ ಹೋಗದಿರ್ ಬ್ಯಾಡ್ದು ಅವಾಗ ಏಸ್ ಆಟೋ ಅಂತೀರಿ! ಒಂದ್ ಶಂಬೋರ್ ಆಟೋಗೋಳು, “ಬರ್ತಿರೇನ್… ಬರ್ತಿರೇನ್?” ಅಂತ ಕೇಳೇ ಕೇಳ್ತಾವ್…
…ಮನ್ಯಾಗ ಹರಾರತ್ ಅಂದೂರ ಹರಾರತ್ ಮಾಡ್ಕೊಂಡು ಆಟೋ ಸ್ಟ್ಯಾಂಡಿಗಿ ಬಂದು ಆಟೋದಾಗ ಕುಂತುರಾ, ಅವೇನ್ ಟೈಮಿಗಿ ಬಿಡ್ತಾವಂತೀರಿ? ಊಹುಂ… ಖತೈಯಿ ಬಿಡಲ್ಲ. ಆಟೋದಾಗ ಕುಂತ ಮ್ಯಾಗ ಒಂದ್ ಘಂಟಾ ಮಾಡ್ತಾವ್… ನಾವು ಟೈಮಾಗ್ಯಾದಂತ್ಹೇಳಿ, “ಏ ತಮ್ಮ, ನಡಿನೋ ಬಿಟಾ. ಜರಾ ಟೈಮ್ ಆಗ್ಯಾದ. ನಡಿ ಎಪ್ಪ, (ನಡಿ ಎಣ್ಣಾ/ ಕಾಕಾ/ ಬಾಬಾ)” ಅಂತ ಅಜೀಜಿ ಅಜೀಜಿ ಆಗಿ ಕೇಳ್ಬೇಕು…
ನಾವ್ ರಿಕ್ವೆಷ್ಟ್ ಮಾಡ್ದಂಗೆಲ್ಲ ಅವರ್ ತಲಿ ಮ್ಯಾಲ್ ನಾಕ್ ಖೋಡ್ ಬರ್ತವ್! ಪುಗಸಟ್ಟೆ ಒಯ್ದಪ್ಲೇನೆ, ಧೀಮಾಕೀಲಿ ನಿಗರ್ಕೋತಾ, “ಮನ್ಯಾಂಗಿಂದು ಜಲ್ದಿ ಬರಬೇಕ್ರಿ ಮೇಡಂ. ಇಲ್ಲಿ ಬಂದು ಗಡಬಡ್ ಮಾಡ್ದುರ್ ಹೆಂಗಾ? ಇದರ್ಕಿಂತ ಪೈಲೆ ಎಡ್ ಆಟೋ ಹೋದುವು. ನಿಮಗೊಬ್ರೀಗೆ ಒಯ್ದುರ್ ಹೆಂಗ್ರಿ?” ಅಂತ ಮಾರಿ ಮೂಗು ನಿಗರ್ರಿಸಿ ಅಂತಾರ್…
ನಮ್ದ ಆಗಾತಿ ಇರ್ತದಲಾ ಅದ್ಕ್, “ಐ ನಾಕ್ ಮಂದಿ ಹರ ಅಲಾ ತಮ್ಮ ನಡಿ. ಜರಾ ಲೇಟ್ ಆಗ್ಯಾದ್ ಬಿಟಾ. ತಡ ಆದುರ ಬೈಸ್ಕೋಬೇಕಾಯ್ತದ ನಡಿ ಬಿಟಾ, ನಡಿ…” ಅಂತ ಮತ್ ರಮಸ್ ಬೇಕು. ಅವಗರಾ ಅವುರ್ ಖೋಡ ಮತ್ತೀಟ್ ಉದ್ದುಕ್ ಆಗಿ ಮ್ಯಾಕ್ಂದುರ್ ಮ್ಯಾಕ್ ಹೊಯ್ತಾವ್.
“ಅರೆ ನಾಕ್ ಮಂದಿಗಿ ಒಯ್ದುರಾ ನಮ್ಗ ಎಣ್ಣಿ ರೊಕ್ಕಾ ಬಿ ಆಗಲ್ರಿ ಮೇಡಂ. ನಿಮಗ್ ಅರ್ಜಂಟ್ ಇದ್ದುರಾ ಆರ್ ಸೀಟಿಂದು ರೊಕ್ಕ ಕುಡ್ರಿ, ಒಯ್ತೆ. ಇಲ್ಲ, ಸಪರೇಟ್ ಆಟೋ ಕಟ್ಕೊಂಡು ಹೋಗ್ರಿ,” ಅಂತಾರ.
ಅವಾಗೆಲ್ಲ ಏಟ್ ಸಿಟ್ ಬಂದುರ್ಬಿ ಸುಮ್ಮುನ್ ಕುಂದರ್ಬೇಕೈತದ. ಯಾಕುಂದುರ, ಇವರೀಗಿ ಬಿಟ್ಟುರ ಬ್ಯಾರೇ ಗತಿ ಬಿ ಇರಲ್ ಅಲಾ. ಅದ್ಕ ಬಾಯಿ ಮುಚ್ಕೊಂಡು ಒಳಗೊಳಗೆ ಟೆನ್ಶನ್ ಮಾಡ್ತೋತಾ ಕುಂದುರ್ತೇವ್. ಇವರಿಗೇನ್ ಗೊತ್ತಿರ್ತದ ನಮ್ಮನಿ ತಕ್ಲೀಫ್?
ಮನ್ಯಾಂದು ಜಲ್ದಿ ಬರ್ಬೇಕಂತ… ಬರ್ಲಾಕ್ ಆದುರಾ, ನಾವೇ ಬರ್ತೇವಲಾ? ಇವರ್ ಕೈಲಿ ಯಾಕ್ ಅನ್ಸಗೋತೇವು? ಮನ್ಯಾಗ ಮುಂಜ ಮುಂಜಾನಿ ತರುಸ್ಕೋಲಾಕ್ ಬಿ ಪುರಸೊತ್ತು ಇರಲಾ. ಓಟ್ ಧಂದ್ಯಾ ಇರ್ತದ. ಒಂದ್ ಸೆಕೆಂಡ್ ಅಳಗಾಡಲ್ದಪ್ಲೆ ದಂದ್ಯಾ ಮಾಡ್ದುರ್ ಭಿ ಕೀಟ್ ಹೊತ್ತೈತುದ. ನಸುಕಿನಾಗ ಚಾರಕ್ ಎದ್ದು, ಮಕೊಂಡೋರಿಗಿ ಹೆಚ್ಚರ್ಕಿ ಆಗ್ಯಾತ್ಗಿನಾ ಅಂತ ಹಳ್ಳುಗ ಜರಾ ಬಿ ಸಪ್ಪುಳ ಆಗಲ್ದಪ್ಲೆ ಒಳಗಿಂದ್ ಹೊರಗಿಂದೆಲ್ಲ ಉಡ್ಗಿ ಒರ್ಸ್ಯಹಾಕ್ತೇವು. ಮನಿ ಮಂದಿಗೆಲ್ಲ ಅಡ್ಗಿ ಮಾಡಿ, ಊಟುಕ್ಕ ಕೊಟ್ಟು, ಅವರೆಲ್ಲರ್ ಟಿಫನ್ ಕಟ್ಟಿ, ನಾ ಒಂದಿಟು ತಿಂದುರ್ ತಿಂದಾ ಇಲ್ದುರ್ ಇಲ್ಲ. ಹಂಗೆ ಗಡ್ಬಡ್ದಾಗ ಟಿಫನ್ ಕಟ್ಕೊಂಡು ಬರದ್ರಾಗ ಕೀ ಯಾಳಿ ಆಯ್ತದ. ಯಾರ್ದವ್ರಿಗೆ ಗೊತ್ತಿರ್ತದ. ಇವ ಹೇಳತೂನ್ – ಜಲ್ದಿ ಬರ್ಬೇಕಂತ ಜಲ್ದಿ…
“ಐಯ್ತಾ ಆರಾಮ ಎಂಟಕ್ ಎದ್ದು, ಹೆಣ್ತಿ ಮಾಡಿಂದು ಕುತ್ಗೀಗಿ ಬರಾತನ ತಿಂದು ಬರ್ತಾರ. ಧಿಮಾಕಿಲಿ ಮಾತ್ ಹೇಳ್ತಾರಿಲ್ಲಿ…” ಅಂತ ಮನಸೀನಾಗೆ ಬೈಯ್ಕೋತಾ, ಆಟೋ ಥುಂಬಾತನ ಕುಂದೇರ್ತೇವು.
ಕುಂತ ಮ್ಯಾಲರ ನಿವಾಂತ ಇರ್ತೇವ್ ಅಂತೀರಿ? ಹುಂಹೂ… ಜಿವಾ ಮನಿ ಕಡಿಗಿ ಓಡ್ತದ. “ಯವ್ವಾ… ತ್ಚು ತ್ಚು… ಕವೀಸ್ ಅರಬಿ ಹಿಂಡ್ಯಾಕಿ ಬಂದರಾ ನಡೀತೀತ್. ಪಲ್ಯಾ ಏಟ್ ಛಂದ್ ಆಗಿತ್ತು… ಹೊಟ್ಟಿ ತಂಬಾ ಉಂಡುರ್ ಬರ್ತಿತ್ತು. ಇಲ್ಲೇನ್ ಆಟೋ ತುಂಬಿದಿಲ್ಲ ಏನಿಲ್ಲ. ಕದೀಟ್ ಘ್ಯಾಸ್ ಕಟ್ಟಿ ಸೂಟ್ಕೊಂಡು, ಅವ್ ನಾಕ್ ಭಾಂಡ್ಯಾ ತೊಳ್ದಾಕಿ ಬಂದರ್ ನಡಿತಿತ್ತ ನೋಡ್. ಹೊತ್ತ ಮುಣ್ಗತನ ಟೆನ್ಶನ್ ಇರ್ತೀದಿಲ್ಲ. ಸುಳ್ಳೇ ಗಡ್ಬಡ್ ಮಾಡಿ ಬಂದೆವ್ವ. ಆಟೋ ತುಂಬಲಾಕ್ ಇನಾ ಏಟ್ಹೊತ್ತ ಐಯ್ತಾದೋ ಏನೋ? ಅಂತ ಹಳಹಳ್ಸಕೋತ ಕುಂದರ್ತೇವು.
ಇವತ್ತ ಬಿ ಬೈಸ್ಕ್ಕೊಬೇಕಲಾ, ಈ ಆಟೋ ಬಿ ಬಿಡಾಲ್ಹೋಂಟುತು ಅಂತ ಪಿಚಕ್-ಪಿಚಕ್ ಮಾಡ್ಕೋತ, ಇಲ್ದೊಂದು ವಿಚಾರ್ ಮಾಡ್ಲಾಕ್ ಸುರು ಮಾಡ್ತೇವು. ಈ ಆಟೋದೋರ್ ಚಿಂತಿಭಿ ನಾವೇ ಮಾಡ್ತೇವು. ನಮಗಂದುರ ಸರಕಾರ್ ನೌಕರಿ ಅದಾ. ಪಾಪ… ಇವರ್ದ ಬಿ ಹೊಟ್ಟಿ ತುಂಬಬೇಕಲಾ? ಆಟೋ ತುಂಬಾ ಮಂದಿ ಬಂದುರೇ ಎಣ್ಣಿ ಖರ್ಚ ಹೋಗಿ ಥೋಡೆ ರೊಕ್ಕ ಉಳಿತಾವ. ಅವರ್ದ ಬಿ ಸಂಸಾರ ಅದಾ ಪಾಪ…”
“ಹಿರೇರ್ದು ಥೋಡೆ ಥೋಡೆ ಅರಾ ಅರಾ ಆಸ್ತಿ ಇದ್ದುರಾ ಈಟ್ ಖಟ್ಪಿಟಿ ಆಗಲ್ದು. ನಾವ್ ಬಿ ಯಾರಿಗರಾ ಕೆಲ್ಸದಕಿಗಿ ಇಟ್ಕೋತಿದೇವು… ಏನ್ಮಾಡದು? ನಮ್ಮ ಕೆಲ್ಸಾ ನಾವು ಮಾಡ್ಕೊಂಡುರಾ ನಾಕ್ ದುಡ್ಡು ಉಳ್ಸಬೌದು ಅಂತ ಬಡ್ದಾಡ್ತೇವು…” ಹಿಂಗೆ ಆಟೋ ಬಿಡಾತನ ನೂರಾ ಎಂಟು ವಿಚಾರ್ ಮಾಡ್ಕೋತಾ, ಚಡಪುಡ್ಸಕೋತಾ ಕುಂದರ್ತೇವು.
ಈ ಬೀಪಿ, ಸುಗರ್ ಈಟ್ ಜಲ್ದಿ ಯಾಕ್ ಬರ್ಲತಾವ್ ಅಲ್ಲತೀರಿ? ಕಿದ್ಕೆ. ಡ್ಯೂಟಿಗಿ ತಡಾ ಆದುರ್ ಆಫಿಸರ್ ಏನಂತರೋ ಅಂತ ಒದ್ದಾಡಾದು. ಸಂಜಿ ಮುಂದ್ ಮನಿಗಿ ಬರ್ಲಾಕ್ ತಡ ಆದರ್, ಮಕ್ಕುಳು ಬಂದಾವೋ ಏನೋ, ಮನ್ಯಾಗ್ ಏನಂತರೋ ಏನೋ ಅಂತ ಚಡಪುಡ್ಸತೇವು. ಹಿಂಗೆ ಒಟ್ ಬಡ್ದಾಡದೇ ಜಿಂದಗಿ ಆಗಿ ಕುಂತದ…
ನಿವಾಂತ ಉಂಬದಿಲ್ಲ, ತಿಂಬದಿಲ್. ಕುಂತು ಖುಷೀಲಿ ನಾಕ್ ಮಾತಾಡದಿಲ್ಲ. ನಗದಿಲ್ಲ. ಹಬ್ಬ-ಹುಣ್ಣಿ, ಕಾರಣ ಕಟ್ಟುಣ ಯಾವದ್ಬಿ ಇಲ್ಲ. ನೆಂಟುರ್ ನೆಲ್ಲುರರ ವಾಳಿ ಹಾಕಿದ ಲೆಕ್ಕಾನೆ ಅಗ್ಯಾದ ಅಂತ್ ತಿಕ್ಳೋರಿ ನೀವು. ಹಿಂಗೆ ಡ್ಯೂಟಿ-ಡ್ಯೂಟಿ ಅನ್ಕೊತಾ ಓಡದೇ ಓಡದ್… ಓಡದೇ ಓಡದ… ಇದು ಒಂದ್ ದಿನದ್ ಮಾತಿಲ್ಲರಿ… ಬಾರಾ ಹಮೇಶ ಈಟೆ ಇರ್ತದ.
ಈ ಗಂಡ ಮತ್ ನೌಕ್ರಿ ಎಡ್ಡು ಅಣ್ಣ ತಮ್ಮುರ್ ಇದ್ದಪ್ಲೆ ರಿ. ಸಿಗಾತನ ಒಂದು, ಸಿಕ್ ಮ್ಯಾಲ ಒಂದು. ಸುರು ಸುರು ಮದಿ ಆದಾಗ ಏಟ್ ಖುಷಿ ಏನ್ ಸುದ್ಧಿ! ಅವ್ವ-ಅಪ್ಪುನ್ ಮನಿಕಿಂತ ಗಂಡನ ಮನ್ಯಾಗ ತೋಲ್ ಸುಖ ಇರ್ತದ ಅನ್ಕೊಂಡು ಬರ್ತೇವು. ಒಂಥೋಡೆ ದಿಂದಾಗೆ ತಿಳಿತ್ ಗಂಡನ ಸುಖ. ಅದರಪ್ಲೇನೆ ಈ ನೌಕ್ರಿ ಸುಖ ಅಂತ ತಿಳ್ಕೋರಿ. ನಮಗೊಂದು ನೌಕ್ರಿ ಸಿಕ್ಕುರ ತೋಲ್ ಆರಾಮಿರ್ತದ ಅನ್ಕೋತೇವು. ನೌಕ್ರಿ ಸಿಕ್ ಮ್ಯಾಲ ಖೆಮ್ಮಿನ ಸಂಗಟ್ ದಮ್ ಬಿ ಫ್ರೀ ಬಂದಪ್ಲೇ ಆಯ್ತದ!
ಇರ್ಲಿ, ಥೋಡೆ ಜಿವಕ್ ಹರಾರತ್ ಆದುರ್ ಬಿ ಆಗ್ಲಿ. ನೌಕರ್ದಾರ್ ಹೆಣ್ಮಕ್ಕುಳ್ ಅಂತ ಕಿಮ್ಮತ್ ಸಿಗ್ತದ. ಗಂಡ ನಿಗುರ್‌ಕೊಂಡ್ ಹೋದುರ್ ಬಿ ನಮ್ದ ನಾವ್ ಬದುಕ್ತೇವ್ ಅಂಬಾ ಹಿಮ್ಮತ್ ಇರ್ತದ. ಮತ್ ಪರ್ಗೋಳಿಗಿ ಚಂದ್ ಓದ್ಸದ್ ಐಯ್ತುದ. ಚಂದನ್ ಅರಬಿ ಅಂಚಟಿ ಉಡಾದೈಯ್ತುದ. ಮಳಿ-ಬೆಳಿ ಬ್ಯಾನಿ ಬ್ಯಾಸರ್ಕಿ ಏನ್ ಬಂದುರ್ಬಿ ಪಗಾರ ಗಟ್ಟಿ ಇರ್ತದ. ಯ್ಯಾಳೆ ಆಪತ್ತಿಗಿ ಲೋನ್ ಸಿಗ್ತದ. ಅದ್ಕ ನೌಕರಿ ಅಂಬಾದು ಇರಬೇಕು ಅಂತ ಥೋಡೆ ಹೈರಾಣ ಆಯ್ತದ್ ವೋಟೆ ಅಂತ ಮತ್ ನಮ್ಗ ನಾವೇ ಸಮಾಧಾನ ಮಾಡ್ಕೋತೇವು.
ಬಾಕಿ ಟೈಮಿಗಿ ಹ್ಯಾಂಗರಾ ಮಾಡ್ತೇವು ಖರೆ, ಖಿಂಗ್ ಜಿಟಿಜಿಟಿ ಮಳಿ ಹಿಡಿತಂದುರೇ ಸಾಕ್ ಸಾಕ್ ಐದುತ. ಛಳ್ಯಾಗ್ ಕೈ ಕಾಲ್ ಜುಮ್ ಹಿಡ್ದು, ಬೆಚ್ಚಗ್ ಮುಚ್ಕೊಂಡು ಮಕೋಬೇಕ್ ಅನಸ್ತಿರ್ತದ. ಅಂಥಾ ಟೈಮಿನಾಗ ಮನೀ ಮಂದಿ, “ಒಂಥೋಡೆ ಭಜಾ ಹಾಕಿ ಕೊಡು… ಸೇಂಗಾ ಹುರ್ದು ಕೊಡು… ಜರಾ ಸುಂಠಿ ಹಾಕಿ ಚಾ ಮಾಡು… ಶ್ಯಾವಿಗಿ ಸುಸ್ಲಾ ಮಾಡು… ಐ ಒಂದಾ ಎರ್ಡಾ? ಸಾಕ್ ಸಾಕ್ ಐಯ್ತದ… ಎಡ್ಡೆಡ್ ಸಲ ಚಾ ಕಾಸ್ಬೇಕು, ತೊಳ್ದಿಡಬೇಕು. ಅವರೆಲ್ಲೆಲ್ಲಿ ಕುಂತಾರ, ಅಲ್ಲೆಲ್ಲ ಒಯ್ದು ಕೊಡಬೇಕು. ನನಗೊಬ್ಬಕಿಗಿ ಬಿಟ್ಟು ಉಳ್ದೋರಿಗೆಲ್ಲರೀಗಿ ಛಳಿ ಐಯ್ತಾವ್, ನನಗೆ ಆಗಲ್ಲ! ನನಗ ಜಿವಾ ಅದಾನ ಇಲ್ಲ ಅಂತ ಒಮ್ಮೊಮ್ ಕನ್ಫಫ್ಯೂಜ್ ಆಯ್ತದ. ಒಡಾಡಿ ದಂಧ್ಯಾ ಮಾಡದ್ರಾಗ ಈ ಛಳಿ ಬಿ ನನಗ ಬಿಟ್ಟು ಅವರ್ ಬಲ್ಲೇ ಹೋಗಿ ಕುಂದರ್ತಿರ್ಬೇಕ್!
ಒಮ್ಮೊಮ್ ಈಟ್ ಸಿಟ್ ಬರ್ತದ. ಅತ್ತಿ ಏನರಾ ಕೇಳ್ದುರಾ, “ಎದ್ದ ತಕೋರಿ…” ಅಂತ ಅನಬೇಕಂತ ಅನಸ್ತದ. ಖರೆ ಸುಮ್ಮುನ್ ಇರ್ತಾ. ಯಾಕಂದುರ, ಜವಾನಿದಾಗ ಅಕಿ ಭಿ ಖಿಂಗೆ ಮಾಡಿರ್ ಬೇಕು ಪಾಪ ಅಂತ್ಹೇಳಿ ತಾಳ್ಕೊಂಡು ನಡಿತಾ.
ಮಕ್ಳದ್ ಏನ್ ಹೇಳದ್ ಅಂತೀರಿ? ಅವರಿಗರ ಓದದೇ ಇರ್ತದ. ನಮ್ಮಪ್ಲೇ ಮನಿ ದಂದ್ಯಾ ಮಾಡಿ ಮಟ್ಟಿ ಓದ್ದೂರ ಪರ್ಸೆಂಟೇಜ್ ಕಮ್ ಬಂದು, ಡಾಕ್ಟರ್-ಇಂಜಿನಿಯರ್ ಆಗಾದೈತುದಾ? ಡಾಕ್ಟರ್-ಇಂಜಿನಿಯರೇ ಯಾಕಾ ಎಲ್ಲದ್ರಾಗ ದುನ್ಯಾದ್ ಕಾಂಪಿಟೇಶನ್ ನಡ್ದದ್. ಹಿಂಗಾಗಿ, ಎಲ್ಲಾ ಮೈ ಮ್ಯಾಲ್ ಹಾಕ್ಕೊಂಡು, ಓಟೂ ದಂದ್ಯಾ ಒಬ್ಬರೇ ಮಾಡಿ ಡ್ಯೂಟಿಗಿ ಬರ್ತೇವು. ಇವ್ರಿಲ್ದುರಾ ಜಲ್ದಿ ಬರಬೇಕ್ರಿ… ಅಂತಾ ನಮ್ಗೆ ಪಾಠ ಹೇಳ್ತರ.
ಸಿಟ್ ಬರ್ತದ ಖರೆ… ಏನ್ ಮಾಡ್ತೀರಿ, ನಾವೇ ಚೂಜ್ ಮಾಡಿಂದ್ ಜಿಂದಗಿ ಅದಾ ಇದು. ಹ್ಯಾಗಿದ್ಜೂರ್ಬಿ ತಾಳ್ಬೇಕೈತುದ. ಅದ್ಕ ಮುಂದ ನೋಡಿ ಓಡದೇ ಓಡದ್. ಜಿಂದಗೀ ಭರ್ ಓಡಿ ಓಡಿ, ಸಾಠಿ ವರ್ಷ ಆದ ಮ್ಯಾಲ್ ಹಿಂದುಕ್ ತಿರುಗಿ ನೋಡ್ದುರ… ಈಟ್ಯಾಕ ಓಡ್ದೇವು ಅನಸ್ತದೋ ಏನೋ… ಖರೆ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ




