ಕುಮಟಾ ಸೀಮೆಯ ಕನ್ನಡ | ಉತ್ತರ ಕನ್ನಡದ ಅಡ್ಗಿ ಮನಿ ರಾಜ ಮತ್ತು ಹಿಂದಿನ ಮನಿ ಪಾರ್ವತಕ್ಕ

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ನಮ್ಮೂರ ಬದಿಗೆ, ಹೀರಿಕಾಯಿ ಇರ್ಲಿ ಸೊಪ್ಪಿರ್ಲಿ, ರೊಟ್ಟಿ ಇರ್ಲಿ ಒಂದ ರಾಶಿ ಕಾಯಿಸುಳಿ ಹಾಕ್ಬಿಟ್ರೆ ನಮ್ಗ ಹನಿ‌ ಸಮಾಧಾನ. ಅದ್ಕೆ ಯಾವ ರುಚಿನೂ ಸರಿಗಟ್ಟುಕೂ ಆಗುದಿಲ್ಲ ಬಿಡಿ. ಇನ್ನು, ಸಾರು ತರಕಾರಿದಿರ್ಲಿ ಮೀನಿರ್ಲಿ, ಕೋಳಿ ಸಾರೇ ಇರ್ಲಿ, ಕಾಯಿ ಮಸಾಲಿ ಇಲ್ದೆ ನಮಗೆ ಅಡ್ಗಿ ಮಾಡುಕೇ ಬರುದಿಲ್ಲ

“ತಂಗಿ, ಕಾಯ್ ಮರ ಹತ್ತುಕೆ ಯಾರರೂ ಸಿಕ್ಕುರೇನೆ… ಮನಿಲ ಒಂದ ಕಾಯೂ ಇಲ್ಲ ಮಾರೆತಿ. ಹನ್ನೆಡ ಗಂಟಿ ಅತೇ ಬಂತ, ಹನಿ ಅಡ್ಗಿನೂ ಆಲೆಲಾ… ತಮ್ಮ ಉಣ್ಣುಕ ಬರುಕಾಯ್ತ…”

-ಹಿಂದಿನ ಮನಿ ಪಾರ್ವತಕ್ಕ ನಮ್ಮನಿ ಅಂಗಳ ಗ್ವಾಡಿದಲಿ ನಿಂತು ಕೇಳದ್ಕುಡ್ಲೆಯಾ…

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇಲ್ವೆ ಪಾರ್ವತಕ್ಕ… ಯಾರೂ ಸಿಕ್ಕುದೆಲಾ… ನಮ್ಮನಿದೇ ಎರ್ಡ ಕೊಡ್ತಿ ಇರ ತಕಂಡೋಗ್ಲಕಾ,” ಅಂದಿ ಕತ್ತಿ ತಕಂಡಿ ಎರಡ ಕಾಯ ಸುಲ್ದಿ ಕೊಟ್ಟೆ.

“ನಮ್ಮನಿ ಕಾಯ್ ಕೊಯ್ದು ಕುಡ್ಲೆ ಕೊಡ್ತಿ ಅಪು ಹಾಂ… ಅಂವ ಹಾಳಾಗೋಗ್ಲೆ ಯಾವಾಗ್ ಬತ್ನೇನ…” ಹೇಳಿ ಪಾರ್ವತಕ್ಕ ಕಾಯನ ಜುಬರ ತೆಕ್ಕಂತಿ ಮನಿಗ ಹೋಯ್ತು.

ಈ ಕಾಯಿ ಅಂದ್ರೆ ತೆಂಗಿನಕಾಯಿ. ಒನ್ನಮ್ನಿ ನಮ್ಮ ಉತ್ತರ ಕನ್ನಡದ ಅಡ್ಗಿ ಮನಿ ರಾಜ ಇದ್ದಂಗೇಯ.

ಬೆಳಗ್ಗಿನ ತಿಂಡಿಂದ ಹಿಡ್ಕಂಡಿ ಪಲ್ಯ, ಸಾರು, ಪೂಜೆ, ಉಡಿ ಯಾವ್ದಕ್ಕೂ ಈ ಕಾಯಿ ಇಲ್ದಿದ್ರೆ ನೆಡುದೇ ಇಲ್ಲ.  

ಪ್ರತೀ ಮನಿಲೂ ಮನಿಗ ಸಾಕಾಗೊಷ್ಟಾರೂ ಕಾಯ್ ಮರ ಇಲ್ದಿದ್ರೆ, ಅವ್ರಿಗ್ ಜೀವನ ಕಳುದು ಬಾಳ ಕಷ್ಟನೇಯಾ.

ನಾ ಮೊದ್ಲು ವಿಜಾಪುರ ಶಾಲಿ ಜಾಯಿನ್ ಆದಗೆ, ರೂಮ್ ಮಾಡಿದ್ ದಿನಾನೇ ಅಡ್ಗಿ ಮಾಡುಕ ಹೋದೆ. ಅನ್ನ ಆದ್ಮೇಲ‌ ಮಸಾಲಿ ಅರುಕೆ ಕಾಯ್ ಬೇಕಾಯ್ತಲಾ… ನಾನು ನಮ್ಮನಿಯವ್ರು ರಸ್ತಿ-ರಸ್ತಿ ತಿರ್ಗಿ ಕಾಯ್ ಹುಡ್ಕಿದ್ರೆ… ಕಾಯ್ ಎಲ್ಲದೆ? ಎಷ್ಟು ಹುಡ್ಕದ್ರೂ ಯಾವ ಅಂಗ್ಡಿಲೂ ಕಾಯೇ ಇಲ್ಲ…  

ಅಂಗ್ಡಿ ತಿರ್ಗಿ-ತಿರ್ಗಿ ಸಾಕಾಗಿ, ಇಲ್ಲಿ ಕಾಯೇ ಇಲ್ದೇ ಹೆಂಗ ಜೀವ್ನ ಮಾಡುದಪ್ಪಾ ಅಂದಿ ಇನ್ನೇನ ಕಣ್ಣಲ್ ಹನಿ ನೀರ ಬರ್ಬೇಕು… ಆ ಟೈಮಿಗೆ ಒಬ್ಬಂವ, “ಪಾಪ ಟೀಚರ್… ಕಾರವಾರದಿಂದ ಬಂದಾರ್ರೀ… ಟೆಂಗಿನ ಕಾಯೇನ್ರೀ, ಹಸೀ ಕೊಬ್ರಿ ಹೌದಿಲ್ರೀ…‌ ಬರ್ರೀ ಅಲ್ಲದಾವ… ಮಕಾಂದಾರ ಅಗಂಡ್ಯಾಗ…” ಅಂದ್ಕಂಡಿ, ಇನ್ನೊಂದಿಷ್ಟ ಬಿಸ್ಲಲ್ಲಿ ತಿರ್ಗ್ಸಿ-ತಿರ್ಗ್ಸಿ ದೂರದ ಅಂಗ್ಡಿಗ ಕರ್ಕಂಡ ಹೋದ.

ಅಂತೂ ಆ ಅಂಗ್ಡಿಲ ಸಿಮೆಂಟಿನ ಚೀಲ್ದಲ್ಲಿ ಸಿಪ್ಪೆ ಅರ್ಧಮರ್ದ ಸುಲ್ದಿರೋ ರಾಶಿ-ರಾಶಿ ಕಾಯಿ! ಅರೆ…! ನಮ್ಗಂತೂ ಖುಷಿ ಆಗುಕ ಬಾಕಿ ಇಲ್ಲ… ಮತ್ ನಮ್ಮೂರಿಗೆ ಒಂದ ಹೊಸ ಸುರಂಗ ಮಾರ್ಗನೇ ಸಿಕ್ದಂಗ ಆಗಿ, ಇನ್ ಬಿಟ್ರ ಸಿಕ್ಕುದೆಲ್ಲ ಹೇಳಿ, ಒಂದ್ ಇಪ್ಪತ್ ಕಾಯಿ ಸುಲ್ಕೊಡ್ರಿ ಅಂದಿ ಸುಲಿಸ್ಕಂಡು ಚೀಲ್ದಲ್ಲಿ ತುಂಬ್ಕಂಡ್ರು.

ಅಂಗಡಿಯಂವ ಅಂತೂ ಇಷ್ಟ ಕಾಯ ತಕಂಡವ್ರನ್ನ ಜೀವಮಾನದಲ್ಲಿ ನೋಡಿದ್ನಾ ಇಲ್ವೆನಾ… ನಮ್ಮನ್ನ ಒನ್ನಮ್ನಿ ಅನ್ಯಗ್ರಹ ಜೀವಿ ನೋಡದಂಗೆ ನೋಡ್ತ ಕಾಯ್ ಸುಲ್ಕೊಟ್ಟ‌. ಅದೂ ಸುಲಿಯುದರೂ ಯಾವ್ ನಮನಿ… ಒಂದು ಕಾಯಗೆ ಹತ್ ನಿಮಿಷ ತಕಂಡ.

ಆಯ್ತು… ತಕಬಂದಿ ಮೆಟ್ ಗತ್ತಿಲೆ ಕೆರಿವಾ ಹೇಳಿ ಒಂದು ಕಾಯಿ ಒಡೆದ್ರೆ, ನಮ್ಮ ಸಿಂಯಾಳದಂಗೆ ತೆಳು ತಿರುಳು – ದ್ವಾಸಿಯಷ್ಟದೆ. ನಮ್ಮ ಕಡಿಗ ಒಂದ ಕಡಿ ಕೆರದ್ರೆ ಒಂದ ಬಟ್ಟಲ ತುಂಬಿ ರಾಶಿ-ರಾಶಿ ಸುಳಿ ಆದ್ರೆ, ಇದ್ರದ್ದು ಎರಡೂ ಕಡಿ ಕೆರದ್ರೂ ಎರಡು ಬೊಗಸೆ ತುಂಬ್ಲೆಲಾ‌‌. ಯೇ ರಾಮ… ಇದೆಂತ ಕಾಯಿ ಹೇಳಿ ಬೈಕಂತೇಯಾ ಹೆಂಗೋ ಸಾರ ಮಾಡಿ, ಉಳ್ದಿದ್ದ ಎಲ್ಲಾ ಕಾಯೂವಾ ಕಾಟಿನ ಅಡಿಗ ಹಾಕಿಟ್ರು.  

ಮಾರನೆ ದಿನ ಮತ್ ಕಾಯಿ ತೆಗ್ದು ನೋಡದ್ರೆ ಅಟ್ಟೂ ಕಾಯಿ ಪಟಾ ಪಟಾ ಒಡದು ಬಿರುಕು ಬಿಟ್ ಬಿದ್ದದೆ. ಯೇ ದ್ಯಾವ್ರೆ… ಇದೆಂತಪ್ಪ ಹೇಳಿ, ಆವಾಗಿಂದ ಬೇಕಾದಾಗಟ್ಟೇ ಒಂದೇ ಕಾಯಿ ತರುದು, ಮತ್ತೆ ಅವ್ರು  ಅಂಗಡಿಲಿ ಇಟ್ಟಂಗೇಯಾ ಸಿಪ್ಪಿಗೂಡೇ ತರುದೂ ರೂಡಿ ಮಾಡ್ಕಂಡ್ರು.

ಅದಾಯ್ತು  ಬಿಡಿ…  ನಮ್ಮ ಕಡೆ ಕತಿ ಹೇಳುದಾದ್ರೆ ನಮ್ಮೂರ ಬದಿಗೆ ನಾವ್ ಎಣ್ಣಿ ಜಾಸ್ತಿ ತಿನ್ವರಲ್ಲ, ಹೀರಿಕಾಯಿ ಇರ್ಲಿ ಸೊಪ್ಪಿರ್ಲಿ, ರೊಟ್ಟಿ ಇರ್ಲಿ ಒಂದ ರಾಶಿ ಕಾಯಿಸುಳಿ ಹಾಕ್ಬಿಟ್ರೆ ನಮ್ಗ ಹನಿ‌ ಸಮಾಧಾನ. ಅದ್ಕೆ ಯಾವ ರುಚಿನೂ ಸರಿಗಟ್ಟುಕೂ ಆಗುದಿಲ್ಲ ಬಿಡಿ.

ಇನ್ನು, ಸಾರು ತರಕಾರಿದಿರ್ಲಿ ಮೀನಿರ್ಲಿ, ಕೋಳಿ ಸಾರೇ ಇರ್ಲಿ, ಕಾಯಿ ಮಸಾಲಿ ಇಲ್ದೆ ನಮಗೆ ಅಡ್ಗಿ ಮಾಡುಕೇ ಬರುದಿಲ್ಲ. ಆರಾಮಾಗಿ ಕೂತ್ಕಂಡು ಕಾಯಿ ಕೆರಿಯು ಮೆಟ್ಟಗತ್ತಿ ಇಲ್ಲಿ ಎಲ್ರ ಮನಿಲೂ ಇದ್ದೇ ಇರ್ತದೆ.

ಯಾವ ಮರ ಇಲ್ದಿದ್ರೂ ಕಾಯ್ ಮರ ಇಲ್ದಿರೋ ಮನಿಯಂತೂ ನಮ್ಮಲ್ಲಿ ಇರುದೇ ಇಲ್ಲ. ಇನ್ನು ಕಾಯಿ ಸುಲ್ದ ಮೇಲೆ ಅದ್ರ ಸಿಪ್ಪಿ ಮತ್ತೆ ಗೆರಟೆ ಒಲಿ‌ ಒಟ್ಟುಕೆ, ಹಂಗೇಯ ಅದ್ರ ಜುಬರು ಪಾತ್ರೆ ತಿಕ್ಕುಕೆ ಬಳಸ್ವರು ನಾವು.

ಕಡಿಗೆ ಮರದ ಮಡ್ಲು ಚಪ್ರ ಹಾಕುಕೆ, ಒಣ ಮಡ್ಲು ಬೆಂಕಿ ಹಿಡಿಸುಕೆ, ಕರಮಡ್ಲು ಮಳೆಗಾಲ್ದಲ್ಲಿ ಒಲೆ ಒಟ್ಟುಕೆ ಮಸ್ತಾತದೆ. ಸೊಳ್ಳೆ ರಾಶಿ ಅದ್ರೆ ಕಾಯಿ ಸಿಪ್ಪಿ ಹೊಗಿ ಹಾಕದ್ರೆ ಒಂದೊಂದ್ ಇರುದಿಲ್ಲ. ಕೆಂಡ ಮಾಡುದಿದ್ರೆ, ಕೆಂಡ ಮಾಡುಕೆ ಮತ್ತೊಂದು ಕಡೆ ಕೆಂಡ ತಕಂಡಿ ಹೋಗುದಿದ್ರೆ ಕಾಯಿ ಸಿಪ್ಪಿ ಬಾಳ ಚಲೋ ಅತದೆ.

ಮೊದ್ಲೆಲ್ಲ ಮಸಾಲಿ ಅರು ಕಲ್ಲು ತೊಳ್ದು ಗುಂಡಿಂದ ನೀರು ಹತ್ತ ತೆಗುಕೂ ಹಳೇ ಗೆರಟೆನೇ ಇಟ್ಕಂತಿದ್ರು. ದೊಡ್ಡ ಕಾಯಾದ್ರೆ ಮಿಯುಕ ಚಂಬೂ ಅದೇಯಾ. ಸಾರು ಬಡ್ಸುಕೆ ಚಿಪ್ಪೂವ ತೆಂಗಿನ ಗೆರಟೆಲೇ ಮಾಡುದಾಗಿತ್ತು.

ಮತ್ತೆ ತೆಂಗಿನ ಮರಕ್ಕೆ ಕಲ್ಪವೃಕ್ಷ ಹೇಳಿ ಸುಮ್ಮನೆ ಹೇಳುದಾ?  

ಕಾಯ್ ತಂಬಳಿ, ಕಾಯ್ ಚಟ್ನಿ, ಕಾಯ್ ಹಲ್ವಾ, ಊಟಕ್ಕೆ ಏನೂ ಇಲ್ದಿದ್ರೆ ನಂಜುಕೆ ಕಾಯ ಚೂರು ಸುಟ್ಕಂಡಿ ತಿನ್ನುದೂವ. ಸುಟ್ಟ ಗಾಯದ ಕಲೆಗೆ ಕಾಯ್ ಚೂರು ಸುಟ್ಟು ಉಪ್ಪು ತೇದು ಹಚ್ಚುದು ಕಾಯಂದೇಯ.

ಕಾಯಮರದ ಹೆಡಿಪುಂಟಿ ಅಂತೂವಾ ಕಾಲು ಸಂಕಕ್ಕೆ, ಮಕ್ಕಳಿಗೆ ಕ್ರಿಕೇಟ್ ಆಡುಕೆ, ಹೆಡಿಪುಂಟಿ ತಕ ಹೊಡಿತಿ ನೋಡ… ಅಂದ ಬೈಯುಕೂ ನಮಗೆ ಬೇಕೇ ಆತಿತ್ತು.

ಅದ್ರ ಕೊನೆಮಂಜಾರ ತರಕು ಬರಗುಕೆ, ಕೊಟ್ಟಿಗಿ ಸಗಣಿ ತೆಗುಕೆ ಮಸ್ತಾತದೆ. 

ಹೇಳ್ತೆ ಹೋದ್ರೆ ಒಂದೆರಡು ನಮನಿ ಅಲ್ಲ ನಮ್ಮದು ಕಾಯಿದು ಸಂಬಂಧ.

ಮೊದ್ಲೆಲ್ಲಾ ಮನಿ ಜನಾನೇ ಮರ ಹತ್ತುದ ಕಲ್ತಿ, ಕಾಯಿ ಸಿಂಯಾಳ ಬೇಕಾದಗೆಲ್ಲ ಕೊಯ್ದಿ-ಕೊಯ್ದಿ ಹೊತಾಕ್ತಿದ್ರು. ಈಗ ಮನಿ ಮಕ್ಕಳಿಗೆ ಅದ್ಕೆಲ್ಲ ಬಿಡುದಿಲ್ಲ. ಕಾಯ ಕೊಯ್ಯುಕೆ ಜನನೂ ಸಿಗುದಿಲ್ಲ ಹೇಳುದು ದೊಡ್ಡ ಫಜೀತಿನೇಯ.

ಮಡ್ಲು ಮತ್ತೆ ಕಾಯೆಲ್ಲ ಮರದಲ್ಲೇ ಒಣಗಿ, ಯೇ ಅಲ್ಲಿ ಕುಳ್ಬೆಡ್ವೆ ಕಾಯ ಬೀಳುದು, ಮಡ್ಲೆಡಿ ಬೀಳುದು ಹೇಳ್ಕತಾ ಆ ಮರ ಹತ್ತು ಸೀತಾರಾಮ ಯಾವಾಗ ಬತ್ನೇನ ಹೇಳಿ ಬೈಕಂತಿರುದೇಯ…

ಮತ್ತೆಂತ ಹೇಳುದು… ಒಂದ್ಕೆಲ್ಸಾ ಮಾಡಿ, ಇವತ್ ಉಂಬುಕೆ ನಮ್ಮನಿಗೆ ಬನ್ನಿ… ಹೆಂಗೂ ಎರಡ ಕಾಯಿ ಒಡೆದು ಸಾರು, ಪಲ್ಯ ಮಾಡಿದ್ದೆ. ಉಣ್ತೇಯಾ ಮತ್ತಿಷ್ಟು ಕಾಯಿನ ಸುದ್ದಿ‌ ಮಾತಾಡ್ವ… ಹ್ಞಾಂ?

ಹೆಚ್ಚಿನ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ: ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಸಂಧ್ಯಾ ನಾಯ್ಕ ಅಘನಾಶಿನಿ
ಸಂಧ್ಯಾ ನಾಯ್ಕ ಅಘನಾಶಿನಿ
ಜೀವನದಿ ಅಘನಾಶಿನಿಯ ತಟದವರು. ಅದೇ ನದಿಯ ಹೆಸರಿನ ಊರಿನವರು ಕೂಡ. ಚಿಕ್ಕ ಮಕ್ಕಳಿಗೆ ಪಾಠ ಹೇಳುವ ಮೇಷ್ಟ್ರು. ಹೊಳೆ, ಮೀನು, ನದಿ, ಶಾಲೆ ಜೊತೆಗೇ ತಮ್ಮ ಪರಿಸರದ ಜನಜೀವನದ ಬಗ್ಗೆಯೂ ವಿಪರೀತ ಅಕ್ಕರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗಮಂಗಲ ಸೀಮೆಯ ಕನ್ನಡ | ‘ಹೆಣ್ಮಗ್ಳು ಒಬ್ಳೇ ಅವ್ಳೆ ಅಂತ ಚುಡಾಯ್ಸಕ್ ಬತ್ತೀಯ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ಪರೇಶಾನ್ ಬಾಬಾ ಮತ್ತು ಹೇಮಾಳ ‘ದವಾಖಾನಿ ಬ್ಯಾನಿ’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...