ಆತ್ಮಸಾಕ್ಷಿಯೇ ಸತ್ತು ಬಿದ್ದಂತಿರುವ ಸಮಾಜದಲ್ಲಿ ಜಾತಿ ಅಹಮಿಕೆ ಆಳ್ವಿಕೆ ನಡೆಸುತ್ತಿದೆ. ಮನುಷ್ಯನ ಜೀವಕ್ಕಿಂತ ಇಲ್ಲಿನ ಕಲ್ಪಿತ ಜಾತಿ, ಅಸ್ಪೃಶ್ಯತೆಯೇ ಮುಖ್ಯವಾಗಿ ಜೀವಗಳನ್ನೇ ಬಲಿ ತೆಗೆದುಕೊಳ್ಳುತ್ತಿದೆ.
ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಯುವತಿಯ ಕುಟುಂಬ ಯುವಕನನ್ನು ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರ ರಾಜ್ಯದ ನಾಂದೇಲ್‌ನಲ್ಲಿ ನಡೆದಿದೆ. ಮನನೊಂದ ಯುವತಿಯು ಮೃತದೇಹವನ್ನೇ ವಿವಾಹವಾಗಿ ಭಾರತೀಯರ ಜಾತಿಗ್ರಸ್ತ ಮನಸ್ಥಿತಿಗೆ ಪ್ರಶ್ನೆ ಎಸೆದಿದ್ದಾಳೆ.
ಅವರದ್ದು ಹಲವು ವರ್ಷಗಳ ಪ್ರೀತಿ. ಉಭಯ ಕುಟುಂಬಗಳನ್ನು ಮನವೊಲಿಸುವ ಪ್ರಯತ್ನವನ್ನು ಈ ಪ್ರೇಮಿಗಳು ನಡೆಸಿದ್ದರು. ಜಾತಿಯ ಕಾರಣಕ್ಕೆ ಯುವತಿಯ ಕುಟುಂಬ ಬಲವಾಗಿ ವಿರೋಧಿಸುತ್ತಿತ್ತು. ಆತನನ್ನು ಭೇಟಿಯಾಗದಂತೆ ಯುವತಿಯನ್ನು ತಡೆಹಿಡಿಯಲಾಗಿತ್ತು. ಆದರೂ ಕುಟುಂಬದ ಕಣ್ಣುತಪ್ಪಿಸಿ ಪ್ರೇಮಿಗಳಿಬ್ಬರೂ ಭೇಟಿಯಾಗುತ್ತಿದ್ದರು. ಕುಟುಂಬದ ವಿರೋಧವನ್ನು ಲೆಕ್ಕಿಸದೆ ಮದುವೆಯಾಗಲು ಮುಂದಾಗಿದ್ದರು. ಇದರಿಂದ ಸಿಟ್ಟಿಗೆದ್ದ ಯುವತಿಯ ಸಹೋದರರು ಮತ್ತು ತಂದೆ, ಯುವಕನಿಗೆ ಗುಂಡು ಹಾರಿಸಿ ಕೊಂದಿದ್ದಾರೆ.
ವಿಷಯ ತಿಳಿದ ಯುವತಿ, ಮೃತದೇಹವನ್ನು ನೋಡಲು ಬಂದು, ಮೃತದೇಹಕ್ಕೆ ಹಚ್ಚಲಾಗಿದ್ದ ಸಿಂಧೂರವನ್ನೇ ತನ್ನ ಹಣೆಗೂ ಹಚ್ಚಿಕೊಂಡು, ಮಾಂಗಲ್ಯಧಾರಣೆ ಮಾಡಿಕೊಂಡಿದ್ದಾಳೆ. “ಕೊನೆಯ ಉಸಿರಿರುವತನಕ ಈತನೇ ನನ್ನ ಗಂಡ, ಇವನ ಮನೆಯಲ್ಲೇ ನಾನು ಬಾಳುತ್ತೇನೆ. ನನ್ನ ಪತಿಯ ಅಂಗವಿಕಲ ತಂದೆ ಮತ್ತು ತಾಯಿಯನ್ನು ನೋಡಿಕೊಳ್ಳುತ್ತೇನೆ” ಎಂದು ಶಪಥ ಮಾಡಿದ್ದಾಳೆ. ಅಂದಹಾಗೆ ಆ ಯುವತಿಯ ಹೆಸರು ಅಂಚಲ್, ಹತ್ಯೆಯಾದ ಯುವಕ- ಸಕ್ಷಮ್.
“ಕಳೆದ ಮೂರು ವರ್ಷಗಳಿಂದ ಸಕ್ಷಮ್‌ನನ್ನು ಪ್ರೀತಿಸುತ್ತಿದ್ದೆ. ಆದರೆ ಜಾತಿ ಬೇರೆಯಾಗಿದ್ದ ಕಾರಣಕ್ಕೆ ನಮ್ಮ ಸಂಬಂಧವನ್ನು ನನ್ನ ತಂದೆ ಗಜಾನನ್ ಮಾಮಿದ್ವಾರ್ ವಿರೋಧಿಸುತ್ತಿದ್ದರು. ನನ್ನ ಕುಟುಂಬವು ಸಕ್ಷಮ್‌ನನ್ನು ಕೊಲ್ಲುವುದಾಗಿ ಆಗಾಗ್ಗೆ ಬೆದರಿಕೆ ಹಾಕುತ್ತಿತ್ತು. ಈಗ ನನ್ನ ತಂದೆ ಮತ್ತು ಸಹೋದರರಾದ ಹಿಮೇಶ್ ಹಾಗೂ ಸಾಹಿಲ್ ಸೇರಿ ಹತ್ಯೆ ಮಾಡಿದ್ದಾರೆ. ನನಗೆ ನ್ಯಾಯ ಬೇಕು. ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು” ಎಂದಿದ್ದಾರೆ ಅಂಚಲ್.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಪೆಹ್ಲೂಖಾನ್‌ಗೆ ಬಗೆದ ಅದೇ ದ್ರೋಹ ಕಾದಿದೆಯೇ ಅಖ್ಲಾಕ್‌ಗೆ?
ಜಾತಿಗ್ರಸ್ತ ಭಾರತೀಯರ ಮನಸ್ಸನ್ನು ಈ ಘಟನೆ ಕಲಕುತ್ತದೆಯೇ? ಇಂತಹ ಹೃದಯ ವಿದ್ರಾವಕ ಪ್ರಕರಣಗಳು ಇದೇ ಮೊದಲೇನೂ ನಡೆಯುತ್ತಿಲ್ಲ. ಆತ್ಮಸಾಕ್ಷಿಯೇ ಸತ್ತು ಬಿದ್ದಂತಿರುವ ಸಮಾಜದಲ್ಲಿ ಜಾತಿ ಅಹಮಿಕೆ ಆಳ್ವಿಕೆ ನಡೆಸುತ್ತಿದೆ. ಮನುಷ್ಯನ ಜೀವಕ್ಕಿಂತ ಇಲ್ಲಿನ ಕಲ್ಪಿತ ಜಾತಿ, ಅಸ್ಪೃಶ್ಯತೆಯೇ ಮುಖ್ಯವಾಗಿ ಜೀವಗಳನ್ನೇ ಬಲಿತೆಗೆದುಕೊಳ್ಳಲಾಗುತ್ತಿದೆ.
ತೆಲಂಗಾಣದ ಮಿರ್ಯಾಲಗೂಡದಲ್ಲಿ 2018ರ ಸೆಪ್ಟೆಂಬರ್ 14ರಂದು ದಲಿತ ಯುವಕ ಪ್ರಣಯ್‌ಕುಮಾರ್ ಅವರನ್ನು ಕೊಡಲಿಯಿಂದ ಕೊಚ್ಚಿ ಕೊಂದು ಹಾಕಲಾಗಿತ್ತು. ಆರ್ಯವೈಶ್ಯ ಸಮುದಾಯದ ಅಮೃತ ವರ್ಷಿಣಿ ಎಂಬ ಯುವತಿಯನ್ನು ದಲಿತ ಸಮುದಾಯದ ಪ್ರಣಯ್ ಮದುವೆಯಾಗಿದ್ದೇ ಜಾತಿಗ್ರಸ್ತ ವ್ಯವಸ್ಥೆಗೆ ಮಹಾಪರಾಧವಾಗಿತ್ತು. ಅಮೃತ ಅವರ ತಂದೆ ಮಾರುತಿ ರಾವ್, ಸುಮಾರು ಒಂದು ಕೋಟಿ ರೂ.ಗಳ ಸುಪಾರಿ ಕೊಟ್ಟು ಈ ಕೃತ್ಯ ನಡೆಸಿದ್ದರು. ಇಷ್ಟೆಲ್ಲಕ್ಕೂ ಕಾರಣನಾದ ಮಾರುತಿ ರಾವ್ ಆತ್ಮಹತ್ಯೆ ಮಾಡಿಕೊಂಡರು. ಸುಪಾರಿ ಹಂತಕ ಸುಭಾಷ್ ಶರ್ಮನಿಗೆ ಮರಣದಂಡನೆ ವಿಧಿಸಲಾಯಿತು. ಕೃತ್ಯದಲ್ಲಿ ಭಾಗಿಯಾದ ಉಳಿದ ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಈ ಘಟನೆ ದೇಶಾದ್ಯಂತ ಚರ್ಚೆಯಾದರೂ ನಂತರದಲ್ಲಿ ಮರ್ಯಾದೆಗೇಡು ಹತ್ಯೆಗಳೇನೂ ನಿಲ್ಲಲಿಲ್ಲ.
2020ರಲ್ಲಿ 23; 2021ರಲ್ಲಿ 32 ಮತ್ತು 2022ರಲ್ಲಿ 18 ಮರ್ಯಾದೆಗೇಡು ಹತ್ಯೆಗಳು ದೇಶದಲ್ಲಿ ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಹೇಳಿದೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲೇ ಹೆಚ್ಚು ಘಟನೆಗಳಾಗಿವೆ. ಜಾರ್ಖಂಡ್ (12), ಪಂಜಾಬ್ (12), ಮಧ್ಯಪ್ರದೇಶ (9), ಹರ್ಯಾಣ (8) ರಾಜ್ಯಗಳಲ್ಲಿ ಹೆಚ್ಚು ಮರ್ಯಾದೆಗೇಡು ಹತ್ಯೆಗಳಾಗಿದ್ದರೂ ಕರ್ನಾಟಕವೇನೂ ಇದರಲ್ಲಿ ಹಿಂದೆ ಬಿದ್ದಿಲ್ಲ.
ಬೇರೆಯ ಜಾತಿ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಂದಿರುವ ಘಟನೆ ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ಕಳೆದ ಆಗಸ್ಟ್‌ನಲ್ಲಿ ವರದಿಯಾಗಿತ್ತು. ಗ್ರಾಮದ ಯುವತಿ ಕವಿತಾ ಕೊಳ್ಳುರ (18) ಅವರನ್ನು ಕೊಂದಿದ್ದ ತಂದೆ ಶಂಕರ ಕೊಳ್ಳುರನ್ನು ಪೊಲೀಸರು ಬಂಧಿಸಿದ್ದರು. ತಂದೆ ಹಾಗೂ ಇತರ ಇಬ್ಬರು ಸೇರಿಕೊಂಡು ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಯುವತಿ ಬಾಯಲ್ಲಿ ಕ್ರಿಮಿನಾಶಕ ಹಾಕಿದ್ದರು. ವಿಷ ಕುಡಿದು ಮೃತಪಟ್ಟಿದ್ದಾಳೆ ಎಂದು ಸುಳ್ಳು ಹಬ್ಬಿಸಲು ಯತ್ನಿಸಲಾಗಿತ್ತು.
2019ರಲ್ಲಿ ಗದಗ ಜಿಲ್ಲೆಯಲ್ಲಿ ಅಂತರ-ಜಾತಿ ವಿವಾಹವಾದ ಗಂಗಮ್ಮ ರಾಥೋಡ್ ಮತ್ತು ರಮೇಶ್ ಮಾದರ್ ಎಂಬ ದಂಪತಿಯನ್ನು ಯುವತಿಯ ಕುಟುಂಬಸ್ಥರು ಹತ್ಯೆ ಮಾಡಿದ್ದರು. 2017ರಲ್ಲಿ ನಡೆದ ಘಟನೆ- ವಿಜಯಪುರದಲ್ಲಿ ಮುಸ್ಲಿಂ ಸಮುದಾಯದ ಬಾನು ಬೇಗಂ ಅತ್ತಾರ್ ಅವರು ಪರಿಶಿಷ್ಟ ಪಂಗಡದ ಸಾಯಬಣ್ಣ ಕೊನ್ನೂರ ಎಂಬವರನ್ನು ಮದುವೆಯಾಗಿದ್ದರು. ಇದನ್ನು ವಿರೋಧಿಸಿದ್ದ ಆಕೆಯ ಸಹೋದರರು ಬಾನು ಬೇಗಂ ಮತ್ತು ಆಕೆಯ ಗರ್ಭದಲ್ಲಿರುವ ಮಗುವನ್ನು ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‌ನಲ್ಲಿ ಹೈಕೋರ್ಟ್ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು
ಮರ್ಯಾದೆಗೇಡು ಹತ್ಯೆಗಳ ಪ್ರಕರಣದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುತ್ತಿದ್ದರೂ ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಯಾಕೆ ಹೀಗಾಗುತ್ತಿದೆ ಎಂದು ಯೋಚಿಸಬೇಕಿದೆ. ಹರ್ಯಾಣದಲ್ಲಿ ಖಾಪ್ ಪಂಚಾಯತ್‌ಗಳೇ ಹತ್ಯೆಗೆ ಪರೋಕ್ಷ ಬೆಂಬಲ ನೀಡುತ್ತವೆ. ಧರ್ಮಪ್ರೇರಿತ ರಾಜಕಾರಣ ಮಾಡುವ ಸಂಘಟನೆಗಳು ಜಾತಿ ಅಸಮಾನತೆಯ ವಿರುದ್ಧ ಮೌನವಹಿಸಿ, ಸದಾ ಮೇಲ್ಜಾತಿ ಹಿತವನ್ನು ಬಯಸುತ್ತಾ ಇಂತಹ ಘಟನೆಗಳ ಕುರಿತು ಮೌನವಹಿಸುತ್ತವೆ. ಭಾರತೀಯ ಸಂವಿಧಾನದ 14ನೇ ವಿಧಿಯ ಪ್ರಕಾರ “ಕಾನೂನಿನ ಮುಂದೆ ಎಲ್ಲರೂ ಸಮಾನರು”; 15ನೇ ವಿಧಿಯ ಪ್ರಕಾರ ಧರ್ಮ, “ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ”. 21ನೇ ವಿಧಿಯು “ಬದುಕುವ ಹಕ್ಕು” ನೀಡುತ್ತದೆ. ಆದರೆ ಸಮಾಜದಲ್ಲಿ ಜಾತಿಗ್ರಸ್ತ ಮನಸ್ಥಿತಿ ಜೀವಂತವಾಗಿದೆ. ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಮರ್ಯಾದೆಗೇಡು ಹತ್ಯೆಗಳನ್ನು ಕಠಿಣವಾಗಿ ಶಿಕ್ಷಿಸುವಂತಹ ಪ್ರತ್ಯೇಕ ಕಾನೂನು ಜಾರಿಗೆ ನಾಗರಿಕ ಸಮಾಜ ಮೊದಲಿನಿಂದಲೂ ಆಗ್ರಹಿಸುತ್ತಾ ಬಂದಿದೆ. ದುರದೃಷ್ಟವಶಾತ್ ಅಧಿಕಾರ ಸ್ಥಾನಗಳಲ್ಲಿ ಕುಳಿತು ಜಾತಿ ತಾರತಮ್ಯವನ್ನೇ ಶಾಶ್ವತಗೊಳಿಸುವ ಮನಸ್ಥಿತಿಗಳು ಈ ಬದಲಾವಣೆಗೆ ಒಪ್ಪುವುದಿಲ್ಲ. ಹೀಗಾಗಿ ಸಾಮಾಜಿಕ ಪರಿವರ್ತನಾ ಚಳವಳಿಗಳೂ ಗಟ್ಟಿಯಾಗಬೇಕಿದೆ.





