ಜಗತ್ತು ಮುಂದುವರಿದಿದೆ, ಅನೇಕ ಮಾರಕ ರೋಗಗಳಿಗೆ ವಿಜ್ಞಾನಿಗಳು ಬದುಕನ್ನೇ ಪಣವಾಗಿರಿಸಿ, ಸಂಶೋಧನೆ ನಡೆಸಿ ಚಿಕಿತ್ಸಾ ವಿಧಾನಗಳನ್ನು, ಔಷಧಿಗಳನ್ನು ಕಂಡು ಹಿಡಿದಿದ್ದಾರೆ. ಮಾನವ ಜೀವಿತಾವಧಿ ಬಹಳಷ್ಟು ಹಿಗ್ಗಿದೆ. ಅಂತಹ ಜೀವ ರಕ್ಷಕ ಔಷಧದಲ್ಲೂ ಕಲಬೆರಕೆ ಮಾಡುವ ದುರಾಸೆಯ ಮಾಫಿಯಾ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿರುವುದು, ಸರ್ಕಾರಗಳೇ ಈ ಮಾಫಿಯಾಗಳಿಗೆ ರಕ್ಷಣೆ ನೀಡುತ್ತಿರುವುದು ಅಕ್ಷಮ್ಯ ಅಪರಾಧ.
ಕಾಯಿಲೆ ಗುಣಪಡಿಸಲೆಂದು ತೆಗೆದುಕೊಳ್ಳುವ ಔಷಧಗಳು ಅಮೂಲ್ಯ ಜೀವಗಳನ್ನೇ ಬಲಿ ಪಡೆಯುತ್ತವೆ. ಅದಕ್ಕೆ ಮನುಷ್ಯನ ದುರಾಸೆ, ದುಷ್ಟತನವೇ ಕಾರಣ ಎಂದಾದರೆ ನಾವು ಅದೆಂತಹ ಅಧೋಗತಿಯ ತಲುಪಿದ್ದೇವೆ? ಜಿಗುಪ್ಸೆ ಮತ್ತು ರೇಜಿಗೆ ಹುಟ್ಟಿಸುವ ಕ್ರೂರ ವ್ಯವಸ್ಥೆಯಿದು.
ಜಗತ್ತು ಮುಂದುವರಿದಿದೆ, ಅನೇಕ ಮಾರಕ ರೋಗಗಳಿಗೆ ವಿಜ್ಞಾನಿಗಳು ಬದುಕನ್ನೇ ಪಣವಾಗಿರಿಸಿ , ಸಂಶೋಧನೆ ನಡೆಸಿ ಚಿಕಿತ್ಸಾ ವಿಧಾನಗಳನ್ನು, ಔಷಧಗಳನ್ನು ಕಂಡು ಹಿಡಿದಿದ್ದಾರೆ. ಮಾನವ ಜೀವಿತಾವಧಿ ಬಹಳಷ್ಟು ಹಿಗ್ಗಿದೆ. ಅಂತಹ ಜೀವ ರಕ್ಷಕ ಔಷಧದಲ್ಲೂ ಕಲಬೆರಕೆ ಮಾಡುವ ದುರಾಸೆಯ ಮಾಫಿಯಾ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿರುವುದು, ಸರ್ಕಾರಗಳೇ ಈ ಮಾಫಿಯಾಗಳಿಗೆ ರಕ್ಷಣೆ ನೀಡುತ್ತಿರುವುದು ಅಕ್ಷಮ್ಯ ಅಪರಾಧ. ಔಷಧ ತಯಾರಿಕಾ ಕಂಪನಿಗಳು ಜನರ ಪ್ರಾಣ ರಕ್ಷಣೆಗಿಂತ ಹೆಚ್ಚಾಗಿ ಹಣ ಮಾಡುವ ದಂಧೆಯಾಗಿ ಮಾಡಿಕೊಂಡಿವೆ. ಪರಿಣಾಮವಾಗಿ ಜೀವ ಉಳಿಸಬೇಕಾದ ಔಷಧಿಗಳನ್ನು ಪಡೆದ ನವಜಾತ ಶಿಶುಗಳು, ಅಪ್ರಾಪ್ತ ಮಕ್ಕಳು, ಬಾಣಂತಿಯರು ತಮ್ಮದಲ್ಲದ ತಪ್ಪಿಗೆ ಬಲಿಯಾಗುತ್ತಿದ್ದಾರೆ. ಕಳೆದ ವರ್ಷ ಕರ್ನಾಟಕದ ಯಾದಗಿರಿ, ಬಳ್ಳಾರಿ, ಬೆಳಗಾವಿ ಮತ್ತು ಉತ್ತರಕನ್ನಡದಲ್ಲಿ ಸಿಸೇರಿಯನ್ ಹೆರಿಗೆಗಳ ನಂತರ ನೀಡಿದ ರಿಂಗರ್ ಲ್ಯಾಕ್ಟೇಟ್ ದ್ರಾವಣ 18 ಮಂದಿ ಬಾಣಂತಿಯರ ಸಾವಿಗೆ ಕಾರಣವಾಗಿತ್ತು. ಪಶ್ಚಿಮ ಬಂಗಾಳದ ಕಂಪನಿ ಪೂರೈಸಿದ್ದ ದ್ರಾವಣದ ಕಳಪೆ ಗುಣಮಟ್ಟದ ಬಗ್ಗೆ ಕರ್ನಾಟಕದ ಔಷಧ ನಿಯಂತ್ರಣ ಸಂಸ್ಥೆ ಘಟನೆ ಆಗುವ ಆರು ತಿಂಗಳ ಹಿಂದೆಯೇ ಔಷಧಿಯ ಕಲಬೆರಕೆ ಕುರಿತು ಕೇಂದ್ರಕ್ಕೆ ವರದಿ ನೀಡಿತ್ತು. ಆದರೂ ನಿರ್ಲಕ್ಷಿಸಲಾಗಿತ್ತು.
ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ೨೨ ಮಕ್ಕಳು ಮೃತಪಟ್ಟಿದ್ದಾರೆ. ಸಿರಪ್ ಕುಡಿದ ಮಕ್ಕಳಲ್ಲಿ ಮೂತ್ರಪಿಂಡ ಸೋಂಕು ಕಂಡು ಬಂದಿರುವುದು ನಿಜಕ್ಕೂ ಆತಂಕಕಾರಿ. ತಮಿಳುನಾಡಿನ ಕೋಲ್ಡ್ರಿಫ್ ಸಿರಪ್ ತಯಾರಿಕಾ ಕಂಪನಿಯಾದ ಸ್ರೇಸ್ ಫಾರ್ಮಾಸ್ಯುಟಿಕಲ್ಸ್ ಮಾಲೀಕ ಡಾ ಜಿ ರಂಗನಾಥನ್ ಅವರನ್ನು ಬುಧವಾರ ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ದುರಂತಕ್ಕೆ ಕಂಪನಿ ಮಾಲೀಕ ಮಾತ್ರ ಹೊಣೆಯೇ? ಇಡೀ ವ್ಯವಸ್ಥೆಯೇ ಹೊಣೆ ಹೊರಬೇಕಲ್ಲವೇ? ಔಷಧ ಕಂಪನಿಗಳಿಗೆ ಪರವಾನಗಿ ನೀಡಲು ಮತ್ತು ನಿಯಂತ್ರಿಸಲು ʼನ್ಯಾಷನಲ್ ಡ್ರಗ್ ಲೈಸನ್ಸಿಂಗ್ ಸಿಸ್ಟಮ್ʼ ಇದೆ. ಭಾರತೀಯ ಔಷಧ ಮಹಾ ನಿಯಂತ್ರಕ ಸಂಸ್ಥೆ ಇದೆ, ಅದರಡಿಯಲ್ಲಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಕ ಸಂಸ್ಥೆ(ಸಿಡಿಎಸ್‌ಸಿಒ) ಇದೆ. ರಾಜ್ಯಗಳಲ್ಲಿ ಔಷಧ ನಿಯಂತ್ರಕ ಸಂಸ್ಥೆ(ಈಗ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇದೆ. ಇವೆಲ್ಲ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸದ ಪರಿಣಾಮವಾಗಿ ಅಮಾಯಕರ ಸಾವಾಗುತ್ತಿದೆ. ಇಡಿ ಜಗತ್ತನ್ನು ಆವರಿಸಿರುವ ಮೆಡಿಕಲ್ ಮಾಫಿಯಾ ಒಂದು ಕಡೆ ಆರೋಗ್ಯ ಸೌಕರ್ಯಗಳು ಬಡವರ ಕೈಗೆಟುಕದಂತೆ ಮಾಡಿವೆ. ಚಿಕಿತ್ಸೆಗೆ ಬರುವ ರೋಗಿಗಳಿಂದ ಹಣ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಇಲ್ಲ, ಸರ್ಕಾರಿ ಆರೋಗ್ಯ ವ್ಯವಸ್ಥೆಗಳು ಅವ್ಯವಸ್ಥೆಯ ಆಗರವಾಗಿದೆ. ಇದರ ಮಧ್ಯೆ ಔಷಧಿ ಕೊಟ್ಟು ಜೀವ ತೆಗೆಯುವ ಸ್ಥಿತಿ ಬಂದರೆ ಬಡವರು ಎಲ್ಲಿಗೆ ಹೋಗಬೇಕು?
ʼನ್ಯಾಷನಲ್ ಡ್ರಗ್ ಲೈಸನ್ಸಿಂಗ್ ಸಿಸ್ಟಂʼ ನಿಯಮವನ್ನು ಇಡೀ ದೇಶದಲ್ಲಿ ಕೇವಲ ಹದಿನೆಂಟು ರಾಜ್ಯಗಳು ಮಾತ್ರ ಪಾಲಿಸುತ್ತಿವೆ ಎಂದು ವರದಿಯಾಗಿದೆ. ನಿಯಮ ಪಾಲಿಸದ ಉಳಿದ ರಾಜ್ಯಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಮೃತಪಟ್ಟ ಘಟನೆಯ ನಂತರ ಎಚ್ಚೆತ್ತುಕೊಂಡ ʼಭಾರತೀಯ ಔಷಧ ಮಹಾನಿಯಂತ್ರಕ ಸಂಸ್ಥೆʼ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸಿರಪ್ ತಯಾರಿಕಾ ಕಂಪನಿಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಕೆಮ್ಮಿನ ಸಿರಪ್‌ಗಳ ಪರೀಕ್ಷೆ ಮತ್ತು ಅವುಗಳ ತಯಾರಕರ ಕುರಿತು ರಾಷ್ಟ್ರವ್ಯಾಪಿ ತಪಾಸಣೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮುಂದಾಗಿದೆ. ಆದರೆ, ಇವೆಲ್ಲ ಕಾಲಕಾಲಕ್ಕೆ ನಿರಂತರವಾಗಿ ನಿರ್ವಹಿಸಿಬೇಕಿರುವ ಜವಾಬ್ದಾರಿ. ಸರ್ಕಾರ ಮತ್ತು ಅದರಡಿಯಲ್ಲಿ ಬರುವ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ನಿಭಾಯಿಸದೇ ಮಾಫಿಯಾಗಳಿಗೆ ಬೆಂಬಲ ನೀಡುತ್ತಾ, ಲಂಚ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾರಣ ಇಂತಹ ದುರಂತಗಳು ಆಗಾಗ ಸಂಭವಿಸುತ್ತಿರುತ್ತವೆ. ಔಷಧ ತಯಾರಿಕಾ ಕಂಪನಿಗಳು ಒಂದೋ ಸರ್ಕಾರದ ಅಧೀನದಲ್ಲಿರಬೇಕು ಅಥವಾ ಅಂತಹ ಖಾಸಗಿ ಕಂಪನಿಗಳ ಮೇಲೆ ಸರ್ಕಾರ ನಿಗಾ ಇಡಬೇಕು. ಆದರೆ ಅವೆರಡನ್ನೂ ಮಾಡದೇ ಹಣದ ಆಸೆಗೆ ಬಿದ್ದ ಅಧಿಕಾರಿಗಳು ಮಾನದಂಡ ಅನುಸರಿಸದೇ ಬೇಕಾಬಿಟ್ಟಿ ಲೈಸನ್ಸ್ ನೀಡುವುದು, ಗುಣಮಟ್ಟ ಪರೀಕ್ಷೆ ನಡೆಸದಿರುವುದು, ನಿಯಮ ಪಾಲಿಸದವರ ವಿರುದ್ಧ ಕ್ರಮ ಜರುಗಿಸದಿರುವುದು, ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿ ಎಂಬುದನ್ನು ತೋರಿಸುತ್ತದೆ. ನಕಲಿ ವೈದ್ಯರು, ನಕಲಿ ಕಂಪನಿಗಳು ತಯಾರಿಸಿದ ಔಷಧಿಗಳು ಜನರ ಪ್ರಾಣಕ್ಕೆ ಕುತ್ತು ತರುತ್ತಿರುವುದು ಮಾತ್ರವಲ್ಲ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಇಲ್ಲಿ ಕಳಪೆ ಔಷಧ ತಯಾರಿಸಿದ ಕಂಪನಿಯಷ್ಟೇ ತಪ್ಪಿತಸ್ಥ ಸ್ಥಾನದಲ್ಲಿ ನಿಂತರೆ ಸಾಲದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಹೊಣೆ ಹೊರಬೇಕು. ಜನರ ಬದುಕು ಅಗ್ಗವಾಗಬಾರದು.
ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ಮೂಲ ಸೌಕರ್ಯಗಳ ಕೊರತೆ, ವೈದ್ಯರ ನಿರ್ಲಕ್ಷ್ಯ, ಸಿಬ್ಬಂದಿಗಳ ಹಣದ ದಾಹಕ್ಕೆ ಬಡವರ ಬದುಕು ಬಲಿಯಾಗುತ್ತಿದೆ. ಎಲ್ಲ ಪ್ರಜೆಗಳಿಗೂ ಗುಣಮಟ್ಟದ ಚಿಕಿತ್ಸೆ ಸಿಗುವಂತಾಗಬೇಕು. ಅದು ಕಲ್ಯಾಣ ರಾಜ್ಯದ ಪರಿಕಲ್ಪನೆ. ಆದರೆ, ಭಾರತದಂತಹ ನೂರಾ ನಲುವತ್ತು ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಗಗನಕುಸುಮವಾಗಿದೆ. ಕುಟುಂಬದ ಒಬ್ಬರಿಗೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾದರೆ ಇಡೀ ಕುಟುಂಬ ಹೈರಾಣಾಗಬೇಕಾಗುತ್ತದೆ. ಮಧ್ಯಮ ವರ್ಗದ ಕುಟುಂಬಗಳು ಜೀವಮಾನದ ದುಡಿಮೆ, ಕೂಡಿಟ್ಟ ಹಣವನ್ನು ಸುರಿದರೂ ಸುಧಾರಿಸಿಕೊಳ್ಳುವುದು ಕಷ್ಟ. ಇನ್ನು ಬಡತನರೇಖೆಗಿಂತ ಕೆಳಗಿರುವ ಕುಟುಂಬಗಳು ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಳ್ಳಬೇಕಿದೆ. ಅಲ್ಲಿ ಸೌಕರ್ಯ ಇದೆಯೋ, ಇಲ್ಲವೋ ಎಂಬ ಬಗ್ಗೆ ಎರಡನೇ ಯೋಚನೆಯೇ ಮಾಡಲ್ಲ. ಹಾಗಿರುವಾಗ ಬಾಣಂತಿಯರ ಶಕ್ತಿವರ್ಧನೆಗೆ ನೀಡುವ ದ್ರಾವಣ, ಮಕ್ಕಳ ಕೆಮ್ಮಿಗೆ ಕೊಡುವ ಸಿರಪ್ ಪ್ರಾಣವನ್ನೇ ತೆಗೆಯುತ್ತದೆ ಎಂದಾದರೆ ಅದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು. ಈ ಶಿಕ್ಷೆ ಎಲ್ಲರಿಗೂ ಪಾಠವಾಗುವಂತಿರಬೇಕು. ಔಷಧ ನಿಯಂತ್ರಣ ವ್ಯವಸ್ಥೆಯನ್ನು ಬಿಗಿಪಡಿಸಬೇಕು.





