ನಾರೀಶಕ್ತಿ ಕುರಿತು ನಿಜವಾದ ಕಳಕಳಿ ಇದ್ದರೆ ಗುಜರಾತಿನ ಈ ಕಾಯಿದೆ ತಿದ್ದುಪಡಿ ಮಾತ್ರವಲ್ಲದೆ ದೇಶದಲ್ಲಿ ದಿನನಿತ್ಯ ಮಣ್ಣುಪಾಲಾಗುತ್ತಿರುವ ಮಹಿಳೆಯ ಘನತೆಯನ್ನು ಯಾವ ಕಾರಣಗಳಿಗಾಗಿ ಎತ್ತಿ ಹಿಡಿಯದೆ ತೆಪ್ಪಗಿದ್ದಾರೆ ಮೋದಿ? ತಿಳಿದೂ ತಿಳಿದೂ ತೆಪ್ಪಗಿದ್ದರೆ, ಒಂದೋ ಅವರು ಅಸಹಾಯಕರಿರಬೇಕು ಇಲ್ಲವೇ ಡಾಂಭಿಕರಿರಬೇಕು. ಟ್ರಂಪ್ ಅವರ ಅಮೆರಿಕಾ ಮತ್ತು ಕಮ್ಯೂನಿಸ್ಟ್ ಚೀನಾ ವಿರುದ್ಧ ತಾವು ನಿಸ್ಸಹಾಯಕರೆಂದು ಅವರು ಹೆಜ್ಜೆಹೆಜ್ಜೆಗೆ ತೋರಿಕೊಂಡಿದ್ದಾರೆ. ಆದರೆ ಡಾಂಭಿಕರೆಂದು ಹೇಗೆ ತಾನೇ ಒಪ್ಪಿಕೊಂಡಾರು ಪಾಪ!
ವಯಸ್ಕರಿಬ್ಬರು ಪರಸ್ಪರರನ್ನು ಒಪ್ಪಿ ವರಿಸುವುದು ಅವರ ಖಾಸಗಿ ಅಥವಾ ವೈಯಕ್ತಿಕ ವಿಚಾರ. ಮಧ್ಯೆ ಮೂಗು ತೂರಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಸ್ವಯಂ ಘೋಷಿತ ಧರ್ಮರಕ್ಷಕರು ಅಥವಾ ಅನೈತಿಕ ಪೊಲೀಸುಗಿರಿ ಮಾಡುವವರಿಗೂ ಇಲ್ಲ. ಇಂತಹ ಧರ್ಮರಕ್ಷಕರು ಮತ್ತು ಅನೈತಿಕ ಪೊಲೀಸರನ್ನು ತಡೆದು, ಅವರಿಗೆ ತಮ್ಮ ಜಾಗವೆಲ್ಲಿ ಎಂದು ತೋರಿಸಿ ತೆಪ್ಪಗೆ ಕೂರಿಸುವುದು ಸರ್ಕಾರದ ಕರ್ತವ್ಯ.
ಈ ಹಿನ್ನೆಲೆಯಲ್ಲಿ ಎಲ್ಲ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂಬುದಾಗಿ ಗುಜರಾತ್ ಸರ್ಕಾರ ಕಾಯಿದೆ ತರಲು ಹೊರಟಿರುವುದು ಬೇಲಿಯೇ ಎದ್ದು ಹೊಲ ಮೇದಂತೆ. ಪ್ರಜೆಗಳ ಖಾಸಗಿ ಅಥವಾ ವೈಯಕ್ತಿಕ ಬದುಕುಗಳ ಮೇಲೆ ನಡೆಸುವ ಅತಿಕ್ರಮಣವಿದು. ವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಿರುವ ಹೇಯ ಹಲ್ಲೆ. ‘ಲವ್ ಜಿಹಾದ್’ ತಡೆಯುವ ನೆಪದಲ್ಲಿ, 2006ರ ಗುಜರಾತ್ ವಿವಾಹ ನೋಂದಣಿ ಕಾಯಿದೆಗೆ ತಿದ್ದುಪಡಿ ತರುವುದಾಗಿ ಸಾರಿದ್ದಾರೆ, ಆ ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್. ಹಿಂದೂ ಹೆಣ್ಣುಮಕ್ಕಳ ಘನತೆ ಮತ್ತು ಸನಾತನ ಧರ್ಮದ ಸಂರಕ್ಷಣೆಗಾಗಿ ಈ ತಿದ್ದುಪಡಿ ಅಗತ್ಯವಿದೆ ಎಂಬುದು ಅವರ ವಾದ.
ತಾನು ಮುಂದೆ ನಿಂತು ಸಂರಕ್ಷಿಸಬೇಕಾದ ಮಾನವ ಹಕ್ಕುಗಳನ್ನು ತಾನೇ ಉಲ್ಲಂಘಿಸಿದಂತೆ. ಸರ್ಕಾರಗಳು ತಮ್ಮ ಅಸ್ತಿತ್ವಕ್ಕಾಗಿ ಮಾನವ ಹಕ್ಕುಗಳನ್ನು ದಮನ ಮಾಡುತ್ತಿರುವುದು ಹೊಸ ಸಂಗತಿಯೇನೂ ಅಲ್ಲ. ಆದರೆ ದಮನವನ್ನು ಸಮರ್ಥಿಸಿ ಕಾಯಿದೆಯನ್ನೇ ತರುತ್ತಿರುವುದು ಗುಜರಾತಿನ ಬಿಜೆಪಿ ಸರ್ಕಾರದ ಹೊಸ ಪರಾಕ್ರಮ. ಸರ್ಕಾರವೇ ಅಡ್ಡಗಾಲು ಹಾಕಿ, ಪೋಷಕರ ಅನುಮತಿಯನ್ನು ಕಡ್ಡಾಯಗೊಳಿಸುವುದು ಮುಕ್ತ ಸಮಾಜದ ಪಾಲಿನ ಲಕ್ಷಣ ಅಲ್ಲ. ನಾಗರಿಕ ಹಕ್ಕುಗಳ ಉಲ್ಲಂಘನೆಯ ನಡೆ ಎನಿಸಿಕೊಳ್ಳುತ್ತದೆ. ಜಾತಿ ಆಧಾರಿತ ಭೇದಭಾವ ಮಾಡುವಂತಿಲ್ಲ, ವಿಶೇಷವಾಗಿ ಅಸ್ಪೃಶ್ಯತೆಯನ್ನು ಆಚರಿಸುವಂತಿಲ್ಲ. ಇದು ಸಂವಿಧಾನವೇ ವಿಧಿಸಿರುವ ಕಟ್ಟಳೆ.
ಹೆಣ್ಣುಮಕ್ಕಳು ತಮ್ಮ ಬದುಕಿನ ತೀರ್ಮಾನವನ್ನು ತಾವೇ ತೆಗೆದುಕೊಳ್ಳಲು ಶಕ್ತರಲ್ಲ, ಅವರು ಎಳೆಗೂಸುಗಳಿಗೆ ಸಮ, ಅವರನ್ನು ಯಾರು ಬೇಕಾದರೂ ಸಲೀಸಾಗಿ ಮೋಸಗೊಳಿಸಬಹುದು ಎಂಬ ಅಪ್ರಬುದ್ಧ ಧೋರಣೆ. ಆದರೆ ಮೇಲ್ನೋಟಕ್ಕೆ ಬಾಲಿಶವೆಂದು ಕಂಡು ಬರುವ ಈ ಮುಖವಾಡದ ಹಿಂದೆ ಅಡಗಿರುವುದು ಅಪ್ಪಟ ಕೋಮುದ್ವೇಷ. ಬಹುಸಂಖ್ಯಾತವಾದವನ್ನು ಎತ್ತಿ ಹಿಡಿದು ಭಾರತವನ್ನು ಹಿಂದೂ ಪಾಕಿಸ್ತಾನ ಮಾಡಲು ಹೊರಟಿದೆ, ಮೋಶಾ ಮತ್ತು ಅವರ ಬೆಂಬಲಕ್ಕೆ ನಿಂತಿರುವ ಆರೆಸ್ಸೆಸ್ ಪರಿವಾರ. ನರೆಯವನ ಒಂದು ಕಣ್ಣು ಕಳೆಯಲು ತನ್ನ ಎರಡೂ ಕಣ್ಣು ಕಳೆದುಕೊಳ್ಳಲು ಮುಂದಾದ ಮೂರ್ಖನ ಕತೆಯಿದು.
ತಮ್ಮ ಬದುಕಿನ ತೀರ್ಮಾನವನ್ನು ತೆಗೆದುಕೊಳ್ಳುವ ಶಕ್ತಿ ನಾರಿಯರಿಗೆ ಇಲ್ಲ ಎನ್ನುವುದೇ ನಿಜವಾದರೆ ನಾರೀಶಕ್ತಿಯು ದೇಶದ ಅಭಿವೃದ್ಧಿಯ ಅಡಿಗಲ್ಲು ಎಂಬ ಮಾತಿಗೆ ಅರ್ಥ ಉಳಿಯುತ್ತದೆಯೇ? ಹಾಗಿದ್ದರೆ ಅರ್ಥವೇ ಇಲ್ಲದ ಈ ಒಣಮಾತನ್ನು ಪ್ರಧಾನಿ ಮೋದಿಯವರು, ಮತ್ತೆ ಮತ್ತೆ ಎತ್ತರದ ದನಿಯಲ್ಲಿ ಯಾಕೆ ಆಡುತ್ತಲೇ ಇರುತ್ತಾರೆ? ಅವರಿಗೆ ಕೇವಲ ಮಾತಿನ ಚಪಲವೇ? ಅಥವಾ ತಾನು ಹೇಳುವುದೆಲ್ಲವನ್ನು ಪಾಲಿಸಬೇಕಿಲ್ಲ ಎಂಬುದಾಗಿ ಅವರ ಪಕ್ಷ ಪರಿವಾರ ಹಾಗೂ ಹಿಂಬಾಲಕರ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿರುವರೇ? ಮಾಡಿಕೊಂಡಿದ್ದೇ ಆದರೆ ಅದನ್ನು ಬಹಿರಂಗವಾಗಿ ಹೇಳುವಷ್ಟು ಎದೆಗಾರಿಕೆ ಅವರಿಗೆ ಇಲ್ಲವೇಕೆ? ನಾರೀಶಕ್ತಿ ಕುರಿತು ನಿಜವಾದ ಕಳಕಳಿ ಇದ್ದರೆ ಗುಜರಾತಿನ ಈ ಕಾಯಿದೆ ತಿದ್ದುಪಡಿ ಮಾತ್ರವಲ್ಲದೆ ದೇಶದಲ್ಲಿ ದಿನನಿತ್ಯ ಮಣ್ಣುಪಾಲಾಗುತ್ತಿರುವ ಮಹಿಳೆಯ ಘನತೆಯನ್ನು ಅವರು ಯಾವ ಕಾರಣಗಳಿಗಾಗಿ ಎತ್ತಿ ಹಿಡಿಯದೆ ತೆಪ್ಪಗಿದ್ದಾರೆ? ಗೊತ್ತಿದ್ದೂ ತೆಪ್ಪಗಿದ್ದರೆ ಒಂದೋ ಅವರು ಅಸಹಾಯಕರಿರಬೇಕು ಇಲ್ಲವೇ ಡಾಂಭಿಕರಿರಬೇಕು.
ಮನುಧರ್ಮ ಶಾಸ್ತ್ರ ನೂರಾರು ವರ್ಷಗಳಿಂದ ಮನುಷ್ಯ ಮನುಷ್ಯರ ನಡುವೆ, ಗಂಡು ಹೆಣ್ಣಿನ ನಡುವೆ ಅಸಮಾನತೆಯನ್ನು ಹಿಗ್ಗಿಸಿಕೊಂಡೇ ಬಂದಿದೆ. ಈ ಮನುಧರ್ಮಶಾಸ್ತ್ರವನ್ನು ನಮ್ಮ ಸಂವಿಧಾನಕ್ಕೆ ಅಳವಡಿಸಿಕೊಳ್ಳಲಿಲ್ಲವೆಂದು ಈ ಹಿಂದೆ ಪ್ರತ್ಯಕ್ಷವಾಗಿ ಪ್ರಲಾಪಿಸಿದ ಮತ್ತು ಈಗಲೂ ಪರೋಕ್ಷವಾಗಿ ಪ್ರಲಾಪಿಸುತ್ತಿರುವ ಶಕ್ತಿಗಳು ಯಾವುವು ಎಂಬುದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತೆ. ಈ ಪ್ರಲಾಪವೇ ಸಂವಿಧಾನವನ್ನು ಬದಲಿಸುವ ವಿಷ ಕಕ್ಕುವ ವೀರಾವೇಶದ ಮಾತುಗಳಾಗಿ ಕಾಲ ಕಾಲಕ್ಕೆ ಪಕ್ಷ ಪರಿವಾರದ ಬಾಯಿಯಲ್ಲಿ ಹೊರಬೀಳುತ್ತಲೇ ಬಂದಿವೆ.
ಸ್ತ್ರೀಯು ಬಾಲ್ಯದಲ್ಲಿ ತಂದೆಯ ವಶದಲ್ಲಿ, ಯೌವ್ವನದಲ್ಲಿ ಗಂಡನ ವಶದಲ್ಲಿ, ಗಂಡ ಸತ್ತ ನಂತರ ಪುತ್ರರ ಅಧೀನದಲ್ಲಿ ಬಾಳಬೇಕಲ್ಲದೇ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು (ಬಾಲ್ಯೇ ಪಿತುರ್ವಶೇ ತಿಷ್ಠೇತ್ಪಾಣಿಗಹಸ್ಯ ಯೌವನೇ | ಪುಶ್ಚಾಣಾಂ ಭರ್ತರಿ ಪ್ರೇತೇ ನ ಭಜೇತ್ ಸ್ತ್ರೀ ಸ್ವತಂತ್ರತಾಂ || (ಅಧ್ಯಾಯ 5:148). ಹೆಣ್ಣಿನ ಸ್ವಾತಂತ್ರ್ಯವನ್ನು ಕುರಿತು ಮನುಸ್ಮೃತಿ ವಿಧಿಸಿರುವ ಕಟ್ಟಳೆಯಿದು. ಸಾವಿರಾರು ವರ್ಷಗಳ ಹಿಂದೆ ಮೇಲು ಕೀಳಿನ ಕಟ್ಟಳೆಗಳನ್ನು ಶಿಕ್ಷಾರ್ಹ ಅಪರಾಧಗಳೆಂದು ನಿಗದಿ ಮಾಡಿದ ಮನುಸ್ಮೃತಿಯು ಹೆಣ್ಣುಮಕ್ಕಳ ಕುರಿತು ಇದಕ್ಕಿಂತಲೂ ಘೋರವಾದ ಮಾತುಗಳನ್ನು ಆಡಿದೆ.
ಆದರೆ ನಾರೀಶಕ್ತಿ (Empowerment of Women) ಎಂಬುದು ಬಿಜೆಪಿಯ ತುಟಿಯ ಮೇಲಿನ ಮಾತು. ಅಂತರಾಳದಲ್ಲಿ ಅಡಗಿರುವುದು ಮನುವಿನ ಮಾನವವಿರೋಧಿ ಮನೋಧರ್ಮವೇ ವಿನಾ ಇನ್ನೇನೂ ಅಲ್ಲ.
ಇತ್ತೀಚೆಗೆ Eko ಎಂಬ ಹೆಸರಿನ ಮಲೆಯಾಳಂ ಚಲನಚಿತ್ರವೊಂದು ತೆರೆಕಂಡಿತ್ತು. ಅದು ಮನುವಿನ ಮನೋಧರ್ಮ ಸಮಕಾಲೀನ ಗಂಡಾಳಿಕೆಯಡಿ ಪದರಪದರಗಳಾಗಿ ಹುದುಗಿರುವ ಪರಿಯನ್ನು ಬಿಡಿಸಿಟ್ಟಿತ್ತು. ರಕ್ಷಣೆಯ ಹೆಸರಿನಲ್ಲಿ ಹೆಣ್ಣನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಕೆಗೆ ಗೊತ್ತಿಲ್ಲದಂತೆಯೇ ಕಟ್ಟಿ ಹಾಕುವ ಗಂಡಾಳಿಕೆಯನ್ನು ನಗ್ನಗೊಳಿಸಿತ್ತು. ನಾರಿ, ಶಕ್ತಿ, ದುರ್ಗೆ, ಜಗನ್ಮಾತೆ ಎಂದು ಒಂದೆಡೆ ಪೂಜಿಸುವವರು ನಿಜ ಬದುಕಿನಲ್ಲಿ ಅವರನ್ನು ಹೆರುವ ಯಂತ್ರಗಳಂತೆ, ಪಿಪಾಸೆ ತೀರಿಸುವ ಭೋಗದ ಸರಕಿನಂತೆ, ಜೀತದಾಳಿನಂತೆ ನಡೆಸಿಕೊಳ್ಳುತ್ತಿದ್ದಾರೆ.
ಇದೀಗ ಕಾಳಜಿ ಕಳಕಳಿಯ ಹೆಸರಿನಲ್ಲಿ ಆಕೆಯ ತೀರ್ಮಾನದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಆರಂಭಕ್ಕೆ ಕೈಯಿಟ್ಟಿದೆ ಗುಜರಾತ್ ಸರ್ಕಾರ. ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಈಗಾಗಲೆ ಬಲವಂತದ ಮತಾಂತರ ನಿಗ್ರಹ ಕಾಯಿದೆಯ ವೇಷಾಂತರದಲ್ಲಿ ಹೆಣ್ಣಿನ ಆಯ್ಕೆ ಸ್ವಾತಂತ್ರ್ಯಹರಣ ಮಾಡಿವೆ. ಉತ್ತರಾಖಂಡ ಬಿಜೆಪಿ ಸರ್ಕಾರ ‘ಸಹಜೀವನ’ದ (ಲಿವ್ ಇನ್) ಮೇಲೆ ಆಕ್ರಮಣ ನಡೆಸಿದೆ.
ಪಕ್ಷ-ಪರಿವಾರದ ಈ ಎಲ್ಲ ಘೋಷಿತ ಅಘೋಷಿತ ಆಕ್ರಮಣಗಳ ಹಿಂದಿರುವುದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ‘ವರ್ಣ ವ್ಯವಸ್ಥೆಯನ್ನೂ ಎತ್ತಿ ಹಿಡಿದು ಅದು ಬೆರಕೆಯಾಗದಂತೆ ತಡೆಹಿಡಿಯುವುದೇ ಆಗಿದೆ. ಹೆಜ್ಜೆ ಹೆಜ್ಜೆಗೆ ಮೇಲು ಕೀಳನ್ನೂ, ಅಸ್ಪೃಶ್ಯತೆಯನ್ನೂ ಮೈಗೂಡಿಸಿಕೊಂಡಿರುವ ಜಾತಿವ್ಯವಸ್ಥೆ ಹಾಗೂ ಕರ್ಮಸಿದ್ಧಾಂತವನ್ನು ಎತ್ತಿ ಹಿಡಿಯುವುದೇ ಆಗಿದೆ. ಯಥಾಸ್ಥಿತಿವಾದದ ಬಹುದೊಡ್ಡ ಹತಾರುಗಳಿವು.
ಸಂವಿಧಾನದ 21ನೆಯ ಅನುಚ್ಛೇದವು ಏನನ್ನು ಸಾರುತ್ತದೆ? ಎಲ್ಲ ಭಾರತೀಯ ನಾಗರಿಕರ ಪ್ರಾಣದ ಹಕ್ಕು ಮತ್ತು ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆ. ಸಾಂವಿಧಾನಿಕ ನ್ಯಾಯದ ಕುರಿತು ಸುಪ್ರೀಮ್ ಕೋರ್ಟು ಕಾಲಕಾಲಕ್ಕೆ ನೀಡುತ್ತ ಬಂದಿರುವ ತೀರ್ಪುಗಳು ಈ ಅಮೂಲ್ಯ ಸ್ವಾತಂತ್ರ್ಯಗಳ ಸಾಂವಿಧಾನಿಕ ಖಾತರಿಯನ್ನು ಪುನರುಚ್ಚರಿಸುತ್ತ ಬಂದಿವೆ. ಬಾಹ್ಯ ಶಕ್ತಿಗಳ ಹಸ್ತಕ್ಷೇಪವಿಲ್ಲದೆ ಬಾಳಸಂಗಾತಿಯ ಆಯ್ಕೆಯ ಸ್ವಾತಂತ್ರ್ಯವೂ ಈ ಖಾತರಿಯಲ್ಲಿ ಸೇರಿದೆ. ವಯಸ್ಕರಿಬ್ಬರ ಪರಸ್ಪರರ ಆಯ್ಕೆ ಸ್ವಾತಂತ್ರ್ಯದಲ್ಲಿ ಕುಟುಂಬವಾಗಲೀ, ಸುತ್ತಣ ಸಮುದಾಯವಾಗಲೀ ಮೂಗು ತೂರಿಸುವಂತೆಯೇ ಇಲ್ಲ ಎಂದು ಸಂಶಯಕ್ಕೆ ಎಡೆಯಿಲ್ಲದಂತೆ ಸಾರಿವೆ ಈ ತೀರ್ಪುಗಳು.
ಸಂವಿಧಾನ ನೀಡಿರುವ ವ್ಯಕ್ತಿಸ್ವಾತಂತ್ರ್ಯವು ಸಂವಿಧಾನದ ಮೂಲಭೂತ ಸಂರಚನೆಯ (Basic Structure of The Constitution) ಅವಿಭಾಜ್ಯ ಅಂಗ. ಅರ್ಥಾತ್ ಸಂಸತ್ತಿನ ಬಹುಮತವೂ ಈ ಮೂಲಭೂತ ರಚನೆಯನ್ನು ಅಲುಗಿಸುವಂತಿಲ್ಲ.
ಗುಜರಾತ್ ಸರ್ಕಾರ ತನ್ನ ಗಂಡಾಳಿಕೆಯ, ದ್ವೇಷದ ದುಸ್ಸಾಹಸವನ್ನು ಕಸದ ಬುಟ್ಟಿಗೆಸೆಯುವುದೇ ಮಾನವಂತ ನಡೆ.





