“ಹಾಟ್ಯ ಹಾಟ್ಯ ಎನಬೇಡ, ಹಾಟು ಸಣ್ಣದಲ್ಲ, ಅದು ಬಲು ದೊಡ್ಡದು ತಂಗಿ, ಹಾಟಿನೊಳಗ ಜಗನಾಟಿತೋ ಅದು ಭಲೇ ದೊಡ್ಡದು ತಂಗಿ” ಎನ್ನುತ್ತಾ ತಲೆ ಮೇಲೆ ಮೊಟಕಿದಂತೆ ಮಡಿಮೈಲಿಗೆಯನ್ನು ಕಟುವಾಗಿ ಟೀಕಿಸಿರುವ ಪರಂಪರೆ ಈ ನಾಡಿನದ್ದು.
ಕರ್ನಾಟಕ ಕ್ಯಾಬಿನೆಟ್ ಕಳೆದ ಗುರುವಾರ ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತು. ಒಂದು- ‘ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವುದು’, ಎರಡು- ‘ಅನ್ನಭಾಗ್ಯ ಯೋಜನೆಯಡಿ ಇಂದಿರಾ ಆಹಾರ ಕಿಟ್ ವಿತರಿಸುವುದು’.
ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ರಾಜ್ಯದೊಳಗೆ ಕಾರ್ಯನಿರ್ವಹಿಸುತ್ತಿರುವ ಇತರ ಕಂಪನಿಗಳಂತಹ ವಿವಿಧ ಖಾಸಗಿ ವಲಯದ ಕೈಗಾರಿಕೆಗಳು ಸೇರಿದಂತೆ ರಾಜ್ಯದ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಪ್ರತಿ ಮಹಿಳೆಯರಿಗೆ ಒಂದು ದಿನದ ವೇತನ ಸಹಿತ ರಜೆಯನ್ನು ಮಂಜೂರು ಮಾಡಲು ಕಾರ್ಮಿಕ ಇಲಾಖೆಯು ಕೋರಿದ್ದ ‘2025ರ ಮುಟ್ಟಿನ ರಜೆ ನೀತಿ’ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಆ ಮೂಲಕ ಮಹಿಳಾ ಪರವಾದ ಮತ್ತೊಂದು ನಿರ್ಧಾರವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ.
ಮುಟ್ಟಿನ ಬಗ್ಗೆ ತಪ್ಪು ಕಲ್ಪನೆಗಳಿರುವ ಸಮಾಜ ನಮ್ಮದು. ಮುಟ್ಟಿನ ಕಾರಣಕ್ಕೆ ಮಹಿಳೆಯರನ್ನು ಊರಾಚೆ ಇಡುವ ದುಷ್ಟ ಪದ್ಧತಿಗಳು ಈಗಲೂ ವರದಿಯಾಗುತ್ತಲೇ ಇರುತ್ತವೆ. ಧಾರ್ಮಿಕ ಮೂಲಭೂತವಾದಿಗಳು ಮಟ್ಟಿನ ಬಗ್ಗೆ ಅಸಹನೀಯ ಮನಸ್ಥಿತಿಯನ್ನು ಸಮಾಜದಲ್ಲಿ ಪೋಷಿಸುತ್ತಾ ಬಂದಿದ್ದಾರೆ. ಮುಟ್ಟನ್ನು ದೈಹಿಕ ನ್ಯೂನತೆ ಎಂಬಂತೆಯೂ ಚಿತ್ರಿಸಿರುವ ಪ್ರತಿಗಾಮಿ ಆಲೋಚನೆಗಳನ್ನು ಒಡೆಯುವ ಕೆಲಸಗಳು ನಿರಂತರ ಆಗುತ್ತಲೇ ಇರಬೇಕು. ಬ್ರಾಹ್ಮಣೀಯ ವ್ಯವಸ್ಥೆ ಮುಟ್ಟಿನ ಬಗ್ಗೆ ಬಿತ್ತಿರುವ ಕೀಳುಭಾವನೆಯನ್ನು ಮೂಲೋತ್ಪಾಟನೆ ಮಾಡುವ ಪ್ರಯತ್ನಗಳನ್ನು ನಮ್ಮ ಪ್ರಗತಿಶೀಲ ಚಿಂತನಾ ಪರಂಪರೆಯು ನಿರಂತರ ಮಾಡುತ್ತಾ ಬಂದಿದೆ. ಶ್ರಮ ಸಂಸ್ಕೃತಿಯನ್ನೇ ಉಸಿರಾಡುವ ಶ್ರಮಣಧಾರೆಗಳಂತೂ ಮುಟ್ಟು, ಮಡಿವಂತಿಕೆಯನ್ನು ಕಟುವಾಗಿ ಟೀಕಿಸಿರುವುದನ್ನು ಗಮನಿಸಬಹುದು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು
ನಮ್ಮ ನಾಡಿನ ತತ್ವಪದಕಾರ ಕಡಕೋಳ ಮಡಿವಾಳಪ್ಪ, “ಮಡಚಟ್ಟಿನೊಳು ಬಂದು ಮಟ್ಟಿತಟ್ಟಿ ಎನುತೀರಿ, ಮುಡಚಟ್ಟು ಎಲ್ಲೈತೆ ಹೇಳಣ್ಣ, ಮುಟ್ಟಾದ ಮೂರು ದಿನಕೆ ಹುಟ್ಟಿ ಬಂದಿಹ ನೀನು, ಮುಡಚಟ್ಟು ಎಲ್ಲೈತೆ ಹೇಳಣ್ಣ, ತೊಗಲೊಳು ತೊಗಲ್ಹೊಕ್ಕು ತಗಲಿ ಬಂದಾರ ನೀನು ತಗಲ ಮಾತಾಡುತ್ತೀಯೇನಣ್ಣ, ಈ ಬಗಿ ತಿಳಿಯದ ಒಗಟು ಮಾತಾಡಿದರ ನಗೆಗೇಡಿ ಕಾಣುತಾದಣ್ಣ” ಎನ್ನುತ್ತಾರೆ. ಮತ್ತೊಂದು ತತ್ವಪದದಲ್ಲಿ, “ಹಾಟ್ಯ ಹಾಟ್ಯ ಎನಬೇಡ ಹಾಟ್ಯ ಸಣ್ಣದಲ್ಲ, ಅದು ಬಲು ದೊಡ್ಡದು ತಂಗಿ, ಹಾಟಿನೊಳಗ ಜಗನಾಟಿತೋ ಅದು ಭಲೇ ದೊಡ್ಡದು ತಂಗಿ” ಎಂದು ತಲೆಮೇಲೆ ಮೊಟಕಿದಂತೆ ಮಡಿವಾಳಪ್ಪ ಹೇಳುತ್ತಾರೆ. ಮತ್ತೊಂದು ತತ್ವಪದ, “ಮುಟ್ಟು ಮುಟ್ಟೆಂದು ಮೂರ್ಮಾರು ಹೊರಳುವೆ, ಮುಟ್ಟೆಲ್ಲಿ ಬಂತೋ ಬಿಕನಾಸಿ, ಮುಟ್ಟು ನೀನೇ ಮಡಿಯೇ ನೀನೇ, ಕೆಟ್ಟಿತು ನಿನ್ನ ಮಡಿ ಬಿಕನಾಸಿ” ಎಂದು ತಿವಿಯುತ್ತದೆ. “ಮುಟ್ಟು ಕಂಡವಳನ್ನು, ಮುಟ್ಟಲೊಲ್ಲರು ನೋಡ, ಮುಟ್ಟು ತಾ ಪಡೆದು, ಹುಟ್ಟಿದಾ ದೇಹವನು, ಮುಟ್ಟುತಿಹರೇಕೆ?” ಎಂದು ಪ್ರಶ್ನಿಸುತ್ತಾನೆ ಕವಿ ಸರ್ವಜ್ಞ. ಹೀಗೆ ನಮ್ಮ ಪರಂಪರೆಯು ಪ್ರತಿಗಾಮಿ ಆಲೋಚನೆಗಳನ್ನು ಒಡೆದು ಹಾಕುವ ಕೆಲಸವನ್ನು ನಿರಂತರ ಮಾಡುತ್ತಾ ಬಂದಿದೆ. ಆದರೆ ನಮ್ಮ ನಿಜವಾದ ಸಾಂಸ್ಕೃತಿಕ ನೆಲೆಗಳನ್ನು ಮರೆತಿರುವ ಸಮಾಜ, ಮನುಪ್ರಣೀತ ಸಿದ್ಧಾಂತಕ್ಕೆ ಬಲಿಯಾಗಿರುವ ಕಾಲದಲ್ಲಿ, ಮಡಿಮೈಲಿಗೆಗಳನ್ನು ತೊಳೆದುಹಾಕುವ ಪ್ರಯತ್ನಗಳು ಹೆಚ್ಚಾಗಬೇಕಿದೆ. ಆ ಮೂಲಕ ಮುಟ್ಟಿನ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಇಲ್ಲವಾಗಿಸಬೇಕು.
ಮುಟ್ಟು ನೈಸರ್ಗಿಕ ಕ್ರಿಯೆ. ಆದರೆ ಮುಟ್ಟಿನ ನೋವಿನ ಕಾರಣಕ್ಕೆ ಮತ್ತು ಅದರ ಬಗ್ಗೆ ಬೆಳೆಸಲಾಗಿರುವ ಅಪಕಲ್ಪನೆಗಳಿಂದಾಗಿ ಮಹಿಳೆಯರು ಸ್ವದುಡಿಮೆಯಿಂದ ದೂರ ಉಳಿಯುವ, ಶಿಕ್ಷಣವನ್ನೇ ನಿಲ್ಲಿಸಿಬಿಡುವ ನಿರ್ಧಾರಕ್ಕೆ ಬರುತ್ತಾರೆ. ಹಿಂದೊಮ್ಮೆ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, “ವೇತನ ಸಹಿತ ಮುಟ್ಟಿನ ರಜೆಯ ಅಗತ್ಯವಿಲ್ಲ, ಅದೇನು ಅಂಗವಿಕಲತೆ ಅಲ್ಲ” ಎಂದು ಅತ್ಯಂತ ಅಸೂಕ್ಷ್ಮವಾಗಿ ಮಾತನಾಡಿದ್ದರು. ಖಂಡಿತ ಮುಟ್ಟು ಅಂಗವಿಕಲತೆಯಲ್ಲ. ಆದರೆ ಮುಟ್ಟಿನ ಕಾರಣಕ್ಕೆ ಮಹಿಳೆಯರು ಅನುಭವಿಸುವ ಮಾನಸಿಕ, ದೈಹಿಕ ಏರಿಳಿತಗಳನ್ನು ಅರ್ಥಮಾಡಿಕೊಳ್ಳಬೇಕು. ಮುಟ್ಟಿನ ಬಾಧೆಯನ್ನು ತಾಯ್ಗಣ್ಣಿನಿಂದ ಗ್ರಹಿಸಲು ಮಡಿವಾಳಪ್ಪನಂಥವರ ಮನಸ್ಸು ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಮುಟ್ಟಿನ ರಜೆಯನ್ನು ಘೋಷಿಸಿರುವುದು ಸಂವೇದನಾಶೀಲ ನಿರ್ಧಾರ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್‌ಗೆ ನೂರು, ನ್ಯಾಯಮೂರ್ತಿಗಳ ಮೇಲೆ ಶೂ ತೂರು
ಕ್ಯಾಬಿನೆಟ್ ಕೈಗೊಂಡಿರುವ ಮತ್ತೊಂದು ಪ್ರಮುಖ ಕಾರ್ಯಕ್ರಮ- ಇಂದಿರಾ ಆಹಾರ ಕಿಟ್ ವಿತರಣೆ. ತೊಗರಿ ಬೇಳೆ, ಸಕ್ಕರೆ, ಹೆಸರು ಬೇಳೆ, ಎಣ್ಣೆ, ಉಪ್ಪು ಒಳಗೊಂಡ ಈ ಕಿಟ್ ಬಡವರ ಪಾಲಿಗೆ ಆಸರೆಯಾಗುವುದಂತೂ ಖಚಿತ. ಈಗಾಗಲೇ ಐದು ಕೆಜಿ ಅಕ್ಕಿ ಅಥವಾ ಗೋದಿ, ರಾಗಿ, ಜೋಳ ವಿತರಿಸುತ್ತಿದ್ದ ಸರ್ಕಾರ ಕಿಟ್ ಮೂಲಕ 10 ಕೆಜಿ ಪಡಿತರವನ್ನು ಕೊಡಲು ಮುಂದಾಗಿದೆ. ಕಾರ್ಬೊಹೈಡ್ರೇಟ್ ಆಹಾರ ಪದಾರ್ಥಗಳನ್ನು ಕಡಿಮೆ ಮಾಡಿ, ಪ್ರೊಟೀನ್‌ಯುಕ್ತ ಆಹಾರವನ್ನು ವಿತರಿಸಬೇಕು ಎಂಬುದು ಎಲ್ಲ ಆಹಾರ ತಜ್ಞರ ಆಗ್ರಹವೂ ಆಗಿತ್ತು. ಕಾಳುಗಳನ್ನು ವಿತರಿಸಲು ಮುಂದಾಗಿರುವುದರಿಂದ ಬಡವರ ಪೌಷ್ಟಿಕತೆಗೂ ಅನುಕೂಲವಾಗುತ್ತದೆ. ಸಕ್ಕರೆಯಂತಹ ಕಾರ್ಬೊಹೈಡ್ರೇಟ್ ಪದಾರ್ಥವನ್ನು ಮೊದಲಿನಿಂದಲೂ ಕೊಡುತ್ತಿದ್ದು, ಅದನ್ನು ನಿಲ್ಲಿಸಿ, ಕಾಳುಗಳನ್ನು ಹೆಚ್ಚುವರಿಯಾಗಿ ನೀಡಿದರೂ ಸರ್ಕಾರದ ನಡೆ ಮತ್ತಷ್ಟು ಜನಪರವಾಗುತ್ತದೆ.
ಏನೇ ಇರಲಿ, ಹಣ ಅಥವಾ ಹತ್ತು ಕೆ.ಜಿ. ಅಕ್ಕಿಯನ್ನು ವಿತರಿಸುವ ಬದಲಿಗೆ ಇತರೆ ಧಾನ್ಯಗಳನ್ನು ಕೊಡಲು ನಿರ್ಧರಿಸಿರುವುದು ಹೆಚ್ಚು ಅನುಕೂಲಕರ. ಹೀಗಾಗಿ ಕ್ಯಾಬಿನೆಟ್ ಕೈಗೊಂಡಿರುವ ಈ ಎರಡು ನಿರ್ಧಾರಗಳನ್ನು ಈ ನಾಡಿನ ಜನ ಶ್ಲಾಘಿಸಲೇಬೇಕು. “ಬಡವರಿಗೆ ಅಕ್ಕಿ ಕೊಟ್ಟರೆ- ಅದು ಬಿಟ್ಟಿ ಭಾಗ್ಯ, ಜನ ಸೋಮಾರಿಗಳಾಗುತ್ತಾರೆ, ಮಹಿಳೆಯರಿಗೆ ಹೆಚ್ಚಿನ ಯೋಜನೆಗಳನ್ನು ಘೋಷಿಸಿದರೆ ಸರ್ಕಾರದ ಬೊಕ್ಕಸ ಬರಿದಾಗುತ್ತದೆ, ಮಹಿಳೆಯರು ಮನೆಬಿಟ್ಟು ಹೋಗುತ್ತಾರೆ” ಎನ್ನುವಂತಹ ಕುಹಕಿಗಳು, ಅತೃಪ್ತರು ಇದ್ದೇ ಇರುತ್ತಾರೆ. ಸಂವಿಧಾನ ವಿರೋಧಿಗಳಷ್ಟೇ ಇಂತಹ ಯೋಜನೆಗಳನ್ನು ಅಣಕ ಮಾಡುತ್ತಾರೆ. ಮಹಿಳೆಯರು ಮತ್ತು ಅಂಚಿನಲ್ಲಿರುವ ಸಮುದಾಯಗಳನ್ನು ಕೈ ಹಿಡಿದು ಮುನ್ನಡೆಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿರುತ್ತದೆ. ಈ ಕಾರಣಕ್ಕೆ ಸಿದ್ದರಾಮಯ್ಯನವರ ಸರ್ಕಾರಕ್ಕೆ ಹೃದಯ ತುಂಬಿದ ಅಭಿನಂದನೆಗಳು.





