ಬಿಜೆಪಿ ಜೆಡಿಎಸ್ ಪಕ್ಷಗಳ ಮೈತ್ರಿಯ ನಂತರ ಮಂಡ್ಯದಲ್ಲಿ ಕೋಮುದ್ವೇಷದ ಚಟುವಟಿಕೆಗಳು ಹೆಚ್ಚಾಗಿರುವುದನ್ನು ಜಿಲ್ಲೆಯ ಜನ ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ. ಆರೆಸ್ಸೆಸ್ ಮತ್ತು ಹಿಂದುತ್ವದ ಸಂಘಟನೆಗಳು ಸಾಮಾಜಿಕ ಶಾಂತಿ ಕದಡುತ್ತಾ ಬಿಜೆಪಿಯನ್ನು ಅಧಿಕಾರದಲ್ಲಿ ಚಿರಸ್ಥಾಯಿಯಾಗಿಸಲು ಹುನ್ನಾರ ನಡೆಸುತ್ತಿವೆ. ಮಂಡ್ಯದ ಜನ ಮಾತ್ರವಲ್ಲ ರಾಜ್ಯದ ಪ್ರಜ್ಞಾವಂತ ಸಮೂಹ ಈ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವೂ ಇದೆ.
ಸಕ್ಕರೆ ನಾಡು ಮಂಡ್ಯ ಕಳೆದ ಕೆಲ ವರ್ಷಗಳಿಂದ ಆಗಬಾರದ ಕಾರಣಕ್ಕೆ ಸುದ್ದಿಯಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಬೆಸೆದಿರುವ ಈ ನೆಲ ಇತ್ತೀಚೆಗೆ ಕೊಳಕು ರಾಜಕೀಯ, ಕೋಮುವಾದದ ಅಪಾಯಕಾರಿ ಅಜೆಂಡಗಳಿಗೆ ಸಿಲುಕಿದೆ. ಮಂಡ್ಯ ಜಿಲ್ಲೆ ಆರೆಸ್ಸೆಸ್‌ನ ಕೋಮುವಾದದ ಪ್ರಯೋಗಶಾಲೆಯಾಗುತ್ತಿದೆ ಎಂಬ ಮಾತುಗಳಿಗೆ ಪುಷ್ಠಿ ನೀಡುವಂತಹ ಘಟನೆಗಳು ಆಗಾಗ ನಡೆಯುತ್ತಿದೆ. ಗಣೇಶನ ಮೆರವಣಿಗೆ, ಹನುಮ ಜಯಂತಿ ಹೀಗೆ ಅವಕಾಶ ಸಿಕ್ಕಾಗಲೆಲ್ಲ ಹಿಂದುತ್ವದ ಮತ್ತೇರಿಸಿಕೊಂಡ ಯುವಕರು ಮಸೀದಿ ಮುಂದೆ ಗಲಭೆ ಸೃಷ್ಟಿಸುತ್ತಿದ್ದಾರೆ. ಅಂತಹ ಕಿಡಿಗೇಡಿಗಳ ಪರ ನಿಂತು ರಾಜಕಾರಣಿಗಳು ದ್ವೇಷಭಾಷಣ ಮಾಡಿ ಇನ್ನಷ್ಟು ಶಾಂತಿ ಕದಡುತ್ತಿದ್ದಾರೆ. ಇದು ನಿಜಕ್ಕೂ ಕೆಟ್ಟ ಬೆಳವಣಿಗೆ.
ಕರಾವಳಿಯ ಅವಳಿ ಜಿಲ್ಲೆಗಳಾದ ಮಂಗಳೂರು- ಉಡುಪಿ ಕೋಮುವಾದದ ದಳ್ಳುರಿಯಲ್ಲಿ ಈಗಾಗಲೇ ನಲುಗಿ ಹೋಗಿದೆ. ಅದರ ಲಾಭ ಪಡೆದಿದ್ದು ಬಿಜೆಪಿ. ಹಿಂದುತ್ವದ ಅಮಲೇರಿಸಿಕೊಂಡ ಜಿಲ್ಲೆಗಳಿಂದ ಸತತವಾಗಿ ಬಿಜೆಪಿ ಸಂಸದರು, ಶಾಸಕರು ಗೆದ್ದು ಬರುತ್ತಿದ್ದಾರೆ. ಆದರೆ ಜಿಲ್ಲೆಗೆ ಬಹುರಾಷ್ಟ್ರೀಯ ಕಂಪನಿಗಳು ಬರುತ್ತಿಲ್ಲ. ದೇಶೀಯ ಉದ್ಯಮಗಳೂ ಬರುತ್ತಿಲ್ಲ. ಹಲವಾರು ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳಿಂದ ಸಾವಿರಾರು ಮಕ್ಕಳು ಹೊರಬಂದು ಬೇರೆ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸದಾ ಕೋಮು ಗಲಭೆ, ಮುಸ್ಲಿಂ ದ್ವೇಷದ ಘಟನೆಗಳು, ಸರಣಿ ಕೊಲೆಗಳು ನಡೆಯುತ್ತಿದ್ದ ಕಾರಣ, ʼಬುದ್ಧಿವಂತರ ಜಿಲ್ಲೆʼ ಎಂದು ಕರೆಸಿಕೊಂಡಿದ್ದ ದಕ್ಷಿಣ ಕನ್ನಡಕ್ಕೆ ಕೋಮುವಾದದ ಕಳಂಕ ಅಂಟಿ ದಶಕಗಳೇ ಸಂದಿದೆ. ಅದರಿಂದ ಹೊರಬರಲಾರದೆ ನರಳುತ್ತಿದೆ. ಬಿಜೆಪಿ ಸರ್ಕಾರ ಇದ್ದಾಗ ಮುಸ್ಲಿಮರನ್ನು ಗುರಿಯಾಗಿಸಿ ನಡೆದ ಹಿಂದೂ ಕೋಮುವಾದಿಗಳ ಅಭಿಯಾನ ಶಾಲೆಗಳಲ್ಲಿ ಹಿಜಾಬ್ ನಿಷೇಧ, ಜಾತ್ರೆಯಲ್ಲಿ ವ್ಯಾಪಾರ ನಿರಾಕರಣೆ, ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ, ಆಜಾನ್ ನಿಷೇಧ ಹೇರಲು ಕಾನೂನು ಹೋರಾಟ ನಡೆಸಿದ್ದ ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಗಳು ರಾಜ್ಯವನ್ನು ಸದಾ ಕೋಮು ದಳ್ಳುರಿಯಲ್ಲಿ ಬೇಯುವಂತೆ ಮಾಡಿದ್ದವು. ಕರಾವಳಿಯ ಬಿಜೆಪಿ ಶಾಸಕರು, ಸಂಸದರೇ ಖುದ್ದು ಮುಸ್ಲಿಂ ವಿರೋಧ ಅಭಿಯಾನಗಳಲ್ಲಿ ಭಾಗಿಯಾಗಿದ್ದರು.
ಆನಂತರ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಉಡುಪಿ ಮಂಗಳೂರಿನಲ್ಲಿ ಕೋಮು ದ್ವೇಷದ ಚಟುವಟಿಕೆಗಳು ಹಾಗೇ ಕಾವು ಪಡೆದುಕೊಂಡಿದ್ದವು. ಉಡುಪಿಯಲ್ಲಿ ಮೊದಲ ಬಾರಿಗೆ ಶಾಸಕರಾದ ಆಯ್ಕೆಯಾದ ಯಶ್ಪಾಲ್ ಸುವರ್ಣ ಕಾಲೇಜೊಂದರ ವಿದ್ಯಾರ್ಥಿನಿಯರ ಮಧ್ಯೆ ನಡೆದ ಪ್ರಕರಣವನ್ನು ಕೋಮು ದ್ವೇಷಕ್ಕೆ ಬಳಸಿಕೊಂಡರು. ಕಾಂಗ್ರೆಸ್ ಸರ್ಕಾರ ಬಂದರೂ ಹಿಂದುತ್ವದ ಪುಂಡಾಟಕ್ಕೆ ಬ್ರೇಕ್ ಬಿದ್ದಿರಲಿಲ್ಲ. ಇದು ರಾಜ್ಯದ ಪ್ರಗತಿಪರ ವಲಯದಲ್ಲಿ ಭಾರೀ ಟೀಕೆಗೆ ಕಾರಣವಾಗಿತ್ತು. ಕಳೆದ ಜೂನ್‌ನಲ್ಲಿ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಮಂಗಳೂರಿನಲ್ಲಿ ವಯನಾಡು ಮೂಲದ ಬಡ ಕೂಲಿ ಕಾರ್ಮಿಕ ಅಶ್ರಫ್‌ನನ್ನು ಅಕಾರಣವಾಗಿ ಹಿಂದೂ ಯುವಕರ ಗುಂಪು ಕೊಲೆ ಮಾಡಿತ್ತು. ಅದಾದ ನಂತರ ರೌಡಿಶೀಟರ್ ಸುಹಾಸ್ ಶೆಟ್ಟಿಯ ಕೊಲೆ, ಅದಕ್ಕೆ ಪ್ರತೀಕಾರವಾಗಿ ಕೊಳತ್ತಮಜಲಿನ ರೆಹ್ಮಾನ್‌ನ ಕೊಲೆ ನಡೆದು ಸರ್ಕಾರಕ್ಕೆ ತಲೆನೋವಾಗಿತ್ತು. ಆ ನಂತರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ Anti-Communal Task Force ಸ್ಥಾಪಿಸಿ ಮಂಗಳೂರಿಗೆ ಖಡಕ್ ಪೊಲೀಸ್ ಕಮಿಷನರ್ ನೇಮಕ ಮಾಡಿ ಸಮಾಜಘಾತಕ ಶಕ್ತಿಗಳು ಬಾಲ ಬಿಚ್ಚದಂತೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ.
ಕರಾವಳಿಯ ನಂತರ ಈಗ ಮಂಡ್ಯದಲ್ಲಿ ಇದೇ ರೀತಿ ಸಮಾಜಘಾತಕ ಶಕ್ತಿಗಳಿಗೆ ಕಡಿವಾಣ ಹಾಕುವ ಅಗತ್ಯ ಇದೆ. ಮಂಡ್ಯ ಈಗ ಕೋಮುಘರ್ಷಣೆಯ ಮೂಲಕ ಹೆಚ್ಚು ಸುದ್ದಿಯಾಗುತ್ತಿದೆ. ಕಳೆದ ವರ್ಷ ಕೆರಗೋಡಿನಲ್ಲಿ ಭಗವಾಧ್ವಜ ಹಾರಿಸಿ ವಿವಾದ ಸೃಷ್ಟಿಸಿದ್ದ ಹಿಂದುತ್ವವಾದಿ ಸಂಘಟನೆಗಳು ಮತ್ತು ಬಿಜೆಪಿ ಮಂಡ್ಯದ ನೆಲದಲ್ಲಿ ಕೋಮು ಸೌಹಾರ್ದತೆಗೆ ಕಳಂಕ ಅಂಟಿಸಿದ್ದವು. ಕಳೆದ ವರ್ಷ ಗಣೇಶ ಮೆರವಣಿಗೆ ಮಸೀದಿಯ ಮುಂದೆಯೇ ಸಾಗಲು ಹಟ ಹಿಡಿದ ಹಿಂದುತ್ವವಾದಿಗಳು ಮಸೀದಿ ಮುಂದೆ ಸಾಗುವಾಗ ಕಲ್ಲು ತೂರಾಟ ನಡೆದು ಜಿಲ್ಲೆ ಉದ್ವಿಗ್ನಗೊಂಡಿತ್ತು. ಈ ವರ್ಷ ಮತ್ತೆ ಗಣೇಶೋತ್ಸವದ ಮೆರವಣಿಗೆ ಮಸೀದಿ ಮುಂದೆ ಹಾದು ಹೋಗುವಾಗ ಘರ್ಷಣೆ ನಡೆದಿದೆ. ಎರಡೂ ಪ್ರಕರಣಗಳಲ್ಲಿ ಹಲವರು ಬಂಧನಕ್ಕೊಳಗಾಗಿದ್ದಾರೆ. ಇದೇ ಡಿ. 3ರಂದು ಬುಧವಾರ ಹನುಮ ಮಾಲಾಧಾರಿಗಳು ಶ್ರೀರಂಗಪಟ್ಟಣದಲ್ಲಿ ಮೆರವಣಿಗೆ ಮಾಡಿ ಮಸೀದಿಯನ್ನು ಉರುಳಿಸಿ ಮಂದಿರ ಕಟ್ಟು ಹೇಳಿಕೆ ನೀಡಿದ್ದಾರೆ. ಜುಮ್ಮಾ ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ. ಕೆರೆಗೋಡು, ನಾಗಮಂಗಲ, ಮಂಡ್ಯ, ಶ್ರೀರಂಗಪಟ್ಟಣ ಹೀಗೆ ಎಲ್ಲಾ ಪ್ರಕರಣಗಳಲ್ಲಿಯೂ ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತದೆ. ಮಸೀದಿಯ ಮುಂದೆ ಡಿಜೆ ಹಾಕಿ ಕುಣಿಯಲು ಅವಕಾಶ ನೀಡುವುದು, ಹನುಮ ಮಾಲಾಧಾರಿಗಳು ಮುಸ್ಲಿಂ ದ್ವೇಷದ ಹೇಳಿಕೆ ನೀಡುವಾಗ ಪೊಲೀಸರು ಸುತ್ತುವರೆದು ರಕ್ಷಣೆ ಕೊಡುವ ರೀತಿ ವರ್ತಿಸಿರುವುದು ಪೊಲೀಸರ ಮನಸ್ಥಿತಿ ಬಗ್ಗೆ ಅನುಮಾನ ಮೂಡಿಸುತ್ತದೆ. ಈ ರೀತಿಯ ಘಟನೆ ನಿರೀಕ್ಷಿತವಾಗಿದ್ದರೂ, ಮಂಡ್ಯದಲ್ಲಿ ಪದೇ ಪದೇ ಕೋಮುದ್ವೇಷದ ಚಟುವಟಿಕೆಗಳು ನಡೆಯುತ್ತಿದ್ದರೂ ಹತ್ತು ಸಾವಿರ ಹನುಮ ಮಾಲಾಧಾರಿಗಳಿಗೆ ಅವಕಾಶ ನೀಡಲಾಗಿತ್ತು. ಮಸೀದಿ ಮಾರ್ಗದಲ್ಲಿಯೇ ಹೋಗಲು ಅವಕಾಶ ಕೇಳುವುದೇ ಗಲಭೆಯ ಉದ್ದೇಶದಿಂದ. ಸದ್ಯ ಅನಾಹುತವಾಗದಂತೆ ತಡೆದಿದ್ದಾರೆ ಪೊಲೀಸರು. ಆದರೆ, ದಕ್ಷಿಣ ಕನ್ನಡದ ರೀತಿಯಲ್ಲಿ ಮಂಡ್ಯದಲ್ಲೂ ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ಸ್ಥಾಪಿಸಿ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕುವ ಅಗತ್ಯ ಇದೆ.
ಬಿಜೆಪಿ ಜೆಡಿಎಸ್ ಪಕ್ಷಗಳ ಮೈತ್ರಿಯ ನಂತರ ಮಂಡ್ಯದಲ್ಲಿ ಕೋಮುದ್ವೇಷದ ಚಟುವಟಿಕೆಗಳು ಹೆಚ್ಚಾಗಿರುವುದನ್ನು ಜಿಲ್ಲೆಯ ಜನ ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ. ಆರೆಸ್ಸೆಸ್ ಮತ್ತು ಹಿಂದುತ್ವದ ಸಂಘಟನೆಗಳು ಸಾಮಾಜಿಕ ಶಾಂತಿ ಕದಡುತ್ತಾ ಬಿಜೆಪಿಯನ್ನು ಅಧಿಕಾರದಲ್ಲಿ ಚಿರಸ್ಥಾಯಿಯಾಗಿಸಲು ಹುನ್ನಾರ ನಡೆಸುತ್ತಿವೆ. ಮಂಡ್ಯದ ಜನ ಮಾತ್ರವಲ್ಲ ರಾಜ್ಯದ ಪ್ರಜ್ಞಾವಂತ ಸಮೂಹ ಈ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವೂ ಇದೆ. ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ತಂಡದಲ್ಲಿದ್ದ ಅಪ್ರಾಪ್ತ ಬಾಲಕರು, “ಹನುಮನ ಪಾದದ ಮೇಲಾಣೆ, ಮಂದಿರವಲ್ಲೇ ಕಟ್ಟುವೆವು” ಎಂದು ಮಸೀದಿ ಬಳಿ ಘೋಷಣೆ ಕೂಗುತ್ತಿದ್ದ ದೃಶ್ಯ ಭವಿಷ್ಯದ ಬಗ್ಗೆ ಆತಂಕ ಮೂಡಿಸುತ್ತಿದೆ. ಈ ಆತಂಕದಲ್ಲಿ ಬಾಲಕರ ಭವಿಷ್ಯ ಮಾತ್ರವಲ್ಲ ಇಡೀ ರಾಜ್ಯದ ಭವಿಷ್ಯವೂ ಅಡಗಿದೆ. ಸರ್ಕಾರ ಎಚ್ಚೆತ್ತುಕೊಂಡು ಇದಕ್ಕೊಂದು ಅಂತ್ಯ ಹಾಡಬೇಕಿದೆ.





