ಬಾಯಾರಿದವರ ಬೊಗಸೆಗಳಿಂದ ನೀರನ್ನು ಕಸಿಯುವುದು, ಹಸಿದವರ ತಟ್ಟೆಯಿಂದ ಅನ್ನವನ್ನು ಕಿತ್ತುಕೊಳ್ಳುವುದು, ತಲೆಯ ಮೇಲಿನ ಸೂರನ್ನು ನೆಲಸಮ ಮಾಡುವ ಕೃತ್ಯಗಳು ಅಕ್ಷಮ್ಯ ಮಾತ್ರ ಅಲ್ಲ ಜೀವವಿರೋಧಿ.
ಭದ್ರಾ ಮೇಲ್ದಂಡೆ ಯೋಜನೆ ಎಂಬುದು ರಾಜ್ಯದ ಹಲವು ಬಾಯಾರಿದ ಜಿಲ್ಲೆಗಳ ದಶಕಗಳ ಕನಸು. ಮಳೆ ಬೀಳದೆ ಬೆಳೆ ನಾಶದ ಹತಾಶ ವರ್ತುಲಕ್ಕೆ ಸಿಲುಕಿದ್ದ ಸೀಮೆಯ ಬಹುಕಾಲದ ಸ್ವಪ್ನ. ಈ ಯೋಜನೆಯ ಜಾರಿ ಕುರಿತು ಪರಿಸರ ಕಾಳಜಿಗಳು ಹಲವಾರಿದ್ದವು. ಆದರೆ ರಾಜ್ಯ ಸರ್ಕಾರಗಳು ಅವುಗಳನ್ನು ಬದಿಗೆ ಸರಿಸಿ, ಯೋಜನೆಯನ್ನು ಮುಂದೆ ತಂದಿವೆ.
ಭದ್ರಾ ಮೇಲ್ದಂಡೆ ಯೋಜನೆಯು ‘ರಾಷ್ಟ್ರೀಯ ಯೋಜನೆ ಅಲ್ಲ’ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಕೈ ತೊಳೆದುಕೊಂಡಿದೆ. ಈ ಹಿಂದೆ ತಾನೇ ನೀಡಿದ್ದ ಭರವಸೆಯನ್ನು ತಾನೇ ಮುರಿದಿದೆ. ವಚನಭಂಗ ಎಸಗಿದೆ. ಕಳೆದ ವಾರ ಮುಗಿದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನಡೆದ ಬೆಳವಣಿಗೆಯಿದು.
ಪಕ್ಷ ರಾಜಕಾರಣ ಎಂಬುದು ಬರಗಾಲ ಪೀಡಿತ ಸೀಮೆಗಳ ನ್ಯಾಯಯುತ ಅಗತ್ಯಗಳನ್ನು ಕೂಡ ತನ್ನ ಒತ್ತೆಯಾಳು ಮಾಡಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ದುರುಳ ನಿದರ್ಶನ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿದ್ದರು. ಅವು ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಗಳು. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಚುರುಕಾಗಿಸಲು 5,300 ಕೋಟಿ ರುಪಾಯಿಗಳ ಅನುದಾನವನ್ನು ಘೋಷಿಸಿದ್ದರು ನಿರ್ಮಲಾ ಸೀತಾರಾಮನ್. ಚುನಾವಣೆಗಳು ವರ್ಷದೊಪ್ಪತ್ತು ಸನಿಹದಲ್ಲಿದ್ದಾಗ 2022ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಭದ್ರಾ ಮೇಲ್ದಂಡೆ ಯೋಜನೆಗೆ ‘ರಾಷ್ಟ್ರೀಯ ಯೋಜನೆ’ಯ ಸ್ಥಾನಮಾನ ಸನಿಹದಲ್ಲಿದೆ ಎಂದು ಆಸೆ ಹುಟ್ಟಿಸಿದ್ದರು. ಕೇಂದ್ರೀಯ ಜಲ ಆಯೋಗದ ಉನ್ನತ ಹಂತದ ಚಾಲನಾ ಸಮಿತಿಯು ಭದ್ರಾ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡಬೇಕೆಂದು ಜಲಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯಕ್ಕೆ ಶಿಫಾರಸು ಮಾಡಿರುವುದಾಗಿ ಪ್ರಕಟಿಸಿದ್ದರು.
ಈ ಎರಡೂ ಉಪಕ್ರಮಗಳು ಚುನಾವಣೆಯ ಹೊಸ್ತಿಲಿನಲ್ಲಿ ಘೋಷಿಸಿದಂತಹವು. ಮತಗಳಿಕೆಯ ಮೇಲೆ ಕಣ್ಣಿಟ್ಟಂತವು ಎಂಬುದು ಅಂಗೈ ಗೆರೆಗಳಷ್ಟೇ ನಿಚ್ಚಳ ಸಂಗತಿಯಾಗಿತ್ತು. ಹಾಗೆಂದಾಕ್ಷಣ ಲೋಕಸಭೆಯಲ್ಲಿ ಕೊಟ್ಟ ಮಾತನ್ನು ಗಾಳಿಗೆ ತೂರಲು ಬರುವುದಿಲ್ಲ.
ನಿರ್ಮಲಾ ಸೀತಾರಾಮನ್ ಅವರು 2023ರ ಬಜೆಟ್ಟಿನಲ್ಲಿ ಭದ್ರಾ ಮೇಲ್ದಂಡೆಗೆ 5,300 ಕೋಟಿ ರುಪಾಯಿಯ ಅನುದಾನ ನೀಡುವುದಾಗಿ ಘೋಷಿಸಿ ಎರಡು ವರ್ಷಗಳೇ ಉರುಳಿವೆ. ಒಂದೇ ಒಂದು ಚಿಕ್ಕಾಸು ಕೂಡ ಬಿಡುಗಡೆಯಾಗಿಲ್ಲ. 2023ರ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋತಿತು. ಕಾಂಗ್ರೆಸ್ ಪಕ್ಷ 136 ಸೀಟು ಗೆದ್ದು ನಿರುಮ್ಮಳವಾಗಿ ಗೆದ್ದು ಸರ್ಕಾರ ರಚಿಸಿತು. ಬಿಜೆಪಿ ಸೋತ ನಂತರ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಸ್ಥಿತಿಗತಿಗಳನ್ನು ಕುರಿತು ಯಾವ ಉತ್ಸಾಹವನ್ನೂ ತೋರುತ್ತಿಲ್ಲ. ಬದಲಾಗಿ ರಾಜ್ಯವನ್ನು ತಾರತಮ್ಯದಿಂದ ನಡೆಸಿಕೊಳ್ಳತೊಡಗಿದೆ. ಜಿ.ಎಸ್.ಟಿ. ಸೇರಿದಂತೆ ಮತ್ತಿತರೆ ಬಾಬತ್ತುಗಳಲ್ಲಿ ರಾಜ್ಯಕ್ಕೆ ಸಿಗಬೇಕಿರುವ ನ್ಯಾಯಯುತ ಪಾಲನ್ನು ಕೂಡ ನೀಡದೆ ವಂಚಿಸತೊಡಗಿದೆ.
ಇದೀಗ ಇದೆಲ್ಲಕ್ಕೆ ಕಳಸ ಇಟ್ಟಂತೆ ಭಂಡ ವಾದ ಮುಂದೆ ಮಾಡಿ ಬೆನ್ನು ತಿರುಗಿಸಿದೆ. ಭದ್ರಾ ಮೇಲ್ದಂಡೆ ಯೋಜನೆಯು ಯಾವುದೇ ಕೇಂದ್ರ ಪ್ರಾಯೋಜಿತ ಯೋಜನೆಯಡಿ ಬರುವುದಿಲ್ಲ. ಹೀಗಾಗಿ ಯಾವುದೇ ಅನುದಾನ ಪಡೆಯುವ ಅರ್ಹತೆಯೂ ಅದಕ್ಕಿಲ್ಲ ಎಂಬುದಾಗಿ ಸಾರಿದೆ. ಆಘಾತಕಾರಿ ವಿದ್ಯಮಾನವಿದು. ಕೇಂದ್ರ ಸರ್ಕಾರದ ಬಜೆಟ್ ತಯಾರಿಕೆ ಅಷ್ಟೊಂದು ಹಗುರವಾದ ಅಥವಾ ಬೇಕಾಬಿಟ್ಟಿ ಕಸರತ್ತಲ್ಲ. ಸವಿವರವಾದ ತಯಾರಿ ನಡೆಯುತ್ತದೆ. ಅನುದಾನ ನೀಡಿಕೆಗೆ ಅಥವಾ ಅನುದಾನ ನಿರಾಕರಣೆಯ ಹಿಂದೆ ತರ್ಕಬದ್ಧವಾದ ಆರ್ಥಿಕ ಕಾರ್ಯಕಾರಣಗಳು ಇರುತ್ತವೆ. ದೇಶದ ಜನತಂತ್ರದ ದೇಗುಲ ಎಂದು ಮೋದಿಯವರು ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ಸಂಸತ್ತಿನ ಮೆಟ್ಟಿಲಿಗೆ ಹಣೆಯಿಟ್ಟು ವಂದಿಸಿದ್ದರು. ಸದನದಲ್ಲಿ ಆಡುವ ಮಾತು ಮತ್ತು ನೀಡುವ ವಚನಗಳಿಗೆ ಅವುಗಳದೇ ಆದ ಪಾವಿತ್ರ್ಯ ಇರುತ್ತದೆ. 2023ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಭದ್ರಾ ಮೇಲ್ದಂಡೆ ಯೋಜನೆಗೆ, 5,300 ಕೋಟಿ ರುಪಾಯಿಗಳ ಭಾರೀ ಮೊತ್ತದ ಅನುದಾನವನ್ನು ಹಿಂದೆ ಮುಂದೆ ಪರಿಶೀಲಿಸದೆ ಬಜೆಟ್ ಗೆ ಸೇರಿಸಿದ್ದರೇ? ಯಾವ ಆಧಾರಗಳು, ಮಾನದಂಡಗಳ ಮೇಲೆ ಈ ನಿರ್ದಿಷ್ಟ ಮೊತ್ತದ ಅನುದಾನವನ್ನು ಘೋಷಿಸಿದ್ದರು? ಎರಡು ವರ್ಷಗಳ ನಂತರ ಇಂದು ಯಾವ ಆಧಾರಗಳು ಮತ್ತು ಮಾನದಂಡಗಳ ಮೇಲೆ ಈ ಅನುದಾನವನ್ನು ನಿರಾಕರಿಸಲಾಗುತ್ತಿದೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುವ ಹಕ್ಕು ಕರ್ನಾಟಕದ ಮತದಾರರಿಗೆ ಇದೆ.
ಡಬಲ್ ಎಂಜಿನ್ ಸರ್ಕಾರವನ್ನು ಆರಿಸಿ ಎಂದು ಮೋದಿಯವರು ಮತದಾರರಲ್ಲಿ ಮಾಡಿಕೊಳ್ಳುವುದು ಕೇವಲ ಮನವಿಯೇ ಅಥವಾ ನೀಡುವ ಎಚ್ಚರಿಕೆಯೇ? ಪ್ರಾಯಶಃ ಎಚ್ಚರಿಕೆಯೇ ಇದ್ದೀತು. ಭದ್ರಾ ಮೇಲ್ದಂಡೆ ಯೋಜನೆಯ ಅನುದಾನವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಘೋಷಿಸಿ ಇದೀಗ ನಿರಾಕರಿಸುತ್ತಿರುವುದನ್ನು ಬೇರೆ ಯಾವ ರೀತಿ ಅರ್ಥ ಮಾಡಿಕೊಳ್ಳಬೇಕು?
ಡಬಲ್ ಎಂಜಿನ್ ಸರ್ಕಾರವನ್ನು ಆರಿಸದೆ ಇರುವ ರಾಜ್ಯಗಳ ಹಣಕಾಸು ಸಂಪನ್ಮೂಲ ಮತ್ತು ಅಭಿವೃದ್ಧಿಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೋದಿಯವರು ನೀಡಿದ್ದು ಎಚ್ಚರಿಕೆಯೇ ಹೌದು ಎಂಬ ನಿಜ ನಿಚ್ಚಳವಾಗುತ್ತ ಹೋಗುತ್ತದೆ. ಮತ್ತೆ ಮತ್ತೆ ತೃಣಮೂಲ ಕಾಂಗ್ರೆಸ್ ಪಕ್ಷವನ್ನೇ ಆಧಿಕಾರಕ್ಕೆ ತರುತ್ತಿರುವ ಪಶ್ಚಿಮ ಬಂಗಾಳ ಮತ್ತು ಬಿಜೆಪಿಯನ್ನು ಹತ್ತಿರ ಬಿಟ್ಟುಕೊಳ್ಳದೆ ಇರುವ ತಮಿಳುನಾಡು, ಕೇರಳ ರಾಜ್ಯಗಳು ಈ ಮಾತಿಗೆ ಬಹುದೊಡ್ಡ ಉದಾಹರಣೆಗಳು. ಕರ್ನಾಟಕವನ್ನೂ ಅದೇ ಮೂಲೆಗೆ ನೂಕುತ್ತಿದೆ ಮೋಶಾ ಸರ್ಕಾರ. ಆದರೆ ಮೋ-ಶಾ ಅವರು ನಿಂತು ಆಲೋಚಿಸಬೇಕು, ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕ ಬಿಜೆಪಿಯನ್ನು ಸತತವಾಗಿ ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸುತ್ತ ಬಂದಿಲ್ಲವೇ? ಕೇಂದ್ರದಲ್ಲಿ ಬಿಜೆಪಿ ಅಥವಾ ಬಿಜೆಪಿ ನೇತೃತ್ವದ ಸರ್ಕಾರಗಳು ರಚನೆಯಾಗಿದ್ದಲ್ಲಿ ಅದರಲ್ಲಿ ಬಿಜೆಪಿಗೆ ವೋಟು ಕೊಟ್ಟಿರುವ ಕರ್ನಾಟಕ ಮತದಾರರ ದೊಡ್ಡ ಪಾಲು ಇದೆ. ಈ ಮಾತನ್ನು ಯಾವ ಮುಖವಿಟ್ಟುಕೊಂಡು ಅಲ್ಲಗಳೆಯಲು ಬಂದೀತು ಬಿಜೆಪಿಗೆ, ಮೋದಿ-ಶಾ ಸರ್ಕಾರಕ್ಕೆ?
ಒಕ್ಕೂಟ ತತ್ವದ ಮೂಲಧಾರಗಳನ್ನೇ ಗಾಳಿಗೆ ತೂರುತ್ತ ಬಂದಿದೆ ಮೋ-ಶಾ ಯುಗದ ಬಿಜೆಪಿ. ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ಜನ ಬಿಜೆಪಿಯನ್ನೇ ಆರಿಸಬೇಕು ಎಂಬ ಅಲಿಖಿತ ನಿಯಮವನ್ನು ಹೇರತೊಡಗಿದೆ. ತನ್ನನ್ನು ನೂರಕ್ಕೆ ನೂರು ಪ್ರಮಾಣದಲ್ಲಿ ಬೆಂಬಲಿಸದೆ ಹೋದರೆ ಶಿಕ್ಷಿಸುವ ಸ್ಪಷ್ಟ ಇಂಗಿತಗಳನ್ನು ರವಾನಿಸುತ್ತ ಬಂದಿದೆ. ಪರೋಕ್ಷ ಒತ್ತಡಗಳನ್ನು ಹೇರತೊಡಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರುಪಾಯಿ ಅನುದಾನ ನೀಡಿಕೆಯ ವಚನ ಭಂಗದ ಹಿಂದೆಯೂ ಇಂತಹುದೇ ನಿರ್ಲಜ್ಜ ಧೋರಣೆಯಿದೆ. ಅಪ್ಪಟ ಜನತಂತ್ರವಿರೋಧಿ ಮನಸ್ಥಿತಿಯಿದು. ಈ ಹಿಂದೆ ತನಗೆ ನ್ಯಾಯಯುತವಾಗಿ ಸಿಗಬೇಕಿದ್ದ ಬರಗಾಲ ಪರಿಹಾರ ನಿಧಿಯನ್ನು ಮೋದಿ ಸರ್ಕಾರದಿಂದ ಪಡೆಯಲು, ಸುಪ್ರೀಮ್ ಕೋರ್ಟಿನ ಕದ ಬಡಿಯಬೇಕಾಗಿ ಬಂದಿತ್ತು ಕರ್ನಾಟಕಕ್ಕೆ. ಇದೀಗ ಭದ್ರಾ ಮೇಲ್ದಂಡೆ ನೆರವಿಗೂ ಇದೇ ದಾರಿ ಹಿಡಿಯಬೇಕಾಗಿ ಬಂದಿದೆ. ರಾಜ್ಯ ಸರ್ಕಾರಗಳು ತಮ್ಮ ನ್ಯಾಯಯುತ ಪಾಲನ್ನು ದಕ್ಕಿಸಿಕೊಳ್ಳಲು ಹೀಗೆ ಬಡಿದಾಡಬೇಕಾಗಿ ಬಂದಿರುವುದು ಒಕ್ಕೂಟ ವ್ಯವಸ್ಥೆಯು ಶಿಥಿಲ ಆಗುತ್ತಿರುವ ದ್ಯೋತಕ.
ಒಂದು ದೇಶ-ಒಂದು ಚುನಾವಣೆ, ಒಂದು ದೇಶ-ಒಂದು ಭಾಷೆ, ಒಂದು ದೇಶ-ಒಂದು ಸಂಸ್ಕೃತಿ, ಒಂದು ದೇಶ-ಒಂದು ಧರ್ಮದ ಸಾಲಿಗೆ ಇನ್ನೂ ಒಂದು ಘೋಷಣೆಯನ್ನು ಮೋಶಾ ಆಡಳಿತ ಯುಗ ಸೇರಿಸಿದೆ. ಆದರೆ ಅದನ್ನು ಒಡೆದು ಹೇಳುತ್ತಿಲ್ಲ ಅಷ್ಟೇ.
ಒಡೆದು ಹೇಳದೆ ಇರುವ ಈ ಅಘೋಷಿತ ಘೋಷಣೆಯೆಂದರೆ ಒಂದು ದೇಶ-ಒಂದು ಪಕ್ಷ ಎನ್ನುವುದೇ ಆಗಿದೆ.
ನೀರಿನಿಂದ ಜಗತ್ತಿನ ಅನೇಕ ನಾಗರಿಕತೆಗಳು ಅಳಿದಿವೆ ಮತ್ತು ಉಳಿದು ಬೆಳೆದಿವೆ. ಮಣ್ಣು ಗಾಳಿ ಬೆಳಕುಗಳಂತೆ ಮನುಷ್ಯಕುಲ ಜೀವಿಸಿರಲು ನೀರು ಕೂಡ ಅತ್ಯಗತ್ಯ. ಭದ್ರಾ ಮೇಲ್ದಂಡೆ ಯೋಜನೆಯು ಬರಪೀಡಿತ ಪ್ರದೇಶಗಳಿಗೆ ನೀರು ನೀಡುವ ಯೋಜನೆ, ಅದು ಕೃಷಿಗೇ ಇರಬಹುದು, ಕುಡಿಯುವುದಕ್ಕೇ ಆಗಿರಬಹುದು. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಸೀಮೆಯ ಜನತೆ ಇದರ ಫಲಾನುಭವಿಗಳು. ಬಾಯಾರಿದವರ ಬೊಗಸೆಗಳಿಂದ ನೀರನ್ನು ಕಸಿಯುವುದು, ಹಸಿದವರ ತಟ್ಟೆಯಿಂದ ಅನ್ನವನ್ನು ಕಿತ್ತುಕೊಳ್ಳುವುದು, ತಲೆಯ ಮೇಲಿನ ಸೂರನ್ನು ನೆಲಸಮ ಮಾಡುವ ಕೃತ್ಯಗಳು ಅಕ್ಷಮ್ಯ ಮಾತ್ರ ಅಲ್ಲ ಜೀವವಿರೋಧಿ. ಶತ್ರುಗಳಿಗೂ ಮಾಡಕೂಡದು ಎನ್ನುತ್ತಾರೆ. ಹಾಗಿದ್ದಾಗ ಲೋಕಸಭೆ ಚುನಾವಣೆಗಳಲ್ಲಿ ನಿಮ್ಮನ್ನೇ ಗೆಲ್ಲಿಸುತ್ತ ಬಂದಿದ್ದು, ವಿಧಾನಸಭಾ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿದ ಜನತೆಯನ್ನು ಈ ರೀತಿ ದಂಡಿಸುವುದು ಅಮಾನುಷವೆಂದು ತಿಳಿಯಿರಿ ಮೋಶಾ ಅವರೇ!
ಕೃಷ್ಣಾ ಜಲವಿವಾದ ನ್ಯಾಯಾಧಿಕರಣದ ಐತೀರ್ಪು ಮಾಡಿರುವ ಹಂಚಿಕೆಗಳ ವ್ಯಾಪ್ತಿಯ ಒಳಗಿದ್ದುಕೊಂಡೇ ಈ ಯೋಜನೆ ರೂಪಿಸಲಾಗಿದೆ. 2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಸರಳ ಬಹುಮತವೂ ಸಿಗಲಿಲ್ಲ. ಆಂಧ್ರದ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಾರ್ಟಿ ಮತ್ತು ಬಿಹಾರದ ಸಂಯುಕ್ತ ಜನತಾದಳದ ನಿತೀಶ್ ಕುಮಾರ್ ಎಂಬ ಎರಡು ಊರುಗೋಲುಗಳ ನೆರವಿನಿಂದ ಸರ್ಕಾರ ರಚಿಸಬೇಕಾಯಿತು ಮೋದಿಯವರು. ಹೀಗಾಗಿ ಇವರಿಬ್ಬರ ಬೇಡಿಕೆಗಳನ್ನು ಈಡೇರಿಸಲೇಬೇಕಾಗಿರುವುದು ಸಮ್ಮಿಶ್ರ ಸರ್ಕಾರದ ಮೇಲಿರುವ ಒತ್ತಡ ಹೌದು.
ಚಂದ್ರಬಾಬು ನಾಯ್ಡು ಅವರ ಪಕ್ಷ 16 ಸೀಟುಗಳ ಬೆಂಬಲವನ್ನು ಮೋದಿಯವರಿಗೆ ನೀಡಿದೆ. ಆದರೆ ಕರ್ನಾಟಕದ ಜನ ಬಿಜೆಪಿಯ 17 ಮಂದಿಯನ್ನು ಲೋಕಸಭೆಗೆ ಆರಿಸಿ ಕಳಿಸಿದ್ದಾರೆ. 16ರ ಮುಂದೆ 17 ಸಣ್ಣದೇ ದೊಡ್ಡದೇ ಎಂದು ಹೃದಯ ಮುಟ್ಟಿ ನೋಡಿಕೊಳ್ಳಬೇಕು ಮೋಶಾ. ಚಂದ್ರಬಾಬು ನಾಯ್ಡು ಅವರನ್ನು ಮೆಚ್ಚಿಸುವುದಕ್ಕಾಗಿ ಕರ್ನಾಟಕದ ಜನತೆಯ ಬಲಿ ಕೊಡುವುದು ನ್ಯಾಯವೇ?
ಇದು ಬಹಳ ಗಂಭೀರ ವಿಚಾರ. ರಾಜ್ಯವೊಂದನ್ನು ಅನ್ಯಾಯವಾಗಿ ದಂಡಿಸುತ್ತಿರುವುದು ಅಪರಾಧ. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚರಗೊಳ್ಳಬೇಕಿದೆ ಮೋಶಾ ಸರ್ಕಾರ. ಸಂಸತ್ತಿನ ಪವಿತ್ರ ವೇದಿಕೆಯಲ್ಲಿ ಕೊಟ್ಟಿರುವ ವಚನವನ್ನು ಉಳಿಸಿಕೊಳ್ಳಬೇಕಿದೆ.





