ಮರುನಿರ್ಮಿತ ಸೋಮನಾಥ ಮಂದಿರದ ಮರುನಿರ್ಮಾಣ 1951ರ ಮೇ ತಿಂಗಳ ಹೊತ್ತಿಗೆ ಪೂರ್ಣಗೊಂಡಿತ್ತು. ಆಗ ಭಾರತೀಯ ಜನತಾ ಪಾರ್ಟಿಯ ಪೂರ್ವಾಶ್ರಮವಾದ ಭಾರತೀಯ ಜನಸಂಘ ಇನ್ನೂ ಹುಟ್ಟಿಯೇ ಇರಲಿಲ್ಲ. ಮರುನಿರ್ಮಾಣದ ತೀರ್ಮಾನ ಆಗಿದ್ದು ಜವಾಹರಲಾಲ್ ನೆಹರೂ ಸಂಪುಟದಲ್ಲಿ. ಮಂದಿರ ನಿರ್ಮಾಣವನ್ನು ಸರ್ಕಾರ ಮಾಡಕೂಡದು, ಸಾರ್ವಜನಿಕರ ದೇಣಿಗೆಯಿಂದಲೇ ಆಗಬೇಕು ಎಂದು ಹಠ ಹಿಡಿದವರು ಗಾಂಧೀಜಿ. ಕಟ್ಟಿದ ವೇಷ, ಹಚ್ಚಿಕೊಂಡ ಬಣ್ಣ ಶಾಶ್ವತ ಅಲ್ಲ. ಕಿಚ್ಚು ಹಚ್ಚುವ ಏಕೈಕ ಉದ್ದೇಶದಿಂದ ಕಾಲಮಾನದಿಂದ ಕಿತ್ತಿಟ್ಟು ಸೃಷ್ಟಿಸುವ ಹಸಿ ಸುಳ್ಳುಗಳೂ, ಅರೆಸತ್ಯಗಳ ಗತಿಯೂ ಅಷ್ಟೇ.
ಗುಜರಾತ್‌ನ ಪ್ರಾಚೀನ ಶಿವ ದೇವಾಲಯ ಸೋಮನಾಥದ ಮೇಲೆ 1026ರಲ್ಲಿ ಮಹಮೂದ್ ಘಜ್ನಿ ದಾಳಿ ಮಾಡಿ ಲೂಟಿ ಹೊಡೆದಿದ್ದ. ಶಿವಲಿಂಗವನ್ನು ಒಡೆದು ಹಾಕಿದ್ದ. ಅಪಾರ ಸಂಪತ್ತಿನ ಆಸೆಯಿಂದ ಹಲವು ದಾಳಿಕೋರರು ಈ ದೇವಾಲಯದ ಮೇಲೆ ದಾಳಿ ನಡೆಸಿದ್ದರು.
ಸಂಪ್ರದಾಯವಾದಿ ಹಿಂದೂಗಳನ್ನು ಒಲಿಸಿಕೊಳ್ಳುವ ಮತ್ತು ಹಿಂದೂ ಮುಸ್ಲಿಮರನ್ನು ಒಡೆದು ಆಳುವ ಒಂದು ಸನ್ನಾಹವನ್ನು ಬ್ರಿಟಿಷರು 1842ರಲ್ಲಿ ನಡೆಸಿದರು. ಅಲ್ಲಿಯ ತನಕ ಸೋಮನಾಥ ಮಂದಿರದ ಧ್ವಂಸದ ವಿಷಯ ‘ಹಿಂದೂ ರಾಷ್ಟ್ರವಾದಿ ಮತ್ತು ಹಿಂದೂ ಅಸ್ಮಿತೆ ಸಮರ್ಥನೆ’ಯ ವಿಷಯವಾಗಿ ಹೊಮ್ಮಿರಲಿಲ್ಲ. ಪ್ರಭಾವಿಗಳಾಗಿದ್ದ ಸಂಪ್ರದಾಯವಾದಿ ಹಿಂದೂಗಳನ್ನು ಒಲಿಸಿಕೊಳ್ಳುವ ಭಾಗವಾಗಿ ಸೋಮನಾಥ ದೇವಾಲಯದ ‘ಶ್ರೀಗಂಧದ ಹೆಬ್ಬಾಗಿಲು’ಗಳನ್ನು ಅಪ್ಘಾನಿಸ್ತಾನದಿಂದ ಮರಳಿ ತರುವಂತೆ ಬ್ರಿಟಿಷ್ ಸೇನೆಗೆ ಆದೇಶ ನೀಡಿದ ಅಂದಿನ ಭಾರತದ ಗವರ್ನರ್ ಜನರಲ್ ಲಾರ್ಡ್ ಎಲೆನ್ಬರೊ. ಮಹಮ್ಮದ್ ಘಜನಿಯು ಈ ಹೆಬ್ಬಾಗಿಲುಗಳನ್ನು ಲೂಟಿ ಮಾಡಿ ಒಯ್ದಿದ್ದ, ಆದರೆ ಬ್ರಿಟಿಷ್ ಸೇನೆ ವಾಪಸು ತಂದ ಹೆಬ್ಬಾಗಿಲುಗಳಿಗೂ ಸೋಮನಾಥಕ್ಕೂ ಯಾವುದೇ ಸಂಬಂಧಸೂತ್ರ ಇರಲಿಲ್ಲ ಎಂದಿದ್ದಾರೆ ಪ್ರಸಿದ್ಧ ಇತಿಹಾಸಕಾರ್ತಿ ರೊಮೀಲಾ ಥಾಪರ್.
ಬ್ರಿಟಿಷರ ಈ ಹಂಚಿಕೆಯ ನಂತರ ಸೋಮನಾಥ ‘ಹಿಂದೂ ಅಸ್ಮಿತೆಯ ಪ್ರತೀಕ’ ಆದದ್ದು, ದೇಶದ ಬಿಡುಗಡೆ ಮತ್ತು ಭಾರತ ಪಾಕಿಸ್ತಾನ ವಿಭಜನೆ, ಭಾರೀ ಪ್ರಮಾಣದ ಹಿಂದೂ-ಮುಸ್ಲಿಂ ಕೋಮುವಾದಿ ಗಲಭೆಗಳು-ಹತ್ಯೆಗಳು-ಅತ್ಯಾಚಾರಗಳು ಜರುಗಿದ ನಂತರವೇ. ಸೋಮನಾಥದ ಧ್ವಂಸವನ್ನು ‘ಮುಸಲ್ಮಾನರ ಅಸಹಿಷ್ಣುತೆ ಮತ್ತು ವಿಗ್ರಹಭಂಜಕ’ ಪ್ರವೃತ್ತಿಯ ಪ್ರತೀಕವಾಗಿ ಬಿಂಬಿಸಲಾಯಿತು.
ಸ್ವಾತಂತ್ರ್ಯ ಬಂದು ಎರಡೇ ತಿಂಗಳುಗಳಾಗಿರುತ್ತವೆ. 1947ರ ನವೆಂಬರ್ 12ರಂದು ದೇಶದ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲರು ಗುಜರಾತಿನ ಜುನಾಗಢದ ಸಾರ್ವಜನಿಕ ಸಭೆಯಲ್ಲಿ ಸೋಮನಾಥದ ಮರುನಿರ್ಮಾಣವನ್ನು ಘೋಷಿಸುತ್ತಾರೆ. ಜುನಾಗಢವನ್ನು ಪಾಕಿಸ್ತಾನಕ್ಕೆ ಸೇರಿಸುವ ಇರಾದೆ ಹೊಂದಿದ್ದ ಅಲ್ಲಿನ ನವಾಬ ಭಾರತದ ಸೇನೆ ಸುತ್ತುವರೆದ ಹಿನ್ನೆಲೆಯಲ್ಲಿ ಪಾಕ್ ಗೆ ಪರಾರಿಯಾಗಿರುತ್ತಾನೆ. ಪಟೇಲರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡಿದ್ದ ಸನ್ನಿವೇಶವಿದು.
ಜನಸಂಘ-ಬಿಜೆಪಿಯ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಎಲ್.ಕೆ.ಆಡ್ವಾಣಿ ಸೋಮನಾಥ ಮರುನಿರ್ಮಾಣದ ಕುರಿತು ತಮ್ಮ ಪುಸ್ತಕ ‘ಮೈ ಟೇಕ್’ನಲ್ಲಿ (My Take) ಹೀಗೆ ಹೇಳುತ್ತಾರೆ- “ದೆಹಲಿಗೆ ಹಿಂದಿರುಗಿದ ನಂತರ ಸರ್ದಾರ್ ಪಟೇಲರು ದೇವಾಲಯ ಮರುನಿರ್ಮಾಣಕ್ಕೆ ಗಾಂಧೀಜಿಯ ಆಶೀರ್ವಾದ ಪಡೆಯುತ್ತಾರೆ. ಅಷ್ಟೇ ಅಲ್ಲದೆ ಪಂಡಿತ್ ನೆಹರೂ ಅವರ ಸಚಿವ ಸಂಪುಟದ ಅನುಮೋದನೆಯನ್ನೂ ಗಳಿಸಿರುತ್ತಾರೆ. ಮರುನಿರ್ಮಾಣದ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿಯೂ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿರುತ್ತದೆ. ಅದೇ ದಿನ ಸಂಜೆ ಈ ತೀರ್ಮಾನವನ್ನು ವಿವರಿಸಲು ಡಾ.ಕೆ.ಎಂ.ಮುನ್ಷಿ ಮತ್ತು ಎನ್.ವಿ.ಗಾಡ್ಗೀಳ್ ಜೊತೆ ಗಾಂಧೀಜಿಯ ಭೇಟಿಗೆ ತೆರಳುತ್ತಾರೆ. ತೀರ್ಮಾನವನ್ನು ಗಾಂಧೀಜಿ ಸ್ವಾಗತಿಸುತ್ತಾರೆ. ಆದರೆ ಖರ್ಚನ್ನು ಸಾರ್ವಜನಿಕರು ಭರಿಸಲಿ, ಸರ್ಕಾರದ ಬೊಕ್ಕಸದಿಂದ ಬೇಡ ಎನ್ನುತ್ತಾರೆ. ನೆಹರೂ ಸಂಪುಟದ ಮಂತ್ರಿ ಕೆ.ಎಂ.ಮುನ್ಷಿ ಅಧ್ಯಕ್ಷತೆಯಲ್ಲಿ ಸೋಮನಾಥ ಮರುನಿರ್ಮಾಣ ಟ್ರಸ್ಟ್ ರಚಿಸಲಾಗುತ್ತದೆ”.
ತರುವಾಯದಲ್ಲಿ ಆಗಷ್ಟೇ ಉದಯಿಸಿದ್ದ ದೇಶ ತೀವ್ರ ತಳಮಳಗಳನ್ನು ಹಾಯುತ್ತದೆ. ಹಿಂದೂ ತೀವ್ರವಾದಿಗಳ ಪ್ರತಿನಿಧಿ ನಾಥೂರಾಮ ಗೋಡ್ಸೆ, ಗಾಂಧೀಜಿಯನ್ನು ಕೊಲ್ಲುತ್ತಾನೆ. ದೇಶವಿಭಜನೆಯ ಗಾಯಗಳು ಇನ್ನೂ ಹಸಿಯಾಗಿರುತ್ತವೆ. ದೇಶದಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದೂ ಸೇರಿದಂತೆ, ಯಾರು ರಾಷ್ಟ್ರಪತಿಯಾಗಬೇಕು ಎಂಬುದರ ಕುರಿತು ನೆಹರೂ ಮತ್ತು ಪಟೇಲರ ನಡುವೆ ಭಿನ್ನಮತವಿರುತ್ತದೆ. ನೆಹರೂ ಆಯ್ಕೆ ಸಿ.ರಾಜಗೋಪಾಲಾಚಾರಿಯಾದರೆ, ಪಟೇಲರು ಡಾ.ರಾಜೇಂದ್ರ ಪ್ರಸಾದ್ ಹೆಸರನ್ನು ಬೆಂಬಲಿಸಿರುತ್ತಾರೆ. ಡಾ ಪ್ರಸಾದ್ ರಾಷ್ಟ್ರಪತಿಯಾಗುತ್ತಾರೆ.
1950ರಲ್ಲಿ ಪಟೇಲ್ ನಿಧನರಾಗುತ್ತಾರೆ. ಮರುನಿರ್ಮಾಣವಾದ ಸೋಮನಾಥ ಮಂದಿರದ ಉದ್ಘಾಟನೆ ವಿಷಯದಲ್ಲಿ ರಾಷ್ಟ್ರಪತಿ ಪ್ರಸಾದ್ ಮತ್ತು ನೆಹರೂ ನಡುವೆ ಭಿನ್ನಮತ ಏರ್ಪಡುತ್ತದೆ.
ಈ ನಡುವೆ ಮಂತ್ರಿ ಕೆ.ಎಂ.ಮುನ್ಷಿ, ಪ್ರಧಾನಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾರೆ- “ನೆನ್ನೆ ಸೋಮನಾಥದ ಕುರಿತು ನಡೆದ ಕ್ಯಾಬಿನೆಟ್ ಸಭೆಯಲ್ಲಿ ನೀವು ನನ್ನನ್ನೇ ನಿರ್ದಿಷ್ಟವಾಗಿ ಉದ್ದೇಶಿಸಿ ಹಿಂದುತ್ವದ ಪುನರುತ್ಥಾನವಾದ ಕುರಿತು ಪ್ರಸ್ತಾಪಿಸಿದಿರಿ. ನೀವು ಹೀಗೆ ಮಾಡಿದ್ದು ನನಗೆ ಖುಶಿಯೇ ಆಯಿತು. ನನ್ನ ಯಾವುದೇ ನಿಲುವುಗಳು ಅಥವಾ ಚಟುವಟಿಕೆಗಳನ್ನು ಮುಚ್ಚಿಡುವುದು ನನಗೆ ಇಷ್ಟವಿಲ್ಲ… ಇಂದಿನ ಭಾರತದ ಸಾಮೂಹಿಕ ಸುಪ್ತಪ್ರಜ್ಞೆಯು ಸೋಮನಾಥ ಮರುನಿರ್ಮಾಣ ಕುರಿತು ಸಂತಸಗೊಂಡಿದೆ… ನಾವು ಮಾಡಿರುವ ಅಥವಾ ಮಾಡುತ್ತಿರುವ ಇತರೆ ಹಲವು ಸಂಗತಿಗಳಿಗಿಂತ ಹೆಚ್ಚು ಪಾಲು ಸಂತಸಗೊಂಡಿದೆ”. ಈ ಪತ್ರ ಬರೆದ ನಂತರ ಮುನ್ಷಿಯವರು ದೇವಾಲಯ ಉದ್ಘಾಟನೆಗೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರನ್ನು ಆಹ್ವಾನಿಸುತ್ತಾರೆ. ರಾಷ್ಟ್ರಪತಿ ಹುದ್ದೆಯಲ್ಲಿರುವ ಕಾರಣ ಹಿಂದೂ ದೇವಾಲಯವನ್ನು ಉದ್ಘಾಟಿಸುವ ನಿರ್ಧಾರವನ್ನು ಮರುಪರಿಗಣಿಸಿ ಎಂದು ರಾಷ್ಟ್ರಪತಿಯವರನ್ನು ಕೋರುತ್ತಾರೆ ನೆಹರೂ.
ಆದರೆ ದೇವಾಲಯವನ್ನು ಉದ್ಘಾಟಿಸಿಯೇ ತೀರುವುದಾಗಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ತೀರ್ಮಾನಿಸಿರುತ್ತಾರೆ. 1951ರ ಮೇ 2ರಂದು ದೇಶದ ಮುಖ್ಯಮಂತ್ರಿಗಳನ್ನು ಉದ್ದೇಶಿಸಿದ ಪತ್ರದಲ್ಲಿ ನೆಹರೂ ಹೀಗೆ ಬರೆಯುತ್ತಾರೆ- ಈ ಸಮಾರಂಭ ಸರ್ಕಾರದ್ದಲ್ಲ ಮತ್ತು ಭಾರತ ಸರ್ಕಾರಕ್ಕೂ ಈ ಸಮಾರಂಭಕ್ಕೂ ಸಂಬಂಧವಿಲ್ಲ… ನಮ್ಮ ದೇಶ ಅಳವಡಿಸಿಕೊಂಡಿರುವ ಜಾತ್ಯತೀತ ತತ್ವಕ್ಕೆ ಅಡ್ಡಿಯಾಗುವ ಯಾವುದನ್ನೂ ನಾವು ಮಾಡಕೂಡದು.
‘ನನ್ನ ಧರ್ಮದಲ್ಲಿ ನನಗೆ ಶ್ರದ್ಧೆಯಿದೆ, ಅದನ್ನು ಯಾರೂ ತುಂಡರಿಸಲಾರರು’ ಎಂದು ರಾಜೇಂದ್ರ ಪ್ರಸಾದ್ ನೆಹರೂಗೆ ಉತ್ತರ ಬರೆಯುತ್ತಾರೆ.
ನೆಹರೂ ಅವರು, ರಾಜೇಂದ್ರ ಪ್ರಸಾದರನ್ನು ತಡೆಯುವ ಪ್ರಯತ್ನ ಮಾಡಿದ ಅಂದಿನ ಕಾಲಮಾನವನ್ನು ಗಮನಿಸಬೇಕು. ದೇಶ ಆಗ ತಾನೇ ಇಬ್ಭಾಗ ಆಗಿತ್ತು. ಕೋಟ್ಯಂತರ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲೇ ಉಳಿಯಲು ನಿರ್ಧರಿಸಿದ್ದರು. ಮುಸಲ್ಮಾನರ ಈ ತೀರ್ಮಾನವೇ ಅವರ ಪೌರತ್ವದ ಪುರಾವೆ. ಅವರು ದೇಶನಿಷ್ಠೆಯ ಪರೀಕ್ಷೆಯನ್ನು ಹೊಸದಾಗಿ ಪಾಸು ಮಾಡಬೇಕಿಲ್ಲ ಎಂಬುದು ಪ್ರಧಾನಿ ನೆಹರೂ ನಿಲುವಾಗಿತ್ತು. ದೇಶ ಆಗಷ್ಟೇ ಒಡೆದು ಹೋಗಿದ್ದ ಸನ್ನಿವೇಶದಲ್ಲಿ ಮುಸಲ್ಮಾನರು ಅನುಭವಿಸುತ್ತಿದ್ದ ಅಭದ್ರತೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಂದಿಗೆ ಕೆಲವೇ ವರ್ಷಗಳ ಹಿಂದೆಯಷ್ಟೇ ಹಿಂದೂಗಳು- ಮುಸಲ್ಮಾನರು ಪರಸ್ಪರರನ್ನು ಬಲಿ ಪಡೆದಿದ್ದರು. ವಿಭಜನೆಯ ತಲ್ಲಣಗಳ ನಂತರ ಈ ಸಮುದಾಯಗಳು ಧರ್ಮದ ಆಧಾರದ ಮೇಲೆ ಪುನಃ ಧೃವೀಕರಣಗೊಳ್ಳುವುದು, ಹಳೆಯ ಗಾಯಗಳನ್ನು ಮತ್ತೆ ಕೆದಕುವುದು ಸರಿಯಲ್ಲವೆಂದು ನೆಹರೂ ಭಾವಿಸಿದ್ದರು. ಭಾರತದ ಮುಸಲ್ಮಾನರಿಗೂ ಘಜನಿಗೂ ಯಾವುದೇ ಸಂಬಂಧವಿಲ್ಲ, ಹೀಗಾಗಿ ನೂರಾರು ವರ್ಷಗಳ ಹಿಂದೆ ಮುಸಲ್ಮಾನ ದಾಳಿಕೋರನೊಬ್ಬ ನಾಶಪಡಿಸಿದ ದೇವಾಲಯವೊಂದರ ಮರುನಿರ್ಮಾಣದಲ್ಲಿ ರಾಷ್ಟ್ರಪತಿಯವರು ಯಾವುದೇ ರೀತಿ ತೊಡಗಿಸಿಕೊಳ್ಳಕೂಡದು ಎಂಬುದು ನೆಹರೂ ನಿಲುವಿನ ಅಂತರಾರ್ಥವೆಂದು ಇತಿಹಾಸಕಾರ ರಾಮಚಂದ್ರ ಗುಹಾ ವಿವರಿಸುತ್ತಾರೆ.
ಮರುನಿರ್ಮಿತ ಸೋಮನಾಥ ಮಂದಿರದ ಮರುನಿರ್ಮಾಣ 1951ರ ಮೇ ತಿಂಗಳ ಹೊತ್ತಿಗೆ ಪೂರ್ಣಗೊಂಡಿತ್ತು. ಆಗ ಭಾರತೀಯ ಜನತಾ ಪಾರ್ಟಿಯ ಪೂರ್ವಾಶ್ರಮವಾದ ಭಾರತೀಯ ಜನಸಂಘ ಇನ್ನೂ ಹುಟ್ಟಿಯೇ ಇರಲಿಲ್ಲ. ಮರುನಿರ್ಮಾಣದ ತೀರ್ಮಾನ ಆಗಿದ್ದು ಜವಾಹರಲಾಲ್ ನೆಹರೂ ಸಂಪುಟದಲ್ಲಿ. ಮಂದಿರ ನಿರ್ಮಾಣವನ್ನು ಸರ್ಕಾರ ಮಾಡಕೂಡದು, ಸಾರ್ವಜನಿಕರ ದೇಣಿಗೆಯಿಂದಲೇ ಆಗಬೇಕು ಎಂದು ಹಠ ಹಿಡಿದವರು ಗಾಂಧೀಜಿ.
ದೇಶದ ಮೊದಲ ಲೋಕಸಭಾ ಚುನಾವಣೆಗಳು ನಡೆದದ್ದು 1951ರ ಅಕ್ಟೋಬರ್- 1952ರ ಫೆಬ್ರವರಿಯ ನಡುವೆ. ಈ ಚುನಾವಣೆಗೆ ನಾಲ್ಕು ದಿನ ಮೊದಲು ಹುಟ್ಟಿದ್ದು ಭಾರತೀಯ ಜನಸಂಘ.
ಸ್ವಾತಂತ್ರ್ಯಾನಂತರ ಕೋಮುದ್ವೇಷ ಮುಕ್ತ ಭಾರತವನ್ನು ಕಟ್ಟುವ ಹೊಣೆಗಾರಿಕೆ ಅಂಬೇಡ್ಕರ್-ಗಾಂಧೀಜಿ-ಪಟೇಲ್-ನೆಹರೂ ಅವರಂತಹ ನಾಯಕರ ಹೆಗಲ ಮೇಲಿತ್ತು. ಮೋದಿಯವರು ಇಂದು ಭಾರತ ಎಂಬ ದೇಶವೊಂದರ ಪ್ರಧಾನಿಯಾಗಿ ಕುಳಿತು ಜಗತ್ತನ್ನು ಕಾಣುತ್ತಿರುವ ಹೆಗಲು ಈ ಮಹನೀಯರದೇ. ಈ ಒಂದು ವೇಳೆ ಈ ನಾಯಕರು ಪಾಕಿಸ್ತಾನಕ್ಕೆ ಪ್ರತಿಯಾಗಿ, ಮತ್ತೊಂದು ಹಿಂದೂ ಪಾಕಿಸ್ತಾನವನ್ನು ಕಟ್ಟಿದ್ದರೆ ಭಾರತ ಇಂದಿನಂತೆ ಸ್ವಾವಲಂಬಿ ದೇಶ ಎನಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಹಲವು ಮಿಲಿಟರಿ ಆಡಳಿತಗಾರರನ್ನು ಕಾಣಬೇಕಿತ್ತು. ಅಂತಾರಾಷ್ಟ್ರೀಯ ಸಾಲಗಳಿಗಾಗಿ ಅಲೆಯಬೇಕಿರುತ್ತಿತ್ತು. ತಂತ್ರಜ್ಞಾನ-ವಿಜ್ಞಾನದಲ್ಲಿ ದಾಪುಗಾಲಿರಿಸುವುದು ಶಕ್ಯವಿರಲಿಲ್ಲ. ಜನತಂತ್ರದ ತವರು-ತೊಟ್ಟಿಲು, ವಿಶ್ವಗುರು, ವಿಶ್ವದ ತೃತೀಯ ಮಹಾನ್ ಆರ್ಥಿಕಶಕ್ತಿ ಎಂದು ಮೋದಿಯವರು ಕೊಚ್ಚಿಕೊಳ್ಳುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಮೋದಿಯವರು ಇಂದು ಹತ್ತಿ ಕುಳಿತಿರುವ ಹೆಗಲುಗಳು ಈ ದೇಶದ ಮಹಾನ್ ಸಂವಿಧಾನ ನಿರ್ಮಾಪಕರದು, ಜನತಂತ್ರವಾದಿಗಳದು- ಜಾತ್ಯತೀತವಾದಿಗಳದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದವರದು, ಪ್ರಶ್ನಿಸುವ ಮನೋಧರ್ಮವನ್ನು ಬೆಳೆಸಿದವರದು ಎಂಬ ವಾಸ್ತವವು ಮೋದಿಯವರಿಗೂ ಗೊತ್ತು, ಅವರನ್ನು ಕುರುಡಾಗಿ ಬೆಂಬಲಿಸಿರುವ ಗೋದಿಗೂ ಗೊತ್ತು. ತಮ್ಮ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಏನೂ ಕಾಣಿಸದವರಂತೆ ನಟಿಸುತ್ತಾರೆ. ಒಮ್ಮೆ ನಿಜಕ್ಕೆ ಕಣ್ಣು ತೆರೆದರೆ ಸುಳ್ಳು ಹೇಳುವುದು ಅಸಾಧ್ಯವೆನಿಸುತ್ತದೆ. ಹೀಗಾಗಿ ಮಲಗಿದವರಂತೆ ನಟಿಸುತ್ತಾರೆ. ಮಲಗಿದವರನ್ನು ಎಬ್ಬಿಸಬಹುದೇ ವಿನಾ ಮಲಗಿದಂತೆ ನಟಿಸುವವರನ್ನು ಎಬ್ಬಿಸುವುದು ಸಾಧ್ಯವೇ ಇಲ್ಲ ಎಂಬ ಗಾದೆ ಮಾತಿದೆ. ದೇಶದ ಕೋಟ್ಯಂತರ ಜನಸಾಮಾನ್ಯರಿಗೆ ನೀರು, ನೆರಳು, ಅನ್ನ, ಅರಿವೆ ಕಲ್ಪಿಸಲು ಮೈಬಗ್ಗಿಸಿ ದುಡಿಯಬೇಕಾಗುತ್ತದೆ. ಸ್ವಜನ ಪಕ್ಷಪಾತವನ್ನು ಬಿಡಬೇಕಾಗುತ್ತದೆ. ಭ್ರಷ್ಟಾಚಾರವನ್ನು ತಡೆಯಬೇಕಾಗುತ್ತದೆ. ಆದರೆ ಹಿಂದೂ-ಮುಸ್ಲಿಮ್ ಕೋಮು ಧೃವೀಕರಣದ ಕೊಪ್ಪರಿಗೆಯ ಅಡಿಯ ಜ್ವಾಲೆಯನ್ನು ಸದಾ ಊದಿ ಉರಿಸುತ್ತಲೇ ಇರುವುದು ಜನರ ಕಣ್ಣಿಗೆ ಮಣ್ಣೆರಚಿ ಸದಾ ಅಧಿಕಾರದಲ್ಲಿರುವುದು ಬಲು ಸಲೀಸು. ಬ್ರಾಹ್ಮಣವಾದಿ ಗತವೈಭವದ ಭ್ರಮೆಯನ್ನು ಬಹುಜನರಿಗೆ ಉಣ್ಣಿಸುವುದು, ಅವರನ್ನು ಧರ್ಮಾಂಧತೆಯ ಮತ್ತಿನಲ್ಲಿ ಮುಳುಗಿಸಿ ಮೈಮರೆಸಿ ಮೋಸಗೊಳಿಸುವುದು ಸುಲಭದ ದಾರಿ.
ಕೆಲವು ಜನರನ್ನು ಕೆಲವು ಕಾಲ ಮೋಸ ಮಾಡಬಹುದು, ಎಲ್ಲ ಜನರನ್ನು ಎಲ್ಲ ಕಾಲಕ್ಕೂ ವಂಚಿಸುವುದು ಸಾಧ್ಯವಿಲ್ಲ ಎಂಬ ಗಾದೆ ಮಾತಿದೆ. ಮೋದಿಯವರು ಇಂದಲ್ಲ ನಾಳೆಯಾದರೂ ತಮ್ಮ ಕಡುಕೇಸರಿ ಕನ್ನಡಕವನ್ನು ಕಳಚಿ ಹಾಕಲೇಬೇಕು. ಉರಿವಾಸ್ತವಗಳನ್ನು ಎದುರಿಸಲೇಬೇಕು. ಕಟ್ಟಿದ ವೇಷ, ಹಚ್ಚಿಕೊಂಡ ಬಣ್ಣ ಶಾಶ್ವತ ಅಲ್ಲ. ಕಿಚ್ಚು ಹಚ್ಚುವ ಏಕೈಕ ಉದ್ದೇಶದಿಂದ ಕಾಲಮಾನದಿಂದ ಕಿತ್ತಿಟ್ಟು ಸೃಷ್ಟಿಸುವ ಹಸಿ ಸುಳ್ಳುಗಳೂ, ಅರೆಸತ್ಯಗಳ ಗತಿಯೂ ಅಷ್ಟೇ.
ಉರುಳುವುದು ಗಾಲಿಯ ಧರ್ಮ. ಅದನ್ನು ಮಂದವಾಗಿಸಬಹುದೇ ವಿನಾ ನಿಲ್ಲಿಸುವುದು ಮೋದಿಯವರಂತಹ ಮೋದಿಯವರಿಂದಲೂ ಸಾಧ್ಯವಿಲ್ಲ.





