ಪಶ್ಚಿಮಘಟ್ಟಗಳ ಅಡವಿಗಳು ಆತಂಕ ಹುಟ್ಟಿಸುವ ಪ್ರಮಾಣದಲ್ಲಿ, ಕಳವಳ ಬಿತ್ತುವ ವೇಗದಲ್ಲಿ ಜಾಳಾಗುತ್ತಲಿವೆ, ಛಿದ್ರಗೊಳ್ಳುತ್ತಿವೆ. ಇಂತಹ ವಿಧ್ವಂಸಕ್ಕೆ ಈಗಾಗಲೆ ದೈತ್ಯ ದಂಡವನ್ನು ತೆರುತ್ತಲಿದ್ದೇವೆ. ನಮ್ಮ ಕಾಲಮೇಲೆ ನಾವೇ ಕೊಡಲಿ ಬೀಸಿಕೊಳ್ಳುವ ಈ ಪ್ರಹಸನಕ್ಕೆ ಅರ್ಥವೇ ಇಲ್ಲ. ಈ ಅಡವಿ ಲೂಟಿಯನ್ನು ನಿಲ್ಲಿಸಲೇಬೇಕು.
ಕಲ್ಯಾಣ ಕರ್ನಾಟಕ ಸೀಮೆಯ 75 ಸಾವಿರ ಹೆಕ್ಟೇರ್ ಬೀಳು ಅಡವಿ ಭೂಮಿಯಲ್ಲಿ ಕಾಡು ಬೆಳೆಸುವತ್ತ ರಾಜ್ಯ ಬಜೆಟ್ ಗಮನ ಹರಿಸಿದೆ. ಈ ನಡೆ ಸ್ವಾಗತಾರ್ಹ.
ಆದರೆ, ನಿಜವಾಗಿಯೂ ರಾಜ್ಯ ಸರ್ಕಾರದ ಕಣ್ಣು ತೆರೆಯಬೇಕಿದ್ದ ವಿಷಯ ಪಶ್ಚಿಮಘಟ್ಟಗಳ ಸೀಮೆಯ ನಿಸರ್ಗ ಖಜಾನೆಗಳ ಸಂರಕ್ಷಣೆಯತ್ತ, ಅಡವಿಗಳು ಮತ್ತು ವನ್ಯಜೀವಿಗಳನ್ನು ಕಾಪಾಡುವತ್ತ. ತಾಪಮಾನ ಏರಿಕೆಯ ಗಂಡಾಂತರ ಭೂ ಗೋಳವನ್ನು ಕವಿಯುತ್ತಿರುವ ಹೊತ್ತಿನಲ್ಲಿ ಮಳೆಯ ಅಭಾವದ ಸೀಮೆಯಲ್ಲಿ ಮರಗಳನ್ನು ಬೆಳೆಯುವುದಕ್ಕಿಂತ ಮುಖ್ಯವಾದ ಸಂಗತಿಯಿದು.
ಪಶ್ಚಿಮಘಟ್ಟಗಳಲ್ಲಿ ಅರಣ್ಯ ಬೆಳೆಯುವ ಸರಾಸರಿ ಪ್ರಮಾಣ ಹೆಕ್ಟೇರಿಗೆ ನೂರು ಚದರ ಮೀಟರ್. ಮಳೆಯಾಶ್ರಿತ ಪ್ರದೇಶಗಳಲ್ಲಿ ಈ ಪ್ರಮಾಣ ಹತ್ತು ಚದರ ಮೀಟರಿಗಿಂತ ಕಮ್ಮಿ. ಪಶ್ಚಿಮ ಘಟ್ಟಗಳಲ್ಲಿ ನಡೆಯುತ್ತಿರುವ ಅರಣ್ಯನಾಶಕ್ಕೆ ಪರಿಹಾರ ತುಂಬಿಕೊಡಬೇಕಿದ್ದರೆ ಮಳೆಯಾಶ್ರಿತ ಪ್ರದೇಶಗಳಲ್ಲಿ, ಹತ್ತುಪಟ್ಟು ಹೆಚ್ಚಿನ ವ್ಯಾಪ್ತಿಯಲ್ಲಿ ಅರಣ್ಯ ಬೆಳೆಸಬೇಕಿದೆ.
ರಾಜ್ಯದ ದಕ್ಷ ಮತ್ತು ಪ್ರಾಮಾಣಿಕ ಅರಣ್ಯಾಧಿಕಾರಿಯಾಗಿ ನಿವೃತ್ತರಾಗಿರುವ ಬಿ.ಕೆ.ಸಿಂಗ್ ಅವರು ಇಂಗ್ಲಿಷ್ ಪತ್ರಿಕೆ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಗೆ ಬರೆದಿರುವ ಲೇಖನದಲ್ಲಿ ಈ ಎಲ್ಲ ಅಂಶಗಳನ್ನು ಪ್ರಬಲವಾಗಿ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯ ತನಿಖೆ-ನಿಯಂತ್ರಣ ಕುರಿತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವರದಿ ರೂಪಿಸುವಲ್ಲಿ ಸಿಂಗ್ ಅವರ ಪಾತ್ರ ಬಹಳ ದೊಡ್ಡದು. ಅವರ ಸಲಹೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಆ ಪಕ್ಷ ಈ ಪಕ್ಷವೆಂಬ ಭೇದವಿಲ್ಲದೆ ರಾಜ್ಯ ಸರ್ಕಾರಗಳು ಮೂಲಸೌಲಭ್ಯ, ಅಭಿವೃದ್ಧಿ, ಗಣಿಗಾರಿಕೆ ಹಾಗೂ ಕೈಗಾರಿಕೆಗಳಿಗೆಂದು ಅತ್ಯುತ್ತಮ ಗುಣಮಟ್ಟದ ದಟ್ಟ ಅರಣ್ಯ ಪ್ರದೇಶಗಳ ಬಲಿಕೊಡುತ್ತ ಬಂದಿವೆ. ವಿಶೇಷವಾಗಿ ಪಶ್ಚಿಮಘಟ್ಟಗಳ ಅಡವಿಗಳು ಆತಂಕ ಹುಟ್ಟಿಸುವ ಪ್ರಮಾಣದಲ್ಲಿ, ಕಳವಳ ಬಿತ್ತುವ ವೇಗದಲ್ಲಿ ಜಾಳಾಗುತ್ತಲಿವೆ, ಛಿದ್ರಗೊಳ್ಳುತ್ತಿವೆ. ಇಂತಹ ವಿಧ್ವಂಸಕ್ಕೆ ಈಗಾಗಲೆ ದೈತ್ಯ ದಂಡವನ್ನು ತೆರುತ್ತಲಿದ್ದೇವೆ. ಬರಗಾಲ, ಮಳೆಯ ಅಭಾವ, ಪ್ರವಾಹ, ಭೂಕುಸಿತ ಇತ್ಯಾದಿಗಳು ಭೂಮಂಡಲ ಎದುರಿಸಿರುವ ತಾಪಮಾನ ಏರಿಕೆಯ ನೇರ ದುಷ್ಪರಿಣಾಮಗಳು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮತ್ತು ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ಯೋಜನೆಗಳು ಅತ್ಯಂತ ಅಪಾಯಕಾರಿ. ಪಂಪ್ಡ್ ಸ್ಟೋರೇಜ್ ಯೋಜನೆಗೆ 200 ಹೆಕ್ಟೇರುಗಳಷ್ಟು ಮತ್ತು ರೈಲು ಮಾರ್ಗಕ್ಕೆ 700 ಹೆಕ್ಟೇರುಗಳಷ್ಟು ಅತ್ಯುತ್ತಮ ದಟ್ಟ ಅರಣ್ಯ ಬಲಿಯಾಗಲಿದೆ. ಪಶ್ಚಿಮಘಟ್ಟಗಳ ಅಡವಿಗಳ ಒಳಗೆ ಡಾಂಬರು ರಸ್ತೆ ನಿರ್ಮಾಣ, ರಸ್ತೆ ಅಗಲೀಕರಣ ಕ್ರಮಗಳು ಅಸಲು ಆತ್ಮಹತ್ಯೆಗಳು. ನಮ್ಮ ಕಾಲ ಮೇಲೆ ನಾವೇ ಕೊಡಲಿ ಬೀಸಿಕೊಳ್ಳುವ ಈ ಪ್ರಹಸನಕ್ಕೆ ಅರ್ಥವೇ ಇಲ್ಲ. ಈ ಅಡವಿ ಲೂಟಿಯನ್ನು ನಿಲ್ಲಿಸಲೇಬೇಕು. ಇದು ಮನುಷ್ಯನ ಅಳಿವು ಉಳಿವಿನ ಪ್ರಶ್ನೆ ಎಂದುಕೊಂಡರೂ ಸರಿ.
ಪಶ್ಚಿಮಘಟ್ಟಗಳ ಈ ಅರಣ್ಯಗಳು ಅರಬ್ಬೀ ಸಮುದ್ರದ ತೇವಾಂಶಭರಿತ ಗಾಳಿಯನ್ನು ಪ್ರಸ್ಥಭೂಮಿಗೆ ದಾಟಿಸುತ್ತವೆ. ‘ಅಭಿವೃದ್ಧಿ’ ಯೋಜನೆಗಳಿಗೆ ಇನ್ನೂ ಹತ್ತು ಲಕ್ಷ ಮರಬಲಿಯು ಕಲ್ಯಾಣ ಕರ್ನಾಟಕವೂ ಸೇರಿದಂತೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆ ಬೀಳುವ ಸ್ವರೂಪದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ. ಹೀಗಾಗಿ ಪಶ್ಚಿಮಘಟ್ಟಗಳ ಅರಣ್ಯಬೊಕ್ಕಸವನ್ನು ಬರಿದು ಮಾಡಿ, ಕಲ್ಯಾಣ ಕರ್ನಾಟಕದಲ್ಲಿ ಮರ ಬೆಳೆಸಿದರೆ ಯಾವ ಉಪಯೋಗವೂ ಇಲ್ಲ. ಹವಾಮಾನ ಪತನವನ್ನೂ, ಇತರೆ ಪರಿಸರ ಸಂಬಂಧೀ ಅವಗಢಗಳನ್ನು ಎದುರಿಸುವುದು ಅಪ್ಪಟ ಅವಾಸ್ತವಿಕ.
ಮಾನವ ಮತ್ತು ವನ್ಯಜೀವಿ ಸಂಘರ್ಷದ ಸಮಸ್ಯೆಯನ್ನು ಎದುರಿಸಲು ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 1,044 ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿದೆಯೆಂದು ವರದಿಗಳು ಹೇಳುತ್ತವೆ. ಈ ಪೈಕಿ ಹೊಸದಾಗಿ ರಚಿಸಲಾಗಿರುವ ಆನೆ ಕಾರ್ಯದಳಗಳ ಸಿಬ್ಬಂದಿಗೆ ಸಂಬಳ, ಆನೆಗಳು ಅಡವಿಯನ್ನು ದಾಟಿ ಮಾನವವಸತಿಗಳ ಹೊಲಗದ್ದೆ ತೋಟಗಳಿಗೆ ನುಗ್ಗದಂತೆ ಅಡವಿ ಅಂಚಿನಲ್ಲಿ ಅಡೆತಡೆಗಳನ್ನು ಕಟ್ಟಿರುವುದರ ಖರ್ಚೂ ಸೇರಿದೆಯಂತೆ. ಆನೆಗಳು ನುಗ್ಗಿದ ಕಾರಣ ಉಂಟಾದ ಬೆಳೆ ನಷ್ಟ, ಸಾವು ನೋವುಗಳಿಗೆ ನೀಡಿ ಪರಿಹಾರವೂ ಇದೇ ಮೊತ್ತದಲ್ಲಿ ಅಡಗಿದೆ. ಇಷ್ಟೆಲ್ಲ ಮಾಡಿದ ನಂತರವೂ ಈ ಘರ್ಷಣೆ ತಗ್ಗಿಲ್ಲ. ಬದಲಿಗೆ ಹೆಚ್ಚುತ್ತಲೇ ನಡೆದಿದೆ. ವನ್ಯಜೀವಿಗಳು ಅದರಲ್ಲೂ ವಿಶೇಷವಾಗಿ ಆನೆಗಳು ಮತ್ತು ಹುಲಿಗಳ ಅರಣ್ಯವಾಸಗಳು ಮತ್ತು ಅವುಗಳು ವರ್ಷಪೂರ್ತಿ ಸಂಚರಿಸುವ ಪಥಗಳನ್ನು (ಕಾರಿಡಾರ್) ಸಂರಕ್ಷಿಸಬೇಕು. ಈ ದೀರ್ಘಾವಧಿ ಪರಿಹಾರಗಳನ್ನು ಕೈಬಿಟ್ಟು, ಕೇವಲ ಅಲ್ಪಾವಧಿ ಪರಿಹಾರಗಳ ಮೇಲೆ ಹಣ ಸುರಿದು ಫಲವಿಲ್ಲ.
ಸುಮಾರು 5,676 ಎಕರೆಗಳಷ್ಟು ವಿಸ್ತೀರ್ಣದ ಬೃಹತ್ ಹೆಸರಘಟ್ಟ ಹುಲ್ಲುಗಾವಲುಗಳ ಅಭಿವೃದ್ಧಿಯ ಬಜೆಟ್ ಪ್ರಕಟಣೆ ಅತ್ಯಂತ ಸಕಾಲಿಕ ಕ್ರಮ. ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾತ್ರವಲ್ಲದೆ ಸಾರಜನಕವನ್ನು ಹಿಡಿದಿಟ್ಟು, ಹಕ್ಕಿಗಳು, ಉಭಯಜೀವಿಗಳು ಹಾಗೂ ಹಾವುಹಲ್ಲಿಗಳಂತಹ ಪ್ರಾಣಿಗಳಿಗೆ ವಸತಿ ಕಲ್ಪಿಸುವ ಹುಲ್ಲುಗಾವಲುಗಳಿವು. ಕಲ್ಯಾಣ ಕರ್ನಾಟಕದಲ್ಲೂ ತೇವಭೂಮಿಗಳು ಮತ್ತು ಹುಲ್ಲುಗಾವಲುಗಳಿವೆ. ಅವುಗಳಲ್ಲೂ ವಿರಳ ವನ್ಯಜೀವಿಗಳಿವೆ. ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳದಲ್ಲಿ ಕೃಷ್ಣಮೃಗಗಳ ದಾಳಿಯಿಂದ ರೈತರು ಬೆಳೆ ನಷ್ಟ ಎದುರಿಸಿದ್ದಾರೆ. ಸಿರುಗುಪ್ಪದ ಶುಷ್ಕ ಹುಲ್ಲುಗಾವಲುಗಳಲ್ಲಿ ಕಂಡು ಬರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಯ ಸಂರಕ್ಷಣೆಯತ್ತ ಗಮನ ಹರಿಸಬೇಕಿದೆ.
ಕಲ್ಯಾಣ ಕರ್ನಾಟಕದ 75 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಮರ ಬೆಳೆಸುವ ಕಾರ್ಯಕ್ರಮವನ್ನು ಸರ್ಕಾರ ಪ್ರಕಟಿಸಿದೆ. ಕಠಿಣ ಹವೆಯ ಈ ಸೀಮೆಯಲ್ಲಿ ನೆಡಲಾಗುವ ಸಸಿಗಳಲ್ಲಿ ಕಡೆಗೆ ಬದುಕಿ ಉಳಿದು ಬೆಳೆಯುವ ಮರಗಳ ಪ್ರಮಾಣ ಶೇ.10 ಮಾತ್ರ. ಈ ವಿಸ್ತೀರ್ಣದ ಪೈಕಿ ಸರ್ಕಾರದ ವಶದಲ್ಲಿರುವ ಬೀಳು ಅರಣ್ಯಭೂಮಿ ನಿಸ್ಸಾರವಾಗಿದ್ದು, ಅದರ ತೇವಾಂಶ ಹಿಡಿದಿಡುವ ಸಾಮರ್ಥ್ಯ ನಿರಾಶಾದಾಯಕ. ಈ ಜಮೀನನ್ನು ರೆವಿನ್ಯೂ ವಶದಿಂದ ಅರಣ್ಯ ಇಲಾಖೆಗೆ ವಹಿಸಿಕೊಡಲು ಜಿಲ್ಲಾಡಳಿತ ಹಾಗೂ ಪಂಚಾಯತಿಗಳು ಮನಸು ಮಾಡುವುದೂ ಇಲ್ಲ. ಭವಿಷ್ಯತ್ತಿನಲ್ಲಿ ಬೇಕಾಗುವ ಅರಣ್ಯೇತರ ಚಟುವಟಿಕೆಗಳಿಗೆ ಭೂಮಿ ಸಿಗುವುದಿಲ್ಲ, ಒಮ್ಮೆ ಹಸ್ತಾಂತರಿಸಿದ ಜಮೀನನ್ನು ಅರಣ್ಯ ಇಲಾಖೆಯಿಂದ ವಾಪಸು ಪಡೆಯುವುದು ದುಸ್ಸಾಧ್ಯ ಎಂಬುದು ಅವುಗಳ ಮನಸ್ಥಿತಿ.
ಆದರೆ ಮರಗಳನ್ನು ಬೆಳೆಸುವುದು ಪರಿಸರ ಕಲ್ಯಾಣದ ಸಂಗತಿ. ಕೃಷಿ ಅರಣ್ಯಗಳ ಬೆಳೆಸುವಿಕೆಯನ್ನು ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರ ಪ್ರೋತ್ಸಾಹಿಸುವುದು ಉತ್ತಮ ಕೆಲಸ. ಪಟ್ಟಣ ಕೇಂದ್ರಗಳ ಸುತ್ತಮುತ್ತ 100 ಮಿಯಾವಾಕಿ ಉದ್ಯಾನಗಳನ್ನು ಬೆಳೆಸುವ ಕ್ರಮವೂ ಅಭಿನಂದನಾರ್ಹ. ಬೇಸಿಗೆಯ ಬಿಸಿಲಿನ ಧಗೆಯ ಹೆಚ್ಚಳಕ್ಕೆ ಅಂಕುಶವಿಡುವ ಕ್ರಮವಿದು. ಕಾಲಾನುಕ್ರಮದಲ್ಲಿ ಇಂತಹ ಉದ್ಯಾನಗಳ ಸಂಖ್ಯೆ ಹೆಚ್ಚಬೇಕಿದೆ.
ಇದನ್ನೂ ಓದಿ ʼಕಾಂಕ್ರೀಟ್ʼ ಮಾಡುವ ಗಾಯಕ್ಕೆ ಜಪಾನಿ ʼಮಿಯಾವಾಕಿʼಯೇ ಮದ್ದು!





