ಈ ದಿನ ಸಂಪಾದಕೀಯ | ಬಿಜೆಪಿ ದ್ವೇಷ ರಾಜಕಾರಣವನ್ನು ಸದೆಬಡಿಯದಿದ್ದರೆ ಉಳಿಗಾಲವಿಲ್ಲ

Date:

ಭಾರತದ ರಾಜಕೀಯವು ಧಾರ್ಮಿಕ ದ್ವೇಷವನ್ನು ಆಳವಾಗಿ ಅಳವಡಿಸಿಕೊಳ್ಳುತ್ತಿದೆ. ಗುಜರಾತ್ ಮಾಡೆಲ್, ಅಮೃತಕಾಲ, ರಾಮಮಂದಿರ– ಯಾವುದೂ ಕೈಹಿಡಿಯದೆ ಕಂಗಾಲಾಗಿರುವ ಬಿಜೆಪಿಗೆ ಮುಸ್ಲಿಂ ವಿರೋಧಿ ದ್ವೇಷವೇ ಪ್ರಮುಖ ರಾಜಕೀಯ ಸರಕಾಗಿದೆ. 

ನಿಮ್ಮ ಊರಿಗೆ ಯಾರೋ ಒಬ್ಬ ರಾಜಕಾರಣಿ ನುಗ್ಗಿ, ಇನ್ನುಮುಂದೆ, ತಮ್ಮಲ್ಲಿ ಕೆಲಸ ಮಾಡುವ ಹಿಂದು ಕೆಲಸಗಾರರನ್ನು ವಾಪಸ್‌ ಕಳಿಸಿ, ಅವರಿಗೆ ಕೆಲಸ ಕೊಡಬೇಡಿ ಎಂದು ಎಚ್ಚರಿಕೆ ನೀಡಿದರೆ ಹೇಗಿರುತ್ತದೆ? ಯೋಗಿ ಆದಿತ್ಯನಾಥ್ ರೀತಿಯ ಆಡಳಿತ ಇರುವ ಉತ್ತರ ಪ್ರದೇಶದಲ್ಲಾದರೆ ಗಲಭೆಗಳೇ ನಡೆಯಬಹುದು. ಕೋಮುಕ್ರಿಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಸರ್ಕಾರ ಇರುವ ಕರ್ನಾಟಕದಲ್ಲಾದರೆ, ಸಿ.ಟಿ ರವಿ, ಶೋಭಾ ಕರಂದ್ಲಾಜೆ, ಯತ್ನಾಳ್‌ ರೀತಿಯ ಬಾಯಿ ಹರುಕರು ತಮ್ಮೂರಿಗೆ ಧಾಂಗುಡಿ ಇಡಬಹುದು. ಹಿಂದು ರಾಷ್ಟ್ರ, ಹಿಂದುತ್ವ, ಹಿಂದು ರಕ್ಷಣೆ ಎಂದೆಲ್ಲ ಪ್ರಚೋದನಾಕಾರಿ ಭಾಷಣ ಮಾಡಿ, ಕೋಮುದ್ವೇಷ ಬಿತ್ತಬಹುದು, ಸುದ್ದಿ ವಾಹಿನಿಗಳು ಹಿಂದುಗಳ ಮೇಲೆ ದಬ್ಬಾಳಿಕೆ, ಜಿಹಾದ್‌ ಎಂದೆಲ್ಲ ಬೊಬ್ಬೆ ಹೊಡೆಯಬಹುದು, ಬಿಜೆಪಿ/ಸಂಘಿಗಳ ಬುಲ್ಡೋಜರ್‌ಗಳೂ ನುಗ್ಗಬಹುದು.

ಆದರೆ, ಹಿಂದುಗಳ ಬದಲಿಗೆ ಮುಸ್ಲಿಮರನ್ನು ಕೆಲಸದಿಂದ ಹೊರಹಾಕಿ ಎಂದರೆ ಏನಾಗುತ್ತದೆ. ಎಲ್ಲವೂ ಶಾಂತವಾಗಿಯೂ, ಏನೂ ನಡೆದೇ ಇಲ್ಲ ಎಂಬಂತೆಯೂ ಇರಬಹುದು. ಹಾಗೆ ಇರುವುದು ಸತ್ಯವೂ ಕೂಡ. ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಿಜೆಪಿಗರು ಬೆದರಿಕೆ ಹಾಕಿದ್ದಾರೆ. ಅಲ್ಲಿನ, ಸ್ಥಳೀಯ ಆಡಳಿತ, ಅಧಿಕಾರಿಗಳು, ಪೊಲೀಸರು ನಿರುಮ್ಮಳ ಮೌನ ತಾಳಿದ್ದಾರೆ. ಪರಿಣಾಮ, ಮುಸ್ಲಿಮರು ದೌರ್ಜನ್ಯ, ದಮನಕ್ಕೆ ತುತ್ತಾಗಿದ್ದಾರೆ. ಹಲವಾರು ಮುಸ್ಲಿಂ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಇದನ್ನು ಓದಿದ್ದೀರಾ?: ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂದೋರ್‌ನ ಬಿಜೆಪಿ ಉಪಾಧ್ಯಕ್ಷೆ, ಶಾಸಕಿ ಮಾಲಿನಿ ಗೌಡ್ ಅವರ ಪತ್ರ ಏಕಲವ್ಯ ಸಿಂಗ್ ಗೌಡ್‌ ಅವರು ಒಂದು ತಿಂಗಳ ಹಿಂದೆ ಗುಂಪು ಕಟ್ಟಿಕೊಂಡು ಶೀತ್ಲಾ ಮಾತಾ ಬಜಾರ್‌ನ ಬಟ್ಟೆ ಮಾರುಕಟ್ಟೆಗೆ ಬಂದಿದ್ದರು. ಮಾರುಕಟ್ಟೆ ಸಂಘದೊಂದಿಗೆ ಸಭೆ ನಡೆಸಿದರು. ಅಲ್ಲಿದ್ದ ವ್ಯಾಪಾರಿಗಳಿಗೆ ಒಂದು ತಿಂಗಳೊಳಗೆ ತಮ್ಮ ಎಲ್ಲ ಮುಸ್ಲಿಂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಬೇಕು ಎಂದು ಬೆದರಿಕೆ ಹಾಕಿ, ಗಡುವು ನೀಡಿದ್ದರು.  

ನಗರದಲ್ಲಿ ‘ಲವ್ ಜಿಹಾದ್’ ನಡೆಯುತ್ತಿದೆ. ಮಾರಾಟ ಸಂಪರ್ಕಗಳನ್ನು ‘ಲವ್ ಜಿಹಾದ್’ ಸಂಪರ್ಕಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಇದನ್ನು ತಡೆಯಬೇಕೆಂದರೆ, ಹಿಂದು ಯುವತಿಯರನ್ನು ರಕ್ಷಿಸಬೇಕೆಂದರೆ, ವ್ಯಾಪಾರಿಗಳು ತಮ್ಮಲ್ಲಿರುವ ಮುಸ್ಲಿಂ ಕಾರ್ಮಿಕರನ್ನು ಹೊರಹಾಕಬೇಕೆಂದು ಆತ ಎಚ್ಚರಿಸಿದ್ದರು.

ಹಿಂದುತ್ವ ಕೋಮುವಾದಿ ಏಕಲವ್ಯ ಸಿಂಗ್ ಗೌಡ್‌ ನೀಡಿದ್ದ ಗಡುವು ಸೆಪ್ಟೆಂಬರ್ 25ಕ್ಕೆ ಕೊನೆಗೊಂಡಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮುಸ್ಲಿಂ ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ನಾಲ್ಕೈದು ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಯನ್ನೇ ಖಾಲಿ ಮಾಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರ್ಮಿಕರು ಹೊಸ ಕೆಲಸಕ್ಕಾಗಿ ಹುಡುಕುತ್ತಿದ್ದಾರೆ. ಅಲೆದಾಡುತ್ತಿದ್ದಾರೆ. ದಿನನಿತ್ಯದ ಜೀವನ ದೂಡಲು ಪರದಾಡುತ್ತಿದ್ದಾರೆ.

ಬಿಜೆಪಿಯ ಕಾಲಾಳುಗಳು ಮಾರುಕಟ್ಟೆಯಲ್ಲಿನ ಕಾರ್ಮಿಕರ ಆಧಾರ್‌ ಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಮುಸ್ಲಿಂ ಕಾರ್ಮಿಕರು ಕಂಡುಬಂದಲ್ಲಿ, ಅವರನ್ನು ಹೊರಹಾಕುವಂತೆ ವ್ಯಾಪಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ.

ಆಶಾದಾಯಕ ಸಂಗತಿ ಎಂದರೆ, ಬಿಜೆಪಿಯ ಕೋಮುವಾದವನ್ನು ಶೀತ್ಲಾ ಮಾತಾ ಬಜಾರ್‌ನ ವ್ಯಾಪಾರಿಗಳು ಅಳವಡಿಸಿಕೊಂಡಿಲ್ಲ. ಅಲ್ಲಿನ ಹಿಂದು ವ್ಯಾಪಾರಿಗಳು ಮತ್ತು ಮುಸ್ಲಿಂ ಕಾರ್ಮಿಕರು ಸಹೋದರರಂತೆ ಒಟ್ಟಿಗೆ ಇದ್ದಾರೆ. ವ್ಯಾಪಾರಿಗಳಿಗೆ ತಮ್ಮ ಮುಸ್ಲಿಂ ಕಾರ್ಮಿಕರನ್ನು ವಜಾಗೊಳಿಸುವ ಮನಸ್ಸಿಲ್ಲ. ಆದರೆ, ಅವರು ಭಯಭೀತರಾಗಿದ್ದಾರೆ. ‘ಮರೆಯಲ್ಲಿ ಕೆಲಸ ಮಾಡುವಂತೆ, ವಿವಾದವು ತಿಳಿಯಾಗುವವರೆಗೆ ರಜೆ ತೆಗೆದುಕೊಳ್ಳುವಂತೆ’ ಕಾರ್ಮಿಕರಿಗೆ ಸಲಹೆ ನೀಡುತ್ತಿದ್ದಾರೆ.

ಬಿಜೆಪಿ ನಾಯಕನ ಈ ಬೆದರಿಕೆಯ ವಿರುದ್ಧ ಮುಸ್ಲಿ ವ್ಯಾಪಾರಿಗಳು ಮತ್ತು ಕಾರ್ಮಿಕರು ಬುಧವಾರ ಮೌನ ಪ್ರತಿಭಟನೆ ನಡೆಸಿದ್ದಾರೆ. ತಮಗಾದ ಅನ್ಯಾಯಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ತಮ್ಮ ಉದ್ಯೋಗವನ್ನು ಕಸಿದುಕೊಂಡ ಏಕಲವ್ಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಹಿಂದು ವ್ಯಾಪಾರಿಗಳೂ ಭಾಗಿಯಾಗಿದ್ದಾರೆ. ಬಿಜೆಪಿ ನಾಯಕನ ಧೋರಣೆ ತಪ್ಪು ಎಂದು ಖಂಡಿಸಿದ್ದಾರೆ.

ಧರ್ಮದ ಕಾರಣಕ್ಕಾಗಿ ಅವರನ್ನು ಹೊರಗಿಡುವುದು ಸಂವಿಧಾನದ 14ನೇ ವಿಧಿ ಹೇಳುವ ಸಮಾನತೆ ಮತ್ತು 15ನೇ ವಿಧಿ ಸೂಚಿಸುವ ಧರ್ಮಾಧಾರಿತ ತಾರತಮ್ಯ ಮಾಡುವಂತಿಲ್ಲ ಎಂಬ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ.

ಆದರೆ, ಕೋಮುಕ್ರಿಮಿಯೊಬ್ಬನ ಬೆದರಿಕೆಯ ಬಗ್ಗೆ ಜಿಲ್ಲಾಡಳಿತವಾಗಲೀ, ಪೊಲೀಸ್‌ ಇಲಾಖೆಯಾಗಲೀ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಕರಣವನ್ನೂ ದಾಖಲಿಸಿಲ್ಲ. ಬದಲಾಗಿ, ಬೆದರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ, ಯಾವುದೇ ದೂರು ದಾಖಲಾಗಿಲ್ಲವೆಂದು ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಸಿಂಗ್ ಹೇಳಿಕೊಂಡಿದ್ದಾರೆ.

ಇದೇ ಪ್ರಕರಣದ ಬಗ್ಗೆ ಮಾತನಾಡಿರುವ ಡಿಸಿಪಿ ಆನಂದ್‌ ಕಲಾದ್ಗಿ ಅವರು, ”ಏಕಲವ್ಯ ಸಿಂಗ್ ಅವರು ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ವಿಡಿಯೋ ಪುರಾವೆಗಳೂ ಇಲ್ಲ. ನಾವು ಈ ವಿಚಾರದ ಬಗ್ಗೆ ಪರಿಶೀಲಿಸುತ್ತಿದ್ದೇವೆ” ಎಂದಷ್ಟೇ ಹೇಳಿದ್ದಾರೆ.

ಆತ ಬೆದರಿಕೆ ಹಾಕಿ ಬರೋಬ್ಬರಿ 32 ದಿನಗಳು ಗತಿಸಿವೆ. ಮುಸ್ಲಿಂ ಕಾರ್ಮಿಕರು ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ. ಆದರೆ, ಪೊಲೀಸರು ಇನ್ನೂ ಪರಿಶೀಲನೆ ನಡೆಸುತ್ತಲೇ ಇದ್ದಾರೆ.

ವಾಸ್ತವವೆಂದರೆ, ಮುಸ್ಲಿಂ ವ್ಯಾಪಾರಿಯೊಬ್ಬರು ಏಕಲವ್ಯ ವಿರುದ್ಧ ಸೆಪ್ಟೆಂಬರ್‌ 15ರಂದೇ ಪೊಲೀಸ್‌ ಆಯುಕ್ತರ ಕಚೇರಿಗೆ ದೂರು ದಾಖಲಿಸಿದ್ದಾರೆ. ‘ರಾಜಕೀಯ ಲಾಭಕ್ಕಾಗಿ ಮುಸ್ಲಿಂ ಕಾರ್ಮಿಕರನ್ನು ಗುರಿಯಾಗಿಸಿಕೊಳ್ಳಲಾಗಿದೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಆದಾಗ್ಯೂ, ಪೊಲೀಸರು ನಿರ್ಲಜ್ಜ ಮೌನ ತಾಳಿದ್ದಾರೆ. ಬಿಜೆಪಿ ಶಾಸಕಿ ಮಾಲಿನಿ ಗೌಡ್ ಮತ್ತು ಅವರ ಮಗ ಏಕಲವ್ಯ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಅಲ್ಲಿನ ಮುಸ್ಲಿಮರಿಗೆ ಗೊತ್ತು.

ಮುಸ್ಲಿಂ ಕಾರ್ಮಿಕರು ಬೀದಿಯಲ್ಲಿ ಅನಾಥರಂತೆ ನಿಂತಿದ್ದಾರೆ. ಅವರಿಗೆ ನೆರವಾಗುವವರು ಯಾರು ಇಲ್ಲ. ಪೊಲೀಸರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು– ಯಾರೊಬ್ಬರೂ ಅವರ ಸಹಾಯಕ್ಕೆ, ಬೆಂಬಲಕ್ಕೆ ಬರುತ್ತಿಲ್ಲ.

ಒಂದು ವೇಳೆ, ಇದೇ ಜಾಗದಲ್ಲಿ ಹಿಂದುಗಳು ಇದ್ದಿದ್ದರೆ, ಹಿಂದುಗಳನ್ನು ಕೆಲಸದಿಂದ ವಜಾಗೊಳಿಸುವಂತೆ ಮುಸ್ಲಿಮರು ಬೆದರಿಕೆ ಹಾಕುವುದಿರಲಿ, ಹಿಂದು ಸಮುದಾಯದ ರಾಜಕೀಯ ನಾಯಕರೇ ಹೇಳಿದ್ದರೆ, ಇಂದೋರ್ ಪರಿಸ್ಥಿತಿ ಏನಾಗಿರುತ್ತಿತ್ತು?

ಸುದ್ದಿ ವಾಹಿನಿಗಳು ಹಗಲು-ರಾತ್ರಿ ಚರ್ಚೆ ನಡೆಸಿ, ‘ಹಿಂದುಗಳಿಗೆ ಅನ್ಯಾಯ, ದೌರ್ಜನ್ಯ, ಹಿಂದು ವಿರೋಧಿ, ದೇಶದ್ರೋಹ’ ಎಂದೆಲ್ಲ ಅರಚುತ್ತಿದ್ದವು. ಕ್ಷಣಾರ್ಧದಲ್ಲೇ ಎಫ್‌ಐಆರ್‌ಗಳು ದಾಖಲಾಗುತ್ತಿದ್ದವು. ಇಂದೋರ್ ಕೋಮುಸೂಕ್ಷ್ಮ ಪ್ರದೇಶವಾಗಿ ಮಾರ್ಪಡುತ್ತಿತ್ತು, ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿತ್ತು, ಬುಲ್ಡೋಜರ್‌ಗಳು ಮಾರುಕಟ್ಟೆಗೆ ಧಾವಿಸಿ, ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳನ್ನು ಧ್ವಂಸಗೊಳಿಸುತ್ತಿದ್ದವು, ಪ್ರಧಾನಿ ಮೋದಿ ಎಲ್ಲಿದ್ದರೂ ಟ್ವೀಟ್‌ ಮಾಡುತ್ತಿದ್ದರು, ಬಿಜೆಪಿ ನಾಯಕರು ಇಂದೋರ್‌ಗೆ ದೌಡಾಯಿಸುತ್ತಿದ್ದರು, ರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗಳು, ಪ್ರತಿಭಟನೆಗಳು ನಡೆಯುತ್ತಿದ್ದವು, ಮುಸ್ಲಿಮರ ಮನೆಗಳು, ಮಸೀದಿಗಳ ಮೇಲೆ ದಾಳಿಯೂ ನಡೆಯುತ್ತಿದ್ದವು, ಆರ್ಥಿಕ ಬಹಿಷ್ಕಾರ ಸೇರಿದಂತೆ ದಾಂಧಲೆಗಳೂ ನಡೆಯುತ್ತಿದ್ದವು.

ಆದರೆ, ಈಗ ಇಂದೋರ್‌ನ ಸುದ್ದಿ ಮಧ್ಯಪ್ರದೇಶದ ಜನರಿಗೂ ತಲುಪಿಲ್ಲ. ಆ ರೀತಿಯಲ್ಲಿ ಮುಸ್ಲಿಮರ ಮೇಲೆ ಸದ್ದಿಲ್ಲದೆ ದೌರ್ಜನ್ಯ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಇದು, ಕೇವಲ ಏಕಲವ್ಯ ಗೌಡ್ ಒಬ್ಬರ ಕೃತ್ಯವಲ್ಲ. ಆತನ ಕೃತ್ಯಕ್ಕೆ ಬೆನ್ನಾಗಿ ನಿಂತಿರುವ ಪೊಲೀಸ್‌, ಆಡಳಿತ, ಸರ್ಕಾರಗಳ ಸಾಮೂಹಿಕ ಕೃತ್ಯ.

ಈ ಲೇಖನ ಓದಿದ್ದೀರಾ?: ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಘಟನೆಯು ಇಂದೋರ್‌ಗೆ ಮಾತ್ರ ಸೀಮಿತವಲ್ಲ. ಈಗಾಗಲೇ, ಹಿಂದು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗುತ್ತಿರುವ ಹತ್ತಾರು ಘಟನೆಗಳು ಕರ್ನಾಟಕದಲ್ಲಿ ನಡೆದಿವೆ. ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ 2022ರ ಏಪ್ರಿಲ್‌ನಲ್ಲಿ ಮುಸ್ಲಿಂ ವ್ಯಾಪಾರಿ ನಬೀಸಾಬ್ ಅವರು ಕಲ್ಲಂಗಡಿ ಹಣ್ಣುಗಳನ್ನು ಹಿಂದುತ್ವವಾದಿ ಸಂಘಟನೆಗಳು ನಾಶ ಮಾಡಿದ್ದವು. ಅದಾದ ಬಳಿಕ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿರ್ಬಂಧಿಸುವ ರೋಗ ಸಾಂಕ್ರಮಿಕದಂತೆ ಹರಡಿತು. ಅಂಜನಾದ್ರಿ ಜಾತ್ರೆ, ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ, ಮಂಗಳಾದೇವಿ ಜಾತ್ರೆ, ದೇಶದ ಉದ್ದಗಲಕ್ಕೂ ವರದಿಯಾಗುತ್ತಿವೆ. ಭಾರತದ ರಾಜಕೀಯವು ಧಾರ್ಮಿಕ ದ್ವೇಷವನ್ನು ಗಟ್ಟಿಯಾಗಿ ಅಳವಡಿಸಿಕೊಳ್ಳುತ್ತಿದೆ. ಗುಜರಾತ್ ಮಾಡೆಲ್, ಅಮೃತಕಾಲ, ರಾಮಮಂದಿರ– ಯಾವುದೂ ಕೈಹಿಡಿಯದೆ ಕಂಗಾಲಾಗಿರುವ ಬಿಜೆಪಿಗೆ ಮುಸ್ಲಿಂ ವಿರೋಧಿ ದ್ವೇಷವೇ ಪ್ರಮುಖ ರಾಜಕೀಯ ಸರಕಾಗಿದೆ. ವೋಟ್‌ ಬ್ಯಾಂಕ್ ರಾಜಕಾರಣಕ್ಕೆ ಕೋಮುದ್ವೇಷದ ವಿಷವನ್ನು ಹೆಚ್ಚಾಗಿ ಸುರಿಯಲಾಗುತ್ತಿದೆ.

ಈ ಧರ್ಮಾಂಧತೆಯ ವಿರುದ್ಧ ಭಾರತದ ನಾಗರಿಕರು ಎಚ್ಚೆತ್ತುಕೊಳ್ಳುವ ಕಾಲ ಸಮೀಪಿಸಿದೆ. ಇಂದೋರ್‌ನ ವ್ಯಾಪಾರಿಗಳಂತೆ ಒಗ್ಗಟ್ಟಿನಿಂದ ನಿಲ್ಲುವ ತುರ್ತು ಇದೆ. ಕೋಮುದ್ವೇಷ ಹರಡುವ ಕೋಮುಕ್ರಿಮಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಪೊಲೀಸ್‌, ಆಡಳಿತ ಹಾಗೂ ನ್ಯಾಯಾಂಗದ ಮೇಲೆ ಒತ್ತಡ ಹೇರಲು ಭಾರತೀಯರು ಒಗ್ಗೂಡಬೇಕಿದೆ. ಇಲ್ಲವಾದಲ್ಲಿ, ದೇಶದ ಐಕ್ಯತೆಯನ್ನೇ ಸಂಘಿಗಳು ಒಡೆದುರುಳಿಸುತ್ತಾರೆ. ಇದೇ ಸಮಯದಲ್ಲಿ, ಪ್ರಧಾನಿ ಮೋದಿ ಅವರ ‘ಸಬ್ ಕ ಸಾಥ್’ ಎಂದರೆ ಏನು ಎಂದು ಮತ್ತೆ ಮತ್ತೆ ಪ್ರಶ್ನಿಸಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....