ಈ ದಿನ ಸಂಪಾದಕೀಯ | ಡಿ.6 – ಭಾರತದ ಜಾತ್ಯತೀತ ಇತಿಹಾಸದ ಕರಾಳ ದಿನ

Date:

ಪೂಜಾ ಸ್ಥಳಗಳ ಕಾಯ್ದೆ-1991’ ಅಡಿಯಲ್ಲಿ ಬೇರಾವುದೇ ಪೂಜನಾ ಸ್ಥಳಗಳನ್ನು ವಿವಾದವಾಗಿಸುವಂತಿಲ್ಲ, ಅವುಗಳನ್ನು ಪರಿಗಣಿಸುವಂತಿಲ್ಲ ಎಂದಿದ್ದರೂ, ಹಲವು ನ್ಯಾಯಾಲಯಗಳು ಮಂದಿರ-ಮಸೀದಿ ವಿವಾದ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿವೆ. ಆಲಿಸುತ್ತಿವೆ. ಸಮೀಕ್ಷೆ ನಡೆಸಲೂ ಅನುಮತಿ ನೀಡುತ್ತಿವೆ. ಇದೆಲ್ಲವೂ ಹಿಂದುತ್ವ ಕೋಮುವಾದದ ದಳ್ಳುರಿಗೆ ಎಣ್ಣೆ ಸುರಿದಂತೆ ಭಾಸವಾಗುತ್ತಿದೆ.

ಭಾರತೀಯರ ಪಾಲಿಗೆ ಡಿಸೆಂಬರ್ 6 – ನೋವಿನ ದಿನ ಮಾತ್ರವಲ್ಲ ಕರಾಳ ದಿನವೂ ಆಗಿ ಇತಿಹಾಸದಲ್ಲಿ ಉಳಿದಿದೆ. ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರರು ದೈಹಿಕವಾಗಿ ಹೋರಾಟದ ಬದುಕನ್ನು ಕಳಚಿದ ದಿನವಿದು. ಜೊತೆಗೆ, ಬಿಜೆಪಿ ಮತ್ತು ಸಂಘಪರಿವಾರ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದೊಂದಿಗೆ ಇಡೀ ದೇಶವನ್ನೇ ತಲ್ಲಣಗೊಳಿಸಿ, ಆತಂಕಕ್ಕೆ ದೂಡಿದ ದಿನವೂ ಹೌದು.

ಅಂದು 1992 ಡಿಸೆಂಬರ್ 6 – ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಹಿಂದುತ್ವ ಕೋಮುವಾದಿ ಕರಸೇವಕರ ಗುಂಪು ಧ್ವಂಸಗೊಳಿಸಿತು. ಶಾಂತಿ-ನೆಮ್ಮದಿಯಿಂದಿದ್ದ ಜನರ ನಡುವೆ ಬೆಂಕಿ ಹಚ್ಚಿತು, ದ್ವೇಷದ ದಳ್ಳುರಿಗೆ ದೂಡಿತು. ಆನಂತರ ನಡೆದ ಗಲಭೆಗಳಿಂದಾಗಿ 2,000ಕ್ಕೂ ಹೆಚ್ಚು ಜನರು ಹತರಾದರು. ಆ ದುರ್ಘಟನೆ ಸ್ವತಂತ್ರ ಭಾರತದ ಜಾತ್ಯತೀತ ಆದರ್ಶಕ್ಕೆ, ಸಂವಿಧಾನದ ಆತ್ಮಕ್ಕೆ ಹಾಗೂ ರಾಷ್ಟ್ರೀಯ ಏಕತೆಗೆ ಆಳವಾದ ಆಘಾತ ಉಂಟುಮಾಡಿತು, ಗಂಭೀರ ಪೆಟ್ಟುಕೊಟ್ಟಿತು. ಪ್ರಜಾಪ್ರಭುತ್ವದ ನೆಲವನ್ನು ಅಣಕಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಧ್ವಂಸದ ನಂತರ 27 ವರ್ಷಗಳ ಸುದೀರ್ಘ ಕಾನೂನು ಹೋರಾಟಗಳು ನಡೆದವು. ಈ ಅವಧಿಯಲ್ಲಿ ಸಿಬಿಐ, ಲಿಬರಹಾನ್ ಆಯೋಗಗಳು ತನಿಖೆ ನಡೆಸಿದವು. 2019ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು, ಬಾಬರಿ ಮಸೀದಿ ಧ್ವಂಸವನ್ನು ‘ಕಾನೂನುಬಾಹಿರ’ ಮತ್ತು ‘ಅಸಾಂವಿಧಾನಿಕ’ ಎಂದು ಕರೆಯಿತು. ಆದರೂ, ‘ಹಿಂದುಗಳ ನಂಬಿಕೆ ಮತ್ತು ಆಚರಣೆ’ ಆಧಾರದ ಮೇಲೆ ಮಸೀದಿ ಜಾಗದಲ್ಲಿ ರಾಮಮಂದಿರ ಕಟ್ಟಲು ಅನುಮತಿಸಿ ತೀರ್ಪು ನೀಡಿತು. ಜೊತೆಗೆ, ಮಸೀದಿ ನಿರ್ಮಾಣಕ್ಕಾಗಿ ಆಯೋಧ್ಯೆಯಲ್ಲೇ 5 ಎಕರೆ ಪರ್ಯಾಯ ಜಾಗ ನೀಡುವಂತೆ ಆದೇಶಿಸಿತು.

ಮಸೀದಿ ಜಾಗದಲ್ಲಿ ಈ ಹಿಂದೆ ಮಂದಿರವಿತ್ತು ಎಂಬುದಕ್ಕೆ ಖಚಿತ ಪುರಾವೆಗಳಿಲ್ಲದಿದ್ದರೂ, ಜನರ ಭಾವನೆಯನ್ನು ಆಧರಿಸಿ ಪ್ರಕಟವಾದ ಈ ತೀರ್ಪು, ‘ಬಹುಸಂಖ್ಯಾತರ ಒತ್ತಡ ಮತ್ತು ಭಾವನೆಗಳಿಗೆ ನ್ಯಾಯಾಂಗ ಮಣಿದಿದೆ’ ಎಂಬುದರ ಸಂಕೇತವೆಂದು ವಿಮರ್ಶಿಸಲಾಗಿದೆ.

1528ರಲ್ಲಿ ಮೊಘಲ್ ಅಡಳಿತದಲ್ಲಿ ಬಾಬರಿ ಮಸೀದಿಯನ್ನು ನಿರ್ಮಾಣ ಮಾಡಲಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಅದರೆ, ಅದೇ ಜಾಗದಲ್ಲಿ ಮಂದಿರವಿತ್ತು. ಅದನ್ನು ಉರುಳಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಹಿಂದು ಮಹಾಸಭಾ ವಾದಿಸುತ್ತಲೂ, ಅದು ರಾಮ ಜನ್ಮಭೂಮಿಯೆಂದು ವಿವಾದ ಸೃಷ್ಟಿಸುತ್ತಲೂ ಬಂದಿತ್ತು. ವಿಶ್ವ ಹಿಂದು ಪರಿಷತ್, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಮಸೀದಿ ಜಾಗವನ್ನು ಕೋಮು ರಾಜಕಾರಣದ ಕೇಂದ್ರವನ್ನಾಗಿ ಮಾಡಿಕೊಂಡವು. ನಿರಂತರ ಪ್ರಚೋದನೆಯ ಮೂಲಕ ಹಿಂದುಗಳಿಗೆ ವಿಷಪ್ರಾಶನ ಮಾಡಿ, 1992ರ ಡಿಸೆಂಬರ್ 6ರಂದು ಧ್ವಂಸ ಕೃತ್ಯಕ್ಕೆ ದಿನನಿಗದಿ ಮಾಡಿತು.

ಆ ದಿನ ಕೇಂದ್ರದಲ್ಲಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದರೂ, ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವಿತ್ತು. ‘ಯಾವುದೇ ಶಾಶ್ವತ ಕಟ್ಟಡವನ್ನು ಧ್ವಂಸ ಮಾಡುವುದಿಲ್ಲ’ವೆಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಬಿಜೆಪಿ ಸರ್ಕಾರ, ಆ ದಿನ ತನ್ನ ಪೊಲೀಸ್ ಯಂತ್ರವನ್ನು ಸಂಪೂರ್ಣವಾಗಿ ಮೌನಗೊಳಿಸಿತು. ಮಸೀದಿಯನ್ನು ಧ್ವಂಸಗೊಳಿಸಲು ನೆರವು ನೀಡಿತು.

ಕೃತ್ಯದ ಬಳಿಕ, ಕೇಂದ್ರ ಸರ್ಕಾರವು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶದ ಬಿಜೆಪಿ ಸರ್ಕಾರಗಳನ್ನು ವಜಾಗೊಳಿಸಿತು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಆರ್‌ಎಸ್‌ಎಸ್‌ ಸೇರಿದಂತೆ ಹಲವು ಹಿಂದುತ್ವ ಕೋಮು ಸಂಘಟನೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿತು.

ಲಿಬರಹಾನ್ ಆಯೋಗ (1992-2009) ಧ್ವಂಸವನ್ನು ‘ಸಂಪೂರ್ಣ ಯೋಜಿತ ಷಡ್ಯಂತ್ರ’ವೆಂದು ಗುರುತಿಸಿತು. ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ 68 ಜನರನ್ನು ಆರೋಪಿಗಳೆಂದು ಬೊಟ್ಟು ಮಾಡಿತು. ಆದರೆ, ಸುಪ್ರೀಂ ಕೋರ್ಟ್‌, ಮಸೀದಿ ಜಾಗವನ್ನು ಮಂದಿರಕ್ಕೆ ನೀಡಿದೆ. ಜೊತೆಗೆ, ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹೆಸರಿನಲ್ಲಿ ಖುಲಾಸೆ ಮಾಡಿದೆ.

ಅಯೋಧ್ಯೆ ತೀರ್ಪು ಮಂದಿರಕ್ಕೆ ಭೂಮಿ ಬಿಟ್ಟುಕೊಡುವಂತೆ ಬಂದಿದ್ದರ ಹಿಂದೆ, ಹಿಂದು ಧಾರ್ಮಿಕ ಭಾವನೆಗಳು, ಬಹುಸಂಖ್ಯಾತರ ಒತ್ತಡಗಳು ಮಾತ್ರವಲ್ಲ, ನರಸಿಂಹರಾವ್ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿದ್ದ ಕಾನೂನಿನ ಕೊಡುಗೆಯೂ ಇದೆ.

1991ರಲ್ಲಿ, “1947ರ ಆಗಸ್ಟ್‌ 15ರ ನಂತರ ಯಾವುದೇ ಧಾರ್ಮಿಕ ಸ್ಥಳದ ಧಾರ್ಮಿಕ ಸ್ವರೂಪವನ್ನು ಬದಲಿಸುವ ಪ್ರಯತ್ನಗಳ ನಿಷೇಧ” ಮಾಡುವ ಉದ್ದೇಶದಿಂದ ‘ಪೂಜನಾ ಸ್ಥಳಗಳ ಕಾಯ್ದೆ-1991’ಅನ್ನು ಜಾರಿಗೆ ತಂದಿತು. ಕಾಯ್ದೆಯ ಸೆಕ್ಷನ್ 3 – “1947ರ ಆಗಸ್ಟ್‌ 15ರಂದು ಯಾವ ಧಾರ್ಮಿಕ ಸ್ಥಳ (ದೇವಾಲಯ, ಮಸೀದಿ, ಗುರುದ್ವಾರ, ಚರ್ಚ್, ಇತ್ಯಾದಿ) ಯಾವ ಧರ್ಮದ್ದಾಗಿತ್ತೋ, ಅದೇ ಸ್ಥಿತಿಯಲ್ಲಿ ಉಳಿಯಬೇಕು. ಅದನ್ನು ಬೇರೆ ಧರ್ಮಕ್ಕೆ ಪರಿವರ್ತಿಸಲು ಅವಕಾಶವಿಲ್ಲ” ಎಂದು ಹೇಳಿದರೆ, ಸೆಕ್ಷನ್ 4 – “1947ರ ಆಗಸ್ಟ್‌ 15ರ ನಂತರ ಆರಂಭವಾದ ಅಥವಾ ಬಾಕಿ ಇರುವ ಯಾವುದೇ ಪ್ರಕರಣ, ಅಪೀಲ್, ವಿಚಾರಣೆ ಎಲ್ಲವನ್ನೂ ರದ್ದುಗೊಳಿಸಲಾಗುತ್ತದೆ. ಹೊಸದಾಗಿ ಯಾವ ಕೇಸ್ ದಾಖಲಿಸಲೂ ಅವಕಾಶವಿಲ್ಲ” ಎಂದು ಹೇಳಿದೆ.

ಆದರೆ, ಈ ಕಾಯ್ದೆಯಿಂದ ಬಾಬರಿ ಮಸೀದಿ ವಿವಾದವನ್ನು ಸರ್ಕಾರವು ಹೊರಗಿಟ್ಟಿತು. ಈ ಕಾಯ್ದೆ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರದೇಶಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿತು.

ಈ ವಿನಾಯಿತಿಯು ಬಾಬರಿ ಮಸೀದಿ ವಿವಾದವನ್ನು ಮುಂದೊಯ್ಯಲು ಅಡಿಗಲ್ಲು ಹಾಕಿಕೊಟ್ಟಿತು. ಅದೇ ವಿನಾಯತಿಯ ಆಧಾರದ ಮೇಲೆ ಸುಪ್ರಿಂ ಕೋರ್ಟ್‌ ಕೂಡ ತೀರ್ಪು ನೀಡಿತು. ಈ ತೀರ್ಪು ‘ಸಾಮಾಜಿಕ ಶಾಂತಿ ಸಾಮರಸ್ಯಗಳನ್ನು ಕಾಪಾಡುವ ಸದಾಶಯ’ ಹೊಂದಿದೆ ಎಂದು ಬಣ್ಣಿಸಲಾಗಿತ್ತು.

ಆದರೆ, ತೀರ್ಪು – ಸಾಂವಿಧಾನಿಕ ಮೌಲ್ಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಲ್ಲಿ ಅಗಾಧ ನಂಬಿಕೆಯನ್ನು ಹೊಂದಿದ್ದ ಭಾರತೀಯ ಮುಸ್ಲಿಮರ ಮನಸ್ಸಿನ ಮೇಲೆ ಆಳವಾದ ಗಾಯವನ್ನು ಉಂಟುಮಾಡಿದೆ. 1949ರ ನವೆಂಬರ್ 25ರಂದು ಸಂವಿಧಾನ ಸಭೆಯಲ್ಲಿ ಅಂಬೇಡ್ಕರ್‌ ಅವರು ಮಾಡಿದ ಭಾಷಣದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯ ಎಲ್ಲರಿಗೂ ಸಿಗುವಂತಾಗಬೇಕು ಎಂದು ಹೇಳಿದ್ದರು. ಅಂಬೇಡ್ಕರರ ಆಶಯವನ್ನು ತೀರ್ಪು ಬುಡಮೇಲು ಮಾಡಿತು. ಜೊತೆಗೆ, ‘ಒಂದು ದೇಶ, ಒಂದು ಧರ್ಮ, ಒಂದು ಸಂಸ್ಕೃತಿ’ ಎನ್ನು ಬಿಜೆಪಿ-ಸಂಘಪರಿವಾರದ ಗುರಾಣಿಯನ್ನು ಮತ್ತಷ್ಟು ಮೊಣಚುಗೊಳ್ಳಲು ಪ್ರೇರಣೆ ನೀಡಿತೆಂದು ಹಲವರು ದೂರುತ್ತಾರೆ.

ಈ ಲೇಖನ ಓದಿದ್ದೀರಾ?: ದ್ವೇಷ ಭಾಷಣ ನಿಷೇಧ ವಿಧೇಯಕ | ಕರ್ನಾಟಕದ ಸೌಹಾರ್ದ ಪರಂಪರೆಗೆ ರಕ್ಷಾ ಕವಚವಾಗಬಲ್ಲದೇ?

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಬಳಸಿಕೊಂಡು ಉಗ್ರ ಹಿಂದುತ್ವ ಮತ್ತು ಆಕ್ರಮಣಕಾರಿ ರಾಷ್ಟ್ರವಾದಿಗಳು ದೈತ್ಯ ಮತ್ತು ನಿರ್ದಯೀ ಬಹುಸಂಖ್ಯಾತರ ಭಾವನೆ ಎಂಬ ವಾದವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಬಾಬರಿ ಮಸೀದಿಯಂತೆಯೇ ದೇಶಾದ್ಯಂತ ಹಲವು ಮಸೀದಿಗಳನ್ನು ಧ್ವಂಸಗೊಳಿಸುವುದಾಗಿಯೂ, ಅಲ್ಲಿ ಮಂದಿರಗಳನ್ನು ಕಟ್ಟುವುದಾಗಿ ಹೇಳುತ್ತಿದ್ದಾರೆ. ಕಾಶಿ, ಮಥುರಾ, ಜ್ಞಾನವಾಪಿ, ಶ್ರೀರಂಗಪಟ್ಟಣ ಸೇರಿದಂತೆ ಹಲವು ತಾಣಗಳನ್ನು ವಿವಾದದ ಕೇಂದ್ರವನ್ನಾಗಿ ಮಾಡಲು ಹವಣಿಸುತ್ತಿದ್ದಾರೆ. ಈ ಕೃತ್ಯಗಳಿಗೆ ಸುಪ್ರೀಂನ ತೀರ್ಪನ್ನೇ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

‘ಪೂಜನಾ ಸ್ಥಳಗಳ ಕಾಯ್ದೆ-1991’ ಅಡಿಯಲ್ಲಿ ಬೇರಾವುದೇ ಪೂಜನಾ ಸ್ಥಳಗಳನ್ನು ವಿವಾದವಾಗಿಸುವಂತಿಲ್ಲ, ಅವುಗಳನ್ನು ಪರಿಗಣಿಸುವಂತಿಲ್ಲ ಎಂದಿದ್ದರೂ, ಹಲವು ನ್ಯಾಯಾಲಯಗಳು ಮಂದಿರ-ಮಸೀದಿ ವಿವಾದ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿವೆ. ಆಲಿಸುತ್ತಿವೆ. ಸಮೀಕ್ಷೆ ನಡೆಸಲೂ ಅನುಮತಿ ನೀಡುತ್ತಿವೆ. ಇದೆಲ್ಲವೂ ಹಿಂದುತ್ವ ಕೋಮುವಾದದ ದಳ್ಳುರಿಗೆ ಎಣ್ಣೆ ಸುರಿದಂತೆ ಭಾಸವಾಗುತ್ತಿದೆ.

ಅಂದೇ ಸುಪ್ರೀಂ ಕೋರ್ಟ್‌ ತನ್ನ ಆಲೋಚನೆಯನ್ನು ಮತ್ತಷ್ಟು ವಿಸ್ತರಿಸಿದ್ದರೆ, ತೀರ್ಪು ಯಾರ ಪರವಾಗಿ ಬಂದರೂ, ‘ಒಬ್ಬರು ಸೋತು – ಮತ್ತೊಬ್ಬರು ಗೆಲ್ಲುವುದು’ ಬೇಡವೆಂಬ ವಿವೇಚನೆಯೊಂದಿಗೆ, ಮಂದಿರ-ಮಸೀದಿಗೆ ಸಮಪಾಲು ನೀಡಿದ್ದರೆ, ಸಹಬಾಳ್ವೆಯಿಂದ ಮುನ್ನಡೆಯುವಂತೆ ಸೂಚಿಸಿದ್ದರೆ, ಡಿಸೆಂಬರ್ 6ರ ಕರಾಳ ದಿನಕ್ಕೆ ಬೆಳಕು ಹರಿಯುತ್ತಿತ್ತು. ಮತ್ತಷ್ಟು ವಿವಾದಗಳು ಮುನ್ನೆಲೆಗೆ ಬಾರದಂತೆ ತಡೆಯಬಹುದಿತ್ತು. ಆದರೆ, ನ್ಯಾಯಾಲಯ ಅದನ್ನು ಮಾಡಲಿಲ್ಲ.

ಮುಂದುವರೆದು, ಬಾಬರಿ ಮಸೀದಿ ತೀರ್ಪು ನೀಡಿದ ಪೀಠದ ಭಾಗವಾಗಿದ್ದ ನಿವೃತ್ತ ಸಿಜೆಐ ಡಿ.ವೈ ಚಂದ್ರಚೂಡ್ ಅವರ ಹೇಳಿಕೆಗಳು ಆಘಾತಕಾರಿಯಾಗಿವೆ. ‘ಬಾಬರಿ ಮಸೀದಿ ಪ್ರಕರಣದ ತೀರ್ಪು ಬರೆಯುವಾಗ ನಾನು ದೇವರ ಕೃಪೆಗಾಗಿ ಪ್ರಾರ್ಥಿಸಿದ್ದೆ. ಎಲ್ಲರೂ ಸ್ವೀಕರಿಸುವ ತೀರ್ಪು ನೀಡಬೇಕಿತ್ತು. ಅದಕ್ಕಾಗಿ ದೇವರ ಸಹಾಯ ಬೇಕಿತ್ತು’ ಎಂದಿದ್ದಾರೆ. ಅವರ ಈ ಹೇಳಿಕೆ, ಭಾರತೀಯ ನ್ಯಾಯಾಂಗದ ಸ್ವಾಯತ್ತತೆ ಮತ್ತು ತಟಸ್ಥತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿತು. ಮಾತ್ರವಲ್ಲ, ತೀರ್ಪಿನಲ್ಲಿ ಪಕ್ಷಪಾತವೂ ಇದೆ ಎಂಬ ಕಳವಳವನ್ನು ಹುಟ್ಟುಹಾಕಿತು.  ಸಂವಿಧಾನದ ಮೇಲೆ ಪ್ರಮಾಣ ಮಾಡುವ ನ್ಯಾಯಾಧೀಶರು, ದೇವರ ಮೊರೆಹೋಗಿ ತೀರ್ಪು ಬರೆಯುವುದು, ಪಕ್ಷಪಾತಿ ಧಾರ್ಮಿಕ ಹಿತಸಕ್ತಿಗೆ ಪೂರಕವಾಗಿಯೇ ಇರುತ್ತದೆ ಎಂಬ ಅಭಿಪ್ರಾಯವನ್ನು ಗಟ್ಟಿಗೊಳಿಸಿತು.

ಜಾತ್ಯತೀತತ್ವ ಎಂಬುದು ಕೇವಲ ಸಂವಿಧಾನದ ಪೀಠಿಕೆಯಲ್ಲಿರುವ ಶಬ್ದವಲ್ಲ; ಅದು ದಿನನಿತ್ಯದ ಆಚರಣೆಯಲ್ಲಿ ರಾಜ್ಯ ಮತ್ತು ಸಮಾಜ ಎಷ್ಟು ದೃಢವಾಗಿ ನಿಂತಿದೆ ಎಂಬುದರ ಮೇಲೆ ನಿಂತಿದೆ. ಡಿಸೆಂಬರ್ 6ರಂದು ಘಟಿಸಿದ ಕರಾಳ ಕೃತ್ಯವನ್ನು ಮರೆತರೆ, ಇತಿಹಾಸವು ಮತ್ತಷ್ಟು ಕರಾಳ ದಿನಗಳಿಗೆ ಸಾಕ್ಷಿಯಾಗಿಬಿಡುವ ಅಪಾಯವಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....