ಈ ದಿನ ಸಂಪಾದಕೀಯ | ಅಗೆದಷ್ಟೂ ಆಳವಾಗುತ್ತಿದೆ ಧರ್ಮಸ್ಥಳ ಪ್ರಕರಣ; ಸೌಜನ್ಯಳಿಗೆ ಸಿಗಲಿ ನ್ಯಾಯ

Date:

ಈಗ ಹೊಸ ಸಾಕ್ಷಿ, ಅದೂ ಪ್ರತ್ಯಕ್ಷದರ್ಶಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ. ಈಗಲಾದರೂ, ಸೌಜನ್ಯ ಪ್ರಕರಣವನ್ನು ಸರ್ಕಾರ ಮತ್ತು ಎಸ್‌ಐಟಿ ಗಂಭೀರವಾಗಿ ಪರಿಗಣಿಸಲಿ, ತನಿಖೆಗೆ ಒಳಪಡಿಸಲಿ...

ಕಳೆದ ಒಂದೂವರೆ ತಿಂಗಳಿನಿಂದ ಧರ್ಮಸ್ಥಳ ಭಾರೀ ಸದ್ದು-ಸುದ್ದಿ ಮಾಡುತ್ತಿದೆ. ಧರ್ಮಸ್ಥಳದಲ್ಲಿ 1995ರಿಂದ 2014ರವರೆಗೆ ನೂರಾರು ಅಪರಿಚಿತ ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣದಲ್ಲಿ ಹಲವಾರು ಮಂದಿ ಸಾಕ್ಷಿ ಹೇಳಲು ಮುಂದೆ ಬರುತ್ತಿದ್ದಾರೆ. ಎಸ್‌ಐಟಿ ತನಿಖೆಯು ವಿಸ್ತರಿಸುತ್ತಿದೆ. ಈಗ, ಸೌಜನ್ಯ ಪ್ರಕರಣಕ್ಕೆ ಮರುಜೀವ ಕೊಡುವ ಸಮಯವೂ ಬಂದಿದೆ.

2025ರ ಜುಲೈ 11ರಂದು ಮುಸುಕುದಾರಿ ಚಿನ್ನಯ್ಯ, ಧರ್ಮಸ್ಥಳದಲ್ಲಿ ಹಲವಾರು ಮಹಿಳೆಯರು, ಹೆಣ್ಣು ಮಕ್ಕಳು ಸೇರಿದಂತೆ ನೂರಾರು ಮೃತದೇಹಗಳನ್ನು ನಾನೇ ಹೂತುಹಾಕಿದ್ದೇನೆ. ಆ ಮೃತದೇಹಗಳ ಮೇಲೆ ಅತ್ಯಾಚಾರ, ಹಲ್ಲೆಯ ಗುರುತುಗಳಿದ್ದವು ಎಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದರು. ಅವರ ಹೇಳಿಕೆಯ ಬಳಿಕ, ಧರ್ಮಸ್ಥಳದಲ್ಲಿ ನಾಪತ್ತೆಯಾದವರು ಮತ್ತು ರಹಸ್ಯ ಅಂತ್ಯಕ್ರಿಯೆಯ ಸಮಗ್ರ ತನಿಖೆಗೆ ಎಸ್‌ಐಟಿ ರಚನೆ ಮಾಡಿ (ಜುಲೈ 19) ಈಗ ಒಂದೂವರೆ ತಿಂಗಳೇ ಕಳೆದಿದೆ.

ಎಸ್‌ಐಟಿ ತ್ವರಿತ ಮತ್ತು ಗಂಭೀರವಾಗಿ ತನಿಖೆ ನಡೆಸುತ್ತಿದೆ. ಆದಾಗ್ಯೂ, ಮುಸುಕುದಾರಿ ಚಿನ್ನಯ್ಯ ನೇತ್ರಾವತಿ ನದಿ ಬಳಿ ಗುರುತಿಸಿದ ಹಲವಾರು ಸ್ಥಳಗಳಲ್ಲಿ ಉತ್ಖನನ ನಡೆಸಿದರೂ, ಕೆಲವೆಡೆ ಕೆಲವು ಮೂಳೆಗಳು ದೊರೆತಿದ್ದರ ಹೊರತಾಗಿ, ಸಂಪೂರ್ಣ ಅಸ್ಥಿಪಂಜರ ಎಲ್ಲಿಯೂ ಸಿಗಲಿಲ್ಲ. ಈ ನಡುವೆ, ಎಸ್‌ಐಟಿ ಚಿನ್ನಯ್ಯನನ್ನು ಬಂಧಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಸ್ಥಿಪಂಜರ ದೊರೆಯದ ಕಾರಣ ಮತ್ತು ಚಿನ್ನಯ್ಯನ ಬಂಧನದಿಂದಾಗಿ, ಧರ್ಮಸ್ಥಳದಲ್ಲಿ ಯಾವುದೇ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಕೊಲೆಗಳು ನಡೆದೇ ಇಲ್ಲ. ಪ್ರಕರಣ ಮುಗಿದೇ ಹೋಯಿತು ಎಂದು ಧರ್ಮಸ್ಥಳ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಆದರೆ, ಪ್ರಕರಣ ಇನ್ನೂ ಜೀವಂತವಾಗಿದೆ. ಮಾತ್ರವಲ್ಲ, ಬಲಿಷ್ಠಗೊಳ್ಳುತ್ತಿದೆ.

ಚಿನ್ನಯ್ಯ ಗುರುತಿಸಿದ ಜಾಗದಲ್ಲಿ ಅಸ್ಥಿಪಂಜರಗಳು ದೊರೆಯದೇ ಇದ್ದರೂ, ಅನೇಕರು ಧರ್ಮಸ್ಥಳದಲ್ಲಿ ನಡೆದಿರುವ ನಾಪತ್ತೆ ಪ್ರಕರಣಗಳಲ್ಲಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ. ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ. ಅವರು ತನ್ನ ಸಂಬಂಧಿ ಪದ್ಮಲತಾ (1987ರಲ್ಲಿ ಕೊಲೆಯಾದವರು) ಬಗ್ಗೆ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಧರ್ಮಸ್ಥಳಕ್ಕೆ ಬಂದಿದ್ದ ಸಮಯದಲ್ಲಿ, ಚಿನ್ನಯ್ಯನ ಅಕ್ಕ ರತ್ನ ಅವರು, ”ಧರ್ಮಸ್ಥಳ ದೇವಸ್ಥಾನದ ಪ್ರಮುಖರೊಬ್ಬರು ಚಿನ್ನಯ್ಯನಿಗೆ 2014ರಲ್ಲಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಯ ವಿಚಾರವಾಗಿ ಜೀವಭಯವಿಟ್ಟಿದ್ದರು. ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಗೆ ಕಾರಣರಾದವರ ಬಗ್ಗೆ ಚಿನ್ನಯ್ಯ ಎಲ್ಲಿಯಾದರೂ ಬಾಯಿಬಿಟ್ಟರೆ, ಆತ ಯಾವುದೇ ದೇಶಕ್ಕೆ ಹೋಗಿ ಅಡಗಿಕೊಂಡರೂ, ಆತನನ್ನು ಹುಡುಕಿ ಮುಗಿಸುವುದಾಗಿ ಬೆದರಿಕೆ ಹಾಕಿದ್ದರು. ಆ ಜೀವಭಯದಿಂದಲೇ, ಚಿನ್ನಯ್ಯ ಧರ್ಮಸ್ಥಳ ಬಿಟ್ಟು ಓಡಿ ಹೋಗಬೇಕಾಯಿತು” ಎಂದು ಹೇಳಿಕೆ ನೀಡಿದ್ದಾರೆ.

ಸೌಜನ್ಯ ತಾಯಿ ಕುಸುಮಾವತಿ ಅವರು ಎಸ್‌ಐಟಿಗೆ ಪತ್ರ ಬರೆದು, ಧರ್ಮಸ್ಥಳದಲ್ಲಿನ ನಾಪತ್ತೆ ಮತ್ತು ರಹಸ್ಯ ಅಂತ್ಯಕ್ರಿಯೆ ಪ್ರಕರಣಕ್ಕೂ ಸೌಜನ್ಯ ಪ್ರಕರಣಕ್ಕೂ ಲಿಂಕ್‌ ಇದೆ. ಸೌಜನ್ಯ ಪ್ರಕರಣವನ್ನೂ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಎಸ್‌ಐಟಿ ಕೂಡ ತನಿಖೆಯನ್ನು ವಿಸ್ತರಿಸಲು ನಿರ್ಧರಿಸಿದೆ. 1995 ಮತ್ತು 2014ರ ನಡುವೆ ಧರ್ಮಸ್ಥಳದಲ್ಲಿ ವರದಿಯಾದ ಎಲ್ಲ ನಾಪತ್ತೆ ಪ್ರಕರಣಗಳನ್ನು ತನಿಖೆಯಲ್ಲಿ ಒಳಗೊಳ್ಳುವುದಾಗಿ, ಉತ್ಖನನ ನಡೆಸಿ, ಯಾವುದೇ ಅಸ್ಥಿಪಂಜರ ದೊರೆಯದಿದ್ದರೂ, ಆ ಸ್ಥಳದ ಮಣ್ಣನ್ನು ಪ್ರಯೋಗಾಲಯಕ್ಕೆ ಕಳಿಸಲು ಮುಂದಾಗಿದೆ. ‘ಕೊಳೆತ ದೇಹಗಳಿಂದ ಹೊರಬರುವ ಫಾಸ್ಫೇಟ್‌, ನೈಟ್ರೇಟ್‌, ಲಿಪಿಡ್‌ ಮತ್ತು ಡಿಎನ್ಎಗಳಂತಹ ಸಾವಯವ ರಾಸಾಯನಿಕಗಳ ಕುರುಹುಗಳು ಮಣ್ಣಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಹೀಗಾಗಿ, ಅಲ್ಲಿ ಮೃತದೇಹಗಳನ್ನು ಹೂತುಹಾಕಲಾಗಿತ್ತೇ ಎಂಬುದನ್ನು ಮಣ್ಣಿನಿಂದಲೂ ಕಂಡುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಇನ್ನು, ಧಮಸ್ಥಳ ಗ್ರಾಮ ಪಂಚಾಯತಿಯು 1995ರಿಂದ ಈವರೆಗೆ 200ಕ್ಕೂ ಹೆಚ್ಚು ಅಪರಿಚಿತ ಮೃತದೇಹಗಳ ಹೂತುಹಾಕುವಿಕೆ/ದಫನ್ ಮಾಡಿರುವ ಬಗ್ಗೆ ದಾಖಲೆಗಳನ್ನು ನೀಡಿದೆ. ಇದರಲ್ಲಿ, ಕೆಲವು ಮೃತದೇಹಗಳು ದೊರೆತ ದಿನದಂದೇ ಅಂತ್ಯಕ್ರಿಯೆ ಮಾಡಲಾಗಿದೆ ಎಂಬ ಅಂಶಗಳು ಗಮನ ಸೆಳೆದಿವೆ. ಕರ್ನಾಟಕ ಅನಾಟಮಿ ಆಕ್ಟ್-1957ರ ಪ್ರಕಾರ, ಯಾವುದಾದರೂ ಮೃತದೇಹ ದೊರೆತರೆ, ಆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬೇಕು. ವಾರಸುದಾರರಿಗಾಗಿ 72 ಗಂಟೆ ಅಂದರೆ, ಮೂರು ದಿನ ಮೃತದೇಹವನ್ನು ಶವಾಗಾರದಲ್ಲಿ ಇರಿಸಬೇಕು. ಒಂದು ವೇಳೆ, ಅಗತ್ಯಬಿದ್ದರೆ 7ರಿಂದ 10 ದಿನಗಳ ವರೆಗೂ ಶವವನ್ನು ಇಟ್ಟುಕೊಳ್ಳಬೇಕು. ಆಗಲೂ ವಾರಸುದಾರರು ಬಾರದಿದ್ದಲ್ಲಿ, ಮೃತದೇಹದ ಬೆರಳಚ್ಚು, ಡಿಎನ್ಎ ಸ್ಯಾಂಪಲ್ ರೀತಿಯ ಮಾಹಿತಿಯನ್ನು ಸಂಗ್ರಹಿಸಿ, ಬಳಿಕ, ಪೊಲೀಸರು ಸ್ಥಳೀಯ ಆಡಳಿತದ ನೆರವಿನೊಂದಿಗೆ ಅಂತ್ಯಕ್ರಿಯೆ ನಡೆಸಬೇಕಾಗುತ್ತದೆ.

ಆದರೆ, ಧರ್ಮಸ್ಥಳ ಗ್ರಾಮ ಪಂಚಾಯತಿ ನೀಡಿರುವ ಮಾಹಿತಿಯು ಮೃತದೇಹ ದೊರೆತ ದಿನವೇ ಅಂತ್ಯಕ್ರಿಯೆ ಮಾಡಲಾಗಿದೆ ಎಂಬುದನ್ನು ಸೂಚಿಸಿದೆ. ಇಂತಹ ಕೃತ್ಯಕ್ಕೆ ಸಂಬಂಧಿಸಿದಂತೆ 2002ರ ಮೇ 6ರಂದು ಧರ್ಮಸ್ಥಳ ಪೊಲೀಸರು ಮತ್ತು ಗ್ರಾಮ ಪಂಚಾಯತಿ ನಡುವಿನ ಪತ್ರ ವ್ಯವಹಾರದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು, ರಹಸ್ಯ ಅಂತ್ಯಕ್ರಿಯೆ ಮತ್ತು ಪ್ರಕರಣ ಮುಚ್ಚಿಹಾಕುವ ಹುನ್ನಾರದ ಭಾಗವಾಗಿತ್ತು ಎಂಬ ಅನುಮಾನವನ್ನು ಗಟ್ಟಿಗೊಳಿಸುತ್ತಿದೆ.

ಇದನ್ನು ಓದಿದ್ದೀರಾ?: ಕಾಲವೆಂಬ ಗಾಲಿಯಡಿ ಡಿ.ಕೆ.ಶಿ.; ಏಳುವರೇ, ಬೀಳುವರೇ?

ಇದೆಲ್ಲದರ ನಡುವೆ, ಸೌಜನ್ಯ ಪ್ರಕರಣದಲ್ಲಿ ತಾವು ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿಕೊಂಡಿರುವ ಮಂಡ್ಯ ಜಿಲ್ಲೆಯ ಚಿಕ್ಕಕೆಂಪಮ್ಮ, ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ. ”2012ರ ಅಕ್ಟೋಬರ್ 9 (ಸೌಜನ್ಯ ನಾಪತ್ತೆಯಾದ ದಿನ) ನಾನು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದ ಬಳಿ ಇದ್ದೆ. ಅದೇ ಸಮಯದಲ್ಲಿ, ಗುಂಪೊಂದು ಯುವತಿಯೊಬ್ಬರನ್ನು ಅಪಹರಿಸಿತು. ಆ ವೇಳೆ, ಯುವತಿ ಕೂಗಿಕೊಳ್ಳುತ್ತಿದ್ದರು. ಆದರೆ, ಆಕೆ ಮತ್ತು ಅಪಹರಣಕಾರರು ಒಂದೇ ಮನೆಯವರೆಂದು ನಮಗೆ ಆ ಗುಂಪಿನಲ್ಲಿದ್ದ ಓರ್ವ ತಪ್ಪು ಮಾಹಿತಿ ನೀಡಿದ್ದ” ಎಂದು ವಿವರಿಸಿದ್ದಾರೆ. ಅಲ್ಲದೆ, ಅಪಹರಣಕಾರರಲ್ಲಿ ಒಬ್ಬ ಫೋನ್‌ನಲ್ಲಿ ಮಾತನಾಡುತ್ತಾ, ‘ನಿಚ್ಚಿ ನಿಚ್ಚಿ’ ಎನ್ನುತ್ತಿದ್ದ ಎಂದು ಹೇಳಿದ್ದಾರೆ.

ಆಕೆಯ ವಿವರಣೆಯು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಜೊತೆಗೆ, ನಿಚ್ಚಿ ಎಂಬ ಪದವನ್ನು ಧರ್ಮಸ್ಥಳದ ಪ್ರತಿಷ್ಠಿತ ಕುಟುಂಬದ ಯುವಕನೊಬ್ಬನ ಹೆಸರನ್ನು ‘ಶಾರ್ಟ್‌’ ಆಗಿ ಕರೆಯಲಾಗುತ್ತಿತ್ತು ಎಂಬಂತೆ ಸೂಚಿಸುತ್ತದೆ.

ಈ ಎಲ್ಲ ಅಂಶಗಳು ಮತ್ತು ಹೊಸ ಸಾಕ್ಷಿ ಚಿಕ್ಕಕೆಂಪಮ್ಮ ಅವರ ದೂರುಗಳು ಧರ್ಮಸ್ಥಳ ಪ್ರಕರಣ ಮತ್ತು ಸೌಜನ್ಯ ಪ್ರಕರಣದಲ್ಲಿ ಗಂಭೀರ ಅಂಶಗಳಾಗಿವೆ. ಚಿಕ್ಕಕೆಂಪಮ್ಮ ಅವರ ದೂರು ಮತ್ತು ಸಾಕ್ಷಿಯನ್ನು ಎಸ್‌ಐಟಿ ಪರಿಗಣಿಸಿದರೆ, ಸೌಜನ್ಯ ಪ್ರಕರಣಕ್ಕೆ ಮರುಜೀವ ಬರುವುದರಲ್ಲಿ ಅನುಮಾನವೇ ಇಲ್ಲ.

2012ರಿಂದ ಈವರೆಗೆ ಸೌಜನ್ಯಳ ಮೇಲಿನ ಕಾಮುಕರ ಅಟ್ಟಹಾಸ ಮತ್ತು ಬರ್ಬರ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಿರಂತರ ಹೋರಾಟಗಳು ನಡೆಯುತ್ತಿವೆ. ಅದರಲ್ಲೂ, 2023ರಲ್ಲಿ ಸಿಬಿಐ ನ್ಯಾಯಾಲಯವು ಆರೋಪಿಯಾಗಿದ್ದ ಸಂತೋಷ್ ರಾವ್ ನಿರ್ದೋಷಿ ಮತ್ತು ತನಿಖೆಯಲ್ಲಿ ಗಂಭೀರ ದೋಷಗಳಿವೆ ಎಂದು ತೀರ್ಪು ನೀಡಿದ ಬಳಿಕ, ನೈಜ ಆರೋಪಿಗಳ ಬಂಧನಕ್ಕಾಗಿ ಮತ್ತು ಪ್ರಕರಣದ ಮರುತನಿಖೆಗಾಗಿ ಒತ್ತಾಯಿಸಿ ಬೃಹತ್ ಹೋರಾಟಗಳು ನಡೆಯುತ್ತಲೇ ಇವೆ. ಪ್ರಕರಣದ ಮರುತನಿಖೆಗಾಗಿ ಸೌಜನ್ಯ ಪೋಷಕರು ಮತ್ತು ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದರು. ಆದಾಗ್ಯೂ, ಸೌಜನ್ಯ ಪ್ರಕರಣದ ಮರುತನಿಖೆಗೆ ಸರ್ಕಾರ ಮುಂದಾಗಲಿಲ್ಲ.

ಈಗ ಹೊಸ ಸಾಕ್ಷಿ, ಅದೂ ಪ್ರತ್ಯಕ್ಷದರ್ಶಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ. ಈಗಲಾದರೂ, ಸೌಜನ್ಯ ಪ್ರಕರಣವನ್ನು ಸರ್ಕಾರ ಮತ್ತು ಎಸ್‌ಐಟಿ ಗಂಭೀರವಾಗಿ ಪರಿಗಣಿಸಲಿ, ತನಿಖೆಗೆ ಒಳಪಡಿಸಲಿ, ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಸೌಜನ್ಯಳಿಗೆ ದಶಕದ ಬಳಿಕವಾದರೂ ನ್ಯಾಯ ದೊರೆಯಲಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....