ನ್ಯಾಯಮೂರ್ತಿ ಗವಾಯಿ ಅವರ ನಡೆಯು ಭಾರತಕ್ಕೆ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಪ್ರೀತಿ ಮತ್ತು ಅಹಿಂಸೆಯ ಬೌದ್ಧ ತತ್ವವನ್ನು ಸಾರಿದೆ. ಅಂಬೇಡ್ಕರ್ ಅವರ ಕನಸಿನ ಜಾತಿಮುಕ್ತ ಸಮಸಮಾಜವುಳ್ಳ ಭಾರತದ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ.
ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗುವ ಅಕ್ಷಮ್ಯ ಕೃತ್ಯವೊಂದು ಅಕ್ಟೋಬರ್ 6ರಂದು ನಡೆದುಹೋಯಿತು. ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರತ್ತ ವಕೀಲ ರಾಕೇಶ್ ಕಿಶೋರ್ ಬೂಟು ಎಸೆಯಲು ಯತ್ನಿಸಿದರು. ತಾವು ನ್ಯಾಯಾಂಗ ವ್ಯವಸ್ಥೆ, ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲಿಲ್ಲ ಎಂಬ ಧೋರಣೆಯನ್ನೂ, ತಮ್ಮೊಳಗಿನ ಜಾತಿಧೋರಣೆ, ತಾರತಮ್ಯದ ಮನುವಾದಿ ಸಿದ್ದಾಂತವನ್ನು ಪ್ರದರ್ಶಿಸಿದರು. ಆ ಘಟನೆ ಕೇವಲ ವೈಯಕ್ತಿಕ ಆಕ್ರೋಶವಾಗಿರಲಿಲ್ಲ. ಧಾರ್ಮಿಕ ದ್ವೇಷ, ನ್ಯಾಯಾಂಗದ ಮೇಲಿನ ಅಸಹನೆ, ರಾಜಕೀಯ ಧೋರಣೆ ಮತ್ತು ಸಂಕೀರ್ಣತೆಯ ಪ್ರತಿಬಿಂಬವಾಗಿತ್ತು.
ವಕೀಲನೊಬ್ಬ ವಿಕೃತಿ ಮೆರೆದರೂ, ಸಿಜೆಐ ಗವಾಯಿ ಅವರು ಸಹನೆಯಿಂದ ವರ್ತಿಸಿದರು. ಇಂತಹ ಘಟನೆಯು ‘ನನ್ನನ್ನು ಪ್ರಭಾವಿಸುವುದಿಲ್ಲ’ ಎಂದರು. ವಕೀಲನ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದರು. ಪ್ರಕರಣ ದಾಖಲಿಸುವುದು-ಬಂಧಿಸುವುದು ಬೇಡವೆಂದರು. ಅಷ್ಟೇ ಯಾಕೆ? ಆ ಘಟನೆಯೊಂದು ಮರೆತುಹೋದ ಅಧ್ಯಾಯವೆಂದು ಹೇಳಿದರು. ತಾವು ಮೈಗೂಡಿಸಿಕೊಂಡಿರುವ ಬೌದ್ಧ ತತ್ವವನ್ನು ಮೆರೆದರು. ತಾವು ಧರ್ಮದಿಂದ ಮಾತ್ರವಲ್ಲ, ತತ್ವ-ಸಿದ್ಧಾಂತ, ನಡೆ-ನುಡಿ, ಮಾನವೀಯ ನೆಲೆಯಿಂದಲೂ ಬೌದ್ಧರೆಂದು ನಿರೂಪಿಸಿದರು.
ಸಿಜೆಐ ಬಿ.ಆರ್ ಗವಾಯಿ ಅವರು ದಲಿತ ಬೌದ್ಧ ಕುಟುಂಬದಿಂದ ಬಂದವರು. ಅವರ ತಂದೆ ರಾಮಾವತಾರ್ ಗವಾಯಿ ಅವರು ನಾಗಪುರದಲ್ಲಿ ದಲಿತ ಹಕ್ಕುಗಳ ಹೋರಾಟಗಾರರಾಗಿದ್ದರು. ಬಿ.ಆರ್ ಗವಾಯಿ ಅವರು ಭಾರತದ ಮುಖ್ಯನ್ಯಾಯಮೂರ್ತಿ ಹುದ್ದೆ ಅಲಂಕರಿಸಿದ ಬೌದ್ಧ ಸಮುದಾಯದವರಲ್ಲಿ ಎರಡನೆಯವರು.
ಅವರ ನಡೆಯನ್ನು ಮಾನವೀಯ ಮನಸುಳ್ಳ ಭಾರತೀಯರು ಸ್ವಾಗತಿಸಿದ್ದಾರೆ. “ಸಿಜೆಐ ಗವಾಯಿ ಅವರ ನಡೆಯು ಬೌದ್ಧ ಧರ್ಮದ ಮೂಲ ತತ್ವಗಳಾದ ಅಹಿಂಸೆ, ಕ್ಷಮೆ ಮತ್ತು ಸಮತೆಯನ್ನು ಪ್ರತಿಬಿಂಬಿಸುತ್ತದೆ. ಬೂಟು ಎಸೆಯಲು ಯತ್ನಿಸಿದ ವಕೀಲನನ್ನು ಶಿಕ್ಷಿಸದೆ, ಕ್ಷಮಿಸಿದ್ದು ಅವರ ಬೌದ್ಧ ಧರ್ಮದ ಕ್ಷಮಾಗುಣವನ್ನು ಸಾಬೀತು ಮಾಡಿದೆ. ಇದು ಡಾ. ಅಂಬೇಡ್ಕರ್ ಅವರ ಚಿಂತನೆಯನ್ನು ನೆನಪಿಸುತ್ತದೆ” ಎಂದು ಗೌರವಿಸಿದ್ದಾರೆ.
ಆದರೆ, ಬಿಜೆಪಿ, ಆರ್‌ಎಸ್‌ಎಸ್, ಸನಾತನವಾದಿಗಳ ಬೆಂಬಲಿಗರು ಮಾಡಿದ್ದೇನು? ಸಂಘಪರಿವಾರದ ನಾಯಕರಿಂದ ಹಿಡಿದು ಕಾಲಾಳುಗಳವರೆಗೆ ಎಲ್ಲರೂ ತಮ್ಮ ಪಕ್ಷ/ಸಂಘಟನೆಯ ಮನುವಾದಿ ಧೋರಣೆಯನ್ನು ಬಹಿರಂಗವಾಗಿ ಕಾರಿಕೊಂಡರು.
ಘಟನೆ ನಡೆದಾಗ, ಮಧ್ಯಪ್ರದೇಶದ ಖಜುರಾಹೋದಲ್ಲಿ ಹಾನಿಗೊಳಗಾದ ವಿಷ್ಣು ಮೂರ್ತಿಯನ್ನು ಪುನಃಸ್ಥಾಪಿಸುವ ಕುರಿತಾದ ಅರ್ಜಿಯ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ವೇಳೆ, ಗವಾಯಿ ಅವರು ‘ಮೂರ್ತಿಯನ್ನೇ ಕೇಳಿ ನಿರ್ಧರಿಸಿ’ ಎಂದು ಹೇಳಿದರು. ಇಷ್ಟು ಮಾತ್ರಕ್ಕೆ ಕುಪಿತಗೊಂಡ ವಕೀಲ ರಾಕೇಶ್ ಕಿಶೋರ್, ಸಿಜೆಐ ಕಡೆಗೆ ಬೂಟು ಎಸೆಯಲು ಯತ್ನಿಸಿ, ‘ಸನಾತನ ಧರ್ಮದ ಅಪಮಾನವನ್ನು ಭಾರತ ಸಹಿಸುವುದಿಲ್ಲ’ ಎಂದು ಕೂಗಾಡಿದರು.
ಘಟನೆಯ ನಂತರ, ವಕೀಲನ ಕೃತ್ಯವನ್ನು ಬಿಜೆಪಿಗರು ಸಮರ್ಥಿಸಿಕೊಂಡರು. ಸಂವಿಧಾನದ ಮೂಲಕವೇ, ಕಾನೂನಿನ ಅಡಿಯಲ್ಲಿಯೇ ಐಪಿಎಸ್ ಹುದ್ದೆ ಗಿಟ್ಟಿಕೊಂಡಿಸಿದ್ದ ಮಾಜಿ ಎಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ್ ರಾವ್, ವಕೀಲನನ್ನು ಕುರಿತು ‘ನಿಮ್ಮ ಧೈರ್ಯ ಮೆಚ್ಚುತ್ತೇನೆ’ ಎಂದು ತಮ್ಮಲ್ಲಿನ ವಿಕೃತಿಯನ್ನು ಹೊರಹಾಕಿದರು. ಅಂತೆಯೇ, ಮೋದಿ ಭಕ್ತರು, ಬಿಜೆಪಿ ಕಾಲಾಳುಗಳು ವಕೀಲನ ಬೆನ್ನಿಗೆ ನಿಂತರು. ವಕೀಲನನ್ನು ಕೊಂಡಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಿಜೆಐ ಗವಾಯಿ ಅವರ ವಿರುದ್ಧ ಕೆಟ್ಟದಾಗಿ ಕಮೆಂಟ್‌ಗಳನ್ನು ಮಾಡಿದರು. ವಕೀಲನಿಗೆ ಶಹಬ್ಬಾಸ್ ಗಿರಿ ಕೊಟ್ಟರು. ಅಂತರ್ಜಾಲ ವೇದಿಕೆಯಲ್ಲಿ ಬಂದ ಕಮೆಂಟ್‌ಗಳು ವಕೀಲ ರಾಕೇಶ್ ಅವರನ್ನು ಮತ್ತಷ್ಟು ಪ್ರಚೋದಿಸಿದವು. ಆತ, ‘ಘಟನೆ ಕುರಿತು ನನಗೆ ಯಾವುದೇ ಪಶ್ಚಾತ್ತಾಪವಿಲ್ಲ’ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯನ್ನು ಖಂಡಿಸಲು 7 ತಾಸುಗಳನ್ನು ತೆಗೆದುಕೊಂಡರು. ಪರ ರಾಷ್ಟ್ರದ ರಾಜಕೀಯ ನಾಯಕನೊಬ್ಬ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಕ್ಷಣಾರ್ಧದಲ್ಲಿ ಶುಭಾಶಯ ತಿಳಿಸುವ ಭಾರತದ ಪ್ರಧಾನಿಗೆ ತನ್ನದೇ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿರುವ ನ್ಯಾಯಮೂರ್ತಿಗಳ ಮೇಲಿನ ದಾಳಿಗೆ ಸ್ಪಂದಿಸಲು ದೀರ್ಘಕಾಲದ ಸಮಯ ಬೇಕಾಯಿತು.
ಬಿಜೆಪಿಯ ಪ್ರಮುಖ ನಾಯಕರು ಘಟನೆಯನ್ನು ತಡವಾಗಿಯಾದರೂ ಖಂಡಿಸಿದ್ದಾರೆ. ಆದರೆ, ಈ ತಡ, ಪ್ರಧಾನಿಯ ವಿಳಂಬ, ಬಿಜೆಪಿ ನಾಯಕರ ಶಹಬ್ಬಾಸ್‌ಗಿರಿ, ಸಂಘಪರಿವಾರದ ಕಾಲಾಳುಗಳ ಸಮರ್ಥನೆಯು ಒಂದು ವಿಷಯವನ್ನು ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿವೆ. ಅದು: ‘ಮನುವಾದಿ ವ್ಯವಸ್ಥೆಯು ದಲಿತರು ಮತ್ತು ಬೌದ್ಧರು ಸೇರಿದಂತೆ ಸಮತೆ-ಪ್ರೀತಿಯನ್ನು ಸಾರುವ ಸಮುದಾಯಗಳನ್ನು ದಮನ ಮಾಡುತ್ತದೆ’.
ಈ ಲೇಖನ ಓದಿದ್ದೀರಾ?: ಅಲೆಮಾರಿಗಳ ಆರ್ತನಾದಕ್ಕೆ ಹೃದಯ ತೆರೆಯಲಿ ದೆಹಲಿ
ಬಿಜೆಪಿಯ ಜೀವಾಳವೇ ಮನುವಾದ. ಬಿಜೆಪಿಗರು ಮನುಸ್ಮೃತಿಯೇ ತಮ್ಮ ಸಂವಿಧಾನವೆಂದು ಹೇಳಿಕೊಳ್ಳುತ್ತಾರೆ. ಸಮಾಜದಲ್ಲಿ ವರ್ಣಾಶ್ರಮ ಇರಬೇಕು, ಶೂದ್ರರು-ಅಸ್ಪೃಶ್ಯರು ಮುಟ್ಟಲು ಅರ್ಹರಲ್ಲದವರು, ಮಹಿಳೆಯರು 2ನೇ ದರ್ಜೆಯ ಪ್ರಜೆಗಳು, ಗಂಡಿನ ಅಧೀನದಲ್ಲಿರಬೇಕು ಎಂದು ಮನುಸ್ಮೃತಿ ಹೇಳುತ್ತದೆ. ಮನುವಾದವನ್ನು ಪಾಲಿಸುವ ಬಿಜೆಪಿಗರಿಗೆ, ದಲಿತ ಬೌದ್ಧರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿರುವುದನ್ನು ಸಹಿಸಲಾಗುತ್ತಿಲ್ಲ.
ಬಿಜೆಪಿ-ಆರ್‌ಎಸ್‌ಎಸ್‌ನ ‘ಮನುವಾದಿ’ ಧೋರಣೆಯು ಭಾರತೀಯ ಸಮಾಜದಲ್ಲಿ ರಾಜಕೀಯ ನೆಲೆಯಲ್ಲಿ ಆಯುಧವಾಗಿ ಬೇರೂರುತ್ತಿದೆ. ಬಿಜೆಪಿ-ಆರ್‌ಎಸ್‌ಎಸ್ ಬಿತ್ತಿದ ಹಿಂದುತ್ವ ಮತ್ತು ಜಾತಿವಾದಿ ದ್ವೇಷವೇ ಸಿಜೆಐ ಮೇಲಿನ ದಾಳಿಗೆ ಕಾರಣವೂ ಆಗಿದೆ. ಕಿಶೋರ್ ಎಸಗಿದ ಕೃತ್ಯವನ್ನು ಬಿಜೆಪಿಗರು ಬಹಿರಂಗವಾಗಿ ಖಂಡಿಸಿದ್ದರೂ, ಆಂತರಿಕವಾಗಿ ಸಂತೋಷಗೊಂಡಿದ್ದಾರೆ. ಇಂತಹ ಕೃತ್ಯಗಳು ನಡೆಯಬೇಕೆಂದು ಬಯಸುತ್ತಾರೆ.
ಸಿಜೆಐ ಮೇಲಿನ ದಾಳಿಯು ಕೇವಲ ಒಂದು ಕ್ಷಣದ ಆಕ್ರೋಶವಲ್ಲ. ಭಾರತೀಯ ಸಾಮಾಜಿಕ ರಚನೆಯೊಳಗೆ ಸಂಘಪರಿವಾರ ಬಿತ್ತಿರುವ, ಆಳವಾಗಿ ಬೇರೂರಿರುವ ಜಾತಿ ಮತ್ತು ಧಾರ್ಮಿಕ ದ್ವೇಷದ ಫಲ. ಆದಾಗ್ಯೂ, ಗವಾಯಿ ಅವರ ನಡೆಯು ಭಾರತಕ್ಕೆ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಪ್ರೀತಿ ಮತ್ತು ಅಹಿಂಸೆಯ ಬೌದ್ಧ ತತ್ವವನ್ನು ಸಾರಿದೆ. ಡಾ. ಅಂಬೇಡ್ಕರ್ ಅವರ ಕನಸಿನ ಜಾತಿಮುಕ್ತ ಸಮಸಮಾಜವುಳ್ಳ ಭಾರತದ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ.




