ಮಾತೃತ್ವ ರಜೆಯಂತಹ ಕ್ರಮಗಳು ಆರಂಭದಲ್ಲಿ ಆಕ್ಷೇಪಗಳನ್ನು ಎದುರಿಸಿದ್ದವು. ಆದರೆ, ಇಂದು ಅದು ಮಹಿಳೆಯರ ಕಾರ್ಯಶಕ್ತಿಯನ್ನು ಹೆಚ್ಚಿಸುವ ಸಾಧನವಾಗಿದೆ. ಅಂತೆಯೇ, ಮುಟ್ಟಿನ ರಜೆ ವಿಚಾರದಲ್ಲಿಯೂ ಹಿಂಜರಿಕೆಯ ಅಗತ್ಯವಿಲ್ಲ, ಕಾನೂನುಗಳನ್ನು ರೂಪಿಸಿ-ಜಾರಿಗೊಳಿಸಬೇಕಷ್ಟೇ...!
ಭಾರತೀಯರು ಇದೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಂದ ಎರಡು ವ್ಯತಿರಿಕ್ತ ತೀರ್ಪುಗಳನ್ನು ಗಮನಿಸಿದ್ದಾರೆ. ಮುಟ್ಟಿನ ರಜೆ ಮತ್ತು ಪಿತೃತ್ವ ರಜೆ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕಿರುವ ಅಭಿಪ್ರಾಯಗಳನ್ನು ಗಮನಿಸಿದ್ದಾರೆ. ಈ ಎರಡೂ ರಜೆಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ನಿಲುವು-ಧೋರಣೆಗಳು ಭಿನ್ನವಾಗಿವೆ ಎಂಬುದನ್ನು ಅರಿತಿದ್ದಾರೆ. ಇದು ಲಿಂಗ ನ್ಯಾಯದ ಬಗ್ಗೆ ನ್ಯಾಯಾಲಯದೊಳಗೆಯೇ ಇರುವ ಆಳವಾದ ದ್ವಂದ್ವ ಮತ್ತು ಸಾಮಾಜಿಕ-ಆರ್ಥಿಕ ವಾಸ್ತವಗಳ ನಡುವಿನ ಸಂಘರ್ಷವನ್ನೂ ಬಹಿರಂಗಗೊಳಿಸಿದೆ.
2026ರ ಮಾರ್ಚ್ 13ರಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು, ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಪಿಐಎಲ್ ಅನ್ನು ತಿರಸ್ಕರಿಸಿತು. ‘ಮಾಸಿಕ ಒಂದು ದಿನದ ಮುಟ್ಟಿನ ರಜೆಯನ್ನು ಕಾನೂನುಬದ್ಧಗೊಳಿಸುವುದು ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಲು ಹಿಂಜರಿಯುವಂತೆ ಮಾಡಬಹುದು. ಕಾನೂನು ಜಾರಿಯಾದ ಕಣದಿಂದಲೇ ಉದ್ಯೋಗದಾತರು ಮಹಿಳೆಯರಿಗೆ ಉದ್ಯೋಗ ನೀಡುವುದಿಲ್ಲ’ ಎಂದು ಹೇಳಿತು. ಸ್ವತಃ ಮುಖ್ಯನ್ಯಾಯಮೂರ್ತಿಗಳೇ ಈ ಮಾತುಗಳನ್ನಾಡಿದರು.
ಮುಂದುವರೆದು, ‘ಇಂತಹ ರಜೆಯು ಯುವ ಮಹಿಳೆಯರಲ್ಲಿ ತಾವು ಪುರುಷರಿಗಿಂತ ಕಡಿಮೆ ಸಾಮರ್ಥ್ಯದವರು’ ಎಂಬ ಭಾವನೆಯನ್ನು ಮೂಡಿಸಬಹುದು ಎಂದೂ, ಇದು ಅವರ ವೃತ್ತಿಜೀವನಕ್ಕೆ ಹಾನಿಕರ ಎಂದೂ ಅಭಿಪ್ರಾಯಪಟ್ಟರು. ಕಡ್ಡಾಯ ರಜೆಯ ಬದಲು ಸ್ವಯಂಪ್ರೇರಿತವಾಗಿ ಉದ್ಯೋಗದಾತರು ಅಥವಾ ಸಂಸ್ಥೆಗಳು ರಜೆಯನ್ನು ನೀಡುವುದು ಉತ್ತಮವೆಂದು ಹೇಳಿ, ಸರ್ಕಾರಗಳು ಸಮಾಲೋಚನೆ ನಡೆಸಿ, ನೀತಿ ರೂಪಿಸಬೇಕೆಂದು ಪ್ರಕರಣವನ್ನು ವಜಾಗೊಳಿಸಿತು.
ಈ ತೀರ್ಪು ಮತ್ತು ತೀರ್ಪಿನಲ್ಲಿ ವ್ಯಕ್ತವಾದ ಮಾತುಗಳು, ಮಹಿಳೆಯರು ಮುಟ್ಟಿನ ಸಮಯದಲ್ಲಿ ಅನುಭವಿಸುವ ನೋವು, ಯಾತನೆ, ಕಷ್ಟಗಳ ಕುರಿತಾದ ಅರಿವಿನ ಕೊರತೆಯನ್ನು ಎತ್ತಿತೋರಿಸಿದ್ದಂತಿತ್ತು. ಮುಟ್ಟಿನ ರಜೆ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ, ಈ ತೀರ್ಪಿಗೆ ವ್ಯತಿರಿಕ್ತವಾಗಿ ಮತ್ತೊಂದು ಆದೇಶವನ್ನು ಮಾರ್ಚ್ 17ರಂದು ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠ ನೀಡಿದೆ.
ಆ ತೀರ್ಪಿನಲ್ಲಿ ಮಾತೃತ್ವ ಮತ್ತು ಪಿತೃತ್ವ ರಜೆಯನ್ನು ಮಹಿಳೆಯರ ಸಬಲೀಕರಣ, ಕುಟುಂಬ ಸಮತೋಲನ ಹಾಗೂ ಲಿಂಗ ಸಮಾನತೆಯ ಭಾಗವಾಗಿ ಗುರುತಿಸಿದೆ. ಲಿಂಗಾಧಾರಿತ ವಿಭಜನೆಗೆ ಸವಾಲು ಹಾಕಲು ಪ್ರಯತ್ನಿಸಿದೆ. ‘ಮಗುವಿನ ಪಾಲನೆ ಎಂಬುದು ಕೇವಲ ತಾಯಿಯ ಜವಾಬ್ದಾರಿಯಲ್ಲ, ಅದು ಪೋಷಕರಿಬ್ಬರ ಹಂಚಿಕೆಯ ಹೊಣೆಗಾರಿಕೆ. ತಂದೆಯಂದಿರು ಸಹ ಮಗುವಿನ ಪಾಲನೆ ಮತ್ತು ಆರೈಕೆಯಲ್ಲಿ ಪಾಲ್ಗೊಳ್ಳಲು, ಮನೆಗೆಲಸದ ಜವಾಬ್ದಾರಿಗಳಲ್ಲಿ ಸಹಾಯ ಮಾಡಲು ಹಾಗೂ ತಾಯಿಗೆ ಹೆರಿಗೆಯ ನಂತರದ ಕಷ್ಟದ ಸಮಯದಲ್ಲಿ ಬೆಂಬಲ ನೀಡುವುದಲ್ಲದೆ, ಪೋಷಣೆಯಲ್ಲಿ ತಂದೆಯ ಪಾತ್ರವನ್ನು ಗಟ್ಟಿಗೊಳಿಸುತ್ತದೆ’ ಎಂದು ನ್ಯಾಯಾಲಯ ಆಶಿಸಿದೆ. ಪುರುಷರು ಕೇವಲ ‘ಕುಟುಂಬದ ಪೋಷಕ ಮತ್ತು ರಕ್ಷಕ’ ಎಂಬ ಪಿತೃಪ್ರಧಾನ ಕಲ್ಪನೆಯನ್ನು ಮೀರಿ ಮನೆಯೊಳಗಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದನ್ನು ಒತ್ತಿಹೇಳಿದೆ.
ಜೊತೆಗೆ, “ಸಾಮಾಜಿಕ ಭದ್ರತಾ ಸಂಹಿತೆ-2020’ರ ಅಡಿಯಲ್ಲಿ, 3 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆದರೆ ಮಾತ್ರ ತಾಯಿಗೆ 12 ವಾರಗಳ ಮಾತೃತ್ವ ರಜೆ ಎಂಬ ನಿಯಮವು ಅಸಂವಿಧಾನಿಕವಾಗಿದೆ. ಮಗುವಿನ ವಯಸ್ಸು ಎಷ್ಟೇ ಇರಲಿ, ಕಾನೂನುಬದ್ಧವಾಗಿ ಮಗುವನ್ನು ದತ್ತು ಪಡೆದ ತಾಯಿಯು 12 ವಾರಗಳ ರಜೆಗೆ ಅರ್ಹಳುʼ ಎಂದು ಹೇಳಿದೆ. ರಜೆಯ ನಿರ್ಬಂಧವನ್ನು ತೆರವುಗೊಳಿಸಿದೆ.
ಅಂತೆಯೇ, ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳು, ‘ಮಾತೃತ್ವ ಪ್ರಯೋಜನ ಕಾಯ್ದೆ’ಯಡಿ 26 ವಾರಗಳ ಕಡ್ಡಾಯ ರಜೆಯನ್ನು ಮೂಲಭೂತ ಹಕ್ಕುಗಳಾದ ಆರೋಗ್ಯ (ವಿಧಿ 21), ಸಮಾನತೆ (ವಿಧಿ 14 & 15) ಜೊತೆಗೆ ಬೆಸೆದು ಬಲಪಡಿಸಿವೆ ಎಂಬುದನ್ನು ಮರೆಯಬಾರದು.
ಈಗ, ಮಾರ್ಚ್ 13 ಮತ್ತು 17ರ ಎರಡು ತೀರ್ಪುಗಳಲ್ಲಿ ಒಂದು ಆದೇಶವು ಮಹಿಳೆಯರ ಪಾತ್ರ-ಜವಾಬ್ದಾರಿ-ಹಕ್ಕು-ಸಮಾನತೆಯನ್ನು ಎತ್ತಿತೋರಿದರೆ, ಮತ್ತೊಂದು ತೀರ್ಪು, ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯದ ಆಳವಾದ ಮತ್ತು ಸೂಕ್ಷ್ಮ ಕುರುಹುಗಳನ್ನು ತೋರುತ್ತದೆ. ಮುಟ್ಟಿನ ರಜೆಯನ್ನು ಕಡ್ಡಾಯ ರಜೆಯಾಗಿ ಮಾಡಿದರೆ ಅದು ಮಹಿಳೆಯರನ್ನು ‘ದೌರ್ಬಲ್ಯ’ ಅಥವಾ ‘ದುರ್ಬಲ’ರನ್ನಾಗಿ ಮಾಡುತ್ತದೆ ಎಂಬುದು ಸಮಾಜದಲ್ಲಿನ ದಾರ್ಷ್ಟ್ಯವೇ ಆಗಿದ್ದರೂ, ‘ಮುಟ್ಟಿನ ರಜೆ’ ಹೆಣ್ಣುಮಕ್ಕಳ ಅಗತ್ಯ ಮತ್ತು ಹಕ್ಕು. ಮಹಿಳೆಯರ ಹಕ್ಕನ್ನು ನಿರಾಕರಿಸುವುದು, ಮುಟ್ಟು ‘ವೈಯಕ್ತಿಕ ಸಮಸ್ಯೆ’ಯೆಂದೇ ನೋಡುವ ಸಮಾಜದ ಕುರುಡುತನ. ಇದು, ಲಿಂಗ ತಾರತಮ್ಯವನ್ನು ಮತ್ತಷ್ಟು ಬಲಪಡಿಸುವ ಅಪಾಯವಿದೆ.
ಈ ಲೇಖನ ಓದಿದ್ದೀರಾ?: ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ
ಉದ್ಯೋಗದಾತರ ಹಿಂಜರಿಕೆಯನ್ನು ಕಾರಣವಾಗಿ ತೋರಿಸಿ ಮಹಿಳೆಯರ ಹಕ್ಕನ್ನು ಮಿತಿಗೊಳಿಸುವ ಬದಲು, ಆ ಹಿಂಜರಿಕೆಯನ್ನೇ ಸವಾಲು ಮಾಡಿ, ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಜೊತೆಗೆ, ಅವಕಾಶವನ್ನೂ ಹೆಚ್ಚಿಸುವ ಕಾನೂನುಗಳನ್ನು ಬಲಪಡಿಸಬೇಕು. ಈ ಹಿಂದೆ, ಮಾತೃತ್ವ ರಜೆಯಂತಹ ಕ್ರಮಗಳು ಆರಂಭದಲ್ಲಿ ಇದೇ ರೀತಿಯ ಆಕ್ಷೇಪಗಳನ್ನು ಎದುರಿಸಿದ್ದವು. ಆದರೆ, ಇಂದು ಅದು ಮಹಿಳೆಯರ ಕಾರ್ಯಶಕ್ತಿಯನ್ನು ಹೆಚ್ಚಿಸುವ ಸಾಧನವಾಗಿದೆ. ಭಾರತದಲ್ಲಿ ಹೆರಿಗೆ ರಜೆಯ ವ್ಯಾಪ್ತಿಯು ಕ್ರಮೇಣ ವಿಸ್ತರಿಸುತ್ತಿದ್ದು, ಜನ್ಮ ನೀಡದ ದತ್ತು ಅಥವಾ ಬಾಡಿಗೆ ಮೂಲಕ ಮಗುಪಡೆದ ತಾಯಂದಿರನ್ನೂ ಒಳಗೊಳ್ಳುತ್ತಿದೆ. “ಹೆರಿಗೆ ಸೌಲಭ್ಯದ ಉದ್ದೇಶವು ಕೇವಲ ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದ್ದಲ್ಲ, ಅದು ಮಾತೃತ್ವದ ಪ್ರಕ್ರಿಯೆಗೆ ಸಂಬಂಧಿಸಿದ್ದು” ಎಂಬುದನ್ನು ಮಾರ್ಚ್ 17ರ ತೀರ್ಪು ಒತ್ತಿಹೇಳಿದೆ.
ಆದರೆ, ಮುಟ್ಟಿನ ರಜೆ ವಿಚಾರದಲ್ಲಿ ನ್ಯಾಯಾಲಯವೂ ಸೇರಿದಂತೆ ಸಮಾಜದಲ್ಲಿನ ಭಾವನೆ ಬದಲಾಗಿಲ್ಲ. ಮುಟ್ಟನ್ನು ಆರೋಗ್ಯದ ಸಹಜ ಭಾಗವೆಂದು ಮರುನಿರ್ಮಾಣ ಮಾಡಿ, ಅದಕ್ಕೆ ಸಂಬಂಧಿಸಿದ ಅಗತ್ಯ/ಸೌಲಭ್ಯಗಳನ್ನು ‘ಹೊರೆ’ ಎಂದು ಭಾವಿಸದೇ, ‘ಸಹಜ ಅಗತ್ಯ’ವೆಂದು ಸ್ವೀಕರಿಸಬೇಕಿದೆ. ಆ ಪ್ರಕ್ರಿಯೆಯಲ್ಲಿ ಬಿಹಾರ, ಒಡಿಶಾ, ಕರ್ನಾಟಕದಂತಹ ರಾಜ್ಯಗಳು ಮೊದಲ ಹೆಜ್ಜೆ ಇಟ್ಟಿವೆ. ಈ ರಾಜ್ಯಗಳ ಸದುದ್ದೇಶವು ಯಶಸ್ಸು ಕಾಣಬೇಕು. ಅದರೊಂದಿಗೆ, ಲಿಂಗಾಧಾರಿತ ಜೈವಿಕ ವಾಸ್ತವಗಳನ್ನು ಅರಿತು, ಗೌರವಿಸಿ, ಅವುಗಳನ್ನು ತಾರತಮ್ಯಕ್ಕೆ ಕಾರಣವಾದಂತೆ ಮತ್ತು ಲಿಂಗ ಸಮಾನತೆಗೆ ಅವಕಾಶವಾಗುವಂತೆ ಮಾಡಬೇಕಾದ್ದು ಸರ್ಕಾರಗಳ ಆದ್ಯ ಕರ್ತವ್ಯ.




