ಹಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಆರ್ಥಿಕ ಹಿತಾಸಕ್ಷಿಗಳನ್ನು ರಕ್ಷಿಸುವ ಹಾದಿಯಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಂಡಿವೆ. ತಮ್ಮ ಸಾರ್ವಭೌಮತ್ವವನ್ನು ಜಗತ್ತಿಗೆ ಸಾರಲು ದನಿ ಎತ್ತಿವೆ. ಆದರೆ, ಭಾರತವನ್ನು ವಿಶ್ವಗುರು ಮಾಡಿದ್ದೇನೆ ಎನ್ನುತ್ತಿರುವ 56 ಇಂಚಿನ ಎದೆಯುಳ್ಳ, ಅಜೈವಿಕ ಜೀವಿ ಪ್ರಧಾನಿ ಮೋದಿ ಮಾಡುತ್ತಿರುವುದೇನು?
ಟ್ರಂಪ್ ಆಕ್ರಮಣಕಾರಿ ಧೋರಣೆಗಳು ಹುಚ್ಚಾಟಗಳು ದಿನ ಕಳೆದಂತೆ ಹೆಚ್ಚುತ್ತಿವೆ, ಮಿತಿ ಮೀರುತ್ತಿವೆ. ಅಮೆರಿಕದ ಅಣತಿಯ ಮುಂದೆ ಇಡೀ ಜಗತ್ತು ಮಂಡಿಯೂರಬೇಕೆಂದು ಟ್ರಂಪ್ ಹಪಾಹಪಿಸುತ್ತಿದ್ದಾರೆ. ಅವರ ನಿರಂಕುಶ, ಸರ್ವಾಧಿಕಾರಿ ತಿಕ್ಕಲು ನೀತಿ ನಿರ್ಧಾರಗಳ ವಿರುದ್ಧ ಹಲವು ರಾಷ್ಟ್ರಗಳು ಎದೆ ಸೆಟೆಸಿ ನಿಲ್ಲುತ್ತಿವೆ. ಆದರೆ, ಭಾರತವು ವಿಶ್ವಗುರುವಾಗಿದೆ ಎನ್ನುತ್ತಿದ್ದ 56 ಇಂಚಿನ ಎದೆಗಾರಿಕೆಯು ಟ್ರಂಪ್ ಎದುರು ಗೂನುಬೆನ್ನಾಗಿ ಹೋಗಿದೆ ಯಾಕೆ?. ಭಾರತವನ್ನು ವಿಶ್ವಗುರು ಮಾಡುವುದಿರಲಿ, ಅದರ ಮೂಲಭೂತ ಸ್ವಾಭಿಮಾನಕ್ಕೂ ಕಳಂಕ ತರುವಂತೆ ನಡೆದುಕೊಳ್ಳಲಾಗುತ್ತಿದೆ. ಟ್ರಂಪ್ ಏಕಪಕ್ಷೀಯವಾಗಿ ಹೇರಿರುವ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು, ‘ಅಚ್ಛೇ ದಿನ’ದ ಹೆಸರಿನಲ್ಲಿ ಕತ್ತಲಯುಗ ತರುತ್ತಿರುವ ಮೋದಿಯವರು ಶಿರಬಾಗಿ ಒಪ್ಪಿಕೊಂಡಿದ್ದಾರೆ.
ಟ್ರಂಪ್ ಅವರ ಸುಂಕ ನೀತಿಗಳು, ಗ್ರೀನ್‌ಲ್ಯಾಂಡ್ ಖರೀದಿಗೆ ಯತ್ನ ಹಾಗೂ ಪ್ಯಾಲೆಸ್ತೀನ್-ಇಸ್ರೇಲ್ ಸಂಘರ್ಷದಲ್ಲಿನ ತೂಕತಪ್ಪಿದ ನೀತಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆ ಮತ್ತು ವಿರೋಧಗಳನ್ನು ಹುಟ್ಟುಹಾಕಿವೆ. ಅನೇಕ ದೇಶಗಳು ಟ್ರಂಪ್ ಅವರ ‘ಅಮೆರಿಕ ಫರ್ಸ್ಟ್’ ನೀತಿಗಳನ್ನು ಕಟುವಾಗಿ ಟೀಕಿಸುತ್ತಿವೆ. ಪ್ರತಿತಂತ್ರಗಳನ್ನು ಹೂಡುತ್ತಿವೆ, ವಿರೋಧದ ಕ್ರಮಗಳನ್ನು ಕೈಗೊಳ್ಳುತ್ತಿವೆ. 2025ರ ಏಪ್ರಿಲ್‌ನಲ್ಲಿ ‘ಲಿಬರೇಷನ್ ಡೇ’ ಹೆಸರಿನಲ್ಲಿ ಟ್ರಂಪ್ ಹಲವು ರಾಷ್ಟ್ರಗಳ ಮೇಲೆ ದುಬಾರಿ ಸುಂಕಗಳನ್ನು ಘೋಷಿಸಿದರು. ಮೋದಿ ಸರ್ಕಾರ ಸುಂಕವನ್ನು ಒಪ್ಪಿ-ಅಪ್ಪಿ ಮೌನಕ್ಕೆ ಜಾರಿತು. ಹಲವು ರಾಷ್ಟ್ರಗಳು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾದವು. ಚೀನಾ ಮೇಲೆ ಟ್ರಂಪ್ 34% ಸುಂಕ ಹೇರಿದ ಮರುಕ್ಷವೇ ಅಮೆರಿಕ ಮೇಲೆ 125% ಪ್ರತಿಸುಂಕ ಘೋಷಿಸಿತು ಚೀನಾ. ಈ ಎದುರೇಟಿಗೆ ತತ್ತರಿಸಿದ ಟ್ರಂಪ್, ಚೀನಾ ಮೇಲಿನ ಸುಂಕವನ್ನು 10%ಗೆ ಇಳಿಸಿದರು.
ಕೆನಡಾ, ಮೆಕ್ಸಿಕೋ ಯುರೋಪಿಯನ್ ಒಕ್ಕೂಟಗಳು ವ್ಯೂಹ ರೂಪಿಸಿ, ತಮ್ಮ ಮೇಲಿನ ಸುಂಕವನ್ನು ಕಡಿಮೆಗೊಳಿಸುವ ದಾರಿ ಕಂಡುಕೊಂಡವು. ಟ್ರಂಪ್ ಘೋಷಿಸಿದ 50% ಸುಂಕದ ವಿರುದ್ಧ ಬ್ರೆಜಿಲ್ ಡಬ್ಲ್ಯೂಟಿಒ ಮೆಟ್ಟಿಲೇರಿತು. ಮಣಿದ ಟ್ರಂಪ್ ಸಂಧಾನದ ದಾರಿ ಹಿಡಿದರು. ಸುಂಕವನ್ನು ಕಡಿತಗೊಳಿಸಿದರು.
ಗ್ರೀನ್‌ಲ್ಯಾಂಡ್‌ಅನ್ನು ಖರೀದಿಸಿ ವಶಕ್ಕೆ ಪಡೆಯಲು ಮುಂದಾದ ಟ್ರಂಪ್ ಧೋರಣೆಯನ್ನು ಡೆನ್ಮಾರ್ಕ್ ಮತ್ತು ಯುರೋಪಿಯನ್ ಒಕ್ಕೂಟಗಳು ಬಲವಾಗಿ ಖಂಡಿಸಿವೆ. ಇದು, ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯೆಂದು ಸ್ಪಷ್ಟವಾಗಿ ಹೇಳಿವೆ. ಗ್ರೀನ್‌ಲ್ಯಾಂಡ್‌ಅನ್ನು ಮಾರಾಟಕ್ಕಿಟ್ಟಿಲ್ಲವೆಂದು ಡೆನ್ಮಾರ್ಕ್ ಹೇಳಿದರೆ, ಜರ್ಮನಿ, ಯುಕೆ, ನೆದರ್‌ಲ್ಯಾಂಡ್, ನಾರ್ವೇ, ಸ್ವೀಡನ್, ಫಿನ್‌ಲ್ಯಾಂಡ್‌ಗಳು ಅಮೆರಿಕ ವಿರುದ್ಧ ಗ್ರೀನ್‌ಲ್ಯಾಂಡ್‌ಗೆ ಮಿಲಿಟರಿ ಬೆಂಬಲ ಘೋಷಿಸಿವೆ. ಯಾವುದೇ ಬೆದರಿಕೆಗೆಳಿಗೆ ತಲೆಬಾಗುವುದಿಲ್ಲವೆಂದು ಫ್ರಾನ್ಸ್ ಘೋಷಿಸಿದೆ. ಯುರೋಪಿಯನ್ ಒಕ್ಕೂಟವು ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್‌ನ ಅವಿಭಾಜ್ಯ ಅಂಗವೆಂದು ಗಟ್ಟಿದನಿಯಲ್ಲಿ ಪ್ರತಿಪಾದಿಸಿವೆ.
ಗ್ರೀನ್‌ಲ್ಯಾಂಡ್ ಖರೀದಿಗೆ ವಿರುದ್ಧವಾಗಿ ನಿಂತರೆ, ನ್ಯಾಟೋದಿಂದ ಹೊರಬರುವುದಾಗಿಯೂ, ಅಂತಹ ರಾಷ್ಟ್ರಗಳ ಮೇಲೆ ದುಬಾರಿ ಸುಂಕ ಹೇರುವುದಾಗಿಯೂ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಆದರೆ, ಈ ಬೆದರಿಕೆಗೆ ಬಗ್ಗುವುದಿಲ್ಲವೆಂದು ಎಲ್ಲ ರಾಷ್ಟ್ರಗಳು ದೃಢ ನಿಲುವು ತಳೆದಿವೆ. ‘ದುಬಾರಿ ಸುಂಕಗಳು ಅಮೆರಿಕಕ್ಕೆ ಹಾನಿ ಮಾಡುತ್ತವೆ’ ಎಂದು ಆತ್ಮವಿಶ್ವಾಸಭರಿತ ಪ್ರತ್ಯುತ್ತರ ನೀಡಿವೆ.
ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಾಳಿಯನ್ನೇ ದಾಳ ಮಾಡಿಕೊಂಡಿರುವ ಟ್ರಂಪ್, ಗಾಜಾ ಪಟ್ಟಿಯಿಂದ ಪ್ಯಾಲೆಸ್ತೀನಿಯರನ್ನು ಸ್ಥಳಾಂತರಿಸಿ, ಆ ಪ್ರದೇಶವನ್ನು ಕಬ್ಜಾ ಮಾಡಿಕೊಂಡು, ತಮ್ಮ ಪ್ರವಾಸೋದ್ಯಮ ವಸಾಹತು ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ, ಅಮೆರಿಕದ ಈ ಸಂಚನ್ನು ಸೌದಿ ಅರೇಬಿಯಾ, ಈಜಿಪ್ಟ್, ಜೋರ್ಡಾನ್, ಟರ್ಕಿ, ದಕ್ಷಿಣ ಆಫ್ರಿಕಾ ಹಾಗೂ ಯುರೋಪ್ ರಾಷ್ಟ್ರಗಳು ಕಟುವಾಗಿ ವಿರೋಧಿಸಿವೆ. ಪ್ಯಾಲೆಸ್ತೀನ್ ಸ್ವತಂತ್ರ್ಯ ರಾಷ್ಟ್ರವಾಗಿದ್ದು, ಅಲ್ಲಿ, ಅಮೆರಿಕ ಪ್ರವಾಸೋದ್ಯಮ ಯೋಜನೆಗೆ ಅವಕಾಶವಿಲ್ಲ ಎಂದು ಖಡಾಖಂಡಿತವಾಗಿ ಸಾರಿವೆ. ಪ್ಯಾಲೆಸ್ತೀನ್ ಸ್ಥಳಾಂತರವನ್ನು ‘ಯುದ್ಧ ಅಪರಾಧ’ವೆಂದು ಬಣ್ಣಿಸಿವೆ. ಕ್ಯೂಬಾದಂತಹ ಪುಟ್ಟ ರಾಷ್ಟ್ರ ಹಲವು ದಶಕಗಳಿಂದ ಅಮೆರಿಕವನ್ನು ಎದುರು ಹಾಕಿಕೊಂಡು ಮುನ್ನಡೆಯುತ್ತಿದೆ. ಎದೆಸೆಟಿಸಿ ನಿಲ್ಲುವ ನಾನಾ ಮಾದರಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
ಈ ಎಲ್ಲ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಹಾದಿಯಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಂಡಿವೆ. ತಮ್ಮ ಸಾರ್ವಭೌಮತ್ವವನ್ನು ಜಗತ್ತಿಗೆ ಸಾರಲು ದನಿ ಎತ್ತಿವೆ. ಆದರೆ, ಭಾರತವನ್ನು ವಿಶ್ವಗುರು ಮಾಡಿದ್ದೇನೆ ಎನ್ನುತ್ತಿರುವ ಅಜೈವಿಕ ಜೀವಿ ಪ್ರಧಾನಿ ಮೋದಿ ಮಾಡುತ್ತಿರುವುದೇನು?
ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ, ತನ್ನ ‘ಆಪ್ತಮಿತ್ರ’ ಮೋದಿ ಅವರ ಮೇಲೆ ಸವಾರಿ ಮಾಡಲಾರಂಭಿಸಿದ್ದಾರೆ. ಆರಂಭದಲ್ಲಿಯೇ ಅಮೆರಿಕಗೆ ಮೋದಿ ಅವರನ್ನು ಕರೆಸಿಕೊಂಡಿದ್ದ ಟ್ರಂಪ್, ತಮ್ಮ ಬದಿಯಲ್ಲಿಯೇ ನಿಲ್ಲಿಸಿಕೊಂಡು, ಸುಂಕ ಏರಿಕೆಯ ಬೆದರಿಕೆ ಹಾಕಿದ್ದರು. ಆದರೂ, ಮೋದಿ ತುಟಿಬಿಚ್ಚಲಿಲ್ಲ. ಬದಲಾಗಿ, ಮಗಾ (MAGA), ಮಿಗಾ (MIGA), ಮೆಗಾ (MEGA) ಎಂದೆಲ್ಲ ಬೊಗಳೆ ಹೊಡೆದು ಬಂದಿದ್ದರು.
2025ರ ಏಪ್ರಿಲ್‌ನಲ್ಲಿ ನಡೆದ ಭಾರತ-ಪಾಕ್ ಘರ್ಷಣೆ ವೇಳೆ ಕದನ ವಿರಾಮ ಘೋಷಿಸಿದ್ದು ತಾನೇ ಎಂದು ಟ್ರಂಪ್ ಈವರೆಗೂ 100ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ. ಅದರೂ, ಅವರ ಹೇಳಿಕೆಯನ್ನು ಮೋದಿ ಈವರೆಗೆ ಖಂಡಿಸಿರುವುದಿರಲಿ, ಮೆಲುದನಿಯಲ್ಲಿ ಅಲ್ಲಗಳೆದೂ ಇಲ್ಲ. ಇನ್ನು, 2025ರ ಆಗಸ್ಟ್ 1ರಂದು ಭಾರತದ ಮೇಲೆ 25% ತೆರಿಗೆ ಹೇರಿರುವುದಾಗಿ ಟ್ರಂಪ್ ಘೋಷಿಸಿದರು. ಆಗಲೂ, ಮೋದಿ ಬಾಯಿ ಬಿಡಲಿಲ್ಲ. ಅದೇ ತಿಂಗಳಿನಲ್ಲಿ ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಬೇಕೆಂದು ಟ್ರಂಪ್ ತಾಕೀತು ಮಾಡಿದರು.
ರಷ್ಯಾದ ತೈಲ ಖರೀದಿಸುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ ಹೆಚ್ಚುವರಿ 25% ತೆರಿಗೆ ಹೇರಿ, ಸುಂಕವನ್ನು ಒಟ್ಟು 50%ಗೆ ಟ್ರಂಪ್ ಹೆಚ್ಚಿಸಿದರು. ಅಲ್ಲದೆ, ‘ಸುಂಕ ಹೆಚ್ಚಿಸುವ ವಿಚಾರವಾಗಿ ಮೋದಿ ಅವರಿಗೆ ನಾಲ್ಕು ಬಾರಿ ಕರೆ ಮಾಡಿದೆ, ಅವರು ಉತ್ತರಿಸಲಿಲ್ಲ’ವೆಂದು ಟ್ರಂಪ್ ಲೇವಡಿ ಮಾಡಿದರು.
ಅಕ್ರಮ ವಲಸಿಗರ ಗಡಿಪಾರು ಹೆಸರಿನಲ್ಲಿ ಭಾರತೀಯರಿಗೆ ಕೈಕೋಳ ಹಾಕಿ, ಸರಪಳಿಯಲ್ಲಿ ಬಂಧಿಸಿ, ಯುದ್ಧ ವಿಮಾನದಲ್ಲಿ ಭಾರತಕ್ಕೆ ಪಶುಪ್ರಾಣಿಗಳಂತೆ ತಂದು ಎಸೆದಾಗಲೂ ಮೋದಿ ಅವರಿಗೆ ದೇಶಬಾಂಧವರ ಕುರಿತು ಅಯ್ಯೋ ಎನಿಸಲಿಲ್ಲ, ಸ್ವಾಭಿಮಾನ ಜಾಗೃತವಾಗಲಿಲ್ಲ. ಈಗ, ‘ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ನಡೆದಿದೆ. ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿ, ವೆನೆಜುವೆಲಾದಿಂದ ಖರೀದಿ ಮಾಡಲಿದೆ. ಅಮೆರಿಕ ಮೇಲಿನ ಸುಂಕಗಳನ್ನು ಶೂನ್ಯಕ್ಕೆ ಇಳಿಸಲಿದೆ. ಅಮೆರಿಕವು ಭಾರತದ ಮೇಲಿನ ಸುಂಕವನ್ನು 18%ಕ್ಕೆ ಇಳಿಸುತ್ತದೆ’ ಎಂದು ಟ್ರಂಪ್ ಏಕಪಕ್ಷೀಯವಾಗಿ ಘೋಷಿಸಿದರು. ಒಂದು ಫೋನ್ ಕರೆಗೇ ಪೆಚ್ಚಾದ ಮೋದಿ, ಟ್ರಂಪ್ ನಿರ್ಧರಿಸಿದ ವ್ಯಾಪಾರ ಒಪ್ಪಂದಕ್ಕೆ ತಲೆ ಬಾಗಿದ್ದಾರೆ. ಭಾರತೀಯ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪ್ರತಿಕೂಲ ಪರಿಣಾಮಗಳಾಗಲಿವೆ.
ಈ ಲೇಖನ ಓದಿದ್ದೀರಾ?: ಮೋದಿ ಜುಮ್ಲಾ | ಕೇಂದ್ರದ ಹಲವು ಇಲಾಖೆಗಳಲ್ಲಿ ಜನಪರ ಯೋಜನೆಗಳ ನಿಧಿ ಬಳಕೆಯೇ ಆಗಿಲ್ಲ!
ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ಜಾರಿಯಾದರೆ, ಅಮೆರಿಕದ ಕೃಷಿ ಉತ್ಪನ್ನಗಳು ಯಾವ ಸುಂಕವೂ ಇಲ್ಲದೆ, ಮಿತಿಯೂ ಇಲ್ಲದೆ ಅಗಾಧವಾಗಿ ಭಾರತದ ಮಾರುಕಟ್ಟೆಗೆ ಬಂದು ಬೀಳಲಿವೆ. ಭಾರತೀಯ ರೈತರು ಬೆಳೆವ ಉತ್ಪನ್ನಗಳಿಗಿಂತ ಅಗ್ಗದ ಬೆಲೆಗೆ ಗ್ರಾಹಕರ ಅಡುಗೆ ಮನೆ ಸೇರಲಿವೆ. ಈಗಾಗಲೇ ಕಂಗಾಲಾಗಿ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿ, ಕೊಲ್ಲಲಿವೆ.
ಇದು, ಮೋದಿ ಅವರಿಗೆ ಗೊತ್ತಿಲ್ಲವೇ? ಖಂಡಿತಾ ಗೊತ್ತು. ಆದರೆ, ಅವರು ‘ಕಾಂಪ್ರಮೈಸ್’ (ರಾಜಿ) ಮಾಡಿಕೊಂಡಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಮೋದಿ ಹೆಸರು ತಳುಕು ಹಾಕಿಕೊಂಡಿರುವ ಎಪ್ಸ್ಟೀನ್ ಫೈಲ್ ಮತ್ತು ಮೋದಿ ಅತ್ಯಾಪ್ತ ಅದಾನಿ ಅಮೆರಿಕದಲ್ಲಿ ವಂಚನೆ ಮತ್ತು ಲಂಚ ಆರೋಪಿಯಾಗಿರುವ ಫೈಲ್‌ಗಳನ್ನು ಮುಂದಿಟ್ಟುಕೊಂಡು ಮೋದಿಯನ್ನು ಟ್ರಂಪ್ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರ ಬ್ಲಾಕ್‌ಮೇಲ್‌ಗೆ ಮೋದಿ ಬಗ್ಗಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ.
ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಕಡತವನ್ನು ಅಮೆರಿಕ ನ್ಯಾಯ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ‘ಎಪ್ಸ್ಟೀನ್ ಫೈಲ್’ನಲ್ಲಿ ಮೋದಿ ಹೆಸರು ಕೇಳಿಬಂದಿದೆ. 2019ರಲ್ಲಿ ಎಪ್ಸ್ಟೀನ್ ಸಲಹೆಯಂತೆ ಮೋದಿ ಇಸ್ರೇಲ್‌ಗೆ ಭೇಟಿ ನೀಡಿ, ಅಲ್ಲಿ ‘ಹಾಡಿ, ನೃತ್ಯ ಮಾಡಿ’ ಬಂದಿದ್ದರು ಎಂಬುದನ್ನು ಬಹಿರಂಗಗೊಳಿಸಲಾಗಿದೆ. ಈ ವಿಚಾರ ಹೊರಬೀಳುತ್ತಿದ್ದಂತೆಯೇ, ಟ್ರಂಪ್ ವ್ಯಾಪಾರ ಒಪ್ಪಂದವನ್ನು ಮೋದಿ ಅಪ್ಪಿಕೊಂಡಿದ್ದಾರೆ. ಮೋದಿ ಅವರ ಈ ಶರಣಾಗತಿಯ ಹಿಂದೆ ಭಯಭೀತಿ ಇದ್ದಂತಿದೆ.
ಈ ಬೆಳವಣಿಗೆಗಳು ವಿಪಕ್ಷಗಳ ಆರೋಪದ ಪ್ರಕಾರ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂಬುದರತ್ತಲೇ ಬೆರಳು ಮಾಡಿ ತೋರುತ್ತಿವೆ. ಮೋದಿ ಅವರ ಈ ರಾಜಿ ರಾಜಕಾರಣವು ಭಾರತದ ಸ್ವಾಭಿಮಾನ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡಿದೆ. ಜಗತ್ತಿನಲ್ಲಿ ಅನೇಕ ದೇಶಗಳು ಟ್ರಂಪ್ ಅವರ ನೀತಿಗಳ ವಿರುದ್ಧ ಸೆಟೆದು ನಿಂತಿರುವಾಗ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಮೋದಿ ಅವರು ತಲೆಬಾಗುವಂತೆ ಮಾಡುತ್ತಿರುವುದು ಸಲ್ಲದು!




