ಬಿಜೆಪಿಯ ಕೇಂದ್ರ ತನಿಖಾ ಸಂಸ್ಥೆಗಳ ದಾಳಿಯ ಭೀತಿಗೂ, ಅಧಿಕಾರದ ಆಸೆಗೂ ಬಿಜೆಪಿ ಜೊತೆಗೂಡಿದ ಶಿಂಧೆ ಮತ್ತು ಅಜಿತ್ ಅವರ ಪಕ್ಷಗಳು ಅಧಃಪತನವನ್ನು ಎದುರಿಸುತ್ತಿವೆ. ಇದು, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದೊಂದಿಗಿನ ಮೈತ್ರಿಯಲ್ಲಿ ಪ್ರಾದೇಶಿಕ ಪಕ್ಷಗಳು ದೀರ್ಘಕಾಲದಲ್ಲಿ ದುರ್ಬಲಗೊಳ್ಳುವ ಅಪಾಯವನ್ನು ಎತ್ತಿ ತೋರಿಸಿದೆ.
ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಗಿದಿವೆ. ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದರೆ, ಅದರ ಮಿತ್ರ ಪಕ್ಷಗಳಾದ ಶಿವಸೇನಾ(ಶಿಂದೆ) ಮತ್ತು ಎನ್‌ಸಿಪಿ(ಅಜಿತ್) ನಗಣ್ಯವಾಗಿ ಉಳಿದಿವೆ. ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವು ಮತ್ತು ಪ್ರಾದೇಶಿಕ ಪಕ್ಷಗಳ ದುರ್ಬಲ ಪ್ರದರ್ಶನವು ನೆಲಮಟ್ಟದಲ್ಲಿಯೂ ಬಿಜೆಪಿ ಹೆಚ್ಚು ಬೇರೂರುತ್ತಿದೆ. ಹೆಬ್ಬಾವಿನ ರೀತಿಯಲ್ಲಿ ತನ್ನದೇ ಮಿತ್ರಪಕ್ಷಗಳನ್ನು ನುಂಗುತ್ತಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.
ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಸೇರಿದಂತೆ 29 ನಗರ ಪಾಲಿಕೆಗಳ ಫಲಿತಾಂಶ ಜನವರಿ 16ರಂದು ಪ್ರಕಟವಾಗಿದೆ. ಒಟ್ಟು 2,869 ಸ್ಥಾನಗಳಲ್ಲಿ 1,786 ಸ್ಥಾನಗಳನ್ನು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಗೆದ್ದಿದೆ. ಅದರಲ್ಲೂ ಬಿಜೆಪಿಯೇ 1,438 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಶಿವಸೇನಾ(ಶಿಂದೆ) 405 ಹಾಗೂ ಎನ್‌ಸಿಪಿ(ಅಜಿತ್) 165 ಸ್ಥಾನಗಳನ್ನು ಮಾತ್ರವೇ ಗೆದ್ದಿವೆ. ಅಂತೆಯೇ, 2025ರ ಡಿಸೆಂಬರ್‌ನಲ್ಲಿ ನಡೆದ ಒಟ್ಟು 288 ಪುರಸಭೆ ಮತ್ತು ನಗರ ಪಂಚಾಯಿತಿ ಚುನಾವಣೆಗಳಲ್ಲಿ ಮಹಾಯುತಿಯು 207 ಸಂಸ್ಥೆಗಳಲ್ಲಿ ಗೆಲುವು ಸಾಧಿಸಿತು. ಅದರಲ್ಲೂ, ಬಿಜೆಪಿಯೇ ಏಕಾಂಗಿಯಾಗಿ ಸುಮಾರು 117-129 ಸಂಸ್ಥೆಗಳಲ್ಲಿ ಆಡಳಿತ ರಚಿಸುವಂತೆ ಸ್ಥಾನಗಳನ್ನು ಗೆದ್ದಿದೆ.
ಈ ಫಲಿತಾಂಶವು ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಹಂತ-ಹಂತವಾಗಿ ಸರ್ವನಾಶ ಮಾಡುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ. ಬಿಜೆಪಿಯ ಮಿತ್ರಪಕ್ಷಗಳಿಗೆ ಗಂಭೀರ ಎಚ್ಚರಿಕೆ ರವಾನಿಸಿದೆ. ಮಹಾರಾಷ್ಟ್ರದಲ್ಲಿ 2024ರ ವಿಧಾನಸಭಾ ಚುನಾವಣೆಯಲ್ಲಿಯೇ ಬಿಜೆಪಿಯ ಮಿತ್ರಪಕ್ಷಗಳಿಗೆ ಈ ಎಚ್ಚರಿಕೆ ದೊರೆತಿತ್ತು. ಆ ಚುನಾವಣೆಯಲ್ಲಿ ಒಟ್ಟು 288 ಸ್ಥಾನಗಳಲ್ಲಿ ಮಹಾಯುತಿ 235 ಸ್ಥಾನಗಳನ್ನು ಗೆದ್ದರೂ, ಬಿಜೆಪಿಯೇ 132 ಕ್ಷೇತ್ರಗಳನ್ನು ಗೆದ್ದಿತ್ತು. ಶಿವಸೇನೆ(ಶಿಂದೆ) 57, ಎನ್‌ಸಿಪಿ(ಅಜಿತ್) 41 ಸ್ಥಾನಗಳನ್ನು ಮಾತ್ರವೇ ಗೆದ್ದಿದ್ದವು. ಆ ಸಂದರ್ಭದಲ್ಲಿಯೇ ಬಿಜೆಪಿ ತಮ್ಮನ್ನು ಮುಗಿಸುತ್ತಿದೆ ಎಂಬುದು ಎರಡೂ ಪಕ್ಷಗಳಿಗೂ ಅರ್ಥವಾಗಬೇಕಿತ್ತು. ಆದರೆ, ಅಧಿಕಾರದ ಲಾಲಸೆಯಿಂದ ಭವಿಷ್ಯವನ್ನು ಕಡೆಗಣಿಸಿದವು.
ಬಿಜೆಪಿ ಏಕಾಂಗಿಯಾಗಿ ಬಹುಮತಕ್ಕೆ ಅಗತ್ಯವಿರುವಷ್ಟು ಸ್ಥಾನಗಳನ್ನು ಗೆದ್ದಿರುವ ಸ್ಥಳೀಯ ಸಂಸ್ಥೆಗಳಲ್ಲಿ, ಬಿಜೆಪಿಗೆ ಮಿತ್ರಪಕ್ಷಗಳ ಹಂಗುಬೇಕಿಲ್ಲ. ಅವರ ಅಭಿಪ್ರಾಯಕ್ಕೆ ಪ್ರಾಯಶಃ ಮನ್ನಣೆಯೂ ದೊರೆಯುವುದಿಲ್ಲ. ಬಿಎಂಸಿಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು, ಠಾಕ್ರೆ ಕುಟುಂಬದ ಬಲವನ್ನು ಕುಗ್ಗಿಸಿದೆ. ಶಿವಸೇನೆಯ ಸಾಂಪ್ರದಾಯಿಕ ಭದ್ರಕೋಟೆಗಳಾಗಿದ್ದ ಮುಂಬೈ, ಥಾಣೆ, ಕಲ್ಯಾಣ್-ಡೊಂಬಿವಲಿ ಮುಂತಾದೆಡೆ ಶಿಂದೆ ಪಕ್ಷವನ್ನು ಬಿಜೆಪಿ ಮುಗಿಸಿದೆ. ಅಂತೆಯೇ, ಪುಣೆ, ಪಿಂಪ್ರಿ-ಚಿಂಚವಡ್‌ಗಳಲ್ಲಿ ಪವಾರ್ ಕುಟುಂಬದ ಪ್ರಾಬಲ್ಯವನ್ನು ಒಡೆದುಹಾಕಿ, ಅಜಿತ್ ಪಕ್ಷವನ್ನು ಹಿಮ್ಮೆಟ್ಟಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಪ್ರಾದೇಶಿಕ ಪಕ್ಷಗಳು ಬಿಜೆಪಿ ಇಲ್ಲದೆ, ತಮ್ಮ ಅಸ್ತಿತ್ವವಿಲ್ಲ ಎಂಬ ಪರಿಸ್ಥಿತಿ ಎದುರಿಸುತ್ತಿವೆ. ತಮ್ಮ ಸ್ವತಂತ್ರ ಗುರುತು ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ.
ಬಿಜೆಪಿಯ ಕೇಂದ್ರ ತನಿಖಾ ಸಂಸ್ಥೆಗಳ ದಾಳಿಯ ಭೀತಿಗೂ, ಅಧಿಕಾರದ ಆಸೆಗೂ ಬಿಜೆಪಿ ಜೊತೆಗೂಡಿದ ಶಿಂಧೆ ಮತ್ತು ಅಜಿತ್ ಅವರ ಪಕ್ಷಗಳು ಅಧಃಪತನವನ್ನು ಎದುರಿಸುತ್ತಿವೆ. ಇದು, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದೊಂದಿಗಿನ ಮೈತ್ರಿಯಲ್ಲಿ ಪ್ರಾದೇಶಿಕ ಪಕ್ಷಗಳು ದೀರ್ಘಕಾಲದಲ್ಲಿ ದುರ್ಬಲಗೊಳ್ಳುವ ಅಪಾಯವನ್ನು ಎತ್ತಿ ತೋರಿಸಿದೆ. ಬಹುಶಃ, ಇನ್ನೆರಡು ಚುನಾವಣೆಗಳ ವೇಳೆಗೆ, ಶಿಂದೆ ಮತ್ತು ಅಜಿತ್ ಪಕ್ಷಗಳ ಮತಬ್ಯಾಂಕ್‌ಅನ್ನು ಬಿಜೆಪಿ ತನ್ನದಾಗಿಸಿಕೊಳ್ಳಬಹುದು. ಆ ಎರಡೂ ಪಕ್ಷಗಳು ಹಾಗೂ ವಿಪಕ್ಷಗಳಲ್ಲಿರುವ ಎನ್‌ಸಿಪಿ (ಶರದ್ ಬಣ) ಕೂಡ ನಿರ್ನಾಮವಾಗಿಬಿಡಬಹುದು.
ನೆರೆಯ ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷಗಳ ದುಸ್ಥಿತಿ ಕರ್ನಾಟಕದಲ್ಲಿ ಜೆಡಿಎಸ್‌ಗೂ ಒದಗಿಬರಬಹುದು. ಈಗಾಗಲೇ, ಅಪ್ಪ-ಮಕ್ಕಳ ಪಕ್ಷವೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಜೆಡಿಎಸ್, ಸದ್ಯಕ್ಕೆ ಕುಟುಂಬ ಪಕ್ಷವಾಗಿ ಮಾತ್ರವೇ ಉಳಿದಿದೆ ಎಂಬಂತೆ ಭಾಸವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು, ಅಸ್ತಿತ್ವದ ಹುಡುಕಾಟದಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 19 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸಿತು. ಆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ, ಬಿಜೆಪಿ ಜೊತೆ ಗುದ್ದಾಡಿ 3 ಕ್ಷೇತ್ರಗಳಲ್ಲಿ ಕಣಕ್ಕಿಳಿದ ಜೆಡಿಎಸ್, ಗೆದ್ದಿದ್ದು ಒಂದೇ ಕ್ಷೇತ್ರದಲ್ಲಿ. ಜೆಡಿಎಸ್‌ನ ಭದ್ರಕೋಟೆಯೆಂದೇ ಪರಿಗಣಿಸಲಾದ ಹಳೇ ಮೈಸೂರು ಭಾಗದಲ್ಲಿಯೂ ಪಕ್ಷ ಹೀನಾಯ ಪ್ರದರ್ಶನ ಕಂಡಿತು. ತೀವ್ರ ಕುಸಿತ ಎದುರಿಸಿತು. 2026ರಲ್ಲಿ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. ಒಂದು ವೇಳೆ, ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಮುಂದುವರೆದರೆ, ಜೆಡಿಎಸ್ ತನ್ನ ಅಂತ್ಯಕ್ಕೆ ತಾನೇ ಮತ್ತೊಂದು ಇಟ್ಟಿಗೆ ಇಟ್ಟಂತಾಗಲಿದೆ. ಅದರಲ್ಲೂ, ಮೈತ್ರಿಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸದಿದ್ದರೆ ಅಥವಾ ಗೆಲ್ಲದಿದ್ದರೆ, ಅಲ್ಲಿಗೆ ತನ್ನ ಶವಪೆಟ್ಟಿಗೆಗೆ ತಾನೇ ಅಂತಿಮ ಮೊಳೆಯನ್ನೂ ಜಡಿದುಕೊಳ್ಳಲಿದೆ ಎಂಬ ಅಭಿಪ್ರಾಯಗಳಿವೆ.
ಜೆಡಿಎಸ್ ಎಚ್ಚೆತ್ತುಕೊಳ್ಳಲು ಮಹಾರಾಷ್ಟ್ರ ಮಾತ್ರವೇ ಉದಾಹರಣೆಯಾಗಿಲ್ಲ. ಅದಕ್ಕೂ ಮುನ್ನವೇ, ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ಖೆಡ್ಡ ತೋಡಿರುವ ಹಲವು ಉದಾಹರಣೆಗಳಿವೆ. ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ (SAD) ದೀರ್ಘಕಾಲ ಬಿಜೆಪಿಯೊಂದಿಗೆ ಮೈತ್ರಿಯಲ್ಲಿತ್ತು. ಈ ಮೈತ್ರಿಯಲ್ಲಿ ಎಸ್‌ಎಡಿ ಬಳಸಿಕೊಂಡು ಬಿಜೆಪಿ ನೆಲೆ ಕಂಡರೆ, ಎಸ್‌ಎಡಿ ಕುಸಿಯಲಾರಂಭಿಸಿತು. ಸಿಖ್ ಮತದಾರರನ್ನು ಕಳೆದುಕೊಂಡಿತು. 2020ರಲ್ಲಿ ರೈತ ಪ್ರತಿಭಟನೆಗಳ ಕಾರಣಕ್ಕಾಗಿ ಬಿಜೆಪಿ ಜೊತೆಗಿನ ದೋಸ್ತಿ ತೊರೆದ ಎಸ್‌ಎಡಿ, ಈಗಲೂ ತನ್ನ ಅಸ್ತಿತ್ವದ ಹುಡುಕಾಟದಲ್ಲಿಯೇ ಇದೆ. ನಿರಂತರ ಹಿನ್ನಡೆ ಅನುಭವಿಸುತ್ತಿದೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
ಬಿಹಾರದಲ್ಲಿಯೂ ನಿತೀಶ್ ಕುಮಾರ್ ಅವರ ಜೆಡಿಯು ಮುಂದಿಟ್ಟುಕೊಂಡು ನೆಲೆ ಕಂಡ ಬಿಜೆಪಿ, ಈಗ ಜೆಡಿಯುವನ್ನೇ ಹಿಂದಿಕ್ಕಿದೆ. ನಿತೀಶ್ ಕಾರಣಕ್ಕಾಗಿ ಇನ್ನೂ ನೆಲೆ ಉಳಿಸಿಕೊಂಡಿರುವ ಜೆಡಿಯು, ನಿಧಾನವಾಗಿ ಕುಸಿತ ಕಾಣುತ್ತಿದೆ. ಜೆಡಿಯು ಕಳೆದುಕೊಳ್ಳುತ್ತಿರುವ ನೆಲೆಯನ್ನು ಅದರ ಮಿತ್ರ ಪಕ್ಷವೇ ಆದ ಬಿಜೆಪಿ ಅತಿಕ್ರಮಿಸುತ್ತಿದೆ. ಒಡಿಶಾದಲ್ಲಿ ಬಿಜು ಜನತಾ ದಳ (ಬಿಜೆಡಿ) ಜೊತೆಗಿನ ಮೈತ್ರಿಯಲ್ಲಿ ನೆಲೆ ಕಂಡ ಬಿಜೆಪಿ, ಈಗ ಬಿಜೆಡಿಯನ್ನೇ ಮಣಿಸಿ, ಅಧಿಕಾರದಲ್ಲಿ ಪ್ರತಿಷ್ಠಾಪನೆಗೊಂಡಿದೆ. ಆಂಧ್ರ, ಅಸ್ಸಾಂ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಇದೇ ತಂತ್ರವನ್ನು ಬಿಜೆಪಿ ಪಾಲಿಸುತ್ತಿದೆ.
ಇದು, ರಾಷ್ಟ್ರೀಯ ಪಕ್ಷದೊಂದಿಗಿನ ಮೈತ್ರಿಯಲ್ಲಿ ಪ್ರಾದೇಶಿಕ ಪಕ್ಷಗಳು ದೀರ್ಘಕಾಲದಲ್ಲಿ ತಮ್ಮ ಸ್ವತಂತ್ರ ಗುರುತು ಮತ್ತು ಬಲವನ್ನು ಕಳೆದುಕೊಳ್ಳುವ ಅಪಾಯ ಇದೆ ಎಂಬುದನ್ನು ತೋರುತ್ತದೆ. ದೇಶಾದ್ಯಂತ ಪ್ರಾದೇಶಿಕ ಪಕ್ಷಗಳನ್ನು ತುಳಿದು ಮೇಲೇರುತ್ತಿರುವ ಬಿಜೆಪಿಯ ತಂತ್ರ-ಕುತಂತ್ರಗಳು ಜೆಡಿಎಸ್‌ಗೆ ಈಗಾಗಲೇ ಅರ್ಥವಾಗಬೇಕಿತ್ತು. ಆದರೆ, ತಕ್ಷಣಕ್ಕೆ ಮೈತ್ರಿಯ ಲಾಭ ಪಡೆದುಕೊಳ್ಳುವ ಧಾವಂತದಲ್ಲಿರುವ ಎಚ್.ಡಿ ಕುಮಾರಸ್ವಾಮಿ ಅವರು ಭವಿಷ್ಯವನ್ನು ಕಡೆಗಣಿಸಿದ್ದಾರೆ. ಅಧಿಕಾರಕ್ಕಾಗಿ ಯಾವುದೇ ಹಂತಕ್ಕೆ ಬೇಕಿದ್ದರೂ ಹೋಗುವ ದೇವೇಗೌಡರು ಮತ್ತು ಅವರ ಮಕ್ಕಳು, ತಮ್ಮ ಸ್ವ-ಹಿತಾಸಕ್ತಿಗಾಗಿ ಪಕ್ಷವನ್ನು ಬಲಿಕೊಡುತ್ತಿದ್ದಾರೆ.
ಜೆಡಿಎಸ್‌ನ ನೆಲೆಯಾಗಿರುವ ಹಳೇ ಮೈಸೂರು ಭಾಗದ ಒಕ್ಕಲಿಗರನ್ನು ತಲುಪಲು ಜೆಡಿಎಸ್‌ಅನ್ನು ಬಿಜೆಪಿ ದಾಳವಾಗಿ ಬಳಸಿಕೊಳ್ಳುತ್ತಿದೆ. ಉರಿಗೌಡ-ನಂಜೇಗೌಡರೆಂಬ ಸುಳ್ಳು-ಪೊಳ್ಳು ಕತೆಗಳು, ಹಿಂದುತ್ವದ ಹಿಕಮತ್ತಿನೊಂದಿಗೆ ಒಕ್ಕಲಿಗರನ್ನು ಬಿಜೆಪಿ ಈಗಾಗಲೇ ಸೆಳೆಯುತ್ತಿದೆ. ಜೊತೆಗೆ, ಬಿಜೆಪಿಯ ಸಂಘಟನಾ ಬಲ, ಕೇಂದ್ರದ ಅಧಿಕಾರ, ಮೋದಿ-ಶಾ ಮೇಲಿನ ಹುಚ್ಚು ಆಕರ್ಷಣೆಗಳು ಬಿಜೆಪಿಯ ವಿಸ್ತರಣೆಗೆ ಅನುಕೂಲ ಮಾಡಿಕೊಡುತ್ತಿವೆ.
ಇದನ್ನು ಜೆಡಿಎಸ್‌ನ ನಾಯಕರು ಮತ್ತು ಕಾರ್ಯಕರ್ತರು ಅರ್ಥ ಮಾಡಿಕೊಳ್ಳದಿದ್ದರೆ, ಜೆಡಿಎಸ್ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ, ಸ್ಥಳೀಯ ಮಟ್ಟದಲ್ಲಿ ಬಲವಾದ ನಾಯಕತ್ವ ಮತ್ತು ಸಂಘಟನೆಯನ್ನು ಬೆಳೆಸದಿದ್ದರೆ, ಮಹಾರಾಷ್ಟ್ರದಂತೆ ಶಿಂದೆ ಸೇನೆ ಅಥವಾ ಅಜಿತ್ ಎನ್‌ಸಿಪಿಯಂತಹ ಸ್ಥಿತಿ ಜೆಡಿಎಸ್‌ಗೂ ಎದುರಾಗಬಹುದು. ಈಗಲೂ ಕಾಲ ಮಿಂಚಿಲ್ಲ, ಜೆಡಿಎಸ್ ಎಚ್ಚೆತ್ತುಕೊಳ್ಳಲು ಅವಕಾಶಗಳಿವೆ. ಸ್ಥಳೀಯ ಕಾರ್ಯಕರ್ತರಿಗೆ ಅವಕಾಶ ನೀಡುವುದು, ಪಕ್ಷದ ಹುದ್ದೆಗಳಲ್ಲಿ ಸ್ಥಳೀಯ ಮುಖಂಡರಿಗೆ ಮನ್ನಣೆ ನೀಡುವುದರ ಜೊತೆಗೆ, ಪಕ್ಷವು ತನ್ನ ಭವಿಷ್ಯವನ್ನು ಮರುನಿರ್ಮಾಣ ಮಾಡಿಕೊಳ್ಳಬಹುದು. ಆಗ ಮಾತ್ರ ಜೆಡಿಎಸ್‌ನ ದೀರ್ಘಕಾಲೀನ ರಾಜಕೀಯ ಬದುಕು ಸಾಧ್ಯ.




