ಈ ದಿನ ಸಂಪಾದಕೀಯ | ನ್ಯಾಯಾಧೀಶರು ಲಿಂಗ ಸಂವೇದನೆ ಕಲಿಯಬೇಕಾದ ತುರ್ತು!

Date:

ನ್ಯಾಯದ ಬದ್ಧತೆಯು ತಾಂತ್ರಿಕ ನಿಷ್ಠೆಯ ಮೇಲೆ ಮಾತ್ರ ನಿಂತಿಲ್ಲ, ಬದಲಾಗಿ ಅದರ ಎಲ್ಲ ಸಂಕೀರ್ಣತೆಯನ್ನೂ ಗುರುತಿಸುವ ಇಚ್ಛಾಶಕ್ತಿಯ ಮೇಲೆ ನಿಂತಿದೆ. ಇದು ಕೇವಲ ಕಾನೂನು ಜ್ಞಾನದ ಮೇಲೆ ಅಲ್ಲ, ಮಾನವೀಯತೆ, ಸಮಾನತೆ ಹಾಗೂ ಸಂತ್ರಸ್ತರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಅವಲಂಬಿಸಿದೆ.

2004ರಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಅತ್ಯಾಚಾರಕ್ಕೆ ಯತ್ನ ಪ್ರಕರಣವೆಂದು ಛತ್ತೀಸ್‌ಗಢ ಹೈಕೋರ್ಟ್‌ ಬದಲಾಯಿಸಿದೆ. ‘ಸಂತ್ರಸ್ತೆಯ ಕನ್ಯಾಪೊರೆ ಹರಿಯದಿರುವುದು, ಆಕೆಯ ಜನನಾಂಗದ ಒಳಗಲ್ಲದೆ, ಹೊರಗೆ ವೀರ್ಯ ಸ್ಖಲನ ಮಾಡುವುದು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣವೇ ಹೊರತು, ನಿಜವಾದ ಅತ್ಯಾಚಾರವಲ್ಲ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್‌ ಅವರ ಪೀಠ ತೀರ್ಪಿತ್ತಿದೆ. ಅಪರಾಧಿಗೆ ಅತ್ಯಾಚಾರ ಪ್ರಕರಣದಲ್ಲಿ ವಿಧಿಸಲಾಗಿದ್ದ 7 ವರ್ಷಗಳ ಶಿಕ್ಷೆಯನ್ನು, ಅತ್ಯಾಚಾರಕ್ಕೆ ಯತ್ನವೆಂದು ಹೇಳಿ, ಶಿಕ್ಷೆಯನ್ನು ಮೂರೂವರೆ ವರ್ಷಕ್ಕೆ ಕಡಿತಗೊಳಿಸಿದೆ.

ಒಳನುಗ್ಗುವಿಕೆಯನ್ನು ಕಾರಣವಾಗಿಟ್ಟುಕೊಂಡು ಅತ್ಯಾಚಾರ ಮತ್ತು ಅಪರಾಧದ ವ್ಯಾಖ್ಯಾನವನ್ನೇ ಬದಲಿಸಿದ ಈ ತೀರ್ಪು ಭಾರತದ ನ್ಯಾಯಶಾಸ್ತ್ರವನ್ನು ಅಕ್ಷರಶಃ ಆಘಾತಗೊಳಿಸಿದೆ. ಹಲವು ದಶಕಗಳಿಂದ ಅತ್ಯಾಚಾರ ಪ್ರಕರಣಗಳಲ್ಲಿ ನಿಧಾನಗತಿ ಮತ್ತು ಕಷ್ಟದಿಂದ ಸಾಧಿಸಿದ್ದ ನ್ಯಾಯದ ಹಾದಿಯ ಪ್ರಗತಿಗೆ ಹಿನ್ನಡೆಯುಂಟುಮಾಡಿದೆ.

ಈ ಹಿಂದೆ ಇದ್ದ ಮತ್ತು ಈಗ ಬಿಎನ್‌ಎಸ್‌ಗೆ ಬದಲಾದ ‘ಭಾರತೀಯ ದಂಡ ಸಂಹಿತೆ’ಯ ಸೆಕ್ಷನ್ 375 ಅಡಿಯಲ್ಲಿ ಅತ್ಯಾಚಾರದ ವ್ಯಾಖ್ಯಾನವನ್ನು ಛತ್ತೀಸ್‌ಗಢ ಹೈಕೋರ್ಟ್‌ ತೀರ್ಪು ಮತ್ತೆ ಸಂಕುಚಿತಗೊಳಿಸಿದೆ. ಈ ಸೆಕ್ಷನ್‌ಗೆ 2013ರಲ್ಲಿ ತರಲಾದ ತಿದ್ದುಪಡಿಗಳಿಗೂ ಮೊದಲು ಇದ್ದ ಕಾನೂನನ್ನು ಹೈಕೋರ್ಟ್ ಅನ್ವಯಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2012ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಭಯಾನಕ ನಿರ್ಭಯಾ ಸಾಮೂಹಿಕ ಅತ್ಯಾಚಾರ ಕೃತ್ಯ ಮತ್ತು ವಿಕೃತಿ ಮೆರೆದಿದ್ದ ಕಾಮಪಿಪಾಸುಗಳ ವಿರುದ್ಧ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳ ನಂತರ, ನ್ಯಾಯಮೂರ್ತಿ ಜೆ ಎಸ್ ವರ್ಮಾ ಸಮಿತಿಯು ಅತ್ಯಾಚಾರದ ವ್ಯಾಖ್ಯಾನವನ್ನು ಮರುರೂಪಿಸಲು ಶಿಫಾರಸು ಮಾಡಿತ್ತು. ಆ ಶಿಫಾರಸುಗಳ ಆಧಾರದ ಮೇಲೆ ಸಾರ್ವಜನಿಕ ಮತ್ತು ಕಾನೂನು ತಿಳಿವಳಿಕೆಯನ್ನು ಮರುರೂಪಿಸಲಾಯಿತು. ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ-2013ರ ಅಡಿಯಲ್ಲಿ, ‘ಮಹಿಳೆಯ ಜನನಾಂಗಕ್ಕೆ ಶಿಶ್ನವಲ್ಲದೆ ಬೇರೆ ಯಾವುದೇ ವಸ್ತು ಅಥವಾ ಬೆರಳು ಸೇರಿದಂತೆ ದೇಹದ ಅಂಗವನ್ನು ಬಲವಂತವಾಗಿ ಹಾಕುವುದು ಕೂಡ ಅತ್ಯಾಚಾರವೇ ಆಗಿದೆ. ಮಹಿಳೆಯು ದೈಹಿಕವಾಗಿ ಪ್ರತಿರೋಧ ತೋರಲಿಲ್ಲ ಎಂಬ ಕಾರಣಕ್ಕೆ ಅದನ್ನು ‘ಸಮ್ಮತಿ’ ಎಂದು ಪರಿಗಣಿಸಲೂ ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಈ ವ್ಯಾಖ್ಯಾನಗಳನ್ನು ಕಡೆಗಣಿಸಿರುವ ಅಥವಾ ಮರೆತಿರುವ ಛತ್ತೀಸ್‌ಗಢ ಹೈಕೋರ್ಟ್‌, ಹಳತಾದ ವ್ಯಾಖ್ಯಾನಗಳನ್ನೇ ಉಲ್ಲೇಖಿಸಿ, ಕೃತ್ಯದಲ್ಲಿ ಕುತರ್ಕ ಹುಡುಕಿ ಪ್ರಕರಣವನ್ನು ತಲೆಕೆಳಗಾಗಿ ವ್ಯಾಖ್ಯಾನಿಸಿದೆ.

ಈ ತರ್ಕವು ನ್ಯಾಯಾಧೀಶರಲ್ಲಿರುವ ಲಿಂಗ ಸೂಕ್ಷ್ಮತೆ ಮತ್ತು ಲಿಂಗಾಧಾರಿತ ದೌರ್ಜನ್ಯಗಳ ವಿಚಾರದಲ್ಲಿನ ಸಂವೇದನೆಯ ಕೊರತೆಯನ್ನು ಪ್ರತಿಬಿಂಬಿದುತ್ತದೆ. ನ್ಯಾಯಾಧೀಶರು, ಇಂತಹ ಅಸೂಕ್ಷ್ಮತೆಯಿಂದ ತೀರ್ಪು ನೀಡಿರುವುದು ಇದೇ ಮೊದಲೇನೂ ಅಲ್ಲ.

ಇತ್ತೀಚೆಗೆ, ಅಲಹಾಬಾದ್‌ ಹೈಕೋರ್ಟ್‌ ಕೂಡ, ಮಹಿಳೆಯರ ಸ್ತನಗಳನ್ನು ಹಿಡಿಯುವುದು ಮತ್ತು ಪೈಜಾಮದ ಲಾಡಿಯನ್ನು ಎಳೆಯುವುದು/ಬಿಚ್ಚುವುದು ಅತ್ಯಾಚಾರಕ್ಕೆ ಯತ್ನವಲ್ಲ ಎಂದು ಅವಿವೇಕದ ತೀರ್ಪು ನೀಡಿತು. ಈ ತೀರ್ಪನ್ನು ‘ಅತ್ಯಂತ ಆಘಾತಕಾರಿ’ ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್‌, ತೀರ್ಪನ್ನು ರದ್ದುಗೊಳಿಸಿತು.

ಇದೇ ಅಲಹಾಬಾದ್‌ ಹೈಕೋರ್ಟ್‌, 2025ರ ಏಪ್ರಿಲ್‌ನಲ್ಲಿ, ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ದೂಷಿಸಿತು. ‘ಸಂತ್ರಸ್ತೆಯು ಎಂಎ ವಿದ್ಯಾರ್ಥಿನಿ ಆಗಿರುವುದರಿಂದ, ಆಕೆ ತನ್ನ FIRನಲ್ಲಿ ಹೇಳಿರುವ ಕ್ರಿಯೆಯ ನೈತಿಕತೆ ಮತ್ತು ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಮರ್ಥಳಾಗಿದ್ದಳು. ಆಕೆ ಮಾಡುತ್ತಿರುವ ಆರೋಪಗಳನ್ನು ಸತ್ಯವೆಂದು ಒಪ್ಪಿಕೊಂಡರೂ ಸಹ, ಆಕೆ ತಾನೇ ತೊಂದರೆಗೆ ಆಹ್ವಾನ ನೀಡಿದ್ದಾಳೆ. ಆದ್ದರಿಂದ, ಆಕೆಯೇ ಪ್ರಕರಣದ ಜವಾಬ್ದಾರಿ ವಹಿಸಬೇಕು’ ಎಂದು ಅಸೂಕ್ಷ್ಮತೆ ಮೆರೆಯಿತು. ಇದನ್ನೂ ಸುಪ್ರೀಂ ಕೋರ್ಟ್‌, ‘ವಿಕಾರ/ವಿಕೃತ ಮಾತುಗಳು’ ಎಂದು ಜರಿಯಿತು.

2017ರಲ್ಲಿ, ಅತ್ಯಾಚಾರ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್‌, ‘ಮಹಿಳೆಯರ ವರ್ತನೆಯಲ್ಲಿ ದುರ್ಬಲತೆ ಇಲ್ಲವೆಂದಿದ್ದರೆ, ಆಕೆ ಕೃತ್ಯಕ್ಕೆ ಸಮ್ಮತಿಸಿದ್ದಾಳೆ ಎಂದರ್ಥ’ ಎಂದಿತು. ಆರೋಪಿಯನ್ನು ನಿರ್ದೋಷಿಯೆಂದು ಘೋಷಿಸಿತು. ಅಂತೆಯೇ, 2021ರಲ್ಲಿ ಪೋಕ್ಸೋ ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‌, ಮೈಗೆ ಮೈ ಸೋಕದಿದ್ದರೆ (skin to skin) ಅದು ಅಪರಾಧವಲ್ಲ’ ಎಂದು ತನ್ನ ಕುರುಡನ್ನು ಪ್ರದರ್ಶಿಸಿತು. ಈ ತೀರ್ಪನ್ನೂ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತು. ಇನ್ನೂ, ಕೆಲವು ನ್ಯಾಯಾಲಯಗಳು ಅತ್ಯಾಚಾರಗಳಿಗೆ ಸಂತ್ರಸ್ತೆಯರ ವರ್ತನೆ, ಉಡುಪು, ಸಮಯಗಳೂ ಕಾರಣವೆಂದು ಬಲಿಪಶುಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವ ಉದಾಹರಣೆಗಳೂ ಇವೆ.

ಈ ಲೇಖನ ಓದಿದ್ದೀರಾ?: ವಂದೇ ಮಾತರಂ ಕಡ್ಡಾಯದ ಹಿಂದಿರುವುದು ದೇಶಭಕ್ತಿಯಲ್ಲ, ಪಶ್ಚಿಮ ಬಂಗಾಳ ಗೆಲ್ಲುವುದು!

ಭಾರತದಲ್ಲಿ ಲಿಂಗ ನ್ಯಾಯದ ವ್ಯಾಪ್ತಿಯು ಎಂದಿಗೂ ಸಮನಾಗಿರಲಿಲ್ಲ. ಸಂತ್ರಸ್ತೆಯರನ್ನು ಪೊಲೀಸರು, ನ್ಯಾಯವಾದಿಗಳು ಹಾಗೂ ನ್ಯಾಯಮೂರ್ತಿಗಳು ನೋಡುವ, ಪರಿಶೀಲಿಸುವ, ವಿಚಾರಿಸುವ ರೀತಿಯೇ ಹಲವು ಸಂದರ್ಭಗಳಲ್ಲಿ ಆಘಾತಕಾರಿಯಾಗಿರುತ್ತವೆ. ಹಲವು ಸಂದರ್ಭಗಳಲ್ಲಿ, ಸಂತ್ರಸ್ತೆಯರನ್ನೇ ನೈತಿಕತೆಯ ತೀರ್ಪಿಗೆ ಗುರಿಯಾಗಿಸಲು, ಪ್ರಕರಣದಲ್ಲಿ ಕೂದಲು ಸೀಳುವ ತಾಂತ್ರಿಕತೆಗೆ ಅಂಟಿಕೊಳ್ಳುವುದೂ ಇದೆ. ಇದೆಲ್ಲವೂ, ಮೊಂಡುತನದಿಂದ ಬೆಳೆದುಬಂದಿರುವ ಪಿತೃಪ್ರಧಾನ ವ್ಯವಸ್ಥೆಯ ಬಳುವಳಿಗಳು.

ಆದ್ದರಿಂದಲೇ, ಲೈಂಗಿಕ ಹಿಂಸಾಚಾರವು ಅನೇಕ ಮುಖಗಳನ್ನು ಧರಿಸಿ, ಸಮಾಜದೊಳಗೆ ರಾಜಾರೋಷವಾಗಿ ಮೆರೆದಿದೆ. ಅತ್ಯಾಚಾರ ಕೃತ್ಯಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಐದಾರು ವರ್ಷಗಳಲ್ಲಿ ಪ್ರತಿ ವರ್ಷವೂ 30,000ಕ್ಕಿಂತ ಹೆಚ್ಚು ಅತ್ಯಾಚಾರ ಮತ್ತು 4 ಲಕ್ಷಕ್ಕಿಂತ ಹೆಚ್ಚು ಮಹಿಳಾ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಆದರೆ, ದಂಡನೆಯ ಪ್ರಮಾಣವು 27%ಕ್ಕಿಂತ ಕಡಿಮೆ ಇದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವಾಗ, ಅವುಗಳನ್ನು ತಡೆಯಲು ಮತ್ತು ಸಂತ್ರಸ್ತೆಯರಿಗೆ ನ್ಯಾಯ ಒದಗಿಸಬೇಕೆಂದರೆ, ನ್ಯಾಯದಾನ ಮಾಡುವ ಸ್ಥಾನದಲ್ಲಿರುವವರಲ್ಲಿ ಲಿಂಗ ಸಂವೇದನೆ ಮತ್ತು ಸೂಕ್ಷ್ಮತೆ ಬೆಳೆಸಿಕೊಳ್ಳುವುದು ಅತ್ಯಂತ ಮಹತ್ವದ ಅಂಶಗಳಾಗಿವೆ. ನ್ಯಾಯದ ಬದ್ಧತೆಯು ತಾಂತ್ರಿಕ ನಿಷ್ಠೆಯ ಮೇಲೆ ಮಾತ್ರ ನಿಂತಿಲ್ಲ, ಬದಲಾಗಿ ಅದರ ಎಲ್ಲ ಸಂಕೀರ್ಣತೆಯನ್ನೂ ಗುರುತಿಸುವ ಇಚ್ಛಾಶಕ್ತಿಯ ಮೇಲೆ ನಿಂತಿದೆ. ಇದು ಕೇವಲ ಕಾನೂನು ಜ್ಞಾನದ ಮೇಲೆ ಅಲ್ಲ, ಮಾನವೀಯತೆ, ಸಮಾನತೆ ಹಾಗೂ ಸಂತ್ರಸ್ತೆಯರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಅವಲಂಬಿಸಿದೆ.

ನ್ಯಾಯಾಧೀಶರು ಕೇವಲ ಕಾನೂನು ಅನ್ವಯಿಸುವವರು ಅಲ್ಲ, ನ್ಯಾಯ ನೀಡಿಕೆಯ ಪ್ರತಿರೂಪಗಳೂ ಆಗಿದ್ದಾರೆ. ಲಿಂಗ ಸಂವೇದನೆ ಮತ್ತು ಸೂಕ್ಷ್ಮತೆ ಇಲ್ಲದಿದ್ದರೆ ನ್ಯಾಯ ಅಪೂರ್ಣವಾಗುತ್ತದೆ. ನ್ಯಾಯಾಧೀಶರಲ್ಲಿ ಲಿಂಗ ಸೂಕ್ಷ್ಮತೆಯನ್ನು ಬೆಳೆಸಲು ಸುಪ್ರೀಂ ಕೋರ್ಟ್‌ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರತಿ ತೀರ್ಪಿನಲ್ಲಿ ಸಂವೇದನೆ, ಸೂಕ್ಷ್ಮತೆ, ಕರುಣೆ ಹಾಗೂ ಸಮಾನತೆಯ ಮನೋಭಾವ ಪ್ರತಿಬಿಂಬಿತವಾದರೆ ಮಾತ್ರ ನಿಜವಾದ ನ್ಯಾಯ ಸಾಧ್ಯವಾಗುತ್ತದೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....