ಸಂಸದೀಯ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ, ವಿರೋಧ, ಸಲಹೆಗಳಿಗೆ ಮುಕ್ತ ಅವಕಾಶವಿದೆ. ಆದರೆ, ಮೋದಿ ಸರ್ಕಾರವು ಸಂಸದೀಯ ವ್ಯವಸ್ಥೆಯನ್ನು ತನ್ನ ಸ್ವೇಚ್ಛೆಗೆ ತಕ್ಕಂತೆ ಬಗ್ಗಿಸಿಕೊಂಡು ವಿಕೃತಗೊಳಿಸುತ್ತಿದೆ. ಸಂಸತ್ತಿನ ಕಾರ್ಯ-ಕಲಾಪಗಳನ್ನು ನಡೆಸುವವರನ್ನು ಕೈಗೊಂಬೆ ಮಾಡಿಕೊಂಡಿದೆ.
ಸಂಸತ್‌ನಲ್ಲಿ ಕೇಂದ್ರ ಬಜೆಟ್ ಅಧಿವೇಶನದ ಮೊದಲ ಹಂತದ ಕಲಾಪ ಮುಗಿದಿದೆ. ಕಲಾಪದಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸೂಚನೆ ಮತ್ತು ಚರ್ಚೆಗಳು ನಡೆದಿವೆ. ಫೆಬ್ರವರಿ 4ರಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಪತಿ ಭಾಷಣಕ್ಕೆ ಪ್ರತಿಕ್ರಿಯಿಸಿದ್ದರು. ಸರ್ಕಾರದ ಕೆಲವು ನೀತಿಗಳ ವಿಮರ್ಶೆ, ಸಂಸದೀಯ ಕಾರ್ಯವೈಖರಿ ಮತ್ತು ಇತರ ಮುಖ್ಯ ವಿಷಯಗಳನ್ನು ತಮ್ಮ ಮಾತಿನಲ್ಲಿ ಚರ್ಚಿಸಿದ್ದರು. ಆ ಮಹತ್ವದ ಅವರ ಭಾಷಣದ ಬಹುಪಾಲು ಭಾಗವನ್ನು ರಾಜ್ಯಸಭಾ ಕಡತದಿಂದ ಕಿತ್ತುಹಾಕಲಾಗಿದೆ. ವಿನಾಕಾರಣ ತಮ್ಮ ಭಾಷಣದ ಭಾಗವನ್ನು ತೆಗೆದುಹಾಕಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಶುಕ್ರವಾರ, ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಚರ್ಚಿಸಿರುವ ಖರ್ಗೆ, ತಮ್ಮ ಭಾಷಣದಲ್ಲಿ ಯಾವುದೇ ಅಸಭ್ಯ ಅಥವಾ ಅಸಂಸದೀಯ ಭಾಷೆಯನ್ನು ಬಳಸಿಲ್ಲ. ಎಲ್ಲವೂ ಸಂಸದೀಯ ಚರ್ಚೆಯ ವ್ಯಾಪ್ತಿಯೊಳಗಿತ್ತು. ಸರ್ಕಾರದ ನೀತಿಗಳ ವಿಮರ್ಶೆಯನ್ನು ಒಳಗೊಂಡಿತ್ತು –ಇದು ವಿರೋಧ ಪಕ್ಷದ ನಾಯಕನ ಜವಾಬ್ದಾರಿ ಮತ್ತು ಹಕ್ಕು. ಆದರೆ, ನಮ್ಮ ಧ್ವನಿಯನ್ನು ಹತ್ತಿಕ್ಕುವ ಉದ್ದೇಶದಿಂದ ರಾಜಸಭೆಯ ಅಧಿಕೃತ ವೆಬ್‌ಸೈಟ್ ಸೇರಿದಂತೆ ಎಲ್ಲ ಕಡತಗಳಿಂದ ಕಿತ್ತುಹಾಕಲಾಗಿದೆ ಎಂದು ರಾಜ್ಯಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಗಮನಕ್ಕೆ ತಂದಿದ್ದಾರೆ.
ಸಂವಿಧಾನದ ಅನುಚ್ಛೇದ 105(1)ರಲ್ಲಿ ಸಂಸದರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಒದಗಿಸಲಾಗಿದೆ. 105(1) ವಿಧಿಯು ‘ಸಂಸದರು ಸಂಸತ್ತಿನ ಕಾರ್ಯವಿಧಾನದ ನಿಯಮಗಳು ಮತ್ತು ಸ್ಥಾಯಿ ಆದೇಶಗಳಿಗೆ ಒಳಪಟ್ಟು, ಸಂಸತ್ತಿನಲ್ಲಿ ಭಾಷಣ ಮಾಡಬಹುದು. ಅವರು ಮಾತನಾಡುವಾಗ ಅಥವಾ ಮತ ನೀಡುವಾಗ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ’ ಎಂದು ಹೇಳುತ್ತದೆ. ಸಂಸದೀಯ ಚರ್ಚೆಯಲ್ಲಿ ಯಾವುದೇ ವಿಷಯದ ಬಗ್ಗೆ ನಿರ್ಭಯವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುತ್ತದೆ. ಮಿಗಿಲಾಗಿ, ಸಂಸದರ ಭಾಷಾ ಬಳಕೆಯು ಅಸಭ್ಯವಾಗಿದ್ದರೆ ಮಾತ್ರವೇ ಆ ಭಾಷಣವನ್ನು ಕಡತದಿಂದ ತೆಗೆಯಲು ಸಂಸದೀಯ ಇಲಾಖೆಗೆ ಅವಕಾಶವನ್ನೂ ಸಂವಿಧಾನ ಒದಗಿಸಿದೆ.
ಆದರೆ, ಖರ್ಗೆ ಅವರು ತಮ್ಮ ಭಾಷಣದಲ್ಲಿ ಯಾವುದೇ ಅಸಭ್ಯ, ಅಸಂವಿಧಾನಿಕ ಅಥವಾ ಅಸಂಸದೀಯ ಭಾಷೆಯನ್ನು ಬಳಸಿಲ್ಲ. ಕಾರಣವಿಲ್ಲದೆ ಅವರ ಭಾಷಣವನ್ನು ಕಡತದಿಂದ ಕಿತ್ತು ಹಾಕಲಾಗಿದೆ. ಸರ್ಕಾರದ ವಿರುದ್ಧ ಖರ್ಗೆ ಅವರು ಮಾಡಿದ ಗಂಭೀರ ಆರೋಪಗಳು, ಬಿಚ್ಚಿಟ್ಟ ಸತ್ಯಗಳನ್ನು ದಾಖಲೆಗಳಿಂದ ಕಿತ್ತುಹಾಕಲು ಮೋದಿ ಸರ್ಕಾರ ಎಸಗಿರುವ ಕುತಂತ್ರದ ಕೃತ್ಯವೆಂದು ವಿಪಕ್ಷಗಳು ಆರೋಪಿಸಿವೆ. ಆದ್ದರಿಂದ, ತೆಗೆದುಹಾಕಲಾದ ಭಾಷಣದ ಭಾಗಗಳನ್ನು ಮರಳಿ ಸೇರಿಸಬೇಕೆಂದು ಖರ್ಗೆ ಸೇರಿದಂತೆ ವಿಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ.
ಆದಾಗ್ಯೂ, ವಿಪಕ್ಷಗಳ ಮನವಿಯನ್ನು ಸಭಾಧ್ಯಕ್ಷರು ತಿರಸ್ಕರಿಸಿದ್ದಾರೆ. ‘ಅಧ್ಯಕ್ಷರ ನಿರ್ಧಾರವನ್ನು ಪ್ರಶ್ನಿಸಲಾಗದು ಮತ್ತು ತೆಗೆದುಹಾಕಿದ ಭಾಗಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ವೆಂದು ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಸಮರ್ಥಿಸಿಕೊಂಡಿದ್ದಾರೆ.
ಈ ಏಕಪಕ್ಷೀಯ, ಸರ್ವಾಧಿಕಾರಿ, ಪಕ್ಷಪಾತಿ ಧೋರಣೆ ಮತ್ತು ನಿಲುವು ಏನನ್ನು ಸೂಚಿಸುತ್ತದೆ? ಮೋದಿ ಸರ್ಕಾರದ ವಿರುದ್ಧ ಸದನದಲ್ಲಿಯೂ, ಸದನದ ಹೊರಗೂ ಮಾತನಾಡಲು ಅವಕಾಶವಿಲ್ಲ. ಮಾತನಾಡಿದರೆ, ಅಂತಹ ಮಾತುಗಳು ಎಲ್ಲಿಯೂ ಉಳಿಯುವುದಿಲ್ಲ. ಉಳಿಯಲು ಬಿಡುವುದಿಲ್ಲ ಎಂಬ ಸ್ಪಷ್ಟ ಲಜ್ಜೆಗೇಡಿತನದ ಪ್ರತಿಬಿಂಬವಾಗಿದೆ.
ಮಹಾಭಾರತದಲ್ಲಿ, ದ್ರೋಣಾಚಾರ್ಯನನ್ನು ಗುರುವಾಗಿ ಸ್ವೀಕರಿಸಿದ್ದ ದಲಿತ ಏಕಲವ್ಯ, ಆತನ ಪ್ರತಿಮೆಯನ್ನು ಇಟ್ಟುಕೊಂಡು ಬಿಲ್ವಿದ್ಯೆ ಕಲಿತ. ಆದರೆ, ಜಾತಿ ಅಹಂಕಾರವನ್ನು ತಲೆಗೇರಿಸಿಕೊಂಡಿದ್ದ ದ್ರೋಣಾಚಾರ್ಯ, ಪಾಂಡವರ ಮಾತಿಗೆ ಮಣಿದು, ಅರ್ಜುನನೇ ಧನುರ್ವಿದ್ಯೆಯಲ್ಲಿ ಸರ್ವಶ್ರೇಷ್ಠ ಎಂದು ಸಾರಲು, ತಾನು ವಿದ್ಯೆ ಕಲಿಸದೇ ಇದ್ದರೂ, ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದು, ಆದಿವಾಸಿಯೊಬ್ಬನ ಬಿಲ್ವಿದ್ಯೆಯನ್ನು ಕಸಿದುಕೊಳ್ಳುವ ಹೀನ ಮಟ್ಟಕ್ಕೆ ಇಳಿದರು. ಹೆಬ್ಬೆರಳನ್ನು ದಕ್ಷಿಣೆಯಾಗಿ ಕೊಟ್ಟ ಏಕಲವ್ಯ ಶಿಕ್ಷಣದ ಹಕ್ಕು ಕಳೆದುಕೊಂಡರು. ಬ್ರಾಹ್ಮಣ-ಕ್ಷತ್ರಿಯರ ಪಾರಮ್ಯ ಸ್ಥಾಪನೆಗಾಗಿ ನಡೆಸಲಾಗಿದ್ದ ಸಂಚು ಪುರಾಣ ಕಾಲದಷ್ಟು ಹಳೆಯದು.
ಇತಿಹಾಸದುದ್ದಕ್ಕೂ ದಲಿತರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುವುದು ಮುಂದುವರಿದೇ ಇದೆ. ದಲಿತರಿಗೆ ಪಾಠ ಹೇಳಿಕೊಡುತ್ತಿದ್ದ ಕಾರಣಕ್ಕಾಗಿ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಮೇಲೆ ಮೇಲ್ಜಾತಿಯ ದುರುಳರು ಸಗಣಿ ಎರಚಿದ್ದರು. ಇತ್ತೀಚಿನ ವರ್ಷಗಳಲ್ಲಿಯೂ, ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯದಂತೆ ತಡೆಯುವ, ಅವರ ದನಿಯನ್ನು ಹತ್ತಿಕ್ಕುವ ಸಾಂಸ್ಥಿಕ ಕೃತ್ಯಗಳೂ ನಡೆಯುತ್ತಿವೆ.
ಈ ಲೇಖನ ಓದಿದ್ದೀರಾ?: ಸ್ಪೀಕರ್ ನಡೆನುಡಿ ತಟಸ್ಥವಾಗಿರಬೇಕೆಂಬ ಸಂವಿಧಾನದ ಆಶಯದ ಸಾರಾಸಗಟು ಉಲ್ಲಂಘನೆಯಿದು!
ಅಂದು, ದ್ರೋಣಾಚಾರ್ಯ ಏಕಲವ್ಯನ ಹೆಬ್ಬೆರಳಿಗೆ ಕೈಹಾಕಿದರೆ, ಇಂದು ಸಂಘಾಚಾರ್ಯರು (ಆರ್‌ಎಸ್‌ಎಸ್/ಬಿಜೆಪಿ) ದಲಿತರ ನಾಲಿಗೆಗೆ ಕೈ ಹಾಕಿದ್ದಾರೆ. ದಲಿತರ ದನಿಯನ್ನು ಹತ್ತಿಕ್ಕುವ ಹುನ್ನಾರದಿಂದಲೇ, ಖರ್ಗೆ ಅವರ ಭಾಷಣವನ್ನು ಕಡತದಿಂದ ಕಿತ್ತುಹಾಕಲಾಗಿದೆ. ಖರ್ಗೆ ತಮ್ಮ ಭಾಷಣದಲ್ಲಿ ದಲಿತರು, ತಳಸಮುದಾಯವರು ಹಾಗೂ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ವಿಷಯಗಳನ್ನು ಎತ್ತಿದ್ದರು. ಇದೇ ಭಾಗಗಳನ್ನು ಮೋದಿ ಸರ್ಕಾರ ಕಿತ್ತುಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದು, ಅಕ್ಷರಶಃ ಬಿಜೆಪಿಯ ‘ಜಾತಿಗ್ರಸ್ತ’ ಮನುವಾದಿ ಧೋರಣೆಯ ಭಾಗವೇ ಆಗಿದೆ. ದಲಿತರ ಅಭಿವ್ಯಕ್ತಿಯ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯೂ ಆಗಿದೆ.
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ, ವಿರೋಧ, ಸಲಹೆಗಳಿಗೆ ಮುಕ್ತ ಅವಕಾಶವಿದೆ. ಆದರೆ, ಮೋದಿ ಸರ್ಕಾರವು ಸಂಸದೀಯ ವ್ಯವಸ್ಥೆಯನ್ನು ತನ್ನ ಸ್ವೇಚ್ಛೆಗೆ ತಕ್ಕಂತೆ ಬಗ್ಗಿಸಿಕೊಂಡು ವಿಕೃತಗೊಳಿಸುತ್ತಿದೆ. ಸಂಸತ್ತಿನ ಕಾರ್ಯ-ಕಲಾಪಗಳನ್ನು ನಡೆಸುವವರನ್ನು ಕೈಗೊಂಬೆ ಮಾಡಿಕೊಂಡು, ವಿರೋಧಕ್ಕೆ ಆಸ್ಪದವೇ ಇಲ್ಲದಂತೆ ಮಾಡಿದೆ. ದಾಖಲೆ ದಸ್ತಾವೇಜುಗಳಲ್ಲಿಯೂ ದಲಿತ-ದಮನಿತ-ಆದಿವಾಸಿಗಳ ದನಿ ಉಳಿಯಕೂಡದೆಂಬ ಈ ಮನೋಭಾವ ಸರ್ವಥಾ ಸರಿಯಲ್ಲ.
ಯಾವುದೇ ಸ್ಪಷ್ಟ ಕಾರಣ ಅಥವಾ ಸೂಚನೆ ನೀಡದೆ ಖರ್ಗೆ ಅವರ ಭಾಷಣದ ಬಹುಭಾಗವನ್ನು ಕಡತದಿಂದ ತೆಗೆಯವುದು ವಿಪಕ್ಷ ನಾಯಕರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ. ದಲಿತ ದನಿಯನ್ನು ಹತ್ತಿಕ್ಕುತ್ತದೆ. ದಲಿತ ಸಮುದಾಯದಿಂದ ಬಂದವರು ಸಾಮಾಜಿಕ ನ್ಯಾಯದ ಕುರಿತು ಮಾತನಾಡದಂತೆ ತಡೆಯುವ ದುಷ್ಕೃತ್ಯವೂ ಆಗಿದೆ. ಇದು ಸಂಸತ್ತಿನಲ್ಲಿ ವಿರೋಧ ಪಕ್ಷದ ಸ್ವಾತಂತ್ರ್ಯ, ದಲಿತರ ಧ್ವನಿಯ ಹರಣ ಹಾಗೂ ಜಾತಿವ್ಯವಸ್ಥೆ ಮುಂದುವರಿಕೆಯನ್ನು ಸ್ಪಷ್ಟವಾಗಿ ತೋರಿಸಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಅಪಮಾನಿಸಿದೆ. ಸಂಸತ್ತಿನ ಮೇಲ್ಮನೆಯ ಪ್ರತಿಪಕ್ಷದ ನಾಯಕನ ಮಾತುಗಳನ್ನು ಕಾರಣ ಕೂಡ ನೀಡದೆ ಕಿತ್ತು ಹಾಕುವುದು, ವಿಶ್ವದ ಜನತಂತ್ರದ ತಾಯಿ ಭಾರತ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವವರಿಗೆ ಶೋಭಿಸುತ್ತದೆಯೇ?




