ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಈ ಹೇಳಿಕೆಯು ಜಾತಿ ತಾರತಮ್ಯವನ್ನೇ ನಿರಾಕರಿಸಿ, ಜಾತಿಯ ಕ್ರೂರ ಗುರುತನ್ನು ಮರೆಮಾಚಿ, ಜಾತಿ ವ್ಯವಸ್ಥೆಗೆ ಸಾಮರಸ್ಯದ ಬಣ್ಣ ಬಳಿಯಲು ಯತ್ನಿಸಿದೆ.
ಮಧ್ಯಪ್ರದೇಶದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ಶೇ. 14ರಿಂದ 27ಕ್ಕೆ ಹೆಚ್ಚಿಸುವ ಕಾನೂನು ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಕಳೆದ 8 ವರ್ಷಗಳಿಂದ ಚರ್ಚೆ/ವಿಚಾರಣೆ ನಡೆಯುತ್ತಿದೆ. ತನ್ನ ಕಾನೂನನ್ನು ಸಮರ್ಥಿಸಿ ಮಧ್ಯಪ್ರದೇಶ ಬಿಜೆಪಿ ಸರ್ಕಾರವು ಸೆಪ್ಟೆಂಬರ್ 23ರಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ತನ್ನ ಅಫಿಡವಿಟ್‌ನಲ್ಲಿ ”ಭಾರತದ ಜಾತಿ ವ್ಯವಸ್ಥೆಯು ಮೂಲತಃ ‘ಸಾಮಾಜಿಕ ಸಾಮರಸ್ಯ, ಸಮಾನತೆ ಮತ್ತು ಭ್ರಾತೃತ್ವ’ದ ಮೇಲೆ ಸ್ಥಾಪಿತವಾಗಿದೆ” ಎಂಬ ಆಘಾತಕಾರಿ ಅಂಶವೊಂದನ್ನು ಸೇರಿಸಿದೆ. ಇದು ಭಾರತದ ಸಾಮಾಜಿಕ ವ್ಯವಸ್ಥೆಯ ಇತಿಹಾಸವನ್ನು ಅಲುಗಾಡಿಸಿದೆ. ವ್ಯಾಪಕ ವಿರೋಧಕ್ಕೂ ಕಾರಣವಾಗಿದೆ.
ಸರ್ಕಾರವು ತನ್ನ ಅಫಿಡವಿಟ್‌ನಲ್ಲಿ ‘ಮಧ್ಯಪ್ರದೇಶದ ಒಬಿಸಿ ಸಮುದಾಯಗಳ ಸಾಮಾಜಿಕ-ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಯ ಸಮೀಕ್ಷೆ ಮತ್ತು ಸಾಮಾಜಿಕ ವೈಜ್ಞಾನಿಕ ಅಧ್ಯಯನ ಹಾಗೂ ಅವರ ಹಿಂದುಳಿದಿರುವಿಕೆಗೆ ಕಾರಣಗಳು’ ಎಂಬ ಶೀರ್ಷಿಕೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮಾಜ ವಿಜ್ಞಾನ ವಿಶ್ವವಿದ್ಯಾಲಯವು 2023ರಲ್ಲಿ ನಡೆಸಿದ ಅಧ್ಯಯನದ ವರದಿಯನ್ನು ಉಲ್ಲೇಖಿಸಿದೆ.
ಈ ವರದಿಯು, ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆಯು ಜನನದ ಆಧಾರದ ಮೇಲೆ ರೂಪುಗೊಂಡಿರಲಿಲ್ಲ. ಬದಲಾಗಿ, ಕೆಲಸ ಮತ್ತು ಅರ್ಹತೆಯ ಆಧಾರದ ಮೇಲೆ ರಚನೆಯಾಗಿತ್ತು. ಇದು ಸಾಮಾಜಿಕ ಸಮತೋಲನ ಮತ್ತು ಸಮಾನ ಅವಕಾಶವನ್ನು ಖಾತ್ರಿಪಡಿಸಿತ್ತು ಎಂದು ವಾದಿಸಿದೆ.
”ಯಾವುದೇ ವ್ಯಕ್ತಿಯ ಸಾಮಾಜಿಕ ಸ್ಥಾನಮಾನವು ಹುಟ್ಟಿನಿಂದಲೇ ಪೂರ್ವನಿರ್ಧರಿತವಾಗಿರಲಿಲ್ಲ. ಅವಿಭಜಿತ ಭಾರತದಲ್ಲಿ ಎಂದಿಗೂ ಜಾತಿ ಅಸ್ತಿತ್ವದಲ್ಲಿಯೇ ಇರಲಿಲ್ಲ. ದಾಖಲೆಯ ಪ್ರಕಾರ, ವಿದೇಶಿ ಆಕ್ರಮಣಗಳು ಮತ್ತು ಸಾಂಸ್ಕೃತಿಕ ಪ್ರಭಾವದ ನಂತರವೇ ಆನುವಂಶಿಕ ಶ್ರೇಣಿಗಳು ಮತ್ತು ಸಾಮಾಜಿಕ ಬಿಗಿತವು ಸಾಮಾಜದಲ್ಲಿ ರೂಪು ತಳೆಯಿತು” ಎಂಬ ವಾದವನ್ನು ವರದಿ ಮುಂದಿಟ್ಟಿದೆ.
”ವಿದೇಶಿ ಶಕ್ತಿಗಳ ಜೊತೆಗಿನ ಸಂಪರ್ಕದಿಂದಾಗಿ ಅಧಿಕಾರ ಕೇಂದ್ರೀಕರಣ ಮತ್ತು ಶ್ರೇಣಿ ವ್ಯವಸ್ಥೆ ರೂಪುಗೊಂಡಿತು. ಅವೈಜ್ಞಾನಿಕ ಮತ್ತು ಧಾರ್ಮಿಕ ಪ್ರೇರಿತ ವರ್ಗೀಕರಣಗಳ ಮೂಲಕ ವಿದೇಶಿಗರು ಭಾರತೀಯರನ್ನು ರಾಜಕೀಯವಾಗಿ ಮತ್ತು ಮಾನಸಿಕವಾಗಿ ಗುಲಾಮರನ್ನಾಗಿ ಮಾಡುವವರೆಗೆ ಪ್ರಾಚೀನ ಭಾರತವು ಪ್ರಜಾಪ್ರಭುತ್ವ ಮತ್ತು ಆಧ್ಯಾತ್ಮಿಕ ಶ್ರೀಮಂತ ನಾಗರಿಕತೆಯನ್ನು ಹೊಂದಿತ್ತು” ಎಂದು ವರದಿ ತೀರ್ಮಾನಿಸಿದೆ.
ಅದೇ ವರದಿಯನ್ನು ಆಧರಿಸಿ ಸರ್ಕಾರ ಕೂಡ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಇದು, ಭಾರತದ ಅತ್ಯಂತ ಹಿಂಸಾತ್ಮಕ ಸಾಮಾಜಿಕ ಶ್ರೇಣಿ ವ್ಯವಸ್ಥೆಯ ಕರಾಳಮುಖಕ್ಕೆ ಬಿಳಿಬಣ್ಣ ಬಳಿಯುವ ಕುತಂತ್ರದಂತೆ ಕಾಣುತ್ತದೆ.
ಭಾರತದಲ್ಲಿ ಜಾತಿ ವ್ಯವಸ್ಥೆಯು ಸುಮಾರು ಕ್ರಿ.ಪೂ. 2000-1500 ವರ್ಷಗಳ ಅವಧಿಯಿಂದಲೂ ಅಸ್ತಿತ್ವದಲ್ಲಿದೆ. ಅದರಲ್ಲೂ, ಭಾರತಕ್ಕೆ ಆರ್ಯರು ಬಂದ ಬಳಿಕ ವರ್ಣಾಶ್ರಮ ವ್ಯವಸ್ಥೆ ಪ್ರಬಲವಾಗಿ ಬೇರೂರಿತು. ಈ ವ್ಯವಸ್ಥೆಯಲ್ಲಿ ಮಗುವಿನ ಸಾಮಾಜಿಕ ಮತ್ತು ಆರ್ಥಿಕ ಚಲನಶೀಲತೆಯನ್ನು ಸಹಸ್ರಾರು ವರ್ಷಗಳಿಂದ ಹುಟ್ಟಿನಿಂದಲೇ ನಿಗದಿಪಡಿಸಲಾಗಿದೆ. ಅಸ್ಪೃಶ್ಯತೆಯು ವಸಾಹತುಶಾಹಿ ಆಳ್ವಿಕೆಗಿಂತಲೂ ಬಹಳ ಹಿಂದಿನಿಂದಲೂ ಬೇರುಬಿಟ್ಟಿದೆ. ಇದರಲ್ಲಿ ವಿದೇಶಿ ಪ್ರಭಾವವಿಲ್ಲ. ಸ್ವದೇಶಿ ಶ್ರೇಣಿ ವ್ಯವಸ್ಥೆಯದ್ದೇ ದೌರ್ಜನ್ಯ-ದಬ್ಬಾಳಿಕೆ.
ಈ ಜಾತಿ ಶ್ರೇಣೀಕರಣ ಮತ್ತು ಅಸ್ಪೃಶ್ಯತೆಯು 2,500 ವರ್ಷಗಳಿಗೂ ಹಿಂದಿನಿಂದಲೇ ಜಾರಿಯಲ್ಲಿತ್ತು. ಇದು ಬ್ರಾಹ್ಮಣ ಮೇಲಾಳ್ವಿಕೆಯಿಂದ ಬಂದದ್ದು. ಬಿಜೆಪಿ-ಆರ್‌ಎಸ್‌ಎಸ್ ಹಿಡನ್ ಸಂವಿಧಾನ ಮನುಸ್ಮೃತಿಯಲ್ಲಿ ‘ಬ್ರಾಹ್ಮಣನು ಬ್ರಹ್ಮನ ತಲೆಯಿಂದಲೂ, ಕ್ಷತ್ರಿಯನು ಭುಜದಿಂದಲೂ, ವೈಶ್ಯನು ತೊಡೆಗಳಿಂದಲೂ ಹಾಗೂ ಶೂದ್ರನು ಪಾದಗಳಿಂದಲೂ ಜನಿಸಿದವರು’ ಎಂದು ಮನು ಬರೆದದ್ದೂ ಕ್ರಿ.ಪೂ 200ರಲ್ಲಿ. ಈ ಮನುಸ್ಮೃತಿ ಮತ್ತು ಕೆಲವು ಧರ್ಮಶಾಸ್ತ್ರಗಳು ಮನುಷ್ಯನು ಸಾಮಾಜಿಕ ಶ್ರೇಣಿ ವ್ಯವಸ್ಥೆಯೊಳಗೆ ಹುಟ್ಟುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿವೆ. ಅವರ ಹುಟ್ಟಿನ ಆಧಾರದ ಮೇಲೆ ಅವರ ಶಿಕ್ಷಣ, ಉದ್ಯೋಗ ಹಾಗೂ ಇತರ ನಿಯಮಗಳನ್ನು ರೂಪಿಸಿವೆ.
ಇದನ್ನು ಸಾಮಾಜಿಕ ಸಾಮರಸ್ಯ ಎನ್ನುವುದು, ಜಾತಿ ವ್ಯವಸ್ಥೆಗೆ ವಿದೇಶಿ ಆಕ್ರಮಣವನ್ನು ದೂಷಿಸುವುದು ಬೌದ್ಧಿಕ ದಿವಾಳಿತನ ಅಥವಾ ಮತಿಭ್ರಮಣೆಗೆ ಸಮನಾದದ್ದು.
ಜಾತಿ ವ್ಯವಸ್ಥೆಯನ್ನು ‘ಸಾಮರಸ್ಯ’ ಎನ್ನುವುದು ದಬ್ಬಾಳಿಕೆ ಮತ್ತು ಹಿಂಸೆಯು ಪ್ರೀತಿಯಿಂದ ನಡೆದದ್ದು ಎಂದು ಧ್ವನಿಸುತ್ತದೆ. ಹಿಂಸೆಯನ್ನು ಶುದ್ಧಗೊಳಿಸುತ್ತದೆ. ದಬ್ಬಾಳಿಕೆಯ ಆಸ್ವಾದಿಸುತ್ತದೆ. ಇದು ಇತಿಹಾಸವನ್ನು ತಿರುಚುವ ಮನುವಾದಿಗಳ ಮತ್ತೊಂದು ಹುನ್ನಾರ.
ಈ ಲೇಖನ ಓದಿದ್ದೀರಾ?: ಗವಾಯಿ ಬೌದ್ಧತತ್ವವೂ ಬಿಜೆಪಿಗರ ಮನುವಾದವೂ
ಜಾತಿ ವ್ಯವಸ್ಥೆಯು ಸಾಮಾಜಿಕ ಸಾಮರಸ್ಯವಾಗಿದ್ದರೆ, ದೌರ್ಜನ್ಯ ನಡೆದಿದ್ದು ಯಾರ ಮೇಲೆ? ದೌರ್ಜನ್ಯ-ದಬ್ಬಾಳಿಕೆಯು ಎಲ್ಲ ಸಮುದಾಯಗಳು, ಎಲ್ಲ ವರ್ಗಗಳ ಮೇಲೆ ಸಮಾನವಾಗಿ ನಡೆದಿದೆಯೇ? ಯಾರಿಂದ ಯಾರಿಗೆ ಸಾಮರಸ್ಯ ದೊರೆತಿದೆ?
ಸ್ಪೃಶ್ಯ, ಅಸ್ಪೃಶ್ಯ, ಶ್ರೇಷ್ಠ-ಕನಿಷ್ಠ, ಶುದ್ಧ-ಅಶುದ್ಧ, ಮೇಲು-ಕೀಳು ಎಂಬ ಸಾಮಾಜಿಕ ಅನಿಷ್ಟ ವ್ಯವಸ್ಥೆಗಳು ತಳಸಮುದಾಯಗಳು ಮತ್ತು ಅಸ್ಪೃಶ್ಯರನ್ನು ಸಹಸ್ತ್ರಾರು ವರ್ಷಗಳ ಕಾಲ ಹಿಂಸಿಸಿವೆ. ಕೊಂದಿವೆ. ಶುದ್ಧತೆಯ ಹೆಸರಿನಲ್ಲಿ ಹೊರಗಿಟ್ಟಿವೆ. ಮೇಲಾಳ್ವಿಕೆಯ ಹೆಸರಿನಲ್ಲಿ ಶೂದ್ರ ಮಹಿಳೆಯರನ್ನು ಭೋಗದ ವಸ್ತುವಿನಂತೆ ಬಳಸಿಕೊಂಡಿವೆ. ದಿನನಿತ್ಯ ಅವಮಾನ, ಅಪಮಾನಗಳೊಂದಿಗೆ ವಿಕೃತ ಕ್ರೌರ್ಯ ಎಸಗಿವೆ. ಜಾತಿ ವ್ಯವಸ್ಥೆಯಿಂದ ದೇಶದ ಬಹುಸಂಖ್ಯಾತರು ನೆಮ್ಮದಿಯ ಅರ್ಥವನ್ನೇ ತಿಳಿಯಲಾಗಿರಲಿಲ್ಲ.
ಇಂತಹ ಕ್ರೂರ ಜಾತಿ ವ್ಯವಸ್ಥೆಯಲ್ಲಿ ಜನರು ಪ್ರೀತಿ-ಸಾಮರಸ್ಯದಿಂದ ಬದುಕಿದ್ದಾರೆಯೇ? ಪರಸ್ಪರರನ್ನು ಪ್ರೀತಿಸಿದ್ದಾರೆಯೇ? ಸಮಾನವಾಗಿ ದುಡಿದಿದ್ದಾರೆಯೇ? ಜಾತಿ ವ್ಯವಸ್ಥೆಯು ಸಾಮರಸ್ಯದಿಂದ ಕೂಡಿದ್ದೇ ಆಗಿದ್ದರೆ, ಬುದ್ಧ, ಬಸವಣ್ಣ, ಫುಲೆ, ಅಂಬೇಡ್ಕರ್ ನಡೆಸಿದ ಹೋರಾಟಗಳು ಯಾರಿಗಾಗಿ? ಇಂದಿಗೂ ಜಾತಿ ಅಧಾರಿತ ಶೋಷಣೆಗಳು ನಿರಂತರವಾಗಿ ನಡೆಯುತ್ತಿವೆ. ಜಾತಿಯ ವ್ಯವಸ್ಥೆಯ ಕಾರಣಕ್ಕಾಗಿಯೇ ಇಂದಿಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸುವಾಗ ಜನರು ಸಾಯುತ್ತಾರೆ. ಇಲ್ಲಿ ಸಾಮರಸ್ಯ ಎಲ್ಲಿದೆ?
ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಈ ಹೇಳಿಕೆಯು ಜಾತಿ ತಾರತಮ್ಯವನ್ನೇ ನಿರಾಕರಿಸಿ, ಜಾತಿಯ ಕ್ರೂರ ಗುರುತನ್ನು ಮರೆಮಾಚಿ, ಜಾತಿ ವ್ಯವಸ್ಥೆಗೆ ಸಾಮರಸ್ಯದ ಬಣ್ಣ ಬಳಿಯಲು ಯತ್ನಿಸಿದೆ. ಸರ್ಕಾರವು ಜಾತಿಯನ್ನು ‘ಸಾಮರಸ್ಯ’ ಎಂದು ಕರೆದರೆ, ಅದೇ ಜಾತಿ ವ್ಯವಸ್ಥೆಯ ವಿರುದ್ಧದ ದೀರ್ಘಕಾಲದ ಹೋರಾಟಗಳು ಅಮಾನ್ಯಗೊಳ್ಳುತ್ತವೆ. ಇತಿಹಾಸವನ್ನು ತಿರುಚಿ ಬರೆಯುವ ಸಂಘಪರಿವಾದ ಹುನ್ನಾರಕ್ಕೆ ಮತ್ತೊಂದು ಮೆಟ್ಟಿಲು ಒದಗಿಸುತ್ತದೆ. ಇದು, ಜಾತಿ ದೌರ್ಜನ್ಯಗಳ ವಿರುದ್ಧದ ಪ್ರಶ್ನೆಗಳನ್ನು ಬದಿಗೊತ್ತಿ, ಶ್ರೇಣೀಕೃತ ಅಸಮಾನತೆಯನ್ನು ತಿರುಚಿ ಇತಿಹಾಸವು ಉಜ್ವಲವಾಗಿತ್ತು ಎಂಬ ಹೊಸ ಸುಳ್ಳು ನಿರೂಪಣೆಯನ್ನು ಭಾರತದ ಮುಂದಿಡುವ ಕುತಂತ್ರಕ್ಕೆ ದಾರಿ ಮಾಡಿಕೊಳ್ಳುತ್ತದೆ.




