ಮೋದಿಯವರು ಆಪ್ತಸ್ನೇಹಿತ ಟ್ರಂಪ್ ಭೇಟಿ ಮಾಡಲು ಹಿಂಜರಿಯುತ್ತಿದ್ದಾರೆ. ಇದು ಮೋದಿಯವರ ಮಹಾ ಪಲಾಯನದಂತೆ ಕಂಡು, ಹೆದರಿಕೆ, ತಲೆ ಮರೆಸಿಕೊಳ್ಳುವಿಕೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವಿಕೆಯನ್ನು ಪ್ರದರ್ಶಿಸುತ್ತಿದೆ...
ಜಗತ್ತಿನ ಇತಿಹಾಸ ಪುಟಗಳಲ್ಲಿ ಮಹಾಪಲಾಯನವೂ ಪ್ರಮುಖ ಸಂಗತಿ. 2ನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರ್ ನೇತೃತ್ವದ ಜರ್ಮಿನಿಯ ನಾಝಿಗಳು ಬ್ರಿಟಿಷ್, ಕೆನಡಿಯನ್, ಅಮೆರಿಕನ್ ಹಾಗೂ ಇತರ ಮೈತ್ರಿಕೂಟದ ವಾಯುಪಡೆಗಳ ಸುಮಾರು 600 ಅಧಿಕಾರಿಗಳನ್ನು ಹಿಡಿದು ಜರ್ಮನಿಯ ‘ಸ್ಟಾಲ್ಯಾಗ್ ಲುಫ್ಟ್ III’ ಜೈಲಿನಲ್ಲಿಟ್ಟಿದ್ದರು. ಅವರಲ್ಲಿ ಕೆಲವರು ರಾಯಲ್ ಏರ್ ಫೋರ್ಸ್‌ನ ಮುಖ್ಯಸ್ಥ ರೋಜರ್ ಬುಷೆಲ್ ನೇತೃತ್ವದಲ್ಲಿ ಜೈಲಿನಿಂದ ಸುರಂಗ ಕೊರೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಬೆರಳೆಣಿಕೆಯಷ್ಟು ಮಂದಿ ತಪ್ಪಿಸಿಕೊಂಡರೆ, ಉಳಿದವರು ಸಿಕ್ಕಿಕೊಂಡರು. ಅವರ ಉದ್ದೇಶ ಜರ್ಮನ್ ಸೈನ್ಯದ ಯುದ್ಧ ಸಂಪನ್ಮೂಲಗಳನ್ನು ನಾಶ ಮಾಡಿ, ಯುದ್ಧದಲ್ಲಿ ನಾಝಿಗಳ ಗಮನವನ್ನು ಭಂಗಗೊಳಿಸುವುದಾಗಿತ್ತು. ಈ ಪ್ರಯತ್ನವನ್ನು ಇತಿಹಾಸವು ಮಹಾ ಪಲಾಯನ (ಗ್ರೇಟ್ ಎಸ್ಕೇಪ್) ಎಂದು ಕರೆದಿದೆ. ಸ್ಮರಿಸುತ್ತಿದೆ.
ಪ್ರಸ್ತುತ, ನಮ್ಮೆದುರು ಮತ್ತೊಂದು ಮಹಾ ಪಲಾಯನ ಘಟಿಸುತ್ತಿದೆ. ಈ ಪಲಾಯನವು ಏಕೈಕ ವಿಶ್ವಗುರು, ಭಾರತದ ಪ್ರಧಾನಿ ಮೋದಿ ಅವರದ್ದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆ, ನೀತಿ-ನಿರ್ಬಂಧಗಳಿಂದ ಮೋದಿ ಹೆದರಿದ್ದಾರೆ. ಟ್ರಂಪ್ ಅವರನ್ನು ಎದುರಿಸಲಾಗದೆ ಪಲಾಯನ ಮಾಡುತ್ತಿದ್ದಾರೆ.
ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ, ಮೋದಿ-ಟ್ರಂಪ್ ದೋಸ್ತಿಯು ಕುಚಿಕು-ಕುಚಿಕು ಎನ್ನುವಂತಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ ಮೋದಿಗಾಗಿ ಟ್ರಂಪ್ ‘ಹೌಡಿ ಮೋದಿ’ ಕಾರ್ಯಕ್ರಮ ನಡೆಸಿದರು. ‘ಮೋದಿ ಭಾರತದ ಮಹಾನ್ ನಾಯಕ, ನನ್ನ ಅತ್ಯಾಪ್ತ ಸ್ನೇಹಿತ’ ಎಂದು ಟ್ರಂಪ್ ಘೋಷಿಸಿದರು. ಪ್ರತಿಯಾಗಿ, ಮೋದಿ ಅವರು 2020ರ ಫೆಬ್ರವರಿಯಲ್ಲಿ ಟ್ರಂಪ್‌ರನ್ನು ಗುಜರಾತ್‌ಗೆ ಕರೆಸಿ, ಅಹಮದಾಬಾದ್‌ನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ನಡೆಸಿದ್ದರು.
ಆದರೆ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ 2ನೇ ಅವಧಿಯ ಆಯ್ಕೆಗಾಗಿ ಟ್ರಂಪ್ ಚುನಾವಣಾ ಕಣದಲ್ಲಿದ್ದರು. ಚುನಾವಣೆಯ ಸಮಯದಲ್ಲಿ ಮೋದಿ ಭಕ್ತರು ಟ್ರಂಪ್ ಗೆಲುವಿಗಾಗಿ ಭಾರತದಲ್ಲಿ ಹೋಮ-ಹವನಗಳನ್ನು ನಡೆಸಿದರು, ಹರಕೆ ಹೊತ್ತರು, ಪ್ರಾರ್ಥಿಸಿದರು. ಟ್ರಂಪ್ ಗೆದ್ದಾಗ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು. ಆದರೆ, ಅದೇ ಚುನಾವಣೆ ಮೋದಿ-ಟ್ರಂಪ್ ಸಂಬಂಧಕ್ಕೆ ಮುಳುವಾಯಿತು. ಚುನಾವಣಾ ಅವಧಿಯಲ್ಲಿ ಅಮೆರಿಕಗೆ ಮೋದಿ ಭೇಟಿ ನೀಡಿದ್ದ ಮೋದಿ, ತಮ್ಮ ಪ್ರಚಾರಕ್ಕೂ ಬರುತ್ತಾರೆಂದು ಟ್ರಂಪ್ ಘೋಷಿಸಿದರು. ಆದರೆ, ಅವರತ್ತ ಮೋದಿ ಸುಳಿಯಲೇ ಇಲ್ಲ. ಪರಿಣಾಮ, ಮೋದಿ ಮೇಲೆ ಟ್ರಂಪ್ ದ್ವೇಷ ಕಾರಲಾರಂಭಿಸಿದರು.
ಹೇಳಿಕೇಳಿ, ಮೋದಿ ಮತ್ತು ಟ್ರಂಪ್– ಈ ಇಬ್ಬರೂ ದ್ವೇಷ ರಾಜಕಾರಣದಿಂದಲೇ ಬೆಳೆದ ರಾಜಕಾರಣಿಗಳು. ಮೋದಿ ಕೋಮುದ್ವೇಷವನ್ನು ಆವಾಹಿಸಿಕೊಂಡು ಬೆಳೆದರೆ, ಟ್ರಂಪ್ ವರ್ಣಭೇದ ನೀತಿಯನ್ನು ಮೈಗೂಡಿಸಿಕೊಂಡಿದ್ದವರು. ಇವರಿಬ್ಬರ ನಂಜಿಗೆ ಮಿತಿಯೇ ಇಲ್ಲ. ಇದೇ ದ್ವೇಷದ ವಿಷವು ಈಗ ಪರಸ್ಪರರನ್ನು ವೈರಿಗಳೆಂಬಂತೆ ಮಾಡಿದೆ.
ಈ ದ್ವೇಷದ ಕಾರಣದಿಂದಲೇ, ತಮ್ಮ ಅಧ್ಯಕ್ಷೀಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವರನ್ನು ಆಹ್ವಾನಿಸಿದ್ದ ಟ್ರಂಪ್, ಮೋದಿಗೆ ಆಹ್ವಾನ ನೀಡಲಿಲ್ಲ. ಆದಾಗ್ಯೂ, ಟ್ರಂಪ್ ಅವರನ್ನು ಮತ್ತೆ ಒಲಿಸಿಕೊಳ್ಳುವ ದರ್ದು ಮೋದಿಗಿತ್ತು. ಟ್ವೀಟ್ ಮಾಡಿ ಶುಭಾಶಯ ಕೋರಿದರು. ಕೆಲವೇ ದಿನಗಳಲ್ಲಿ ಅಮೆರಿಕಗೂ ಹಾರಿದರು.
ಶ್ವೇತಭವನದ ವೇದಿಕೆಯಲ್ಲಿ ಟ್ರಂಪ್-ಮೋದಿ ಭಾಷಣಗೈದರು. ‘ಅಮೆರಿಕದ ಮಗ (MAGA – ಮೇಕ್ ಅಮೆರಿಕ ಗ್ರೇಟ್ ಅಗೈನ್) ಭಾರತದ ಮಿಗ (MIGA – ಮೇಕ್ ಇಂಡಿಯಾ ಗ್ರೇಟ್ ಅಗೈನ್) ಎರಡೂ ಸೇರಿದಂತೆ ಮೆಗಾ (MEGA) ಆಗುತ್ತದೆ’ ಎಂದು ಮೋದಿ ಅಣಿಮುತ್ತುಗಳನ್ನು ಉದುರಿಸಿದರು. ಆದರೆ, ಅದೇ ವೇದಿಕೆಯಲ್ಲಿ, ‘ಭಾರತವು ತೆರಿಗೆಗಳ ರಾಜ. ಅವರಂತೆಯೇ ನಾವು ಭಾರತದ ಮೇಲೆ ತೆರಿಗೆ ಹೇರುತ್ತೇವೆ’ ಎಂದು ಟ್ರಂಪ್ ಬೆದರಿಕೆಯೊಡ್ಡಿದರು. ಆದರೆ, ಮೋದಿ ಮರುಮಾತನಾಡದೆ ತಲೆಬಾಗಿ ಮರಳಿದರು.
ಟ್ರಂಪ್ ಹೇಳಿದಂತೆಯೇ, ಆರಂಭದಲ್ಲಿ ಭಾರತದ ಮೇಲೆ 26% ತೆರಿಗೆ ಸೇರಿ ನಾನಾ ರಾಷ್ಟ್ರಗಳ ಮೇಲೆ ಭಾರೀ ತೆರಿಗೆ ವಿಧಿಸಿದರು. ಟ್ರಂಪ್ ತೆರಿಗೆ ನೀತಿಯನ್ನು ಬ್ರೆಜಿಲ್, ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಖಂಡಿಸಿದವು. ಅಮೆರಿಕ ಮೇಲೆ ಮತ್ತೊಷ್ಟು-ಮೊಗದಷ್ಟು ತೆರಿಗೆ ವಿಧಿಸಿ, ಟ್ರಂಪ್‌ರನ್ನು ಮಣಿಸಿದರು. ಆದರೆ, ಭಾರತವು ಮೌನ ತಾಳಿತು. ಮೋದಿ ಅಮೆರಿಕದಲ್ಲಿದ್ದ ಸಮಯದಲ್ಲಿಯೇ, ಕಾನೂನುಬಾಹಿರವಾಗಿ ಅಮೆರಿಕಗೆ ತೆರಳಿದ್ದ ವಲಸಿಗರನ್ನು ತಮ್ಮ ಮಿಲಿಟರಿ ವಿಮಾನಗಳ ಮೂಲಕ ಟ್ರಂಪ್ ಹೊರಗಟ್ಟಿದರು. ಟ್ರಂಪ್ ಧೋರಣೆಯನ್ನು ಖಂಡಿಸಿದ ಬ್ರೆಜಿಲ್ ತಮ್ಮದೇ ವಿಮಾನಗಳನ್ನು ಕಳಿಸಿ ತಮ್ಮ ಪ್ರಜೆಗಳನ್ನು ಗೌರವಯುತವಾಗಿ ಕರೆಸಿಕೊಂಡಿತು. ಆದರೆ, ಭಾರತದ ಪ್ರಜೆಗಳನ್ನು ಕೈಗಳಿಗೆ ಕೋಳ ತೊಡಿಸಿ ಅಮಾನವೀಯವಾಗಿ ಕಳಿಸಿದರೂ ಮೋದಿ ಸರ್ಕಾರ ಉಸಿರೆತ್ತಲಿಲ್ಲ.
ಟ್ರಂಪ್ ಅವರ ಎಲ್ಲ ಧೋರಣೆಗಳ ವಿಚಾರದಲ್ಲಿಯೂ ಪ್ರಧಾನಿ ಮೋದಿಯೂ ಸೇರಿದಂತೆ ಭಾರತ ಸರ್ಕಾರ, ರಾಜತಾಂತ್ರಿಕರು ಮೌನಕ್ಕೆ ಕಟ್ಟುಬಿದ್ದಿದ್ದಾರೆ. ತೆರಿಗೆ ಬೆದರಿಕೆಯನ್ನು ಮೋದಿ ಖಂಡಿಸಲಿಲ್ಲ. ವಲಸಿಗರನ್ನು ಅಮಾನುಷವಾಗಿ ಭಾರತಕ್ಕೆ ತಂದು ದೂಡಿದಾಗ ಮೋದಿ ಸೊಲ್ಲೆತ್ತಲಿಲ್ಲ. ಕದನ ವಿರಾಮ ನನ್ನಿಂದಲೇ ಸಾಧ್ಯವಾಯಿತು ಎನ್ನುವ ಟ್ರಂಪ್ ಹೇಳಿಕೆಯನ್ನು ಮೋದಿ ಈವರೆಗೆ ಅಲ್ಲಗಳೆಯಲಿಲ್ಲ. ಈಗ, 50% ತೆರಿಗೆ ಮತ್ತು ರಷ್ಯಾ ತೈಲ ಖರೀದಿಗೆ ನಿಲ್ಲಿಸಲು ಭಾರತ ಒಪ್ಪಿದೆ ಎಂಬ ಹೇಳಿಕೆಗಳಿಗೂ ಮೋದಿ ಪ್ರತಿಕ್ರಿಯಿಸಿಲ್ಲ. ಇದೆಲ್ಲವೂ ಟ್ರಂಪ್‌ಗೆ ಮೋದಿ ಹೆದರಿರುವುದನ್ನು ಸೂಚಿಸುತ್ತಿದೆ.
ಅಕ್ಟೋಬರ್ 25ರಿಂದ ಮಲೇಷ್ಯಾದಲ್ಲಿ ನಡೆಯಲಿರುವ ‘ಪೂರ್ವ ಏಷ್ಯಾ ಶೃಂಗಸಭೆ’ಗೂ ಮೋದಿ ಗೈರಾಗುತ್ತಿದ್ದಾರೆ. ಶೃಂಗಸಭೆ ನಡೆಯುವ ಸಮಯದಲ್ಲಿ ಟ್ರಂಪ್ ಕೂಡ ಮಲೇಷ್ಯಾಗೆ ಭೇಟಿ ನೀಡಲಿದ್ದಾರೆ. ಮೋದಿ ಮಲೇಷ್ಯಾಗೆ ತೆರಳಿದ್ದರೆ ಅಲ್ಲಿ ಟ್ರಂಪ್‌ರನ್ನು ಭೇಟಿ ಮಾಡುವ ಅವಕಾಶವಿತ್ತು. ಆದರೆ, ಅವರು ಟ್ರಂಪ್ ಅವರ ಮುಖಾಮುಖಿಯಾಗುವುದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಗೈರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಯಾಕೆಂದರೆ, ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ಬಂದ ಬಳಿಕ, 2014ರಿಂದ ಈವರೆಗೆ ಇದು 2ನೇ ಬಾರಿಗೆ ‘ಪೂರ್ವ ಏಷ್ಯಾ ಶೃಂಗಸಭೆ’ಗೆ ಗೈರಾಗುತ್ತಿದ್ದಾರೆ.
ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾದ ನಂತರ ಮೋದಿ-ಟ್ರಂಪ್ ಒಮ್ಮೆ ಮಾತ್ರ ಭೇಟಿಯಾಗಿದ್ದಾರೆ. ಒಮ್ಮೆ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ಆದಾಗ್ಯೂ, ಭಾರತದ ಮೇಲೆ 50% ತೆರಿಗೆ ಹೇರಿದ ಬಳಿಕ ಟ್ರಂಪ್ ಹಲವು ಬಾರಿ ಕರೆ ಮಾಡಿದರೂ ಮೋದಿ ಉತ್ತರಿಸಿಲ್ಲ. ಇತ್ತೀಚೆಗೆ, ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಮೋದಿ-ಟ್ರಂಪ್ ಭೇಟಿಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಅದೂ ಆಗಲಿಲ್ಲ. ಜೊತೆಗೆ, ಈಜಿಪ್ಟ್-ಅಮೆರಿಕ ನೇತೃತ್ವದಲ್ಲಿ ನಡೆದ ಗಾಜಾ-ಇಸ್ರೇಲ್ ಶಾಂತಿ ಶೃಂಗಸಭೆಗೆ ಮೋದಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೂ, ಮೋದಿ ಭಾಗಿಯಾಗಲಿಲ್ಲ. ಮುಂಬರುವ ದಿನಗಳಲ್ಲಿಯೂ ಟ್ರಂಪ್-ಮೋದಿ ಭೇಟಿಯ ಸಾಧ್ಯತೆಗಳು ಇದ್ದಂತಿಲ್ಲ. ಇದೆಲ್ಲವೂ ಟ್ರಂಪ್‌ರನ್ನು ಎದುರಿಸಲಾಗದ ಮೋದಿ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ.
ಈ ಲೇಖನ ಓದಿದ್ದೀರಾ?: ಜಾತಿ ವ್ಯವಸ್ಥೆಯ ಕ್ರೂರತೆಗೆ ಸಾಮರಸ್ಯದ ಬಣ್ಣ; ಮಧ್ಯಪ್ರದೇಶ ಸರ್ಕಾರದ ಬೌದ್ಧಿಕ ದಾರಿದ್ರ್ಯ
ಮೋದಿ ಅವರು ವಿದೇಶಾಂಗ ನೀತಿ ಎಂದರೆ ವಿದೇಶಗಳಿಗೆ ಭೇಟಿ ನೀಡುವುದು, ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದು, ಫೋಟೋ ತೆಗೆಸಿಕೊಳ್ಳುವುದು, ಜೊತೆಯಲ್ಲಿ ಊಟ ಮಾಡುವುದು, ಅವರು ಹೇಳಿದ್ದಕ್ಕೆ ತಲೆಯಾಡಿಸಿ ಬರುವುದು ಎಂದು ಭಾವಿಸಿದಂತಿದೆ. ಮೋದಿ ಅವರು ಟ್ರಂಪ್ ದೋಸ್ತಿ ಬೆಳೆಸುವುದಕ್ಕೂ ಮುನ್ನ ಇಂದಿರಾಗಾಂಧಿ ಅವರ ಇತಿಹಾಸವನ್ನು ಓದಿಕೊಳ್ಳಬೇಕಿತ್ತು.
1971ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಜೊತೆ ಇಂದಿರಾ ಗಾಂಧಿ ಅಮೆರಿಕದಲ್ಲಿ ಸಭೆ ನಡೆಸಿದ್ದರು. ಈ ವೇಳೆ, ಬಾಂಗ್ಲಾದೇಶ ಸ್ವಾತಂತ್ರ್ಯಕ್ಕೆ ಇಂದಿರಾ ಬೆಂಬಲ ನೀಡಿದ್ದರು. ಪಾಕ್‌ಗೆ ಬೆಂಬಲವಾಗಿದ್ದ ನಿಕ್ಸನ್, ಭಾರತದ ಮೇಲೆ ಆರ್ಥಿಕ ನಿರ್ಬಂಧ ಮತ್ತು ನೆರವು ನಿರ್ಬಂಧ ಹೇರುವುದಾಗಿ ಬೆದರಿಕೆ ಹಾಕಿದ್ದರು. ಅವರ ಬೆದರಿಕೆಗೆ ಜಗ್ಗದ ಇಂದಿರಾ, ‘ಭಾರತವು ಯಾರ ಹಂಗಿಗೂ ತಲೆ ಭಾಗುವುದಿಲ್ಲ’ ಎಂದು ಸವಾಲು ಹಾಕಿಬಂದಿದ್ದರು.
ಅಷ್ಟೇ ಯಾಕೆ? ಇತ್ತೀಚೆಗೆ, ಅಮೆರಿಕಗೆ ಭೇಟಿ ನೀಡಿದ್ದ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ಟ್ರಂಪ್ ಮಾತಿಗೆ ಬಗ್ಗದೆ, ಜಗಳ ಮಾಡಿಕೊಂಡು ಶ್ವೇತಭವನದಿಂದ ಹೊರ ನಡೆದಿದ್ದರು. ರಷ್ಯಾ, ಚೀನಾ, ಬ್ರೆಜಿಲ್ ನಾಯಕರೂ ಟ್ರಂಪ್‌ಗೆ ತಲೆಬಾಗುತ್ತಿಲ್ಲ. ಆದರೆ, ರಷ್ಯಾ-ಉಕ್ರೇನ್ ಯುದ್ಧವನ್ನೇ ನಿಲ್ಲಿಸಿದ ಮೋದಿ ಎಂದು ಅವರ ಭಕ್ತರು ಹೇಳಿಕೊಳ್ಳುತ್ತಿದ್ದರೂ, ಟ್ರಂಪ್‌ಗೆ ಹೆದರುತ್ತಿದ್ದಾರೆ. ಯಾರನ್ನು ಮೋದಿ ತಮ್ಮ ತಲೆ ಮೇಲೆ ಹೊತ್ತು ಮೆರೆಸಿದ್ದರೋ ಅವರು, ಈಗ ಮೋದಿ ತಲೆ ಮೇಲೆಯೇ ಹತ್ತಿ ಕುಳಿದಿದ್ದಾರೆ. ಪರಿಣಾಮ, ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.
ಮೋದಿ ಅವರದ್ದು ಇತಿಹಾಸ ಹೇಳುವಂತೆ ಮಹಾ ಪಲಾಯನವೇ ಸರಿ. ಆದರೆ, 1944ರ ಮಹಾ ಪಲಾಯನವು ಜರ್ಮನ್ ಯುದ್ಧತಂತ್ರವನ್ನು ಭೇದಿಸಿ, ನಾಝಿಗಳನ್ನು ಮಣಿಸುವ ಗುರಿ ಹೊಂದಿತ್ತು. ಧೀರತ್ವ-ದಟ್ಟತನವನ್ನು ಪ್ರದರ್ಶಿಸಿತ್ತು. ಆದರೆ, ಮೋದಿ ಅವರು ಮಹಾ ಪಲಾಯನವು ಹೆದರಿಕೆ, ತಲೆ ಮರೆಸಿಕೊಳ್ಳುವಿಕೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವಿಕೆಯ ಹೇಡಿತನವನ್ನು ಪ್ರದರ್ಶಿಸುತ್ತಿದೆ…!




