ಈ ದಿನ ಸಂಪಾದಕೀಯ |ಕಾರ್ಮಿಕರ ಹೊಟ್ಟೆ ಮೇಲೆ ಮತ್ತೆ ಮೋದಿ ಹೊಡೆತ – ಕಡುಕಠಿಣ ಪಿಎಫ್ ಹಿಂಪಡೆತ

Date:

2016ರಲ್ಲಿಯೂ ಮೋದಿ ಸರ್ಕಾರ ಭವಿಷ್ಯ ನಿಧಿ ಮೇಲೆ ಹಲವು ನಿರ್ಬಂಧಗಳನ್ನು ಹೇರಿತ್ತು. ಆ ನಿರ್ಬಂಧಗಳ ವಿರುದ್ಧ ಗಾರ್ಮೆಂಟ್‌ ಮಹಿಳಾ ಕಾರ್ಮಿಕರು ಸಿಡಿದೆದ್ದಿದ್ದರು. ಮೋದಿ ಸರ್ಕಾರವನ್ನು ಮಣಿಸಿದ್ದರು. ಅಂದು, ಮೋದಿ ಶರಣಾಗತಿಯ ಹಿಂದೆ ಬೆಂಗಳೂರಿನ ಗಾರ್ಮೆಂಟ್ ಸ್ತ್ರೀಶಕ್ತಿಯಿತ್ತು. ಇಡೀ ದೇಶದ ಸಂಘಟಿತ ಕಾರ್ಮಿಕ ವಲಯ ಬೆಂಗಳೂರಿನ ಹೆಣ್ಣುಮಕ್ಕಳಿಗೆ ಕೃತಜ್ಞರಾಗಿದ್ದರು.

ಕಾಯಿಲೆ, ಶಿಕ್ಷಣ, ಮದುವೆ, ವಸತಿ ಹಾಗೂ ಇತರೆ ವಿಶೇಷ ಉದ್ದೇಶಗಳಿಗೆ ಕಾರ್ಮಿಕರ ಭವಿಷ್ಯ ನಿಧಿಯಿಂದ ಹಣ ವಾಪಸು ಪಡೆಯುವುದರ ಮೇಲೆ ಮೋದಿ ಸರ್ಕಾರ ಹಲವು ಹೊಸ ನಿರ್ಬಂಧಗಳನ್ನು ಹೇರಿದೆ. ಈ ನಿರ್ಬಂಧಗಳು ಕಾರ್ಮಿಕರು-ಉದ್ಯೋಗಿಗಳ ಹಿತವನ್ನು ಕಾಯುವುದಿಲ್ಲ.

ಪಿಎಫ್ ದುಡ್ಡು ಜನರ ದುಡ್ಡು. ಜನರಿಂದ ಸರ್ಕಾರ ಕಡವಾಗಿ ಪಡೆದಿರುವ ದುಡ್ಡು. ತಾನು ಅದಕ್ಕೆ ಸರಳ ಬಡ್ಡಿಯನ್ನು ನೀಡುತ್ತಿದೆ. ಬಂಡವಾಳ ತೊಡಗಿಸಲು ಬಳಸಿಕೊಳ್ಳುತ್ತಿದೆ. ಎಲ್ಲಿ ಹೂಡುತ್ತಿದೆ, ಎಷ್ಟು ಲಾಭ ಗಳಿಸುತ್ತಿದೆ ಎಂಬ ವಿವರ ಮಾಹಿತಿಯನ್ನೂ ಬಂಡವಾಳದ ಅಸಲಿ ಮಾಲೀಕರಿಗೆ ನೀಡಬೇಕಿದೆ.

ಸುಮಾರು ಎಂಟೂವರೆ ವರ್ಷಗಳ ಹಿಂದೆ ಮೋದಿ ಸರ್ಕಾರ ಹೇರಿದ್ದ ಇಂತಹುದೇ ನಿರ್ಬಂಧಗಳ ವಿರುದ್ಧ ಬೆಂಗಳೂರಿನ ಗಾರ್ಮೆಂಟ್ ಕಾರ್ಮಿಕರು ಐತಿಹಾಸಿಕ ವಿರೋಧ ಪ್ರದರ್ಶಿಸಿದ್ದರು. ಪ್ರತಿಭಟನೆ ಹಿಂಸಾಚಾರ, ಅಗ್ನಿಸ್ಪರ್ಶಕ್ಕೆ ತಿರುಗಿತ್ತು. ತಿದ್ದುಪಡಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದರು. ಪ್ರತಿಭಟನೆಯ ಕಿಚ್ಚು ದೇಶವ್ಯಾಪಿ ಹಬ್ಬೀತೆಂದು ಹೆದರಿದ ಸರ್ಕಾರ ಶರಣಾಗತಿ ಸಾರಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿವೃತ್ತಿಗೆ ಮುನ್ನ ಶೇ.50ಕ್ಕಿಂತ ಹೆಚ್ಚು ಹಣ ಹಿಂಪಡೆತವನ್ನು ನಿಷೇಧಿಸಲಾಗಿತ್ತು. ಶೇ.50ರಷ್ಟು ಹಣದ ಮೇಲೆಯೂ ತೆರಿಗೆ ವಿಧಿಸಲಾಗಿತ್ತು. 2016ರ ಬಜೆಟ್ಟಿನಲ್ಲಿ ಘೋಷಿಸಲಾದ ಈ ನಿರ್ಬಂಧಗಳು ಅದೇ ವರ್ಷದ ಏಪ್ರಿಲ್‌ನಿಂದ ಜಾರಿಗೆ ಬರಲಿದ್ದವು. ಉದ್ಯೋಗ ಬಿಟ್ಟಾದರೂ ಶೇ.50ರಷ್ಟು ಭವಿಷ್ಯ ನಿಧಿಯನ್ನು ವಾಪಸು ಪಡೆಯುವ ಧಾವಂತ ಗಾರ್ಮೆಂಟ್ ಕಾರ್ಮಿಕ ಹೆಣ್ಣುಮಕ್ಕಳಲ್ಲಿ ಕಂಡಿತ್ತು. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ತೊರೆದರೆ, ಗಾರ್ಮೆಂಟ್ ಉದ್ಯಮವೇ ಕುಸಿದೀತೆಂಬ ಕಳವಳ ವ್ಯಕ್ತವಾಗಿತ್ತು.

ಮೋದಿ ಶರಣಾಗತಿಯ ಹಿಂದೆ ಬೆಂಗಳೂರಿನ ಗಾರ್ಮೆಂಟ್ ಸ್ತ್ರೀಶಕ್ತಿಯಿತ್ತು. ಹೀಗಾಗಿ ಇಡೀ ದೇಶದ ಸಂಘಟಿತ ಕಾರ್ಮಿಕ ವಲಯ ಬೆಂಗಳೂರಿನ ಹೆಣ್ಣುಮಕ್ಕಳಿಗೆ ಕೃತಜ್ಞರಾಗಿದ್ದರು.

ಈವರೆಗೆ ಕಾರ್ಮಿಕರು-ಉದ್ಯೋಗಿಗಳು ಶೇ.100ಕ್ಕೆ ನೂರರಷ್ಟು ಭವಿಷ್ಯ ನಿಧಿಯನ್ನು ವಿಶೇಷ ಕಾರಣಗಳಿಗಾಗಿ ಪಡೆಯಬಹುದಿತ್ತು. ಖಾತೆಯಲ್ಲಿ ಶೇ.25ರಷ್ಟು ಕನಿಷ್ಠ ಮೊತ್ತವನ್ನು ಸದಾ ಸರ್ವದಾ ಉಳಿಸಿರಲೇಬೇಕು ಎಂಬುದು ವಾರದ ಹಿಂದೆ ಜಾರಿಯಾಗಿರುವ ಹೊಸ ನಿಯಮ. ಅರ್ಥಾತ್ ಭವಿಷ್ಯ ನಿಧಿಯನ್ನು ಇಡಿಯಾಗಿ ಅಂದರೆ ನೂರಕ್ಕೆ ನೂರರಷ್ಟು ಹಿಂಪಡೆಯುವಂತಿಲ್ಲ.

ಹಾಗೆಯೇ ನಿವೃತ್ತಿಗೆ ಮುನ್ನವೇ ಅಂತಿಮ ಪಾವತಿ ಪಡೆಯುವ ಷರತ್ತುಗಳನ್ನೂ ಬದಲಾಯಿಸಲಾಗಿದೆ. ಕಾರ್ಮಿಕರು ಉದ್ಯೋಗ ತೊರೆದಲ್ಲಿ, ಪೂರ್ಣ ಪಿ.ಎಫ್ ಮೊತ್ತವನ್ನು ಎರಡು ತಿಂಗಳುಗಳ ಒಳಗಾಗಿ ಪಡೆದುಕೊಳ್ಳಬಹುದಿತ್ತು. ಇನ್ನು ಮುಂದೆ ಹೀಗೆ ಮಾಡುವಂತಿಲ್ಲ. ಕೆಲಸ ಬಿಟ್ಟ ಒಂದು ವರ್ಷದ ನಂತರ ಶೇ.75ರಷ್ಟು ಮೊತ್ತವನ್ನು ಪಡೆಯಬಹುದು. ಹೀಗೆ ಶೇ.75ರಷ್ಟನ್ನು ಹಿಂದಕ್ಕೆ ಪಡೆಯಬೇಕಿದ್ದರೆ ಆಕೆ ಅಥವಾ ಆತ ಒಂದು ವರ್ಷ ಕಾಲ ನಿರುದ್ಯೋಗಿಯಾಗಿರಬೇಕು. ಇನ್ನು ಪೂರ್ಣ ಮೊತ್ತವನ್ನು ಪಡೆಯಲು ಮೂರು ವರ್ಷಗಳ ಕಾಲ ಕಾಯಬೇಕು.

‘ಪಿ.ಎಫ್ ಹಣವನ್ನು ಇಡಿಯಾಗಿ ಪಡೆಯಲು ಉದ್ಯೋಗ ತೊರೆಯುವ ಪ್ರವೃತ್ತಿ ಹೆಚ್ಚಿತ್ತು. ಹೀಗೆ ಉದ್ಯೋಗ ಬಿಟ್ಟು ಮತ್ತೆ ಮತ್ತೆ ಖಾತೆಯಿಂದ ಪಡೆಯುವ ಕಾರಣ ಸೇವಾವಧಿ ಅಲ್ಲಲ್ಲಿ ಮೊಟಕಾಗಿ ಮುರಿದು ಹೋಗುತ್ತಿತ್ತು. ಪರಿಣಾಮವಾಗಿ ಉದ್ಯೋಗಿಗಳ ಖಾತೆಯಲ್ಲಿ ಅತ್ಯಂತ ಕಡಿಮೆ ಹಣ ಉಳಿದಿರುತ್ತಿತ್ತು. ಉದ್ಯೋಗಿಯ ಅಂತಿಮ ಪಿಎಫ್ ಪಿಂಚಣಿಯ ಮೊತ್ತವನ್ನು ಗೌಣವಾಗಿಸುತ್ತಿತ್ತು. ಹೊಸ ನಿಯಮಗಳಿಂದಾಗಿ ಉದ್ಯೋಗಿಯ ಸೇವಾವಧಿ ತುಂಡಾಗದೆ ಅಖಂಡವಾಗಿ ಉಳಿಯುತ್ತದೆ ಹಾಗೂ ಅಂತಿಮ ಪಿ.ಎಫ್ ಇಡುಗಂಟು ಗಣನೀಯ ಪ್ರಮಾಣದಲ್ಲಿ ಕೈಗೆ ಸಿಗುತ್ತದೆ. ಬಡ್ಡಿ ಹೆಚ್ಚಿನ ದರದಲ್ಲಿ ಲಭಿಸುತ್ತದೆ. ಕುಟುಂಬಕ್ಕೆ ಆರ್ಥಿಕ ಭದ್ರತೆ ದೊರೆಯುತ್ತದೆ. ಈ ಹಿಂದೆ ಮದುವೆಗೆ, ಇಲ್ಲವೇ ಮನೆ ಖರೀದಿಗೆ ಪಿಎಫ್ ಹಣ ಪಡೆಯಬೇಕಿದ್ದರು 5-7 ವರ್ಷಗಳ ಕಾಲ ಕಾಯಬೇಕಿತ್ತು. ಆದರೆ, ಹೊಸ ನಿಯಮಗಳ ಪ್ರಕಾರ ಒಂದೇ ವರ್ಷದಲ್ಲಿ ಪಡೆಯಬಹುದಾಗಿದೆ. ಶಿಕ್ಷಣ ಅಥವಾ ಕಾಯಿಲೆಯ ಕಾರಣಗಳಿಗೆ ಪಿಎಫ್ ಹಣ ಹಿಂಪಡೆಯುವ ಷರತ್ತುಗಳನ್ನೂ ಸಡಿಲಿಸಲಾಗಿದೆ. ಅಷ್ಟೇ ಅಲ್ಲದೆ ತುರ್ತು ಮತ್ತು ವಿಶೇಷ ಸಂದರ್ಭಗಳಲ್ಲಿ ವರ್ಷದಲ್ಲಿ ಎರಡು ಬಾರಿ ಬೇಷರತ್ತಾಗಿ ಹಣ ವಾಪಸು ಪಡೆಯಬಹುದು’ ಎಂಬುದು ಮೋದಿ ಸರ್ಕಾರದ ವಾದ.

ಹೊಸ ನಿಯಮಗಳು ಇಪಿಎಫ್ ಖಾತೆದಾರರು ಮತ್ತು ಪಿಂಚಣಿದಾರರ ಪಾಲಿಗೆ ಕಠೋರವಾಗಿವೆ ಎಂಬುದಾಗಿ ಪ್ರತಿಪಕ್ಷಗಳು ಟೀಕಿಸಿವೆ. ತಮ್ಮದೇ ಕಷ್ಟದ ದುಡಿಮೆಯ ಹಣ ವಾಪಸು ಪಡೆಯಲು ದೀರ್ಘ ಕಾಲ ಕಾಯಬೇಕಿರುವ ಶಿಕ್ಷೆ ವಿಧಿಸಲಾಗಿದೆ. ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳು ತಮ್ಮ ಪಿಎಫ್ ಹಣಕ್ಕಾಗಿ ಒಂದು ವರ್ಷ ಕಾಲ ಬರಿಗೈಲಿ ಕಾಯಬೇಕಾಗಿ ಬಂದಿದೆ. ಈ ಮುನ್ನ ಎರಡು ತಿಂಗಳೊಳಗೆ ವಾಪಸು ಪಡೆಯಬಹುದಿತ್ತು. ಶೇ.87ರಷ್ಟು ಖಾತೆಗಳಲ್ಲಿರುವ ಇಪಿಎಫ್ ಹಣ ತಲಾ ಒಂದು ಲಕ್ಷಕ್ಕಿಂತ ಕಡಿಮೆ. ಈ ಪೈಕಿ ಶೇ.50ರಷ್ಟು ಖಾತೆಗಳಲ್ಲಿರುವ ಹಣ 20 ಸಾವಿರ ರುಪಾಯಿಗಿಂತ ಕಡಿಮೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಅಧಿಕಕೃತ ಅಂಕಿಅಂಶಗಳೇ ಸಾರಿವೆ. ಅತ್ಯಂತ ಕಡಿಮೆ ಕೂಲಿ ಪಾವತಿಯೇ ಈ ದುಸ್ಥಿತಿಯ ಮೂಲ ಕಾರಣ. ಇಂತಹ ಕಠೋರ ವಾಸ್ತವದಲ್ಲಿ ಖಾತೆಯಲ್ಲಿ ಕನಿಷ್ಠ ಶೇ.25ರಷ್ಟು ಹಣವನ್ನು ಉಳಿಸಿರಲೇಬೇಕೆಂಬ ನಿಯಮ ಜಾರಿಗೆ ತಂದಿರುವುದು ದುರ್ಬಲರ ಮೇಲೆ ನಡೆಸಿರುವ ದೌರ್ಜನ್ಯವೇ ಸರಿ ಎಂದು ಕಾರ್ಮಿಕ ಸಂಘಟನೆಗಳೂ ಖಂಡಿಸಿವೆ.  

ಪಿ.ಎಫ್ ಹಣ ಹಿಂಪಡೆಯುವ ನಿಯಮಗಳಿಗೆ 2016ರಲ್ಲಿ ಹೀಗೆಯೇ ತಿದ್ದುಪಡಿಗಳನ್ನು ತಂದಿತ್ತು ಮೋದಿ ಸರ್ಕಾರ. ಈ ತಿದ್ದುಪಡಿಗಳು ಕಡಿಮೆ ದಿನಗೂಲಿ ಪಡೆಯುತ್ತಿದ್ದ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆದಿದ್ದವು. ಬೆಂಗಳೂರಿನ ಸಿದ್ಧ ಉಡುಪು ಉದ್ಯಮದ (ಗಾರ್ಮೆಂಟ್) ಕಾರ್ಮಿಕ ಹೆಣ್ಣುಮಕ್ಕಳಿಂದ ದೈತ್ಯ ಪ್ರತಿಭಟನೆ ಸಿಡಿದಿತ್ತು. ಕಣ್ಣಮುಚ್ಚಿ ತೆರೆಯುವುದರ ಒಳಗೆ ನಗರದ ಹಲವು ಭಾಗಗಳಿಗೆ ಹಬ್ಬಿತು. ಭವಿಷ್ಯ ನಿಧಿಯು ಗಾರ್ಮೆಂಟ್ ಕಾರ್ಮಿಕರ ಏಕೈಕ ಉಳಿತಾಯ ಆಗಿತ್ತು. ತುರ್ತು ಖರ್ಚುಗಳಿಗೆ ಈ ಉಳಿತಾಯದಿಂದ ಹಣ ಪಡೆಯುತ್ತಿದ್ದರು. ಹೊಸ ನಿಯಮಗಳು ಈ ದಾರಿಗೆ ಕಲ್ಲುಮುಳ್ಳು ಜಡಿದಿದ್ದವು. ಬಹುತೇಕ ಗಾರ್ಮೆಂಟ್ ಕಾರ್ಮಿಕ ಹೆಣ್ಣುಮಕ್ಕಳು ಮದುವೆಯಾದ ನಂತರ ಕೆಲಸ ಬಿಡುತ್ತಿದ್ದರು. ಹೀಗೆ ಕೆಲಸ ಬಿಟ್ಟ ನಂತರ ತಮ್ಮದೇ ಉಳಿತಾಯ ಕೈಗೆ ಸಿಗಲು ಅವರು ನಿವೃತ್ತಿ ವಯಸ್ಸಿನ ತನಕ ಕಾಯಬೇಕಾಗಿತ್ತು. ಹೆಣ್ಣುಮಕ್ಕಳ ಈ ವಿರೋಧ ಅದೆಷ್ಟು ಪರಿಣಾಮಕಾರಿ ಆಗಿತ್ತೆಂದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮೀಡಿಯಾ ಕೂಡ ಎದ್ದು ಕುಳಿತು ಸುದ್ದಿ ಮಾಡಿತು. ಮೋದಿ ಸರ್ಕಾರದಂತಹ ಮೋದಿ ಸರ್ಕಾರವೂ ಮಹಿಳಾ ಕಾರ್ಮಿಕ ಶಕ್ತಿಯ ಮುಂದೆ ಮೊಣಕಾಲು ಊರಬೇಕಾಯಿತು. ತಿದ್ದುಪಡಿಗಳನ್ನು ವಾಪಸು ತೆಗೆದುಕೊಳ್ಳಲಾಯಿತು.

ಈ ಲೇಖನ ಓದಿದ್ದೀರಾ?: ಮಿತಿ ಮೀರಿದ ಭ್ರಷ್ಟಾಚಾರ ನೈತಿಕತೆಯ ಅಧಃಪತನದ ಸಂಕೇತವೇ?

ಆಗ ತಂದಿದ್ದ ತಿದ್ದುಪಡಿ ಕೂಡ ನಿವೃತ್ತಿಗೆ (58 ವರ್ಷ) ಮುನ್ನ ಪಿಎಫ್ ಹಣವನ್ನು ಇಡಿಯಾಗಿ ಹಿಂಪಡೆದುಕೊಳ್ಳುವುದನ್ನು ತಡೆಯಲಾಗಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ನಿರುದ್ಯೋಗಿಗಳಾದ್ದಲ್ಲಿ ಮಾತ್ರವೇ ಇಡೀ ಮೊತ್ತವನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. 58 ವರ್ಷಗಳ ನಿವೃತ್ತಿಗೆ ಮುನ್ನ ಪಿಎಫ್ ಹಣ ಪಡೆಯುವುದೇ ಆಗಿದ್ದಲ್ಲಿ, ಉದ್ಯೋಗದಾತರ ಪಾಲಿನ ಪಿ.ಎಫ್ ವಂತಿಗೆ ದೊರೆಯುತ್ತಿರಲಿಲ್ಲ. ಕೇವಲ ಉದ್ಯೋಗಿಯ ಪಾಲಿನ ವಂತಿಗೆ ಮತ್ತು ಅದರ ಮೇಲಿನ ಬಡ್ಡಿಯನ್ನು ಮಾತ್ರವೇ ಹಿಂಪಡೆಯಬಹುದಿತ್ತು. ಅಷ್ಟೇ ಅಲ್ಲ, ಹೀಗೆ ಹಿಂಪಡೆಯಲಾಗುವ ಶೇ.60ಷ್ಟು ಪಿ.ಎಫ್ ಹಣದ ಮೇಲೆ ತೆರಿಗೆ ವಿಧಿಸಲಾಗಿತ್ತು. ಆದರೆ, ಶೇ.60ರಷ್ಟು ಪಿಎಫ್ ಬಡ್ಡಿಯ ಮೇಲೆ ತೆರಿಗೆ ಹೇರಿಕೆ ಇಂದಿಗೂ ಮುಂದುವರೆದಿದೆ.

2016ರಲ್ಲಿ ನಿರ್ಬಂಧಗಳನ್ನು ವಿಧಿಸಿದಾಗ ಪಿಂಚಣಿ ಮುಕ್ತ ಸಮಾಜ ನಿರ್ಮಿಸುವುದಾಗಿ ಬೊಗಳೆ ಬಿಡಲಾಗಿತ್ತು. ಆದರೆ ಈ ಬಾರಿಯ ನಿರ್ಬಂಧ ಹೇರಿಕೆಗೆ ಸಮರ್ಥನೆಯಾಗಿ ಬಡ ಕಾರ್ಮಿಕರು ಪಿಂಚಣಿಯಿಂದ ವಂಚಿತರಾಗುತ್ತಾರೆ ಎಂಬ ನೆಪ ಒಡ್ಡಲಾಗಿದೆ. ಎಂತಹ ವಿರೋಧಾಭಾಸವಿದು!

ಬಿಹಾರದಲ್ಲಿ ವೋಟು ಖರೀದಿಸಲು ನಿರುದ್ಯೋಗಿ ಯುವಜನರ ಖಾತೆಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ, ಮಹಿಳೆಯರ ಖಾತೆಗಳಿಗೆ 10 ಸಾವಿರ ರೂಪಾಯಿ ಹಾಕುವ ಮೋದಿಯವರು, 58 ವರ್ಷ ದುಡಿದವರಿಗೆ ನೀಡುವ ಪಿಂಚಣಿ 1,500 ಸಾವಿರ ರೂಪಾಯಿ.

ತಿಂಗಳಿಗೆ ಆರು ಸಾವಿರ ರೂಪಾಯಿಗಿಂತ ಅಧಿಕ ಪಿಎಫ್ ಪಿಂಚಣಿ ಪಡೆಯುವವರ ಪ್ರಮಾಣ ಶೇ.0.65 ಮಾತ್ರ. ಒಟ್ಟು ಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಕಾರ್ಮಿಕರಿಗೆ ದೊರೆಯಬಹುದಾದ ಪಿ.ಎಫ್ ಪಿಂಚಣಿಯಾದರೂ ಎಷ್ಟು? ತಿಂಗಳಿಗೆ 1,500 ರೂಪಾಯಿಗಳಷ್ಟು ಮತ್ತು ಅದಕ್ಕಿಂತ ಕಡಿಮೆ! ಕುಟುಂಬವೊಂದರ ಹೊಟ್ಟೆಬಟ್ಟೆಗೆ ಇಷ್ಟು ಸಾಕೆಂಬ ಮಾತನ್ನು ‘ಜೋಳಿಗೆ ಹೆಗಲಿಗೆ ಏರಿಸಿ ಅಂತಾರಾಷ್ಟ್ರೀಯ ಬ್ರ್ಯಾಂಡೆಡ್ ದಿರಿಸು ಧರಿಸಿ, ಎಂಟು ಸಾವಿರ ಕೋಟಿ ರುಪಾಯಿ ತೆತ್ತು ಖರೀದಿಸಿರುವ ವಿಶೇಷ ವಿಮಾನದಲ್ಲಿ ಹೊರಟೇ ಬಿಡುವ ಫಕೀರ’ ನರೇಂದ್ರ ಮೋದಿ ಮಾತ್ರವೇ ಹೇಳಬಲ್ಲರು.

ದೇಶದಲ್ಲಿ ಉದ್ಯೋಗಾವಕಾಶಗಳು ಪಾತಾಳಕ್ಕೆ ಕುಸಿದಿವೆ. ಮುಂಬರುವ ದಿನಗಳು ಇನ್ನೂ ದುರ್ಭರವಾಗಿ ಹಾಹಾಕಾರ ಏಳಲಿದೆ ಎಂಬುದನ್ನು ಮೋದಿ ಸರ್ಕಾರ ಮುಂದಾಗಿಯೇ ಊಹಿಸಿದೆಯೇ? ಹೀಗಾಗಿಯೇ ಶೇ.25ರಷ್ಟು ಕನಿಷ್ಠ ಮೊತ್ತವನ್ನು ಪಿಎಫ್ ಖಾತೆಯಲ್ಲಿ ಸದಾ ಇಟ್ಟಿರಲೇಬೇಕೆಂದು ಕಡ್ಡಾಯ ಮಾಡಿದೆಯೇ ಎಂಬ ಪ್ರಶ್ನೆಗಳು ತಲೆದೋರಿವೆ.

ಸಂಘಟಿತ ವಲಯದ ಕಾರ್ಮಿಕರ ಪರಿಸ್ಥಿತಿಯೇ ಇಷ್ಟು ಹದಗೆಟ್ಟಿದೆಯೆಂದರೆ ಅಸಂಘಟಿತ ವಲಯದ ತಬ್ಬಲಿ ಕಾರ್ಮಿಕರನ್ನು ಕೇಳುವವರೇ ಇಲ್ಲವಾಗಿದೆ.

ಸರ್ಕಾರದ ತೀರ್ಮಾನಗಳು ಬೇರುಮಟ್ಟಕ್ಕೆ ತಲುಪಲು ಸಮಯ ಹಿಡಿಯುತ್ತದೆ. ಅಕ್ಟೋಬರ್ 13ರಂದು ಪ್ರಕಟಿಸಲಾಗಿರುವ ನಿರ್ಬಂಧಗಳೂ ಅಷ್ಟೇ. 2016ರ ಪ್ರತಿಭಟನೆ ಮತ್ತೊಮ್ಮೆ ಸಿಡಿಯುವುದೇ? ದುಡಿಯುವ ವರ್ಗಗಳ ಎಚ್ಚರವನ್ನೇ ಅವಲಂಬಿಸಿದ ಅಂಶವಿದು. ಅಂದ ಹಾಗೆ ಅವರ ನಡುವನ್ನು ಮುರಿದು ಮೂಲೆಗೆ ತಳ್ಳಿ ವರ್ಷಗಳೇ ಉರುಳಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....