ಆರ್ಎಸ್ಎಸ್ ಕುರಿತು ಪಟೇಲರ ಸ್ಪಷ್ಟ ಮತ್ತು ಕಠಿಣ ನಿಲುವುಗಳನ್ನು ಮೋದಿ ಸರ್ಕಾರ ಮರೆಮಾಚುತ್ತಿದೆ. ಆರಂಭದಲ್ಲಿ ಆರ್‌ಎಸ್‌ಎಸ್‌ನ ಕೆಲಸಗಳನ್ನು ಮೆಚ್ಚಿದ್ದ ಪಟೇಲರ ಕೆಲವು ಹೇಳಿಕೆಗಳನ್ನು ಬಳಸಿಕೊಂಡು, 'ಪಟೇಲರು ಕಾಂಗ್ರೆಸ್‌ನಲ್ಲಿದ್ದ ಸಂಘದ ಪರವಾದ ವ್ಯಕ್ತಿ'ಯೆಂದು ಬಿಂಬಿಸುತ್ತಿದೆ.
ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿ, ಕಾಂಗ್ರೆಸ್ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ‘ಏಕತಾ ನಡಿಗೆ’ ಆರಂಭಿಸಿದೆ. ದೇಶಾದ್ಯಂತ ಸ್ಥಳೀಯವಾಗಿ ನಡೆಯುವ ಅಭಿಯಾನವು ಪಟೇಲರ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುತ್ತದೆ. ಅಕ್ಟೋಬರ್ 31ರಿಂದ ನವೆಂಬರ್ 25ರವರೆಗೆ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಅಭಿಯಾನವು 8ರಿಂದ 10 ಕಿ.ಮೀ ನಡಿಗೆಯನ್ನು ಒಳಗೊಂಡಿರಲಿದೆ. ಜೊತೆಗೆ, ಕಿರುಚಿತ್ರ ನಿರ್ಮಾಣದಂತಹ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ಪಟೇಲರ ಜೀವನ ಮತ್ತು ಆದರ್ಶಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಸರ್ಕಾರ ಹೇಳಿಕೊಂಡಿದೆ.
ಪಟೇಲರು ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಒಗ್ಗಟ್ಟಿನ ಪ್ರತೀಕವಾಗಿದ್ದ ಪಟೇಲರನ್ನು ಸಮಾಜವನ್ನು ವಿಭಜಿಸುವ, ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಿಜೆಪಿ ಆರಾಧಿಸಲು ಮುಂದಾಗಿದೆ. ಇದು, ಅಪಾಯಕಾರಿ ಬೆಳವಣಿಗೆ. ಅಷ್ಟೇ ಅಲ್ಲ, ಪಟೇಲರನ್ನು ಹೈಜಾಕ್ ಮಾಡುವ ಬಿಜೆಪಿ-ಆರ್‌ಎಸ್‌ಎಸ್‌ನ ಕುತಂತ್ರವೂ ಆಗಿದೆ.
ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತದ ‘ಐರನ್ ಮ್ಯಾನ್’ ಎಂದು ಕರೆಸಿಕೊಂಡವರು. 565 ರಾಜ್ಯಗಳನ್ನು ಒಗ್ಗೂಡಿ ಭಾರತ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವಹಿಸಿದವರು. ಅಂತೆಯೇ, ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದು, ಧರ್ಮಾಧಾರಿತ ವಿಭಜನೆಯಲ್ಲಿ ತೊಡಗಿದ್ದ ಆರ್‌ಎಸ್‌ಎಸ್ ಕುರಿತು ಕಠಿಣ ನಿಲುವು ಹೊಂದಿದ್ದವರು. ಆರ್‌ಎಸ್‌ಎಸ್ ಅನ್ನು ‘ಸಾಮುದಾಯಿಕ ವಿಷ’ ಹರಡುವ ಸಂಸ್ಥೆ ಎಂದಿದ್ದರು.
ಮೋದಿ ಆಡಳಿತದಲ್ಲಿ ಪಟೇಲರ ನಿಲುವುಗಳನ್ನೇ ತಿರುಚಿ, ಅವರು ಆರ್‌ಎಸ್‌ಎಸ್ ಕುರಿತು ಮೃದುಧೋರಣೆ ಹೊಂದಿದ್ದರು. ಕಾಂಗ್ರೆಸ್‌ನಲ್ಲಿದ್ದ ಆರ್‌ಎಸ್‌ಎಸ್ ಮನುಷ್ಯ ಎಂದೆಲ್ಲ ಬಿಂಬಿಸಿ, ಅವರನ್ನು ಹೈಜಾಕ್ ಮಾಡಲಾಗುತ್ತಿದೆ. ಪಟೇಲರ ಹೆಸರು, ಮುಖವನ್ನು ಬಳಸಿಕೊಂಡು ಏಕತಾ ಪ್ರತಿಮೆ, ಏಕತಾ ನಡಿಗೆಗಳನ್ನು ನಡೆಸಲಾಗುತ್ತಿದೆ.
ಭಾರತ ಸ್ವಾತಂತ್ರ್ಯಗೊಂಡ ಆರಂಭದಲ್ಲಿ, ಆಗಷ್ಟೇ ಚಿಗುರುತ್ತಿದ್ದ ಸಂಘದ ಕುರಿತು ಪಟೇಲರು ಒಳ್ಳೆಯ ಮಾತನಾಡಿದ್ದರು ಎಂಬುದನ್ನು ಅಲ್ಲಗಳೆಯಲಾಗದು. 1947ರ ಡಿಸೆಂಬರ್ 18ರಂದು ಜೈಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ, ಅವರು ಆರ್‌ಎಸ್‌ಎಸ್ ಯುವಕರ ಉತ್ಸಾಹವನ್ನು ಶ್ಲಾಘಿಸಿದ್ದರು. ಈ ಶಕ್ತಿಯನ್ನು ರಚನಾತ್ಮಕ ಹಾದಿಗೆ ತರಬೇಕಿದೆ ಎಂದೂ ಹೇಳಿದ್ದರು.
1948ರ ಜನವರಿ 6ರಂದು ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಕೋಮುವಾದಿ ಧೋರಣೆಯನ್ನು ಖಂಡಿಸುತ್ತಲೇ, ಸಂಘದ ಪರವಾಗಿ ಮಾತನಾಡಿದ್ದರು. ”ಅಧಿಕಾರದಲ್ಲಿರುವವರು ಬಲಪ್ರಯೋಗದ ಮೂಲಕ ಆರ್‌ಎಸ್‌ಎಸ್‌ಅನ್ನು ಹತ್ತಿಕ್ಕಬಹುದು ಎಂಬ ಭಾವ ಹೊಂದಿದ್ದಾರೆ. ಆದರೆ, ದಂಡ ಬಳಸಿ, ಸಂಘಟನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ದಂಡವು ಕಳ್ಳರು ಮತ್ತು ಡಕಾಯಿತರಿಗೆ ಮಾತ್ರ. ನಾವು ಸಂಘಪರಿವಾದವರ ತಪ್ಪು ಆಲೋಚನಾ ಪ್ರವೃತ್ತಿಯನ್ನು ಮಾತ್ರ ಬದಲಿಸಬೇಕು. ಅವರನ್ನು ಪ್ರೀತಿಯಿಂದ ಗೆಲ್ಲಬೇಕು” ಎಂದಿದ್ದರು.
ಆದರೆ, ಕೆಲವೇ ದಿನಗಳಲ್ಲಿ ಆರ್‌ಎಸ್‌ಎಸ್ ಕುರಿತು ಪಟೇಲರಿಗಿದ್ದ ನಿಲುವುಗಳು ಬದಲಾದವು. ಸಂಘದ ಕಾರ್ಯಕರ್ತ 1948ರ ಜನವರಿ 30ರಂದು ಗಾಂಧಿ ಅವರನ್ನು ಸಂಘದ ಕಾರ್ಯಕರ್ತ ನಾಥುರಾಮ್ ಗೋಡ್ಸೆ ಹತ್ಯೆಗೈದ ಬಳಿಕ, ಆರ್‌ಎಸ್ಎಸ್ ಕುರಿತು ಪಟೇಲರ ನಿಲುವು ಕಟುವಾದವು. ಗಾಂಧಿ ಹತ್ಯೆಯಲ್ಲಿ ಸಂಘ ನೇರವಾಗಿ ಭಾಗಿಯಾಗದೇ ಇದ್ದರೂ, ಸಿಹಿ ಹಂಚಿ ಸಂಭ್ರಮಿಸಿದೆ. ‘ಕೋಮುವಿಷ’ ಹರಡುತ್ತಿದೆ ಎಂದು ಆಕ್ರೋಶಗೊಂಡಿದ್ದರು. ಅದೇ ವರ್ಷದ ಫೆಬ್ರವರಿ 5ರಂದು ಆರ್‌ಎಸ್‌ಎಸ್ ಮೇಲೆ ಗೃಹ ಸಚಿವರಾದ ಪಟೇಲರು ನಿಷೇಧ ಹೇರಿದರು.
ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಗೆ ಬರೆದ ಪತ್ರದಲ್ಲಿ, ‘ಆರ್‌ಎಸ್‌ಎಸ್‌ನ ಚಟುವಟಿಕೆಗಳು ಸರ್ಕಾರ ಮತ್ತು ರಾಜ್ಯದ ಅಸ್ತಿತ್ವಕ್ಕೆ ಸ್ಪಷ್ಟ ಬೆದರಿಕೆ ಉಂಟುಮಾಡುತ್ತವೆ’ ಎಂದು ಪಟೇಲರು ಟೀಕಿಸಿದ್ದರು. 1948ರ ಸೆಪ್ಟೆಂಬರ್‌ನಲ್ಲಿ ಗೋಲ್ವಾಲ್ಕರ್‌ಗೆ ಬರೆದ ಪತ್ರದಲ್ಲಿ, ‘ಆರ್‌ಎಸ್‌ಎಸ್ ಪ್ರತೀಕಾರದ ಹಪಾಹಪಿಗೆ ಬಿದ್ದಿದೆ. ಮುಸ್ಲಿಮರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದೆ. ಅದರ ನಾಯಕರ ಎಲ್ಲ ಭಾಷಣಗಳು ಕೋಮು ವಿಷದಿಂದ ತುಂಬಿವೆ. ಆ ವಿಷದ ಅಂತಿಮ ಪರಿಣಾಮವಾಗಿ, ದೇಶವು ಗಾಂಧೀಜಿ ಅವರನ್ನು ಕಳೆದುಕೊಂಡಿತು’ ಎಂದಿದ್ದರು.
1949ರಲ್ಲಿ ಜೈಪುರದಲ್ಲಿ ಮಾತನಾಡಿದ್ದ ಪಟೇಲರು, ”ಆರ್‌ಎಸ್‌ಎಸ್ ಅಥವಾ ಯಾವುದೇ ಇತರ ಕೋಮು ಸಂಘಟನೆಯು ದೇಶವನ್ನು ಗುಲಾಮಗಿರಿ ಅಥವಾ ವಿಘಟನೆಯ ಹಾದಿಗೆ ತಳ್ಳಲು ನಾವು ಬಿಡುವುದಿಲ್ಲ. ನಾನು ಸೈನಿಕ. ನನ್ನ ಕಾಲದಲ್ಲಿ ನಾನು ಅಸಾಧಾರಣ ಶಕ್ತಿಗಳ ವಿರುದ್ಧ ಹೋರಾಡಿದ್ದೇನೆ. ದೇಶದ ಒಳಿತಿಗಾಗಿ ಅಂತಹ ಹೋರಾಟ ಅಗತ್ಯವೆಂದು ನಾನು ಭಾವಿಸಿದರೆ, ನನ್ನ ಸ್ವಂತ ಮಗನ ವಿರುದ್ಧವೂ ಹೋರಾಡಲು ನಾನು ಹಿಂಜರಿಯುವುದಿಲ್ಲ” ಎಂದು ಹೇಳಿದ್ದರು.
ಗೋಲ್ವಾಲ್ಕರ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿರಂತರ ಪತ್ರ ವ್ಯವಹಾರ ಮತ್ತು ಮನವಿಗಳಿಗೆ ಪಟೇಲ್ ಸ್ಪಂದಿಸಿದ್ದೂ ಇದೆ. ಅದೇ ಕಾರಣಕ್ಕಾಗಿ, ‘ಸಂಘವು ರಾಷ್ಟ್ರೀಯ ಧ್ವಜವನ್ನು ಒಪ್ಪಿಕೊಳ್ಳಬೇಕು, ತನ್ನ ರಹಸ್ಯ ಚಟುವಟಿಕೆಗಳನ್ನು ರದ್ದುಗೊಳಿಸಬೇಕು, ಸಂವಿಧಾನದ ಮೇಲೆ ಗೌರವ ಇಟ್ಟುಕೊಳ್ಳಬೇಕು, ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ತನ್ನ ನಿಲುವು, ಗುರಿ, ಧೋರಣೆಗಳ ಕುರಿತ ಪ್ರಣಾಳಿಕೆ(ಸಂವಿಧಾನ)ಯನ್ನು ಲಿಖಿತವಾಗಿ ಪ್ರಕಟಿಸಬೇಕು’ ಎಂಬ ಕೆಲವು ಷರತ್ತುಗಳನ್ನು ವಿಧಿಸಿ ಆರ್‌ಎಸ್‌ಎಸ್ ಮೇಲಿನ ನಿಷೇಧವನ್ನು 1949ರ ಜುಲೈ 11ರಂದು ಪಟೇಲರು ತೆಗೆದುಹಾಕಿದ್ದರು.
ಈ ಲೇಖನ ಓದಿದ್ದೀರಾ?: ಮಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ; ತನ್ನ ಅರ್ಥವನ್ನೇ ಕಳೆದುಕೊಂಡ ‘ಶಾಂತಿ’
ಪಟೇಲರ ನಿಲುವುಗಳು ರಾಷ್ಟ್ರೀಯ ಏಕತೆಯ ಮೇಲೆ ಕೇಂದ್ರೀಕರಿಸಿದ್ದವು. ಎಲ್ಲ ಸಮುದಾಯ ಮತ್ತು ವರ್ಗಗಳ ಜನರು ಭಾರತದಲ್ಲಿ ಒಗ್ಗಟ್ಟಿನಿಂದ ಬದುಕಬೇಕು ಎಂಬುದು ಪಟೇಲರ ಆಶಯವೂ ಆಗಿತ್ತು. ಅದಕ್ಕಾಗಿ, ಭಾರತದೊಂದಿಗೆ ಸೇರಲು ನಿರಾಕರಿಸಿದ್ದ ಕೆಲವು ರಾಜ ಪ್ರಭುತ್ವ-ಪ್ರಾಂತ್ಯಗಳ ಮೇಲೆ ದಾಳಿ, ದಮನ, ಮಾತುಕತೆ, ಮನವೊಲಿಸುವಿಕೆಗೆ ಮುಂದಾಗಿದ್ದರು. ಭಾರತವನ್ನು ಏಕತೆಯ ರಾಷ್ಟ್ರವಾಗಿಸುವತ್ತ ಗಮನ ಕೇಂದ್ರೀಕರಿಸಿದ್ದರು. ಆದರೆ, ಆರ್‌ಎಸ್‌ಎಸ್ ‘ಹಿಂದು ರಾಷ್ಟ್ರೀಯತೆ’ಯನ್ನು ಪ್ರತಿಪಾದಿಸುತ್ತಿತ್ತು. ಮುಖ್ಯವಾಗಿ ಹಿಂದು-ಮುಸ್ಲಿಮರನ್ನು ವಿಭಜಿಸುವ ಗುರಿಯನ್ನು ಹೊಂದಿತ್ತು. ಆರ್‌ಎಸ್‌ಎಸ್‌ನ ‘ವಿಭಜನೆ’ಯ ಸೂತ್ರಕ್ಕೆ ವಿರುದ್ಧವಾಗಿ ಪಟೇಲರು ‘ಏಕತೆ’ಯ ತತ್ವವನ್ನು ಪ್ರತಿಪಾದಿಸಿದ್ದರು.
ಆರ್‌ಎಸ್‌ಎಸ್ ಕುರಿತು ಪಟೇಲರ ಸ್ಪಷ್ಟ ಮತ್ತು ಕಠಿಣ ನಿಲುವುಗಳನ್ನು ಮೋದಿ ಸರ್ಕಾರ ಮರೆಮಾಚುತ್ತಿದೆ. ಆರಂಭದಲ್ಲಿ ಆರ್‌ಎಸ್‌ಎಸ್‌ನ ಕೆಲಸಗಳನ್ನು ಮೆಚ್ಚಿದ್ದ ಪಟೇಲರ ಕೆಲವು ಹೇಳಿಕೆಗಳನ್ನು ಬಳಸಿಕೊಂಡು, ‘ಪಟೇಲರು ಕಾಂಗ್ರೆಸ್‌ನಲ್ಲಿದ್ದ ಸಂಘದ ಪರವಾದ ವ್ಯಕ್ತಿ’ಯೆಂದು ಬಿಂಬಿಸುತ್ತಿದೆ. ಪಟೇಲರನ್ನು ಹೈಜಾಕ್ ಮಾಡುತ್ತಿದೆ. ಪಟೇಲರ ಬೃಹತ್ ಪ್ರತಿಮೆ ನಿಲ್ಲಿಸಿ, ಪಟೇಲರು ಸಂಘದ ಆಸ್ತಿಯೆಂದು ಹೇಳಿಕೊಳ್ಳುತ್ತಿದೆ. ಆರ್‌ಎಸ್‌ಎಸ್ ಕುರಿತ ಅವರ ವಿಮರ್ಶೆಗಳನ್ನು ಮರೆಮಾಚುತ್ತದೆ.
ಆದರೆ, ಪಟೇಲರು ಆರ್‌ಎಸ್‌ಎಸ್ ಧೋರಣೆಯನ್ನು ನಿಷ್ಠುರವಾಗಿ ಟೀಕಿಸಿದ್ದರು. ಮನುಸ್ಮೃತಿಯೇ ತಮ್ಮ ಸಂವಿಧಾನ ಎನ್ನುತ್ತಿದ್ದ ಆರ್‌ಎಸ್‌ಎಸ್‌ಗೆ ಭಾರತೀಯ ಸಂವಿಧಾನದ ಪಾಠ ಮಾಡಿದ್ದರು. ಪ್ರಜಾತಾಂತ್ರಿಕ ಹೋರಾಟದ ಬಗ್ಗೆ ಕಿವಿಹಿಂಡಿ ಬುದ್ಧಿ ಹೇಳಿದ್ದರು ಎಂಬ ಇತಿಹಾಸವನ್ನು ಬಿಜೆಪಿ ಎಂದಿಗೂ ಅಳಿಸಲು ಸಾಧ್ಯವಿಲ್ಲ. ಪಟೇಲರನ್ನು ಹೈಜಾಕ್ ಮಾಡುವುದು ಬಿಜೆಪಿ-ಆರ್‌ಎಸ್‌ಎಸ್‌ಗೆ ಸುಲಭವೂ ಅಲ್ಲ.




