ಈ ದಿನ ಸಂಪಾದಕೀಯ | ವಾಯು ಮಾಲಿನ್ಯದ ಚರ್ಚೆಯೇ ಇಲ್ಲದೆ ಮುಗಿಯಿತು ಸಂಸತ್ ಅಧಿವೇಶನ!

Date:

ವಾಯು ಮಾಲಿನ್ಯವು ಚರ್ಚೆಯಿಂದ ತಪ್ಪಿಸಿಕೊಂಡಿದ್ದಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಿಪಕ್ಷಗಳನ್ನು ದೂಷಿಸುತ್ತಿದ್ದಾರೆ. ಆಳುವ ಸರ್ಕಾರವು ತನ್ನ ಯಥಾಪ್ರಕಾರದಂತೆ ವಿಪಕ್ಷಗಳನ್ನು ದೂರುತ್ತಲೇ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದೆ. 

ರಾಷ್ಟ್ರ ರಾಜಧಾನಿ ದೆಹಲಿಯನ್ನು ವಾಯು ಮಾಲಿನ್ಯ ಆಕ್ರಮಿಸಿಕೊಂಡಿದೆ. ಮಕ್ಕಳು, ವೃದ್ಧರಿಗೆ ಜೀವನ್ಮರಣದ ಪ್ರಶ್ನೆ ಎದುರಾಗಿದೆ. ದೆಹಲಿಯ ಸುಮಾರು 82% ನಿವಾಸಿಗಳು ಈಗಾಗಲೇ ವಾಯು ಮಾಲಿನ್ಯ ಸಂಬಂಧಿತ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮಾಲಿನ್ಯವು ಜನರನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ.

ದೆಹಲಿಯ ‘ಗಾಳಿ ಗುಣಮಟ್ಟ ಸೂಚ್ಯಂಕ’ (ಎಕ್ಯೂಐ) 358ರಿಂದ 498ರವರೆಗೆ ತಲುಪಿದೆ. ಆನಂದ್ ವಿಹಾರ್, ಜಹಾಂಗೀರಪುರಿಯಂತಹ ಕೆಲವು ಪ್ರದೇಶಗಳಲ್ಲಿ AQI 400-500ಅನ್ನು ಮೀರಿದೆ. ಗಾಳಿಯಲ್ಲಿ PM2.5 ಮತ್ತು PM10 ವಸ್ತುಗಳು ಅಧಿಕವಾಗಿವೆ. ದಟ್ಟವಾದ ಹೊಗೆ-ಮಂಜು ಕವಿದಿದ್ದು, ಗೋಚರತೆ ಕಡಿಮೆಯಾಗಿದೆ. ಉಸಿರಾಟ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಾಡುತ್ತಿವೆ.

ಆದರೆ, ವಾಯು ಮಾಲಿನ್ಯ ಭೀಕರ ಹಂತದಲ್ಲಿರುವ ಸಮಯದಲ್ಲೇ, ಅದೇ ದೆಹಲಿಯಲ್ಲಿ, ಡಿಸೆಂಬರ್ 1ರಿಂದ 19ರವರೆಗೆ ನಡೆದ ಸಂಸತ್‌ ಅಧಿವೇಶನದಲ್ಲಿ ವಾಯು ಮಾಲಿನ್ಯದ ಕುರಿತು ಚರ್ಚೆಗಳು ನಡೆಯಲಿಲ್ಲ. ನಿರ್ಧಾರಗಳನ್ನು ತೆಗೆದುಕೊಳ್ಳಲಾಗಲಿಲ್ಲ. ವಾಯು ಮಾಲಿನ್ಯವು ಕ್ಷಣ ಮಾತ್ರದ ಸಂಗತಿಯಾಗಿ ಸದನದಲ್ಲಿ ಪ್ರಸ್ತಾಪಗೊಂಡು ಮರೆಯಾಯಿತು. ಅಧಿವೇಶನವೂ ಮುಗಿದುಹೋಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಡಿಸೆಂಬರ್ 12ರಂದು ವಾಯು ಮಾಲಿನ್ಯದ ಕುರಿತು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರಸ್ತಾಪಿಸಿದ್ದರು. ”ನಮ್ಮ ಹೆಚ್ಚಿನ ನಗರಗಳು ವಿಷಕಾರಿ ಗಾಳಿಯಿಂದ ಆವರಿಸಿವೆ. ಜನರು ಮಲಿನ ಗಾಳಿಯ ನಡುವೆಯೇ ವಾಸಿಸುತ್ತಿದ್ದಾರೆ. ಲಕ್ಷಾಂತರ ಮಕ್ಕಳು ಶ್ವಾಸಕೋಶದ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅವರ ಭವಿಷ್ಯ ನಾಶವಾಗುತ್ತಿದೆ. ವೃದ್ಧರೂ ಕೂಡ ಉಸಿರಾಡಲು ಕಷ್ಟಪಡುತ್ತಿದ್ದಾರೆ. ಇದು ತುರ್ತು ವಿಷಯವಾಗಿದೆ. ಮಾಲಿನ್ಯ ಪರಿಸ್ಥಿತಿಯ ಕುರಿತು ಸರ್ಕಾರ ಮತ್ತು ನಮ್ಮ ನಡುವೆ ಒಂದೇ ರೀತಿಯ ಅಭಿಪ್ರಾಯ ಇದೆ ಎಂಬುದಾಗಿ ನಾನು ಭಾವಿಸುತ್ತೇನೆ. ಮಾಲಿನ್ಯದ ಕುರಿತು ತುರ್ತು ಮತ್ತು ಪಕ್ಷಾತೀತ ಚರ್ಚೆ ನಡೆಸಬೇಕು” ಎಂದು ಒತ್ತಾಯಿಸಿದ್ದರು.

ರಾಹುಲ್ ಗಾಂಧಿ ಅವರ ಒತ್ತಾಯಕ್ಕೆ ಇಡೀ ಸದನ ಒಮ್ಮತ ವ್ಯಕ್ತಪಡಿಸಿತ್ತು. ಚರ್ಚೆ ನಡೆಸಲು ಆಡಳಿತ-ವಿರೋಧ ಪಕ್ಷಗಳು ಸಮ್ಮತಿಸಿದ್ದರು. ರಾಹುಲ್ ಅವರ ಮಾತಿಗೆ ದನಿಗೂಡಿಸಿದ್ದ ಆಯುರ್ವೇದ ವೈದ್ಯೆಯೂ ಆಗಿರುವ ಬಿಜೆಪಿ ಸಂಸದೆ ಲಕ್ಷ್ಮಿಕಾಂತ್ ಬಾಜಪೇಯಿ, “ದೆಹಲಿ/ಎನ್‌ಸಿಆರ್‌ನಲ್ಲಿ ದೀರ್ಘಕಾಲದ ಅಪಾಯಕಾರಿ ಎಕ್ಯೂಐ ಮಟ್ಟಗಳಿಂದಾಗಿ, ಜನರಲ್ಲಿ ಶ್ವಾಸಕೋಶದ ಫೈಬ್ರೋಸಿಸ್ ಬೆಳೆಯುತ್ತಿದೆ. ಇದು ಶ್ವಾಸಕೋಶದ ಸಾಮರ್ಥ್ಯವನ್ನು ಕುಂದಿಸುತ್ತಿದೆ ಎಂಬುದನ್ನು ಅಧ್ಯಯನಗಳು ಮತ್ತು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ. ಇದು ಸರ್ಕಾರಕ್ಕೆ ತಿಳಿದಿದೆಯೇ” ಎಂದು ಪ್ರಶ್ನಿಸಿದ್ದರು.

ಗುರುವಾರ, (ಡಿ.18) ವಾಯು ಮಾಲಿನ್ಯದ ಕುರಿತು ಲೋಕಸಭೆಯಲ್ಲಿ ಚರ್ಚೆಗಳು ನಡೆಯಬೇಕಿತ್ತು. ಆದರೆ, ನಡೆಯಲಿಲ್ಲ. ಅಂದು, ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ”ವಾಯು ಮಾಲಿನ್ಯ ಮತ್ತು ಶ್ವಾಸಕೋಶ ಸಂಬಂಧಿತ ಅನಾರೋಗ್ಯಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ. ಮಾಲಿನ್ಯದಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂಬುದನ್ನು ಪರಿಗಣಿಸಲು ಯಾವುದೇ ದತ್ತಾಂಶಗಳಿಲ್ಲ” ಎಂದು ಗಾಳಿಯಲ್ಲಿ ಗುಂಡು ಹಾರಿಸಿದರು.  

ಅವರ ಉತ್ತರವು ಗಂಭೀರ ಚರ್ಚೆಗಳಿಗೆ ತೆರೆದುಕೊಳ್ಳಬೇಕಿತ್ತು. ಅದೇ ದಿನ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI)ವು 370ರ ಗಡಿದಾಟಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತದೆ. ಇದು, ಡಿಸೆಂಬರ್‌ ತಿಂಗಳಿನಲ್ಲಿ ದೆಹಲಿ ಕಂಡ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವೂ ಆಗಿತ್ತು. ಆದರೆ, ಅಂದು ಚರ್ಚೆಗಳು ನಡೆಯಲಿಲ್ಲ. ಚರ್ಚೆಯನ್ನು ಮಾರನೇ ದಿನಕ್ಕೆ (ಡಿ.19) ಮುಂದೂಡಲಾಯಿತು. ಶುಕ್ರವಾರ, ಅಧಿವೇಶನದ ಅಂತಿಮ ದಿನವಾದ್ದರಿಂದ ಎಲ್ಲವನ್ನೂ ತರಾತುರಿಯಲ್ಲಿ ಮುಗಿಸಲಾಯಿತು. ಮಾಲಿನ್ಯದ ವಿಚಾರ ಚರ್ಚೆಯಿಂದ ಮಾಯವಾಯಿತು.

ವಾಯು ಮಾಲಿನ್ಯವು ಚರ್ಚೆಯಿಂದ ತಪ್ಪಿಸಿಕೊಂಡಿದ್ದಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಿಪಕ್ಷಗಳನ್ನು ದೂಷಿಸುತ್ತಿದ್ದಾರೆ. ”ಮನರೇಗಾ– ವಿಬಿ ಜಿ ರಾಮ್‌ ಜಿ ಮಸೂದೆ ಕುರಿತು ಹೆಚ್ಚು ಚರ್ಚೆ ನಡೆಸಿದ ವಿಪಕ್ಷಗಳ ವರ್ತನೆ ಸರಿಯಲ್ಲ. ಆ ಮಸೂದೆ ಕುರಿತು ಹೆಚ್ಚು ಸಮಯ ಚರ್ಚಿಸಿದ್ದರಿಂದ, ಮಾಲಿನ್ಯದ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ರಿಜಿಜು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಆಳುವ ಸರ್ಕಾರವು ತನ್ನ ಯಥಾಪ್ರಕಾರದಂತೆ ವಿಪಕ್ಷಗಳನ್ನು ದೂರುತ್ತಲೇ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದೆ. ಆದರೆ, ದೆಹಲಿ ನಾಗರಿಕರ ಪರಿಸ್ಥಿತಿ ಘನ ಗಂಭೀರವಾಗಿದೆ. ಲಕ್ಷಾಂತರ ನಿವಾಸಿಗಳನ್ನು ಪಲ್ಮನರಿ ಫೈಬ್ರೋಸಿಸ್, ಸಿಒಪಿಡಿ, ಶ್ವಾಸಕೋಶದ ಕಾರ್ಯ ಕಡಿತ, ಹೃದಯರಕ್ತನಾಳ ಸಮಸ್ಯೆ, ಸೆರೆಬ್ರೊವಾಸ್ಕುಲರ್ ಹಾಗೂ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ತಮ್ಮನ್ನು ರಕ್ಷಿಸಲು ಸರ್ಕಾರ ಯಾವುದಾದರೂ ಪರಿಹಾರ ಯೋಜನೆಯನ್ನು ರೂಪಿಸುತ್ತದೆಯೇ, ಜಾರಿಗೊಳುತ್ತದೆಯೇ ಎಂದು ಎದುರು ನೋಡುತ್ತಿದ್ದಾರೆ.

ಆದರೆ, ಕೇಂದ್ರ ಸರ್ಕಾರ, ‘ವಾಯು ಮಾಲಿನ್ಯಕ್ಕೂ – ಉಸಿರಾಟ ಸಂಬಂಧಿತ ಕಾಯಿಲೆಗೂ ಸಂಬಂಧವೇ ಇಲ್ಲ’ ಎನ್ನುತ್ತಿದೆ.

ಆದಾಗ್ಯೂ, ಹಲವಾರು ವೈಜ್ಞಾನಿಕ ಅಧ್ಯಯನಗಳು ವಾಯು ಮಾಲಿನ್ಯ ಮತ್ತು ಶ್ವಾಸಕೋಶದ ಕಾಯಿಲೆಗಳ ನಡುವಿನ ಸ್ಪಷ್ಟ ಸಂಬಂಧವನ್ನು ತೋರಿಸುತ್ತವೆ. ಇತ್ತೀಚೆಗೆ, ‘ಜರ್ನಲ್ ಎನ್ವಿರಾನ್ಮೆಂಟಲ್ ಪೊಲ್ಯೂಷನ್‌’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತಮಿಳುನಾಡಿನಲ್ಲಿ ಕಳೆದ ನಾಲ್ಕು ವರ್ಷಗಳ ಗಾಳಿಯ ಗುಣಮಟ್ಟದ ಡೇಟಾವನ್ನು ವಿಶ್ಲೇಷಿಸಲಾಗಿದೆ. ಜೊತೆಗೆ, ಉಸಿರಾಟದ ಸಮಸ್ಯೆ ಹೊಂದಿದ್ದ 3,549 ರೋಗಿಗಳನ್ನು ಪರೀಕ್ಷಿಸಲಾಗಿದೆ. ಅವರನ್ನು ಪರೀಕ್ಷಿಸಿದ ಸಂಶೋಧಕರು, ‘ಮಾಲಿನ್ಯ ಮತ್ತು ಉಸಿರಾಟದ ಕಾಯಿಲೆಗಳ ನಡುವೆ ಬಲವಾದ ಸಂಬಂಧವಿದೆ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

2023ರಲ್ಲಿ, ‘ಸೈಂಟಿಫಿಕ್ ರಿಪೋರ್ಟ್ಸ್‌’ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು, ಭಾರತದಲ್ಲಿ ಹೆಚ್ಚಿನ ಎಕ್ಯೂಐ ಪ್ರಮಾಣದ ಹೆಚ್ಚಳ ಮತ್ತು ಶ್ವಾಸಕೋಶದ ಕ್ಯಾನ್ಸರ್‌ ಹೆಚ್ಚಳದ ನಡುವೆ ‘ಗಮನಾರ್ಹ ಸಂಬಂಧ’ವಿದೆ ಎಂಬುದನ್ನು ಕಂಡುಕೊಂಡಿದೆ. ಮಾಲಿನ್ಯಕಾರಕಗಳು ಉರಿಯೂತ ಮತ್ತು ದೀರ್ಘಕಾಲದ ಉಸಿರಾಟದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ ಎಂಬುದನ್ನು ಅಧ್ಯಯನಗಳು ಗಮನಿಸಿವೆ.

ಈ ಲೇಖನ ಓದಿದ್ದೀರಾ?: ದಾರುಣವಾಗಿದೆ ಬಾಲ ನ್ಯಾಯ ವ್ಯವಸ್ಥೆ; ನ್ಯಾಯಕ್ಕಾಗಿ ಕಾಯುತ್ತಿದ್ದಾರೆ 50,000 ಬಾಲಾಪರಾಧಿಗಳು

ಎಲ್ಲಕ್ಕಿಂತ ಮುಖ್ಯವಾಗಿ, ವಾಯು ಮಾಲಿನ್ಯ ಹೆಚ್ಚಾಗುವ ನವೆಂಬರ್-ಡಿಸೆಂಬರ್‌ನಲ್ಲಿಯೇ ಜನರು ಉಸಿರಾಟ ಸಂಬಂಧಿತ ಅನಾರೋಗ್ಯಕ್ಕೆ ತುತ್ತಾಗುವುದು ಮಾಲಿನ್ಯಕ್ಕೂ-ಕಾಯಿಲೆಗೂ ಇರುವ ಸಂಬಂಧವನ್ನು ಎತ್ತಿ ತೋರುತ್ತದೆ. ಹೀಗಾಗಿಯೇ, ವಾಯು ಗುಣಮಟ್ಟ ನಿರ್ವಹಣಾ ಆಯೋಗವು, ಮಕ್ಕಳು, ವೃದ್ಧರು ಹಾಗೂ ದೀರ್ಘಕಾಲದ ಉಸಿರಾಟ ಸಮಸ್ಯೆ ಇರುವವರು ಮನೆಯಲ್ಲಿಯೇ ಇರಬೇಕು. ಹೊರಗೆ ತೆರಳುವ ಅನಿವಾರ್ಯವಿದ್ದರೆ, ಮಾಸ್ಕ್‌ ಧರಿಸಿಯೇ ಹೊರಬರಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

ಗುರುವಾರ, ಸಂಸತ್ತಿನಲ್ಲಿ ಸಿಂಗ್ ನೀಡಿದ ಪ್ರತಿಕ್ರಿಯೆಯಲ್ಲಿ, ”ದೆಹಲಿ- NCR ಮತ್ತು ಪಕ್ಕದ ಪ್ರದೇಶಗಳಲ್ಲಿ ಉತ್ತಮ ಸಮನ್ವಯ, ಸಂಶೋಧನೆ, ಗುರುತಿಸುವಿಕೆ ಹಾಗೂ ವಾಯು ಮಾಲಿನ್ಯದ ಸಮಸ್ಯೆಗಳ ಪರಿಹಾರಕ್ಕಾಗಿ ‘ಎನ್‌ಸಿಆರ್ ಆ್ಯಂಡ್ ಅಡ್‌ಜಾಯ್ನಿಂಗ್ ಏರಿಯಾ ಆಕ್ಟ್‌-2021′(NCR and Adjoining Areas Act, 2021)ರ ಅಡಿಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವನ್ನು (CAQM) ಸ್ಥಾಪಿಸಲಾಗಿದೆ” ಎಂದು ಹೇಳಿದ್ದಾರೆ. ಈ ಸಿಎಕ್ಯೂಎಂ – ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿವಿಧ ಸಂಸ್ಥೆಗಳಿಗೆ ಕ್ರಮ ಮತ್ತು ನಿರ್ದೇಶನಗಳನ್ನು ನೀಡಲಿದೆ. ಸಾಮೂಹಿಕ ಜವಾಬ್ದಾರಿ, ಸಹಯೋಗ ಮತ್ತು ಭಾಗವಹಿಸುವಿಕೆಯೊಂದಿಗೆ ವಾಯು ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಆದರೆ, ದೆಹಲಿಯಲ್ಲಿ ವಾಯು ಮಾಲಿನ್ಯವು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಪ್ರಸ್ತುತ, ಮಾಲಿನ್ಯ ನಿಯಂತ್ರಣಕ್ಕಾಗಿ ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ 50% ವರ್ಕ್ ಫ್ರಮ್ ಹೋಮ್ ಕಡ್ಡಾಯ, ಪಿಯುಸಿ ಪ್ರಮಾಣಪತ್ರ ಇಲ್ಲದ ವಾಹನಗಳಿಗೆ ಇಂಧನ ನಿರಾಕರಣೆ, BS-6 (ಹೊರಸೂಸುವಿಕೆ-ಎಮಿಷನ್) ಮಾನದಂಡಕ್ಕಿಂತ ಗುಣಮಟ್ಟದ ವಾಹನಗಳ ನಿಷೇಧ ಹಾಗೂ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತದಂತಹ 4 ಕ್ರಮಗಳನ್ನು ಸಿಎಕ್ಯೂಎಂ ಘೋಷಿಸಿದೆ. ಇದು ನಾನಾ ರೀತಿಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ನಿರ್ಮಾಣ ಕಾರ್ಮಿಕರು ಜೀವನ ದೂಡುವುದಕ್ಕೂ ತೊಡಕುಂಟು ಮಾಡಿದೆ.

ಇದೆಲ್ಲದರ ನಡುವೆಯೂ ಮಾಲಿನ್ಯವು ದೆಹಲಿಯನ್ನು ಕಾಡುತ್ತಿದೆ. ಸಾಮೂಹಿಕ ಕಾಯಿಲೆಗೆ ದೂಡಿದೆ. ಕೇಂದ್ರ ಸರ್ಕಾರವು ಮಾಲಿನ್ಯ ತಡೆಗೆ ಹೆಚ್ಚು ಗಮನ ಹರಿಸಬೇಕಿತ್ತು. ಸಂಸತ್ತಿನಲ್ಲಿ ಹೆಚ್ಚು ಚರ್ಚೆಗಾಗಿ ಹೆಚ್ಚು ಸಮಯವನ್ನು ಮೀಸಲಿಡಬೇಕಿತ್ತು. ತೆಗೆದುಕೊಳ್ಳಲಾದ ಮತ್ತು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ-ಸೂಚನೆಗಳನ್ನು ಪಟ್ಟಿ ಮಾಡಬೇಕಿತ್ತು. ಆದರೆ, ಇದಾವುದನ್ನೂ ಮಾಡದೆ, ಸಂಸತ್ ಅಧಿವೇಶನ ಮುಗಿದೇಹೋಯಿತು!

ಸರ್ಕಾರದ ಮುಖ್ಯಸ್ಥ ಪ್ರಧಾನಿ ನರೇಂದ್ರ ಮೋದಿಯವರು ಅಧಿವೇಶನಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಮೊದಲ ದಿನ ಹಾಜರಾಗಿ ವಂದೇ ಮಾತರಂ ಹೇಳಿ ವಿದೇಶದ ಕಡೆಗೆ ಮುಖಮಾಡಿ ನಡೆದುಬಿಟ್ಟಿದ್ದರು. ಇದು ಸರ್ಕಾರವೊಂದು ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ಬಗೆದ ದ್ರೋಹ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....