ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಾಗರಿಕರು ತಾಳ್ಮೆಯಿಂದ ಕಾದುನೋಡುವುದನ್ನು ಕಲಿತಿದ್ದಾರೆ. ಆದರೆ, ತಾಳ್ಮೆಯ ಕಟ್ಟೆ ಒಡೆದಾಗ, ಬೀದಿಗಿಳಿದು ನಿಲ್ಲುತ್ತಾರೆ ಎಂಬುದನ್ನು ದೆಹಲಿ ರೈತ ಹೋರಾಟ, ಸಿಎಎ ವಿರೋಧಿ ಹೋರಾಟಗಳು ತೋರಿಸಿವೆ.
”ಒಂದು ದೇಶದ ನಾಗರಿಕರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಅವರನ್ನು ಕೊಲ್ಲುವುದಕ್ಕೆ ಸಮ. ಹಕ್ಕಿಲ್ಲದ ವ್ಯಕ್ತಿ ಜೀವಂತ ನಾಗರಿಕನಲ್ಲ. ಎಸ್‌ಐಆರ್ ಹೆಸರಿನಲ್ಲಿ ಮತದ ಹಕ್ಕನ್ನು ಕಸಿದುಕೊಂಡು ಸರ್ಕಾರ ನಡೆಸುತ್ತಿರುವುದು ರಕ್ತರಹಿತ ನರಮೇಧವಲ್ಲದೆ ಮತ್ತೇನೂ ಅಲ್ಲ” –ರಾಜಕೀಯ ವಿಶ್ಲೇಷಕ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಹೇಳಿದ ಮಾತಿದು. ಅವರ ಈ ನೋಟ ಅಕ್ಷರಶಃ ಸತ್ಯ. ಭಾರತದಲ್ಲಿ ಎಸ್‌ಐಆರ್ ಹೆಸರಿನಲ್ಲಿ ನಡೆಯುತ್ತಿರುವುದು ಖಚಿತವಾಗಿಯೂ ‘ರಕ್ತರಹಿತ ನರಮೇಧ’ವೇ!
ಬಿಹಾರದಲ್ಲಿ ಆರಂಭವಾದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಚುನಾವಣಾ ಆಯೋಗ ದೇಶಾದ್ಯಂತ ವಿಸ್ತರಿಸಿದೆ. 2026ರಲ್ಲಿ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ, ಪುದುಚೇರಿ, ಕೇರಳ ಹಾಗೂ 2027ರಲ್ಲಿ ಚುನಾವಣೆಗೆ ಹೋಗಲಿರುವ ಉತ್ತರ ಪ್ರದೇಶದ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಗವು ಎಸ್‌ಐಆರ್ ನಡೆಸಿದೆ. ಈಗಾಗಲೇ, 11 ರಾಜ್ಯ/ಯುಟಿಗಳ ಕರಡು ಪಟ್ಟಿ ಬಿಡುಗಡೆಯಾಗಿದ್ದು, ಬರೋಬ್ಬರಿ 3.69 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರದಬ್ಬಿದೆ. ಅಂತೆಯೇ, ಡಿಸೆಂಬರ್ 31ರಂದು ಬಿಡುಗಡೆಯಾಗಲಿರುವ ಉತ್ತರ ಪ್ರದೇಶದ ಕರಡು ಪಟ್ಟಿಯಿಂದ ಅತ್ಯಧಿಕ 2.89 ಕೋಟಿ ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಒಟ್ಟು ಮತದಾರರ ಸಂಖ್ಯೆ 15.44 ಕೋಟಿ ಇತ್ತು. ಇವರಲ್ಲಿ ಈಗ 2.89 ಕೋಟಿ (ಸುಮಾರು 18.7%) ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಕಳೆದುಕೊಂಡಿದ್ದಾರೆ ಎನ್ನಲಾಗದು, ಅವರ ಹಕ್ಕನ್ನು ಚುನಾವಣಾ ಆಯೋಗ ಕಸಿದುಕೊಂಡಿದೆ. ಎಸ್‌ಐಆರ್ ನಡೆದ 12 ರಾಜ್ಯಗಳಲ್ಲಿ ಒಟ್ಟು 6.58 ಕೋಟಿ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಸರಿಸುಮಾರು ಕರ್ನಾಟಕದ ಇಡೀ ಜನರನ್ನು ಮತದಾನದಿಂದ ಪ್ರತ್ಯಕ್ಷವಾಗಿ ಚುನಾವಣಾ ಆಯೋಗವೂ, ಪರೋಕ್ಷವಾಗಿ ಕೇಂದ್ರ ಸರ್ಕಾರವು ಹೊರದಬ್ಬಿವೆ. ಈ ಬೃಹತ್ ಪ್ರಮಾಣದ ಹೊರಹಾಕುವಿಕೆಯು ‘ರಕ್ತರಹಿತ ನರಮೇಧ’ದಂತೆ ಭಾಸವಾಗುತ್ತಿದೆ.
ಆದ್ದರಿಂದಲೇ, ಎಸ್‌ಐಆರ್‌ಅನ್ನು ವಿಪಕ್ಷಗಳು ನಿರಂತರವಾಗಿ ವಿರೋಧಿಸುತ್ತಿವೆ. ಬಿಜೆಪಿಯ ವೋಟ್ ಚೋರಿಯ ಕಾನೂನಾತ್ಮಕ ಕೃತ್ಯ ಎಸ್‌ಐಆರ್ ಎಂದು ಕಾಂಗ್ರೆಸ್ ನೇರ ಆರೋಪ ಮಾಡಿದೆ. ಚುನಾವಣಾ ಆಯೋಗವು ಬಿಜೆಪಿಯ ಗೆಲುವನ್ನು ಖಾತ್ರಿ ಪಡಿಸಲು ವಿಪಕ್ಷಗಳ ಮತದಾರರನ್ನು ಮತಪಟ್ಟಿಯಿಂದ ಹೊರಹಾಕುತ್ತಿದೆ ಎಂದು ರಾಹುಲ್ ಗಾಂಧಿ ಬಹಿರಂಗವಾಗಿಯೇ ಆರೋಪಿಸಿದ್ದಾರೆ.
ಫಾರ್ಮ್-7 ಅನ್ನು ದುರ್ಬಳಕೆ ಮಾಡಿ ವಿರೋಧ ಪಕ್ಷಗಳ ಬೆಂಬಲಿಗರ- ಮುಖ್ಯವಾಗಿ ಮುಸ್ಲಿಂ, ದಲಿತ, ಒಬಿಸಿ ಮತದಾರರ ಹೆಸರನ್ನು ಅಳಿಸಿಹಾಕಲಾಗುತ್ತಿದೆ ಎಂದು ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಸೇರಿದಂತೆ ನಾನಾ ವಿರೋಧ ಪಕ್ಷಗಳು ದೂರಿವೆ. ರಾಷ್ಟ್ರೀಯ ನಾಗರಿಕ ನೋಂದಣಿ(ಎನ್‌ಆರ್‌ಸಿ)ಯನ್ನು ಕೇಂದ್ರ ಸರ್ಕಾರವು ಎಸ್‌ಐಆರ್ ಮೂಲಕ ಜಾರಿಗೆ ತರುತ್ತಿದೆ. ಇದು ಮುಸ್ಲಿಮರು ಸೇರಿದಂತೆ ಅಂಚಿಗೆ ತಳ್ಳಲ್ಪಟ್ಟವರ ಮತದಾನದ ಹಕ್ಕನ್ನು ಮಾತ್ರವಲ್ಲ, ಪೌರತ್ವವನ್ನೂ ಕಸಿದುಕೊಳ್ಳಲಿದೆ ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ. ಆದರೆ, ಈ ಎಸ್‌ಐಆರ್‌ಅನ್ನು ಬಿಜೆಪಿ ಮತ್ತು ಚುನಾವಣಾ ಆಯೋಗ ಮಾತ್ರವೇ ಸಮರ್ಥಿಸಿಕೊಳ್ಳುತ್ತಿವೆ.
ಎಸ್‌ಐಆರ್ ರೀತಿಯ ಮತಪಟ್ಟಿ ಪರಿಷ್ಕರಣೆಯು 1952ರಿಂದ 2003ರವರೆಗೆ ಆಗಾಗ್ಗೆ ನಡೆದಿದೆ. ಕಾಲ-ಕಾಲಕ್ಕೆ ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದಕ್ಕಾಗಿ ಮತಪಟ್ಟಿ ಪರಿಷ್ಕರಣೆಗಳು ನಡೆದಿವೆ. ಇದೇ ಮೊದಲ ಬಾರಿಗೆ ಈ ಪ್ರಕ್ರಿಯೆ ನಡೆಯುತ್ತಿಲ್ಲವೆಂದು ಚುನಾವಣಾ ಆಯೋಗವು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದೆ. ಹೊಸ ಮತದಾರರನ್ನು ಸೇರಿಸುವುದು, ಮೃತರು-ಸ್ಥಳಾಂತರಗೊಂಡವರ ಹೆಸರನ್ನು ಅಳಿಸುವುದು, ನಕಲಿ ಹೆಸರುಗಳನ್ನು ಗುರುತಿಸುವುದು ತಮ್ಮ ಉದ್ದೇಶವೆಂದು ಆಯೋಗ ಹೇಳಿಕೊಂಡಿದೆ.
ಆದರೆ, ತನ್ನ ಈ ಪ್ರಕ್ರಿಯೆಗೆ ಆಯೋಗ ಕೇಳುತ್ತಿರುವುದು ವಾಸ ಅಥವಾ ಗುರುತಿನ ಪುರಾವೆಗಳನ್ನು ಮಾತ್ರವಲ್ಲ. ಬದಲಾಗಿ, ಪೌರತ್ವದ ಪುರಾವೆಗಳನ್ನು ಕೇಳುತ್ತಿದೆ. ಮತಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಪೌರತ್ವವನ್ನು ಸಾಬೀತುಪಡಿಸಿಕೊಳ್ಳಿ ಎಂದು ಮತದಾರರ ಜುಟ್ಟು ಹಿಡಿದು ಕೇಳುತ್ತಿದೆ.
ಇತ್ತೀಚೆಗೆ, ಎಸ್‌ಐಆರ್ ನಡೆದ 12 ರಾಜ್ಯಗಳಲ್ಲಿ ಮತಪಟ್ಟಿಯಿಂದ ಹೊರಗುಳಿದವರು ಯಾರು ಎಂಬುದರ ಸಂಪೂರ್ಣ ಚಿತ್ರಣ ದೊರೆಯದೇ ಇರಬಹುದು. ಆದರೆ, ಆಯೋಗವು ಯಾರನ್ನು ಹೊರಗಿಟ್ಟಿದೆ ಎಂಬುದನ್ನು ಊಹಿಸಲು ಬಿಹಾರದ ಕಣ್ಣಮುಂದಿದೆ. ಚುನಾವಣೆಗೂ ಮುನ್ನ ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯಿತು. ಆತುರದಲ್ಲಿ ಪ್ರಕ್ರಿಯೆ ಮುಗಿಸಿದ ಆಯೋಗ 47 ಲಕ್ಷಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕಿತು. ಅವರಲ್ಲಿ, ಭಾಗಶಃ ಎಲ್ಲರೂ ಬಡವರು, ಕಾರ್ಮಿಕರು, ತಳ ಸಮುದಾಯದವರು ಹಾಗೂ ಅನಕ್ಷರಸ್ಥರೇ ಆಗಿದ್ದರು. ಇವರೆಲ್ಲರೂ ಭಾರತೀಯ ನಾಗರಿಕರಲ್ಲವೇ? ಅವರು ನಾಗರಿಕರು ಎಂಬುದರಲ್ಲಿ ಸಂಶಯವಿಲ್ಲ. ಯಾಕೆಂದರೆ, ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಅಕ್ರಮ ವಲಸಿಗರು (ಬ್ಲಾಂಗ್ಲಾದಿಂದ ಬಂದವರು) ಎಂದು ಬಂಧಿಸಲಾಗಿದ್ದು ಕೇವಲ 3 ಮಂದಿಯನ್ನು ಮಾತ್ರ.
ಮೂರು ಮಂದಿಯನ್ನು ಹಿಡಿಯಲು 7 ಕೋಟಿ ಜನರಿಗೆ ತೊಂದರೆ ಕೊಟ್ಟು, 47 ಲಕ್ಷ ಜನರ ಮತದಾನದ ಹಕ್ಕನ್ನೇ ಚುನಾವಣಾ ಆಯೋಗ ಕಸಿದುಕೊಂಡಿದೆ. ಇದು, ‘ಗುಡ್ಡ ಅಗೆದು ಇಲಿ ಹುಡುಕಿದಂತೆ’ ಅಲ್ಲವೇ?
ಆದಾಗ್ಯೂ, ಆಯೋಗವು ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕವಷ್ಟೇ ಆಧಾರ್, ರೇಷನ್ ಕಾರ್ಡ್‌ಗಳನ್ನು ದಾಖಲೆಯಾಗಿ ಪರಿಗಣಿಸುತ್ತಿದೆ. ಆದರೂ, ಪೌರತ್ವದ ದಾಖಲೆಗಳನ್ನೂ ಕೇಳುವುದನ್ನು ನಿಲ್ಲಿಸಿಲ್ಲ. ಇದು, ಚುನಾವಣಾ ಆಯೋಗವು ಭಾರತದ ಪ್ರಜೆಗಳ ಹಕ್ಕುಗಳನ್ನು ರಕ್ಷಿಸುತ್ತಿಲ್ಲ. ಪ್ರಜಾಸತ್ತತೆ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ, ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟ ಚಿತ್ರಣ ಕೊಡುತ್ತದೆ.
ಗಮನಾರ್ಹವಾಗಿ, 2024ರ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ವಿಪಕ್ಷಗಳನ್ನು ಬೆಂಬಲಿಸುತ್ತಿದ್ದ ಮತದಾರರ ಹೆಸರುಗಳನ್ನು ತೆಗೆದುಹಾಕಿ, ಲಕ್ಷಾಂತರ ಹೊಸ ಮತದಾರರನ್ನು ಸೇರಿಸಲಾಗಿದೆ ಎಂಬುದನ್ನು ಕಾಂಗ್ರೆಸ್ ದಾಖಲೆಗಳ ಸಮೇತ ದೇಶದ ಮುಂದಿಟ್ಟಿತು. ಮಹಾರಾಷ್ಟ್ರದಲ್ಲಿ ಸುಮಾರು 20 ಲಕ್ಷ ಮತ್ತು ಹರಿಯಾಣದಲ್ಲಿ 15 ಲಕ್ಷ ಮತದಾರರ ಹೆಸರುಗಳು ಅನುಮಾನಾಸ್ಪದವಾಗಿ ತೆಗೆದುಹಾಕಲಾಗಿದೆ. ಅವರಲ್ಲಿ, ಬಹುತೇಕರು ವಿಪಕ್ಷಗಳಿಗೆ ಮತ ಚಲಾಯಿಸುವವರಾಗಿದ್ದರು. ಜೊತೆಗೆ, ಹೊಸ ಹೆಸರುಗಳನ್ನು ಸೇರಿಸಿ ಬಿಜೆಪಿ ಗೆಲುವಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದೂ ಕಾಂಗ್ರೆಸ್ ಆರೋಪಿಸಿದೆ. ಆದರೆ, ಈ ಆರೋಪಗಳಿಗೆ ಈವರೆಗೆ ಆಯೋಗವು ಸರಿಯಾದ ಉತ್ತರ ಕೊಡುವುದಿರಲಿ, ಪ್ರತಿಕ್ರಿಯಿಸುವ ಧೈರ್ಯವನ್ನೂ ಮಾಡಿಲ್ಲ.
ಜೊತೆಗೆ, ಕರ್ನಾಟಕದ ಮಹದೇವಪುರ ಲೋಕಸಭಾ ಕ್ಷೇತ್ರದಲ್ಲಿ ಲಕ್ಷಾಂತರ ನಕಲಿ ಮತದಾರರನ್ನು ಸೇರಿಸಲಾಗಿದೆ. ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 6,000 ಮತದಾರರನ್ನು ಅಕ್ರಮವಾಗಿ ಅಳಿಸಿಹಾಕಲು ಯತ್ನಿಸಲಾಗಿದೆ ಎಂದು ಕಾಂಗ್ರೆಸ್ ದಾಖಲೆ ಸಮೇತ ವಿವರಿಸಿದೆ. ಆದರೆ, ಆಯೋಗವು ಸುಳ್ಳು ಸಮಜಾಯಿಷಿ ಕೊಟ್ಟು ನುಣುಚಿಕೊಳ್ಳಲು ಯತ್ನಿಸಿದೆ.
ಈ ಲೇಖನ ಓದಿದ್ದೀರಾ?: ಉನ್ನಾಂವ್ ಅತ್ಯಾಚಾರ ಹಗರಣ: ಕುಲದೀಪ್ ಸೆಂಗರ್‌ನ ಹೀನಕೃತ್ಯ; ಬಿಜೆಪಿ ನೈತಿಕ ದಿವಾಳಿತನ
ಚುನಾವಣಾ ಆಯೋಗದ ನಡೆ, ನುಡಿ, ಧೋರಣೆಗಳು ಭಾರತೀಯ ನಾಗರಿಕರಲ್ಲಿ ಅನುಮಾನವನ್ನು ಹುಟ್ಟುಹಾಕಿವೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಸರ್ವಾಧಿಕಾರವನ್ನು ಸ್ಥಾಪಿಸಲು ಹವಣಿಸುತ್ತಿರುವ ಬಿಜೆಪಿಗೆ ಹಾದಿ ಸುಗಮ ಮಾಡಿಕೊಡಲು ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದೆ ಎಂಬುದಷ್ಟು ಸ್ಪಷ್ಟವಾಗಿ ತೋರುತ್ತದೆ.
ಆದರೆ, ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಅಧಿಕಾರ/ಆಡಳಿತವು ಹೆಚ್ಚು ದಿನ ಉಳಿಯುವುದಿಲ್ಲ ಎಂಬುದನ್ನು ಇತಿಹಾಸ ತೋರಿಸಿದೆ. ಪ್ರಸ್ತುತ, ನೆರೆಯ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಂತಹ ರಾಷ್ಟ್ರಗಳು ‘ಜೆನ್-ಝಡ್’ ಮಾದರಿಯ ಪ್ರತಿಭಟನೆಗಳಿಂದ ನಲುಗುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ನಾಗರಿಕರು ತಾಳ್ಮೆಯಿಂದ ಕಾದುನೋಡುವುದನ್ನು ಕಲಿತಿದ್ದಾರೆ. ಆದರೆ, ತಾಳ್ಮೆಯ ಕಟ್ಟೆ ಒಡೆದಾಗ, ಬೀದಿಗಿಳಿದು ನಿಲ್ಲುತ್ತಾರೆ ಎಂಬುದನ್ನು ದೆಹಲಿ ರೈತ ಹೋರಾಟ, ಸಿಎಎ ವಿರೋಧಿ ಹೋರಾಟಗಳು ತೋರಿಸಿವೆ. ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರವು ಜನರ ತಾಳ್ಮೆ ಮತ್ತು ಸಿಟ್ಟು ಎರಡರ ನಡುವಿನ ಅಂತರವನ್ನು ಅರಿತುಕೊಳ್ಳಬೇಕು. ಜನರ ಹಕ್ಕುಗಳನ್ನು ರಕ್ಷಿಸಲು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ, ಭಾರತದ ಪ್ರಜೆಗಳು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವುದು ನಿಶ್ಚಿತ!




